ಪ್ರಧಾನಮಂತ್ರಿಯವರ ಕಾರ್ಯಾಲಯದಲ್ಲಿ ಪ್ರಸ್ತುತ ವಿಶೇಷಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ಪಿ.ಕೆ. ಸಿನ್ಹಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಅವರ ಪ್ರಧಾನ ಸಲಹೆಗಾರರಾಗಿ ನೇಮಕ ಮಾಡಲಾಗಿದೆ.
ಶ್ರೀ ಸಿನ್ಹಾ ಅವರು 13ನೇ ಜೂನ್ 2015 ರಿಂದ 30ನೇ ಆಗಸ್ಟ 2019ರವರೆಗೆ ಸಂಪುಟ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಉತ್ತರ ಪ್ರದೇಶ ಕೇಡರ್ ನ 1977ರ ತಂಡದ ಐ.ಎ.ಎಸ್. ಅಧಿಕಾರಿಯಾಗಿದ್ದಾರೆ. ಅವರ ಸೇವಾವಧಿಯಲ್ಲಿ ಶ್ರೀ ಸಿನ್ಹಾ ಇಂಧನ ಮತ್ತು ಹಡಗು ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಲ್ಲಿ ವಿಶೇಷ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.
ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಅವರು, ತರುವಾಯ, ದೆಹಲಿ ಅರ್ಥಶಾಸ್ತ್ರ ಶಾಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸೇವೆಯಲ್ಲಿರುವಾಗಲೇ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕ ಡಿಪ್ಲೊಮಾ ಮತ್ತು ಸಮಾಜ ವಿಜ್ಞಾನದಲ್ಲಿ ಎಂ.ಫಿಲ್ ಪದವಿ ಪಡೆದರು.
ಐ.ಎ.ಎಸ್. ಅಧಿಕಾರಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ಶ್ರೀ ಸಿನ್ಹಾ ಉತ್ತರ ಪ್ರದೇಶ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ವಿವಿಧ ಹುದ್ದೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರು.
ರಾಜ್ಯ ಸರ್ಕಾರದ ಮಟ್ಟದಲ್ಲಿ ಶ್ರೀ ಸಿನ್ಹಾ ಅವರು ಜೂನಾಪುರ ಮತ್ತು ಆಗ್ರಾದ ಜಿಲ್ಲಾಧಿಕಾರಿಗಳಾಗಿ, ವಾರಾಣಸಿ ಸಚಿವಾಲಯ (ಯೋಜನೆ) ಕಾರ್ಯದರ್ಶಿಯಾಗಿ ಮತ್ತು ಪ್ರಧಾನಕಾರ್ಯದರ್ಶಿ (ನೀರಾವರಿ) ಇತ್ಯಾದಿ ಹುದ್ದೆಗಳನ್ನು ನಿರ್ವಹಿಸಿದ್ದರು. ಕೇಂದ್ರ ಸರ್ಕಾರದಲ್ಲಿಯೂ ಹಲವು ವರ್ಷ ಸೇವೆ ಸಲ್ಲಿಸಿದ ಅವರು, ಪ್ರಮುಖವಾಗಿ ಇಂಧನ ಮತ್ತು ಮೂಲಸೌಕರ್ಯ ವಲಯಗಳಲ್ಲಿ ಅಂದರೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಇಂಧನ ಸಚಿವಾಲಯ ಮತ್ತು ಹಡಗು ಸಚಿವಾಲಯಗಳಲ್ಲಿ ಸೇವೆ ಸಲ್ಲಿಸಿದ್ದರು. ಅವರು ಇಂಧನ, ಮೂಲಸೌಕರ್ಯ ಮತ್ತು ಹಣಕಾಸು ಕ್ಷೇತ್ರದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ.