Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಟಲ್ ಭೂಜಲ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ


ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ವಾರ್ಷಿಕೋತ್ಸವದ ವೇಳೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಟಲ್ ಭೂ ಜಲ ಯೋಜನೆ(ಅಟಲ್ ಜಲ) ಮತ್ತು ರೋಹ್ತಾಂಗ್ ಪಾಸ್ ಕಾರ್ಯತಂತ್ರ ಸುರಂಗ ಮಾರ್ಗಕ್ಕೆ ವಾಜಪೇಯಿ ಹೆಸರು ನಾಮಕರಣ ಮಾಡುವ ಕಾರ್ಯಕ್ರಮಕ್ಕೆ ದೆಹಲಿಯಲ್ಲಿಂದು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಇಂದು ದೇಶದಲ್ಲೇ ಅತ್ಯಂತ ಪ್ರಮುಖ ಮತ್ತು ಅತಿದೊಡ್ಡ ಯೋಜನೆ ಮನಾಲಿ, ಹಿಮಾಚಲಪ್ರದೇಶ, ಲೇಹ್, ಲಡಾಖ್ ಮತ್ತು ಜಮ್ಮು-ಕಾಶ್ಮೀರಕ್ಕೆ ಸಂಪರ್ಕ ಕಲ್ಪಿಸುವ ರೋಹ್ತಾಂಗ್ ಸುರಂಗ ಮಾರ್ಗಕ್ಕೆ ಅಟಲ್ ಸುರಂಗಮಾರ್ಗ ಎಂದು ಹೆಸರಿಡಲಾಗುವುದು. ಈ ಕಾರ್ಯತಂತ್ರ ಸುರಂಗ ಮಾರ್ಗ ಆ ಭಾಗದ ಭವಿಷ್ಯವನ್ನು ಬದಲಿಸಲಿದೆ ಮತ್ತು ಅದು ಆ ಭಾಗದಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ನೆರವು ನೀಡಲಿದೆ ಎಂದು ಹೇಳಿದರು.

ಅಟಲ್ ಜಲ ಯೋಜನೆ ಕುರಿತಂತೆ ಪ್ರಧಾನಮಂತ್ರಿ ಅವರು, ನೀರಿನ ವಿಷಯ ಅಟಲ್ ಜಿ ಅವರಿಗೆ ಅತ್ಯಂತ ಪ್ರಮುಖವಾಗಿತ್ತು ಮತ್ತು ಅದು ಅವರ ಹೃದಯಕ್ಕೆ ಹತ್ತಿರವಾಗಿತ್ತು ಎಂದು ಉಲ್ಲೇಖಿಸಿದರು. ನಮ್ಮ ಸರ್ಕಾರ ಅವರ ದೂರದೃಷ್ಟಿಯ ಯೋಜನೆಯನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಿದೆ. ಅಟಲ್ ಜಲ ಯೋಜನಾ ಅಥವಾ ಜಲ ಜೀವನ ಮಿಷನ್ ಗೆ ಸಂಬಂಧಿಸಿದ ಮಾರ್ಗಸೂಚಿಗಳು 2024ರ ವೇಳೆಗೆ ದೇಶದ ಪ್ರತಿಯೊಂದು ಕುಟುಂಬಕ್ಕೂ ನೀರು ಪೂರೈಸುವಲ್ಲಿ ಅತ್ಯಂತ ಮಹತ್ವದ ಕ್ರಮವಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಜಲ ಬಿಕ್ಕಟ್ಟು ಒಂದು ಕುಟುಂಬವಾಗಿ, ಓರ್ವ ಪ್ರಜೆಯಾಗಿ ಮತ್ತು ದೇಶವಾಗಿಯೂ ನಮ್ಮೆಲ್ಲರನ್ನು ಬಾಧಿಸುತ್ತಿದ್ದು, ಅದು ಅಭಿವೃದ್ಧಿಯ ಮೇಲೂ ಪರಿಣಾಮ ಬೀರುತ್ತಿದೆ. ನವ ಭಾರತ ಜಲಸಂಕಷ್ಟದ ಪ್ರತಿಯೊಂದು ಸನ್ನಿವೇಶಗಳನ್ನು ಎದುರಿಸಲು ಸಜ್ಜಾಗಬೇಕಿದೆ. ಅದಕ್ಕಾಗಿ ನಾವು ಐದು ಹಂತದಲ್ಲಿ ಕಾರ್ಯೋನ್ಮುಖವಾಗಿದ್ದೇವೆ ಎಂದರು.

ಪ್ರಧಾನಮಂತ್ರಿಗಳು ಜಲಶಕ್ತಿ ಸಚಿವಾಲಯದ ವಿಷಯವನ್ನು ಬಲವಾಗಿ ಪ್ರತಿಪಾದಿಸಿ, ನೀರಿಗೆ ಸಂಬಂಧಿಸಿದಂತೆ ಸಂಕುಚಿತ ಮನೋಭಾವವನ್ನು ಹೊರಗಿಟ್ಟು, ಸಮಗ್ರ ಹಾಗೂ ವಿಸ್ತೃತ ಮನೋಭಾವದೊಂದಿಗೆ ಒತ್ತು ನೀಡಬೇಕಾಗಿದೆ. ಈ ಮುಂಗಾರಿನಲ್ಲಿ ಜಲಶಕ್ತಿ ಸಚಿವಾಲಯದಿಂದ ನಾವು ಸಮಾಜದ ಪರವಾಗಿ ಜಲ ಸಂರಕ್ಷಣೆಗೆ ವ್ಯಾಪಕ ಪ್ರಯತ್ನಗಳನ್ನು ನಡೆಸಿರುವುದನ್ನು ಕಂಡಿದ್ದೇವೆ ಎಂದರು. ಒಂದೆಡೆ ಜಲ ಜೀವನ ಮಿಷನ್ ಅಡಿ ಪ್ರತಿಯೊಂದು ಮನೆಗೂ ಕೊಳವೆ ಮಾರ್ಗದ ಮೂಲಕ ನೀರು ಪೂರೈಕೆ ಮಾಡಲು ಕಾರ್ಯೋನ್ಮುಖವಾಗಿದ್ದೇವೆ. ಮತ್ತೊಂದೆಡೆ ಅಟಲ್ ಜಲ ಯೋಜನೆ ಮೂಲಕ ಅಂತರ್ಜಲ ಕಡಿಮೆ ಇರುವ ಪ್ರದೇಶಗಳಿಗೆ ವಿಶೇಷ ಗಮನಹರಿಸುತ್ತಿದ್ದೇವೆ ಎಂದು ಹೇಳಿದರು.

ಜಲ ನಿರ್ವಹಣೆಯಲ್ಲಿ ಗ್ರಾಮ ಪಂಚಾಯಿತಿಗಳು ಉತ್ತಮ ಸಾಧನೆ ತೋರುವಂತೆ ಪ್ರೋತ್ಸಾಹಿಸಲಾಗುತ್ತಿದೆ ಎಂದ ಪ್ರಧಾನಮಂತ್ರಿ ಅವರು, ಅಟಲ್ ಜಲ ಯೋಜನೆಯಲ್ಲಿ ಉತ್ತಮ ಸಾಧನೆ ತೋರಿದ ಪಂಚಾಯಿತಿಗಳಿಗೆ ಹೆಚ್ಚಿನ ಆರ್ಥಿಕ ಅನುದಾನ ನೀಡುವ ಅಂಶ ಸೇರ್ಪಡೆಗೊಳಿಸಲಾಗಿದೆ ಎಂದರು. ಕಳೆದ 70 ವರ್ಷಗಳಲ್ಲಿ ಒಟ್ಟು 18 ಕೋಟಿ ಗ್ರಾಮೀಣ ಕುಟುಂಬಗಳ ಪೈಕಿ ಕೇವಲ 3 ಕೋಟಿ ಕುಟುಂಬಗಳಿಗೆ ಮಾತ್ರ ಕೊಳವೆ ಮಾರ್ಗದ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಇದೀಗ ನಮ್ಮ ಸರ್ಕಾರ ಮುಂದಿನ 5 ವರ್ಷಗಳಲ್ಲಿ ಕೊಳವೆ ಮಾರ್ಗದ ಮೂಲಕ 15 ಕೋಟಿ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಗುರಿಯನ್ನು ಹಾಕಿಕೊಂಡಿದೆ ಎಂದರು.

ಪ್ರತಿಯೊಂದು ಗ್ರಾಮ ಮಟ್ಟದಲ್ಲಿ ಅಲ್ಲಿನ ಸ್ಥಿತಿಗತಿಗಳನ್ನು ಆಧರಿಸಿ ಜಲ ಸಂಬಂಧಿ ಯೋಜನೆಗಳನ್ನು ರೂಪಿಸಲಾಗುವುದು ಎಂದು ಪ್ರಧಾನಮಂತ್ರಿಗಳು ಪ್ರತಿಪಾದಿಸಿದರು. ಜಲ ಜೀವನ್ ಮಿಷನ್ ಅಡಿ ಮಾರ್ಗಸೂಚಿಗಳನ್ನು ರೂಪಿಸುವಾಗ ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಮುಂದಿನ 5 ವರ್ಷಗಳಲ್ಲಿ ಜಲ ಸಂಬಂಧಿ ಯೋಜನೆಗಳಿಗೆ 3.5 ಲಕ್ಷ ಕೋಟಿ ಹಣವನ್ನು ಖರ್ಚು ಮಾಡಲಿವೆ ಎಂದು ಅವರು ಹೇಳಿದರು. ಪ್ರತಿಯೊಂದು ಗ್ರಾಮದ ಜನರು ಜಲ ಕ್ರಿಯಾ ಯೋಜನೆ ಮತ್ತು ಜಲನಿಧಿಯನ್ನು ರೂಪಿಸುವಂತೆ ಪ್ರಧಾನಮಂತ್ರಿ ಮನವಿ ಮಾಡಿದರು. ರೈತರು ಅಂತರ್ಜಲ ಕಡಿಮೆ ಇರುವ ಕಡೆ ಜಲ ಬಜೆಟ್ ಅನ್ನು ರೂಪಿಸಬೇಕು ಎಂದರು.

ಅಟಲ್ ಭೂ ಜಲ ಯೋಜನೆ(ಅಟಲ್ ಜಲ್)

ಅಂತರ್ಜಲ ನಿರ್ವಹಣೆಗೆ ಸಹಭಾಗಿತ್ವದ ಚೌಕಟ್ಟಿನಲ್ಲಿ ಸಾಂಸ್ಥಿಕ ಬಲವರ್ಧನೆಯ ಪ್ರಧಾನ ಧ್ಯೇಯದೊಂದಿಗೆ ಅಟಲ್ ಜಲ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಏಳು ರಾಜ್ಯಗಳಲ್ಲಿ ಸುಸ್ಥಿರ ಅಂತರ್ಜಲ ಸಂಪನ್ಮೂಲ ನಿರ್ವಹಣೆ ಕುರಿತಂತೆ ಸಮುದಾಯ ಮಟ್ಟದಲ್ಲಿ ನಡವಳಿಕೆಗಳ ಬದಲಾವಣೆ ಮಾಡುವ ಗುರಿ ಹೊಂದಲಾಗಿದೆ. ಆ ಏಳು ರಾಜ್ಯಗಳೆಂದರೆ ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ತಾನ ಮತ್ತು ಉತ್ತರ ಪ್ರದೇಶ. ಈ ಯೋಜನೆಯ ಅನುಷ್ಠಾನದಿಂದ ಈ ರಾಜ್ಯಗಳ 78 ಜಿಲ್ಲೆಗಳ ಸುಮಾರು 8350 ಗ್ರಾಮ ಪಂಚಾಯಿತಿಗಳಿಗೆ ಅನುಕೂಲವಾಗುವ ಸಾಧ್ಯತೆ ಇದೆ. ಅಟಲ್ ಜಲ ಯೋಜನೆಯಿಂದ ಪಂಚಾಯಿತಿ ನೇತೃತ್ವದಲ್ಲಿ ಅಂತರ್ಜಲ ನಿರ್ವಹಣೆಗೆ ಉತ್ತೇಜಿಸುವುದಲ್ಲದೆ, ಬೇಡಿಕೆ ಆಧರಿತ ನಿರ್ವಹಣೆಯಲ್ಲಿ ನಡವಳಿಕೆ ಬದಲಾವಣೆಗೆ ಹೆಚ್ಚಿನ ಗಮನ ಹರಿಸಲಾಗುವುದು.

ಐದು ವರ್ಷಗಳ ಅವಧಿಯಲ್ಲಿ ಒಟ್ಟಾರೆ 6000 ಕೋಟಿ ರೂ.ಗಳನ್ನು ವ್ಯಯ ಮಾಡಲಾಗುವುದು(2020-21 ರಿಂದ 2024-25)ರ ವರೆಗೆ ಶೇ.50ರಷ್ಟು ವಿಶ್ವ ಬ್ಯಾಂಕ್ ಸಾಲದಿಂದ ಅದನ್ನು ಕೇಂದ್ರ ಸರ್ಕಾರ ಮರು ಪಾವತಿ ಮಾಡಲಿದೆ. ಇನ್ನುಳಿದೆ ಶೇ.50ರಷ್ಟನ್ನು ಕೇಂದ್ರದ ನೆರವಿನೊಂದಿಗೆ ನಿಗದಿತ ಬಜೆಟ್ ಬೆಂಬಲದ ಮೂಲಕ ಒದಗಿಸಲಾಗುವುದು. ವಿಶ್ವ ಬ್ಯಾಂಕ್ ಸಾಲದ ಸಂಪೂರ್ಣ ಹಣ ಮತ್ತು ಕೇಂದ್ರದ ನೆರವಿನ ಹಣವನ್ನು ರಾಜ್ಯಗಳಿಗೆ ಅನುದಾನದ ರೂಪದಲ್ಲಿ ವರ್ಗಾಯಿಸಲಾಗುವುದು.

ರೋಹ್ತಾಂಗ್ ಪಾಸ್ ಮೂಲಕ ಸುರಂಗ ಮಾರ್ಗ

ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ರೋಹ್ತಾಂಗ್ ಪಾಸ್ ಮೂಲಕ ಸುರಂಗ ಮಾರ್ಗ ನಿರ್ಮಿಸುವ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದ್ದರು. 8.8 ಕಿಲೋಮೀಟರ್ ಉದ್ದನೆಯ ಸುರಂಗ ಮಾರ್ಗ ವಿಶ್ವದ ಅತಿದೊಡ್ಡ ಸುರಂಗ ಮಾರ್ಗವಾಗಿದ್ದು, ಅದು ಸಮುದ್ರ ಮಟ್ಟದಿಂದ 3,000 ಮೀಟರ್ ಎತ್ತರದಲ್ಲಿದೆ. ಇದು ಲೇಹ್ ಮತ್ತು ಮನಾಲಿ ನಡುವಿನ ಅಂತರವನ್ನು 46 ಕಿಲೋಮೀಟರ್ ತಗ್ಗಿಸಲಿದೆ ಮತ್ತು ಕೋಟ್ಯಾಂತರ ರೂಪಾಯಿ ಸಾರಿಗೆ ವೆಚ್ಚವನ್ನು ಉಳಿತಾಯ ಮಾಡಲಿದೆ. 10.5 ಮೀಟರ್ ಉದ್ದದ ಏಕ ಕೊಳವೆ ದ್ವಿಪಥ ಸುರಂಗ ಮಾರ್ಗದ ಜೊತೆಗೆ ಅಗ್ನಿಶಾಮಕ ತುರ್ತು ನಿರ್ವಹಣಾ ಸುರಂಗವನ್ನು ಮುಖ್ಯ ಸುರಂಗದ ಜೊತೆಗೆ ನಿರ್ಮಿಸಲಾಗಿದೆ. ಎರಡೂ ಕಡೆಯಿಂದ ಸುರಂಗ ಮಾರ್ಗದ ಸಾಧನೆ 2017ರ ಅಕ್ಟೋಬರ್ 15ರಂದು ಸಾಧಿಸಲಾಗಿತ್ತು. ಸುರಂಗ ಮಾರ್ಗ ಇದೀಗ ಪೂರ್ಣಗೊಳ್ಳುವ ಹಂತದಲ್ಲಿದೆ ಮತ್ತು ಇದರಿಂದಾಗಿ ಚಳಿಗಾಲದಲ್ಲಿ ಸುಮಾರು ಆರು ತಿಂಗಳ ಕಾಲ ದೇಶದೊಂದಿಗೆ ಸಂಪರ್ಕ ಕಡಿದುಕೊಂಡು, ಹೊರಗುಳಿಯುವ ಹಿಮಾಚಲಪ್ರದೇಶ ಮತ್ತು ಲಡಾಖ್ ನ ಗುಡ್ಡಗಾಡು ಪ್ರದೇಶಗಳಿಗೆ ಸರ್ವ ಋತು ಸಂಪರ್ಕ ಕಲ್ಪಿಸಲಿದೆ.

******