Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಸ್ವಚ್ಛ ಭಾರತ ದಿನ ಉದ್ಘಾಟನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಹಮದಾಬಾದ್ ನಲ್ಲಿಂದು ಸ್ವಚ್ಛ ಭಾರತ ದಿನ 2019 ಉದ್ಘಾಟಿಸಿದರು. ಇದೇ ವೇಳೆ ಅವರು ಮಹಾತ್ಮ ಗಾಂಧಿ ಅವರ 150ನೇ ಜನ್ಮ ದಿನದ ನೆನಪಿಗಾಗಿ ಅಂಚೆ ಚೀಟಿ ಮತ್ತು ಬೆಳ್ಳಿ ನಾಣ್ಯಗಳನ್ನು ಬಿಡುಗಡೆ ಮಾಡಿದರು. ಅಲ್ಲದೆ ಅವರು ಸ್ವಚ್ಛ ಭಾರತ್ ಪುರಸ್ಕಾರವನ್ನು ವಿಜೇತರಿಗೆ ವಿತರಿಸಿದರು. ಇದಕ್ಕೂ ಮುನ್ನ ಅವರು ಸಬರಮತಿ ಆಶ್ರಮದಲ್ಲಿ ಮಹಾತ್ಮ ಗಾಂಧಿ ಅವರಿಗೆ ಗೌರವ ನಮನ ಸಲ್ಲಿಸಿದರು. ಪ್ರಧಾನಮಂತ್ರಿ ಅವರು, ಮಾಗನ್ ನಿವಾಸ್(ಚರಕ ಗ್ಯಾಲರಿ)ಗೆ ಭೇಟಿ ನೀಡಿದರು ಮತ್ತು ಅಲ್ಲಿ ಮಕ್ಕಳ ಜೊತೆ ಸಂವಾದ ನಡೆಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸ್ವಚ್ಛ ಭಾರತ ದಿನ ಕಾರ್ಯಕ್ರಮದಲ್ಲಿ ನೆರೆದಿದ್ದ ಸರಪಂಚರನ್ನುದ್ದೇಶಿಸಿ ಮಾತನಾಡುತ್ತಾ, ಇಡೀ ವಿಶ್ವ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನವನ್ನು ಆಚರಿಸುತ್ತಿದೆ, ವಿಶ್ವ ಸಂಸ್ಥೆ ಕೆಲವು ದಿನಗಳ ಹಿಂದೆ ಗಾಂಧೀಜಿ ಕುರಿತಾದ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿರುವುದು ಈ ಕಾರ್ಯಕ್ರಮವನ್ನು ಮತ್ತಷ್ಟು ಸ್ಮರಣೀಯವನ್ನಾಗಿಸಿದೆ ಎಂದರು. ತಮ್ಮ ಜೀವಿತಾವಧಿಯಲ್ಲಿ ಹಲವು ಬಾರಿ ಸಬರಮತಿ ಆಶ್ರಮಕ್ಕೆ ಭೇಟಿ ನೀಡುವ ಅವಕಾಶ ದೊರೆತಿದೆ. ಆದರೆ ಇಂದಿನ ಭೇಟಿ ಪ್ರತಿ ಬಾರಿಗಿಂತ ಹೆಚ್ಚಿನ ಶಕ್ತಿ ತಂದುಕೊಟ್ಟಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಹಲವು ಗ್ರಾಮಗಳು ಸ್ವಯಂ ಪ್ರೇರಣೆಯಿಂದ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಿಕೊಂಡಿವೆ. ಅದಕ್ಕಾಗಿ ನಾನು ಎಲ್ಲ ದೇಶವಾಸಿಗಳನ್ನು ವಿಶೇಷವಾಗಿ ಗ್ರಾಮಗಳಲ್ಲಿನ ಜನರು ಮತ್ತು ಸರಪಂಚರು ಹಾಗೂ ‘ಸ್ವಚ್ಛ’ತೆಗಾಗಿ ಶ್ರಮಿಸಿದ ಎಲ್ಲರನ್ನು ಅಭಿನಂದಿಸುತ್ತೇನೆ. ವಯೋಮಾನ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಸೇರಿ ಯಾವುದೇ ತಾರತಮ್ಯವಿಲ್ಲದೆ, ಎಲ್ಲರೂ ಸ್ವಚ್ಛತೆಯ ಗೌರವ ಮತ್ತು ಘನತೆಗಾಗಿ ಪಣ ತೊಟ್ಟು ಕೊಡುಗೆ ನೀಡಿದ್ದಾರೆ ಎಂದರು. ಇಂದು ನಮ್ಮ ಸಾಧನೆಯನ್ನು ಕಂಡು ಇಡೀ ವಿಶ್ವ ಆಶ್ಚರ್ಯಚಕಿತವಾಗಿದೆ ಮತ್ತು ಅದು ನಮ್ಮನ್ನು ಶ್ಲಾಘಿಸುತ್ತಿದೆ ಎಂದು ಅವರು ಹೇಳಿದರು. ದೇಶದ 60 ಕೋಟಿಗೂ ಅಧಿಕ ಜನಸಂಖ್ಯೆಗೆ 60 ತಿಂಗಳಲ್ಲಿ 11 ಕೋಟಿಗೂ ಅಧಿಕ ಶೌಚಾಲಯಗಳನ್ನು ಭಾರತ ನಿರ್ಮಾಣ ಮಾಡಿರುವುದಕ್ಕೆ ಇಡೀ ವಿಶ್ವ ನಿಬ್ಬೆರಗಾಗಿದೆ ಎಂದು ಹೇಳಿದರು.

ಸಾರ್ವಜನಿಕ ಸಹಭಾಗಿತ್ವ ಮತ್ತು ಸ್ವಪ್ರೇರಣೆ ಸ್ವಚ್ಛ ಭಾರತ ಅಭಿಯಾನದ ಹೆಗ್ಗುರುತುಗಳು ಮತ್ತು ಅವೇ ಈ ಸಾಧನೆಗೆ ಕಾರಣವಾಗಿವೆ.ಯೋಜನೆಗೆ ಬೆಂಬಲ ನೀಡಿದ್ದಕ್ಕಾಗಿ ಇಡೀ ದೇಶದ ಜನತೆಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಹೇಳುತ್ತಿದ್ದೇನೆ ಎಂದರು. ಸಾರ್ವಜನಿಕ ಸಹಭಾಗಿತ್ವದ ಪ್ರಾಮುಖ್ಯತೆಯನ್ನು ಬಲವಾಗಿ ಪ್ರತಿಪಾದಿಸಿದ ಪ್ರಧಾನಮಂತ್ರಿ ಅವರು, ಜಲಜೀವನ್ ಮಿಷನ್ ಮತ್ತು 2022ರ ವೇಳೆಗೆ ಒಮ್ಮೆ ಮಾತ್ರ ಬಳಸಿ ಬಿಸಾಡಬಹುದಾದ ಪ್ಲಾಸ್ಟಿಕ್ ನಿರ್ಮೂಲನೆಯಂತಹ ಸರ್ಕಾರದ ಪ್ರಮುಖ ಯೋಜನೆಗಳ ಯಶಸ್ಸಿಗೆ ಸಾಮೂಹಿಕ ಪ್ರಯತ್ನ ಅತ್ಯಗತ್ಯ ಎಂದರು.

ಮಹಾತ್ಮ ಗಾಂಧೀಜಿ ಅವರ ಕನಸುಗಳನ್ನು ನನಸು ಮಾಡಲು ತಮ್ಮ ಸರ್ಕಾರ ಬದ್ಧವಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ನಿಟ್ಟಿನಲ್ಲಿ ಸ್ವಾವಲಂಬನೆ, ಸರಳ ಮತ್ತು ಸುಲಭ ಜೀವನ ನಡೆಸಲು ನೆರವು ಮತ್ತು ತಳಮಟ್ಟದ(ಕೊನೆಯ ಮೈಲಿ)ವರೆಗೆ ಅಭಿವೃದ್ಧಿಯನ್ನು ಕೊಂಡೊಯ್ಯುವುದು ಸೇರಿ, ತಮ್ಮ ಸರ್ಕಾರ ಕೈಗೊಂಡಿರುವ ಹಲವು ಕ್ರಮಗಳನ್ನು ಅವರು ಉಲ್ಲೇಖಿಸಿದರು. ದೇಶವನ್ನು ಇನ್ನಷ್ಟು ಉತ್ತಮಗೊಳಿಸಲು ಸಾರ್ವಜನಿಕರು ನಿರ್ಣಯವನ್ನು ಕೈಗೊಳ್ಳಬೇಕು ಎಂದು ಕರೆ ನೀಡಿದ ಅವರು, ಅದನ್ನು ಸಾಧಿಸಲು ಕಠಿಣ ಶ್ರಮ ಪಡಬೇಕು ಎಂದರು. 130 ಕೋಟಿ ನಿರ್ಣಯಗಳಿಂದ ಮಾತ್ರ ಭಾರೀ ಬದಲಾವಣೆಯನ್ನು ತರಬಹುದಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.