Search

ಪಿಎಂಇಂಡಿಯಾಪಿಎಂಇಂಡಿಯಾ

ಅಭಿವೃದ್ಧಿಗೆ ಹೊಸ ಆಯಾಮ – ಸಂಸದ ಆದರ್ಶ ಗ್ರಾಮ ಯೋಜನೆ


ಸಂಸದ ಆದರ್ಶ ಗ್ರಾಮ ಯೋಜನೆಗೆ ಚಾಲನೆ ನೀಡಿದ ವೇಳೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಯೋಜನೆಯ ಬಗೆಗಿನ ತಮ್ಮ ಪರಿಕಲ್ಪನೆಯನ್ನು ವಿವರಿಸಿದ್ದರು. “ನಮ್ಮ ದೇಶದ ಅಭಿವೃದ್ಧಿಯ ದೊಡ್ಡ ಸಮಸ್ಯೆ ಏನೆಂದರೆ ನಮ್ಮದು ಪೂರೈಕೆ ಆಧರಿತ ಅಭಿವೃದ್ಧಿಯಾಗಿದೆ. ಲಕ್ನೋ, ಗಾಂಧಿನಗರ ಅಥವಾ ದೆಹಲಿಯಲ್ಲಿ ರೂಪಿಸಲಾದ ಯೋಜನೆಯನ್ನು ಎಲ್ಲಾ ಕಡೆ ಅನುಷ್ಠಾನಗೊಳಿಸಲು ಹೊರಡುತ್ತೇವೆ. ಈ ಮಾದರಿಯಿಂದ ನಾವು ಬೇಡಿಕೆ ಆಧರಿತ ಮಾದರಿಗೆ ಪರಿವರ್ತನೆಯಾಗಬೇಕಾಗಿದೆ. ಹಳ್ಳಿಯಲ್ಲೇ ಬೇಡಿಕೆಗೆ ಅನುಗುಣವಾಗಿ ಅಭಿವೃದ್ಧಿ ಮಾಡಬೇಕಾಗಿದೆ. ಅದಕ್ಕೆ ಆದರ್ಶ ಗ್ರಾಮವೇ ಸೂಕ್ತ.

ನಾವು ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ನಾವು ಜನರು ಹೃದಯಗಳನ್ನು ಬೆಸೆಯಬೇಕು. ಸಾಮಾನ್ಯವಾಗಿ ಸಂಸದರು ರಾಜಕೀಯ ಚಟುವಟಿಕೆಗಳಲ್ಲಿ ಮಗ್ನರಾಗಿರುತ್ತಾರೆ. ಆದರೆ, ಅವರು ಹಳ್ಳಿಗಳಿಗೆ ಹೋದರೆ ಅಲ್ಲಿ ರಾಜಕೀಯ ಇರುವುದಿಲ್ಲ. ಅದೊಂದು ಕುಟುಂಬವಿದ್ದಂತೆ. ಊರಿನ ಜನರ ಜೊತೆಗೆ ಚರ್ಚೆ ನಡೆಸಿ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಇದು ಇಡೀ ಹಳ್ಳಿಯನ್ನು ಪುನ ಒಗ್ಗೂಡಿಸುತ್ತದೆ, ಹೊಸ ಚೈತನ್ಯ ತುಂಬುತ್ತದೆ.”

2014ರ ಅಕ್ಟೋಬರ್ 11 ರಂದು ಸಂಸದ್ ಗ್ರಾಮ ಯೋಜನೆಯನ್ನು ಲೋಕಾರ್ಪಣೆ ಮಾಡಲಾಗಿದೆ. ಮಹಾತ್ಮಾ ಗಾಂಧಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯಡಿ ಇಡೀ ಗ್ರಾಮವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯಡಿ, ಸಂಸತ್ ಸದಸ್ಯರು ತಮ್ಮ ಆಯ್ಕೆಯ ಗ್ರಾಮ ಪಂಚಾಯತ್ ವೊಂದನ್ನು ದತ್ತು ಪಡೆದುಕೊಂಡು ಸಂಪೂರ್ಣವಾಗಿ ಅಭಿವೃದ್ಧಿ ಮಾಡಬೇಕಾಗಿದೆ. ಮೂಲಸೌಕರ್ಯ ಅಭಿವೃದ್ಧಿಯ ಜೊತೆಗೆ ಸಾಮಾಜಿಕ ಅಭಿವೃದ್ಧಿಯನ್ನೂ ಸಾಧಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಆದರ್ಶ ಗ್ರಾಮಗಳು ಸ್ಥಳೀಯ ಅಭಿವೃದ್ಧಿ ಮತ್ತು ಆಡಳಿತದ ಶಾಲೆಗಳಾಗಿ ಉಳಿದ ಗ್ರಾಮ ಪಂಚಾಯತ್ ಗಳಿಗೆ ಸ್ಫೂರ್ತಿಯಾಗಬೇಕಾಗಿದೆ.

ಗ್ರಾಮದ ನಿವಾಸಿಗಳ ಸಹಭಾಗಿತ್ವದಲ್ಲಿ ವೈಜ್ಞಾನಿಕ ಸಾಮರ್ಥ್ಯಗಳನ್ನು ಬಳಸಿಕೊಂಡು ಸಂಸದರ ನೇತೃತ್ವದಲ್ಲಿ ಗ್ರಾಮ ಅಭಿವೃದ್ಧಿ ಯೋಜನೆಯನ್ನು ತಯಾರಿಸಲಾಗುತ್ತದೆ. ಅದಾದ ಬಳಿಕ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಿ ರಾಜ್ಯ ಸರ್ಕಾರಗಳಿಗೆ ಸಲ್ಲಿಸಬೇಕಾಗುತ್ತದೆ. ರಾಜ್ಯ ಮಟ್ಟದ ಉನ್ನತಾಧಿಕಾರ ಸಮಿತಿಯು ಆದ್ಯತೆ ಮೇರೆಗೆ ಸಂಪನ್ಮೂಲಗಳನ್ನು ಹಂಚಿಕೆ ಮಾಡುತ್ತದೆ. ಸಧ್ಯ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು 21 ಯೋಜನೆಗಳಿಗೆ ತಿದ್ದುಪಡಿ ತಂದು, ಸಂಸದ್ ಆದರ್ಶ ಗ್ರಾಮ ಯೋಜನೆಯ ಗ್ರಾಮ ಪಂಚಾಯತ್ ನ ಯೋಜನೆಗಳಿಗೆ ನೆರವಾಗುತ್ತಿವೆ.

ಜಿಲ್ಲಾ ಮಟ್ಟದಲ್ಲಿ, ಮಾಸಿಕ ಪರಿಶೀಲನಾ ಸಭೆಗಳನ್ನು ಪ್ರತಿ ಗ್ರಾಮ ಪಂಚಾಯತ್ ಗೂ ಸಂಸದರ ನೇತೃತ್ವದಲ್ಲಿ ನಡೆಸಲಾಗುತ್ತದೆ. ಯೋಜನೆಯಲ್ಲಿ ಪಾಲುದಾರರಾಗಿರುವ ಪ್ರತಿಯೊಂದ ಇಲಾಖೆಗಳ ಪ್ರತಿನಿಧಿಗಳ ಸಮ್ಮುಖದಲ್ಲಿಯೇ ಪರಿಶೀಲನೆ ನಡೆಸಲಾಗುತ್ತದೆ. ಪ್ರತಿ ಸಂಸದರೂ 2016ರಲ್ಲಿ ಒಂದು ಗ್ರಾಮ ಪಂಚಾಯತ್ ಅನ್ನು ಮಾದರಿಯಾಗಿ ರೂಪಿಸುತ್ತಾರೆ. 2019ರಲ್ಲಿ 2 ಮತ್ತು 2024ರೊಳಗೆ ಮತ್ತೆ 5 ಗ್ರಾಮ ಪಂಚಾಯತ್ ಗಳನ್ನು ಅಭಿವೃದ್ಧಿಪಡಿಸಲಿದ್ದಾರೆ. ಈವರೆಗೆ ದೇಶದಲ್ಲಿ 696 ಗ್ರಾಮ ಪಂಚಾಯತ್ ಗಳನ್ನು ಸಂಸದರು ದತ್ತು ಪಡೆದಿರುತ್ತಾರೆ.

ಪ್ರತಿ ಜಿಲ್ಲಾಧಿಕಾರಿಗಳೂ ಸ್ಥಳೀಯ ಮಟ್ಟದಲ್ಲಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹಿರಿಯ ವಿಶೇಷಾಧಿಕಾರಿಗಳನ್ನು ನೇಮಿಸುತ್ತಾರೆ. ಈ ಅಧಿಕಾರಿಯು ಗ್ರಾಮಾಭಿವೃದ್ಧಿಗೆ ಸಂಪೂರ್ಣ ಜವಾಬ್ದಾರಾಗಿರುತ್ತಾರೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಇಂತಹ 653 ಚಾರ್ಜ್ ಅಧಿಕಾರಿಗಳಿಗೆ 9 ಪ್ರಾದೇಶಿಕ ಕೇಂದ್ರಗಳಲ್ಲಿ ತರಬೇತಿಯನ್ನು ಆಯೋಜಿಸಿದೆ. 2015ರ ಸೆಪ್ಟಂಬರ್ 23-24ರಂದು ರಾಷ್ಟ್ರೀಯ ಕಾರ್ಯಾಗಾರವನ್ನೂ ಆಯೋಜಿಸಲಾಗಿತ್ತು. ಭೋಪಾಲ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಸದರು, ರಾಜ್ಯ ಸರ್ಕಾರದ ಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಗ್ರಾಮ ಪ್ರಧಾನರು ಪಾಲ್ಗೊಂಡಿದ್ದರು. ಪ್ರದರ್ಶನದ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವಾಲಯದ ರಾಷ್ಟ್ರಮಟ್ಟದ ಸಮಿತಿಯು ಆಯ್ದ ಉತ್ತಮ ನಡವಳಿಕೆಗಳನ್ನು ವಿವರಿಸಿದೆ. ಆದರ್ಶ ಗ್ರಾಮಗಳಲ್ಲೂ ಇದನ್ನು ಅಳವಡಿಸಲು ಸೂಚಿಸಲಾಗಿದೆ. ಅಭಿವೃದ್ಧಿಯ ಮೇಲೆ ನಿಗಾ ಇಡಲು ನೆರವಾಗುವಂತೆ ಸಚಿವಾಲಯವು 35 ಮಾನದಂಡಗಳುಳ್ಳ ಪಂಚಾಯತ್ ದರ್ಪಣವನ್ನೂ ಬಿಡುಗಡೆ ಮಾಡಿದೆ.

38b66ffa-b41b-450c-9b2d-936149fb7870 [ PM India 57KB ]

ಕೆಲವು ಯಶೋಗಾಥೆಗಳು:

ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ತ್ರೆಹ್ ಗಾಮ್ ಬ್ಲಾಕ್ ನ ಲಾಡೆರ್ ವಾನ್ ಗ್ರಾಮದ ಜನರ ಪ್ರಧಾನ ಚಟುವಟಿಕೆ ಕೃಷಿಯಾಗಿದೆ. ಇಲ್ಲಿ ವೈಜ್ಞಾನಿಕ ಕೃಷಿಯನ್ನು ಉತ್ತೇಜಿಸಲು 379 ರೈತರ ಮೊಬೈಲ್ ಸಂಖ್ಯೆಗಳನ್ನು ಕೃಷಿ ವಿಜ್ಞಾನ ಕೇಂದ್ರಗಳ ಜೊತೆ ಜೋಡಿಸಲಾಗಿದೆ. ಕೆವಿಕೆಗಳು ಎಸ್ ಎಂ ಎಸ್ ಸಂದೇಶಗಳ ಮೂಲಕ ಹವಾಮಾನ ವರದಿ ಮತ್ತಿತರ ಕೃಷಿ ಸಂಬಂಧಿತ ಪದ್ಧತಿಗಳ ಬಗ್ಗೆ, ಬೆಳೆಗಳ ಬಗ್ಗೆ, ಅಭಿವೃದ್ಧಿ ಬಗ್ಗೆ ಮಾಹಿತಿ ರವಾನಿಸುತ್ತವೆ. ಸಂಸದ ಶ್ರೀ ಮುಜಾಫರ್ ಹುಸೇನ್ ಬೇಗ್ ಅವರ ನಿರ್ದೇಶನದ ಮೇರೆಗೆ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಪರಿಣಾಮವಾಗಿ, ರೈತರು ಈಗ ಮೊಬೈಲ್ ಮೂಲಕವೇ ನಿಯಮಿತವಾಗಿ ಮಾಹಿತಿ ಪಡೆಯುತ್ತಿದ್ದಾರೆ. ಈ ಮಾಹಿತಿಯು ವೈಜ್ಞಾನಿಕ ಬಿತ್ತನೆ ಪದ್ಧತಿ, ಮಣ್ಣಿನ ಪರೀಕ್ಷೆ, ಬೆಳೆ ಸಂರಕ್ಷಣೆ, ಕೃಷಿ ಆರ್ಥಿಕ ಪದ್ಧತಿ, ತಂತ್ರಜ್ಞಾನ ಮತ್ತು ಮಾರುಕಟ್ಟೆ ಮಾಹಿತಿಯನ್ನು ಒಳಗೊಂಡಿರುತ್ತದೆ. ಇದರಿಂದಾಗಿ ರೈತರು ಸರಿಯಾದ ಮಾಹಿತಿ ಆಧರಿಸಿ ಕೃಷಿ ನಿರ್ಧಾರಗಳನ್ನು, ಉತ್ಪಾದನೆ ಕುರಿತ ನಿರ್ಧಾರಗಳನ್ನು, ಉತ್ಪನ್ನಗಳ ಮಾರಾಟವನ್ನು ನಡೆಸಲು ಸಾಧ್ಯವಾಗುತ್ತಿದೆ.

ರಾಜ್ಯಸಭಾ ಸದಸ್ಯರಾದ ಡಾ ಇ ಎಂ ಸುದರ್ಶನ್ ನಾಚಿಯಪ್ಪನ್ ಅವರು ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಮರವಮಂಗಲಂ ಗ್ರಾಮವನ್ನು ಆದರ್ಶ ಗ್ರಾಮ ಯೋಜನೆಯಡಿ ದತ್ತು ತೆಗೆದುಕೊಂಡಿದ್ದಾರೆ. ಅವರು ಈ ಗ್ರಾಮದಲ್ಲಿ ಅಭಿವೃದ್ಧಿಪಡಿಸಬಹುದಾದ ಕ್ಷೇತ್ರಗಳನ್ನು ಗುರುತಿಸಿದ್ದು, ಜನರ ಜೀವನ ಮಟ್ಟವನ್ನು ಸುಧಾರಿಸುವ ಕ್ರಮಗಳನ್ನು ಕೈಗೊಂಡಿದ್ದಾರೆ. ನಾರು, ಚರ್ಮ, ತೆಂಗಿನ ಉತ್ಪನ್ನಗಳ ಕುರಿತ ತರಬೇತಿಯನ್ನು ಎಲ್ಲಾ ಸಮುದಾಯದವರಿಗೂ ಕೊಡಲಾಗುತ್ತಿದೆ. ಜಿಲ್ಲಾಡಳಿತ ಮತ್ತು ಅಳಗಪ್ಪ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಸಂಸದರು ಹಲವು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಭಾರತೀಯ ನಾರು ಮಂಡಳಿ, ತೆಂಗು ಅಭಿವೃದ್ಧಿ ಮಂಡಳಿ ಮತ್ತು ಕೇಂದ್ರೀಯ ಚರ್ಮ ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ಹಲವು ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ನಾರಿನ ಉತ್ಪನ್ನಗಳ ಉತ್ಪಾದನೆಯಲ್ಲಿ ಎರಡು ತಿಂಗಳ ವಿಶೇಷ ತರಬೇತಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಾರು ತರಬೇತಿಗೆ 120 ಮಹಿಳೆಯರು, ಚರ್ಮ ತರಬೇತಿಗೆ 112 ಮಂದಿ, ತೆಂಗು ತರಬೇತಿಗೆ 27 ಮಂದಿ ನೋಂದಾಯಿಸಿಕೊಂಡಿದ್ದರು. ತರಬೇತಿ ಬಳಿಕ, ಯಶಸ್ವೀ ತರಬೇತಿ ಪಡೆದವರಿಗೆ ಜಿಲ್ಲಾಡಳಿತ ಮತ್ತು ತರಬೇತುದಾರ ಸಂಸ್ಥೆಗಳ ಮೂಲಕ ಸಾಮಾಜಿಕ ಉದ್ಯಮ ಸ್ಥಾಪಿಸಲು ಹಣಕಾಸಿನ ನೆರವನ್ನೂ ನೀಡಲು ಪ್ರಯತ್ನಿಸಲಾಗುತ್ತದೆ.

ಜಾರ್ಖಂಡ್ ನ ಸಿಂಗ್ ಭುಮ್ ಜಿಲ್ಲೆಯ ಬಂಗುರ್ದಾ ಗ್ರಾಮ ಪಂಚಾಯತ್ ಅನ್ನು ಸಂಸದ ಶ್ರೀ ಬಿದ್ಯುತ್ ಬರನ್ ಮಹತೋ ಅವರು ದತ್ತು ತೆಗೆದುಕೊಂಡಿದ್ದಾರೆ. ಇಲ್ಲಿ ಆರೋಗ್ಯ ಮತ್ತು ಶುಚಿತ್ವ ಕುರಿತು ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಇವರ ಮುಖ್ಯ ಉದ್ದೇಶವಾಗಿದೆ. ಕುಗ್ರಾಮಗಳ ಯುವತಿಯರಲ್ಲಿ ಹರೆಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಹರೆಯದ ಯುವತಿಯರಲ್ಲಿ ಅನೀಮಿಯಾ ಮೊದಲಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರಣಿ ಶಿಬಿರಗಳನ್ನು ಆಯೋಜಿಸಲಾಗಿದೆ. ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಸುಮಾರು 188 ಶಿಬಿರಗಳನ್ನು ಈಗಾಗಲೇ ಆಯೋಜಿಸಲಾಗಿದೆ. ಹಲವು ಯುವತಿಯರು ಸ್ತ್ರೀರೋಗಗಳಿಂದ ಬಳಲುತ್ತಿರುವುದು, ಚರ್ಮ ರೋಗಗಳಿಗೆ ತುತ್ತಾಗಿರುವುದು ಕಂಡು ಬಂದಿದೆ.

ಈ ಪೈಕಿ ಬಹುತೇಕ ಸಮಸ್ಯೆಗಳು ಅನೈರ್ಮಲ್ಯದಿಂದ ಉಂಟಾಗಿರುವುದು ಆಗಿದೆ. ಈ ಸಂಬಂಧ, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡಲಾಗುತ್ತಿದೆ. ಮುಖ್ಯವಾಗಿ ಮಹಿಳೆಯರು ಮತ್ತು ಹರೆಯದ ಯುವತಿಯರಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಈ ಕಾರ್ಯಕ್ರಮಗಳನ್ನು ಹಳ್ಳಿಗಳಲ್ಲಿ ನಿಯಮಿತವಾಗಿ ನಡೆಸಲಾಗುತ್ತಿದೆ.

Loading... Loading