ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಭಾರತದ ಭೂ ವಿಜ್ಞಾನ ಸಚಿವಾಲಯ (ಎಂಒಇಎಸ್) ಮತ್ತು ಸ್ವೀಡನ್‌ನ ಶಿಕ್ಷಣ ಮತ್ತು ಸಂಶೋಧನಾ ಸಚಿವಾಲಯದ ನಡುವಿನ ಧ್ರುವ ವಿಜ್ಞಾನದ ಸಹಕಾರ ಒಪ್ಪಂದಕ್ಕೆ ಅಂಗೀಕಾರ ನೀಡಿದೆ. ಸ್ವೀಡನ್ ದೊರೆಯ ಭಾರತ ಭೇಟಿ ಸಂದರ್ಭದಲ್ಲಿ 2019 ರ ಡಿಸೆಂಬರ್ 2 ರಂದು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಗಿತ್ತು.
ಅಂಟಾರ್ಕ್ಟಿಕ್ ಒಪ್ಪಂದ ಮತ್ತು ಪರಿಸರ ಸಂರಕ್ಷಣೆ ಕುರಿತ ಅಂಟಾರ್ಕ್ಟಿಕ್ ಒಪ್ಪಂದಕ್ಕೆ ಭಾರತ ಮತ್ತು ಸ್ವೀಡನ್ ಸಹಿ ಹಾಕಿರುವ ದೇಶಗಳು. ಎಂಟು ಆರ್ಕ್ಟಿಕ್ ರಾಷ್ಟ್ರಗಳ ಆರ್ಕ್ಟಿಕ್ ಕೌನ್ಸಿಲ್ನಲ್ಲಿ ಸ್ವೀಡನ್ ಸದಸ್ಯ ರಾಷ್ಟ್ರಗಳಲ್ಲಿ ಒಂದಾಗಿದೆ. ಆರ್ಕ್ಟಿಕ್ ಕೌನ್ಸಿಲ್ನಲ್ಲಿ ಭಾರತವು ವೀಕ್ಷಕ ಸ್ಥಾನಮಾನ ಹೊಂದಿದೆ. ಧ್ರುವ ಪ್ರದೇಶಗಳಲ್ಲಿ ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕ್ ಎರಡರಲ್ಲೂ ಸ್ವೀಡನ್ ಹುರುಪಿನ ವೈಜ್ಞಾನಿಕ ಕಾರ್ಯಕ್ರಮವನ್ನು ಹೊಂದಿದೆ. ಅದೇ ರೀತಿ ಭಾರತವೂ ಸಹ ಧ್ರುವ ಪ್ರದೇಶಗಳಲ್ಲಿ ಮತ್ತು ಸಾಗರ ಕ್ಷೇತ್ರದಲ್ಲಿ ವೈಜ್ಞಾನಿಕ ಸಂಶೋಧನಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಭಾರತ ಮತ್ತು ಸ್ವೀಡನ್ ನಡುವಿನ ಧ್ರುವ ವಿಜ್ಞಾನದ ಸಹಯೋಗವು ಎರಡೂ ದೇಶಗಳು ಲಭ್ಯವಿರುವ ಪರಿಣತಿಯನ್ನು ಪರಸ್ಪರ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ.