ಭಾರತದ ಹದಿನಾಲ್ಕನೇ ಪ್ರಧಾನಮಂತ್ರಿ ಡಾ. ಮನಮೋಹನಸಿಂಗ್ ಅವರನ್ನು ಚಿಂತಕರು ಮತ್ತು ವಿದ್ವಾಂಸರೆಂದು ಸರಿಯಾಗಿಯೇ ಕರೆಯಲಾಗಿದೆ. ನಿಗರ್ವಿಗಳಾದ ಇವರು ತಮ್ಮ ಶೈಕ್ಷಣಿಕ ಮತ್ತು ಕರ್ತವ್ಯ ಎರಡರಲ್ಲೂ ಶ್ರದ್ಧೆ ಹಾಗೂ ವಿನೀತಭಾವನೆಯಿಂದ ಗೌರವಕ್ಕೆ ಪಾತ್ರರಾಗಿದ್ದಾರೆ.
ಪ್ರಧಾನಮಂತ್ರಿ ಮನಮೋಹನಸಿಂಗ್ ಅವರು 1932ರ ಸೆಪ್ಟೆಂಬರ್ 26ರಂದು ಅವಿಭಜಿತ ಭಾರತದಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದರು. ಡಾ. ಸಿಂಗ್ ಅವರು ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನು 1948ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿದರು. ಅವರ ಶೈಕ್ಷಣಿಕ ಸಾಧನೆ ಅವರನ್ನು ಪಂಜಾಬ್ ನಿಂದ ಇಂಗ್ಲೆಂಡ್ ನ ಕೇಂಬ್ರಿಜ್ ವಿಶ್ವವಿದ್ಯಾಲಯಕ್ಕೆ ಕರೆದೊಯ್ಯಿತು. ಅಲ್ಲಿ ಅವರು 1957ರಲ್ಲಿ ಪ್ರಥಮ ದರ್ಜೆಯೊಂದಿಗೆ ಅರ್ಥಶಾಸ್ತ್ರದಲ್ಲಿ ಆನರ್ಸ್ ಪದವಿ ಪಡೆದರು. ನಂತರ ಅವರು 1962ರಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ನಫ್ ಫೀಲ್ಡ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಡಿ.ಫಿಲ್ ಗೌರವ ಪಡೆದರು. ಅವರ ಕೃತಿ ಭಾರತದ ರಫ್ತು ಸ್ಥಿತಿ ಮತ್ತು ಸ್ವಾವಲಂಬಿ ಸುಸ್ಥಿರ ಪ್ರಗತಿಯಲ್ಲಿ ಅದರ ಭವಿಷ್ಯ “India’s Export Trends and Prospects for Self-Sustained Growth” [Clarendon Press, Oxford, 1964] ಭಾರತದ ಆಂತರಿಕ ಆಧಾರಿತ ವ್ಯಾಪಾರ ನೀತಿಯ ಆರಂಭಿಕ ವಿಮರ್ಶೆಯಾಗಿತ್ತು
ಡಾ. ಮನಮೋಹನಸಿಂಗ್ ಅವರ ಶೈಕ್ಷಣಿಕ ಜ್ಞಾನ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಹಾಗೂ ದೆಹಲಿಯ ಪ್ರತಿಷ್ಠಿತ ಆರ್ಥಿಕ ಶಾಲೆಯಲ್ಲಿ ಬೋಧಕರಾಗಿ ಕಳೆದ ವರ್ಷಗಳಲ್ಲಿ ಸಾಕಾರಗೊಂಡವು. ಯು.ಎನ್.ಸಿ.ಟಿ.ಎ.ಡಿ. ಸಚಿವಾಲಯದಲ್ಲಿ ಅವರು ಕೆಲಕಾಲ ಸೇವೆ ಸಲ್ಲಿಸಿದರು. ಇದರ ಫಲವಾಗಿ 1987ರಿಂದ 1990ರವರೆಗೆ ಅವರನ್ನು ಜೀನಿವಾದಲ್ಲಿನ ದಕ್ಷಿಣ ಆಯೋಗಕ್ಕೆ ಮಹಾಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು.
1971ರಲ್ಲಿ ಡಾ. ಸಿಂಗ್ ಅವರು ವಾಣಿಜ್ಯ ಸಚಿವಾಲಯದಲ್ಲಿ ಆರ್ಥಿಕ ಸಲಹೆಗಾರರಾಗಿ ಭಾರತ ಸರ್ಕಾರವನ್ನು ಸೇರಿದರು. 1972ರಲ್ಲಿ ಇವರನ್ನು ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರರಾಗಿ ನೇಮಕ ಮಾಡಲಾಯಿತು. ಡಾ. ಸಿಂಗ್ ಅವರು ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಭಾರತೀಯ ರಿಜರ್ವ್ ಬ್ಯಾಂಕ್ ಗೌರ್ನರ್ ಆಗಿ, ಪ್ರಧಾನಮಂತ್ರಿಗಳ ಸಲಹೆಗಾರರಾಗಿ, ವಿಶ್ವವಿದ್ಯಾಲಯ ಅನುದಾನ ಆಯೋಗದ ಅಧ್ಯಕ್ಷರಾಗಿ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಉನ್ನತ ಸ್ಥಾನವನ್ನು ಅವರು ಅಲಂಕರಿಸಿದ್ದರು.
ಸ್ವತಂತ್ರ ಭಾರತದ ಆರ್ಥಿಕ ಇತಿಹಾಸದಲ್ಲಿ ಒಂದು ಮಹತ್ವದ ತಿರುವು ಮೂಡಿತು. 1991ರಿಂದ 1996ರವರೆಗೆ ಡಾ. ಸಿಂಗ್ ಅವರು ಭಾರತದ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದರು. ಅವರು ಆಗ ಮಾಡಿದ ಆರ್ಥಿಕ ಸುಧಾರಣೆಗಳಿಗೆ ಈಗಲೂ ವಿಶ್ವದ ಮನ್ನಣೆ ಇದೆ. ಜನಪ್ರಿಯದೃಷ್ಟಿಕೋನದಿಂದ ನೋಡುವುದಾದರೆ ಭಾರತದ ಅಂದಿನ ದಿನಗಳು ಡಾ. ಸಿಂಗ್ ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತವೆ.ಡಾ. ಸಿಂಗ್ ಅವರು ಸಾಮಾಜಿಕ ಕ್ಷೇತ್ರದ ತಮ್ಮ ಅದ್ವಿತೀಯ ಸಾಧನೆಗಾಗಿ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಇದರಲ್ಲಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮ ವಿಭೂಷಣ (1987) ಸೇರಿದೆ. ಜೊತೆಗೆ ವಿಜ್ಞಾನ ಕಾಂಗ್ರೆಸ್ ನ ಜವಾಹರಲಾಲ್ ನೆಹರೂ ಜನ್ಮ ಶತಮಾನೋತ್ಸವ ಪ್ರಶಸ್ತಿ (1995), ಹಣಕಾಸು ಸಚಿವರಿಗೆ ನೀಡುವ ಏಷ್ಯಾ ವಿತ್ತ ಪ್ರಶಸ್ತಿ (1993 ಮತ್ತು 1994) ಹಣಕಾಸು ಸಚಿವರಿಗೆ ನೀಡುವ ಯೂರೋ ಹಣ ಪ್ರಶಸ್ತಿ (1993), ಕೇಂಬ್ರಿಜ್ ವಿಶ್ವವಿದ್ಯಾಲಯದ ಆಡಮ್ ಸ್ಮಿತ್ ಬಹುಮಾನ (1956), ಕೇಂಬ್ರಿಜ್ ನ ಸೇಂಟ್ ಜಾನ್ ಕಾಲೇಜಿನಲ್ಲಿ ಅತ್ಯತ್ತುಮ ಸಾಧನೆಗಾಗಿ ರೈಟ್ಸ್ ಪ್ರಶಸ್ತಿ (1955) ಲಭಿಸಿದೆ. ಇದರ ಜೊತೆಗೆ ಜಪಾನೀಸ್ ನಿಹಾನ್ ಕೇಜೈ ಶಿಂಬುನ್ ಗೌರವ ಸೇರಿದಂತೆ ಹಲವು ಸಂಸ್ಥೆಗಳ ಪ್ರಶಸ್ತಿಯೂ ಲಭಿಸಿದೆ. ಅಕ್ಸ್ ಫರ್ಡ್ ಮತ್ತು ಕೇಂಬ್ರಿಜ್ ವಿಶ್ವವಿದ್ಯಾಲಯ ಸೇರಿದಂತೆ ಹಲವು ವಿಶ್ವವಿದ್ಯಾಲಯಗಳ ಗೌರವ ಪದವಿಗೂ ಡಾ. ಸಿಂಗ್ ಪಾತ್ರರಾಗಿದ್ದಾರೆ.
ಡಾ. ಸಿಂಗ್ ಅವರು ಹಲವು ಅಂತಾರಾಷ್ಟ್ರೀಯ ಸಮಾವೇಶಗಳಲ್ಲಿ ಮತ್ತು ಹಲವು ಅಂತಾರಾಷ್ಟ್ರೀಯ ಸಂಘಟನೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 1993ರಲ್ಲಿ ಸೈಪ್ರಸ್ ನಲ್ಲಿ ನಡೆದ ಕಾಮನ್ ವೆಲ್ತ್ ಸರ್ಕಾರದ ಮುಖ್ಯಸ್ಥರ ಸಭೆ ಹಾಗೂ 1993ರಲ್ಲಿ ವಿಯನ್ನಾದಲ್ಲಿ ನಡೆದ ವಿಶ್ವ ಮಾನವ ಹಕ್ಕುಗಳ ಸಮಾವೇಶದಲ್ಲಿ ಪಾಲ್ಗೊಂಡ ಭಾರತೀಯ ನಿಯೋಗದ ನೇತೃತ್ವವನ್ನು ಡಾ. ಸಿಂಗ್ ವಹಿಸಿದ್ದರು. ತಮ್ಮ ರಾಜಕೀಯ ಜೀವನದಲ್ಲಿ ಡಾ.
ಸಿಂಗ್ ಅವರು 1991ರಿಂದ ಸಂಸತ್ತಿನ ಮೇಲ್ಮನೆ (ರಾಜ್ಯಸಭಾ) ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1998ರಿಂದ 2004ರವರೆಗೆ ಅವರು ಮೇಲ್ಮನೆಯ ಪ್ರತಿಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಡಾ. ಮನಮೋಹನಸಿಂಗ್ ಅವರು, 2004ರ ಮೇ 22ರಂದು ಭಾರತದ ಪ್ರಧಾನಮಂತ್ರಿಗಳಾಗಿ ಅಧಿಕಾರವಹಿಸಿಕೊಂಡರು. 2009ರ ಮೇ 22ರಂದು ಎರಡನೇ ಬಾರಿಗೆ ಪ್ರಧಾನಮಂತ್ರಿಗಳಾಗಿ ಅವರು ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಿದರು.
ಡಾ. ಸಿಂಗ್ ಅವರಿಗೆ ಪತ್ನಿ ಗುರುಶರಣ್ ಕೌರ್ ಮತ್ತು ಮೂವರು ಪುತ್ರಿಯರಿದ್ದಾರೆ.