Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 27 10 2019 ರಂದು ಮಾಡಿದ ಮನ್ ಕಿ ಬಾತ್ – 5 ನೇ ಕಂತಿನ ಭಾಷಣದ ಕನ್ನಡ ಅವತರಣಿಕೆ


ನನ್ನ ಪ್ರಿಯ ದೇಶ ಬಾಂಧವರೇ, ನಮಸ್ಕಾರ. ಇಂದು ದೀಪಾವಳಿ ಹಬ್ಬದ ಪವಿತ್ರ ದಿನ. ಇಂದು ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು. ನಮ್ಮಲ್ಲಿ ಹೇಳಲಾಗಿದೆ 

 

ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಾಂ

ಶತ್ರು ಬುದ್ಧಿ ವಿನಾಶಾಯ ದೀಪಜ್ಯೋತಿರ್ ನಮೋಸ್ತುತೇ

 

ಎಂಥ ಉತ್ತಮ ಸಂದೇಶವಲ್ಲವೇ. ಈ ಶ್ಲೋಕದಲ್ಲಿ ಹೇಳಲಾಗಿದೆ – ಬೆಳಕು ಜೀವನದಲ್ಲಿ ಸುಖ, ಆರೋಗ್ಯ ಮತ್ತು ಸಮೃದ್ಧಿಯನ್ನು ತರುತ್ತದೆ, ಅದು ದುರ್ಬುದ್ಧಿಯನ್ನು ನಾಶಗೊಳಿಸಿ, ಸುಬುದ್ಧಿಗೆ ದಾರಿ ತೋರುತ್ತದೆ. ಇಂಥ ದಿವ್ಯಜ್ಯೋತಿಗೆ ನನ್ನ ನಮನಗಳು. ದೀಪಾವಳಿಯನ್ನು ನೆನಪಿನಲ್ಲಿಟ್ಟುಕೊಳ್ಳಲು ಇದಕ್ಕಿಂತ ಉತ್ತಮವಾದ ವಿಚಾರ ಬೇರೊಂದಿಲ್ಲ. ನಾವು ಬೆಳಕನ್ನು ವಿಸ್ತರಿಸುತ್ತಾ, ಸಕಾರಾತ್ಮಕತೆಯನ್ನು ಪಸರಿಸಬಹುದು ಮತ್ತು ಶತ್ರುತ್ವ ಭಾವನೆಯನ್ನೇ ನಾಶ ಮಾಡಲು ಪ್ರಾರ್ಥಿಸಬಹುದು! ಈ ಮಧ್ಯೆ ವಿಶ್ವದ ಅನೇಕ ದೇಶಗಳಲ್ಲಿ ದೀಪಾವಳಿ ಆಚರಿಸಲಾಗುತ್ತಿದೆ. ಇದರಲ್ಲಿ ಕೇವಲ ಭಾರತೀಯ ಸಮುದಾಯ ಮಾತ್ರ ಪಾಲ್ಗೊಳ್ಳುತ್ತದೆ ಎಂದೇನಿಲ್ಲ. ಈಗ ಬಹಳಷ್ಟು ದೇಶಗಳ ಸರ್ಕಾರಗಳು, ಅಲ್ಲಿಯ ನಾಗರಿಕರು, ಅಲ್ಲಿಯ ಸಾಮಾಜಿಕ ಸಂಘಟನೆಗಳು ದೀಪಾವಳಿಯನ್ನು ಸಂಪೂರ್ಣ ಹರ್ಷೋಲ್ಲಾಸದಿಂದ ಆಚರಿಸುತ್ತಿವೆ ಎಂಬುದು ವಿಶೇಷವಾಗಿದೆ. ಒಂದು ರೀತಿ ಅಲ್ಲಿ ಭಾರತವೇ ಬಿಂಬಿತವಾಗುತ್ತದೆ.

ಸ್ನೇಹಿತರೇ, ವಿಶ್ವದಲ್ಲಿ festival tourism ತನ್ನದೇ ಆದ ಆಕರ್ಷಣೆಯನ್ನು ಹೊಂದಿದೆ. ನಮ್ಮ ಭಾರತ ಹಬ್ಬಗಳ ದೇಶವಾಗಿದ್ದು, ಇಲ್ಲಿ festival tourism ಗೆ ಸಾಕಷ್ಟು ಅವಕಾಶಗಳಿವೆ. ಅದು ಹೋಳಿ ಹಬ್ಬವಾಗಿರಲಿ, ದೀಪಾವಳಿ ಆಗಿರಲಿ, ಓಣಂ ಆಗಿರಲಿ, ಪೊಂಗಲ್ ಆಗಿರಲಿ, ಬಿಹು ಆಗಿರಲಿ, ಇಂಥ ಹಬ್ಬಗಳ ಪ್ರಸಾರ ಮಾಡುವುದು ಮತ್ತು ಹಬ್ಬದ ಸಂಭ್ರಮಾಚರಣೆಯಲ್ಲಿ ಬೇರೆ ರಾಜ್ಯಗಳ, ಬೇರೆ ದೇಶಗಳ ಜನರನ್ನು ಸೇರಿಸಿಕೊಳ್ಳುವ ಪ್ರಯತ್ನ ನಮ್ಮದಾಗಿರಬೇಕು. ನಮ್ಮಲ್ಲಂತೂ ಪ್ರತಿಯೊಂದು ರಾಜ್ಯ, ಪ್ರತಿಯೊಂದು ಕ್ಷೇತ್ರ ತನ್ನದೇ ಆದ ವಿಭಿನ್ನ ಉತ್ಸವಗಳನ್ನು ಹೊಂದಿವೆ. ಬೇರೆ ದೇಶದ ಜನರಿಗೆ ಇವುಗಳಲ್ಲಿ ಬಹಳ ಆಸಕ್ತಿ ಇರುತ್ತದೆ. ಆದ್ದರಿಂದ ಭಾರತದಲ್ಲಿ festival tourism ಅಭಿವೃದ್ಧಿಗೆ ಹೊರ ದೇಶಗಳಲ್ಲಿ ನೆಲೆಸಿರುವ ಭಾರತೀಯರ ಪಾತ್ರ ಬಹಳ ಪ್ರಮುಖವಾದದ್ದು.

ನನ್ನ ಪ್ರಿಯ ದೇಶ ಬಾಂಧವರೇ, ಈ ಬಾರಿಯ ದೀಪಾವಳಿಗೆ ಏನನ್ನಾದರೂ ವಿಭಿನ್ನವಾಗಿ ಮಾಡುವ ಕುರಿತು ಕಳೆದ ಮನದ ಮಾತಿನಲ್ಲಿ ನಿರ್ಧರಿಸಿದ್ದೆವು. ಬನ್ನಿ ಈ ದೀಪಾವಳಿ ಸಂದರ್ಭದಲ್ಲಿ ಭಾರತದ ಸ್ತ್ರೀ ಶಕ್ತಿ ಮತ್ತು ಅವರ ಸಾಧನೆಗಳನ್ನು ಆಚರಿಸೋಣ. ಅಂದರೆ, ಭಾರತದ ಲಕ್ಷ್ಮಿಯನ್ನು ಆದರಿಸೋಣ ಎಂದು ನಾನು ಹೇಳಿದ್ದೆ. ನೋಡ ನೋಡುತ್ತಲೇ ನಾನು ಕರೆ ನೀಡಿದ ತಕ್ಷಣವೇ ಸಾಮಾಜಿಕ ಜಾಲ ತಾಣಗಳಲ್ಲಿ ಲೆಕ್ಕವಿಲ್ಲದಷ್ಟು ಪ್ರೇರಣಾತ್ಮಕ ಕಥೆಗಳ ಪ್ರವಾಹ ಹರಿದು ಬರಲಾರಂಭಿಸಿತು. ನನ್ನ ತಾಯಿ ನನ್ನ ಶಕ್ತಿ ಎಂದು ವಾರಂಗಲ್ ನ ಕೋಡಿಪಾಕ ರಮೇಶ್ ಅವರು ನಮೋ ಆಪ್ ನಲ್ಲಿ ಬರೆದಿದ್ದಾರೆ. 1990 ರಲ್ಲಿ ನನ್ನ ತಂದೆ ನಿಧನರಾದಾಗ ನನ್ನ ತಾಯಿಯೇ ಐದೂ ಮಕ್ಕಳ ಜವಾಬ್ದಾರಿ ಹೊತ್ತರು. ಇಂದು ನಾವು ಐವರು ಸೋದರರು ಉತ್ತಮ ಉದ್ಯೋಗದಲ್ಲಿದ್ದೇವೆ. ನನ್ನ ತಾಯಿಯೇ ನನಗೆ ದೇವರಿದ್ದಂತೆ, ನನಗೆ ಅವಳೇ ಸರ್ವಸ್ವ. ನಿಜವಾದ ಅರ್ಥದಲ್ಲಿ ಅವಳು ಭಾರತದ ಲಕ್ಷ್ಮಿ. ರಮೇಶ್ ಅವರೇ ನಿಮ್ಮ ತಾಯಿಯವರಿಗೆ ನನ್ನ ನಮಸ್ಕಾರಗಳು. 

ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿರುವ ಗೀತಿಕಾ ಸ್ವಾಮಿ ಅವರಿಗೆ ಮೇಜರ್ ಖುಷ್ಬೂ ಕಂವರ್ ಭಾರತದ ಲಕ್ಷ್ಮಿ ಆಗಿದ್ದಾರೆ. ಖುಷ್ಬೂ ಒಬ್ಬ ಬಸ್ ಕಂಡಕ್ಟರ್ ಮಗಳಾಗಿದ್ದು, ಅಸ್ಸಾಂ ರೈಫಲ್ಸ್ ನ ಮಹಿಳಾ ಘಟಕದ ನೇತೃತ್ವ ವಹಿಸಿದ್ದಾರೆ. ಕವಿತಾ ತಿವಾರಿ ಅವರಿಗೆ, ಅವರ ಮಗಳು ಭಾರತದ ಲಕ್ಷ್ಮಿ ಆಗಿದ್ದಾಳೆ ಮತ್ತು ಅವರ ಶಕ್ತಿಯೂ ಆಗಿದ್ದಾಳೆ. ತಮ್ಮ ಮಗಳು ಅತ್ಯುತ್ತಮ ವರ್ಣ ಚಿತ್ರಗಳನ್ನು ಬಿಡಿಸುತ್ತಾಳೆ ಎಂದು ಅವರಿಗೆ ಹೆಮ್ಮೆ ಇದೆ. ಅವಳು CLAT ಪರೀಕ್ಷೆಯಲ್ಲಿ ಉತ್ತಮ ರಾಂಕ್ ಕೂಡಾ ಗಳಿಸಿದ್ದಾಳೆ. ಹಾಗೆಯೇ, ಗ್ವಾಲಿಯರ್ ರೈಲು ನಿಲ್ದಾಣದಲ್ಲಿ ಯಾತ್ರಿಕರಿಗೆ ಹಲವು ವರ್ಷಗಳಿಂದ ಉಚಿತವಾಗಿ ನೀರು ಸರಬರಾಜು ಮಾಡುತ್ತಿರುವ 92 ವರ್ಷದ ವೃದ್ಧರೊಬ್ಬರಿದ್ದಾರೆ ಎಂದು ಮೇಧಾ ಜೈನ್ ಬರೆದಿದ್ದಾರೆ. ಈ ಭಾರತದ ಲಕ್ಷ್ಮಿಯ ನಮ್ರತೆ ಮತ್ತು ಕರುಣೆಯನ್ನು ನೋಡಿ ಮೇಧಾರವರು ಬಹಳ ಪ್ರೇರಿತರಾಗಿದ್ದಾರೆ, ಇಂಥ ಅನೇಕ ಕಥೆಗಳನ್ನು ಜನರು ಹಂಚಿಕೊಂಡಿದ್ದಾರೆ. ನೀವು ಇದನ್ನ ಖಂಡಿತ ಓದಿ, ಪ್ರೇರಿತರಾಗಿ ಮತ್ತು ನಿಮ್ಮ ಸುತ್ತಮುತ್ತಲೂ ನಡೆಯುವ ಇಂಥ ಘಟನೆಗಳನ್ನು ಹಂಚಿಕೊಳ್ಳಿ ಹಾಗೂ ಭಾರತದ  ಎಲ್ಲ ಲಕ್ಷ್ಮಿಯರಿಗೆ ನನ್ನ ಆದರ ಪೂರ್ವಕ ನಮನಗಳು.

ನನ್ನ ಪ್ರಿಯ ದೇಶ ಬಾಂಧವರೇ, 17ನೇ ಶತಮಾನದ ಸುಪ್ರಸಿದ್ಧ ಕವಯಿತ್ರಿ ಸಂಚಿ ಹೊನ್ನಮ್ಮ 17ನೇ ಶತಮಾನದಲ್ಲೇ ಕನ್ನಡ ಭಾಷೆಯಲ್ಲಿ ಒಂದು ಕವಿತೆಯನ್ನು ಬರೆದಿದ್ದರು. ನಾವು ಮಾತನಾಡುತ್ತಿರುವ ಭಾರತದ ಪ್ರತಿಯೊಂದು ಲಕ್ಷ್ಮಿಯ ಅಡಿಪಾಯ 17ನೇ ಶತಮಾನದಲ್ಲೇ ರಚಿಸಲಾಗಿತ್ತು ಎಂಬುದು ಅವರ ಕವಿತೆಯ ಭಾವ ಹಾಗೂ ಶಬ್ದಗಳಿಂದ ವ್ಯಕ್ತವಾಗುತ್ತದೆ. ಎಂಥ ಅದ್ಭುತ ಶಬ್ದಗಳು, ಎಂಥ ಅದ್ಭುತ ಭಾವ ಮತ್ತು ಎಷ್ಟು ಉತ್ತಮ ವಿಚಾರಗಳು ಈ ಕನ್ನಡ ಭಾಷೆಯ ಕವಿತೆಯಲ್ಲಿವೆ.

 

ಪೆಣ್ಣಿಂದ ಪೆರ್ಮೆಗೊಂಡನು ಹಿಮವಂತನು,

ಪೆಣ್ಣಿಂದ ಭೃಗು ಪೆರ್ಚಿದನು,

ಪೆಣ್ಣಿಂದ ಜನಕರಾಯನು ಜಸುವೊಲಿದನು

 

ಇದರರ್ಥ ಹಿಮವಂತ ಅಂದರೆ, ಪರ್ವತರಾಜ ತನ್ನ ಮಗಳು ಪಾರ್ವತಿಯಿಂದ, ಭೃಗು ಮಹರ್ಷಿ ತನ್ನ ಮಗಳು ಲಕ್ಷ್ಮಿಯಿಂದ ಮತ್ತು ಜನಕ ರಾಜ ತನ್ನ ಮಗಳು ಸೀತೆಯಿಂದಲೇ ಪ್ರಸಿದ್ಧಿ ಹೊಂದಿದ್ದಾರೆ. ನಮ್ಮ ಹೆಣ್ಣು ಮಕ್ಕಳು ನಮ್ಮ ಗೌರವ. .  ಮತ್ತು ಈ ಹೆಣ್ಣು ಮಕ್ಕಳಿಂದಲೇ ನಮ್ಮ ಸದೃಢ ಸಮಾಜವನ್ನು ಗುರುತಿಸಲಾಗುತ್ತದೆ ಮತ್ತು ಅದರ ಉಜ್ವಲ ಭವಿಷ್ಯವೂ ಇದರಲ್ಲಿ ಅಡಗಿದೆ.

ನನ್ನ ಪ್ರಿಯ ದೇಶ ಬಾಂಧವರೇ, 2019ರ ನವೆಂಬರ್ 12 ರಂದು  ವಿಶ್ವದೆಲ್ಲೆಡೆ ಶ್ರೀ ಗುರುನಾನಕ್ ದೇವ್ ರವರ 550 ನೆಯ ಪ್ರಕಾಶ ಉತ್ಸವವನ್ನು ಆಚರಿಸಲಾಗುವುದು. ಗುರುನಾನಕ್ ದೇವ್ ರವರ ಪ್ರಭಾವ ಕೇವಲ ಭಾರತದಲ್ಲಷ್ಟೇ ಅಲ್ಲ ಸಂಪೂರ್ಣ ವಿಶ್ವದಲ್ಲಿ ಪಸರಿಸಿದೆ. ವಿಶ್ವದ ಎಷ್ಟೋ ದೇಶಗಳಲ್ಲಿ ನಮ್ಮ ಸಿಖ್ ಸೋದರ-ಸೋದರಿಯರು ನೆಲೆಸಿದ್ದಾರೆ. ಅವರು ಗುರುನಾನಕ್ ದೇವ್ ಅವರ ಆದರ್ಶಗಳಿಗೆ ಸಂಪೂರ್ಣ ಸಮರ್ಪಿತರಾಗಿದ್ದಾರೆ. ನಾನು ವ್ಯಾಂಕೋವರ್ ಮತ್ತು ತೆಹರಾನ್ ನಲ್ಲಿ ಗುರುದ್ವಾರಗಳಿಗೆ ನೀಡಿದ ಭೇಟಿಯನ್ನು ಎಂದೂ ಮರೆಯಲಾರೆ. ಗುರುನಾನಕ್ ದೇವ್ ಅವರ ಬಗ್ಗೆ ಹೇಳುವುದು ಇನ್ನೂ ಬಹಳಷ್ಟಿದೆ. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಹುದು ಆದರೆ, ಇದಕ್ಕಾಗಿ ಮನದ ಮಾತಿನ ಹಲವು ಕಂತುಗಳೇ ಬೇಕಾಗುತ್ತವೆ. ಅವರು ಸೇವೆಯನ್ನು ಸರ್ವ ಶ್ರೇಷ್ಠವೆಂದು ಪರಿಗಣಿಸಿದ್ದರು. ನಿಸ್ವಾರ್ಥ ಭಾವದಿಂದ ಮಾಡಿದ ಸೇವೆಗೆ ಬೆಲೆ ಕಟ್ಟಲಾಗದು ಎಂದು ಗುರುನಾನಕ್ ದೇವ್ ಅವರು ಭಾವಿಸಿದ್ದರು. ಅವರು ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗಿನ ವಿರುದ್ಧ ಬಲವಾದ ವಿರೋಧ ವ್ಯಕ್ತಪಡಿಸಿದ್ದರು. ಶ್ರೀ ಗುರುನಾನಕ್ ದೇವ್ ಅವರು ತಮ್ಮ ಸಂದೇಶಗಳನ್ನು ವಿಶ್ವದಲ್ಲಿ ಬಹು ದೂರದವರೆಗೆ ತಲುಪಿಸಿದ್ದರು. ತಮ್ಮ ಕಾಲದಲ್ಲಿ ಅವರು ಅತಿ ಹೆಚ್ಚು ಯಾತ್ರೆ ಕೈಗೊಂಡವರಲ್ಲಿ  ಒಬ್ಬರಾಗಿದ್ದರು. ಬಹಳಷ್ಟು ಸ್ಥಳಗಳಿಗೆ ಭೇಟಿ ನೀಡಿದ್ದರು ಮತ್ತು ಎಲ್ಲಿಯೇ ಹೋಗಲಿ ಅಲ್ಲಿ ತಮ್ಮ ಸರಳತೆ, ವಿನಮ್ರತೆ ಮತ್ತು ನೈಜತೆಯಿಂದ ಎಲ್ಲರ ಮನ ಗೆದ್ದಿದ್ದರು. ಗುರುನಾನಕ್ ದೇವ್ ಅವರು ಸಾಕಷ್ಟು ಮಹತ್ವಪೂರ್ಣ ಧಾರ್ಮಿಕ ಯಾತ್ರೆಗೈದಿದ್ದಾರೆ ಅವುಗಳನ್ನು “ಉದಾಸೀ” ಎಂದು ಕರೆಯಲಾಗಿದೆ. ಸದ್ಭಾವನೆ ಮ್ತತು ಸಮಾನತೆಯ ಸಂದೇಶ ಹೊತ್ತು ಅವರು ಉತ್ತರ ದಕ್ಷಿಣ ಹಾಗೆಯೇ ಪೂರ್ವ ಮತ್ತು ಪಶ್ಚಿಮ, ಎಲ್ಲ ದಿಕ್ಕುಗಳಲ್ಲೂ ಸಂಚರಿಸಿದರು, ಎಲ್ಲ ಸ್ಥಳಗಳಲ್ಲೂ ಜನರನ್ನು, ಸಾಧು-ಸಂತರನ್ನು ಭೇಟಿಯಾದರು. ಅಸ್ಸಾಂನ ಸುಪ್ರಸಿದ್ಧ ಸಂತ ಶಂಕರ್ ದೇವ್ ಅವರೂ ಕೂಡಾ ಇವರಿಂದ ಪ್ರೇರಿತರಾಗಿದ್ದರು ಎಂದು ಹೇಳಲಾಗುತ್ತದೆ. ಅವರು ಪವಿತ್ರ ಸ್ಥಳವಾದ ಹರಿದ್ವಾರದ ಯಾತ್ರೆಗೈದಿದ್ದರು. ಕಾಶಿಯಲ್ಲಿ  ‘ಗುರುಬಾಗ್ ಗುರುದ್ವಾರ’ ಎಂಬ ಒಂದು ಪವಿತ್ರ ಸ್ಥಳವಿದೆ. ಅಲ್ಲಿ ಗುರುನಾನಕ್ ದೇವ್ ಅವರು ತಂಗಿದ್ದರು ಎಂಬ ಪ್ರತೀತಿ ಇದೆ. ಅವರು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ‘ರಾಜಗೀರ್’ ಮ್ತತು ‘ಗಯಾ’ ದಂತ ಧಾರ್ಮಿಕ ಸ್ಥಳಗಳಿಗೂ ಭೇಟಿ ನೀಡಿದ್ದರು. ದಕ್ಷಿಣದಲ್ಲಿ ಶ್ರೀಲಂಕಾ ವರೆಗೂ ಗುರುನಾನಕ್ ದೇವ್ ರವರು ಯಾತ್ರೆಗೈದಿದ್ದರು. ಕರ್ನಾಟಕದಲ್ಲಿ ಬೀದರ್ ಯಾತ್ರೆ ಸಂದರ್ಭದಲ್ಲಿ, ಗುರುನಾನಕ್ ದೇವ್ ರವರೇ ಅಲ್ಲಿಯ ನೀರಿನ ಸಮಸ್ಯೆಗೆ ಪರಿಹಾರ ಸೂಚಿಸಿದ್ದರು. ಬೀದರ್ ನಲ್ಲಿ ‘ಗುರುನಾನಕ್ ಝರಾ ಸಾಹಬ್’ ಎಂಬ ಪ್ರಸಿದ್ಧ ಸ್ಥಳವಿದೆ ಇದು ನಮಗೆ ಗುರುನಾನಕ್ ದೇವ್ ಅವರ ನೆನಪು ಮಾಡಿಕೊಡುತ್ತದೆ. ಅವರಿಗೇ ಇದನ್ನು ಸಮರ್ಪಿಸಲಾಗಿದೆ. ಒಂದು ಉದಾಸೀಯ ಸಂದರ್ಭದಲ್ಲಿ ಗುರುನಾನಕ್ ಅವರು ಉತ್ತರದ ಕಾಶ್ಮೀರ ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳ ಯಾತ್ರೆಗೈದಿದ್ದರು. ಇದರಿಂದ ಸಿಖ್ ಅನುಯಾಯಿಗಳ ಮತ್ತು ಕಾಶ್ಮೀರದ ಮಧ್ಯೆ ಒಂದು ಗಟ್ಟಿಮುಟ್ಟಾದ ಸಂಬಂಧ ಸ್ಥಾಪಿತವಾಯಿತು. ಗುರುನಾನಕ್ ದೇವ್ ಅವರು ತಿಬ್ಬತ್ ಗೂ ಹೋಗಿದ್ದರು. ಅಲ್ಲಿಯ ಜನರು ಇವರನ್ನು ಗುರು ಎಂದು ಸ್ವೀಕರಿಸಿದರು. ಅವರು ಪ್ರವಾಸಗೈದ ಉಜ್ಬೇಕಿಸ್ತಾನ್ ನಲ್ಲೂ ಪೂಜ್ಯನೀಯರಾಗಿದ್ದಾರೆ. ತಮ್ಮ ಉದಾಸಿಯ ಸಂದರ್ಭದಲ್ಲಿ ಅವರು ಬಹು ದೊಡ್ಡ ಪ್ರಮಾಣದಲ್ಲಿ ಇಸ್ಲಾಮಿಕ್ ದೇಶಗಳ ಯಾತ್ರೆಗೈದಿದ್ದರು. ಅವುಗಳಲ್ಲಿ ಸೌದಿ ಅರೇಬಿಯಾ, ಇರಾಕ್ ಮತ್ತು ಆಫ್ಘಾನಿಸ್ತಾನ ದೇಶಗಳೂ ಸೇರಿವೆ. ಅವರು ಲಕ್ಷಾಂತರ ಜನರ ಮನದಲ್ಲಿ ನೆಲೆಸಿದ್ದಾರೆ, ಆ ಜನರು ಸಂಪೂರ್ಣ ಶ್ರದ್ಧೆಯಿಂದ ಅವರ ಉಪದೇಶಗಳನ್ನು ಅನುಸರಿಸುತ್ತಿದ್ದರು ಮತ್ತು ಇಂದಿಗೂ ಅನುಸರಿಸುತ್ತಿದ್ದಾರೆ. ಈಗ್ಗೆ ಕೆಲ ದಿನಗಳ ಹಿಂದೆ ಸುಮಾರು 85 ದೇಶಗಳ ರಾಯಭಾರಿಗಳು ದೆಹಲಿಯಿಂದ ಅಮೃತ್ ಸರಕ್ಕೆ ತೆರಳಿದ್ದರು, ಅಲ್ಲಿ ಅವರು ಅಮೃತ್ ಸರದ ಸ್ವರ್ಣ ಮಂದಿರದ ದರ್ಶನ ಪಡೆದರು, ಇದೆಲ್ಲಾ ಗುರುನಾನಕ್ ದೇವ್ ಅವರ 550ನೇ ಪ್ರಕಾಶ ಪರ್ವದ ನಿಮಿತ್ತ ಆಯೋಜಿಸಲಾಗಿತ್ತು ಅಲ್ಲಿ ಈ ಎಲ್ಲ ರಾಯಭಾರಿಗಳು ಸ್ವರ್ಣ ಮಂದಿರದ ದರ್ಶನ ಪಡೆದರು ಜೊತೆಗೆ ಅವರಿಗೆ ಸಿಖ್ ಪರಂಪರೆ ಮತ್ತು ಸಂಸ್ಕೃತಿ ಬಗ್ಗೆ ಅರಿಯುವ ಅವಕಾಶವೂ ಲಭಿಸಿತು. ತದನಂತರ ಅನೇಕ ರಾಯಭಾರಿಗಳು ಸಾಮಾಜಿಕ ಜಾಲತಾಣದಲ್ಲಿ ಅಲ್ಲಿಯ ಭಾವ ಚಿತ್ರಗಳನ್ನು ಪ್ರದರ್ಶಿಸಿದರು. ಬಹಳ ಗೌರವ ಪೂರ್ಣವಾಗಿ ಅಲ್ಲಿಯ ಉತ್ತಮ ಅನುಭವಗಳ ಬಗ್ಗೆ ಬರೆದರು. ಗುರುನಾನಕ್ ದೇವ್ ಅವರ 550ನೇ ಪ್ರಕಾಶ ಪರ್ವ ನಮ್ಮೆಲ್ಲರಿಗೂ ಅವರ ವಿಚಾರಗಳು ಮತ್ತು ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳವಂತೆ ಮತ್ತಷ್ಟು ಪ್ರೇರಣೆ ನೀಡಲಿ ಎಂಬುದು ನನ್ನ ಆಶಯವಾಗಿದೆ. ನಾನು ಮತ್ತೊಮ್ಮೆ ಶಿರಬಾಗಿಸಿ ಗುರುನಾನಕ್ ಅವರಿಗೆ ವಂದಿಸುತ್ತೇನೆ.

ನನ್ನ ಪ್ರಿಯ ದೇಶ ಬಾಂಧವರೇ, ದಿನಾಂಕ 31 ಅಕ್ಟೋಬರ್ ನಿಮ್ಮೆಲ್ಲರಿಗೂ ನೆನಪಿರುತ್ತದೆ ಎಂಬುದು ನನ್ನ ವಿಶ್ವಾಸ.  ಈ ದಿನ ಭಾರತದ ಲೋಹ ಪುರುಷ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಅವರ ಜನ್ಮದಿನ. ಅವರು ದೇಶವನ್ನು ಏಕತೆಯ ಸೂತ್ರದಲ್ಲಿ ಜೋಡಿಸಿದ ಮಹಾನ್ ನಾಯಕರಾಗಿದ್ದಾರೆ. ಸರ್ದಾರ್ ಪಟೇಲ್ ರಲ್ಲಿ ಜನರನ್ನು ಒಗ್ಗೂಡಿಸುವ ಅದ್ಭುತ ಕ್ಷಮತೆ ಇತ್ತು . ಜೊತೆಗೆ ಯಾರೊಂದಿಗೆ ಹಲವು ವಿಚಾರಗಳ ಕುರಿತು ಮತ-ಬೇಧವಿತ್ತೋ, ಅವರೊಂದಿಗೂ ಸಾಮರಸ್ಯವನ್ನು ಬೆಳೆಸಿಕೊಳ್ಳುತ್ತಿದ್ದರು. ಸರ್ದಾರ್ ಪಟೇಲ್ ರವರು ಸೂಕ್ಷ್ಮಾತಿ ಸೂಕ್ಷ್ಮ  ವಿಚಾರಗಳನ್ನೂ ಕೂಡಾ ಬಹಳ ಆಳವಾಗಿ ಅವಲೋಕಿಸುತ್ತಿದ್ದರು. ನಿಜವಾದ ಅರ್ಥದಲ್ಲಿ ಅವರು ‘ಮ್ಯಾನ್ ಆಫ್ ಡಿಟೇಲ್’ ಆಗಿದ್ದರು. ಇದರ ಜೊತೆಗೆ ಅವರು ಸಂಘಟನಾ ಕೌಶಲ್ಯದಲ್ಲೂ ನಿಪುಣತೆಯನ್ನು ಹೊಂದಿದ್ದರು. ಯೋಜನೆಗಳನ್ನು ರೂಪಿಸುವುದು ಮತ್ತು ರಾಜಕೀಯ ನೀತಿಗಳನ್ನು ಹೆಣೆಯುವುದರಲ್ಲೂ ಅವರು ಸಿದ್ಧ ಹಸ್ತರು. ಸರ್ದಾರ್ ಸಾಹೇಬರ ಕಾರ್ಯ ಶೈಲಿಯ ಕುರಿತು ಓದಿದಾಗ-ಕೇಳಿದಾಗ ಅವರ ಪ್ಲಾನಿಂಗ್ ಎಷ್ಟು ಅದ್ಭುತವಾದದ್ದು ಎಂದು ತಿಳಿಯುತ್ತದೆ. 1921 ರಲ್ಲಿ ಅಹ್ಮದಾಬಾದ್ ನಲ್ಲಿ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ದೇಶದಾದ್ಯಂತದಿಂದ ಸಾವಿರಾರು ಪ್ರತಿನಿಧಿಗಳು ಬರುವವರಿದ್ದರು. ಅಧಿವೇಶನದ ಎಲ್ಲ ವ್ಯವಸ್ಥೆಯ ಜವಾಬ್ದಾರಿ ಸರ್ದಾರ್ ಪಟೇಲರ ಮೇಲಿತ್ತು. ಅವರು ನಗರದ ನೀರು ಸರಬರಾಜು ಜಾಲ ಸುಧಾರಣೆಗೂ ಈ ಸಂದರ್ಭವನ್ನು ಬಳಸಿಕೊಂಡರು. ಯಾರಿಗೂ ನೀರಿನ ಕೊರತೆಯಾಗದಂತೆ ಖಾತರಿ ಪಡಿಸಿದರು. ಇಷ್ಟೇ ಅಲ್ಲದೆ, ಅಧಿವೇಶನ ಸ್ಥಳದಲ್ಲಿ ಯಾವುದೇ ಪ್ರತಿನಿಧಿಗಳ ಸಾಮಾನುಗಳು ಅಥವಾ ಪಾದ ರಕ್ಷೆಗಳು ಕಳ್ಳತನವಾಗದಂತೆಯೂ ಅವರು ಕಾಳಜಿ ವಹಿಸಿದ್ದರು. ಇದಕ್ಕಾಗಿ ಸರ್ದಾರ್ ಪಟೇಲರು ಏನು ಮಾಡಿದ್ದರು ಎಂದು ತಿಳಿದು ನಿಮಗೆ ಆಶ್ಚರ್ಯ ವಾಗುತ್ತದೆ. ಅವರು ರೈತರನ್ನು ಸಂಪರ್ಕಿಸಿದರು ಮತ್ತು ಅವರಿಗೆ ಖಾದಿ ಕೈ-ಚೀಲಗಳನ್ನು ತಯಾರಿಸುವಂತೆ ಮನವಿ ಮಾಡಿದರು. ರೈತರು ಕೈ-ಚೀಲಗಳನ್ನು ತಯಾರಿಸಿದರು ಮತ್ತು ಪ್ರತಿನಿಧಿಗಳಿಗೆ ಮಾರಿದರು. ಈ ಕೈ ಚೀಲಗಳಲ್ಲಿ ತಮ್ಮ ಪಾದ ರಕ್ಷೆಗಳನ್ನು ಹಾಕಿ ತಮ್ಮ ಜೊತೆಗೇ ಇಟ್ಟು ಕೊಳ್ಳುವುದರಿಂದ ಪ್ರತಿನಿಧಿಗಳ ಮನಸ್ಸಿನಲ್ಲಿ ಅವು ಕಳ್ಳತನವಾಗುವ ಆತಂಕ ತಪ್ಪಿ ಹೋಯಿತು. ಮತ್ತೊಂದೆಡೆ ಖಾದಿ ವ್ಯಾಪಾರದಲ್ಲೂ ಸಾಕಷ್ಟು ವೃದ್ಧಿಯಾಯಿತು. ಸಂವಿಧಾನ ರಚನಾ ಸಭೆಯಲ್ಲಿ ಪ್ರಮುಖ ಪಾತ್ರವಹಿಸಿದ ಕುರಿತು ಸರ್ದಾರ್ ಪಟೇಲರಿಗೆ ನಮ್ಮ ದೇಶ ಎಂದಿಗೂ ಕೃತಜ್ಞವಾಗಿರುತ್ತದೆ. ಅವರು ಮೌಲಿಕ ಅಧಿಕಾರಗಳನ್ನು ಖಚಿತ ಪಡಿಸುವಂಥ ಮಹತ್ವಪೂರ್ಣ ಕೆಲಸ ಮಾಡಿದ್ದಾರೆ. ಇದರಲ್ಲಿ ಜಾತಿ ಮತ್ತು ಸಂಪ್ರದಾಯವನ್ನು ಆಧರಿಸಿ ಯಾವುದೇ ರೀತಿಯ ಬೇಧ ಭಾವಕ್ಕೆ ಅವಕಾಶವಿಲ್ಲ.

ಸ್ನೇಹಿತರೇ, ಭಾರತದ ಪ್ರಥಮ ಗೃಹ ಸಚಿವರಾಗಿ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಅವರು ಪ್ರಾಂತ್ಯ ಸಂಸ್ಥಾನಗಳನ್ನು ಒಗ್ಗೂಡಿಸುವ ಒಂದು ಬಹು ದೊಡ್ಡ ಭಗೀರಥ ಮತ್ತು ಐತಿಹಾಸಿಕ ಕಾರ್ಯ ಮಾಡಿದ್ದಾರೆ ಎಂಬುದು ನಮಗೆಲ್ಲಾ ತಿಳಿದಿದೆ. ಅವರ ದೃಷ್ಠಿ ಪ್ರತಿಯೊಂದರ ಮೇಲೂ ನೆಟ್ಟಿತ್ತು ಎಂಬುದೇ ಸರ್ದಾರ್ ವಲ್ಲಭ್ ಭಾಯಿ ಅವರ ವಿಶೇಷತೆಯಾಗಿತ್ತು. ಒಂದೆಡೆ ಅವರ ದೃಷ್ಠಿ ಹೈದ್ರಾಬಾದ್, ಜುನಾಗಢ್ ಮತ್ತು ಇತರ ರಾಜ್ಯಗಳ ಮೇಲೆ ಕೇಂದ್ರೀಕೃತವಾಗಿತ್ತು ಮತ್ತೊಂದೆಡೆ ಅವರ ಗಮನ ಬಹುದೂರದ ಲಕ್ಷದ್ವೀಪ್ ಮೇಲೂ ಇತ್ತು. ನಿಜವಾಗಿ ನಾವು ಸರ್ದಾರ್ ಪಟೇಲ್ ಅವರ ಪ್ರಯತ್ನಗಳ ಕುರಿತು ಮಾತನಾಡುತ್ತೇವೆ ಎಂದಾದಲ್ಲಿ ದೇಶದ ಏಕೀಕರಣದಲ್ಲಿ ಕೆಲವು ಪ್ರಾಂತ್ಯಗಳಲ್ಲಿ ಮಾತ್ರ ಅವರ ಪಾತ್ರವಿದೆ ಎಂಬ ಚರ್ಚೆಯಾಗುತ್ತದೆ. ಲಕ್ಷದ್ವೀಪದಂತಹ ಪುಟ್ಟ ಸ್ಥಳಗಳ ಸೇರ್ಪಡೆಗೂ  ಅವರು ಬಹಳ ಮಹತ್ವ ಕೊಟ್ಟಿದ್ದರು. ಈ ವಿಷಯವನ್ನು ಜನರು ಬಹುಶಃ ನೆನಪಿಸಿಕೊಳ್ಳುವುದೇ ಇಲ್ಲ. ಲಕ್ಷದ್ವೀಪ ಕೆಲ ದ್ವೀಪಗಳ ಸಮೂಹವೆಂದು ನಿಮಗೆಲ್ಲಾ ತಿಳಿದಿದೆ. ಇದು ಭಾರತದ ಅತ್ಯಂತ ಸುಂದರ ಸ್ಥಳಗಳಲ್ಲಿ ಒಂದಾಗಿದೆ. 1947 ರಲ್ಲಿ, ಭಾರತ ವಿಭಜನೆ ನಂತರ ನಮ್ಮ ನೆರೆ ರಾಷ್ಟ್ರದ ಕಣ್ಣು ಲಕ್ಷದ್ವೀಪದ ಮೇಲೆ ಬಿತ್ತು ಮತ್ತು ತನ್ನ ಧ್ವಜದೊಂದಿಗೆ ಹಡಗನ್ನು ಅದು ಕಳುಹಿಸಿತ್ತು. ಸರ್ದಾರ್ ಪಟೇಲರಿಗೆ ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ವಲ್ಪವೂ ಸಮಯವನ್ನು ವ್ಯರ್ಥ ಮಾಡದೇ, ವಿಳಂಬ ಮಾಡದೇ, ಕೂಡಲೇ ಕಠಿಣ ಕಾರ್ಯಾಚರಣೆ ಆರಂಭ ಮಾಡಿಬಿಟ್ಟರು. ಅವರು ಮೊದಲಿಯಾರ್ ಸೋದರರಾದ ಆರ್ಕಾಟ್ ರಾಮ ಸ್ವಾಮಿ ಮೊದಲಿಯಾರ್ ಮತ್ತು ಆರ್ಕಾಟ್ ಲಕ್ಷ್ಮಣ ಸ್ವಾಮಿ ಮೊದಲಿಯಾರ್ ಅವರಿಗೆ ಟ್ರಾವೆನ್ಕೋರ್ ಜನರ ಸಹಾಯದೊಂದಿಗೆ ಶೀಘ್ರದಲ್ಲೇ ಅಲ್ಲಿಗೆ ತೆರಳಿ ತ್ರಿವರ್ಣ ಧ್ವಜವನ್ನು ಹಾರಿಸಿ ಎಂದು ಹೇಳಿದರು. ಲಕ್ಷ ದ್ವೀಪದಲ್ಲಿ ಮೊದಲು ತ್ರಿವರ್ಣ ಧ್ವಜ ಹಾರಬೇಕು ಎಂದು ಹೇಳಿದ್ದರು. ಅವರ ಆದೇಶದಂತೆ ತಕ್ಷಣವೇ ಲಕ್ಷದ್ವೀಪದಲ್ಲಿ ತ್ರಿವರ್ಣ ಧ್ವಜ ಹಾರಿಸಲಾಯಿತು ಮತ್ತು ಲಕ್ಷದ್ವೀಪದವನ್ನು ವಶ ಪಡಿಸಿಕೊಳ್ಳಬೇಕೆಂಬ ನೆರೆ ರಾಷ್ಟ್ರದ ಉದ್ದೇಶವನ್ನು ನೋಡು ನೋಡುತ್ತಿದ್ದಂತೆಯೇ ವಿಫಲಗೊಳಿಸಲಾಯಿತು. ಈ ಘಟನೆಯ ನಂತರ ಸರ್ದಾರ್ ಪಟೇಲ್ ರವರು ಲಕ್ಷದ್ವೀಪದ ಅಭಿವೃದ್ಧಿಗೆ ಎಲ್ಲ ಸಹಾಯ ದೊರೆಯುವಂತೆ ಖಾತರಿ ಪಡಿಸಬೇಕೆಂದು ಮೊದಲಿಯಾರ್ ಸೋದರರಿಗೆ ಹೇಳಿದರು. ಇಂದು ಲಕ್ಷದ್ವೀಪ ಭಾರತದ ಪ್ರಗತಿಯಲ್ಲಿ ಮಹತ್ವಪೂರ್ಣ ಕೊಡುಗೆಯನ್ನು ನೀಡುತ್ತಿದೆ. ಇದೊಂದು ಆಕರ್ಷಕ ಪ್ರವಾಸಿ ತಾಣವೂ ಆಗಿದೆ. ನೀವೂ ಸಹ ಈ ಸುಂದರ ದ್ವೀಪಕ್ಕೆ ಭೇಟಿ ನೀಡುತ್ತೀರಿ ಮತ್ತು ಸಮುದ್ರ ತೀರದ ಯಾತ್ರೆಗೈಯುತ್ತೀರಿ ಎಂಬ ಆಶಾಭಾವನೆ ನನಗಿದೆ.

ನನ್ನ ಪ್ರೀತಿಯ ದೇಶ ಬಾಂಧವರೇ, ಸರ್ದಾರ್ ಪಟೇಲ್ ಅವರ ಸ್ಮರಣಾರ್ಥ ನಿರ್ಮಿಸಲಾದ ‘ಏಕತಾ ಪ್ರತಿಮೆ’ (‘Statue of Unity’) ಯನ್ನು 2018 ರ ಅಕ್ಟೋಬರ್ 31 ರಂದು ದೇಶಕ್ಕೆ ಮತ್ತು ವಿಶ್ವಕ್ಕೆ ಸಮರ್ಪಿಸಲಾಯಿತು. ಇದು ವಿಶ್ವದಲ್ಲೇ ಅತಿ ಎತ್ತರದ ಪ್ರತಿಮೆಯಾಗಿದೆ. ಇದರ ಎತ್ತರ ಅಮೆರಿಕಾದಲ್ಲಿರುವ ‘ಸ್ಟಾಚ್ಯೂ ಆಫ್ ಲಿಬರ್ಟಿ’ಗಿಂತ  ಎರಡರಷ್ಟಿದೆ. ವಿಶ್ವದ ಅತ್ಯಂತ ಎತ್ತರದ ಪ್ರತಿಮೆಯು, ಪ್ರತಿಯೊಬ್ಬ ಭಾರತೀಯನ ಮನದಲ್ಲಿ ಹೆಮ್ಮೆ ಮೂಡಿಸುತ್ತದೆ. ಪ್ರತಿಯೊಬ್ಬ ಭಾರತೀಯನ ತಲೆ ಹೆಮ್ಮೆಯಿಂದ ಮೇಲೆತ್ತುವಂತೆ ಮಾಡುತ್ತದೆ. ಒಂದು ವರ್ಷದಲ್ಲಿ, 26 ಲಕ್ಷಕ್ಕಿಂತ ಹೆಚ್ಚು ಪ್ರವಾಸಿಗರು, ‘ಏಕತಾ ಪ್ರತಿಮೆ’ ನೋಡಲು ಆಗಮಿಸಿದ್ದಾರೆ ಎಂದು ತಿಳಿದು ನಿಮಗೆ ಸಂತೋಷವಾಗುತ್ತದೆ. ಇದರರ್ಥವೆಂದರೆ ಪ್ರತಿದಿನ ಸರಾಸರಿ ಎಂಟೂವರೆ ಸಾವಿರ ಜನರು ಸ್ಟಾಚ್ಯೂ ಆಫ್ ಯೂನಿಟಿಯ ಭವ್ಯತೆಯ ದರ್ಶನ ಪಡೆದಿದ್ದಾರೆ. ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಬಗ್ಗೆ ತಮ್ಮ ಮನಸ್ಸಿನಲ್ಲಿರುವ ನಂಬಿಕೆ, ಶ್ರದ್ಧೆ ವ್ಯಕ್ತಪಡಿಸಿದ್ದಾರೆ, ಈಗ ಅಲ್ಲಿ ಕ್ಯಾಕ್ಟಸ್ ತೋಟ, ಚಿಟ್ಟೆಗಳ ತೋಟ, ಜಂಗಲ್ ಸಫಾರಿ, ಮಕ್ಕಳ ಪೋಷಕಾಂಶ ಉದ್ಯಾನ (ಚಿಲ್ಡ್ರನ್ ನ್ಯೂಟ್ರಿಷನ್ ಪಾರ್ಕ್), ಏಕತಾ ನರ್ಸರಿ ಹೀಗೆ ಅನೇಕ ಆಕರ್ಷಣೀಯ ಕೇಂದ್ರಗಳು ಸತತವಾಗಿ ಅಭಿವೃದ್ಧಿಯಾಗುತ್ತಿವೆ ಮತ್ತು ಇದರಿಂದಾಗಿ ಸ್ಥಳೀಯ ಅರ್ಥ ವ್ಯವಸ್ಥೆಗೂ ಉತ್ತೇಜನ ದೊರೆಯುತ್ತಿದೆ ಮತ್ತು ಜನರಿಗೆ ಹೊಸ ಹೊಸ ಉದ್ಯೋಗಾವಕಾಶಗಳು ಕೂಡಾ ದೊರೆಯುತ್ತಿವೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಅನೇಕ ಗ್ರಾಮಸ್ಥರು, ತಮ್ಮ ತಮ್ಮ ಮನೆಗಳಲ್ಲಿ, ಹೋಂ ಸ್ಟೇಗಳ ಸೌಲಭ್ಯ ಒದಗಿಸುತ್ತಿದ್ದಾರೆ. ಹೋಂ ಸ್ಟೇ ಸೌಲಭ್ಯಗಳನ್ನು ಒದಗಿಸುವ ಜನರಿಗೆ ವೃತ್ತಿಪರ ತರಬೇತಿಯನ್ನೂ ನೀಡಲಾಗುತ್ತಿದೆ. ಅಲ್ಲಿನ ಜನರು ಈಗ ಡ್ರಾಗನ್ ಹಣ್ಣಿನ  ಕೃಷಿಯನ್ನು ಕೂಡಾ ಆರಂಭಿಸಿದ್ದಾರೆ ಮತ್ತು ಶೀಘ್ರದಲ್ಲಿಯೇ ಇದು ಅಲ್ಲಿನ ಜನರ ಪ್ರಮುಖ ಜೀವನೋಪಾಯದ ಮೂಲವಾಗಲಿದೆ ಎಂಬ ನಂಬಿಕೆ ನನಗಿದೆ.

ಸ್ನೇಹಿತರೇ, ದೇಶಕ್ಕಾಗಿ, ಎಲ್ಲಾ ರಾಜ್ಯಗಳಿಗಾಗಿ, ಪ್ರವಾಸೋದ್ಯಮಕ್ಕಾಗಿ, ಈ ಏಕತಾ ಪ್ರತಿಮೆ ಒಂದು ಅಧ್ಯಯನ ವಿಷಯವಾಗಬಲ್ಲದು. ಒಂದು ವರ್ಷದೊಳಗಾಗಿ, ಒಂದು ಸ್ಥಳ ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾಗಿ ಹೇಗೆ ಅಭಿವೃದ್ಧಿ ಹೊಂದಬಹುದು ಎಂಬುದಕ್ಕೆ ನಾವೆಲ್ಲಾ ಸಾಕ್ಷಿಗಳಾಗಿದ್ದೇವೆ. ಅಲ್ಲಿಗೆ ದೇಶ-ವಿದೇಶಗಳಿಂದ ಜನರು ಬರುತ್ತಾರೆ. ಸಾರಿಗೆ, ವಸತಿ, ಮಾರ್ಗದರ್ಶಕರು, ಪರಿಸರ ಸ್ನೇಹಿ ವ್ಯವಸ್ಥೆಗಳು ಒಂದರ ನಂತರ ಮತ್ತೊಂದು ಅಭಿವೃದ್ಧಿಯಾಗುತ್ತಲೇ ಇವೆ.  ಬಹುದೊಡ್ಡ ಆರ್ಥಿಕತೆ ಅಭಿವೃದ್ಧಿಯಾಗುತ್ತಿದೆ ಮತ್ತು ಪ್ರವಾಸಿಗರ  ಅನುಕೂಲತೆಗಳಿಗೆ ಅನುಗುಣವಾಗಿ ಅಲ್ಲಿ ಸೌಲಭ್ಯಗಳನ್ನು ರಚಿಸುತ್ತಿದ್ದಾರೆ. ಸರ್ಕಾರ ಕೂಡಾ ತನ್ನ ಪಾತ್ರವನ್ನು ನಿರ್ವಹಿಸುತ್ತಿದೆ. ಸ್ನೇಹಿತರೆ, ಕೆಲ ದಿನಗಳ ಹಿಂದೆ ಟೈಮ್ ನಿಯತ ಕಾಲಿಕೆ ಪ್ರಕಟಿಸಿದ, ವಿಶ್ವದ 100 ಪ್ರಮುಖ ಪ್ರವಾಸಿ ತಾಣಗಳಲ್ಲಿ ಏಕತಾ ಪ್ರತಿಮೆಗೂ ಪ್ರಮುಖ ಸ್ಥಾನ ನೀಡಿದೆ ಎಂಬ ವಿಷಯ ತಿಳಿದು  ಹೆಮ್ಮೆ ಪಡದ ಭಾರತೀಯರೇ ಇಲ್ಲ. ತಾವೆಲ್ಲರೂ ಕೂಡಾ ನಿಮ್ಮ ಅಮೂಲ್ಯ ಸಮಯದಲ್ಲಿ ಸ್ವಲ್ಪ ಸಮಯವನ್ನು ವಿನಿಯೋಗಿಸಿ ‘ಏಕತಾ ಪ್ರತಿಮೆ’  ನೋಡಲು ಹೋಗುತ್ತೀರಿ ಎಂಬ ವಿಶ್ವಾಸ ನನಗಿದೆ, ಆದರೆ ಪ್ರವಾಸ ಮಾಡಲು ತಮ್ಮ ಅಮೂಲ್ಯ ಸಮಯ ವಿನಿಯೋಗಿಸುವ ಪ್ರತಿಯೊಬ್ಬ ಭಾರತೀಯನೂ, ಕನಿಷ್ಠ 15 ಪ್ರವಾಸಿ ತಾಣಗಳಿಗೆ ಕುಟುಂಬ ಸಮೇತ ಹೋಗಬೇಕು, ಹೋಗುವ ಸ್ಥಳಗಳಲ್ಲಿ ರಾತ್ರಿ ತಂಗಬೇಕು, ಎಂದು ನನ್ನ ಆಗ್ರಹ ಇದ್ದೇ ಇದೆ.

ಸ್ನೇಹಿತರೇ, 2014 ರಿಂದ ಪ್ರತಿ ವರ್ಷ ಅಕ್ಟೋಬರ್ 31 ರಂದು ‘ರಾಷ್ಟ್ರೀಯ ಏಕತಾ ದಿನ’ ಆಚರಿಸುತ್ತಿರುವ ವಿಷಯ ನಿಮಗೆ ತಿಳಿದೇ ಇದೆ. ನಮ್ಮ ದೇಶದ ಏಕತೆ, ಸಮಗ್ರತೆ ಮತ್ತು ಸುರಕ್ಷತೆಯನ್ನು ಎಲ್ಲ ರೀತಿಯಿಂದಲೂ ರಕ್ಷಣೆ ಮಾಡುವ ಸಂದೇಶವನ್ನು ಈ ದಿನ ನಮಗೆ  ನೀಡುತ್ತದೆ. ಅಕ್ಟೋಬರ್ 31 ರಂದು, ಪ್ರತಿ ವರ್ಷದಂತೆ ಏಕತೆಗಾಗಿ ಓಟ (Run for Unity) ಕೂಡಾ ಆಯೋಜಿಸಲಾಗುತ್ತಿದೆ. ಇದರಲ್ಲಿ ಸಮಾಜದ ಪ್ರತಿಯೊಂದು ವರ್ಗದ, ಪ್ರತಿಯೊಂದು ಪ್ರದೇಶದ ಜನರು ಪಾಲ್ಗೊಳ್ಳಲಿದ್ದಾರೆ. ಏಕತೆಗಾಗಿ ಓಟ (Run for Unity) ಎನ್ನುವುದು ಈ ದೇಶ ಒಂದಾಗಿದೆ, ಒಂದು ದಿಕ್ಕಿನಲ್ಲಿ ಮುಂದೆ ಸಾಗುತ್ತಿದೆ ಮತ್ತು ಒಂದು ಗುರಿ ಸಾಧಿಸಲು ಬಯಸುತ್ತಿದೆ ಎನ್ನುವುದರ ಸಂಕೇತವಾಗಿದೆ. ಒಂದು ಗುರಿ – ಒಂದು ಭಾರತ, ಶ್ರೇಷ್ಠ ಭಾರತ.

ಕೇವಲ ದೆಹಲಿ ಮಾತ್ರವಲ್ಲದೇ, ಭಾರತದ ನೂರಾರು ನಗರಗಳಲ್ಲಿ, ಕೇಂದ್ರಾಡಳಿತ ಪ್ರದೇಶಗಳಲ್ಲಿ, ರಾಜಧಾನಿಗಳಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ, ಸಣ್ಣ ಸಣ್ಣ ಎರಡನೇ ಮತ್ತು, ಮೂರನೇ ಸ್ತರದ ನಗರಗಳಲ್ಲಿ ಕೂಡಾ ಬಹಳ ಹೆಚ್ಚಿನ ಪ್ರಮಾಣದಲ್ಲಿ ಪುರುಷರಾಗಿರಲಿ, ಮಹಿಳೆಯರಾಗಿರಲಿ, ನಗರ ವಾಸಿಗಳಾಗಿರಲಿ, ಗ್ರಾಮವಾಸಿಗಳಾಗಿರಲಿ, ಬಾಲಕರಾಗಿರಲಿ, ಯುವಕರಾಗಿರಲಿ, ವೃದ್ಧರಾಗಿರಲಿ, ದಿವ್ಯಾಂಗರಾಗಿರಲಿ, ಎಲ್ಲರೂ ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎನ್ನುವುದನ್ನು ಕಳೆದ ಐದು ವರ್ಷಗಳಲ್ಲಿ ನೋಡಿದ್ದೇವೆ. ಹಾಗೆಯೇ, ಇತ್ತೀಚಿನ ದಿನಗಳಲ್ಲಿ, ಜನರಲ್ಲಿ ಮ್ಯಾರಾಥಾನ್ ಬಗ್ಗೆ ಒಂದು ಆಸಕ್ತಿ ಮತ್ತು ಉತ್ಸಾಹ ಕಂಡುಬರುತ್ತಿದೆ. ಏಕತೆಗಾಗಿ ಓಟ (Run For Unity) ಕೂಡಾ ಒಂದು ಇಂತಹ ವಿಶಿಷ್ಠ ಅವಕಾಶವಾಗಿದೆ. ಓಡುವುದು ಮನಸ್ಸಿಗೆ-ಮೆದುಳಿಗೆ ಮತ್ತು ಶರೀರಕ್ಕೆ ಪ್ರಯೋಜನಕಾರಿಯಾಗಿದೆ. ಇಲ್ಲಿ ಓಟವೂ ಇದೆ, ಫಿಟ್ ಇಂಡಿಯಾ ಭಾವನೆಯನ್ನು ಐತಿಹಾಸಿಕಗೊಳಿಸುವುದೂ ಇದೆ, ಇದರೊಂದಿಗೆ, ಒಂದು ಭಾರತ ಶ್ರೇಷ್ಠ ಭಾರತ ಈ ಉದ್ದೇಶದೊಂದಿಗೆ ಕೂಡಾ ನಾವೆಲ್ಲರೂ ಒಂದುಗೂಡುತ್ತೇವೆ. ಆದ್ದರಿಂದ ಕೇವಲ ಶರೀರ ಮಾತ್ರವಲ್ಲ, ಮನಸ್ಸು ಮತ್ತು ಸುಸಂಸ್ಕೃತ ಭಾರತದ ಒಗ್ಗಟ್ಟಿಗಾಗಿ, ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದಕ್ಕಾಗಿ ಕೂಡಾ. ಆದ್ದರಿಂದ, ನೀವು ಯಾವುದೇ ನಗರದಲ್ಲಿ ವಾಸಿಸುತ್ತಿದ್ದರೂ, ಅಲ್ಲಿ ನಿಮ್ಮ ಸುತ್ತಮುತ್ತ ಏಕತೆಗಾಗಿ ಓಟ (Run For Unity) ಕುರಿತು ತಿಳಿದುಕೊಳ್ಳಬಹುದು. ಇದಕ್ಕಾಗಿ runforunity.gov.in ಎನ್ನುವ ಪೋರ್ಟಲ್ ಆರಂಭಿಸಲಾಗಿದೆ.  ದೇಶಾದ್ಯಂತ ಏಕತೆಗಾಗಿ ಓಟ (Run For Unity) ಆಯೋಜನೆಯಾಗ ಬೇಕಾಗಿರುವ ಸ್ಥಳಗಳ ಬಗ್ಗೆ ಈ ಪೋರ್ಟಲ್ ನಲ್ಲಿ ಮಾಹಿತಿ ನೀಡಲಾಗಿದೆ. ನೀವೆಲ್ಲರೂ ಅಕ್ಟೋಬರ್ 31 ರಂದು ಭಾರತದ ಏಕತೆಗಾಗಿ, ನಿಮ್ಮ ಫಿಟ್ನೆಸ್ ಗಾಗಿ ಕೂಡಾ ಖಂಡಿತಾ ಓಡುತ್ತೀರೆನ್ನುವ ನಂಬಿಕೆ ನನಗಿದೆ.

ನನ್ನ ಪ್ರೀತಿಯ ದೇಶ ಬಾಂಧವರೇ, ಸರ್ದಾರ್ ಪಟೇಲ್ ಅವರು ದೇಶವನ್ನು ಏಕತೆಯ ಸೂತ್ರದಲ್ಲಿ ಜೋಡಿಸಿದರು. ಏಕತೆಯ ಈ ಮಂತ್ರ ನಮ್ಮ ಜೀವನದಲ್ಲಿ ಸಂಸ್ಕಾರದ ರೀತಿಯಂತಿದೆ ಮತ್ತು ಭಾರತದಂತಹ ವೈವಿಧ್ಯತೆಯಿಂದ ಕೂಡಿರುವ ದೇಶದಲ್ಲಿ, ಪ್ರತಿ ಹಂತದಲ್ಲಿ, ಪ್ರತಿ ಚರಣದಲ್ಲಿ, ಪ್ರತಿ ತಿರುವಿನಲ್ಲಿ, ಪ್ರತಿ ಮೆಟ್ಟಿಲಿನಲ್ಲಿ ಏಕತೆಯ ಈ ಮಂತ್ರ ಬಲಿಷ್ಠಗೊಳ್ಳುತ್ತಲೇ ಇರಬೇಕು. ನನ್ನ ಪ್ರೀತಿಯ ದೇಶಬಾಂಧವರೇ, ದೇಶದ ಏಕತೆ ಮತ್ತು ಪರಸ್ಪರ ಸದ್ಭಾವನೆಯನ್ನು ಸದೃಢಗೊಳಿಸಲು, ನಮ್ಮ ಸಮಾಜ ಯಾವಾಗಲೂ ಬಹಳ ಸಕ್ರಿಯವಾಗಿದೆ ಮತ್ತು ಜಾಗರೂಕತೆಯಿಂದ ಇದೆ. ನಮ್ಮ ಸುತ್ತಮುತ್ತಲೂ ನೋಡಿದಾಗ, ಪರಸ್ಪರ ಸದ್ಭಾವನೆಯನ್ನು ಹೆಚ್ಚಿಸುವುದಕ್ಕಾಗಿ ನಿರಂತರವಾಗಿ ಕೆಲಸ ಮಾಡುತ್ತಿರುವ ಅನೇಕ ಉದಾಹರಣೆಗಳು ಕಂಡುಬರುತ್ತವೆ ಆದರೆ, ಕೆಲವೊಮ್ಮೆ ಸಮಾಜದ ಪ್ರಯತ್ನ, ಅದರ ಕೊಡುಗೆ, ನೆನಪಿನಿಂದ ಬಹಳ ಶೀಘ್ರವಾಗಿ ಅಳಿಸಿ ಹೋಗುತ್ತದೆ. 

ಸ್ನೇಹಿತರೆ, 2010 ರ ಸೆಪ್ಟೆಂಬರ್ ನಲ್ಲಿ ರಾಮ ಜನ್ಮಭೂಮಿಯ ಬಗ್ಗೆ ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪು ನೀಡಿದ್ದು ನನಗೆ ನೆನಪಿದೆ. ಆ ದಿನಗಳಲ್ಲಿ ಎಂತಹ ಪರಿಸ್ಥಿತಿಯಿತ್ತು ಎನ್ನುವುದನ್ನು ಸ್ವಲ್ಪ ನೆನಪಿಸಿಕೊಳ್ಳಿ. ವಿವಿಧ ರೀತಿಯ ಅದೆಷ್ಟು ಜನರು ಅಂಗಳಕ್ಕೆ ಬಂದಿದ್ದರು. ಎಂತೆಂತಹ ಆಸಕ್ತ ಗುಂಪುಗಳು ತಮ್ಮದೇ ಆದ ರೀತಿಯಲ್ಲಿ ಪ್ರಯೋಜನ ಪಡೆದುಕೊಳ್ಳಲು ನೋಡುತ್ತಿದ್ದವು. ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಲು ಎಂತೆಂತಹ ಮಾತುಗಳನ್ನು ಆಡಲಾಗುತ್ತಿತ್ತು. ವಿಭಿನ್ನ ಸ್ವರಗಳಲ್ಲಿ ಕಹಿ ಭಾವನೆ ತುಂಬುವ ಪ್ರಯತ್ನವೂ ನಡೆಯುತ್ತಿತ್ತು. ಕೆಲವು ವಿರೋಧಾಭಿಪ್ರಾಯ ಹೊಂದಿದವರು ಮತ್ತು ಬಡಾಯಿಕೋರರು ಕೇವಲ ತಮ್ಮನ್ನು ತಾವು ಪ್ರದರ್ಶಿಸಿಕೊಳ್ಳುವ ಉದ್ದೇಶದಿಂದ ಏನೇನು ಹೇಳಿದ್ದರು, ಯಾವ ರೀತಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿದ್ದರು ನಮಗೆ ಎಲ್ಲವೂ ನೆನಪಿದೆ. ಆದರೆ ಇವೆಲ್ಲವೂ ಐದು ದಿನ, ಏಳು ದಿನ, ಹತ್ತು ದಿನ, ನಡೆಯುತ್ತದೆ, ಆದರೆ ತೀರ್ಪು ಬರುತ್ತಿದ್ದಂತೆಯೇ, ದೇಶದಲ್ಲಿ ಒಂದು ಆನಂದದಾಯಕ, ಆಶ್ಚರ್ಯಕರ ಬದಲಾವಣೆಯ ಅನುಭವವಾಯಿತು. ಒಂದೆಡೆ ಎರಡು ವಾರಗಳವರೆಗೆ  ಪರಿಸ್ಥಿತಿ ವಿಷಮಿಸುವಂತೆ ಮಾಡುವುದಕ್ಕೆ ಬಹಳಷ್ಟು ಪ್ರಯತ್ನ ನಡೆಯಿತು, ಆದರೆ ರಾಮ ಜನ್ಮಭೂಮಿ ಬಗ್ಗೆ ತೀರ್ಪು ಬಂದಾಗ, ಸರ್ಕಾರ, ರಾಜಕೀಯ ಪಕ್ಷಗಳು, ಸಾಮಾಜಿಕ ಸಂಘಟನೆಗಳು, ನಾಗರಿಕ ಸಮಾಜ, ಎಲ್ಲಾ ಪಂಗಡಗಳ ಪ್ರತಿನಿಧಿಗಳು, ಸಾಧು-ಸಂತರು ಅತ್ಯಂತ ಸಮತೋಲಿತ ಮತ್ತು ಸಂಯಮದ ಹೇಳಿಕೆ ನೀಡಿದರು. ಪರಿಸ್ಥಿತಿಯಲ್ಲಿ ಒತ್ತಡ ಕಡಿಮೆ ಮಾಡುವ ಪ್ರಯತ್ನ ನಡೆಯಿತು. ಆದರೆ ನನಗೆ ಆ ದಿನ ಚೆನ್ನಾಗಿ ನೆನಪಿದೆ. ಆ ದಿನವನ್ನು ನೆನಪಿಸಿಕೊಂಡಾಗಲೆಲ್ಲಾ ನನಗೆ ಸಂತೋಷವಾಗುತ್ತದೆ. ನ್ಯಾಯಾಂಗದ ಘನತೆಯನ್ನು ಅತ್ಯಂತ ಗೌರವಪೂರ್ವಕವಾಗಿ ಎತ್ತಿ ಹಿಡಿಯಲಾಯಿತು ಮತ್ತು ಎಲ್ಲಿಯೂ ಕೂಡಾ ಉದ್ವಿಗ್ನ, ಒತ್ತಡದ ಪರಿಸ್ಥಿತಿ ಉಂಟಾಗಲು ಬಿಡಲಿಲ್ಲ. ಈ ವಿಷಯವನ್ನು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಇದು ನಮಗೆ ಬಹಳ ಶಕ್ತಿ ತುಂಬುತ್ತದೆ. ಆ ದಿನ, ಆ ಕ್ಷಣ ನಮಗೆಲ್ಲರಿಗೂ ಒಂದು ಕರ್ತವ್ಯಬೋಧಕವಾಗಿದೆ. ಏಕತೆಯ ಸ್ವರ, ದೇಶಕ್ಕೆ ಎಷ್ಟು ದೊಡ್ಡ ಶಕ್ತಿ ನೀಡುತ್ತದೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ.

ನನ್ನ ಪ್ರೀತಿಯ ದೇಶಬಾಂಧವರೇ, ನಮ್ಮ ದೇಶದ ಮಾಜಿ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರ ಹತ್ಯೆಯೂ ಅದೇ ದಿನ ಅಂದರೆ ಅಕ್ಟೋಬರ್ 31 ರಂದೇ ನಡೆದಿತ್ತು. ದೇಶಕ್ಕೆ ಬಹುದೊಡ್ಡ ಆಘಾತವಾಗಿತ್ತು. ನಾನು ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇನೆ.

 

ನನ್ನ ಪ್ರೀತಿಯ ದೇಶಬಾಂಧವರೇ, ಇಂದು, ಮನೆ ಮನೆಯ ಒಂದು ಕತೆ ದೂರ ದೂರಕ್ಕೆ ಕೇಳಿಸುತ್ತಿದೆಯಾದರೆ, ಪ್ರತಿ ಹಳ್ಳಿಯ ಯಾವುದಾದರೂ ಕತೆ ಕೇಳಿಸುತ್ತಿದೆ ಎಂದರೆ, – ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ, ಭಾರತದ ಪ್ರತಿ ಮೂಲೆಯಿಂದ ಒಂದು ಕತೆ ಕೇಳಿ ಬರುತ್ತಿದೆ ಎಂದಾದರೆ, ಅದು ಸ್ವಚ್ಛತೆಯ ಕತೆ. ಪ್ರತಿ ವ್ಯಕ್ತಿಗೆ, ಪ್ರತಿ ಕುಟುಂಬಕ್ಕೆ, ಪ್ರತಿ ಗ್ರಾಮಕ್ಕೆ, ಸ್ವಚ್ಛತೆಗೆ ಸಂಬಂಧಿಸಿದಂತೆ ತಮ್ಮ ಆಹ್ಲಾದಕರ ಅನುಭವ ಹೇಳುವ ಮನಸ್ಸಾಗುತ್ತದೆ, ಏಕೆಂದರೆ, ಸ್ವಚ್ಛತೆಯ ಈ ಪ್ರಯತ್ನ, ನೂರಾ ಇಪ್ಪತೈದು ಕೋಟಿ ಭಾರತೀಯರ ಪ್ರಯತ್ನವಾಗಿದೆ. ಫಲಿತಾಂಶದ ಮಾಲೀಕರು ಕೂಡಾ ಈ ನೂರಾ ಇಪ್ಪತ್ತೈದು ಕೋಟಿ ಭಾರತೀಯರೇ. ಆದರೆ ಒಂದು ಆಹ್ಲಾದಕರ ಮತ್ತು ರೋಚಕ ಅನುಭವ ಕೂಡಾ ಇದೆ. ನಾನು ಕೇಳಿರುವುದನ್ನು ನಿಮಗೆ ಕೂಡಾ ಹೇಳಬೇಕೆಂದು  ಅಂದುಕೊಳ್ಳುತ್ತೇನೆ. ತಾಪಮಾನ ಶೂನ್ಯದಿಂದ ಮೈನಸ್ 50 ರಿಂದ 60 ಡಿಗ್ರಿ ತಲುಪುವ ವಿಶ್ವದ ಅತ್ಯಂತ ಎತ್ತರದ ರಣಭೂಮಿಯ ಕಲ್ಪನೆ ಮಾಡಿಕೊಳ್ಳಿ. ಗಾಳಿಯಲ್ಲಿ ಆಮ್ಲಜನಕ ನೆಪಮಾತ್ರದ ಪ್ರಮಾಣದಲ್ಲಿರುತ್ತದೆ. ಇಂತಹ ಪ್ರತಿಕೂಲ ಪರಿಸ್ಥಿತಿಗಳಲ್ಲಿ, ಇಂತಹ ಸವಾಲುಗಳ ಮಧ್ಯದಲ್ಲಿ ವಾಸ ಮಾಡುವುದು ಕೂಡಾ ಯಾವುದೇ ಪರಾಕ್ರಮಕ್ಕಿಂತ ಕಡಿಮೆ ಏನಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ, ನಮ್ಮ ವೀರ ಸೈನಿಕರು ಎದೆಯುಬ್ಬಿಸಿ ದೇಶದ ಗಡಿಗಳ ರಕ್ಷಣೆ ಮಾಡುತ್ತಿರುವುದು ಮಾತ್ರವಲ್ಲ, ಅಲ್ಲಿ ಸ್ವಚ್ಛ ಸಿಯಾಚಿನ್ ಅಭಿಯಾನವನ್ನೂ ನಡೆಸುತ್ತಿದ್ದಾರೆ. ಭಾರತೀಯ ಸೇನೆಯ ಈ ಅದ್ಭುತ ಬದ್ಧತೆಗಾಗಿ ನಾನು ದೇಶಬಾಂಧವರ ಪರವಾಗಿ ಅವರನ್ನು ಪ್ರಶಂಸಿಸುತ್ತೇನೆ. ಕೃತಜ್ಞತೆ ವ್ಯಕ್ತ ಪಡಿಸುತ್ತೇನೆ. ಅಲ್ಲಿ ಎಷ್ಟು ತಣ್ಣಗಿರುತ್ತದೆ ಎಂದರೆ ಅಲ್ಲಿ ಯಾವುದೇ ವಸ್ತುವೂ ಕೊಳೆಯಲಾರದು.  ಹೀಗಿರುವಾಗ, ಕಸ-ಕಡ್ಡಿಗಳನ್ನು ಬೇರ್ಪಡಿಸುವುದು, ಅವುಗಳ ನಿರ್ವಹಣೆ, ಬಹಳ ಮಹತ್ವಪೂರ್ಣ   ಕೆಲಸವಾಗಿರುತ್ತದೆ. ಹೀಗಿರುವಾಗ, ಗ್ಲೇಷಿಯರ್ ಮತ್ತು ಅದರ ಆಸುಪಾಸಿನ ಪ್ರದೇಶಗಳಿಂದ 130 ಟನ್ ಮತ್ತು ಅದಕ್ಕಿಂತ ಹೆಚ್ಚು ಕಸ ವಿಲೇವಾರಿ ಮಾಡುವುದು ಮತ್ತು ಅದರಲ್ಲೂ ಇಲ್ಲಿನ ಸೂಕ್ಷ್ಮ ಪರಿಸರ ವ್ಯವಸ್ಥೆಯ ನಡುವೆ ಬಹಳ ಕಷ್ಟದ ಕೆಲಸ. ಇದು ಎಷ್ಟು ದೊಡ್ಡ ಸೇವೆಯಾಗಿದೆ! ಹಿಮ ಚಿರತೆಗಳಂತಹ ಅಪರೂಪದ ಪ್ರಬೇಧದ ವಾಸಸ್ಥಳವಾಗಿರುವ ಪರಿಸರ-ವ್ಯವಸ್ಥೆ ಇದಾಗಿದೆ. ಇಲ್ಲಿ ibex ಮತ್ತು ಕಂದು ಕರಡಿಯಂತಹ  ಅಪರೂಪದ ಪ್ರಾಣಿಗಳು ಕೂಡಾ ವಾಸಿಸುತ್ತವೆ. ನದಿಗಳು ಮತ್ತು ಶುದ್ಧ ನೀರಿನ ಮೂಲವೇ ಸಿಯಾಚಿನ್ ಹಿಮನದಿ ಎನ್ನುವುದು ನಮಗೆಲ್ಲಾ ತಿಳಿದಿದೆ. ಆದ್ದರಿಂದ ಇಲ್ಲಿ ಸ್ವಚ್ಛತಾ ಅಭಿಯಾನ ನಡೆಸುವುದೆಂದರೆ, ತಗ್ಗು ಪ್ರದೇಶಗಳಲ್ಲಿ ವಾಸಿಸುವವರಿಗೆ, ಹಾಗೂ  ನುಬ್ರಾ ಮತ್ತು ಶ್ಯೋಕ್ ನಂತಹ ನದಿಯ ನೀರನ್ನು ಉಪಯೋಗಿಸುವ ಜನರಿಗೆ ಶುದ್ಧ ನೀರಿನ ಪೂರೈಕೆಯನ್ನು ಖಚಿತಪಡಿಸುವುದು ಎನ್ನುವ ಅರ್ಥವಾಗಿದೆ.

ನನ್ನ ಪ್ರೀತಿಯ ದೇಶಬಾಂಧವರೇ, ಹಬ್ಬ ಎನ್ನುವುದು ನಮ್ಮೆಲ್ಲರ ಜೀವನದಲ್ಲಿ ಹೊಸ ಚೇತನವನ್ನು ಜಾಗೃತಗೊಳಿಸುವ ಸಮಯವಾಗಿದೆ. ದೀಪಾವಳಿಯಲ್ಲಂತೂ ವಿಶೇಷವಾಗಿ ಏನಾದರೂ ಹೊಸದನ್ನು ಖರೀದಿಸುವುದು, ಮಾರುಕಟ್ಟೆಯಿಂದ ಏನಾದರೂ ಕೊಂಡು ತರುವುದು ಪ್ರತಿ ಕುಟುಂಬದಲ್ಲೂ ಹೆಚ್ಚು ಕಡಿಮೆ ಇದ್ದೇ ಇರುತ್ತದೆ.  ಸ್ಥಳೀಯ ವಸ್ತುಗಳನ್ನು ಖರೀದಿಸುವ ಪ್ರಯತ್ನವನ್ನು ನಾವು ಮಾಡೋಣವೆಂದು ನಾನು ಒಮ್ಮೆ ಹೇಳಿದ್ದೆ. ನಮಗೆ ಅಗತ್ಯವಿರುವ ವಸ್ತುಗಳು ನಮ್ಮ ಗ್ರಾಮದಲ್ಲೇ ದೊರೆಯುವ ಹಾಗಿದ್ದಲ್ಲಿ, ತಾಲ್ಲೂಕು ಸ್ಥಳಕ್ಕೆ  ಹೋಗುವ ಅಗತ್ಯವಿಲ್ಲ. ತಾಲ್ಲೂಕಿನಲ್ಲಿ ದೊರೆಯುವ ಹಾಗಿದ್ದಲ್ಲಿ ಜಿಲ್ಲಾ ಕೇಂದ್ರದವರೆಗೆ ಹೋಗಬೇಕಾಗಿಲ್ಲ. ಸ್ಥಳೀಯ ವಸ್ತುಗಳನ್ನು ಖರೀದಿಸಲು ನಾವು ಎಷ್ಟು ಹೆಚ್ಚು ಪ್ರಯತ್ನ ಮಾಡುತ್ತೇವೋ,  ‘ಗಾಂಧಿ 150’ ತನ್ನಷ್ಟಕ್ಕೆ ತಾನು ಒಂದು ಉತ್ತಮ ಅವಕಾಶವಾಗಿಬಿಡುತ್ತದೆ.  ನಮ್ಮ ನೇಕಾರರ ಕೈಗಳಿಂದ ತಯಾರಾದ, ನಮ್ಮ ಖಾದಿ ತಯಾರಕರ ಕೈಗಳಿಂದ ತಯಾರಾದ, ಯಾವುದಾದರೂ ವಸ್ತುವೊಂದನ್ನು ನಾವು ಖರೀದಿಸಬೇಕೆನ್ನುವುದು ನನ್ನ ಆಗ್ರಹವಾಗಿದೆ. ಈ ದೀಪಾವಳಿಯಲ್ಲಿ ಕೂಡಾ, ದೀಪಾವಳಿಗೆ ಮುನ್ನವೇ ನೀವು ಬಹಳಷ್ಟು ಖರೀದಿಸಿರಬಹುದು, ಆದರೆ ದೀಪಾವಳಿಯ ನಂತರ ಖರೀದಿಸಿದಲ್ಲಿ,  ಸ್ವಲ್ಪ ಅಗ್ಗದ ದರದಲ್ಲಿ ದೊರೆಯಬಹುದು ಎಂದು ಆಲೋಚಿಸುವ ಜನರು ಬಹಳಷ್ಟಿರುತ್ತಾರೆ.  ಇನ್ನೂ ಖರೀದಿ ಮಾಡದೇ ಇರುವ ಜನರು ಕೂಡಾ ಬಹಳಷ್ಟಿರುತ್ತಾರೆ. ಹಾಗಿದ್ದಲ್ಲಿ, ದೀಪಾವಳಿಯ ಶುಭಾಶಯಗಳನ್ನು ಹೇಳುವುದರ ಜೊತೆಯಲ್ಲೇ, ನಾವು ಸ್ಥಳೀಯ ವಸ್ತುಗಳನ್ನು ಕೊಳ್ಳೋಣ ಕೂಡಾ ಎಂದು ಆಗ್ರಹಿಸುತ್ತೇನೆ. ನೋಡಿ, ಮಹಾತ್ಮಾ ಗಾಂಧಿಯವರ ಕನಸನ್ನು ಸಾಕಾರಗೊಳಿಸಲು ನಾವೆಲ್ಲರೂ ಎಷ್ಟು ಮಹತ್ವದ ಪಾತ್ರ ನಿರ್ವಹಿಸಬಹುದು. ಈ ದೀಪಾವಳಿಯ ಪವಿತ್ರ ಹಬ್ಬಕ್ಕೆ ನಿಮಗೆ ಮತ್ತೊಮ್ಮೆ ಶುಭ ಕೋರುತ್ತೇನೆ. ನಾವು ದೀಪಾವಳಿಯಂದು ವಿವಿಧ ರೀತಿಯ ಪಟಾಕಿಗಳನ್ನು ಉಪಯೋಗಿಸುತ್ತೇವೆ. ಆದರೆ, ಕೆಲವೊಮ್ಮೆ ಅಜಾಗರೂಕತೆಯಿಂದ ಬೆಂಕಿ ಹೊತ್ತಿಕೊಂಡುಬಿಡುತ್ತದೆ. ಅನೇಕ ಗಾಯಗಳಾಗಿ ಬಿಡುತ್ತವೆ. ನಿಮ್ಮ ಬಗ್ಗೆ ನೀವು ಕಾಳಜಿ ವಹಿಸಿ ಮತ್ತು ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸಿ ಎಂದು ನಾನು ನಿಮ್ಮೆಲ್ಲರಲ್ಲಿ ಆಗ್ರಹಿತ್ತೇನೆ. ನಿಮೆಗೆ ನನ್ನ ಶುಭ ಹಾರೈಕೆಗಳು.

 

ಅನಂತಾನಂತ ಧನ್ಯವಾದ |