Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ವಿಶ್ವ ವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲಕ್ನೋದಲ್ಲಿಂದು ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ವಿಶ್ವವಿದ್ಯಾಲಯದ ಶಂಕುಸ್ಥಾಪನೆಯ ಫಲಕವನ್ನು ಅನಾವರಣಗೊಳಿಸಿದರು. ಈ ವೇಳೆ ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿ ಬೆನ್ ಪಟೇಲ್, ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ , ಉಪಮುಖ್ಯಮಂತ್ರಿಗಳು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಅವರು, ಉತ್ತಮ ಆಡಳಿತದ ದಿನವಾದ ಇಂದು ಉತ್ತರ ಪ್ರದೇಶ ಸರ್ಕಾರ ನಡೆಸುವ ಕಟ್ಟಡದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರತಿಮೆ ಆನಾವರಣಗೊಳಿಸುತ್ತಿರುವುದು ಕಾಕತಾಳೀಯ. ಈ ಅದ್ಭುತ ಪ್ರತಿಮೆ ಲೋಕಭವನದಲ್ಲಿ ಕೆಲಸ ಮಾಡುವ ಎಲ್ಲರಿಗೂ ಉತ್ತಮ ಆಡಳಿತ ಮತ್ತು ಸಾರ್ವಜನಿಕ ಸೇವೆಗೆ ಸ್ಫೂರ್ತಿ ನೀಡಲಿ ಎಂದರು.

ಹಲವು ವರ್ಷಗಳ ಕಾಲ ಅಟಲ್ ಜೀ ಅವರು ಲಕ್ನೋ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು, ಅಲ್ಲಿ ಆರೋಗ್ಯ ಶಿಕ್ಷಣಕ್ಕೆ ಮೀಸಲಾದ ಸಂಸ್ಥೆಗೆ ಶಂಕುಸ್ಥಾಪನೆ ನೆರವೇರಿಸುತ್ತಿರುವುದು ನನಗೆ ಹೆಮ್ಮೆ ಎನಿಸುತ್ತದೆ ಎಂದು ಪ್ರಧಾನಿ ಹೇಳಿದರು. ಅಟಲ್ ಜೀ ಜೀವನವನ್ನು ಭಾಗಗಳನ್ನಾಗಿ ನೋಡಲು ಸಾಧ್ಯವಿಲ್ಲ, ಅದನ್ನು ಒಟ್ಟಾರೆ ಅಥವಾ ಸಮಗ್ರವಾಗಿ ನೋಡಬೇಕೆಂದು ಹೇಳುತ್ತಿದ್ದರೆಂದು ಪ್ರಧಾನಮಂತ್ರಿ ನೆನಪು ಮಾಡಿಕೊಂಡರು. ಅದು ಸರ್ಕಾರಕ್ಕೂ ಸಹ ಅನ್ವಯಿಸುತ್ತದೆ, ಅದು ಉತ್ತಮ ಆಡಳಿತಕ್ಕೂ ಸಹ ಅನ್ವಯಿಸುತ್ತದೆ ಎಂದ ಅವರು, ನಾವು ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಸಂಪೂರ್ಣವಾಗಿ ಯೋಚಿಸದ ಹೊರತು ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದರು.

ಪ್ರಧಾನಿ ಅವರು ಮುಂಜಾಗ್ರತಾ ಆರೋಗ್ಯ ರಕ್ಷಣೆ, ಕೈಗೆಟುಕುವ ದರದಲ್ಲಿ ಆರೋಗ್ಯ ರಕ್ಷಣೆ ವ್ಯಾಪ್ತಿ ವಿಸ್ತರಣೆ, ಪೂರೈಕೆ ವ್ಯವಸ್ಥೆಯಲ್ಲಿ ಅಗತ್ಯ ನೀತಿ ನಿರೂಪಣೆ, ವಲಯದಲ್ಲಿನ ಪ್ರತಿಯೊಂದು ಬೇಡಿಕೆಗಳಿಗೆ ಪೂರೈಕೆ ಖಾತ್ರಿ ಮತ್ತು ಅಗತ್ಯ ಯೋಜನೆಗಳನ್ನು ರೂಪಿಸುವುದು ಸೇರಿದಂತೆ ಆರೋಗ್ಯ ವಲಯದಲ್ಲಿ ತಮ್ಮ ಸರ್ಕಾರ ಹಾಕಿಕೊಂಡಿರುವ ನೀಲನಕ್ಷೆಯನ್ನು ವಿವರಿಸಿದರು. ಸ್ವಚ್ಛ ಭಾರತದಿಂದ ಯೋಗದವರೆಗೆ, ಉಜ್ವಲದಿಂದ ಫಿಟ್ ಇಂಡಿಯಾ ಅಭಿಯಾನದವರೆಗೆ, ಆರ್ಯುವೇದ ಉತ್ತೇಜನ ಸೇರಿ, ರೋಗಗಳ ತಡೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಕೈಗೊಂಡಿರುವ ಪ್ರಮುಖ ಕೊಡುಗೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಅವರು ವಿವರಿಸಿದರು. ದೇಶದ ಗ್ರಾಮೀಣ ಪ್ರದೇಶದಲ್ಲಿ 1.25 ಲಕ್ಷಕ್ಕೂ ಅಧಿಕ ಸೌಖ್ಯ ಕೇಂದ್ರಗಳ ಸ್ಥಾಪನೆಯಿಂದಾಗಿ ಮುಂಜಾಗ್ರತಾ ಆರೋಗ್ಯ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಕೇಂದ್ರಗಳು ಕಾಯಿಲೆಗಳ ಲಕ್ಷಣ ಅರಿತು ಆರಂಭದಲ್ಲೇ ಚಿಕಿತ್ಸೆ ನೀಡುವ ಮೂಲಕ ಸಹಾಯ ನೀಡುತ್ತವೆ. ಆಯುಷ್ಮಾನ್ ಭಾರತ್ ಯೋಜನೆಯಿಂದಾಗಿ ದೇಶದ ಸುಮಾರು 70 ಲಕ್ಷಕ್ಕೂ ಅಧಿಕ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗಿದ್ದು, ಅದರಲ್ಲಿ 11 ಲಕ್ಷ ಮಂದಿ ಉತ್ತರ ಪ್ರದೇಶದವರೇ ಎಂಬುದು ಗಮನಾರ್ಹ ಎಂದು ಪ್ರಧಾನಿ ಹೇಳಿದರು.

ಪ್ರಧಾನಮಂತ್ರಿ ಅವರು, ಗ್ರಾಮದಿಂದ ಗ್ರಾಮಗಳವರೆಗೆ ಆರೋಗ್ಯ ಸೌಕರ್ಯ ಲಭ್ಯತೆ ಮತ್ತು ನೈರ್ಮಲೀಕರಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಆಂದೋಲನ ಹಮ್ಮಿಕೊಂಡಿದೆ. ಇದು ಜನರ ಜೀವನವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಅತಿದೊಡ್ಡ ಹೆಜ್ಜೆಯಾಗಿದೆ ಎಂದರು. ತಮ್ಮ ಸರ್ಕಾರಕ್ಕೆ ಉತ್ತಮ ಆಡಳಿತ ಎಂದರೆ – ಪ್ರತಿಯೊಬ್ಬರ ಸಮಸ್ಯೆಯನ್ನೂ ಆಲಿಸುವುದು, ಪ್ರತಿಯೊಬ್ಬ ಪ್ರಜೆಗೂ ಸೇವೆಗಳನ್ನು ತಲುಪಿಸುವುದು, ಪ್ರತಿಯೊಬ್ಬ ಭಾರತೀಯನಿಗೂ ಅವಕಾಶ ನೀಡುವುದು, ಪ್ರತಿಯೊಬ್ಬ ಪ್ರಜೆಯೂ ಸುರಕ್ಷಿತ ಎಂದು ಭಾವಿಸುವಂತಹ ವಾತಾವರಣ ನಿರ್ಮಾಣ ಮತ್ತು ಸರ್ಕಾರದ ಪ್ರತಿಯೊಂದು ವ್ಯವಸ್ಥೆಯೂ ಜನರಿಗೆ ಸುಲಭವಾಗಿ ದೊರಕುವಂತೆ ಮಾಡುವುದಾಗಿದೆ ಎಂದರು. ಸ್ವಾತಂತ್ರ್ಯಾ ನಂತರದ ವರ್ಷಗಳಲ್ಲಿ ನಾವು ಜನರ ಹಕ್ಕುಗಳಿಗೆ ಹೆಚ್ಚಿನ ಮನ್ನಣೆಯನ್ನು ನೀಡಿದ್ದೇವೆ ಮತ್ತು ಜೊತೆಗೆ ನಾವು ಉತ್ತರ ಪ್ರದೇಶದ ಜನರಿಗೆ ನಮ್ಮ ಹಕ್ಕುಗಳು ಮತ್ತು ಬಾಧ್ಯತೆಗಳಿಗೂ ಸಹ ಅಷ್ಟೇ ಆದ್ಯತೆಯನ್ನು ನೀಡಬೇಕೆಂದು ನಾವು ಮನವಿ ಮಾಡಿದ್ದೇವೆ. ನಾವು ನಮ್ಮ ಹಕ್ಕುಗಳನ್ನು ಮತ್ತು ಬಾಧ್ಯತೆಗಳನ್ನು ಸದಾ ನೆನಪು ಮಾಡಿಕೊಂಡಿರಬೇಕು ಮತ್ತು ಸದಾ ಅವುಗಳನ್ನು ಪಾಲಿಸಬೇಕು ಎಂದರು. ಅದನ್ನು ವಿಸ್ತರಿಸಿ ಹೇಳುತ್ತಾ ಉತ್ತಮ ಶಿಕ್ಷಣ ಮತ್ತು ಶಿಕ್ಷಣದ ಲಭ್ಯತೆ ನಮ್ಮ ಹಕ್ಕು, ಆದರೆ ಶಿಕ್ಷಣ ಸಂಸ್ಥೆಗಳ ಸುರಕ್ಷತೆ, ಶಿಕ್ಷಕರಿಗೆ ಗೌರವ ನೀಡುವುದು ನಮ್ಮ ಬಾಧ್ಯತೆಯಾಗಿದೆ ಎಂದರು. ನಾವು ಜನರ ಅಪೇಕ್ಷೆಯಂತೆ ಮತ್ತು ಅಟಲ್ ಜಿ ಅವರ ಆಶಯದಂತೆ ಉತ್ತಮ ಆಡಳಿತ ದಿನವಾದ ಇಂದು ನಮ್ಮ ಗುರಿ ಸಾಧನೆಗೆ ನಮ್ಮ ಹೊಣೆಗಾರಿಕೆಗಳನ್ನು ನಾವು ನಿರ್ವಹಿಸಲು ಬದ್ಧ ಎಂದು ಭಾಷಣವನ್ನು ಸಮಾಪ್ತಿಗೊಳಿಸಿದರು.