ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಡಿಒಹೆಚ್‌ಡಬ್ಲ್ಯು) ಹಾಗು ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ (ಬಿಎಂಜಿಎಫ್) ನಡುವಿನ ಸಹಕಾರ ಒಪ್ಪಂದಕ್ಕೆ (ಎಂಒಸಿ) ಪೂರ್ವಾನ್ವಯ ಅನುಮೋದನೆ ನೀಡಿದೆ. ಆರೋಗ್ಯ ಕ್ಷೇತ್ರದಲ್ಲಿ ಸಹಕಾರದ ಕುರಿತ ಒಪ್ಪಂದಕ್ಕೆ 2019 ರ ನವೆಂಬರ್‌ನಲ್ಲಿ ಬಿಎಮ್‌ಜಿಎಫ್‌ನ ಸಹ-ಅಧ್ಯಕ್ಷ ಮತ್ತು ಟ್ರಸ್ಟಿ ಶ್ರೀ ಬಿಲ್ ಗೇಟ್ಸ್ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಹಿ ಹಾಕಲಾಗಿತ್ತು.
ಸಹಕಾರ ಒಪ್ಪಂದ (ಎಂಒಸಿ) ಈ ಕೆಳಗಿನ ಸಹಕಾರ ಕ್ಷೇತ್ರಗಳನ್ನು ಒಳಗೊಂಡಿದೆ
ಎ) ತಾಯಂದಿರು, ನವಜಾತ ಶಿಶುಗಳು ಮತ್ತು ಮಕ್ಕಳ ಕಾಯಿಲೆ ಮತ್ತು ಮರಣ ಪ್ರಮಾಣವನ್ನು ತಗ್ಗಿಸಲು, ಅಗತ್ಯ ಪ್ರಾಥಮಿಕ ಆರೋಗ್ಯ, ರೋಗನಿರೋಧಕ ಮತ್ತು ಪೌಷ್ಠಿಕಾಂಶ ಸೇವೆಗಳ ವ್ಯಾಪ್ತಿ ಮತ್ತು ಗುಣಮಟ್ಟವನ್ನು ವಿಸ್ತರಿಸುವ ಮೂಲಕ ಪ್ರಮುಖ ಪೌಷ್ಟಿಕಾಂಶದ ಫಲಿತಾಂಶಗಳನ್ನು ಸುಧಾರಿಸುವುದು.
ಬಿ) ಕುಟುಂಬ ಯೋಜನೆ ವಿಧಾನಗಳಿಗೆ, ವಿಶೇಷವಾಗಿ ತಿರಿಗುಮುರುಗು ಮಾಡಬಲ್ಲ ವಿಧಾನಗಳಿಗಾಗಿ ಆಯ್ಕೆ ಮತ್ತು ಗುಣಮಟ್ಟದ ಅವಕಾಶಗಳನ್ನು ಹೆಚ್ಚಿಸುವುದು ಮತ್ತು ಕಡಿಮೆ ವಯಸ್ಸಿನ ಮಹಿಳೆಯರಿಗೆ ಲಭ್ಯತೆಯನ್ನು ಹೆಚ್ಚಿಸುವುದು.
ಸಿ) ಆಯ್ದ ಸಾಂಕ್ರಾಮಿಕ ರೋಗಗಳ ಹೊರೆ ಕಡಿಮೆ ಮಾಡುವುದು [ಕ್ಷಯ, ವಿಸ್ಕರಲ್ ಲೀಶ್ಮೇನಿಯಾಸಿಸ್ (ವಿಎಲ್), ದುಗ್ಧರಸ ಫಿಲೇರಿಯಾಸಿಸ್ (ಎಲ್ಎಫ್)].
ಡಿ) ಆರೋಗ್ಯ, ಡಿಜಿಟಲ್ ಆರೋಗ್ಯ, ಪೂರೈಕೆ ಸರಪಳಿಯನ್ನು ಬಲಪಡಿಸುವುದು ಮತ್ತು ಮೇಲ್ವಿಚಾರಣಾ ವ್ಯವಸ್ಥೆಗಳಿಗಾಗಿ ಬಜೆಟ್ ಬಳಕೆ, ನಿರ್ವಹಣೆ ಮತ್ತು ಮಾನವ ಸಂಪನ್ಮೂಲಗಳ ಕೌಶಲ್ಯಗಳು ಸೇರಿದಂತೆ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವುದು.
ಸಹಕಾರದ ವಿವರಗಳನ್ನು ಇನ್ನಷ್ಟು ವಿಸ್ತರಿಸಲು ಮತ್ತು ಈ ಸಹಕಾರ ಒಪ್ಪಂದ ಅನುಷ್ಠಾನದ ಮೇಲ್ವಿಚಾರಣೆಗೆ ಕಾರ್ಯಕ್ರಮ ಕ್ರಿಯಾ ಸಮಿತಿಯನ್ನು (ಪಿಎಸಿ) ರಚಿಸಲಾಗುವುದು.