Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಉದ್ಘಾಟಿಸಿದ ಪ್ರಧಾನ ಮಂತ್ರಿ


ರೈತರ ಬದುಕು ಸುರಕ್ಷಿತಗೊಳಿಸುವ ಮತ್ತೊಂದು ಪ್ರಮುಖ ಪ್ರಯತ್ನದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯನ್ನು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಉದ್ಘಾಟಿಸಿದರು.

ಈ ಯೋಜನೆಯು 60 ವರ್ಷ ತುಂಬಿದ ರೈತರಿಗೆ ಕನಿಷ್ಠ 3 ಸಾವಿರ ರೂಪಾಯಿಗಳ ಪಿಂಚಣಿಯನ್ನು ಒದಗಿಸುವ ಮೂಲಕ 5 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಜೀವನ ಭದ್ರತೆ ಕಲ್ಪಿಸಲಿದೆ.

ಪ್ರಧಾನಮಂತ್ರಿಯವರು ಇದೇ ಸಂದರ್ಭದಲ್ಲಿ ವ್ಯಾಪಾರಿಗಳು ಮತ್ತು ಸ್ವಯಂ ಉದ್ಯೋಗಿಗಳಿಗಾಗಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನೂ ಉದ್ಘಾಟಿಸಿದರು.

ಈ ಯೋಜನೆಯು 60 ವರ್ಷ ತುಂಬಿದ ಬಳಿಕ ಸಣ್ಣ ವ್ಯಾಪಾರಸ್ಥರು ಮತ್ತು ಸ್ವಯಂ ಉದ್ಯೋಗಿಗಳಿಗೆ 3 ಸಾವಿರ ರೂಪಾಯಿಗಳ ನಿಶ್ಛಿತ ಪಿಂಚಣಿ ಒದಗಿಸಲಿದೆ.

ಸುಮಾರು 3 ಕೋಟಿ ಸಣ್ಣ ವ್ಯಾಪಾರಸ್ಥರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.

ಸದೃಢ ಸರ್ಕಾರ ನಿಮ್ಮ ಆಶೋತ್ತರಗಳನ್ನು ಪೂರೈಸಲಿದೆ ಎಂಬ ಚುನಾವಣಾ ಭರವಸೆಯನ್ನು ಈಡೇರಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

“ಹೊಸ ಸರ್ಕಾರ ರಚನೆಯಾದ ತರುವಾಯ ದೇಶದ ಪ್ರತಿಯೊಂದು ರೈತ ಕುಟುಂಬವೂ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಪ್ರಯೋಜನ ಪಡೆಯಲಿದೆ ಎಂದು ನಾನು ಹೇಳಿದ್ದೆ. ಇಂದು 21 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಆರೂವರೆ ಕೋಟಿ ರೈತರ ಕುಟುಂಬಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಜಾರ್ಖಂಡ್ ನ 8 ಲಕ್ಷ ರೈತ ಕುಟುಂಬಗಳ ಖಾತೆಯಲ್ಲಿ 250 ಕೋಟಿ ರೂಪಾಯಿ ಜಮಾ ಮಾಡಲಾಗಿದೆ” ಎಂದರು.

“ಅಭಿವೃದ್ಧಿ ನಮ್ಮ ಆದ್ಯತೆ ಮತ್ತು ಬದ್ಧತೆಯಾಗಿದೆ, ನಮ್ಮ ಸರ್ಕಾರ ಪ್ರತಿಯೊಬ್ಬ ಭಾರತೀಯರಿಗೂ ಸಾಮಾಜಿಕ ಸುರಕ್ಷತೆಯ ರಕ್ಷಣೆ ಒದಗಿಸಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

“ಸರ್ಕಾರ ತೀರಾ ಅಗತ್ಯ ಇರುವವರ ಬಗ್ಗೆ ಸಹಾನುಭೂತಿ ಹೊಂದಿದೆ. ಈ ವರ್ಷ ಮಾರ್ಚ್ ತಿಂಗಳಿನಿಂದ ಇದೇ ಪ್ರಕಾರವಾದ ಪಿಂಚಣಿ ಯೋಜನೆ ದೇಶದ ಅಸಂಘಟಿತ ವಲಯದ ಕೋಟ್ಯಂತರ ಜನರಿಗೆ ತಲುಪುತ್ತಿದೆ” ಎಂದರು.

“32 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಶ್ರಮಯೋಗಿ ಮಾನ್ ಧನ್ ಯೋಜನೆಯಲ್ಲಿ ಸೇರಿದ್ದಾರೆ. 22 ಕೋಟಿಗೂ ಹೆಚ್ಚು ಜನರು ಪ್ರಧಾನಮಂತ್ರಿ ಜೀವನ್ ಜ್ಯೋತಿ ಯೋಜನೆ ಮತ್ತು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಸೇರಿದ್ದಾರೆ, ಈ ಪೈಕಿ 30 ಲಕ್ಷ ಫಲಾನುಭವಿಗಳು ಜಾರ್ಖಂಡ್ ನವರಾಗಿದ್ದಾರೆ”. ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ 44 ಲಕ್ಷ ಬಡ ರೋಗಿಗಳಿಗೆ ಪ್ರಯೋಜನವಾಗಿದೆ, ಈ ಪೈಕಿ 3 ಲಕ್ಷ ಜನರು ಜಾರ್ಖಂಡ್ ನವರಾಗಿದ್ದಾರೆ ಎಂದರು.

ಎಲ್ಲರನ್ನೂ ಸಬಲೀಕರಣಗೊಳಿಸಲು, ದೇಶಾದ್ಯಂತ ಬುಡಕಟ್ಟು ಜನರು ಹೆಚ್ಚಾಗಿರುವ ಪ್ರದೇಶಗಳಲ್ಲಿ 462 ಏಕಲವ್ಯ ಮಾದರಿ ಶಾಲೆಗಳಿಗೆ ಪ್ರಧಾನಮಂತ್ರಿಯವರು ಇಂದು ಚಾಲನೆ ನೀಡಿದರು. ಈ ಪ್ರದೇಶಗಳಲ್ಲಿನ ಪ.ಪಂ.ದ ವಿದ್ಯಾರ್ಥಿಗಳಿಗೆ ಪ್ರೌಢ ಪ್ರಾಥಮಿಕ, ಪ್ರೌಢ ಮತ್ತು ಹಿರಿಯ ಪ್ರೌಢಶಾಲಾ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವತ್ತ ಗಮನ ಹರಿಸಲಿವೆ.

“ಈ ಏಕಲವ್ಯ ಶಾಲೆಗಳು ಬುಡಕಟ್ಟು ಮಕ್ಕಳ ಶಿಕ್ಷಣ ಮಾಧ್ಯಮವಾಗಷ್ಟೇ ಕಾರ್ಯ ನಿರ್ವಹಿಸುವುದಿಲ್ಲ ಜೊತೆಗೆ ಸ್ಥಳೀಯ ಕಲೆ ಮತ್ತು ಸಂಸ್ಕೃತಿಯ ಸಂರ್ಷಣೆ ಮತ್ತು ಕ್ರೀಡೆ ಹಾಗೂ ಕೌಶಲ ಅಭಿವೃದ್ಧಿಗೂ ಅನುಕೂಲತೆ ಕಲ್ಪಿಸಲಿವೆ. ಈ ಶಾಲೆಗಳಲ್ಲಿ ಸರ್ಕಾರ ಪ್ರತಿ ಬುಡಕಟ್ಟು ಮಗುವಿನ ಮೇಲೆ ವಾರ್ಷಿಕ 1 ಲಕ್ಷ ರೂಪಾಯಿ ವೆಚ್ಚ ಮಾಡಲಿದೆ.”

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಹೀಬ್ ಗಂಜ್ ನಲ್ಲಿ ಬಹು ಮಾದರಿ ಸಾರಿಗೆ ಟರ್ಮಿನಲ್ ಅನ್ನು ಉದ್ಘಾಟಿಸಿದರು.

“ಇಂದು, ನನಗೆ ಸಾಹೀಬ್ ಗಂಜ್ ಬಹು ಮಾದರಿ ಟರ್ಮಿನಲ್ ಉದ್ಘಾಟಿಸುವ ಸೌಭಾಗ್ಯವೂ ದೊರೆತಿದೆ. ಇದು ಕೂಡ ಮತ್ತೊಂದು ಯೋಜನೆಯಷ್ಟೇ ಅಲ್ಲ, ಇದು ಇಡೀ ವಲಯದ ಸಾರಿಗೆಗೆ ಹೊಯ ಆಯಾಮ ನೀಡಲಿದೆ. ಈ ಜಲ ಮಾರ್ಗವು ಜಾರ್ಖಂಡ್ ಅನ್ನು ಇಡೀ ದೇಶದೊಂದಿಗಷ್ಟೇ ಅಲ್ಲ ವಿದೇಶಗಳೊಂದಿಗೆ ಬೆಸೆಯಲಿದೆ. ಈ ಟರ್ಮಿನಲ್ ನಿಂದ ಇಲ್ಲಿನ ರೈತ ಸೋದರ ಸೋದರಿಯರು ತಮ್ಮ ಉತ್ಪನ್ನಗಳಿಗೆ ಸುಲಭವಾಗಿ ಇಡೀ ದೇಶದಲ್ಲಿನ ಮಾರುಕಟ್ಟೆಗಳ ಪ್ರವೇಶ ಪಡೆಯಬಹುದಾಗಿದೆ ಎಂದೂ ಪ್ರಧಾನಮಂತ್ರಿ ಹೇಳಿದರು.”

ಪ್ರಧಾನಮಂತ್ರಿಯವರು ಜಾರ್ಖಂಡ್ ನ ಹೊಸ ವಿಧಾನಸಭಾ ಕಟ್ಟಡವನ್ನೂ ಉದ್ಘಾಟಿಸಿದರು.

“ ಇಂದು, ರಾಜ್ಯ ರಚನೆಯಾಗಿ 2 ದಶಕ ಕಳೆದ ತರುವಾಯ ಪ್ರಜಾಪ್ರಭುತ್ವದ ದೇವಾಲಯ ಜಾರ್ಖಂಡ್ ನಲ್ಲಿ ಉದ್ಘಾಟನೆಯಾಗಿದೆ. ಈ ಕಟ್ಟಡ ಜಾರ್ಖಂಡ್ ಜನತೆಯ ಸ್ವರ್ಣ ಭವಿಷ್ಯಕ್ಕೆ ಬುನಾದಿಯಾಗಲಿದೆ ಮತ್ತು ಇಂದಿನ ಹಾಗೂ ಮುಂದಿನ ಪೀಳಿಗೆಯ ಕನಸುಗಳನ್ನು ನನಸಾಗಿಸಲಿದೆ.” ಎಂದರು. ಸಚಿವಾಲಯದ ನೂತನ ಕಟ್ಟಡ ಶಂಕುಸ್ಥಾಪನೆಯನ್ನೂ ಪ್ರಧಾನಮಂತ್ರಿ ನೆರವೇರಿಸಿದರು.

ಏಕ ಬಳಕೆಯ ಪ್ಲಾಸ್ಟಿಕ್ ಉಪಯೋಗ ನಿಲ್ಲಿಸುವಂತೆ ದೇಶದ ಜನತೆಗೆ ಪ್ರಧಾನಮಂತ್ರಿ ಮನವಿ ಮಾಡಿದರು.

2019ರ ಸೆಪ್ಟೆಂಬರ್ 11ರಂದು ಉದ್ಘಾಟಿಸಲಾದ ಸ್ವಚ್ಛತೆಯೇ ಸೇವೆ ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ನಿನ್ನೆಯಿಂದ ಸ್ವಚ್ಛತೆಯೇ ಸೇವೆ ಅಭಿಯಾನ ದೇಶದಲ್ಲಿ ಆರಂಭವಾಗಿದೆ ಎಂದರು. ಈ ಅಭಿಯಾನದ ಅಡಿಯಲ್ಲಿ ಅಕ್ಟೋಬರ್ 2ರಂದು ನಾವು ನಮ್ಮ ಮನೆಗಳಲ್ಲಿ, ಶಾಲೆಗಳಲ್ಲಿ ಮತ್ತು ಕಚೇರಿಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಸಂಗ್ರಹಿಸಬೇಕು ಎಂದರು. ಗಾಂಧೀಜಿ ಅವರ 150ನೇ ಜಯಂತಿಯ ದಿನವಾದ ಅಕ್ಟೋಬರ್ 2ರಂದು ನಾವು ಆ ಪ್ಲಾಸ್ಟಿಕ್ ಸಂಗ್ರಹವನ್ನು ತೆಗೆದುಹಾಕಬೇಕು ಎಂದರು. ”.