Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ವಚ್ಛ ಭಾರತ ದಿನ -2019 ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಯವರ ಭಾಷಣ


ಗುಜರಾತ್ ರಾಜ್ಯಪಾಲರಾದ ಆಚಾರ್ಯ ದೇವವ್ರತ್ ಅವರೇ, ಮುಖ್ಯಮಂತ್ರಿ ವಿಜಯ್ ರೂಪಾನಿ ಅವರೇ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹೋದ್ಯೋಗಿಗಳೇ, ನೈಜೀರಿಯಾ, ಇಂಡೋನೇಷ್ಯಾ ಮತ್ತು ಮಾಲಿ ಸರ್ಕಾರಗಳ ಪ್ರತಿನಿಧಿಗಳೇ, ವಿಶ್ವದ ವಿವಿಧ ದೇಶಗಳ ಮಿಷನ್ ಮುಖ್ಯಸ್ಥರೇ, ದೇಶಾದ್ಯಂತದ ಸಾವಿರಾರು ಸ್ವಚ್ಛಾಗ್ರಾಹಿಗಳೇ, ನನ್ನ ಸರ್ಪಂಚ್ ಸ್ನೇಹಿತರೇ ಮತ್ತು ಸಹೋದರ ಸಹೋದರಿಯರೇ!

 

ನಾನು ಪ್ರಾರಂಭಿಸುವ ಮೊದಲು, ಇಂದು ಸಬರಮತಿ ದಂಡೆಯಲ್ಲಿರುವ ಎಲ್ಲಾ ಸರ್ಪಂಚ್ಗಳ ಮೂಲಕ, ದೇಶದ ಪುರಸಭೆಗಳು ಮತ್ತು ಮಹಾನಗರ ಪಾಲಿಕೆಗಳ ಎಲ್ಲಾ ಆಡಳಿತ ಸದಸ್ಯರಿಗೆ ನಮಸ್ಕರಿಸಲು ನಾನು ಬಯಸುತ್ತೇನೆ; ಏಕೆಂದರೆ ನೀವೆಲ್ಲರೂ ಕಳೆದ ಐದು ವರ್ಷಗಳಲ್ಲಿ ಬಾಪುವಿನ ಕನಸನ್ನು ನನಸಾಗಿಸಲು  ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದ ಪಟ್ಟುಹಿಡಿದು ಪ್ರಯತ್ನಗಳನ್ನು ಮಾಡಿದ್ದೀರಿ.

ಸಬರಮತಿಯ ಈ ಪವಿತ್ರ ದಂಡೆಯಿಂದ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರಿಗೆ ಮತ್ತು ಸರಳತೆಯ ಸಂಕೇತವಾದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಜಿಯವರಿಗೆ ನಾನು ಗೌರವ ಸಲ್ಲಿಸುತ್ತೇನೆ.

 

ಸ್ನೇಹಿತರೇ,

ಪೂಜ್ಯ ಬಾಪು ಅವರ 150 ನೇ ಜಯಂತಿಯ ಪವಿತ್ರ ಸಂದರ್ಭ, ಜೊತೆಗೆ ಸ್ವಚ್ಛ ಭಾರತ ಅಭಿಯಾನದ ಪ್ರಮುಖ ಕಾರ್ಯಕ್ರಮ ಮತ್ತು ಶಕ್ತಿಯ ಹಬ್ಬ, ಅಂದರೆ ಎಲ್ಲೆಡೆ ಗಾರ್ಬಾದ ಪ್ರತಿಧ್ವನಿಯೊಂದಿಗೆ ನವರಾತ್ರಿ; ಇಂತಹ ಅದ್ಭುತ ಮತ್ತು ವಿಶಿಷ್ಟ ಕಾಕತಾಳೀಯವು ವಿರಳವಾಗಿ ಬರುತ್ತದೆ. ದೇಶಾದ್ಯಂತದ ನಮ್ಮ ಸರ್ಪಂಚ್ ಸಹೋದರ ಸಹೋದರಿಯರೇ, ಗಾರ್ಬಾವನ್ನು ನೋಡಲು ನಿಮಗೆ ಅವಕಾಶ ಸಿಕ್ಕಿದೆಯೇ? ನೀವು ಗಾರ್ಬಾ ನೋಡಲು ಹೋಗಿದ್ದಿರಾ?

ಇಡೀ ಜಗತ್ತು ಬಾಪು ಅವರ ಜನ್ಮ ದಿನಾಚರಣೆಯನ್ನು ಆಚರಿಸುತ್ತಿದೆ. ಕೆಲವು ದಿನಗಳ ಹಿಂದೆ ವಿಶ್ವಸಂಸ್ಥೆಯು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡುವ ಮೂಲಕ ಈ ವಿಶೇಷ ಸಂದರ್ಭವನ್ನು ಸ್ಮರಣೀಯಗೊಳಿಸಿತು. ಇಂದೂ ಸಹ ಅಂಚೆ ಚೀಟಿಗಳು ಮತ್ತು ನಾಣ್ಯಗಳನ್ನು ಇಲ್ಲಿ ಬಿಡುಗಡೆ ಮಾಡಲಾಗಿದೆ. ಬಾಪು ಅವರ ಸ್ಫೂರ್ತಿ ಮತ್ತು ಸಂಕಲ್ಪದ ಸ್ಥಳದಿಂದ ನಾನು ಇಡೀ ಜಗತ್ತನ್ನು ಅಭಿನಂದಿಸುತ್ತೇನೆ.

 

ಸಹೋದರ ಸಹೋದರಿಯರೇ,

ನಾನು ಇಲ್ಲಿಗೆ ಬರುವ ಮೊದಲು ಸಬರಮತಿ ಆಶ್ರಮಕ್ಕೆ ಹೋಗಿದ್ದೆ. ನನ್ನ ಜೀವಿತಾವಧಿಯಲ್ಲಿ ಅನೇಕ ಬಾರಿ ಅಲ್ಲಿಗೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿದೆ. ಪ್ರತಿ ಬಾರಿಯೂ ನಾನು ಅಲ್ಲಿ ಬಾಪುವಿನ ಉಪಸ್ಥಿತಿಯನ್ನು ಅನುಭವಿಸುತ್ತಿದ್ದೆ, ಆದರೆ ಇಂದು ನಾನು ಅಲ್ಲಿ ಹೊಸ ಶಕ್ತಿಯನ್ನು ಅನುಭವಿಸಿದೆ. ಸಬರಮತಿ ಆಶ್ರಮದಲ್ಲಿಯೇ ಅವರು ಸ್ವಚ್ಛಾಗ್ರಹ ಮತ್ತು ಸತ್ಯಾಗ್ರಹಕ್ಕೆ ಸಮಗ್ರ ರೂಪ ನೀಡಿದರು. ಈ ಸಬರಮತಿಯ ದಡದಲ್ಲಿ ಮಹಾತ್ಮ ಗಾಂಧೀಜಿಯವರು ಸತ್ಯದೊಂದಿಗೆ ತಮ್ಮ ಪ್ರಯೋಗಗಳನ್ನು ನಡೆಸಿದ್ದರು.

ಸಹೋದರ ಸಹೋದರಿಯರೇ,

ಇಂದು ಸಬರಮತಿಯ ಈ ಸ್ಪೂರ್ತಿದಾಯಕ ತಾಣವು ಸ್ವಚ್ಛಾಗ್ರಹದ ದೊಡ್ಡ ಯಶಸ್ಸಿಗೆ ಸಾಕ್ಷಿಯಾಗಿದೆ. ಇದು ನಮ್ಮೆಲ್ಲರಿಗೂ ಸಂತೋಷ ಮತ್ತು ಹೆಮ್ಮೆಯ ಸಂದರ್ಭವಾಗಿದೆ. ಈ ಕಾರ್ಯಕ್ರಮವನ್ನು ಸಬರಮತಿ ನದಿ ತೀರದಲ್ಲಿ ಆಯೋಜಿಸುವುದು ನನಗೆ ಅಪಾರ ಸಂತೋಷದ ವಿಷಯವಾಗಿದೆ.

 

ಸ್ನೇಹಿತರೇ,

ಇಂದು ಗ್ರಾಮೀಣ ಭಾರತವನ್ನು ಬಯಲು ಶೌಚ ಮುಕ್ತವೆಂದು ಘೋಷಿಸಲಾಗಿದೆ. ಇದು ಶಕ್ತಿ ಮಾತ್ರವಲ್ಲ, ಸ್ವಚ್ಛ ಭಾರತ ಅಭಿಯಾನದ ಯಶಸ್ಸಿನ ಮೂಲವಾಗಿದೆ. ಏಕೆಂದರೆ ಇದು ಸಾರ್ವಜನಿಕರ ಭಾಗವಹಿಸುವಿಕೆಯನ್ನು ಸ್ವಯಂಪ್ರೇರಣೆಯಿಂದ, ಸ್ವಯಂ ಪ್ರೇರಿತ ರೀತಿಯಲ್ಲಿ ಕಂಡಿದೆ. ಪ್ರತಿಯೊಬ್ಬ ದೇಶವಾಸಿಗಳನ್ನು, ವಿಶೇಷವಾಗಿ ಹಳ್ಳಿಗಳಲ್ಲಿ ವಾಸಿಸುವವರನ್ನು, ನಮ್ಮ ಸರ್ಪಂಚರುಗಳನ್ನು ಮತ್ತು ಇಂದು ಎಲ್ಲಾ ಸ್ವಚ್ಛಾಗ್ರಹಿಗಳನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಇಂದು, ಇಲ್ಲಿ ಸ್ವಚ್ಛ ಭಾರತ ಪ್ರಶಸ್ತಿಗಳನ್ನು ಪಡೆದ ಸ್ವಚ್ಛಾ ಗ್ರಹಿಗಳನ್ನು ಕೂಡ ನಾನು ಅಭಿನಂದಿಸುತ್ತೇನೆ.

 

ಸ್ನೇಹಿತರೇ,

ಇತಿಹಾಸವು ಪುನರಾವರ್ತನೆಯಾಗುತ್ತಿದೆ ಎಂದು ಇಂದು ನನಗೆ ನಿಜವಾಗಿಯೂ ಅನ್ನಿಸಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಬಾಪು ಅವರ ಕರೆಯ ಮೇರೆಗೆ ಲಕ್ಷಾಂತರ ಭಾರತೀಯರು ಸತ್ಯಾಗ್ರಹದ ಹಾದಿಯನ್ನು ಅನುಸರಿಸಲು ಹೊರಬಂದಂತೆಯೇ, ಅದೇ ರೀತಿಯಲ್ಲಿ ಕೋಟಿಗಟ್ಟಲೆ ದೇಶವಾಸಿಗಳು ಸ್ವಚ್ಛತೆಗೆ ತಮ್ಮ ಸಂಪೂರ್ಣ ಬೆಂಬಲವನ್ನು ನೀಡಿದರು. ಐದು ವರ್ಷಗಳ ಹಿಂದೆ, ನಾನು ಕೆಂಪು ಕೋಟೆಯಿಂದ ಸ್ವಚ್ಛ ಭಾರತಕ್ಕಾಗಿ ಮನವಿ ಮಾಡಿದಾಗ, ಆಗ ನಮಗೆ ಕೇವಲ ಸಾರ್ವಜನಿಕರ ವಿಶ್ವಾಸ ಮತ್ತು ಬಾಪು ಅವರ ಅಮರ ಸಂದೇಶವಿತ್ತು. ಜಗತ್ತಿನಲ್ಲಿ ನಾವು ನೋಡಲು ಬಯಸುವ ಬದಲಾವಣೆಗಳನ್ನು ಮೊದಲು ನಮ್ಮಲ್ಲಿಯೇ ತರಬೇಕು ಎಂದು ಬಾಪು ಹೇಳುತ್ತಿದ್ದರು.

ಈ ಮಂತ್ರವನ್ನು ಅನುಸರಿಸಿ, ನಾವೆಲ್ಲರೂ ಪೊರಕೆ ಎತ್ತಿಕೊಂಡು ಹೊರಟೆವು. ವಯಸ್ಸು, ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನವನ್ನು ಲೆಕ್ಕಿಸದೆ, ಸ್ವಚ್ಛತೆ, ಘನತೆ ಮತ್ತು ಗೌರವದ ಈ ‘ಯಜ್ಞ’ದಲ್ಲಿ ಎಲ್ಲರೂ ಕೊಡುಗೆ ನೀಡಿದ್ದಾರೆ.

ಮದುವೆಗೆ ಮುಂಚಿತವಾಗಿ ಶೌಚಾಲಯ ಇರಬೇಕೆಂಬ ಷರತ್ತನ್ನು ಮಗಳು ಇಟ್ಟರೆ, ಶೌಚಾಲಯವು ‘ಇ ಜ್ಜತ್ ಘರ್’ ಸ್ಥಾನಮಾನವನ್ನು ಪಡೆಯುತ್ತದೆ. ಒಂದು ಕಾಲದಲ್ಲಿ ಮಾತನಾಡಲು ಹಿಂಜರಿಯುತ್ತಿದ್ದ ವಿಷಯವಾಗಿದ್ದ ಶೌಚಾಲಯವು ದೇಶದ ಚಿಂತನೆಯ ಪ್ರಮುಖ ಭಾಗವಾಗಿದೆ. ಸ್ವಚ್ಛತೆಯ ಈ ಬೃಹತ್ ಅಭಿಯಾನವು ಬಾಲಿವುಡ್ನಿಂದ ಆಟದ ಮೈದಾನದವರೆಗಿನ ಎಲ್ಲರನ್ನು ಸಂಪರ್ಕಿಸಿದೆ, ಪ್ರೇರೇಪಿಸಿದೆ ಮತ್ತು ಪ್ರೋತ್ಸಾಹಿಸಿದೆ.

 

ಸ್ನೇಹಿತರೇ,

ಇಂದು ನಮ್ಮ ಯಶಸ್ಸಿನಿಂದ ಜಗತ್ತು ಆಶ್ಚರ್ಯಚಕಿತವಾಗಿದೆ. ಇಂದು ಇಡೀ ಜಗತ್ತು ಇದಕ್ಕಾಗಿ ನಮಗೆ ಬಹುಮಾನ ನೀಡುತ್ತಿದೆ ಮತ್ತು ನಮಗೆ ಗೌರವ ನೀಡುತ್ತಿದೆ. 60 ತಿಂಗಳಲ್ಲಿ 60 ಕೋಟಿಗೂ ಹೆಚ್ಚು ಜನರಿಗೆ ಶೌಚಾಲಯದ ಸೌಲಭ್ಯವನ್ನು ಒದಗಿಸಲಾಗಿದೆ ಮತ್ತು 11 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದರೆ ಆಶ್ಚರ್ಯವಾಗುತ್ತದೆ. ಆದರೆ ಯಾವುದೇ ಚಿಂತೆ ಇಲ್ಲದೆ ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ನೋಡಿದಾಗ ಯಾವುದೇ ಅಂಕಿಅಂಶಗಳು, ಯಾವುದೇ ಹೊಗಳಿಕೆಗಳು ಅಥವಾ ಯಾವುದೇ ಗೌರವಗಳಿಗಿಂತ ಹೆಚ್ಚಿನ ತೃಪ್ತಿ ನನಗೆ ಇದೆ.

ಕೋಟಿಗಟ್ಟಲೆ ತಾಯಂದಿರು ಮತ್ತು ಸಹೋದರಿಯರು ಈಗ ಕತ್ತಲೆಗಾಗಿ ಕಾಯುವ ಅಸಹನೀಯ ನೋವಿನಿಂದ ಮುಕ್ತರಾಗಿದ್ದಾರೆ ಎಂದು ನನಗೆ ತೃಪ್ತಿ ಇದೆ. ತೀವ್ರ ಕಾಯಿಲೆಗಳ ಪರಿಣಾಮವಾಗಿ ಸಾಯುತ್ತಿದ್ದ ಲಕ್ಷಾಂತರ ಮುಗ್ಧ ಜನರ ಜೀವಗಳನ್ನು ಈಗ ಉಳಿಸಲಾಗಿದೆ ಎಂದು ನನಗೆ ತೃಪ್ತಿ ಇದೆ. ಸ್ವಚ್ಛತೆಯಿಂದಾಗಿ, ಬಡವರಿಗೆ ತೊಂದರೆಯಾಗುವ ರೋಗಗಳ ಚಿಕಿತ್ಸೆಯ ವೆಚ್ಚವು ಈಗ ಕಡಿಮೆಯಾಗಿದೆ ಎಂದು ನನಗೆ ತೃಪ್ತಿ ಇದೆ. ಈ ಅಭಿಯಾನವು ಗ್ರಾಮೀಣ ಪ್ರದೇಶ ಮತ್ತು ಬುಡಕಟ್ಟು ಪ್ರದೇಶದ ಜನರಿಗೆ ಹೊಸ ಉದ್ಯೋಗಾವಕಾಶಗಳನ್ನು ನೀಡಿದೆ ಎಂದು ನನಗೆ ತೃಪ್ತಿ ಇದೆ. ಹಿಂದೆ ಗಾರೆ ಮೇಸ್ತ್ರಿಗಳೆಂದರೆ ಗಂಡಸರು ಮಾತ್ರ; ಆದರೆ ಈಗ ಸಹೋದರಿಯರಿಗೆ ಗಾರೆ ಮೇಸ್ತ್ರಿಗಳಾಗಿ ಕೆಲಸ ಮಾಡಲು ಅವಕಾಶ ನೀಡಲಾಗಿದೆ.

 

ಸಹೋದರ ಸಹೋದರಿಯರೇ,

ಸ್ವಚ್ಛ ಭಾರತ ಅಭಿಯಾನ ಜೀವ ಉಳಿಸುವದು ಎಂದು ಕೂಡ ಸಾಬೀತುಪಡಿಸುತ್ತಿದೆ ಮತ್ತು ಜೀವನ ಮಟ್ಟವನ್ನು ಹೆಚ್ಚಿಸಲು ಸಹ ಕೆಲಸ ಮಾಡುತ್ತಿದೆ. ಯುನಿಸೆಫ್ನ ಅಂದಾಜಿನ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಸ್ವಚ್ಛ ಭಾರತ್ನಿಂದ ಭಾರತದ ಆರ್ಥಿಕತೆಯ ಮೇಲೆ 20 ಲಕ್ಷ ಕೋ. ರೂ. ಸಕಾರಾತ್ಮಕ ಪರಿಣಾಮ ಉಂಟಾಗಿದೆ. ಇದು ಭಾರತದಲ್ಲಿ 75 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ, ಅದರಲ್ಲಿ ಹೆಚ್ಚಿನವುಗಳನ್ನು ಗ್ರಾಮಗಳ ಸಹೋದರಿಯರು ಮತ್ತು ಸಹೋದರರು ಪಡೆದಿದ್ದಾರೆ.

ಇದಲ್ಲದೆ, ಇದು ಮಕ್ಕಳ ಶಿಕ್ಷಣದ ಮಟ್ಟದಲ್ಲಿ, ನಮ್ಮ ಉತ್ಪಾದಕತೆಯ ಮೇಲೆ ಮತ್ತು ಉದ್ಯಮಶೀಲತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಇದು ದೇಶದ ಹೆಣ್ಣುಮಕ್ಕಳ ರಕ್ಷಣೆ ಮತ್ತು ಸಬಲೀಕರಣದ ಪರಿಸ್ಥಿತಿಯಲ್ಲಿ ಅದ್ಭುತ ಬದಲಾವಣೆಯನ್ನು ತಂದಿದೆ. ಪೂಜ್ಯ ಮಹಾತ್ಮ ಗಾಂಧಿಯವರು ಗ್ರಾಮ, ಬಡವರು ಮತ್ತು ಮಹಿಳೆಯರ ಸ್ವಾವಲಂಬನೆ ಮತ್ತು ಸಬಲೀಕರಣವನ್ನು ಉತ್ತೇಜಿಸಲು ಇಂತಹ ಮಾದರಿಯನ್ನು ಬಯಸಿದ್ದರು. ಇದು ಮಹಾತ್ಮ ಗಾಂಧಿಯವರ ಸ್ವರಾಜ್ನ ತಿರುಳಾಗಿತ್ತು. ಅದಕ್ಕಾಗಿ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು.

 

ಸ್ನೇಹಿತರೇ,

ಆದರೆ ಈಗ ಪ್ರಶ್ನೆ ಏನೆಂದರೆ- ನಾವು ಏನನ್ನು ಸಾಧಿಸಿದ್ದರೂ ಅದು ಸಾಕೇ? ಉತ್ತರವು ಸರಳ ಮತ್ತು ಸ್ಪಷ್ಟವಾಗಿದೆ. ಇಂದು ನಾವು ಸಾಧಿಸಿದ್ದು ಕೇವಲ ಒಂದು ಹಂತ, ಕೇವಲ ಒಂದು ಹಂತ. ಸ್ವಚ್ಛ ಭಾರತದತ್ತ ನಮ್ಮ ಪ್ರಯಾಣ ಅಡೆತಡೆಯಿಲ್ಲದೆ ಮುಂದುವರಿಯುತ್ತದೆ.

ಈಗ ನಾವು ಶೌಚಾಲಯಗಳನ್ನು ನಿರ್ಮಿಸಿದ್ದೇವೆ ಮತ್ತು ಶೌಚಾಲಯಗಳನ್ನು ಬಳಸುವ ಅಭ್ಯಾಸವನ್ನು ರೂಪಿಸಲು ಜನರನ್ನು ಪ್ರೋತ್ಸಾಹಿಸುತ್ತೇವೆ. ಈಗ ನಾವು ದೇಶದ ದೊಡ್ಡ ಸಂಖ್ಯೆಯಲ್ಲಿ ಈ ಬದಲಾವಣೆಯನ್ನು ಶಾಶ್ವತ ಸಂಬಂಧವನ್ನಾಗಿ ಮಾಡಬೇಕಾಗಿದೆ. ಸರ್ಕಾರಗಳು, ಸ್ಥಳೀಯ ಆಡಳಿತಗಳು ಅಥವಾ ಗ್ರಾಮ ಪಂಚಾಯಿತಿಗಳೇ ಆಗಿರಲಿ, ಶೌಚಾಲಯವನ್ನು ಸರಿಯಾಗಿ ಬಳಸಲಾಗುತ್ತಿದೆಯೇ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಇನ್ನೂ ಅದರಿಂದ ಹೊರಗುಳಿದವರನ್ನು ಇದರ ಅಡಿಯಲ್ಲಿ ತರಬೇಕಾಗುತ್ತದೆ.

 

ಸಹೋದರ ಸಹೋದರಿಯರೇ,

ಸರ್ಕಾರ ಇದೀಗ ಪ್ರಾರಂಭಿಸಿರುವ ಜಲ ಜೀವನ್ ಮಿಷನ್ ಕೂಡ ಈ ವಿಷಯದಲ್ಲಿ ಸಹಾಯ ಮಾಡುತ್ತದೆ. ನಮ್ಮ ಮನೆಗಳು, ಹಳ್ಳಿಗಳು ಮತ್ತು ವಸಾಹತುಗಳಲ್ಲಿನ ನೀರಿನ ಮರುಬಳಕೆಗಾಗಿ ನೀರಿನ ಮರುಪೂರಣಕ್ಕಾಗಿ ನಾವು ಏನು ಬೇಕಾದರೂ ಮಾಡಬೇಕು. ನಾವು ಇದನ್ನು ಮಾಡಲು ಸಾಧ್ಯವಾದರೆ, ಜನರು ಶೌಚಾಲಯವನ್ನು ನಿಯಮಿತವಾಗಿ ಮತ್ತು ಶಾಶ್ವತವಾಗಿ ಬಳಸುವುದನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಸಹಾಯ ಮಾಡುತ್ತದೆ. ಜಲ-ಜೀವನ್ ಮಿಷನ್ಗಾಗಿ ಮೂರೂವರೆ ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಸರ್ಕಾರ ನಿರ್ಧರಿಸಿದೆ. ಆದರೆ ದೇಶದ ಜನರ ಸಕ್ರಿಯ ಭಾಗವಹಿಸುವಿಕೆ ಇಲ್ಲದೆ ಈ ಕಾರ್ಯವನ್ನು ಸಾಧಿಸುವುದು ಕಷ್ಟ.

 

ಸ್ನೇಹಿತರೇ,

ನೈರ್ಮಲ್ಯ, ಪರಿಸರ ಸಂರಕ್ಷಣೆ ಮತ್ತು ಜೀವಿಗಳ ರಕ್ಷಣೆ – ಈ ಮೂರು ವಿಷಯಗಳು ಮಹಾತ್ಮ ಗಾಂಧಿಯವರ ನೆಚ್ಚಿನ ವಿಷಯಗಳಾಗಿದ್ದವು. ಈ ಮೂರಕ್ಕೂ ಪ್ಲಾಸ್ಟಿಕ್ ದೊಡ್ಡ ಅಪಾಯವಾಗಿದೆ. ಆದ್ದರಿಂದ, 2022 ರ ವೇಳೆಗೆ ದೇಶವನ್ನು ಏಕ-ಬಳಕೆಯ ಪ್ಲಾಸ್ಟಿಕ್ನಿಂದ ಮುಕ್ತಗೊಳಿಸುವ ಗುರಿಯನ್ನು ನಾವು ಸಾಧಿಸಬೇಕಾಗಿದೆ. ಕಳೆದ ಮೂರು ವಾರಗಳಲ್ಲಿ, ಇಡೀ ದೇಶವು ಸ್ವಚ್ಛತಾ ಅಭಿಯಾನದ ಮೂಲಕ ಇದಕ್ಕೆ ಸಾಕಷ್ಟು ಆವೇಗವನ್ನು ನೀಡಿದೆ. ಈ ಅವಧಿಯಲ್ಲಿ ಸುಮಾರು 20 ಸಾವಿರ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ ಎಂದು ನನಗೆ ತಿಳಿಸಲಾಗಿದೆ. ಅದೇ ಅವಧಿಯಲ್ಲಿ, ಪ್ಲಾಸ್ಟಿಕ್ ಕೈ ಚೀಲಗಳ ಬಳಕೆ ತುಂಬಾ ವೇಗವಾಗಿ ಕಡಿಮೆಯಾಗುತ್ತಿದೆ ಎಂಬುದನ್ನೂ ಸಹ ಕಾಣಬಹುದು.

ಇಂದು, ದೇಶಾದ್ಯಂತ ಕೋಟ್ಯಂತರ ಜನರು ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ಬಳಸದಿರಲು ನಿರ್ಧರಿಸಿದ್ದಾರೆ, ಅಂದರೆ ನಾವು ಒಮ್ಮೆ ಬಳಸಿ ನಂತರ ಅದನ್ನು ಎಸೆಯುವ ಪ್ಲಾಸ್ಟಿಕ್. ನಾವು ದೇಶವನ್ನು ಅಂತಹ ಪ್ಲಾಸ್ಟಿಕ್ನಿಂದ ಮುಕ್ತಗೊಳಿಸಬೇಕು. ಇದರಿಂದ ಪರಿಸರಕ್ಕೆ ಪ್ರಯೋಜನಕಾರಿಯಾಗುತ್ತದೆ. ನಮ್ಮ ನಗರಗಳ ರಸ್ತೆಗಳು ಮತ್ತು ಒಳಚರಂಡಿಗಳು ಕಟ್ಟಿಕೊಳ್ಳುವ ದೊಡ್ಡ ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ನಮ್ಮ ಜಾನುವಾರು ಮತ್ತು ಕಡಲ ಜೀವಿಗಳನ್ನೂ ಸಹ ರಕ್ಷಿಸುತ್ತದೆ.

 

ಸಹೋದರ ಸಹೋದರಿಯರೇ,

ನಮ್ಮ ಆಂದೋಲನದ ಪ್ರಮುಖ ತಿರುಳೆಂದರೆ ವರ್ತನೆಯ ಬದಲಾವಣೆ ಎಂದು ನಾನು ಪುನರುಚ್ಚರಿಸಲು ಬಯಸುತ್ತೇನೆ. ಈ ಬದಲಾವಣೆಯು ಮೊದಲು ಸ್ವಯಂ-ಸಾಕ್ಷಾತ್ಕಾರದ ಮೂಲಕ ಪ್ರಾರಂಭವಾಗುತ್ತದೆ. ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಜಿಯವರ ಜೀವನದಿಂದ ನಾವು ಈ ಪಾಠವನ್ನು ಕಲಿಯುತ್ತೇವೆ.

ದೇಶವು ತೀವ್ರ ಆಹಾರ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ, ಶಾಸ್ತ್ರಿಜಿ ದೇಶವಾಸಿಗಳಿಗೆ ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸುವಂತೆ ಕರೆ ನೀಡಿದರು. ಬದಲಾವಣೆಯನ್ನು ತಮ್ಮ ಕುಟುಂಬದಿಂದಲೇ ಪ್ರಾರಂಭಿಸಿದರು. ಸ್ವಚ್ಛತೆಯ ಈ ಪ್ರಯಾಣದಲ್ಲಿ ಇದು ನಮಗೆ ಇರುವ ಏಕೈಕ ಮಾರ್ಗವಾಗಿದೆ, ಅದರ ಮೇಲೆ ನಾವು ಗುರಿಯನ್ನು ತಲುಪಬೇಕು.

 

ಸಹೋದರ ಸಹೋದರಿಯರೇ,

ಇಂದು ಇಡೀ ಜಗತ್ತು ಸ್ವಚ್ಛ ಭಾರತ ಅಭಿಯಾನದ ಈ ಮಾದರಿಯಿಂದ ಕಲಿಯಲು ಮತ್ತು ಅದನ್ನು ಅಳವಡಿಸಿಕೊಳ್ಳಲು ಬಯಸಿದೆ. ಕೆಲವು ದಿನಗಳ ಹಿಂದೆ, ಅಮೆರಿಕದಲ್ಲಿ ಭಾರತಕ್ಕೆ ಗ್ಲೋಬಲ್ ಗೋಲ್ ಕೀಪರ್ ಪ್ರಶಸ್ತಿ ನೀಡಿದಾಗ, ಭಾರತದ ಯಶಸ್ಸು ಇಡೀ ಜಗತ್ತಿಗೆ ತಿಳಿಯಿತು.

ವಿಶ್ವಸಂಸ್ಥೆಯಲ್ಲಿ ಭಾರತವು ತನ್ನ ಅನುಭವಗಳನ್ನು ಇತರ ದೇಶಗಳೊಂದಿಗೆ ಹಂಚಿಕೊಳ್ಳಲು ಯಾವಾಗಲೂ ಸಿದ್ಧವಾಗಿದೆ ಎಂದು ನಾನು ಹೇಳಿದ್ದೆ. ಇಂದು ನಮ್ಮೊಂದಿಗೆ ನೈಜೀರಿಯಾ, ಇಂಡೋನೇಷ್ಯಾ ಮತ್ತು ಮಾಲಿ ಸರ್ಕಾರಗಳ ಪ್ರತಿನಿಧಿಗಳು ಇದ್ದಾರೆ. ಸ್ವಚ್ಛತೆ ಮತ್ತು ನೈರ್ಮಲ್ಯಕ್ಕಾಗಿ ಭಾರತವು ನಿಮ್ಮೊಂದಿಗೆ ಸಹಕರಿಸಲು ಸಂತೋಷವಾಗುತ್ತದೆ.

 

ಸ್ನೇಹಿತರೇ,

ಮಹಾತ್ಮ ಗಾಂಧಿಯವರು ದೇಶಕ್ಕೆ ಸತ್ಯ, ಅಹಿಂಸೆ, ಸತ್ಯಾಗ್ರಹ ಮತ್ತು ಸ್ವಾವಲಂಬನೆಯ ಹಾದಿಯನ್ನು ತೋರಿಸಿದ್ದರು. ಇಂದು ನಾವು ಅದೇ ಮಾರ್ಗವನ್ನು ಅನುಸರಿಸುತ್ತಿದ್ದೇವೆ ಮತ್ತು ಸ್ವಚ್ಛ, ಆರೋಗ್ಯಕರ, ಸಮೃದ್ಧ ಮತ್ತು ಬಲವಾದ ನವಭಾರತವನ್ನು ನಿರ್ಮಿಸುವಲ್ಲಿ ತೊಡಗಿದ್ದೇವೆ. ಪೂಜ್ಯ ಬಾಪು ನೈರ್ಮಲ್ಯವನ್ನು ಬಹುಮುಖ್ಯವೆಂದು ಪರಿಗಣಿಸಿದ್ದರು. ನಿಜವಾದ ಶಿಷ್ಯನಂತೆ, ದೇಶದ ಗ್ರಾಮೀಣ ಪ್ರದೇಶವು ಇಂದು ಸ್ವಚ್ಛ ಭಾರತದ ಕೆಲಸದ ಮೂಲಕ ಅವನಿಗೆ ನಮಸ್ಕರಿಸುತ್ತಿದೆ. ಗಾಂಧೀಜಿಯವರು ಆರೋಗ್ಯವನ್ನು ನಿಜವಾದ ಸಂಪತ್ತು ಎಂದು ಪರಿಗಣಿಸಿದ್ದರು ಮತ್ತು ದೇಶದ ಪ್ರತಿಯೊಬ್ಬ ನಾಗರಿಕರು ಆರೋಗ್ಯವಾಗಿರಬೇಕು ಎಂದು ಬಯಸಿದ್ದರು. ಯೋಗ ದಿನ, ಆಯುಷ್ಮಾನ್ ಭಾರತ್ ಮತ್ತು ಫಿಟ್ ಇಂಡಿಯಾ ಆಂದೋಲನದ ಮೂಲಕ ಈ ಆಲೋಚನೆಯನ್ನು ಈ ದೇಶದಲ್ಲಿ ಆಚರಣೆಗೆ ತರಲು ನಾವು ಪ್ರಯತ್ನಿಸುತ್ತಿದ್ದೇವೆ.

ಗಾಂಧೀಜಿಯವರಿಗೆ ‘ವಸುದೈವ ಕುಟುಂಬಕಂ’ ಮೇಲೆ ನಂಬಿಕೆ ಇತ್ತು. ಈಗ ಭಾರತವು ತನ್ನ ಹೊಸ ಯೋಜನೆಗಳು ಮತ್ತು ಪರಿಸರದ ಬದ್ಧತೆಯ ಮೂಲಕ ಅನೇಕ ಸವಾಲುಗಳ ವಿರುದ್ಧ ಹೋರಾಡಲು ಜಗತ್ತಿಗೆ ಸಹಾಯ ಮಾಡುತ್ತಿದೆ. ಬಾಪು ಅವರ ಕನಸು ಸ್ವತಂತ್ರ ಮತ್ತು ಆತ್ಮವಿಶ್ವಾಸದ ಭಾರತವಾಗಿತ್ತು. ಇಂದು ನಾವು ಈ ಕನಸುಗಳನ್ನು ಮೇಕ್ ಇನ್ ಇಂಡಿಯಾ, ಸ್ಟಾರ್ಟ್ಅಪ್ ಇಂಡಿಯಾ ಮತ್ತು ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಗಳೊಂದಿಗೆ ಈಡೇರಿಸುವಲ್ಲಿ ತೊಡಗಿದ್ದೇವೆ.

ಗಾಂಧೀಜಿಯವರ ಸಂಕಲ್ಪವು ಪ್ರತಿ ಹಳ್ಳಿಯು ಸ್ವಾವಲಂಬಿಯಾಗಿರುವ ಭಾರತವಾಗಿತ್ತು. ರಾಷ್ಟ್ರೀಯ ಗ್ರಾಮ ಸ್ವರಾಜ್ ಮೂಲಕ ನಾವು ಈ ನಿರ್ಣಯವನ್ನು ಈಡೇರಿಸುತ್ತಿದ್ದೇವೆ.

ಸಮಾಜದ ಅತ್ಯಂತ ಕೆಳಮಟ್ಟದ ಕೊನೆಯ ವ್ಯಕ್ತಿಗಾಗಿ ಪ್ರತಿಯೊಂದು ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಗಾಂಧೀಜಿಯವರು ಮಾತನಾಡುತ್ತಿದ್ದರು. ನಮ್ಮಲ್ಲಿ ಇಂದು ಉಜ್ವಲ, ಪ್ರಧಾನ್ ಮಂತ್ರಿ ಆವಾಸ್ ಯೋಜನೆ, ಜನ ಧನ್ ಯೋಜನೆ, ಸೌಭಾಗ್ಯ ಯೋಜನೆ ಮತ್ತು ಸ್ವಚ್ಛ ಭಾರತ್ ಅಭಿಯಾನದಂತಹ ಯೋಜನೆಗಳಿವೆ. ಈ ಎಲ್ಲಾ ಯೋಜನೆಗಳ ಮೂಲಕ, ನಾವು ಅವರ ಮಂತ್ರವನ್ನು ವ್ಯವಸ್ಥೆಯ ಭಾಗವಾಗಿಸಿದ್ದೇವೆ.

ತಂತ್ರಜ್ಞಾನವನ್ನು ಬಳಸಿಕೊಂಡು ಜನರ ಜೀವನವನ್ನು ಸುಲಭಗೊಳಿಸುವ ಬಗ್ಗೆ ಪೂಜ್ಯ ಬಾಪು ಮಾತನಾಡಿದ್ದರು. ಆಧಾರ್, ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್, ಡಿಜಿಟಲ್ ಇಂಡಿಯಾ, ಭೀಮ್ ಆ್ಯಪ್ ಮತ್ತು ಡಿಜಿ ಲಾಕರ್ ಮೂಲಕ ದೇಶದ ಜನರ ಜೀವನವನ್ನು ಸುಲಭಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ.

 

ಸ್ನೇಹಿತರೇ,

ಮಹಾತ್ಮ ಗಾಂಧಿ ಅವರು ಭಾರತವನ್ನು ಅಭಿವೃದ್ಧಿಪಡಿಸಬೇಕೆಂದು ಬಯಸಿದ್ದರು, ಇದರಿಂದ ಇಡೀ ಪ್ರಪಂಚವು ಅದರ ಲಾಭವನ್ನು ಪಡೆದುಕೊಳ್ಳುತ್ತದೆ. ಒಬ್ಬ ರಾಷ್ಟ್ರೀಯತಾವಾದಿಯಾಗದೆ ಒಬ್ಬ ವಿಶ್ವ ವ್ಯಕ್ತಿಯಾಗಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ಗಾಂಧೀಜಿಯವರು ಸ್ಪಷ್ಟವಾಗಿ ಹೊಂದಿದ್ದರು. ಅಂದರೆ, ನಾವು ಮೊದಲು ನಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಬೇಕು, ಆಗ ಮಾತ್ರ ನಾವು ಇಡೀ ಜಗತ್ತಿಗೆ ಸಹಾಯ ಮಾಡಬಹುದು. ಇಂದು ಭಾರತವು ರಾಷ್ಟ್ರೀಯತೆಯ ಈ ಮನೋಭಾವದಿಂದ ಮುಂದುವರಿಯುತ್ತಿದೆ.

ಬಾಪು ಅವರ ಕನಸಿನ ಭಾರತ; ನವಭಾರತವನ್ನು ನಿರ್ಮಿಸಲಾಗುತ್ತಿದೆ. ಬಾಪು ಅವರ ಕನಸಿನ ಭಾರತ – ಅದು ಸ್ವಚ್ಛ ವಾಗಿರುತ್ತದೆ ಮತ್ತು ಪರಿಸರವನ್ನು ಸಂರಕ್ಷಿಸುತ್ತದೆ.

ಬಾಪು ಅವರ ಕನಸಿನ ಭಾರತ; ಅಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯವಂತನಾಗಿರುತ್ತಾನೆ. ಬಾಪು ಅವರ ಕನಸಿನ ಭಾರತ; ಅಲ್ಲಿ ಪ್ರತಿ ತಾಯಿ ಮತ್ತು ಪ್ರತಿ ಮಗುವನ್ನು ಪೋಷಿಸಲಾಗುತ್ತದೆ.

ಬಾಪು ಅವರ ಕನಸಿನ ಭಾರತ; – ಅಲ್ಲಿ ಪ್ರತಿಯೊಬ್ಬ ನಾಗರಿಕನು ಸುರಕ್ಷಿತವಾಗಿರುತ್ತಾನೆ. ಬಾಪು ಅವರ ಕನಸಿನ ಭಾರತ; ಅದು ತಾರತಮ್ಯದಿಂದ ಮುಕ್ತವಾಗಿರುತ್ತದೆ ಮತ್ತು ಸಾಮರಸ್ಯದಿಂದ ಕೂಡಿರುತ್ತದೆ.

ಬಾಪು ಅವರ ಕನಸಿನ ಭಾರತ – ಅದು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್’ ಆದರ್ಶವನ್ನು ಅನುಸರಿಸುತ್ತದೆ. ಬಾಪು ಅವರ ರಾಷ್ಟ್ರೀಯತೆಯ ಈ ಎಲ್ಲಾ ಅಂಶಗಳು ಇಡೀ ಜಗತ್ತಿಗೆ ಸೂಕ್ತವಾಗುತ್ತವೆ ಮತ್ತು ಸ್ಫೂರ್ತಿಯ ಮೂಲವಾಗುತ್ತವೆ.

ಮಾನವೀಯತೆಗಾಗಿ, ರಾಷ್ಟ್ರಪಿತನ ಮೌಲ್ಯಗಳನ್ನು ಪುನಃ ಸ್ಥಾಪಿಸಲು ಮತ್ತು ರಾಷ್ಟ್ರಕ್ಕಾಗಿ ಪ್ರತಿಯೊಂದು ಸಂಕಲ್ಪವನ್ನು ಪೂರೈಸಲು ಪ್ರತಿಯೊಬ್ಬ ಭಾರತೀಯನೂ ಒಂದು ನಿರ್ಣಯವನ್ನು ಮಾಡೋಣ.

ಇಂದು, ನಾನು ‘ಒಬ್ಬ ವ್ಯಕ್ತಿ, ಒಂದು ಸಂಕಲ್ಪ’ಕ್ಕಾಗಿ ದೇಶವನ್ನು ಒತ್ತಾಯಿಸುತ್ತೇನೆ. ದೇಶಕ್ಕಾಗಿ ಯಾವುದೇ ಸಂಕಲ್ಪವನ್ನು ಮಾಡಿ, ಅದು ದೇಶಕ್ಕೆ ಉಪಯುಕ್ತವಾಗಬೇಕು. ಇದು ದೇಶದ ಮತ್ತು ಸಮಾಜದ ಕಲ್ಯಾಣಕ್ಕಾಗಿ ಒಂದು ಸಂಕಲ್ಪವಾಗಬೇಕು. ಕನಿಷ್ಠ ಒಂದು ಸಂಕಲ್ಪವನ್ನು ತೆಗೆದುಕೊಂಡು ನಿಮ್ಮ ಕರ್ತವ್ಯಗಳ ಬಗ್ಗೆ ಮತ್ತು ರಾಷ್ಟ್ರದ ಬಗೆಗಿನ ನಿಮ್ಮ ಕಟ್ಟುಪಾಡುಗಳ ಬಗ್ಗೆ ಯೋಚಿಸುವಂತೆ ನಾನು ನಿಮ್ಮನ್ನು ಕೋರುತ್ತೇನೆ.

ಕರ್ತವ್ಯದ ಹಾದಿಯಲ್ಲಿ ನಡೆಯುವುದು, 130 ಕೋಟಿ ಪ್ರಯತ್ನಗಳು ಮತ್ತು 130 ಕೋಟಿ ಸಂಕಲ್ಪಗಳ ಬಲವು ದೇಶಕ್ಕೆ ತುಂಬಾ ಸಹಾಯ ಮಾಡುತ್ತದೆ. ಇಂದಿನಿಂದ ಪ್ರಾರಂಭಿಸಿ, ಮುಂದಿನ ಒಂದು ವರ್ಷ ನಾವು ಈ ದಿಕ್ಕಿನಲ್ಲಿ ನಿರಂತರವಾಗಿ ಕೆಲಸ ಮಾಡಬೇಕು. ಒಂದು ವರ್ಷ ಕೆಲಸ ಮಾಡಿದ ನಂತರ, ಇದು ನಮ್ಮ ಜೀವನದ ನಿರ್ದೇಶನ ಮತ್ತು ನಮ್ಮ ಜೀವನ ವಿಧಾನವಾದರೆ, ಅದು ನಾವು ಬಾಪುವಿಗೆ ಸಲ್ಲಿಸುವ ನಿಜವಾದ ಗೌರವವಾಗಿರುತ್ತದೆ.

ಈ ವಿನಂತಿ ಮತ್ತು ಮಾತುಗಳೊಂದಿಗೆ, ನಾನು ಇನ್ನೊಂದು ವಿಷಯವನ್ನು ಹೇಳಲು ಬಯಸುತ್ತೇನೆ – ಸಾಧಿಸಿದ ಯಶಸ್ಸು ಯಾವುದೇ ಸರ್ಕಾರದ ಯಶಸ್ಸಲ್ಲ.

ಸಾಧಿಸಿದ ಯಶಸ್ಸು ಯಾವುದೇ ಪ್ರಧಾನ ಮಂತ್ರಿಯ ಯಶಸ್ಸಲ್ಲ. ಸಾಧಿಸಿದ ಯಶಸ್ಸು ಯಾವುದೇ ಮುಖ್ಯಮಂತ್ರಿಯ ಯಶಸ್ಸಲ್ಲ.

130 ಕೋಟಿ ನಾಗರಿಕರ ಪ್ರಯತ್ನದಿಂದಾಗಿ ಈ ಯಶಸ್ಸನ್ನು ಸಾಧಿಸಲಾಗಿದೆ. ಸಮಾಜದ ಹಿರಿಯರು ಕಾಲಕಾಲಕ್ಕೆ ನಾಯಕತ್ವ ಮತ್ತು ಮಾರ್ಗದರ್ಶನ ನೀಡುತ್ತಿರುವುದರಿಂದ ಇದು ಸಾಧ್ಯವಾಯಿತು. ನಾನು ನೋಡಿದ್ದೇನೆ, ಸತತವಾಗಿ ಐದು ವರ್ಷಗಳು, ಎಲ್ಲಾ ಮಾಧ್ಯಮ ಸಂಸ್ಥೆಗಳು ಇದನ್ನು ನಿರಂತರವಾಗಿ ಮುಂದಕ್ಕೆ ತೆಗೆದುಕೊಂಡು ಹೋಗಿವೆ ಮತ್ತು ಸಕಾರಾತ್ಮಕವಾಗಿ ಸಹಾಯ ಮಾಡಿವೆ. ದೇಶದಲ್ಲಿ ಈ ವಾತಾವರಣವನ್ನು ಸೃಷ್ಟಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಿವೆ.

ಇದಕ್ಕಾಗಿ ಕೆಲಸ ಮಾಡಿದ ಎಲ್ಲರಿಗೂ, 130 ಕೋಟಿ ದೇಶವಾಸಿಗಳಿಗೆ ಇಂದು ನಮಸ್ಕರಿಸುತ್ತೇನೆ. ನಾನು ಅವರಿಗೆ ಧನ್ಯವಾದಗಳು ಹೇಳುತ್ತೇನೆ ಮತ್ತು ನಾನು ಅವರಿಗೆ ಕೃತಜ್ಞನಾಗಿದ್ದೇನೆ.

ಈ ಮಾತುಗಳೊಂದಿಗೆ, ನಾನು ನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ. ನೀವೆಲ್ಲರೂ ನನ್ನೊಂದಿಗೆ ಹೇಳಿ-

ನಾನು ‘ಮಹಾತ್ಮ ಗಾಂಧಿ’ ಎಂದು ಹೇಳುತ್ತೇನೆ- ನೀವೆಲ್ಲರೂ ನಿಮ್ಮ ಎರಡೂ ಕೈಗಳನ್ನು ಮೇಲೆತ್ತಿ ಹೇಳಿ – ಅಮರ್ ರಹೇ! ಅಮರ್ ರಹೇ!

 

ಮಹಾತ್ಮ ಗಾಂಧಿ – ಅಮರ್ ರಹೇ!

ಮಹಾತ್ಮ ಗಾಂಧಿ – ಅಮರ್ ರಹೇ!

ಮಹಾತ್ಮ ಗಾಂಧಿ – ಅಮರ್ ರಹೇ!

ಮತ್ತೊಮ್ಮೆ, ಒಂದು ದೊಡ್ಡ ಸಂಕಲ್ಪವನ್ನು ಸಾಧಿಸಿದ್ದಕ್ಕಾಗಿ ನಾನು ರಾಷ್ಟ್ರವನ್ನು ಅಭಿನಂದಿಸುತ್ತೇನೆ.

ನನ್ನೊಂದಿಗೆ ಹೇಳಿ-

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

 

ತುಂಬಾ ಧನ್ಯವಾದಗಳು!