ನಮ್ಮ ಭಾರತೀಯ ಇತಿಹಾಸದಲ್ಲಿ ಸೇವೆಯೇ ಅತ್ಯಂತ ಪರಮೋಚ್ಛ ಕರ್ತವ್ಯ. ಅದನ್ನೇ ನಾವು “ಸೇವೆಯೇ ಪರ ಧರ್ಮ’’ಎನ್ನುತ್ತೇವೆ. ಒಂದು ವರ್ಷದ ಹಿಂದೆ, ನೀವು ನನಗೆ ಪ್ರಧಾನ ಸೇವಕನಾಗಿ ಗೌರವಯುತವಾಗಿ ಸೇವೆ ಸಲ್ಲಿಸುವ ಜವಾಬ್ದಾರಿಯನ್ನು ಹೊರಿಸಿದ್ದೀರಿ. ನಾನು ಪ್ರತಿದಿನ, ಪ್ರತಿ ಕ್ಷಣ ಮತ್ತು ನನ್ನ ದೇಹದ ಪ್ರತಿ ಅಂಗವನ್ನೂ ಸಹ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ನಿಮ್ಮ ಸೇವೆಗೈಯ್ಯಲು ಮುಡಿಪಾಗಿರಿಸಿದ್ದೇನೆ.
ಭಾರತದ ಬಗ್ಗೆ ನಂಬಿಕೆ ಕಳೆದುಹೋಗುತ್ತಿದ್ದ ದಿನಗಳಲ್ಲಿ ನಾವು ಅಧಿಕಾರವಹಿಸಿಕೊಂಡೆವು. ವ್ಯಾಪಕ ಭ್ರಷ್ಟಾಚಾರ ಮತ್ತು ಅನಿಶ್ಚಿತತೆಯಿಂದ ಸರ್ಕಾರಕ್ಕೆ ಪಾಶ್ರ್ವವಾಯು ಬಡಿದಿತ್ತು. ಜನರು ಅಸಹಾಯಕರಾಗಿದ್ದರು, ಹಣದುಬ್ಬರ ದರ ಏರಿಕೆ ಹಾದಿಯಲ್ಲಿತ್ತು ಮತ್ತು ದೇಶದಲ್ಲಿ ಆರ್ಥಿಕ ಅಭದ್ರತೆ ಕಾಡುತ್ತಿತ್ತು. ಆಗ ತುರ್ತು ಮತ್ತು ನಿರ್ಣಾಯಕ ನಿರ್ಧಾರ ಕೈಗೊಳ್ಳುವ ಅಗತ್ಯತೆ ಇತ್ತು.
ನಾವು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಸವಾಲುಗಳನ್ನು ಎದುರಿಸುತ್ತಾ ಹೋದೆವು. ಏರುಮುಖಿಯಾಗಿದ್ದ ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸಲಾಯಿತು. ಆರ್ಥಿಕ ಪುನಃಶ್ಚೇತನ ನೀಡಿ, ಅದಕ್ಕೆ ಸ್ಥಿರತೆ ನೀಡುವ ಜೊತೆಗೆ ಪೂರಕ ನೀತಿ ನಿರ್ಧಾರಗಳನ್ನು ಕೈಗೊಂಡು ಕ್ರಿಯಾಶೀಲ ಆಡಳಿತ ನೀಡಲಾರಂಭಿಸಿದೆವು. ನೈಸರ್ಗಿಕ ಸಂಪನ್ಮೂಲಗಳನ್ನು ಮನಬಂದಂತೆ ಯಾರು ಕೆಲವೇ ಕೆಲವು ಬೇಕಾದವರಿಗೆ ಹಂಚಿಕೆ ಮಾಡುವುದನ್ನು ರದ್ದು ಮಾಡಿ, ಪಾರದರ್ಶಕ ಹರಾಜು ಪದ್ದತಿ ಜಾರಿಗೊಳಿಸಲಾಯಿತು. ಕಪ್ಪು ಹಣದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಯಿತು, ಅದಕ್ಕಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಯಿತು. ಕಪ್ಪು ಹಣ ನಿಯಂತ್ರಣಕ್ಕೆ ಕಠಿಣ ಕಾನೂನುಗಳನ್ನು ಅನುಮೋದಿಸಿ ಅದಕ್ಕೆ ಅಂತಾರಾಷ್ಟ್ರೀಯ ಸಹಮತ ಮೂಡಿಸಲಾಯಿತು. ಶುದ್ಧ ಸರ್ಕಾರ ನೀಡುವ ವಿಷಯದಲ್ಲಿ ರಾಜೀ ಮಾಡಿಕೊಳ್ಳಲಿಲ್ಲ, ಅದನ್ನೇ ಅನುಸರಿಸಿದ್ದರಿಂದ ಭ್ರಷ್ಟಾಚಾರ ರಹಿತ ಸರ್ಕಾರ ನೀಡಲು ಸಾಧ್ಯವಾಗುತ್ತಿದೆ. ಆಡಳಿತ ವೈಖರಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಯಿತು, ಸಿಬ್ಬಂದಿಯಲ್ಲಿ ವೃತ್ತಿಪರತೆಯನ್ನು ಮೂಡಿಸಲಾಗಿದೆ. ರಾಷ್ಟ್ರದ ಅಭಿವೃದ್ಧಿಯಲ್ಲಿ ರಾಜ್ಯ ಸರ್ಕಾರಗಳನ್ನೂ ಸಮಾನ ಪಾಲುದಾರರನ್ನಾಗಿ ಮಾಡಲಾಗಿದ್ದು, ಟೀಂ ಇಂಡಿಯಾದಲ್ಲಿ ಸ್ಪೂರ್ತಿ ಮೂಡಿಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಸರ್ಕಾರದ ಬಗ್ಗೆ ಜನರಲ್ಲಿ ವಿಶ್ವಾಸವನ್ನು ಮರಳಿ ಸ್ಥಾಪಿಸುವಲ್ಲಿ ಯಶಸ್ಸಿಯಾಗಿದ್ದೇವೆ.
ಅಂತ್ಯೋದಯ ತತ್ವದಿಂದ ಉತ್ತೇಜಿತವಾಗಿರುವ ಸರ್ಕಾರ, ಬಡವರು, ದುರ್ಬಲ ವರ್ಗದವರು ಹಾಗೂ ಸಮಾಜದಲ್ಲಿ ತೀರಾ ಹಿಂದುಳಿದವರ ಏಳಿಗೆಗೆ ತನ್ನನ್ನು ಸಮರ್ಪಿಸಿಕೊಂಡಿದೆ. ಬಡತನ ನಿರ್ಮೂಲನೆ ಯುದ್ದದಲ್ಲಿ ಅವರನ್ನು ಯೋಧರನ್ನಾಗಿ ಮಾಡಲು, ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ. ಅದಕ್ಕಾಗಿಯೇ ಹಲವು ಕ್ರಮಗಳು ಹಾಗೂ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ, ಅವುಗಳೆಂದರೆ- ಶಾಲೆಗಳ ಶೌಚಾಲಯ ನಿರ್ಮಾಣದಿಂದ ಹಿಡಿದು ಐಐಟಿ, ಐಐಎಂ ಮತ್ತು ಏಮ್ಸ್ಗಳ ಸ್ಥಾಪನೆವರೆಗೆ; ಮಕ್ಕಳಿಗೆ ಲಸಿಕೆ ಹಾಕುವುದರಿಂದ ಹಿಡಿದು ಸ್ವಚ್ಛ ಭಾರತ್ ಯೋಜನೆ ಜಾರಿವರೆಗೆ; ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಪಿಂಚಣಿ ನೀಡುವುದರಿಂದ ಹಿಡಿದು ಸಾಮಾನ್ಯ ಜನರಿಗೆ ಸುರಕ್ಷತೆಗೆ ಒದಗಿಸುವವರೆಗೆ; ರೈತರಿಗೆ ನೈಸರ್ಗಿಕ ಪ್ರಕೋಪಗಳ ಸಂದರ್ಭಗಳಲ್ಲಿ ಅವರ ನೆರವಿಗೆ ಧಾವಿಸುವುದರಿಂದ ಹಿಡಿದು ವಿಶ್ವ ವ್ಯಾಪಾರ ಸಂಘಟನೆಯಲ್ಲಿ ಅವರ ಹಿತ ಕಾಯುವವರೆಗೆ; ಒಬ್ಬರನ್ನು ಸಬಲೀಕರಣಗೊಳಿಸುವುದರಿಂದ ಹಿಡಿದು ಸಬ್ಸಿಡಿ ಮತ್ತಿತರ ಪ್ರಯೋಜನಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸುವವರೆಗೆ; ಬ್ಯಾಂಕಿಂಗ್ ವ್ಯವಸ್ಥೆ ಏಕರೂಪಗೊಳಿಸುವುದರಿಂದ ಹಿಡಿದು ಸಣ್ಣ ಉದ್ಯಮಿಗಳಿಗೆ ಸಾಲದ ನೆರವು ನೀಡುವವರೆಗೆ; ಭೂಮಿಗೆ ನೀರಾವರಿ ಒದಗಿಸುವುದರಿಂದ ಹಿಡಿದು ಗಂಗಾ ಪುನರುಜ್ಜೀವನವರೆಗೆ; ದಿನದ 24 ಗಂಟೆ ವಿದ್ಯುತ್ ಸಂಪರ್ಕ ಒದಗಿಸುವ ಜೊತೆಗೆ ಉತ್ತಮ ರಸ್ತೆ ಹಾಗೂ ರೈಲು ಸಂಪರ್ಕ
ಒದಗಿಸುವವರೆಗೆ; ಸೂರಿಲ್ಲದವರಿಗೆ ಮನೆಗಳನ್ನು ನಿರ್ಮಿಸಿಕೊಡುವುದರಿಂದ ಹಿಡಿದು ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸುವವರೆಗೆ; ಉತ್ತರ ಮತ್ತು ಪೂರ್ವವನ್ನು ಬೆಸೆಯುವುದರಿಂದ ಹಿಡಿದು ಈಶಾನ್ಯ ಭಾರತದ ಅಭಿವೃದ್ಧಿಗೆ ಒತ್ತು ನೀಡುವವರೆಗೆ ಹಲವು ದಿಟ್ಟ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಸ್ನೇಹಿತರೆ, ಇದು ಕೇವಲ ಆರಂಭವಷ್ಟೇ. ಜನರ ಜೀವನ ಮಟ್ಟ ಬದಲಾಯಿಸುವುದು, ಗುಣಮಟ್ಟದ ಮೂಲಸೌಕರ್ಯ ಮತ್ತು ಸೇವೆಗಳನ್ನು ಒದಗಿಸುವುದೇ ನಮ್ಮ ಧೇಯ. ಎಲ್ಲರೂ ಸೇರಿ ನಾವು ಹಾಗೂ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸಿನ ಭವ್ಯ ಭಾರತವನ್ನು ನಿರ್ಮಿಸೋಣ. ಅದಕ್ಕಾಗಿ ನಾನು ನಿಮ್ಮ ಆರ್ಶೀವಾದವನ್ನು ಹಾಗೂ ನಿರಂತರ ಬೆಂಬಲವನ್ನು ಕೋರುತ್ತೇನೆ.
ಸದಾ ನಿಮ್ಮ ಸೇವೆಯಲ್ಲಿ
ಜೈ ಹಿಂದ್
ನರೇಂದ್ರ ಮೋದಿ