ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಮನದ ಮಾತಿಗೆ ಬಗೆ ಬಗೆಯ ಪತ್ರಗಳು, ಸಲಹೆ ಸೂಚನೆಗಳು ಬರುತ್ತವೆ. ಈ ಬಾರಿ ಬಂದವುಗಳನ್ನು ನೋಡುತ್ತಿದ್ದಾಗ ಬಹಳಷ್ಟು ಜನರುಒಂದು ಮಹತ್ವಪೂರ್ಣ ವಿಷಯದ ಬಗ್ಗೆ ನೆನಪು ಮಾಡಿದ್ದಾರೆ. ಮೈ ಗೌ ನಲ್ಲಿ ಆರ್ಯನ್ ಶ್ರೀ, ಬೆಂಗಳೂರಿನಿಂದ ಅನೂಪ್ ರಾವ್, ನೋಯ್ಡಾದಿಂದ ದೇವೇಶ್, ಠಾಣೆಯಿಂದ ಸುಜಿತ್ ಇವರೆಲ್ಲರೂ‘ಮೋದಿಯವರೇ ಈ ಬಾರಿ ಮನದ ಮಾತಿನ 75 ನೇ ಕಂತು, ಅದಕ್ಕಾಗಿ ನಿಮಗೆ ಅಭಿನಂದನೆಗಳು ಎಂದು ಹೇಳಿದ್ದಾರೆ. ನೀವೆಲ್ಲರೂ ಇಷ್ಟು ಸೂಕ್ಷ್ಮವಾಗಿ ಫಾಲೊ ಮಾಡುತ್ತಿದ್ದೀರಿ ಮತ್ತು ಅದರ ಜೊತೆಗಿದ್ದೀರಿ ಅದಕ್ಕಾಗಿ ನಿಮ್ಮೆಲ್ಲರಿಗೂ ಅನಂತ ಧನ್ಯವಾದ ಹೇಳ ಬಯಸುತ್ತೇನೆ. ಇದು ನನಗೆ ಹೆಮ್ಮೆಯ ಮತ್ತು ಆನಂದದ ವಿಷಯವಾಗಿದೆ. ನಿಮ್ಮೆಲ್ಲರಿಗೂ ಧನ್ಯವಾದ ತಿಳಿಸುವುದರ ಜೊತೆಗೆ ಮನದ ಮಾತಿನ ಎಲ್ಲ ಶ್ರೋತೃಗಳಿಗೂ ಕೃತಜ್ಞತೆ ತಿಳಿಸುತ್ತೇನೆ ಏಕೆಂದರೆ ನಿಮ್ಮ ಬೆಂಬಲವಿಲ್ಲದೆ ಈ ಯಾತ್ರೆ ಸಾಧ್ಯವೇ ಇರಲಿಲ್ಲ.
ನಿನ್ನೆ ಮೊನ್ನೆಯಷ್ಟೇ ನಾವೆಲ್ಲರೂ ಸೇರಿ ಈ ವೈಚಾರಿಕ ಸೈದ್ಧಾಂತಿಕ ಯಾತ್ರೆಯನ್ನು ಆರಂಭ ಮಾಡಿದಂತಿದೆ. 2014ರ ಅಕ್ಟೋಬರ್ 3 ರಂದು ವಿಜಯದಶಮಿಯ ಪವಿತ್ರ ದಿನವಾಗಿತ್ತು. ಕಾಕತಾಳೀಯವೆಂದರೆ ಇಂದು ಕಾಮದಹನದ ದಿನ ‘ದೀಪದಿಂದ ದೀಪ ಬೆಳಗಿದಂತೆ ನಮ್ಮ ರಾಷ್ಟ್ರವೂ ಬೆಳಗಲಿ’ ಎಂಬ ಭಾವನೆಯೊಂದಿಗೆ ನಡೆಯುತ್ತಾ ನಾವು ಈ ಮಾರ್ಗವನ್ನು ಸವೆಸಿದ್ದೇವೆ. ನಾವು ದೇಶದ ಮೂಲೆಮೂಲೆಯ ಜನರೊಂದಿಗೆ ಮಾತನಾಡಿದೆವು ಮತ್ತು ಅವರ ಅಸಾಧಾರಣ ಕೆಲಸದ ಬಗ್ಗೆ ಅರಿತೆವು. ನಮ್ಮ ದೇಶದದೂರದ ಪ್ರದೇಶಗಳಲ್ಲೂ ಅದ್ಭುತ ಸಾಮರ್ಥ್ಯ ಹುದುಗಿದೆ; ಭಾರತ ಮಾತೆಯ ಮಡಿಲಲ್ಲಿ ಎಂತೆಂಥ ರತ್ನಗಳು ಅರಳುತ್ತಿವೆ ಎಂಬುದು ನಿಮ್ಮ ಅನುಭವಕ್ಕೂ ಬಂದಿರಬಹುದು. ಸಮಾಜದತ್ತ ದೃಷ್ಟಿಕೋನ ಹರಿಸಲು, ಸಮಾಜವನ್ನು ಮತ್ತು ಸಮಾಜದ ಸಾಮರ್ಥ್ಯವನ್ನು ಅರಿಯಲು ಇದು ನನಗೊಂದು ಅದ್ಭುತ ಅನುಭವವಾಗಿದೆ. ಈ 75 ಕಂತುಗಳ ಅವಧಿಯಲ್ಲಿ ಎಷ್ಟೊಂದು ವಿಷಯಗಳ ಅವಲೋಕನವಾಯಿತು. ಕೆಲವೊಮ್ಮೆ ನದಿ ಬಗ್ಗೆ ಮಾತಾಡಿದರೆ, ಇನ್ನು ಕೆಲವೊಮ್ಮೆ ಹಿಮಾಲಯದ ಪರ್ವತಗಳ ಬಗ್ಗೆ. ಕೆಲವೊಮ್ಮೆ ಮರುಭೂಮಿ ಬಗ್ಗೆ, ಕೆಲವೊಮ್ಮೆ ಪ್ರಾಕೃತಿಕ ವಿಪತ್ತುಗಳ ಬಗ್ಗೆ. ಕೆಲವೊಮ್ಮೆ ಮಾನವ ಸೇವೆಯ ಅಸಂಖ್ಯ ಗಾಥೆಗಳ ಅನುಭೂತಿಯಾದರೆ ಇನ್ನೂ ಕೆಲವೊಮ್ಮೆ ತಂತ್ರಜ್ಞಾನದ ಆವಿಷ್ಕಾರ. ಮತ್ತೆ ಕೆಲವೊಮ್ಮೆ ಯಾವುದೋ ಒಂದು ಅರಿಯದ ಭಾಗದಿಂದ ಹೊಸತನ್ನು ಮಾಡಿ ತೋರಿದವರ ಅನುಭವದ ಕಥೆ.
ಈಗ ನೀವೇ ನೋಡಿ, ಸ್ವಚ್ಛತೆಯ ಮಾತಾಗಿರಲಿ ಅಥವಾ ನಮ್ಮ ಪರಂಪರೆಯನ್ನು ಉಳಿಸುವ ಚರ್ಚೆಯಾಗಿರಬಹುದು, ಇಷ್ಟೇ ಅಲ್ಲ ಆಟಿಕೆಗಳನ್ನು ತಯಾರಿಸುವುದೇ ಆಗಿರಲಿ ಅದರಲ್ಲಿ ಏನೆಲ್ಲ ಇರಲಿಲ್ಲ… ಅದೆಷ್ಟೋ ವಿಷಯಗಳ ಬಗ್ಗೆ ನಾವು ಮಾತನಾಡಿದ್ದೇವೆ, ಬಹುಶಃಅವು ಅಸಂಖ್ಯವಾಗಬಹುದು. ಈ ಸಂದರ್ಭದಲ್ಲಿ ಭಾರತದ ನಿರ್ಮಾಣದಲ್ಲಿ ಅಮೂಲ್ಯ ಕೊಡುಗೆ ನೀಡಿದ ಅನೇಕ ಮಹನೀಯರಿಗೆ ನಾವು ಶೃದ್ಧಾಂಜಲಿ ಅರ್ಪಿಸಿದ್ದೇವೆ. ಅವರ ಬಗ್ಗೆ ತಿಳಿದುಕೊಂಡಿದ್ದೇವೆ. ಅದೆಷ್ಟೋ ಜಾಗತಿಕ ವಿಷಯಗಳ ಬಗ್ಗೆಯೂ ನಾವು ಮಾತನಾಡಿದ್ದೇವೆ. ಅವುಗಳಿಂದ ಪ್ರೇರಣೆ ಪಡೆಯುವ ಪ್ರಯತ್ನ ಮಾಡಿದ್ದೇವೆ. ನೀವು ಕೂಡಾ ನನಗೆ ಹಲವಾರು ವಿಷಯಗಳನ್ನು ತಿಳಿಸಿದಿರಿ ಹಲವಾರು ವಿಚಾರಗಳನ್ನೂ ಹಂಚಿಕೊಂಡಿರಿ. ಈ ವಿಚಾರ ಯಾತ್ರೆಯಲ್ಲಿ ನನ್ನೊಂದಿಗೆ ಜೊತೆಯಾಗಿ ಪಯಣಿಸಿದಿರಿ ಜೊತೆಗೂಡಿದಿರಿ, ಒಗ್ಗೂಡಿದಿರಿ ಮತ್ತು ಹೊಸತನ್ನು ಜೋಡಿಸುತ್ತಾ ಸಾಗಿದಿರಿ. ಇಂದು ಈ 75 ನೇ ಕಂತಿನ ಪ್ರಸಾರದ ಸಂದರ್ಭದಲ್ಲಿ ‘ಮನದ ಮಾತನ್ನು’ ಸಫಲಗೊಳಿಸಿ, ಸಮೃದ್ಧಗೊಳಿಸಿದ್ದಕ್ಕೆ ಮತ್ತು ಇದರೊಂದಿಗೆ ಒಗ್ಗೂಡಿರುವುದಕ್ಕೆ ಪ್ರತಿ ಶ್ರೋತೃವಿಗೂ ನಾನು ಅನಂತ ಕೃತಜ್ಞತೆ ಸಲ್ಲಿಸುತ್ತೇನೆ.
ನನ್ನ ಪ್ರಿಯದೇಶಬಾಂಧವರೆ, ಸ್ವಾತಂತ್ರ್ಯದ 75 ನೇ ‘ಅಮೃತ ಮಹೋತ್ಸವ’ ವರ್ಷದ ಮೊದಲ ಮಾಸದಲ್ಲೇ ಮನದ ಮಾತಿನ 75 ನೇ ಕಂತಿನಲ್ಲಿ ಮಾತನಾಡುವ ಅವಕಾಶ ಲಭಿಸಿರುವುದು ಎಂತಹ ದೊಡ್ಡ ಸಂತಸದ ಸಂಗಮವಾಗಿದೆ ನೋಡಿ. ಅಮೃತ ಮಹೋತ್ಸವ ದಂಡಿಯಾತ್ರೆಯ ದಿನದಂದು ಆರಂಭವಾಗಿತ್ತು ಮತ್ತು 15 ಆಗಸ್ಟ್ 2023 ರವರೆಗೆ ನಡೆಯಲಿದೆ. ಅಮೃತ ಮಹೋತ್ಸವಕ್ಕೆ ಸಂಬಧಿಸಿದ ಕಾರ್ಯಕ್ರಮಗಳು ದೇಶದಲ್ಲಿ ನಿರಂತರ ನಡೆಯುತ್ತಿವೆ. ಬೇರೆ ಬೇರೆ ಪ್ರದೇಶಗಳಿಂದ ಈ ಕಾರ್ಯಕ್ರಮಕುರಿತ ಮಾಹಿತಿ ಮತ್ತು ಛಾಯಾಚಿತ್ರಗಳನ್ನು ಜನರು ಹಂಚಿಕೊಳ್ಳುತ್ತಿದ್ದಾರೆ. ನಮೋ ಆಪ್‌ನಲ್ಲಿ ಇಂಥವೇ ಕೆಲವು ಛಾಯಾ ಚಿತ್ರಗಳ ಜೊತೆಗೆ ಜಾರ್ಖಂಡ್ನ ನವೀನ್ ಅವರು ನನಗೆ ಒಂದು ಸಂದೇಶ ಕಳುಹಿಸಿದ್ದಾರೆ. ಅಮೃತ ಮಹೋತ್ಸವ ಕಾರ್ಯಕ್ರಮವನ್ನು ತಾವು ನೋಡಿರುವುದಾಗಿಯೂ ಮತ್ತು ತಾವು ಕೂಡಾ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ಕನಿಷ್ಠ 10 ಸ್ಥಳಗಳಿಗೆ ಭೇಟಿ ನೀಡುವುದಾಗಿ ನಿರ್ಧರಿಸಿದ್ದಾರೆ ಎಂದು ಬರೆದಿದ್ದಾರೆ. ಅವರ ಪಟ್ಟಿಯಲ್ಲಿ ಮೊದಲನೆಯದಾಗಿ ಹೆಸರು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮಸ್ಥಳ ಇದೆ. ಜಾರ್ಖಂಡ್ನ ಬುಡಕಟ್ಟು ಜನಾಂಗದ ಸ್ವಾತಂತ್ರ್ಯ ಸೇನಾನಿಗಳ ಕಥೆಯನ್ನು ದೇಶದ ಬೇರೆ ಬೇರೆ ಭಾಗಗಳಿಗೆ ತಲುಪಿಸುವುದಾಗಿ ನವೀನ್ ಬರೆದಿದ್ದಾರೆ. ಸೋದರ ನವೀನ್ ನಿಮ್ಮ ವಿಚಾರಕ್ಕಾಗಿ ನಾನು ನಿಮಗೆ ಅಭಿನಂದಿಸುತ್ತೇನೆ.
ಸ್ನೇಹಿತರೆ, ಯಾವುದೇ ಸ್ವಾತಂತ್ರ್ಯ ಹೋರಾಟಗಾರರ ಸಂಘರ್ಷದ ಕಥೆಯಾಗಿರಲಿ, ಯಾವುದೇ ಸ್ಥಳ ಇತಿಹಾಸವಾಗಿರಲಿ, ದೇಶದ ಯಾವುದೇ ಸಾಂಸ್ಕೃತಿಕ ಕಥೆಯಾಗಿರಲಿ ‘ಅಮೃತ ಮಹೋತ್ಸವ’ದ ಸಂದರ್ಭದಲ್ಲಿ ನೀವದನ್ನು ದೇಶಕ್ಕೆ ಪರಿಚಯಿಸಬಹುದಾಗಿದೆ. ದೇಶದ ಜನತೆಯನ್ನು ಅದರೊಂದಿಗೆ ಬೆರೆಸುವ ಮಾಧ್ಯಮವಾಗಬಹುದು. ನೋಡ ನೋಡುತ್ತಲೇ ‘ಅಮೃತ ಮಹೋತ್ಸವ’ ಇಂಥ ಅದೆಷ್ಟೋ ಪ್ರೇರಣಾದಾಯಕ ಅಮೃತ ಬಿಂದುಗಳಿಂದ ತುಂಬಿ ಹೋಗುತ್ತದೆ ಮತ್ತು ಭಾರತದ ಸ್ವಾತಂತ್ರ್ಯದ 100 ವರ್ಷಗಳವರೆಗೆ ನಮಗೆ ಪ್ರೇರಣೆ ನೀಡುವ ಅಮೃತಧಾರೆಯಾಗಿ ಹರಿಯುತ್ತದೆ ಎಂಬುದನ್ನು ನೀವು ನೋಡುತ್ತೀರಿ. ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಏನನ್ನಾದರೂ ಮಾಡಬೇಕೆಂಬ ಉತ್ಸಾಹ ತುಂಬುತ್ತದೆ. ದೇಶಕ್ಕಾಗಿ ತ್ಯಾಗ ಮತ್ತು ಬಲಿದಾನವನ್ನು ತಮ್ಮ ಕರ್ತವ್ಯವೆಂದು ಭಾವಿಸಿದ್ದರು ಹಾಗಾಗಿಯೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರು ಅಷ್ಟೊಂದು ಕಷ್ಟಗಳನ್ನು ಸಹಿಸಿದರು. ಅವರ ತ್ಯಾಗ ಮತ್ತು ಬಲಿದಾನದ ಅಮರ ಕಥೆಗಳು ಇಂದು ನಮಗೆ ಸತತವಾಗಿ ಕರ್ತವ್ಯ ಪಥದಲ್ಲಿ ನಡೆಯುವಂತೆ ಪ್ರೇರಣೆ ನೀಡಲಿ. ಗೀತೆಯಲ್ಲಿ ಭಗವಾನ್ ಕೃಷ್ಣ ಹೀಗೆ ಹೇಳಿದ್ದರು-
ನಿಯತಂ ಕುರು ಕರ್ಮ ತ್ವಂ ಕರ್ಮ ಜ್ಯಾಯೊಹ್ಯ ಕರ್ಮಣಃ
ಇದೇ ಭಾವದಿಂದ ನಾವೆಲ್ಲರೂ ನಮ್ಮ ನಿತ್ಯ ಕರ್ತವ್ಯಗಳನ್ನು ಸಂಪೂರ್ಣ ನಿಷ್ಠೆಯಿಂದ ಪಾಲಿಸೋಣ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅರ್ಥ ನಾವು ಹೊಸ ಸಂಕಲ್ಪ ಗೈಯ್ಯುವುದೇ ಅಲ್ಲವೇ. ಆ ಸಂಕಲ್ಪಗಳನ್ನು ಕಾರ್ಯರೂಪಕ್ಕೆ ತರಲು ತನುಮನದಿಂದ ತೊಡಗಿಕೊಳ್ಳುವುದು ಮತ್ತು ಆ ಸಂಕಲ್ಪ ಎಂಥದ್ದಿರ ಬೇಕೆಂದರೆ ಸಮಾಜದ ಒಳಿತಿಗಾಗಿರಬೇಕು. ದೇಶದ ಒಳಿತಿಗಾಗಿರಬೇಕು. ಭಾರತದ ಉಜ್ವಲ ಭವಿಷ್ಯಕ್ಕಾಗಿರಬೇಕು. ಸಂಕಲ್ಪ ಎಂಥದ್ದಾಗಿರಬೇಕೆಂದರೆ ಅದರಲ್ಲಿ ಸ್ವಲ್ಪವಾದರೂ ನಮ್ಮ ಸ್ವಂತ ಜವಾಬ್ದಾರಿಯಿರಬೇಕು. ನಮ್ಮ ಕರ್ತವ್ಯದಿಂದ ಕೂಡಿರಬೇಕು. ಗೀತೆಯ ಅನುಭಾವವನ್ನು ಜೀವಿಸುವ ಸುವರ್ಣಾವಕಾಶ ನಮ್ಮ ಬಳಿಯಿದೆ.
ನನ್ನ ಪ್ರಿಯ ದೇಶಬಾಂಧವರೆ, ಕಳೆದ ವರ್ಷ ಇದೇ ಮಾರ್ಚ್ ತಿಂಗಳಲ್ಲಿಯೇ ದೇಶ ಪ್ರಥಮ ಬಾರಿಗೆ ಜನತಾ ಕರ್ಫ್ಯೂ ಎಂಬ ಶಬ್ದವನ್ನು ಕೇಳಿತ್ತು. ಆದರೆ ಈ ಮಹಾನ್ ದೇಶದ ಮಹಾಶಕ್ತಿಯ ಅನುಭವ ಎಂಥದ್ದು ಎಂದರೆ ಜನತಾ ಕರ್ಫ್ಯೂ ಎಂಬುದು ಸಂಪೂರ್ಣ ವಿಶ್ವಕ್ಕೆ ಒಂದು ಆಶ್ಚರ್ಯವೆನಿಸಿತ್ತು.
ಶಿಸ್ತಿನ ಒಂದು ಅಭೂತಪೂರ್ವ ಉದಾಹರಣೆ ಇದಾಗಿತ್ತು. ಮುಂಬರುವ ಪೀಳಿಗೆ ಇದರ ಬಗ್ಗೆ ಖಂಡಿತ ಹೆಮ್ಮೆ ಪಡುತ್ತದೆ. ಅದೇ ರೀತಿ ನಮ್ಮ ಕೊರೊನಾ ಯೋಧರ ಕುರಿತು ಗೌರವಾದರ, ತಟ್ಟೆಜಾಗಟೆ, ಚಪ್ಪಾಳೆ ತಟ್ಟುವುದು, ದೀಪ ಬೆಳಗುವುದು ನಡೆದವು. ಇದೆಲ್ಲ ಕೊರೊನಾ ಯೋಧರ ಮನಸ್ಸಿನ ಮೇಲೆ ಎಷ್ಟು ಪರಿಣಾಮ ಬೀರಿತ್ತು ಎಂಬುದು ನಿಮಗೆ ಅಂದಾಜಿರಲಿಕ್ಕಿಲ್ಲ. ಇದೇ ಕಾರಣದಿಂದಲೇ ಅವರು ವರ್ಷಪೂರ್ತಿ ದಣಿಯದೇ, ವಿಶ್ರಮಿಸದೇ ಕಾರ್ಯಪ್ರವೃತ್ತರಾಗಿದ್ದರು. ದೇಶದ ಪ್ರತಿಯೊಬ್ಬ ನಾಗರಿಕನ ಜೀವವನ್ನು ಉಳಿಸಲು ಕಠಿಣ ಹೋರಾಟ ನಡೆಸಿದರು.
ಕಳೆದ ವರ್ಷ ಈ ಸಮಯದಲ್ಲಿ ಕೊರೊನಾ ಲಸಿಕೆ ಯಾವಾಗ ದೊರೆಯುವುದು ಎಂಬ ಪ್ರಶ್ನೆಯಿತ್ತು. ಸ್ನೇಹಿತರೆ, ಇಂದು ಭಾರತ ವಿಶ್ವದಲ್ಲೇ ಅತ್ಯಂತ ದೊಡ್ಡ ಲಸಿಕಾ ಅಭಿಯಾನವನ್ನು ನಡೆಸುತ್ತಿದೆ ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಲಸಿಕಾ ಅಭಿಯಾನದ ಚಿತ್ರಗಳ ಬಗ್ಗೆ ಭುವನೇಶ್ವರದ ಪುಷ್ಪಾ ಶುಕ್ಲಾ ಅವರು ನನಗೆ ಬರೆದಿದ್ದಾರೆ. ಮನೆಯ ಹಿರಿಯರಲ್ಲಿ ಲಸಿಕೆ ಕುರಿತು ಕಾಣುತ್ತಿರುವ ಉತ್ಸಾಹದ ಬಗ್ಗೆ ನಾನು ಮನದ ಮಾತಿನಲ್ಲಿ ಮಾತನಾಡಲಿ ಎಂದು ಅವರು ಬರೆಯುತ್ತಾರೆ. ಸ್ನೇಹಿತರೆ, ಇದು ಸರಿಯಾಗಿಯೂ ಇದೆ. ದೇಶದ ಮೂಲೆ ಮೂಲೆಗಳಿಂದ ನಾವು ಕೇಳುತ್ತಿರುವ ಸುದ್ದಿಗಳು ಮತ್ತು ನೋಡುತ್ತಿರುವ ಚಿತ್ರಗಳು ನನ್ನ ಮನಕ್ಕೆ ಮುದ ನೀಡುತ್ತಿವೆ.
ಉತ್ತರ ಪ್ರದೇಶದ ಜೌನ್‌ಪುರದಲ್ಲಿ 109 ವರ್ಷದ ಹಿರಿಯ ತಾಯಿ ರಾಮ್ ದುಲೈಯ್ಯಾ ಅವರು, ಇದೇ ರೀತಿ ದೆಹಲಿಯಲ್ಲೂ 107 ವರ್ಷದ ಕೇವಲ್ ಕೃಷ್ಣ ಅವರು ಲಸಿಕೆಯ ಡೋಸ್ ಪಡೆದಿದ್ದಾರೆ. ಹೈದ್ರಾಬಾದ್‌ನಲ್ಲಿ 100 ವರ್ಷ ವಯೋಮಾನದ ಜೈಚೌಧರಿ ಅವರು ಲಸಿಕೆ ಹಾಕಿಸಿಕೊಂಡಿದ್ದಾರೆ ಮತ್ತು ಲಸಿಕೆ ಹಾಕಿಸಿಕೊಳ್ಳಿ ಎಂದು ಎಲ್ಲರಲ್ಲೂ ಮನವಿ ಇದೆ. ಟ್ವಿಟ್ಟರ್ ಮತ್ತು ಫೇಸ್ ಬುಕ್ನಲ್ಲಿಯೂ ಜನರು ತಮ್ಮ ಮನೆಯ ಹಿರಿಯರಿಗೆ ಲಸಿಕೆ ಹಾಕಿಸಿದ ನಂತರ ಅವರ ಫೋಟೊ ಅಪ್ಲೋಡ್ ಮಾಡ್ತಾ ಇರೋದನ್ನ ನಾನು ನೋಡುತ್ತಿದ್ದೇನೆ. ಕೇರಳದ ಆನಂದನ್ ನಾಯರ್ ಎಂಬ ಒಬ್ಬ ಯುವಕ ಇದಕ್ಕೆ ‘ಲಸಿಕೆ ಸೇವೆ’ ಎಂಬ ಹೊಸ ಪದ ನೀಡಿದ್ದಾರೆ. ದಿಲ್ಲಿಯಿಂದ ಶಿವಾನಿ, ಹಿಮಾಚಲದಿಂದ ಹಿಮಾಂಶು ಮತ್ತು ಇನ್ನೂ ಹಲವಾರು ಯುವಜನತೆ ಕೂಡ ಇಂಥದೇ ಸಂದೇಶವನ್ನು ಕಳುಹಿಸಿದ್ದಾರೆ. ಎಲ್ಲ ಶ್ರೋತೃಗಳ ಈ ವಿಚಾರಗಳಿಗೆ ನಾನು ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಇದೆಲ್ಲದರ ಮಧ್ಯೆ ಕೊರೊನಾ ವಿರುದ್ಧ– ಔಷದಿ ಮತ್ರು–ಕಟ್ಟುನಿಟ್ಟಿನ ಕ್ರಮಗಳು ಎಂಬ ಹೋರಾಟದ ಮಂತ್ರವನ್ನು ಖಂಡಿತ ನೆನಪಿಡಿ. ನಾನು ಹೇಳುತ್ತೇನೆ ಎಂದು ಮಾತ್ರವಲ್ಲ. ಅದನ್ನು ನಾವು ಅಳವಡಿಸಿಕೊಳ್ಳಬೇಕು, ಹೇಳಬೇಕು ಮತ್ತು ಜನರನ್ನು ಔಷಧಿ–ಕಟ್ಟುನಿಟ್ಟಿನ ಕ್ರಮಗಳಿಗೆ–ಬದ್ಧರನ್ನಾಗಿಸುತ್ತಲೇ ಇರಬೇಕು.
ನನ್ನ ಪ್ರಿಯ ದೇಶವಾಸಿಗಳೇ, ಇಂದು ನಾನು ಇಂದೋರ್ ನಿವಾಸಿ ಸೌಮ್ಯಾ ಅವರಿಗೆ ಧನ್ಯವಾದ ಹೇಳ ಬಯಸುತ್ತೇನೆ. ಅವರು ಒಂದು ವಿಷಯದತ್ತ ನನ್ನ ಗಮನ ಸೆಳೆದಿದ್ದಾರೆ ಮತ್ತು ಅದರ ಬಗ್ಗೆ ‘ಮನದ ಮಾತಿನಲ್ಲಿ’ ಆ ಕುರಿತು ಪ್ರಸ್ತಾಪ ಮಾಡಲೆಂದು ಕೋರಿದ್ದಾರೆ. ಅದೇನೆಂದರೆ ಭಾರತೀಯ ಕ್ರಿಕೆಟರ್ ಮಿತಾಲಿ ರಾಜ್ ಅವರ ಹೊಸ ದಾಖಲೆ. ಮಿತಾಲಿಯವರು ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹತ್ತು ಸಾವಿರ ರನ್ ಗಳಿಸಿದ ಪ್ರಥಮ ಭಾರತೀಯ ಮಹಿಳಾ ಕ್ರಿಕೆಟರ್ ಆಗಿ ಹೊರಹೊಮ್ಮಿದ್ದಾರೆ. ಅವರ ಈ ಸಾಧನೆಗೆ ಅನಂತ ಅಭಿನಂದನೆಗಳು. ಅವರು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 7000 ರನ್ ಗಳಿಸಿದ ಏಕಮಾತ್ರ ಅಂತಾರಾಷ್ಟ್ರೀಯ ಕ್ರೀಡಾಳು ಕೂಡಾ ಆಗಿದ್ದಾರೆ. ಮಹಿಳಾ ಕ್ರಿಕೆಟ್ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅದ್ಭುತವಾಗಿದೆ. ಎರಡು ದಶಕಗಳಿಗಿಂತ ಹೆಚ್ಚಿನ ಕರಿಯರ್ ನಲ್ಲಿ ಮಿತಾಲಿ ರಾಜ್ ಸಾವಿರಾರು-ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿದ್ದಾರೆ. ಅವರ ಕಠಿಣ ಪರಿಶ್ರಮ ಮತ್ತು ಸಫಲತೆಯ ಕಥೆ ಕೇವಲ ಮಹಿಳಾ ಕ್ರಿಕೆಟಿಗರು ಮಾತ್ರವಲ್ಲ ಪುರುಷ ಕ್ರಿಕೆಟ್ ಪಟುಗಳಿಗೂ ಒಂದು ಪ್ರೇರಣೆಯಾಗಿದೆ.
ಸ್ನೇಹಿತರೆ, ಇದು ಆಸಕ್ತಿಕರವಾಗಿದೆ. ಇದೇ ಮಾರ್ಚ್ ತಿಂಗಳಲ್ಲಿ ನಾವು ಮಹಿಳಾ ದಿನ ಆಚರಣೆ ಮಾಡುತ್ತಿರುವಾಗ ಬಹಳಷ್ಟು ಮಹಿಳಾ ಕ್ರೀಡಾಳುಗಳು ಪದಕಗಳನ್ನು ಮತ್ತು ದಾಖಲೆಗಳನ್ನು ಸಾಧಿಸಿದ್ದಾರೆ. ದೆಹಲಿಯಲ್ಲಿ ಆಯೋಜಿಸಲಾಗಿದ್ದ ಐಎಸ್ಎಸ್ಎಫ್ ವಿಶ್ವಕಪ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತ ಅಗ್ರಸ್ಥಾನದಲ್ಲಿತ್ತು. ಚಿನ್ನದ ಮೆಡಲ್ ಸಂಖ್ಯೆಗಳ ವಿಷಯದಲ್ಲೂ ಭಾರತ ಮುಂಚೂಣಿಯಲ್ಲಿದೆ. ಭಾರತೀಯ ಮಹಿಳಾ ಮತ್ತು ಪುರುಷ ಶೂಟರ್ಗಳ ಅದ್ಭುತ ಪ್ರದರ್ಶನದಿಂದಲೇ ಇದು ಸಾಧ್ಯವಾಗಿದೆ. ಈ ಮಧ್ಯೆ ಪಿ ವಿ ಸಿಂಧು ಅವರು BWF Swiss Open Super 300 Tournament ನಲ್ಲಿ ಬೆಳ್ಳಿ ಪದಕಗೆದ್ದಿದ್ದಾರೆ. ಇಂದು ಶಿಕ್ಷಣದಿಂದ ಉದ್ಯಮ ಶೀಲತೆವರೆಗೆ, ಸಶಸ್ತ್ರ ಪಡೆಯಿಂದ ವಿಜ್ಞಾನ ಮತ್ತು ತಂತ್ರಜ್ಞಾನದವರೆಗೆ ಪ್ರತಿ ಕ್ಷೇತ್ರದಲ್ಲೂ ದೇಶದ ಹೆಣ್ಣು ಮಕ್ಕಳು ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಹೆಣ್ಣುಮಕ್ಕಳು ಕ್ರೀಡೆಗಳಲ್ಲೂ ತಮ್ಮದೇ ಸ್ಥಾನ ಕಂಡುಕೊಳ್ಳುತ್ತಿರುವುದು ನನಗೆ ಸಂತಸದ ಸಂಗತಿಯಾಗಿದೆ. ವೃತ್ತಿಗಳ ಆಯ್ಕೆಯಲ್ಲಿ ಕ್ರೀಡೆ ಒಂದು ಆಯ್ಕೆಯಾಗಿ ಹೊರಹೊಮ್ಮತ್ತಿದೆ.
ನನ್ನ ಪ್ರಿಯದೇಶಬಾಂಧವರೆ, ಕೆಲ ದಿನಗಳ ಹಿಂದೆ ನಡೆದ Maritime India Summit ನಿಮಗೆ ನೆನಪಿದೆ ಅಲ್ಲವೇ? ಈ ಶೃಂಗಸಭೆಯಲ್ಲಿ ನಾನು ಏನು ಹೇಳಿದ್ದೆ ಎಂಬುದು ನಿಮಗೆ ನೆನಪಿದೆಯೇ? ಸಾಮಾನ್ಯವಾಗಿ ಎಷ್ಟೋ ಕಾರ್ಯಕ್ರಮಗಳು ಆಗುತ್ತಿರುತ್ತವೆ. ಎಷ್ಟೋ ಮಾತುಗಳು ಆಡುತ್ತಿರುತ್ತೇವೆ. ಎಲ್ಲ ಮಾತುಗಳು ಎಲ್ಲಿ ನೆನಪಿರುತ್ತವೆ ಮತ್ತು ಅಷ್ಟೊಂದು ಗಮನವೂ ಎಲ್ಲಿರುತ್ತದೆ – ಸಹಜ ಅಲ್ಲವೇ. ಆದರೆ ನನ್ನ ಒಂದು ಮನವಿಯನ್ನು ಗುರುಪ್ರಸಾದ್ ಅವರು ಬಹಳ ಆಸಕ್ತಿಯಿಂದ ಮುಂದೆ ಕೊಂಡೊಯ್ಯುತ್ತಿದ್ದಾರೆ. ನಾನು ಈ ಶೃಂಗಸಭೆಯಲ್ಲಿ ದೇಶದ Light House Complexes ಗಳ ಸುತ್ತಮುತ್ತ ಪ್ರವಾಸಿ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸುವ ಕುರಿತು ಮಾತನಾಡಿದ್ದೆ. ಗುರು ಪ್ರಸಾದ್ ಅವರು ತಮಿಳು ನಾಡಿನ 2 ಲೈಟ್ ಹೌಸ್ಗಳಾದ ಚೆನ್ನೈ ಲೈಟ್ ಹೌಸ್ ಮತ್ತು ಮಹಾಬಲಿಪುರಂ ಲೈಟ್ ಹೌಸ್ಗೆ 2019 ರಲ್ಲಿ ತಾವು ಯಾತ್ರೆ ಗೈದಿರುವುದರ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು ಬಹಳ ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ, ಮನದ ಮಾತಿನ ಕೇಳುಗರೆಲ್ಲರಿಗೂ ಕೂಡ ಇದು ಆಶ್ಚರ್ಯಗೊಳಿಸಲಿದೆ. ಚೆನ್ನೈ ಲೈಟ್ ಹೌಸ್, ಎಲಿವೇಟರ್ ಹೊಂದಿರುವವಿಶ್ವದ ಕೆಲವೇ ಲೈಟ್ ಹೌಸ್ಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲ ಭಾರತದ ಏಕಮಾತ್ರ ಇಂಥ ಲೈಟ್ ಹೌಸ್ ಆಗಿದ್ದು ನಗರದ ಮಧ್ಯದಲ್ಲಿದೆ. ಇದರಲ್ಲಿ ವಿದ್ಯುತ್‌ಗಾಗಿ ಸೌರ ಫಲಕಗಳನ್ನೂ ಅಳವಡಿಸಲಾಗಿದೆ. ಗುರುಪ್ರಸಾದ್ ಅವರು ಲೈಟ್ ಹೌಸ್ನ ಪಾರಂಪರಿಕ ವಸ್ತು ಸಂಗ್ರಹಾಲಯದ ಬಗ್ಗೆಯೂ ಹೇಳಿದ್ದಾರೆ, ಇದು ಮರೈನ್ ನೆವಿಗೇಶನ್ನ ಇತಿಹಾಸವನ್ನು ಅನಾವರಣಗೊಳಿಸುತ್ತದೆ. ಸಂಗ್ರಹಾಲಯದಲ್ಲಿ ತೈಲದಿಂದ ಉರಿಯುವ ದೊಡ್ಡದೊಡ್ಡ ದೀಪಗಳು, ಸೀಮೆ ಎಣ್ಣೆ ದೀಪಗಳು, ಪೆಟ್ರೋಲಿಯಂ ವೇಪರ್, ಹಳೇ ಕಾಲದಲ್ಲಿ ಬಳಸಲ್ಪಡುತ್ತಿದ್ದ ವಿದ್ಯುತ್ ದೀಪಗಳನ್ನು ಪ್ರದರ್ಶಿಸಲಾಗಿದೆ. ಭಾರತದ ಅತ್ಯಂತ ಹಳೆಯ ಲೈಟ್ ಹೌಸ್ ಆಗಿರುವ ಮಹಾಬಲಿಪುರಂ ಲೈಟ್ ಹೌಸ್ ಬಗ್ಗೆಯೂ ಗುರುಪ್ರಸಾದ್ ಅವರು ವಿಸ್ತಾರವಾಗಿ ಬರೆದಿದ್ದಾರೆ. ಈ ಲೈಟ್ ಹೌಸ್ ಪಕ್ಕದಲ್ಲಿ ಸಾವಿರಾರು ವರ್ಷಗಳ ಹಿಂದೆ ಪಲ್ಲವರಾಜ ಮೊದಲನೇ ಮಹೇಂದ್ರ ವರ್ಮನ್ ಅವರಿಂದ ನಿರ್ಮಿಸಲ್ಪಟ್ಟ ಉಲ್ಕನೇಶ್ವರ ಮಂದಿರವಿದೆ ಎಂದು ಅವರು ಹೇಳಿದ್ದಾರೆ.
ಸ್ನೇಹಿತರೆ, ಮನದ ಮಾತಿನಲ್ಲಿ ನಾನು ಪ್ರವಾಸದ ವಿಭಿನ್ನ ಆಯಾಮಗಳ ಬಗ್ಗೆ ಅನೇಕ ಬಾರಿ ಮಾತನಾಡಿದ್ದೇನೆ. ಆದರೆ ಈ ಲೈಟ್ ಹೌಸ್‌ಗಳು ಪ್ರವಾಸದ ದೃಷ್ಟಿಯಿಂದ ವಿಶಿಷ್ಟವಾಗಿರುತ್ತವೆ. ತಮ್ಮ ಭವ್ಯ ರಚನೆಗಳಿಂದಾಗಿ ಲೈಟ್ ಹೌಸ್‌ಗಳು ಸದಾ ಜನರ ಆಕರ್ಷಣೆಯ ಕೇಂದ್ರವಾಗಿವೆ. ಪ್ರವಾಸವನ್ನು ಉತ್ತೇಜಿಸಲು ಭಾರತದಲ್ಲಿ 71 ಲೈಟ್ ಹೌಸ್‌ಗಳನ್ನು ಗುರುತಿಸಲಾಗಿದೆ. ಈ ಎಲ್ಲ ಲೈಟ್ ಹೌಸ್‌ಗಳಲ್ಲಿ ಅವುಗಳ ಸಾಮರ್ಥ್ಯಕ್ಕನುಗುಣವಾಗಿ ಸಂಗ್ರಹಾಲಯ, ಆಂಫಿ ಥಿಯೇಟರ್, ಓಪನ್ ಏರ್ ಥಿಯೇಟರ್, ಉಪಾಹಾರ ಗೃಹ, ಮಕ್ಕಳ ಪಾರ್ಕ್, ಪರಿಸರ ಸ್ನೇಹಿ ಕುಟೀರಗಳು ಮತ್ತು ವಿನ್ಯಾಸಿತ ಹೊರಾಂಗಣ ಸಿದ್ಧಗೊಳಿಸಲಾಗುವುದು.
ಲೈಟ್ ಹೌಸ್‌ಗಳ ಬಗ್ಗೆ ಮಾತನಾಡುತ್ತಿರುವಾಗ ನಾನು ಒಂದು ವಿಶಿಷ್ಟ ಲೈಟ್ ಹೌಸ್ ಬಗ್ಗೆ ನಿಮಗೆ ತಿಳಿಸ ಬಯಸುತ್ತೇನೆ. ಈ ಲೈಟ್ ಹೌಸ್ ಗುಜರಾತ್ನ ಸುರೇಂದ್ರ ನಗರ ಜಿಲ್ಲೆಯ ಜಿಂಝುವಾಡಾ ಎಂಬ ಸ್ಥಳದಲ್ಲಿದೆ. ಇದು ಏಕೆ ವಿಶಿಷ್ಟ ಎಂದುಗೊತ್ತೇ? ಏಕೆಂದರೆ ಈ ಲೈಟ್ ಹೌಸ್ ಇರುವ ಜಾಗದಿಂದ, ಸಮುದ್ರ ತೀರ 100 ಕ್ಕೂ ಹೆಚ್ಚು ಕಿಲೋಮೀಟರ್ ದೂರವಿದೆ. ಇಲ್ಲಿ ಒಂದು ಕಾರ್ಯ ನಿರತ ಬಂದರು ಇತ್ತೇನೋ ಎಂದು ಹೇಳುವಂತಹ ಬಂಡೆಗಳು ನಿಮಗೆ ಈ ಗ್ರಾಮದಲ್ಲಿ ಕಾಣಸಿಗುತ್ತವೆ. ಅಂದರೆ ಇದರರ್ಥ ಈ ಹಿಂದೆ ಸಮುದ್ರ ತೀರ ಜಿಂಝುವಾಡಾವರೆಗೆ ಇತ್ತು. ಸಮುದ್ರದ ವಿಸ್ತಾರ ಹೆಚ್ಚುವುದು, ಕುಗ್ಗುವುದು, ಇಷ್ಟು ದೂರ ಸರಿಯುವುದು ಎಲ್ಲ ಅದರ ಸ್ವರೂಪವೇ ಆಗಿದೆ. ಜಪಾನ್ಗೆ ಅಪ್ಪಳಿಸಿದ್ದ ಕರಾಳ ಸುನಾಮಿಗೆ ಈ ತಿಂಗಳಿಗೆ 10 ವರ್ಷಗಳಾಗುತ್ತವೆ. ಆ ಸುನಾಮಿಯಿಂದ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದರು. ಇಂಥ ಸುನಾಮಿ ಭಾರತದಲ್ಲಿ 2004 ರಲ್ಲಿ ಅಪ್ಪಳಿಸಿತ್ತು. ಸುನಾಮಿ ಸಮಯದಲ್ಲಿ ನಮ್ಮ ಲೈಟ್ ಹೌಸ್‌ಗಳಲ್ಲಿ ಕೆಲಸಮಾಡುವ ನಮ್ಮ 14 ಜನರನ್ನು ಕಳೆದುಕೊಂಡಿದ್ದೆವು. ಅಂಡಮಾನ್ ನಿಕೊಬಾರ್ನಲ್ಲಿ ಮತ್ತು ತಮಿಳುನಾಡಿನಲ್ಲಿ ಲೈಟ್ ಹೌಸ್‌ನಲ್ಲಿ ಅವರು ಕೆಲಸ ಮಾಡುತ್ತಿದ್ದರು. ಕಠಿಣ ಪರಿಶ್ರಮದ ನಮ್ಮ ಈ ಲೈಟ್ ಹೌಸ್ ಕೆಲಸಗಾರರಿಗೆ ನಾನು ಗೌರವಪೂರ್ಣ ಶೃದ್ಧಾಂಜಲಿ ಸಲ್ಲಿಸುತ್ತೇನೆ ಮತ್ತು ಲೈಟ್‍ಹೌಸ್ ಕೀಪರ್ಗಳ ಕೆಲಸವನ್ನು ಅಪಾರವಾಗಿ ಗೌರವಿಸುತ್ತೇನೆ.
ಪ್ರೀತಿಯ ದೇಶವಾಸಿಗಳೇ, ಹೊಸತನ, ಆಧುನಿಕತೆ ಎನ್ನುವುದು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಅನಿವಾರ್ಯವಾಗಿದೆ, ಇಲ್ಲದಿದ್ದರೆ, ಅದು ಕೆಲವೊಮ್ಮೆ ನಮಗೆ ಹೊರೆಯಾಗಿ ಪರಿಣಮಿಸುತ್ತದೆ. ಭಾರತದ ಕೃಷಿ ಜಗತ್ತಿನಲ್ಲಿ- ಆಧುನಿಕತೆ, ಎನ್ನುವುದು ಈ ಸಮಯದ ಬೇಡಿಕೆ, ಅಗತ್ಯವಾಗಿದೆ. ಈಗಾಗಲೇ ಬಹಳಷ್ಟು ತಡವಾಗಿದೆ. ನಾವು ಸಾಕಷ್ಟು ಸಮಯವನ್ನು ವ್ಯರ್ಥ ಮಾಡಿಕೊಂಡಿದ್ದೇವೆ. ಕೃಷಿ ಕ್ಷೇತ್ರದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಲುವಾಗಿ, ರೈತರ ಆದಾಯವನ್ನು ಹೆಚ್ಚಿಸುವ ಸಲುವಾಗಿ, ಸಾಂಪ್ರದಾಯಿಕ ಕೃಷಿಯ ಜೊತೆಗೆ ಹೊಸ ಆಯ್ಕೆಗಳು, ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವುದು ಕೂಡಾ ಅಷ್ಟೇ ಅಗತ್ಯವಾಗಿರುತ್ತದೆ. ಶ್ವೇತಕ್ರಾಂತಿಯ ರೂಪದಲ್ಲಿ, ದೇಶಕ್ಕೆ ಇದರ ಅನುಭವವಾಗಿದೆ.
ಈಗ ಜೇನುನೊಣ ಸಾಕಾಣಿಕೆ ಅಂತಹ ಒಂದು ಆಯ್ಕೆಯಾಗಿ ಹೊರಹೊಮ್ಮುತ್ತಿದೆ. ಜೇನುನೊಣ ಸಾಕಾಣಿಕೆ ಎನ್ನುವುದು ದೇಶದಲ್ಲಿ ಜೇನುಕ್ರಾಂತಿ ಅಥವಾ ಸಿಹಿ ಕ್ರಾಂತಿ ಆಧರಿತವಾಗಿದೆ. ಹೆಚ್ಚಿನ ಸಂಖ್ಯೆಯ ರೈತರು ಇದಕ್ಕೆ ಸೇರಿಕೊಳ್ಳುತ್ತಿದ್ದಾರೆ. ಆವಿಷ್ಕಾರ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‍ನಲ್ಲಿ ಗುರ್ದುಂ ಎಂಬ ಒಂದು ಗ್ರಾಮವಿದೆ. ಎತ್ತರದ ಪರ್ವತಗಳು, ಭೌಗೋಳಿಕ ಸಮಸ್ಯೆಗಳು ಇಲ್ಲಿವೆ, ಆದರೆ, ಇಲ್ಲಿನ ಜನರು ಜೇನುನೊಣ ಸಾಕಾಣಿಕೆ ಪ್ರಾರಂಭಿಸಿದರು ಮತ್ತು ಇಂದು, ಈ ಸ್ಥಳದಲ್ಲಿ ತಯಾರಿಸಿದ ಜೇನುತುಪ್ಪಕ್ಕೆ ಉತ್ತಮ ಬೇಡಿಕೆಯಿದೆ, ಜೇನು ಇಂದು ರೈತರ ಆದಾಯವನ್ನೂ ಹೆಚ್ಚಿಸುತ್ತಿದೆ.
ಪಶ್ಚಿಮ ಬಂಗಾಳದ ಸುಂದರ್ ಬನ್ಸ್ ಪ್ರದೇಶಗಳ ನೈಸರ್ಗಿಕ ಸಾವಯವ ಜೇನುತುಪ್ಪವನ್ನು ದೇಶವಿದೇಶಗಳಲ್ಲಿ ಜನರು ಇಷ್ಟ ಪಡುತ್ತಾರೆ. ಇಂತಹದ್ದೇ ಒಂದು ವ್ಯಕ್ತಿಗತ ಅನುಭವದ ಉದಾಹರಣೆ ನನಗೆ ಗುಜರಾತಿನಲ್ಲಿ ದೊರೆತಿದೆ. ಗುಜರಾತ್ನ ಬನಾಸ್ಕಾಂವತದಲ್ಲಿ 2016 ರಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ನಾನು ಜನರಲ್ಲಿ ಹೀಗೆ ಕೇಳಿದ್ದೆ, ಇಲ್ಲಿ ಅನೇಕ ಸಂಭಾವ್ಯತೆಗಳಿವೆ, ಬನಾಸ್ಕಾಂತಾ ಮತ್ತು ಇಲ್ಲಿನ ನಮ್ಮ ರೈತರು ಸಿಹಿ ಕ್ರಾಂತಿಯ ಹೊಸ ಅಧ್ಯಾಯವನ್ನು ಏಕೆ ಬರೆಯಬಾರದು? ಇಷ್ಟು ಕಡಿಮೆ ಸಮಯದಲ್ಲಿ ಜೇನು ಉತ್ಪಾದನೆಗೆ ಬನಾಸ್ಕಾಂತ ಪ್ರಮುಖ ಕೇಂದ್ರವಾಗಿದೆ ಎಂದು ಕೇಳಿ ನಿಮಗೆ ನಿಜಕ್ಕೂ ಸಂತೋಷವಾಗುತ್ತದೆ. ಇಂದು ಬನಾಸ್ಕಾಂತದಲ್ಲಿರುವ ರೈತರು ಜೇನುತುಪ್ಪದಿಂದ ವಾರ್ಷಿಕ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಅಂತಹದ್ದೇ ಮತ್ತೊಂದು ಉದಾಹರಣೆ ಹರಿಯಾಣದ ಯಮುನಾ ನಗರದಲ್ಲಿಯೂ ಇದೆ. ಯಮುನಾ ನಗರದಲ್ಲಿ, ರೈತರು ಜೇನುನೊಣ ಸಾಕಾಣಿಕೆಯಿಂದ, ವಾರ್ಷಿಕವಾಗಿ ನೂರಾರು ಟನ್ ಜೇನುತುಪ್ಪವನ್ನು ಉತ್ಪಾದಿಸುತ್ತಿದ್ದಾರೆ, ಇದರಿಂದ ಅವರ ಆದಾಯ ಹೆಚ್ಚಾಗುತ್ತಿದೆ. ರೈತರ ಈ ಕಠಿಣ ಪರಿಶ್ರಮದ ಫಲವಾಗಿ, ದೇಶದಲ್ಲಿ ಜೇನುತುಪ್ಪದ ಉತ್ಪಾದನೆಯು ನಿರಂತರವಾಗಿ ಹೆಚ್ಚುತ್ತಿದೆ ಮತ್ತು ಇದು ವಾರ್ಷಿಕವಾಗಿ ಸುಮಾರು ಒಂದೂ ಕಾಲು ಲಕ್ಷ ಟನ್ ತಲುಪಿದೆ, ಜೇನುತುಪ್ಪವನ್ನು ದೊಡ್ಡ ಪ್ರಮಾಣದಲ್ಲಿ ರಫ್ತು ಕೂಡಾ ಮಾಡಲಾಗುತ್ತಿದೆ.
ಸ್ನೇಹಿತರೇ, ಜೇನುನೊಣ ಸಾಕಾಣಿಕೆಯಿಂದ ಕೇವಲ ಜೇನುತುಪ್ಪದಿಂದ ಆದಾಯ ಬರುವುದು ಮಾತ್ರವಲ್ಲದೇ, ಜೇನು ಮೇಣವೂ ಸಹ ಒಂದು ಬೃಹತ್ ಆಂದಾಯದ ಮೂಲವಾಗಿದೆ. ಔಷಧ ಉದ್ಯಮ, ಆಹಾರೋದ್ಯಮ, ಜವಳಿ ಮತ್ತು ಸೌಂದರ್ಯ ವರ್ಧಕ ಉದ್ಯಮ ಹೀಗೆ ಹಲವೆಡೆ ಜೇನುಮೇಣಕ್ಕೆ ಬೇಡಿಕೆ ಇದೆ. ನಮ್ಮ ದೇಶ ಪ್ರಸ್ತುತ ಜೇನು ಮೇಣವನ್ನು ಆಮದು ಮಾಡಿಕೊಳ್ಳುತ್ತಿದೆ, ಆದರೆ ನಮ್ಮ ರೈತರು, ಈಗ ಈ ಪರಿಸ್ಥಿತಿಯನ್ನು ತ್ವರಿತಗತಿಯಲ್ಲಿ ಬದಲಾಯಿಸುತ್ತಿದ್ದಾರೆ. ಅಂದರೆ, ಒಂದು ರೀತಿಯಲ್ಲಿ ಸ್ವಾವಲಂಬಿ ಭಾರತ ಅಭಿಯಾನಕ್ಕೆ ಸಹಾಯ ಮಾಡುತ್ತಿದ್ದಾರೆ. ಇಂದು ಇಡೀ ಜಗತ್ತು ಆಯುರ್ವೇದ ಮತ್ತು ನೈಸರ್ಗಿಕ ಆರೋಗ್ಯ ಉತ್ಪನ್ನಗಳತ್ತ ನೋಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಜೇನುತುಪ್ಪದ ಬೇಡಿಕೆ ಮತ್ತಷ್ಟು ವೇಗವಾಗಿ ಹೆಚ್ಚುತ್ತಿದೆ. ದೇಶದ ಹೆಚ್ಚು ಹೆಚ್ಚು ರೈತರು ತಮ್ಮ ವ್ಯವಸಾಯದ ಜೊತೆಜೊತೆಗೆ ಜೇನು ನೊಣ ಸಾಕಾಣಿಕೆಗೆ ಸೇರಬೇಕೆಂದು ನಾನು ಬಯಸುತ್ತೇನೆ. ಇದು ರೈತರ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ಅವರ ಜೀವನಕ್ಕೆ ಸಿಹಿ ಮಾಧುರ್ಯವನ್ನೂ ತುಂಬುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವೇ ದಿನಗಳ ಹಿಂದೆ World sparrow day ಆಚರಿಸಲಾಯಿತು. Sparrow ಎಂದರೆ ಗುಬ್ಬಚ್ಚಿ. ಕೆಲವೆಡೆ ಇದನ್ನು ಚಕಲಿ ಎಂದೂ, ಕೆಲವೆಡೆ ಇದನ್ನು ಚಿಮನಿ ಎಂದೂ ಮತ್ತೆ ಕೆಲವೆಡೆ ಇದನ್ನು ಘಾನ್‍ಚಿರಿಕಾ ಎಂದೂ ಕರೆಯುತ್ತಾರೆ. ಈ ಹಿಂದೆ ಗುಬ್ಬಚ್ಚಿಗಳು ನಮ್ಮ ಮನೆಗಳ ಗೋಡೆಗಳ ಮೇಲೆ ಕುಳಿತು, ಸುತ್ತಮುತ್ತಲಿನ ಗಿಡಮರಗಳ ಮೇಲೆ ಚಿಲಿಪಿಲಿ ಸದ್ದು ಮಾಡುತ್ತಿದ್ದವು. ಆದರೆ ಈಗ ಜನರು ಗುಬ್ಬಚ್ಚಿಯನ್ನು ನೋಡಿ ವರ್ಷಗಳೇ ಕಳೆದಿವೆ ಎಂದು ನೆನಪಿಸಿಕೊಳ್ಳುತ್ತಾರೆ. ಇಂದು ನಾವು ಆ ಗುಬ್ಬಚ್ಚಿಗಳನ್ನು ಸಂರಕ್ಷಿಸಲು ಪ್ರಯತ್ನ ಮಾಡಬೇಕಾಗಿದೆ. ನನ್ನ ಬೆನಾರಸ್ ಗೆಳೆಯರಾದ ಇಂದ್ರಪಾಲ್ ಸಿಂಗ್ ಬಾತ್ರಾ ಅವರು ಮನ್ ಕಿ ಬಾತ್ ಕೇಳುಗರಿಗೆ ಖಂಡಿತವಾಗಿಯೂ ಕೇಳಿಸಲು ಬಯಸುವಂತಹ ಕೆಲಸವನ್ನು ಮಾಡಿದ್ದಾರೆ. ಬಾತ್ರಾಅವರುತಮ್ಮ ಮನೆಯನ್ನೇ ಗುಬ್ಬಚ್ಚಿಗಳ ಗೂಡಾಗಿ ಮಾಡಿದ್ದಾರೆ. ಅವರು ತಮ್ಮ ಮನೆಯಲ್ಲಿ ಗುಬ್ಬಚ್ಚಿಗಳು ಸುಲಭವಾಗಿ ವಾಸ ಮಾಡುವಂತಹ ಕಟ್ಟಿಗೆಯ ಗೂಡೊಂದನ್ನು ನಿರ್ಮಿಸಿದರು. ಇಂದು ಬೆನಾರಸ್ನ ಅನೇಕ ಮನೆಗಳು ಈ ಅಭಿಯಾನಕ್ಕೆ ಸೇರುತ್ತಿವೆ. ಇದರಿಂದಾಗಿ ಮನೆಗಳಲ್ಲಿ ಅದ್ಭುತ ನೈಸರ್ಗಿಕ ವಾತಾವರಣವೂ ಸೃಷ್ಟಿಯಾಗಿದೆ. ಪ್ರಕೃತಿ, ಪರಿಸರ, ಪ್ರಾಣಿಗಳು, ಪಕ್ಷಿಗಳಿಗಾಗಿ ಕೂಡಾ ನಾವು ಏನನ್ನಾದರೂ ಮಾಡಬೇಕೆಂದು ನಾನು ಬಯಸುತ್ತೇನೆ. ನಾವು ಕೂಡಾ ಇಂತಹ ಪ್ರಯತ್ನಗಳನ್ನು ಮಾಡಬೇಕು.
ಇಂತಹ ನನ್ನ ಮತ್ತೊರ್ವ ಸ್ನೇಹಿತ ಬಿಜಯ್‌ಕುಮಾರ್ ಕಾಬಿ ಅವರು. ಬಿಜಯ್ ಅವರು ಒಡಿಶ್ಸಾದ ಕೇಂದ್ರಪಾರ ನಿವಾಸಿ. ಕೇಂದ್ರಪಾರ ಸಮುದ್ರದ ತೀರದಲ್ಲಿದೆ. ಆದ್ದರಿಂದ, ಸಮುದ್ರ ಎತ್ತರೆತ್ತರದ ಅಲೆಗಳು ಮತ್ತು ಚಂಡಮಾರುತಕ್ಕೆ ಗುರಿಯಾಗಬಹುದಾದ ಅನೇಕ ಗ್ರಾಮಗಳು ಈ ಜಿಲ್ಲೆಯಲ್ಲಿವೆ. ಇದರಿಂದ ಕೆಲವೊಮ್ಮೆ ಸಾಕಷ್ಟು ಹಾನಿ ಉಂಟಾಗುತ್ತದೆ. ಈ ನೈಸರ್ಗಿಕ ವಿಪತ್ತನ್ನು ತಡೆಯಲು ಯಾರಿಗಾದರೂ ಸಾಧ್ಯವಾಗುತ್ತದೆ ಎಂದಾದರೆ ಅದು ಪ್ರಕೃತಿಗೆ ಮಾತ್ರ ಎಂದು ಬಿಜೋಯ್ ಅರಿತರು. ಇನ್ನೇನು- ಬಿಜಯ್ ಅವರು ಬಡಾಕೋಟ್ ಗ್ರಾಮದಿಂದ ತಮ್ಮ ಕಾರ್ಯಾಚರಣೆ ಆರಂಭಿಸಿಯೇ ಬಿಟ್ಟರು. ಅವರು 12 ವರ್ಷ- ಸ್ನೇಹಿತರೇ, 12 ವರ್ಷಗಳ ಕಾಲ, ಕಷ್ಟಪಟ್ಟು, ಗ್ರಾಮದ ಹೊರಭಾಗದಲ್ಲಿ ಸಮುದ್ರದ ಕಡೆಗೆ 25 ಎಕರೆ Mangrove ಅರಣ್ಯವನ್ನು ಬೆಳೆಸಿಯೇ ಬಿಟ್ಟರು. ಇಂದು ಈ ಕಾಡು ಈ ಗ್ರಾಮವನ್ನು ರಕ್ಷಿಸುತ್ತಿದೆ. ಇಂತಹದ್ದೇ ಕೆಲಸವನ್ನು ಒಡಿಶ್ಸಾದ ಪಾರಾದೀಪ್ ಜಿಲ್ಲೆಯ ಓರ್ವ ಇಂಜಿನಿಯರ್ ಅಮ್ರೇಶ್ ಸುಮಂತ್ ಅವರು ಕೂಡಾ ಮಾಡಿದ್ದಾರೆ. ಅಮ್ರೆಶ್ ಅವರು ಸಣ್ಣ ಕಾಡುಗಳನ್ನು ಬೆಳೆಸಿದ್ದಾರೆ, ಇದರಿಂದ ಇಂದು ಅನೇಕ ಗ್ರಾಮಗಳು ರಕ್ಷಿಸಲ್ಪಡುತ್ತಿವೆ.
ಸ್ನೇಹಿತರೇ, ಈ ರೀತಿಯ ಕೆಲಸ ಕಾರ್ಯಗಳಲ್ಲಿ, ನಾವು ಸಮಾಜವನ್ನು ಜೊತೆಗೂಡಿಸಿಕೊಂಡಲ್ಲಿ, ಫಲಿತಾಂಶ ಬಹಳ ಉತ್ತಮವಾಗಿರುತ್ತದೆ. ಉದಾಹರಣೆಗೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿರುವ ಮರಿಮುತ್ತು ಯೋಗನಾಥನ್ ಎಂಬ ವ್ಯಕ್ತಿ ಇದ್ದಾರೆ. ಯೋಗನಾಥನ್ ತಮ್ಮ ಬಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಟಿಕೆಟ್ ನೀಡುತ್ತಾರೆ, ಮತ್ತು ಅದರೊಂದಿಗೆ ಒಂದು ಸಸ್ಯವನ್ನು ಸಹ ಉಚಿತವಾಗಿ ನೀಡುತ್ತಾರೆ. ಈ ರೀತಿಯಾಗಿ, ಯೋಗನಾಥನ್ ಅವರು ಅದೆಷ್ಟು ಮರಗಳನ್ನು ನೆಡಿಸಿದ್ದಾರೋ ಲೆಕ್ಕವೇ ಇಲ್ಲ. ಯೋಗನಾಥನ್ ಅವರು ತಮ್ಮ ವೇತನದ ಹೆಚ್ಚಿನ ಭಾಗವನ್ನು ಈ ಕಾರ್ಯಕ್ಕಾಗಿ ಖರ್ಚು ಮಾಡುತ್ತಿದ್ದಾರೆ. ಈಗ ಇದನ್ನು ಕೇಳಿದ ನಂತರ, ಮರಿಮುತ್ತು ಯೋಗನಾಥನ್ ಅವರ ಕೆಲಸವನ್ನು ಮೆಚ್ಚದ ನಾಗರಿಕ ಯಾರಿರುತ್ತಾರೆ ಹೇಳಿ-ಅವರ ಸ್ಪೂರ್ತಿದಾಯಕ ಕಾರ್ಯಕ್ಕಾಗಿ ನಾನು ಅವರ ಪ್ರಯತ್ನಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಾವೆಲ್ಲರೂ ‘ವೇಸ್ಟ್ ಸೇ ವೆಲ್ತ್’ ಅಂದರೆ ‘ಕಸದಿಂದ ರಸ’ತಯಾರಿಸುವ ಬಗ್ಗೆ ನೋಡಿದ್ದೇವೆ, ಕೇಳಿದ್ದೇವೆ ಮತ್ತು ಇತರರಿಗೂ ಹೇಳುತ್ತಲೇ ಇರುತ್ತೇವೆ. ಅದೇ ರೀತಿಯಲ್ಲಿ, ತ್ಯಾಜ್ಯವನ್ನು ಮೌಲ್ಯವಾಗಿ ಪರಿವರ್ತಿಸುವ ಕೆಲಸವೂ ನಡೆಯುತ್ತಿದೆ. ಅಂತಹ ಒಂದು ಉದಾಹರಣೆ ಕೇರಳದ ಕೊಚ್ಚಿಯ ಸೇಂಟ್‌ತೆರೇಸಾ ಕಾಲೇಜು. ನನಗೆ ನೆನಪಿದೆ 2017 ರಲ್ಲಿ ನಾನು ಈ ಕಾಲೇಜಿನ ಕ್ಯಾಂಪಸ್ನಲ್ಲಿ ಬುಕ್‍ರೀಡಿಂಗ್ ಆಧರಿತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ. ಈ ಕಾಲೇಜಿನ ವಿದ್ಯಾರ್ಥಿಗಳು ಮರುಬಳಕೆ ಮಾಡಬಹುದಾದ ಆಟಿಕೆಗಳನ್ನು ತಯಾರಿಸುತ್ತಿದ್ದಾರೆ, ಅದೂ ತುಂಬಾ ಸೃಜನಶೀಲ ರೀತಿಯಲ್ಲಿ. ಈ ವಿದ್ಯಾರ್ಥಿಗಳು ಆಟಿಕೆಗಳನ್ನು ತಯಾರಿಸಲು ಹಳೆಯ ಬಟ್ಟೆಗಳು, ಬಿಸಾಡಲಾಗಿರುವ ಮರದ ತುಂಡುಗಳು, ಚೀಲಗಳು ಮತ್ತು ಪೆಟ್ಟಿಗೆಗಳನ್ನು ಬಳಸುತ್ತಿದ್ದಾರೆ. ಓರ್ವ ವಿದ್ಯಾರ್ಥಿ Puzzle ತಯಾರಿಸಿದರೆ, ಮತ್ತೋರ್ವ ವಿದ್ಯಾರ್ಥಿ ಕಾರು ಅಥವಾ ರೈಲು ತಯಾರಿಸುತ್ತಿದ್ದಾರೆ. ಆಟಿಕೆಗಳು ಸುರಕ್ಷಿತವಾಗಿರುವ ಜೊತೆಜೊತೆಗೆ ಮಕ್ಕಳಿಗೆ ಬಳಕೆ ಸ್ನೇಹಿಯಾಗಿರಬೇಕು ಎಂಬ ಅಂಶಕ್ಕೆ ಇಲ್ಲಿ ವಿಶೇಷ ಗಮನ ನೀಡಲಾಗುತ್ತದೆ. ಮತ್ತು ಈ ಸಂಪೂರ್ಣ ಪ್ರಯತ್ನದ ಒಂದು ಒಳ್ಳೆಯ ವಿಷಯವೆಂದರೆ ಈ ಆಟಿಕೆಗಳನ್ನು ಅಂಗನವಾಡಿ ಮಕ್ಕಳಿಗೆ ಆಟವಾಡಲು ನೀಡಲಾಗುತ್ತದೆ. ಇಂದು ಭಾರತ, ಆಟಿಕೆಗಳ ತಯಾರಿಕೆಯಲ್ಲಿ ಸಾಕಷ್ಟು ಮುಂದುವರಿಯುತ್ತಿದ್ದು, ‘ವೇಸ್ಟ್ ನಿಂದ ವ್ಯಾಲ್ಯೂ’, ‘ಕಸದಿಂದ ರಸ’ ಎಂಬ ಈ ಅಭಿಯಾನ, ಈ ಆಧುನಿಕ ಪ್ರಯತ್ನ ಬಹಳ ಮಹತ್ವದ್ದೆನಿಸುತ್ತದೆ.
ಆಂಧ್ರಪ್ರದೇಶದ ವಿಜಯವಾಡದಲ್ಲಿ ಪ್ರೊಫೆಸರ್ ಶ್ರೀನಿವಾಸ್ ಪದಕಂಡಲಾ ಎನ್ನುವ ವ್ಯಕ್ತಿಯೊಬ್ಬರು ಇದ್ದಾರೆ. ಅವರು ಅತ್ಯಂತ ಆಸಕ್ತಿದಾಯಕ ಕೆಲಸವನ್ನು ಮಾಡುತ್ತಿದ್ದಾರೆ. ಅವರು ಆಟೋಮೊಬೈಲ್ ಮೆಟಲ್ ಸ್ಕ್ರಾಪ್ಗಳಿಂದ ಶಿಲ್ಪಗಳನ್ನು ರಚಿಸಿದ್ದಾರೆ. ಅವರು ಸೃಷ್ಟಿಸಿರುವ ಈ ಬೃಹತ್ ಶಿಲ್ಪಗಳನ್ನು ಸಾರ್ವಜನಿಕ ಉದ್ಯಾನವನಗಳಲ್ಲಿ ಸ್ಥಾಪಿಸಲಾಗಿದೆ ಮತ್ತು ಜನರು ಅವುಗಳನ್ನು ಬಹಳ ಉತ್ಸಾಹದಿಂದ ನೋಡುತ್ತಿದ್ದಾರೆ. ಇದು ಎಲೆಕ್ಟ್ರಾನಿಕ್ ಮತ್ತು ಆಟೋಮೊಬೈಲ್ ತ್ಯಾಜ್ಯ ಮರುಬಳಕೆಯ ನವೀನ ಪ್ರಯೋಗವಾಗಿದೆ. ನಾನು ಕೊಚ್ಚಿ ಮತ್ತು ವಿಜಯವಾಡದ ಈ ಪ್ರಯತ್ನಗಳನ್ನು ಮತ್ತೊಮ್ಮೆ ಶ್ಲಾಘಿಸುತ್ತೇನೆ ಮತ್ತು ಅಂತಹ ಪ್ರಯತ್ನಗಳನ್ನು ಮಾಡುವುದಕ್ಕೆ ಹೆಚ್ಚಿನ ಜನರು ಮುಂದೆ ಬರುತ್ತಾರೆ ಎಂದು ಭಾವಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಭಾರತೀಯರು ವಿಶ್ವದ ಯಾವುದೇ ಮೂಲೆಗೆ ಹೋದರೂ, ಅಲ್ಲಿ ಅವರು ತಾವು ಭಾರತೀಯರೆಂದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ನಮ್ಮ ಯೋಗ, ಆಯುರ್ವೇದ, ತತ್ತ್ವಶಾಸ್ತ್ರ ಹೀಗೆ ನಾವು ಹೆಮ್ಮೆ ಪಡುವಂತಹ ವಿಷಯಗಳು ನಮ್ಮಲ್ಲಿ ಏನೆಲ್ಲಾ ಇವೆಯೋ. ಹಾಗೆಯೇ ನಮ್ಮ ಸ್ಥಳೀಯ ಭಾಷೆ, ಮಾತು, ಗುರುತು, ಉಡುಗೆ-ತೊಡುಗೆ, ಆಹಾರ-ಪಾನೀಯ ಎಲ್ಲದರ ಬಗ್ಗೆಯೂ ನಮಗೆ ಹೆಮ್ಮೆ ಇದೆ. ನಾವು ಹೊಸದನ್ನು ಕಂಡುಕೊಳ್ಳಬೇಕು, ಜೀವನವೆಂದರೆ ಅದೇ, ಆದರೆ ಅದೇ ವೇಳೆ ಹಳೆಯದನ್ನು ಖಂಡಿತಾ ಕಳೆದುಕೊಳ್ಳಬಾರದು. ನಮ್ಮ ಸುತ್ತಮುತ್ತಲಿನ ಅಪಾರ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸಲು, ಅವು ಹೊಸ ಪೀಳಿಗೆಯನ್ನು ತಲುಪಲು ಶ್ರಮಿಸಬೇಕು. ಈ ಕೆಲಸವನ್ನು ಅಸ್ಸಾಂ ನಿವಾಸಿಯಾಗಿರುವ ಸಿಕಾರಿ ಟಿಸ್ಸೌ ಬಹಳ ಸಮರ್ಪಣಾ ಭಾವದೊಂದಿಗೆ ಮಾಡುತ್ತಿದ್ದಾರೆ. ಕಾರ್ಬಿ ಆಂಗ್ಲಾಂಗ್ ಜಿಲ್ಲೆಯ ‘ಸಿಕಾರಿ ಟಿಸ್ಸೌ’ ಕಳೆದ 20 ವರ್ಷಗಳಿಂದ ಕಾರ್ಬಿ ಭಾಷೆಯ ದಾಖಲೀಕರಣ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ, ‘ಕಾರ್ಬಿ ಬುಡಕಟ್ಟು ಜನಾಂಗದ ಸೋದರ ಸೋದರಿಯರ ಭಾಷೆಯಾಗಿದ್ದ ‘ಕಾರ್ಬಿ’ ಇಂದು ಮುಖ್ಯವಾಹಿನಿಯಿಂದ ಕಣ್ಮರೆಯಾಗುತ್ತಿದೆ. ಸಿಕಾರಿ ಟಿಸ್ಸೌ ಅವರು ತಮ್ಮ ಈ ಅಸ್ಮಿತೆಯನ್ನು ಗುರುತನ್ನು ರಕ್ಷಿಸಬೇಕೆಂದು ನಿರ್ಧರಿಸಿದರು. ಮತ್ತು ಇಂದು ಅವರ ಪ್ರಯತ್ನಗಳ ಫಲವಾಗಿ ಕಾರ್ಬಿ ಭಾಷೆಕುರಿತ ಅನೇಕ ವಿಷಯಗಳು ದಾಖಲಿಸಲ್ಪಟ್ಟಿದೆ. ಅವರ ಈ ಪ್ರಯತ್ನದಿಂದಾಗಿ ಅನೇಕ ಸ್ಥಳಗಳಲ್ಲಿ ಅವರು ಮೆಚ್ಚುಗೆ ಗಳಿಸಿದ್ದಾರೆ ಮತ್ತು ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಸಿಕಾರಿ ಟಿಸ್ಸೌಅವರನ್ನು ‘ಮನ್ ಕಿ ಬಾತ್’ ಮೂಲಕ ನಾನು ಅಭಿನಂದಿಸುತ್ತೇನೆ, ಆದರೆ ದೇಶದ ಅನೇಕ ಮೂಲೆಗಳಲ್ಲಿ, ಈ ರೀತಿಯ ಅನೇಕ ಅನ್ವೇಷಕರು ಒಂದಲ್ಲ ಒಂದು ಕೆಲಸವನ್ನು ಸಮರ್ಪಣಾ ಭಾವದಿಂದ ಮಾಡುತ್ತಲೇ ಇರುತ್ತಾರೆ, ನಾನು ಅವರೆಲ್ಲರನ್ನೂ ಅಭಿನಂದಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಯಾವುದೇ ‘ಹೊಸ ಆರಂಭ’ ಅಂದರೆ ‘ನ್ಯೂ ಬಿಗಿನಿಂಗ್’ ಯಾವಾಗಲೂ ಬಹಳ ವಿಶೇಷವಾಗಿಯೇ ಇರುತ್ತದೆ. ಹೊಸ ಆರಂಭದ ಅರ್ಥ- ಹೊಸ ಸಂಭಾವ್ಯತೆಗಳು – ಹೊಸ ಪ್ರಯತ್ನಗಳು. ಮತ್ತು ಹೊಸ ಪ್ರಯತ್ನಗಳೆಂದರೆ, ಹೊಸ ಶಕ್ತಿ ಮತ್ತು ಹೊಸ ಚೈತನ್ಯ ಎಂದರ್ಥ. ಈ ಕಾರಣದಿಂದಾಗಿಯೇ, ಬೇರೆ ಬೇರೆ ರಾಜ್ಯಗಳು ಮತ್ತು ಪ್ರದೇಶಗಳಲ್ಲಿ ವೈವಿಧ್ಯತೆಯಿಂದ ತುಂಬಿದ ನಮ್ಮ ಸಂಸ್ಕೃತಿಯಲ್ಲಿ ಯಾವುದೇ “ಆರಂಭವನ್ನು” ಉತ್ಸವದಂತೆ ಆಚರಿಸುವುದು ಒಂದು ಸಂಪ್ರದಾಯವಾಗಿದೆ. ಮತ್ತು ವರ್ಷದ ಈ ಸಮಯ ಹೊಸ ಆರಂಭ ಹಾಗೂ ಹೊಸ ಉತ್ಸವದ ಆಗಮನ ಕೂಡಾಆಗಿದೆ. ಹೋಳಿ ಹಬ್ಬವನ್ನು ಕೂಡಾ ವಸಂತೋತ್ಸವದ ರೂಪದಲ್ಲಿ ಆಚರಿಸುವುದು ಸಂಪ್ರದಾಯವಾಗಿದೆ. ನಾವು ಬಣ್ಣಗಳಿಂದ ಹೋಳಿ ಹಬ್ಬವನ್ನು ಆಚರಿಸುವ ಸಮಯದಲ್ಲಿ, ವಸಂತ ಕೂಡಾ ನಮ್ಮ ನಾಲ್ಕೂ ದಿಕ್ಕಿನಲ್ಲಿ ಹೊಸ ಬಣ್ಣ ತುಂಬುತ್ತಿರುತ್ತಾನೆ. ಈ ಸಮಯದಲ್ಲಿ, ಹೂವುಗಳು ಅರಳಲು ಪ್ರಾರಂಭಿಸುತ್ತವೆ ಮತ್ತು ಪ್ರಕೃತಿಚಿಗುರಿ ನಿಲ್ಲುತ್ತದೆ. ಶೀಘ್ರದಲ್ಲೇ ದೇಶದ ವಿವಿಧ ಭಾಗಗಳಲ್ಲಿ ಹೊಸ ವರ್ಷವನ್ನು ಕೂಡಾ ಆಚರಿಸಲಾಗುವುದು. ಅದು ಯುಗಾದಿ ಅಥವಾ ಪುಥಂಡು ಆಗಿರಲಿ, ಗುಡಿ ಪಡ್ವಾ ಅಥವಾ ಬಿಹು, ಬೈಸಾಖಿ ಆಗಿರಲಿ – ಇಡೀ ದೇಶವು ಉತ್ಸಾಹ, ಉಲ್ಲಾಸ ಮತ್ತು ಹೊಸ ನಿರೀಕ್ಷೆಗಳ ಬಣ್ಣದಲ್ಲಿ ಮಿಂದಿರುವಂತೆ ಕಾಣುತ್ತದೆ. ಅದೇ ವೇಳೆ, ಕೇರಳವು ವಿಶು ಎಂಬ ಸುಂದರ ಹಬ್ಬವನ್ನು ಆಚರಿಸುತ್ತದೆ. ಇದರ ನಂತರ ಶೀಘ್ರದಲ್ಲೇ ಚೈತ್ರ ನವರಾತ್ರಿಯ ಪವಿತ್ರ ಸಂದರ್ಭವೂ ಬರಲಿದೆ. ಚೈತ್ರ ಮಾಸದ ಒಂಬತ್ತನೇ ದಿನ, ನಾವು ರಾಮ ನವಮಿಯ ಹಬ್ಬವನ್ನು ಆಚರಿಸುತ್ತೇವೆ. ಇದನ್ನು ಭಗವಾನ್ ರಾಮನ ಜನ್ಮದಿನ ಮತ್ತು ನ್ಯಾಯ ಮತ್ತು ಪರಾಕ್ರಮದ ಹೊಸ ಯುಗದ ಆರಂಭವಾಗಿಯೂ ಆಚರಿಸಲಾಗುತ್ತದೆ. ಈ ಸಮಯದಲ್ಲಿ, ಉತ್ಸಾಹ ಉಲ್ಲಾಸದೊಂದಿಗೆ ಭಕ್ತಿಯ ವಾತಾವರಣವೂ ಇರುತ್ತದೆ, ಅದು ಜನರನ್ನು ಮತ್ತಷ್ಟು ಹತ್ತಿರಕ್ಕೆ ತರುತ್ತದೆ, ಅವರನ್ನು ಕುಟುಂಬ ಮತ್ತು ಸಮಾಜದೊಂದಿಗೆ ಜೋಡಿಸುತ್ತದೆ, ಪರಸ್ಪರ ಸಂಬಂಧಗಳನ್ನು ಬಲಪಡಿಸುತ್ತದೆ. ಈ ಹಬ್ಬಗಳ ಸಂದರ್ಭದಲ್ಲಿ, ದೇಶವಾಸಿಗಳಿಗೆ ನಾನು ಶುಭ ಹಾರೈಸುತ್ತೇನೆ.
ಸ್ನೇಹಿತರೇ, ಈ ಸಮಯದಲ್ಲಿ ಏಪ್ರಿಲ್ 4 ರಂದು ದೇಶವು ಈಸ್ಟರ್ ಹಬ್ಬವನ್ನು ಆಚರಿಸಲಿದೆ. ಈಸ್ಟರ್ ಹಬ್ಬವನ್ನು ಯೇಸು ಕ್ರಿಸ್ತನ ಪುನರುತ್ಥಾನದ ದಿನವಾಗಿ ಆಚರಿಸಲಾಗುತ್ತದೆ. ಸಾಂಕೇತಿಕವಾಗಿ, ಈಸ್ಟರ್ ಜೀವನದ ಹೊಸ ಆರಂಭದೊಂದಿಗೆ ಜೋಡಣೆಯಾಗಿದೆ. ಈಸ್ಟರ್ ಹಬ್ಬ ಆಶಯಗಳ ಪುನರುತ್ಥಾನವನ್ನು ಸಂಕೇತಿಸುತ್ತದೆ.
ಈ ಪವಿತ್ರ ದಿನದ ಸಂದರ್ಭದಂದು, ನಾನು ಕೇವಲ ಭಾರತದ ಕ್ರಿಶ್ಚಿಯನ್ ಸಮುದಾಯವರಿಗೆ ಮಾತ್ರವಲ್ಲದೇ, ವಿಶ್ವದ ಕ್ರಿಶ್ಚಿಯನ್ ಸಮುದಾಯಕ್ಕೆ ಶುಭಾಶಯ ಹೇಳಲು ಬಯಸುತ್ತೇನೆ. (On this holy and auspicious occasion, I greet not only the Christian Community in India, but also Christians globally.)
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ‘ಮನ್ ಕಿ ಬಾತ್’ ನಲ್ಲಿ ನಾವು ‘ಅಮೃತ್ ಮಹೋತ್ಸವ್’ ಮತ್ತು ದೇಶಕ್ಕಾಗಿ ನಮ್ಮ ಕರ್ತವ್ಯ ಪಾಲನೆಯ ಬಗ್ಗೆ ಮಾತನಾಡಿದ್ದೇವೆ. ನಾವು ಹಬ್ಬ ಹರಿದಿನ, ಉತ್ಸವಗಳ ಬಗ್ಗೆಯೂ ಚರ್ಚಿಸಿದ್ದೇವೆ. ಏತನ್ಮಧ್ಯೆ, ನಮ್ಮ ಸಾಂವಿಧಾನಿಕ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನೆನಪಿಸುವ ಮತ್ತೊಂದು ಹಬ್ಬ ಬರಲಿದೆ. ಅದು ಏಪ್ರಿಲ್ 14 – ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನ. ಈ ಬಾರಿ ‘ಅಮೃತ ಮಹೋತ್ಸವ’ದಲ್ಲಿ ಈ ಸಂದರ್ಭ ಇದು ಇನ್ನಷ್ಟು ವಿಶೇಷವಾಗಿದೆ. ಬಾಬಾ ಸಾಹೇಬರ ಈ ಜನ್ಮ ದಿನಾಚರಣೆಯನ್ನು ನಾವು ಸ್ಮರಣೀಯವಾಗಿಸುತ್ತೇವೆ, ನಮ್ಮ ಕರ್ತವ್ಯ ಪಾಲನೆಯ ಸಂಕಲ್ಪ ಮಾಡುವ ಮೂಲಕ ಅವರಿಗೆ ನಮನಗಳನ್ನು ಸಲ್ಲಿಸುತ್ತೇವೆ ಎಂಬ ಭರವಸೆ ನನಗಿದೆ. ಈ ವಿಶ್ವಾಸದೊಂದಿಗೆ, ನಿಮಗೆಲ್ಲರಿಗೂ ಹಬ್ಬದ ಸಂದರ್ಭಗಳಿಗಾಗಿ ಶುಭ ಹಾರೈಸುತ್ತೇನೆ. ನೀವೆಲ್ಲರೂ ಸಂತೋಷವಾಗಿರಿ, ಆರೋಗ್ಯವಾಗಿರಿ, ಮತ್ತು ಉತ್ಸಾಹದಿಂದ ಇರಿ. ಇದೇ ಹಾರೈಕೆಯೊಂದಿಗೆ, ಮತ್ತೊಮ್ಮೆ ನೆನಪಿಸುತ್ತಿದ್ದೇನೆ, ಔಷಧವೂ ಬೇಕು ಕಟ್ಟುನಿಟ್ಟಿನ ಎಚ್ಚರಿಕೆಯೂ ಇರಬೇಕು(ದವಾಯೀ ಭೀ, ಕಡಾಯೀ ಭೀ).
ಅನೇಕಾನೇಕ ಧನ್ಯವಾದಗಳು.
***
Today is the 75th episode of #MannKiBaat. Tune in. https://t.co/CAKlYUrGHL
— Narendra Modi (@narendramodi) March 28, 2021
It seems like just yesterday when in 2014 we began this journey called #MannKiBaat. I want to thank all the listeners and those who have given inputs for the programme: PM @narendramodi
— PMO India (@PMOIndia) March 28, 2021
During #MannKiBaat, we have discussed a wide range of subjects. We all have learnt so much. Diverse topics have been covered... pic.twitter.com/18nmqcULNH
— PMO India (@PMOIndia) March 28, 2021
#MannKiBaat completes 75 episodes at a time when India is looking forward to marking our Amrut Mahotsav. pic.twitter.com/8leQBwh9hh
— PMO India (@PMOIndia) March 28, 2021
The sacrifices of our great freedom fighters must inspire us to think about our duties as a citizen. This is something Mahatma Gandhi talked about extensively. #MannKiBaat pic.twitter.com/4fahJl7TXI
— PMO India (@PMOIndia) March 28, 2021
It was in March last year that the nation heard about Janata Curfew.
— PMO India (@PMOIndia) March 28, 2021
From very early on, the people of India have put up a spirited fight against COVID-19. #MannKiBaat pic.twitter.com/XLBjD10A9z
This time last year, the question was whether there would be a vaccine for COVID-19 and by when would it be rolled out.
— PMO India (@PMOIndia) March 28, 2021
Today, the world's largest vaccination drive is underway in India. #MannKiBaat pic.twitter.com/dkfIFz5Ohy
India's Nari Shakti is excelling on the sports field. #MannKiBaat pic.twitter.com/pX6aeyTP4T
— PMO India (@PMOIndia) March 28, 2021
Good to see sports emerge as a preferred choice for India's Nari Shakti. #MannKiBaat pic.twitter.com/wydmEnWpz5
— PMO India (@PMOIndia) March 28, 2021
During one of his speeches, PM @narendramodi had spoken about Lighthouse Tourism.
— PMO India (@PMOIndia) March 28, 2021
Guruprasadh Ji from Chennai shared images of his visits to Lighthouses in Tamil Nadu.
This is a unique aspect of tourism that is being highlighted in #MannKiBaat. pic.twitter.com/NbaqMH3uqs
India is working towards strengthening tourism facilities in some of our Lighthouses. #MannKiBaat pic.twitter.com/w8W0y2iGqi
— PMO India (@PMOIndia) March 28, 2021
A lighthouse surrounded by land...
— PMO India (@PMOIndia) March 28, 2021
PM @narendramodi mentions a unique lighthouse in Surendranagar in Gujarat. #MannKiBaat pic.twitter.com/oTVobQT6Xs
While talking about lighthouses, I want appreciate the efforts of lighthouse keepers for doing their duties diligently. Sadly, we had lost many lighthouse keepers during the tragic 2004 Tsunami: PM @narendramodi
— PMO India (@PMOIndia) March 28, 2021
During #MannKiBaat, PM @narendramodi highlights the importance of bee farming. pic.twitter.com/JZMNJJKlhq
— PMO India (@PMOIndia) March 28, 2021
Summers are approaching and we must not forget to care for our birds.
— PMO India (@PMOIndia) March 28, 2021
At the same time, let us keep working on efforts to conserve nature. #MannKiBaat pic.twitter.com/izeq6KsW51
Inspiring life journeys from Andhra Pradesh, Tamil Nadu and Kerala. These showcase the phenomenal talent our people are blessed with. #MannKiBaat pic.twitter.com/1LCbfUdxbR
— PMO India (@PMOIndia) March 28, 2021
A commendable effort to preserve and popularise the Karbi language. #MannKiBaat pic.twitter.com/jU83KShJBo
— PMO India (@PMOIndia) March 28, 2021