Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಿಮಿಷಗಳಲ್ಲಿ ಮುಂಬೈ ದೃಷ್ಟಿಗನುಗುಣವಾಗಿ ಮುಂಬೈ ಮೆಟ್ರೋ ಯೋಜನೆಗಳಿಗೆ ಪ್ರಧಾನಿಯವರಿಂದ ಉತ್ತೇಜನ


 

ನಿಮಿಷಗಳಲ್ಲಿ ಮುಂಬೈ ದೂರದೃಷ್ಟಿಗೆ ಅನುಗುಣವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಮುಂಬೈ ಮೆಟ್ರೋದ ವಿವಿಧ ಯೋಜನೆಗಳ ಉದ್ಘಾಟಿನೆ ಮತ್ತು ಶಿಲಾನ್ಯಾಸ ನೆರವೇರಿಸಿದರು. ಈ ಯೋಜನೆಗಳು ನಗರದ ಮೆಟ್ರೋ ಮೂಲಸೌಕರ್ಯಕ್ಕೆ ಉತ್ತೇಜನ ನೀಡಲಿದ್ದು, ಪ್ರತಿ ಮುಂಬೈನಿವಾಸಿಗೆ ಸುರಕ್ಷಿತವಾದ, ತ್ವರಿತವಾದ ಮತ್ತು ಉತ್ತಮ ಪ್ರಯಾಣ ಒದಗಿಸಲಿವೆ.

ಮುಂಬೈ ನಿವಾಸಿಗಳ ಮನೋಭಾವವನ್ನು ಶ್ಲಾಘಿಸಿದ ಪ್ರಧಾನಿಯವರು, ಲೋಕಮಾನ್ಯ ತಿಲಕ್ ಪ್ರಾರಂಭಿಸಿದ ಗಣೇಶ ಉತ್ಸವ ಭಾರತ ಮತ್ತು ವಿದೇಶಗಳಲ್ಲಿಯೂ ಜನಪ್ರಿಯವಾಗಿದೆ ಎಂದು ಹೇಳಿದರು.

ಇಸ್ರೋ ಮತ್ತು ಅದರ ವಿಜ್ಞಾನಿಗಳ ತಂಡವನ್ನು ಕುರಿತು ಮಾತನಾಡಿದ ಪ್ರಧಾನಿ, “ಗುರಿಗಳನ್ನು ಕ್ರಮಿಸಲು ಶ್ರಮಿಸುವ ಮೂರು ವಿಧದ ಜನರಿದ್ದಾರೆ: ವೈಫಲ್ಯದ ಭಯದಿಂದಾಗಿಯೇ ಆರಂಭ ಮಾಡದವರು, ಪ್ರಾರಂಭಿಸಿದರೂ ಸವಾಲುಗಳು ಎದುರಾಗದಾಗ ಓಡಿಹೋಗುವವರು ಮತ್ತು ದೊಡ್ಡ ಸವಾಲುಗಳ ನಡುವೆಯೂ ನಿರಂತರವಾಗಿ ಶ್ರಮಿಸುವವರು. ಇಸ್ರೋ ಮತ್ತು ಅದಕ್ಕೆ ಸಂಬಂಧಿಸಿದವರು ಮೂರನೇ ವರ್ಗಕ್ಕೆ ಸೇರಿದವರು; ಮಿಷನ್ ಸಾಧಿಸುವವರೆಗೂ ಅವರು ನಿಲ್ಲುವುದಿಲ್ಲ ಅಥವಾ ಸುಸ್ತಾಗುವುದಿಲ್ಲ ಅಥವಾ ವಿರಾಮ ಪಡೆಯುವುದಿಲ್ಲ.  ಮಿಷನ್ ಚಂದ್ರಯಾನ-2 ರಲ್ಲಿ ನಾವು ಸವಾಲನ್ನು ಎದುರಿಸಿದ್ದರೂ, ಗುರಿ ಸಾಧಿಸುವವರೆಗೆ ಇಸ್ರೋ ವಿಜ್ಞಾನಿಗಳು ಬಿಡುವುದಿಲ್ಲ. ಚಂದ್ರನನ್ನು ಗೆಲ್ಲುವ ಗುರಿಯನ್ನು ಖಂಡಿತವಾಗಿಯೂ ಸಾಧಿಸಲಾಗುವುದು. ಆರ್ಬಿಟರ್ ಅನ್ನು ಚಂದ್ರನ ಕಕ್ಷೆಯಲ್ಲಿ ಯಶಸ್ವಿಯಾಗಿ ಇರಿಸಲಾಗಿದೆ ಎಂಬುದು ಐತಿಹಾಸಿಕ ಸಾಧನೆಯಾಗಿದೆ ” ಎಂದು ತಿಳಿಸಿದರು.

ಮುಂಬೈನಲ್ಲಿ ಇಂದು 20,000 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಪ್ರಾರಂಭಿಸಲಾಗಿದ್ದು, ಈಗಾಗಲೇ 1.5 ಲಕ್ಷ ಕೋಟಿ ರೂಪಾಯಿಗಳನ್ನು ಮುಂಬೈ ಮೆಟ್ರೊದಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಪ್ರಧಾನಿ ಹೇಳಿದರು. ಹೊಸ ಮೆಟ್ರೋ ಮಾರ್ಗಗಳು, ಮೆಟ್ರೋ ಭವನ ಮತ್ತು ಮೆಟ್ರೋ ನಿಲ್ದಾಣಗಳಲ್ಲಿನ ಹೊಸ ಸೌಲಭ್ಯಗಳು ಮುಂಬೈಗೆ ಹೊಸ ಆಯಾಮವನ್ನು ನೀಡುತ್ತವೆ ಮತ್ತು ಮುಂಬೈ ನಿವಾಸಿಗಳ ಜೀವನವನ್ನು ಸುಲಭಗೊಳಿಸುತ್ತವೆ ಎಂದು ಅವರು ಹೇಳಿದರು. “ಬಾಂದ್ರಾ ಮತ್ತು ಎಕ್ಸ್ಪ್ರೆಸ್ವೇ ನಡುವಿನ ಸಂಪರ್ಕವು ವೃತ್ತಿಪರರಿಗೆ ಜೀವನವನ್ನು ಸುಲಭಗೊಳಿಸುತ್ತದೆ. ಈ ಯೋಜನೆಗಳೊಂದಿಗೆ ಮುಂಬೈಅನ್ನು ನಿಮಿಷಗಳಲ್ಲಿ ತಲುಪಬಹುದು” ಎಂದ ಅವರು, ಮೂಲಸೌಕರ್ಯ ಕ್ಷೇತ್ರದಲ್ಲಿ ತರಲಾಗುತ್ತಿರುವ ಬದಲಾವಣೆಗಳಿಗೆ ರಾಜ್ಯ ಸರ್ಕಾರವನ್ನು ಶ್ಲಾಘಿಸಿದರು.

ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಗುರಿಯತ್ತ ಸಾಗುತ್ತಿದ್ದಂತೆ, ನಮ್ಮ ನಗರಗಳೂ ಸಹ 21 ನೇ ಶತಮಾನದ ನಗರಗಳಾಗಬೇಕು. ಈ ಗುರಿಗೆ ಅನುಗುಣವಾಗಿ, ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸಲು ಮುಂದಿನ ಐದು ವರ್ಷಗಳಲ್ಲಿ ಸರ್ಕಾರವು 100 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ, ಇದು ಮುಂಬೈ ಮತ್ತು ಇತರ ಅನೇಕ ನಗರಗಳಿಗೆ ಪ್ರಯೋಜನವನ್ನು ನೀಡುತ್ತದೆ. ಭವಿಷ್ಯಕ್ಕೆ ಸಿದ್ಧವಾದ ಮೂಲಸೌಕರ್ಯಗಳ ಮಹತ್ವವನ್ನು ಪ್ರಧಾನಿ ಪ್ರಮುಖವಾಗಿ ಪ್ರಸ್ತಾಪಿಸಿದರು ಮತ್ತು ನಗರಗಳನ್ನು ಅಭಿವೃದ್ಧಿಪಡಿಸುವಾಗ ಸಂಪರ್ಕ, ಉತ್ಪಾದಕತೆ, ಸುಸ್ಥಿರತೆ ಮತ್ತು ಸುರಕ್ಷತೆಯನ್ನು ಪರಿಗಣಿಸುವ ಅಗತ್ಯವಿದೆ ಎಂದು ಹೇಳಿದರು

ಸಾರಿಗೆಯನ್ನು ಸುಲಭಗೊಳಿಸಲು, ಸಮಗ್ರ ಸಾರಿಗೆ ವ್ಯವಸ್ಥೆಯನ್ನು ನಿರ್ಮಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಮುಂಬೈ ಮೆಟ್ರೋಪಾಲಿಟನ್ ಪ್ರದೇಶಕ್ಕೆ ಉತ್ತಮ ಮೂಲಸೌಕರ್ಯ ಒದಗಿಸಲು ದೂರದೃಷ್ಟಿಯ ದಾಖಲೆ ಬಿಡುಗಡೆ ಮಾಡಲಾಗಿದೆ. ಮುಂಬೈ ಲೋಕಲ್, ಬಸ್ ವ್ಯವಸ್ಥೆಯಂತಹ ವಿವಿಧ ಸಾರಿಗೆ ವಿಧಾನಗಳನ್ನು ಹೇಗೆ ಉತ್ತಮವಾಗಿ ಬಳಸಿಕೊಳ್ಳಬೇಕು ಎಂಬುದನ್ನು ಈ ಡಾಕ್ಯುಮೆಂಟ್ ವಿವರಿಸುತ್ತದೆ. ಮುಂಬೈ ಮೆಟ್ರೊಗಾಗಿ ಮಾಸ್ಟರ್ ಪ್ಲ್ಯಾನ್ ಮಾಡಲಾಗಿದೆ ಎಂದು ಪ್ರಧಾನಿ ತಿಳಿಸಿದರು.

ಮುಂಬೈ ಮೆಟ್ರೊ ಯೋಜನೆಯ ವಿಸ್ತರಣೆ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡಿದ ಪ್ರಧಾನಿಯವರು, “ಈಗಿನ 11 ಕಿ.ಮೀ.ನಿಂದ 2023-24 ರ ವೇಳೆಗೆ ನಗರದ ಮೆಟ್ರೋ ಜಾಲ 325 ಕಿ.ಮೀ.ಗೆ ಹೆಚ್ಚಾಗುತ್ತದೆ. ಮೆಟ್ರೋ ಸಾಮರ್ಥ್ಯವು ಇಂದು ಮುಂಬೈ ಲೋಕಲ್ ರೈಲುಗಳು ಹೊತ್ತೊಯ್ಯುವ ಜನರ ಸಂಖ್ಯೆಯಷ್ಟೇ ಆಗುತ್ತದೆ. ಮೆಟ್ರೋ ಮಾರ್ಗಗಳಲ್ಲಿ ಚಲಿಸುವ ಬೋಗಿಗಳನ್ನು ಭಾರತದಲ್ಲಿಯೇ ತಯಾರಿಸಲಾಗುವುದು. ”

ಮೆಟ್ರೋ ಯೋಜನೆಗಳಿಂದಾಗಿ 10,000 ಎಂಜಿನಿಯರ್ಗಳು ಮತ್ತು 40,000 ನುರಿತ ಮತ್ತು ಕೌಶಲ್ಯರಹಿತ ಕಾರ್ಮಿಕರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದು ಪ್ರಧಾನಿ ಹೇಳಿದರು. ನವೀ ಮುಂಬೈ ವಿಮಾನ ನಿಲ್ದಾಣ, ಮುಂಬೈ ಟ್ರಾನ್ಸ್ ಹಾರ್ಬರ್ ಟರ್ಮಿನಲ್ ಮತ್ತು ಬುಲೆಟ್ ರೈಲು ಯೋಜನೆಯ ಉದಾಹರಣೆಗಳನ್ನು ಉಲ್ಲೇಖಿಸಿದ ಪ್ರಧಾನಿ, ಇಂದು ಕಾರ್ಯಗತವಾಗುತ್ತಿರುವ ಯೋಜನೆಗಳ ಪ್ರಮಾಣ ಮತ್ತು ವೇಗ ಅಭೂತಪೂರ್ವವಾಗಿದೆ ಎಂದರು.

ಭಾರತದಲ್ಲಿ ಮೆಟ್ರೋ ವ್ಯವಸ್ಥೆಯ ತ್ವರಿತ ವಿಸ್ತರಣೆಯ ಬಗ್ಗೆ ಮಾತನಾಡಿದ ಪ್ರಧಾನಿಯವರು, ಇತ್ತೀಚಿನವರೆಗೂ ಕೆಲವೇ ನಗರಗಳಲ್ಲಿ ಮೆಟ್ರೋ ಇತ್ತು, ಆದರೆ ಇಂದು 27 ನಗರಗಳಲ್ಲಿ ಮೆಟ್ರೋ ಅಸ್ತಿತ್ವದಲ್ಲಿದೆ ಅಥವಾ ಶೀಘ್ರದಲ್ಲಿಯೇ ಪ್ರಾರಂಭವಾಗುತ್ತಿದೆ ಎಂದು ಹೇಳಿದರು. “675 ಕಿ.ಮೀ ಮೆಟ್ರೋ ಮಾರ್ಗಗಳು ಇಂದು ಕಾರ್ಯನಿರ್ವಹಿಸುತ್ತಿವೆ, ಅವುಗಳಲ್ಲಿ ಸುಮಾರು 400 ಕಿ.ಮೀ ಕಳೆದ 5 ವರ್ಷಗಳಲ್ಲಿ ಕಾರ್ಯಾರಂಭ ಮಾಡಿವೆ. 850 ಕಿ.ಮೀ.ನಲ್ಲಿ ಕೆಲಸ ಪ್ರಗತಿಯಲ್ಲಿದೆ, 600 ಕಿ.ಮೀ ಮೆಟ್ರೋ ಮಾರ್ಗಗಳಿಗೆ ಕೆಲಸದ ಅನುಮೋದನೆ ನೀಡಲಾಗಿದೆ ”

ಅಭಿವೃದ್ಧಿಯನ್ನು ತ್ವರಿತಗತಿಯಲ್ಲಿ ಸಾಧಿಸುವ ಸಲುವಾಗಿ ಭಾರತದ ಮೂಲಸೌಕರ್ಯವನ್ನು ಸಮಗ್ರ ರೀತಿಯಲ್ಲಿ ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

ಮೊದಲ 100 ದಿನಗಳಲ್ಲಿ ಸರ್ಕಾರವು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಪ್ರಧಾನಿ ಹೇಳಿದರು. ಟ್ರಿಪಲ್ ತಲಾಖ್ ನಿಷೇಧ, ಮಕ್ಕಳ ಸುರಕ್ಷತೆಗಾಗಿ ಕಾಯ್ದೆ, ಜಲ್ ಜೀವನ್ ಮಿಷನ್, ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಉಲ್ಲೇಖಿಸಿ, ಸರ್ಕಾರ ನಿರ್ಣಾಯಕ ಮತ್ತು ಪರಿವರ್ತಕ ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಧಾನಿ ಹೇಳಿದರು.

ನಾಗರೀಕರ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುವ ಮಹತ್ವದ ಕುರಿತು ಮಾತನಾಡಿದ ಪ್ರಧಾನಿ, ಸುರಾಜ್ಯ ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದರು. ದೇಶದ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಒಂದು ಸಂಕಲ್ಪವನ್ನು ಮಾಡಬೇಕು ಮತ್ತು ಅದನ್ನು ಪೂರೈಸುವಲ್ಲಿ ಶ್ರಮಿಸಬೇಕು ಎಂದು ಪ್ರಧಾನಿ ಸೂಚಿಸಿದರು. ಗಣೇಶ ವಿಗ್ರಹಗಳ ವಿಸರ್ಜನೆಯ ಸಂದರ್ಭದಲ್ಲಿ ಜಲಮೂಲಗಳ ಮಾಲಿನ್ಯವನ್ನು ತಪ್ಪಿಸಬೇಕು ಎಂದು ಅವರು ಸಲಹೆ ನೀಡಿದರು, ಈ ಹಬ್ಬದ ಸಮಯದಲ್ಲಿ ಬಹಳಷ್ಟು ಪ್ಲಾಸ್ಟಿಕ್ ಮತ್ತು ತ್ಯಾಜ್ಯಗಳು ಸಮುದ್ರಕ್ಕೆ ಹೋಗುತ್ತವೆ ಎಂದು ಅವು ಹೇಳಿದರು. ಮಿಥಿ ನದಿ ಮತ್ತು ಇತರ ಜಲಮೂಲಗಳನ್ನು ಪ್ಲಾಸ್ಟಿಕ್ ಮುಕ್ತವಾಗಿಸುವಂತೆ ಅವರು ಜನರಿಗೆ ತಿಳಿಸಿದರು. ಆ ಮೂಲಕ ಭಾರತವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಪಾಲುದಾರರಾಗಿ ಭಾರತದ ಉಳಿದ ಭಾಗಗಳಿಗೆ ಒಂದು ಉದಾಹರಣೆಗಬಹುದು ಎಂದು ಅವರು ಹೇಳಿದರು.

 

ಯೋಜನೆಗಳ ಸಂಕ್ಷಿಪ್ತ ವಿವರಗಳು

ಪ್ರಧಾನಿಯವರು ಮೂರು ಮೆಟ್ರೋ ಮಾರ್ಗಗಳಿಗೆ ಶಿಲಾನ್ಯಾಸ ನೆರವೇರಿಸಿದ್ದು, ಇದು ನಗರದ ಮೆಟ್ರೋ ಜಾಲಕ್ಕೆ ಒಟ್ಟು 42 ಕಿ.ಮೀ. ಗಳನ್ನು ಸೇರಿಸುತ್ತವೆ. ಆ ಮೂರು ಕಾರಿಡಾರ್ಗಳೆಂದರೆ: 9.2 ಕಿ.ಮೀ ಉದ್ದದ ಗೈಮುಖ್ನಿಂದ ಶಿವಾಜಿಚೌಕ್ (ಮೀರಾ ರಸ್ತೆ) ಮೆಟ್ರೋ -10 ಕಾರಿಡಾರ್, 12.7 ಕಿ.ಮೀ ಉದ್ದದ ವಡಾಲಾದಿಂದ ಛತ್ರಪತಿಶಿವಾಜಿ ಮಹಾರಾಜ್ ಟರ್ಮಿನಸ್ ಮೆಟ್ರೋ -11 ಕಾರಿಡಾರ್ ಮತ್ತು 20.7 ಕಿ.ಮೀ ಉದ್ದದ ಕಲ್ಯಾಣದಿಂದ ತಲೋಜ ಮೆಟ್ರೋ -12 ಕಾರಿಡಾರ್.

ಅತ್ಯಾಧುನಿಕ ಮೆಟ್ರೋ ಭವನಕ್ಕೆ ಪ್ರಧಾನಿ ಅಡಿಪಾಯ ಹಾಕಿದರು. 32 ಅಂತಸ್ತಿನ ಕೇಂದ್ರವು ಸುಮಾರು 340 ಕಿ.ಮೀ.ನ 14 ಮೆಟ್ರೋ ಮಾರ್ಗಗಳನ್ನು ನಿರ್ವಹಿಸಿ, ನಿಯಂತ್ರಿಸುತ್ತದೆ.

ಕಾಂಡಿವಲಿ ಪೂರ್ವದ ಬಂದೋಂಗ್ರಿ ಮೆಟ್ರೋ ನಿಲ್ದಾಣವನ್ನು ಪ್ರಧಾನಿ ಉದ್ಘಾಟಿಸಿದರು. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ತಯಾರಾದ ಮೊದಲ ಅತ್ಯಾಧುನಿಕ ಮೆಟ್ರೋ ಬೋಗಿಯನ್ನು ಉದ್ಘಾಟಿಸಿದರು. ಮಹಾ ಮುಂಬೈ ಮೆಟ್ರೊಗಾಗಿ ಬ್ರಾಂಡ್ ವಿಷನ್ ಡಾಕ್ಯುಮೆಂಟ್ ಅನ್ನು ಪ್ರಧಾನ ಮಂತ್ರಿಯವರು ಬಿಡುಗಡೆ ಮಾಡಿದರು.

ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀ ಭಗತ್ ಸಿಂಗ್ ಕೊಶಿಯಾರಿ, ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್, ಕೇಂದ್ರ ರೈಲ್ವೆ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಶ್ರೀ ರಾಮದಾಸ್ ಅಠಾವಳೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.