ಜುಲೈ 4, 1898ರಲ್ಲಿ ಪಂಜಾಬ್ನ ಸಿಯಾಲ್ಕೋಟ್ನಲ್ಲಿ ಜನಿಸಿದ ಶ್ರೀ ಗುಲ್ಜಾರಿ ಲಾಲ್ ನಂದಾ ಅವರು ಲಾಹೋರ್, ಆಗ್ರಾ ಮತ್ತು ಅಲಹಾಬಾದ್ನಲ್ಲಿ ಶಿಕ್ಷಣವನ್ನು ಪಡೆದರು. ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ 1920ರಿಂದ 21ರವರಗೆ ಕಾರ್ಮಿಕ ಸಮಸ್ಯೆಗಳ ಕುರಿತು ಸಂಶೋಧನಾ ವಿದ್ಯಾಥಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ. ನಂದಾ ಬಳಿಕ 1921ರಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಮುಂಬಯಿಯ ನ್ಯಾಷನಲ್ ಕಾಲೇಜನ್ನು ಸೇರಿದರು. ಅದೇ ವರುಷ ಅವರು ಅಸಹಕಾರ ಚಳುವಳಿಯನ್ನು ಸೇರಿದರು. 1922ರಲ್ಲಿ ಅಹಮದಾಬಾದ್ ಜವುಳಿ ಕಾರ್ಮಿಕರ ಸಂಘದ ಕಾರ್ಯದರ್ಶಿಯಾದರು. 1946ರವರಗೆ ಶ್ರೀ ನಂದಾ ಅಲ್ಲೇ ಕಾರ್ಯ ನಿರ್ವಹಿಸಿದರು. 1932ರಲ್ಲಿ ಸತ್ಯಾಗ್ರಹದಲ್ಲಿ ಪಾಲ್ಗೊಂಡದಕ್ಕಾಗಿ ಶ್ರೀ ನಂದಾ ಅವರನ್ನು ಬಂಧಿಸಲಾಯಿತು. 1942ರಿಂದ 1944ರವರೆಗೆ ಮತ್ತೆ ಅದೇ ಕಾರಣಕ್ಕಾಗಿ ಅವರನ್ನು ಬಂಧಿಸಲಾಯಿತು.
ಶ್ರೀ ನಂದಾ 1937ರಲ್ಲಿ ಮುಂಬಯಿ ವಿಧಾನಸಭೆಗೆ ಚುನಾಯಿತರಾದರು. 1937 ರಿಂದ 1939ರವೆರೆಗೆ ಅವರು ಮುಂಬಯಿ ಸರ್ಕಾರದ ಸಂಸದೀಯ ಕಾರ್ಯದರ್ಶಿ (ಕಾರ್ಮಿಕ ಮತ್ತು ಅಬಕಾರಿ)ಯಾಗಿದ್ದರು. ಬಳಿಕ ಮುಂಬಯಿ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿ (1946ರಿಂದ 1950) ರಾಜ್ಯ ಸಭೆಗೆ ಕಾರ್ಮಿಕ ವಿವಾದಗಳ ಮಸೂದೆಯನ್ನು ಪ್ರಾಯೋಗಿಕವಾಗಿ ಪರಿಚಯಿಸಿದರು. ಅವರು ಕಸ್ತೂರ ಬಾ ಸ್ಮಾರಕ ಟ್ರಸ್ಟ್ನ ಟ್ರಸ್ಟಿಯಾಗಿ, ಹಿಂದೂಸ್ಥಾನ್ ಮಜ್ದೂರ್ ಸೇವಕ್ ಸಂಘದ ಕಾರ್ಯದರ್ಶಿಯಾಗಿ ಮತ್ತು ಮುಂಬಯಿ ವಸತಿ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ರಾಷ್ಟ್ರೀಯ ಯೋಜನಾ ಸಮಿತಿಯ ಸದಸ್ಯರಾಗಿಯೂ ಇದ್ದರು. ಶ್ರೀ ನಂದಾ ಅವರು ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ನ ಆಯೋಜನೆಯಲ್ಲಿ ಸಕ್ರಿಯರಾಗಿದ್ದು ಬಳಿಕ ಅದರ ಅಧ್ಯಕ್ಷರಾದರು.
1947ರಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ಸಮಾವೇಶಕ್ಕೆ ಸರ್ಕಾರಿ ಪ್ರತಿನಿಧಿಯಾಗಿ ಶ್ರೀ ಗುಲ್ಜಾರಿ ನಂದಾ ಅವರು ಜಿನೆವಾಗೆ ತೆರಳಿದರು. ಸಮಾವೇಶ ನೇಮಿಸಿದ ‘ ದಿ ಫ್ರೀಡಮ್ ಆಫ್ ಅಸೋಸಿಯೇಶನ್ ಕಮಿಟಿ’ಯಲ್ಲೂ ಅವರು ಕಾರ್ಯ ನಿರ್ವಹಿಸಿದರು. ಬಳಿಕ ವಸತಿ ಮತ್ತು ಕಾರ್ಮಿಕ ಸ್ಥಿತಿಗತಿಗಳ ಅಧ್ಯಯನ ನಡೆಸಲು ಅವರು ಸ್ವೀಡನ್, ಫ್ರಾನ್ಸ್, ಸ್ವಿಟ್ಜರ್ಲ್ಯಾಂಡ್, ಬೆಲ್ಜಿಯಮ್ ಮತ್ತು ಇಂಗ್ಲೆಂಡ್ ರಾಷ್ಟ್ರಗಳಿಗೆ ಭೇಟಿ ನೀಡಿದರು.
ಮಾರ್ಚ್ 1950ರಲ್ಲಿ ಅವರು ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ನೇಮಕಗೊಂಡರು. ಮುಂದಿನ ವರ್ಷದ ಸೆಪ್ಟೆಂಬರ್ನಲ್ಲಿ ಕೇಂದ್ರ ಸರ್ಕಾರದ ಯೋಜನಾ ಸಚಿವರಾಗಿ ನೇಮಕಗೊಂಡರು. ಇದರ ಜತೆ ನೀರಾವರಿ ಮತ್ತು ಇಂಧನ ಖಾತೆಗಳ ಹೆಚ್ಚುವರಿ ಅಧಿಕಾರವನ್ನು ಅವರಿಗೆ ನೀಡಲಾಯಿತು. 1952ರ ಸಾಮಾನ್ಯ ಚುನಾವಣೆಯಲ್ಲಿ ಮುಂಬಯಿಯ ಹೌಸ್ ಆಫ್ ದಿ ಪೀಪಲ್ಗೆ ಚುನಾಯಿತರಾದರು. 1955ರಲ್ಲಿ ಸಿಂಗಾಪುರದಲ್ಲಿ ನಡೆದ ಯೋಜನಾ ಸಲಹಾ ಸಮಿತಿ ಮತ್ತು ಜಿನೆವಾದಲ್ಲಿ 1959ರಲ್ಲಿ ನಡೆದ ಅಂತರಾಷ್ಟ್ರೀಯ ಕಾರ್ಮಿಕ ಸಮಾವೇಶದ ಭಾರತೀಯ ನಿಯೋಗದ ಮುಂದಾಳತ್ವ ವಹಿಸಿದರು.
1957ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೀ ನಂದಾ ಅವರು ಚುನಾಯಿತರಾದರು ಹಾಗೂ ಕಾರ್ಮಿಕ, ಉದ್ಯೋಗ ಮತ್ತು ಯೋಜನಾ ಖಾತೆಗಳ ಕೇಂದ್ರ ಸಚಿವರಾಗಿಯೂ ನೇಮಕಗೊಂಡರು. ಬಳಿಕ ಯೋಜನಾ ಆಯೋಗದ ಉಪಾಧ್ಯಕ್ಷರಾದರು. 1959ರಲ್ಲಿ ಅವರು ಜರ್ಮನಿ, ಯುಗೋಸ್ಲಾವಿಯಾ ಮತ್ತು ಆಸ್ಟ್ರಿಯಾಗಳಿಗೆ ಭೇಟಿ ನೀಡಿದರು.
ಪಂಡಿತ್ ನೆಹರೂ ಅವರ ಸಾವಿನ ಬಳಿಕ ಮೇ 27, 1964ರಂದು ಶ್ರೀ. ನಂದಾ ಅವರು ಭಾರತದ ಪ್ರಧಾನ ಮಂತ್ರಿಯಾದರು. ಬಳಿಕ ಪುನಃ 1966ರ ಜನವರಿ 11ರಂದು ಟಾಶ್ಕೆಂಟ್ನಲ್ಲಿ ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಸಾವಿನ ಬಳಿಕ ಎರಡನೆಯ ಅವಧಿಗೆ ಪ್ರಧಾನ ಮಂತ್ರಿಯಾದರು.