Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಾರಜನಕ ಸ್ಥಾವರಗಳನ್ನು ಆಮ್ಲಜನಕ ಸ್ಥಾವರಗಳಾಗಿ ಪರಿವರ್ತಿಸುವುದರ ಪ್ರಗತಿ ಪರಿಶೀಲನೆ ನಡೆಸಿದ ಪ್ರಧಾನಮಂತ್ರಿ


ಕೋವಿಡ್-19 ಸಾಂಕ್ರಾಮಿಕದಿಂದ ತಲೆದೋರಿಸುವ ಸನ್ನಿವೇಶದ ಹಿನ್ನೆಲೆಯಲ್ಲಿ ವೈದ್ಯಕೀಯ ಆಮ್ಲಜನಕದ ಅಗತ್ಯವನ್ನು ಪರಿಗಣಿಸಿ, ಭಾರತ ಸರ್ಕಾರ, ಅಸ್ತಿತ್ವದಲ್ಲಿರುವ ಸಾರಜನಕ ಸ್ಥಾವರಗಳನ್ನು ಆಮ್ಲಜನಕ ಉತ್ಪಾದನೆಗೆ ಪರಿವರ್ತಿಸುವ ಸಾಧ್ಯತೆಯನ್ನು ಪರಿಶೋಧಿಸಿದೆ. ಅಂತಹ ಹಲವಾರು ಸಂಭಾವ್ಯ ಕೈಗಾರಿಕೆಗಳಲ್ಲಿ ಅಸ್ತಿತ್ವದಲ್ಲಿರುವ ಸಾರಜನಕ ಸ್ಥಾವರಗಳನ್ನು ಆಮ್ಲಜನಕ ಉತ್ಪಾದನೆಗೆ ಬಳಸಬಹುದಾಗಿದೆ.

ಆಮ್ಲಜನಕದ ಉತ್ಪಾದನೆಗಾಗಿ ಅಸ್ತಿತ್ವದಲ್ಲಿರುವ ಪ್ರೆಷರ್ ಸ್ವಿಂಗ್ ಅಡ್ಸಾರ್ಪ್ಷನ್ (ಪಿ.ಎಸ್.) ಸಾರಜನಕ ಸ್ಥಾವರಗಳನ್ನು ಪರಿವರ್ತಿಸುವ ಪ್ರಕ್ರಿಯೆಯ ಬಗ್ಗೆ ಚರ್ಚಿಸಲಾಯಿತು. ಸಾರಜನಕ ಸ್ಥಾವರಗಳಲ್ಲಿ ಇಂಗಾಲ ಆಣ್ವಿಕ ಜರಡಿ (ಸಿ.ಎಮ್.ಎಸ್) ಅನ್ನು ಬಳಸಲಾಗುತ್ತದೆ ಆದರೆ ಆಮ್ಲಜನಕವನ್ನು ಉತ್ಪಾದಿಸಲು ಜಿಯೋಲೈಟ್ ಆಣ್ವಿಕ ಜರಡಿ (ಜಡ್.ಎಂ.ಎಸ್) ಅಗತ್ಯವಿರುತ್ತದೆ. ಹೀಗಾಗಿ, ಸಿಎಂಎಸ್ ಅನ್ನು ಜಡ್.ಎಂ.ಎಸ್.ನೊಂದಿಗೆ ಬದಲಾಯಿಸಿ ಕೆಲವೊಂದು ಅಂದರೆ ಆಮ್ಲಜನಕ ವಿಶ್ಲೇಷಕ, ನಿಯಂತ್ರಣ ಫಲಕ ವ್ಯವಸ್ಥೆ, ಹರಿವ ನಳಿಕೆ ಇತ್ಯಾದಿ. ಬದಲಾವಣೆ ಮಾಡಿ, ಹಾಲಿ ಇರುವ ಸಾರಜನಕ ಸ್ಥಾವರಗಳನ್ನು ಆಮ್ಲಜನಕ ಉತ್ಪಾದನೆಯ ಸ್ಥಾವರಗಳಾಗಿ ಪರಿವರ್ತಿಸಬಹುದಾಗಿದೆ.

ಕೈಗಾರಿಕೆಗಳೊಂದಿಗೆ ಚರ್ಚಿಸಿ, ಇಲ್ಲಿಯವರೆಗೆ 14 ಕೈಗಾರಿಕೆಗಳನ್ನು ಗುರುತಿಸಲಾಗಿದ್ದು, ಅಲ್ಲಿ ಸ್ಥಾವರಗಳ ಪರಿವರ್ತನೆ ಪ್ರಗತಿಯಲ್ಲಿದೆ. ಉದ್ಯಮ ಸಂಘಟನೆಗಳ ಸಹಾಯದಿಂದ ಇನ್ನೂ 37 ಸಾರಜನಕ ಸ್ಥಾವರಗಳನ್ನು ಗುರುತಿಸಲಾಗಿದೆ.

ಆಮ್ಲಜನಕ ಉತ್ಪಾದನೆಗೆ ಪರಿವರ್ತಿಸಲಾದ ಸಾರಜನಕ ಸ್ಥಾವರವನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಬಹುದು ಅಥವಾ ಅದು ಕಾರ್ಯಸಾಧ್ಯವಲ್ಲದಿದ್ದರೆ, ಅದನ್ನು ಸ್ಥಳದಲ್ಲೇ ಆಮ್ಲಜನಕ ಉತ್ಪಾದನೆಗೆ ಬಳಸಬಹುದು, ಮತ್ತು ಅದನ್ನು ವಿಶೇಷ ವಾಹನ/ಸಿಲಿಂಡರ್ ಮೂಲಕ ಆಸ್ಪತ್ರೆಗಳಿಗೆ ಸಾಗಿಸಬಹುದು.

ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ, ಮತ್ತು ಇತರ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

***