ಪ್ರಧಾನಮಂತ್ರಿಯವರ ಕಾರ್ಯಾಲಯದ ಸಿಬ್ಬಂದಿ ಮತ್ತು ಅಧಿಕಾರಿಗಳಿಗಾಗಿ ಲೋಕ ಕಲ್ಯಾಣ ಮಾರ್ಗ್ ನಲ್ಲಿಂದು ದೀಪಾವಳಿ ಮಿಲನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಯೊಬ್ಬರಿಗೂ ದೀಪಾವಳಿಯ ಶುಭಾಶಯ ಕೋರಿದರು.
ಪ್ರಧಾನಮಂತ್ರಿಗಳ ಕಾರ್ಯಾಲಯದ ಪ್ರತಿಯೊಬ್ಬ ಸಿಬ್ಬಂದಿಗೂ ಅವರು ಮಾಡಿದ ಉತ್ತಮ ಕಾರ್ಯಕ್ಕಾಗಿ ಪ್ರಶಂಸೆ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಸರ್ಕಾರ ಮಾಡಿದ ಎಲ್ಲ ಪರಿವರ್ತನಾತ್ಮಕ ಕಾರ್ಯಗಳೂ ಸಿಬ್ಬಂದಿಯ ನಿರಂತರ ಪ್ರಯತ್ನ ಮತ್ತು ಕಠಿಣ ಪರಿಶ್ರಮದಿಂದ ಸಾಧ್ಯವಾಯಿತು ಎಂದು ತಿಳಿಸಿದರು. ಹಿಂದಿನ ವರ್ಷದಲ್ಲಿ ಏನೆಲ್ಲಾ ಆಗಿದೆ ಎಂಬುದನ್ನು ಗಮನಿಸಿ, ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಿನದನ್ನು ಸಾಧಿಸಲು ಶ್ರಮಿಸುವಂತೆ ಸಿಬ್ಬಂದಿಗೆ ಉತ್ಸಾಹ ತುಂಬಿದರು.
ಪಿ ಎಂ ಓ ಇಡೀ ಸರ್ಕಾರಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಪಿಎಂಓ ಕೇವಲ ಜಾರಿ ಮಾಡುವುದಷ್ಟೇ ಅಲ್ಲದೆ, ಸ್ಫೂರ್ತಿ ತುಂಬಿ, ಮಾರ್ಗದರ್ಶನ ಮಾಡುತ್ತದೆ ಎಂದರು. ತಮ್ಮ ಬದ್ಧತೆ, ಕಾರ್ಯ ಸಿದ್ಧಾಂತದ ಮೂಲಕ ಸರ್ಕಾರದ ಉಳಿದ ಇಲಾಖೆಗಳಿಗೆ ಪ್ರೇರಣೆಯಾಗುವಂತೆ ಸಿಬ್ಬಂದಿಗೆ ಪ್ರಧಾನ ಮಂತ್ರಿ ಆಗ್ರಹಿಸಿದರು. ಭಾರತ 75ನೇ ಸ್ವಾತಂತ್ರ್ಯ ದಿನವನ್ನು 2022ರಲ್ಲಿ ಆಚರಿಸುವ ಹೊತ್ತಿಗೆ ಎಲ್ಲ ಗುರಿಗಳನ್ನೂ ಪೂರೈಸುವಂತೆ ಅವರು ಒತ್ತಿ ಹೇಳಿದರು.
ಪಿ ಎಂ ಓ ಲಕ್ಷಾಂತರ ನಾಗರಿಕರ ಕನಸು ಮತ್ತು ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಂತೆ ಪ್ರಧಾನಮಂತ್ರಿಯವರು ತಿಳಿಸಿದರು.