ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ನಿಧಿ ಬಿಡುಗಡೆಗೆ ಈ ಮುನ್ನ ವಿಧಿಸಲಾಗಿದ್ದ, ಫಲಾನುಭವಿಗಳ ಆಧಾರ್ ಮಾಹಿತಿ ಜೋಡಣೆ ಕಡ್ಡಾಯ ನಿಯಮದ ಸಡಿಲಿಕೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಕೃಷಿ ಭೂಮಿ ಹೊಂದಿದ ಕುಟುಂಬಗಳಿಗೆ ಕೆಲ ಷರತ್ತುಗಳಿಗೊಳಪಟ್ಟು ವಾರ್ಷಿಕ 6,000 ರೂಪಾಯಿ ಆದಾಯ ನೀಡುವುದು ಪಿಎಂ-ಕಿಸಾನ್ ಯೋಜನೆಯ ಉದ್ದೇಶವಾಗಿದೆ. ನಾಲ್ಕು ತಿಂಗಳಿಗೊಮ್ಮೆ 3 ಬಾರಿ ತಲಾ 2,000 ರೂಪಾಯಿಗಳಂತೆ ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆಯ ಮೂಲಕ ಹಣ ಸಂದಾಯ ಮಾಡಲಾಗುವುದು.
ಈ ಯೋಜನೆಯಡಿ, 1 ಆಗಸ್ಟ್ 2019 ರ ನಂತರದಲ್ಲಿ, ಡಿಸೆಂಬರ್ 2018 ರಿಂದ ಮಾರ್ಚ್ 2019ರ ನಡುವೆ ಮೊದಲ ಕಂತು ಹಾಗೂ ಏಪ್ರಿಲ್ನಿಂದ ಜುಲೈ 2019ರ ನಡುವೆ ಎರಡನೇ ಕಂತು ಪಡೆದ ಫಲಾನುಭವಿಗಳಿಗೆ ಮೂರನೇ ಕಂತಿನ ಹಣವನ್ನು ಆಧಾರ್ಮಾ ಹಿತಿಯ ಜೋಡಣೆಯನ್ನು ಆಧರಿಸಿಯೇ ಬಿಡುಗಡೆ ಮಾಡಲಾಗುವುದು. ಹಾಗೆಯೇ 1 ಆಗಸ್ಟ್ 2019 ರ ನಂತರದಲ್ಲಿ, ಏಪ್ರಿಲ್- ಜುಲೈ 2019ರ ಅವಧಿಯಲ್ಲಿ ಮೊದಲ ಕಂತು ಪಡೆದ ಫಲಾನುಭವಿಗಳಿಗೆ ಎರಡನೇ ಕಂತನ್ನು ಆಧಾರ್ ಮಾಹಿತಿಯ ಜೋಡಣೆಯನ್ನು ಆಧರಿಸಿಯೇ ಬಿಡುಗಡೆ ಮಾಡಲಾಗುವುದು. ಅದರಂತೆ 1 ಆಗಸ್ಟ್ 2019ರ ನಂತರದಲ್ಲಿ, ಇನ್ನುಳಿದ ಫಲಾನುಭವಿಗಳಿಗೆ ಸಹ 1 ಆಗಸ್ಟ್ 2019ರ ನಂತರ ಮೊದಲ ಕಂತನ್ನು ಆಧಾರ್ ಮಾಹಿತಿಯ ಜೋಡಣೆಯನ್ನು ಆಧರಿಸಿಯೇ ಬಿಡುಗಡೆ ಮಾಡಲಾಗುವುದು. ಆದಾಗ್ಯೂ ಅಸ್ಸಾಂ, ಮೇಘಾಲಯ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಈವರೆಗೂ ಆಧಾರ್ ಮಾಹಿತಿಯ ಜೋಡಣೆ ಕಾರ್ಯ ಪೂರ್ಣವಾಗಿಲ್ಲದ ಕಾರಣದಿಂದ ಈ ರಾಜ್ಯಗಳ ಫಲಾನುಭವಿಗಳಿಗೆ ಈ ನಿಯಮದಿಂದ 31-03-2020 ರವರೆಗೆ ವಿನಾಯಿತಿ ನೀಡಲಾಗಿದೆ.
ಆದಾಗ್ಯೂ 1 ಆಗಸ್ಟ್ 2019ರ ನಂತರ ಬಿಡುಗಡೆ ಮಾಡಬೇಕಾಗಿರುವ ಕಂತು ಬಿಡುಗಡೆ ಮಾಡುವ ಮುನ್ನ ಶೇ 100 ರಷ್ಟು ಆಧಾರ್ಜೋ ಡಣೆ ಮಾಡುವುದು ಅಸಾಧ್ಯವಾಗಿರುತ್ತದೆ. ಈಗಾಗಲೇ ರೈತರು ಹಿಂಗಾರು ಬೆಳೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಅವರ ಕೃಷಿ ಚಟುವಟಿಕೆಗಳಾದ ಬೀಜ ಖರೀದಿ, ಮಣ್ಣು ಹದ ಮಾಡುವುದು ಹಾಗೂ ಇತರ ಕಾರ್ಯಗಳಾದ ನೀರಾವರಿ, ನಿರ್ವಹಣೆ ಮತ್ತು ತಾಂತ್ರಿಕ ಉಪಕರಣಗಳ ವ್ಯವಸ್ಥೆಗಳಿಗೆ ಹಣ ತೀರಾ ಅವಶ್ಯಕವಾಗಿರುತ್ತದೆ. ಈ ಎಲ್ಲ ಕೃಷಿ ವೆಚ್ಚಗಳೊಂದಿಗೆ ಈಗ ಹಬ್ಬದ ಸೀಸನ್ ಬಂದಿರುವುದರಿಂದ ದೇಶದ ಬಡ ಕೃಷಿ ಕುಟುಂಬಗಳ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಆಗುತ್ತದೆ. ಇಂಥ ಸಂದರ್ಭದಲ್ಲಿ ಫಲಾನುಭವಿಗಳ ಆಧಾರ್ ಮಾಹಿತಿ ಜೋಡಣೆ ಆಗದಿರುವುದು ಹಾಗೂ ಆ ಕಾರಣದಿಂದ ಕಂತು ಬಿಡುಗಡೆ ಆಗದಿದ್ದರೆ ರೈತಾಪಿ ವರ್ಗದಲ್ಲಿ ಅಸಮಾಧಾನ ಉಂಟಾಗಲಿದೆ. ಹೀಗಾಗಿ 1 ಆಗಸ್ಟ್ 2019ರ ನಂತರ ಬಿಡುಗಡೆಯಾಗಬೇಕಿರುವ ಕಂತಿಗೆ ಕಡ್ಡಾಯ ಆಧಾರ್ ಮಾಹಿತಿ ಜೋಡಣೆಯ ನಿಯಮವನ್ನು 30 ನವೆಂಬರ್ 2019ರ ವರೆಗೆ ಸಡಿಲಿಸಲಾಗಿದೆ. ಈ ಕ್ರಮದಿಂದ ಬಹುದೊಡ್ಡ ಸಂಖ್ಯೆಯ ರೈತ ಫಲಾನುಭವಿಗಳು ಯೋಜನೆಯ ಲಾಭವನ್ನು ತಕ್ಷಣ ಪಡೆದುಕೊಳ್ಳಲು ಸಾಧ್ಯವಾಗಲಿದೆ. ಕಡ್ಡಾಯ ಆಧಾರ್ಮಾ ಹಿತಿಯ ಜೋಡಣೆಯ ನಿಯಮಾವಳಿಯು 1 ಡಿಸೆಂಬರ್ 2019ರ ನಂತರದ ಕಂತುಗಳ ಬಿಡುಗಡೆಗೆ ಅನ್ವಯವಾಗಲಿದೆ. ಹಣ ಪಾವತಿಸುವ ಮುನ್ನ ಸರಕಾರ ಸಂಪೂರ್ಣ ಮಾಹಿತಿಯನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಲಿದೆ.
ಹಿನ್ನೆಲೆ:
ಕೇಂದ್ರ ಸರಕಾರದ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ (ಪಿಎಂ-ಕಿಸಾನ್) ಯೋಜನೆಯಡಿ ಕೆಲ ಷರತ್ತುಗೊಳಪಟ್ಟು, ಕೃಷಿ ಭೂಮಿ ಹೊಂದಿದ ರೈತ ಕುಟುಂಬಗಳಿಗೆ ಸಹಾಯವಾಗಿ ವಾರ್ಷಿಕ 6,000 ರೂಪಾಯಿಗಳನ್ನು ಆದಾಯ ರೂಪದಲ್ಲಿ ನೀಡಲಾಗುತ್ತಿದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಮೂರು ಬಾರಿಯಂತೆ ತಲಾ 2,000 ರೂಪಾಯಿಗಳಂತೆ ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಕಂತು ಪಾವತಿಸಲಾಗುತ್ತದೆ. ಮೊದಲ ಕಂತಿನಲ್ಲಿ 6,76,76,073 ಫಲಾನುಭವಿಗಳಿಗೆ, ಎರಡನೇ ಕಂತಿನಲ್ಲಿ 5,14,27195 ಫಲಾನುಭವಿಗಳಿಗೆ ಹಾಗೂ ಮೂರನೇ ಕಂತಿನಲ್ಲಿ 1,74,20,230 ಫಲಾನುಭವಿಗಳಿಗೆ ಒಟ್ಟಾರೆ 27000 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.