Search

ಪಿಎಂಇಂಡಿಯಾಪಿಎಂಇಂಡಿಯಾ

ಬೇಟಿ ಬಚಾವೋ, ಬೇಟಿ ಪಡಾವೋ-ಹೆಣ್ಣು ಮಕ್ಕಳ ರಕ್ಷಣೆ


ಮಗ ಮತ್ತು ಮಗಳು ಸಮಾನರು ಎನ್ನುವುದು ನಮ್ಮ ಮಂತ್ರವಾಗಿರಬೇಕು.

“ಹೆಣ್ಣು ಮಕ್ಕಳ ಜನನವನ್ನು ನಾವು ಖುಷಿಯಿಂದ ಸಂಭ್ರಮಿಸಬೇಕು. ನಾವು ನಮ್ಮ ಹೆಣ್ಣು ಮಕ್ಕಳ ಬಗ್ಗೆ ಒಂದೇ ರೀತಿಯ ಅಭಿಮಾನ ಹೊಂದಿರಬೇಕು. ನಿಮ್ಮ ಪುತ್ರಿಯ ಜನನವಾದಾಗ ಕನಿಷ್ಟ 5 ಗಿಡಗಳನ್ನು ನೆಟ್ಟು ಸಂಭ್ರಮಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ.”- ತಾವು ದತ್ತು ಪಡೆದಿರುವ ಜಯಪುರ ಗ್ರಾಮದಲ್ಲಿ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಮನವಿ.

2015ರ ಜನವರಿ 22 ರಂದು ಪ್ರಧಾನ ಮಂತ್ರಿಯವರು ಹರಿಯಾಣದ ಪಾಣಿಪತ್ ನಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗೆ ಚಾಲನೆ ನೀಡಿದರು. ಮಕ್ಕಳ ಲಿಂಗಾನುಪಾತ ಹಾಗೂ ಮಹಿಳಾ ಸಬಲೀಕರಣದ ಸಮಸ್ಯೆಗಳಿಗೆ ಈ ಯೋಜನೆ ಉತ್ತರ ಕಂಡುಕೊಳ್ಳಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಾನವ ಸಂಪನ್ಮೂಲಾಭಿವೃದ್ಧಿ ಇಲಾಖೆಗಳ ಜಂಟಿ ಚಿಂತನೆಯ ಫಲವಾಗಿ ಈ ಯೋಜನೆ ರೂಪಿತವಾಗಿದೆ.

ಪಿಸಿ ಮತ್ತು ಪಿಎನ್ಡಿಟಿ ಕಾಯ್ದೆಯ ಅನುಷ್ಠಾನ ಮತ್ತು ರಾಷ್ಟ್ರವ್ಯಾಪಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಮೊದಲ ಹಂತದಲ್ಲಿ ದೇಶದ 100 ಜಿಲ್ಲೆಗಳಲ್ಲಿ ಅಭಿಯಾನವನ್ನು ಆರಂಭಿಸಲಾಗುತ್ತಿದೆ. ತರಬೇತಿ, ವಿಚಾರದ ಅರಿವು, ಜಾಗೃತಿ ಕಾರ್ಯಕ್ರಮಗಳು ಮತ್ತು ತಳಮಟ್ಟದಲ್ಲಿ ಸಮುದಾಯಗಳನ್ನು ಒಗ್ಗೂಡಿಸುವ ಮೂಲಕ ಜನರ ಮನಸ್ಸಿನಲ್ಲಿಯೇ ಬದಲಾವಣೆ ತರುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ಎನ್ ಡಿ ಎ ಸರಕಾರವು, ಹೆಣ್ಣು ಮಕ್ಕಳ ಬಗೆಗಿನ ಸಮಾಜದ ದೃಷ್ಟಿಕೋನವನ್ನು ಬದಲಾಯಿಸುವ ಉದ್ದೇಶ ಹೊಂದಿದೆ. ಪುತ್ರಿಯೊಂದಿಗೆ ಸೆಲ್ಫಿ ಅಭಿಯಾನ ಆರಂಭಿಸಿದ ಹರಿಯಾಣದ ಬಿಬಿಪುರದ ಸರಪಂಚನನ್ನು ಪ್ರಧಾನ ಮಂತ್ರಿ ಮೋದಿಯವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹೊಗಳಿದ್ದರು. ಇದಾದ ಬಳಿಕ ಪ್ರಧಾನ ಮಂತ್ರಿಯವರು ದೇಶದ ಎಲ್ಲಾ ತಂದೆಯಂದಿರಿಗೂ ಮಗಳ ಜೊತೆ ಸೆಲ್ಫಿ ತೆಗೆಸಿಕೊಳ್ಳುವಂತೆ ಕರೆ ನೀಡಿದ್ದರು. ಇದಕ್ಕೆ ಭಾರೀ ಪ್ರತಿಕ್ರಿಯೆ ಲಭ್ಯವಾಗಿತ್ತು. ಕೇವಲ ಭಾರತವಷ್ಟೇ ಅಲ್ಲ, ವಿದೇಶಗಳಿಂದಲೂ ಜನರು ತಮ್ಮ ಮಗಳ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದರು. ಅಲ್ಲದೆ, ಇದು ಹೆಣ್ಣು ಮಕ್ಕಳನ್ನು ಹೊಂದಿರುವ ತಂದೆಯಂದಿರಿಗೆ ಹೆಮ್ಮೆಯ ಕ್ಷಣವೂ ಆಗಿತ್ತು.

0.13648200-1451573004-empowering-girl-child [ PM India 186KB ]

ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯನ್ನು ಆರಂಭಿಸಿದ ಬಳಿಕ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಬಹುಸ್ತರೀಯ ಜಿಲ್ಲಾ ಕಾರ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಹೆಚ್ಚಿನ ತರಬೇತಿ ನೀಡುವ ಉದ್ದೇಶದಿಂದ, ತರಬೇತುದಾರರಿಗೆ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು 2015ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ, ಈಗಾಗಲೇ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 9 ಹಂತದ ತರಬೇತಿಗಳನ್ನು ನಡೆಸಿದೆ.

ಕೆಲವು ಸ್ಥಳೀಯ ಹೆಜ್ಜೆಗಳು

0.00072000-1451573123-betibachao-2 [ PM India 581KB ]

ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಪಿತೋರಘಡ್ ಜಿಲ್ಲೆಯು ಹೆಣ್ಣು ಶಿಶುವಿನ ರಕ್ಷಣೆ ಮತ್ತು ಶಿಕ್ಷಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಜಿಲ್ಲಾ ಕಾರ್ಯಪಡೆಗಳನ್ನು ಮತ್ತು ವಿಭಾಗೀಯ ಕಾರ್ಯಪಡೆಗಳನ್ನು ರಚಿಸಲಾಗಿದೆ. ಈ ಘಟಕಗಳ ಸಭೆಗಳನ್ನೂ ಆಯೋಜಿಸಲಾಗಿದೆ. ಮಕ್ಕಳ ಲಿಂಗಾನುಪಾತಕ್ಕೆ ಸಂಬಂಧಿಸಿ ಸ್ಪಷ್ಟವಾದ ಮಾರ್ಗಸೂಚಿಗಳನ್ನು ರಚಿಸಲಾಗಿದೆ.

ಸಮುದಾಯಗಳನ್ನು ದೊಡ್ಡ ಮಟ್ಟದಲ್ಲಿ ತಲುಪಲು, ಯೋಜನೆಯ ಮಾಹಿತಿಯನ್ನು ಜನರಿಗೆ ತಿಳಿಸಲು ಬಾರೀ ಪ್ರಮಾಣದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲೆಗಳು, ಸೇನಾ ಶಾಲೆಗಳು ಮತ್ತು ಸರಕಾರಿ ಇಲಾಖೆಗಳನ್ನು ಬಳಸಿಕೊಂಡು ಹಲವು ಸಮಾವೇಶಗಳನ್ನು ಆಯೋಜಿಸಲಾಗಿದೆ.

ಹೆಚ್ಚಿನ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಪಿತೋರಘಡ್ ನಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದ ಕುರಿತು ಬೀದಿ ನಾಟಕಗಳನ್ನೂ ಆಯೋಜಿಸಲಾಗಿದೆ. ಈ ಬೀದಿ ನಾಟಕಗಳನ್ನು ಕೇವಲ ಹಳ್ಳಿಗಳಲ್ಲಿ ಪ್ರದರ್ಶನ ಮಾಡಿಲ್ಲ, ಮಾರುಕಟ್ಟೆಗಳಲ್ಲೂ ಪ್ರದರ್ಶಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ತಲುಪುವ ಪ್ರಯತ್ನ ಮಾಡಲಾಗಿದೆ.

ಚಿತ್ರಕಥೆಗಳ ಮೂಲಕ ದೃಶ್ಯಗಳ ಮೂಲಕ ಲಿಂಗ ಆಧರಿತ ಗರ್ಭಪಾತಗಳ ಪರಿಣಾಮದ ಕುರಿತು ಜನರಲ್ಲಿ ಅರಿವು ಮೂಡತೊಡಗಿದೆ. ಹೆಣ್ಣು ಮಕ್ಕಳ ಸಮಸ್ಯೆಗಳು, ಜೀವನಪೂರ್ತಿ ಅವಳು ಅನುಭವಿಸಬೇಕಾದ ಕಷ್ಟಗಳ ಬಗ್ಗೆ ಬೀದಿ ನಾಟಕಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ.

ಸಹಿ ಸಂಗ್ರಹ ಅಭಿಯಾನ, ಪ್ರಮಾಣ ಮೊದಲಾದ ಕಾರ್ಯಕ್ರಮಗಳ ಮೂಲಕ ಈ ಯೋಜನೆಯ ಸಂದೇಶವನ್ನು ಪಿಜಿ ಕಾಲೇಜುಗಳು ಮತ್ತು ಸೇನಾ ಯೋಧರು ಸೇರಿದಂತೆ ಸುಮಾರು 700 ಮಂದಿಗೆ ತಲುಪಿಸಲಾಗಿದೆ.

ಪಂಜಾಬ್ ನ ಮನ್ಸಾ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೇರಣೆ ನೀಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಉಡಾನ್ ಎಂಬ ಹೆಸರಿನ ಯೋಜನೆಯಡಿ ಒಂದು ದಿನವಾದರೂ ನಿಮ್ಮ ಕನಸನ್ನು ಈಡೇರಿಸಿಕೊಳ್ಳಿ ಎಂದು ಹುರಿದುಂಬಿಸಲಾಗುತ್ತಿದೆ. ಈ ಯೋಜನೆಯಡಿ 6-10ನೇ ತರಗತಿಯ ವಿದ್ಯಾರ್ಥಿನಿಯರಿಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ವಿದ್ಯಾರ್ಥಿನಿಯರಿಗೆ ಅವರು ಬಯಸುವ ವೈದ್ಯರು, ಪೊಲೀಸ್ ಅಧಿಕಾರಿಗಳು, ಇಂಜಿನಿಯರ್ ಗಳು ಐಎಎಸ್ ಮತ್ತು ಪಿಪಿಎಸ್ ಅಧಿಕಾರಿಗಳು ಜೊತೆಗೆ ಒಂದು ದಿನ ಕೆಲಸ ಮಾಡುವ ಅವಕಾಶ ಕಲ್ಪಿಸಲಾಗುತ್ತಿದೆ. ಈ ಯೋಜನೆಗೆ ಅತ್ಯುತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು ಈಗಾಗಲೇ, ಸುಮಾರು 70ಕ್ಕೂ ವಿದ್ಯಾರ್ಥಿಗಳಿಗೆ ಅಧಿಕಾರಿಗಳ ಜೊತೆ ಕೆಲಸ ಮಾಡುವ ಅವಕಾಶ ದೊರೆತಿದೆ. ಕೆಲಸ ಮಾಡುವ ವಿಧಾನ ಮತ್ತು ಪರಿಸರದ ಬಗ್ಗೆ ತಿಳಿದುಕೊಳ್ಳುವಲ್ಲಿ ನೆರವಾಗಿದೆ. ಇದರಿಂದ ಭವಿಷ್ಯದಲ್ಲಿ ಅವರಿಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವಾಗಲಿದೆ.

Loading... Loading