Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

‘ಮನ್ ಕಿ ಬಾತ್’ – 2.0 ನೇ ಮೊದಲ ಕಂತಿನ ಭಾಷಣದ ಕನ್ನಡ ಅವತರಣಿಕೆ


ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. ಒಂದು ಸುದೀರ್ಘ ವಿರಾಮದ ನಂತರ ಮತ್ತೊಮ್ಮೆ ನಿಮ್ಮೊಂದಿಗೆ ಮನದ ಮಾತು, ಜನರ ಮಾತು, ಜನಮಾನಸದ ಮಾತು, ಜನರ ಮನದ ಮಾತಿನ ಶೃಂಖಲೆಯನ್ನು ಆರಂಭಿಸುತ್ತಿದ್ದೇವೆ. ಚುನಾವಣೆಯ ಓಡಾಟದಲ್ಲಿ ಬಹಳಷ್ಟು ವ್ಯಸ್ತನಾಗಿದ್ದರೂ ಮನದ ಮಾತಿನ ಮೋಜು ನನಗೆ ಸಿಗುತ್ತಿರಲಿಲ್ಲ. ಏನೋ ಕಳೆದುಕೊಂಡಂತೆ ಭಾಸವಾಗುತ್ತಿತ್ತು. ನಮ್ಮವರೊಂದಿಗೆ ಕುಳಿತು, ಆಹ್ಲಾದಕರವಾದ ವಾತಾವರಣದಲ್ಲಿ 130 ಕೋಟಿ ದೇಶಬಾಂಧವರ ಕುಟುಂಬದ ಒಬ್ಬ ಸದಸ್ಯನಂತೆ ಎಷ್ಟೋ ಮಾತುಗಳನ್ನು ಕೇಳುತ್ತಿದ್ದೆವು, ಮತ್ತೆ ಮತ್ತೆ ಮಾತಾಡುತ್ತಿದ್ದೆವು, ಕೆಲವೊಮ್ಮೆ ನಮ್ಮ ಮಾತುಗಳೇ ನಮ್ಮವರಿಗೆ ಪ್ರೇರಣಾದಾಯಕವಾಗುತ್ತಿದ್ದವು. ಈ ಅವಧಿ ಹೇಗಿತ್ತು, ಹೇಗೆ ಸಾಗಿತ್ತು ಎಂದು ನೀವು ಊಹಿಸಬಹುದೇ . .. ಭಾನುವಾರ, ಕೊನೇ ಭಾನುವಾರ – 11 ಗಂಟೆಗೆ, ನನಗೆ ಏನೋ ಕಳೆದುಕೊಂಡಂತೆ ಭಾಸವಾಗುತ್ತಿತ್ತು, ನಿಮಗೂ ಹಾಗೇ ಅನ್ನಿಸುತ್ತಿತ್ತಲ್ಲವೇ! ಖಂಡಿತ ಅನ್ನಿಸಿರಬೇಕು. ಬಹುಶಃ ಇದು ಒಂದು ನಿರ್ಜೀವ ಕಾರ್ಯಕ್ರಮವೇನೂ ಆಗಿರಲಿಲ್ಲ. ಈ ಕಾರ್ಯಕ್ರಮದಲ್ಲಿ ಜೀವಂತಿಕೆ ಇತ್ತು, ಸ್ವಂತಿಕೆ ಇತ್ತು, ಮನಸ್ಸುಗಳು ಮೇಳೈಸಿದ್ದವು, ಹೃದಯಗಳು ಒಂದಾಗಿದ್ದವು. ಹಾಗಾಗಿ, ಈ ಮಧ್ಯದಲ್ಲಿ ಕಳೆದಂತಹ ಸಮಯ ನನಗೆ ಬಹಳ ಕಠಿಣವೆನಿಸಿತು. ನಾನು ಪ್ರತಿ ಕ್ಷಣವೂ ಏನನ್ನೋ ಕಳೆದುಕೊಂಡಂತೆ ಭಾಸವಾಗುತ್ತಿತ್ತು. ನಾನು ಮನದ ಮಾತನ್ನಾಡುವಾಗ, ನಾನು ಮಾತಾಡಿದರೂ, ಬಹುಶಃ ಶಬ್ದಗಳು ನನ್ನವಾದರೂ, ಧ್ವನಿ ನನ್ನದಾದರೂ, ಕಥೆ ನಿಮ್ಮದು, ಪುರುಷಾರ್ಥ ನಿಮ್ಮದು, ಪರಾಕ್ರಮ ನಿಮ್ಮದು. ನಾನು ಕೇವಲ, ನನ್ನ  ಶಬ್ದಗಳನ್ನ, ನನ್ನ ಧ್ವನಿಯನ್ನು ಉಪಯೋಗಿಸುತ್ತಿದ್ದೆ ಹಾಗೂ ಇದೇ ಕಾರಣದಿಂದಲೇ ನಾನು ಈ ಕಾರ್ಯಕ್ರಮವನ್ನಲ್ಲ ಬದಲಿಗೆ ನಿಮ್ಮನ್ನು miss ಮಾಡಿಕೊಳ್ಳುತ್ತಿದ್ದೆ. ಒಂದು ರೀತಿಯಲ್ಲಿ ಏಕಾಂಗಿತನ ಆವರಿಸಿತ್ತು. ಒಮ್ಮೆಯಂತೂ ಚುನಾವಣೆ ಮುಗಿದ ತಕ್ಷಣವೇ ನಿಮ್ಮ ಬಳಿಗೆ ಬರಬೇಕೆಂದೆನಿಸಿತ್ತು. ಆದರೆ, ಭಾನುವಾರದಂದು ಬರುವ ಆ ಕ್ರಮ ತಪ್ಪಿಸಬಾರದೆಂದು ಮತ್ತೆ ಅನಿಸಿತು. ಆದರೆ, ಈ ಭಾನುವಾರ ನನ್ನನ್ನು ಬಹಳ ಕಾಯುವಂತೆ ಮಾಡಿದೆ. ಆದರೆ, ಕೊನೆಗೂ ಆ ಅವಕಾಶ ದೊರೆಯಿತು. ಒಂದು ಕುಟುಂಬದ ವಾತಾವರಣದಲ್ಲಿ ‘ಮನದಾಳದ ಮಾತು’, ಚಿಕ್ಕ-ಪುಟ್ಟ, ಸರಳ ಮಾತುಗಳು, ಜೀವನದಲ್ಲಿ ಬದಲಾವಣೆಗೆ ಕಾರಣವಾಗುತ್ತದೆ. ಒಂದು ರೀತಿಯಲ್ಲಿ ಈ ಪ್ರಕ್ರಿಯೆ ಒಂದು ಹೊಸ ಹುರುಪಿಗೆ ಜನ್ಮ ನೀಡುತ್ತಾ, ಒಂದು ನವ ಭಾರತದ ಹುಮ್ಮಸಿಗೆ ಸಾಮರ್ಥ್ಯ ನೀಡುತ್ತಾ ನಮ್ಮ ಮಾತುಕತೆ ಮುಂದುವರೆಯಲಿ.

ಕಳೆದ ಕೆಲ ತಿಂಗಳಲ್ಲಿ ಬಹಳಷ್ಟು ಸಂದೇಶಗಳು ಬಂದಿವೆ. ಅದರಲ್ಲಿ ಜನರು ಮನದ ಮಾತನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ನಾನಿದನ್ನು ಓದಿದಾಗ ಮತ್ತು ಕೇಳಿದಾಗ ನನಗೆ ಬಹಳ ಆನಂದವೆನ್ನಿಸುತ್ತದೆ, ಆತ್ಮೀಯತೆಯ ಭಾವ ಮೂಡುತ್ತದೆ. ಕೆಲವೊಮ್ಮೆ ನನಗೆ ಇದು ಸ್ವ ದಿಂದ ಸಮಷ್ಟಿಯ ಯಾತ್ರೆಯಂತೆ ಭಾಸವಾಗುತ್ತದೆ. ಇದು ನನ್ನ ಅಹಂ ದಿಂದ ವಯಂ ದ ಯಾತ್ರೆಯಾಗಿದೆ. ನಿಮ್ಮೊಂದಿಗಿನ ಈ ಮೌನ ಸಂವಾದ ನನಗೆ ಒಂದು ರೀತಿಯಲ್ಲಿ ಆಧ್ಯಾತ್ಮಿಕ ಯಾತ್ರೆಯ ಅನುಭೂತಿಯ ಅಂಶವಾಗಿದೆ. ಚುನಾವಣೆಯ ಗಡಿಬಿಡಿಯಲ್ಲಿ ನಾನು ಕೇದಾರನಾಥಕ್ಕೆ ಏಕೆ ಹೋದೆ ಎಂದು ಬಹಳಷ್ಟು ಜನರು ನನ್ನ ಪ್ರಶ್ನೆ ಕೇಳಿದ್ದಾರೆ. ನಿಮ್ಮ ಹಕ್ಕಿದು. ನಿಮ್ಮ ಜಿಜ್ಞಾಸೆ ನನಗೆ ಅರ್ಥವಾಗುತ್ತದೆ. ಆದರೆ ನನ್ನ ಭಾವನೆಗಳನ್ನು ನಿಮಗೆ ತಲುಪಿಸಬೇಕೆಂದು ನನಗೂ ಅನ್ನಿಸುತ್ತದೆ. ಆದರೆ ನನಗೆ ಇಂದು ನಾನು ಆ ದಿಕ್ಕಿನತ್ತ ಹೊರಟರೆ ಮನದ ಮಾತಿನ ರೂಪವೇ ಬದಲಾಗುತ್ತದೆ ಎಂದು ನನಗೆ ಅನಿಸುತ್ತದೆ. ಆದ್ದರಿಂದಲೇ ಚುನಾವಣೆಯ ಗಡಿಬಿಡಿ, ವಿಜಯ-ಪರಾಜಯದ ಅನುಮಾನ, ಪೋಲಿಂಗ್ ಸಹ ಇನ್ನೂ ಬಾಕಿ ಇತ್ತು ಮತ್ತು ನಾನು ಹೊರಟುಬಿಟ್ಟೆ. ಹೆಚ್ಚಿನ ಜನರು ಅದಕ್ಕೂ  ರಾಜಕೀಯದ ಅರ್ಥ ಕಲ್ಪಿಸಿದರು. ಆದರೆ ನನಗೆ ನನ್ನ ಸಾಕ್ಷಾತ್ಕಾರದ ಅವಕಾಶ ಅದಾಗಿತ್ತು. ಒಂದು ರೀತಿಯಲ್ಲಿ ನಾನು ನನ್ನನ್ನೇ ಭೇಟಿಯಾಗಲು ಹೊರಟಿದ್ದೆ. ಇನ್ನೂ ಹೆಚ್ಚಿನ ವಿಷಯ ಇಂದು ಹೇಳಲ್ಲ ಆದರೆ ಮನದ ಮಾತಿನ ಈ ಅಲ್ಪವಿರಾಮದ ಕಾಲಘಟ್ಟವನ್ನು ತುಂಬುವಂಥ ಕೆಲಸಕ್ಕೆ ಕೇದಾರನಾಥದ ಆ ಗುಹೆಯಲ್ಲಿ ಅವಕಾಶ ಲಭಿಸಿತು ಎಂದು ಮಾತ್ರ ಹೇಳಬಲ್ಲೆ. ಉಳಿದಂತೆ ನಿಮ್ಮ ಜಿಜ್ಞಾಸೆಗೆ ಬಿಟ್ಟಿದ್ದು – ಒಂದೊಮ್ಮೆ ಆ ಬಗ್ಗೆಯೂ ಚರ್ಚೆ ಮಾಡುವೆ ಎಂದುಕೊಳ್ಳುತ್ತೇನೆ. ಯಾವಾಗ ಮಾತನಾಡುವೆ ಎಂದು ಹೇಳಲಾಗದು, ಆದರೆ ಖಂಡಿತ ಮಾತನಾಡುವೆ, ಏಕೆಂದರೆ ನಿಮಗೆ ನನ್ನ ಮೇಲೆ ಹಕ್ಕಿದೆ. ಕೇದಾರದ ವಿಷಯಗಳನ್ನು ತಿಳಿದುಕೊಳ್ಳಲು ಜನರು ಹೇಗೆ ಆಸಕ್ತಿ ತೋರಿದ್ದಾರೋ ಹಾಗೆಯೇ ಸಕಾರಾತ್ಮಕ ವಿಷಯಗಳಿಗೆ ಶಕ್ತಿಯನ್ನು ತುಂಬುವಂತಹ ನಿಮ್ಮ ಪ್ರಯತ್ನ ನಿಮ್ಮ ಮಾತಿನಲ್ಲಿ ನಿರಂತರವಾಗಿ ನನಗೆ ಕಾಣಿಸುತ್ತದೆ. ಮನದ ಮಾತಿಗಾಗಿ ಬರುವಂತಹ ಪತ್ರಗಳು, ಸಿಗುವ ಇನ್ಪುಟ್ ಅವು ನಿತ್ಯದ ಸರ್ಕಾರೀ ಕಾರ್ಯಕಲಾಪಗಳಿಗಿಂತ ಭಿನ್ನವಾಗಿರುತ್ತದೆ. ಒಂದು ರೀತಿ ನಿಮ್ಮ ಪತ್ರಗಳು ನನಗೆ ಪ್ರೇರಣಾದಾಯಕವಾದರೆ ಕೆಲವೊಮ್ಮೆ ಶಕ್ತಿಯನ್ನು ನೀಡುತ್ತವೆ. ಒಮ್ಮೊಮ್ಮೆ ನನ್ನ ಆಲೋಚನಾ ಲಹರಿಗೆ ತೀವ್ರತೆಯನ್ನು ನೀಡುವಂತಹ ಕೆಲಸವನ್ನು ನಿಮ್ಮ ಕೆಲ ಶಬ್ದಗಳು ಮಾಡುತ್ತವೆ. ಜನರು, ದೇಶ ಮತ್ತು ಸಮಾಜ ಎದುರಿಸುತ್ತಿರುವ ಕೆಲ ಸವಾಲುಗಳನ್ನು ಮುಂದಿಡುತ್ತಾರೆ ಜೊತೆಗೆ ಅದಕ್ಕೆ ಪರಿಹಾರವನ್ನೂ ಸೂಚಿಸುತ್ತಾರೆ. ಜನರು ಪತ್ರಗಳಲ್ಲಿ ಸಮಸ್ಯೆಗಳನ್ನು ಚರ್ಚಿಸುತ್ತಾರೆ ಆದರೆ ಯಾವುದಾದರೂ ಕಲ್ಪನೆ ಇಲ್ಲವೆ ಸಲಹೆ ಮೂಲಕ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಪರಿಹಾರವನ್ನೂ ತಿಳಿಸುವುದು ವಿಶೇಷವಾಗಿದೆ. ಯಾರಾದರೂ ಸ್ವಚ್ಛತೆ ಬಗ್ಗೆ ಬರೆಯುತ್ತಾರೆ ಎಂದರೆ ಮಾಲಿನ್ಯತೆ ಬಗ್ಗೆ ತನ್ನ ಕೋಪವನ್ನು ವ್ಯಕ್ತಪಡಿಸುತ್ತಾರೆ. ಆದರೆ ಸ್ವಚ್ಛತೆಯನ್ನು ಕಾಪಾಡುವ ಪ್ರಯತ್ನಗಳ ಕುರಿತು ಮೆಚ್ಚುಗೆಯನ್ನೂ ವ್ಯಕ್ತಪಡಿಸುತ್ತಾರೆ. ಪರಿಸರದ ಚರ್ಚೆಯನ್ನು ಮಾಡಿದಾಗ ಅದರ ನೋವಂತೂ ಅನುಭವವಾಗುತ್ತದೆ ಆದರೆ ಅದರ ಜೊತೆಗೆ ಸ್ವಂತ ಪ್ರಯತ್ನದ ಕುರಿತೂ ತಿಳಿಸುತ್ತಾರೆ. ತಾವು ನೋಡಿದ ಪ್ರಯೋಗಗಳ ಕುರಿತು ಹೇಳುತ್ತಾರೆ ಮತ್ತು ತಮ್ಮ ಮನದಲ್ಲಿರುವ ಚಿತ್ರಣವನ್ನೂ ಬಿಂಬಿಸುತ್ತಾರೆ. ಅಂದರೆ ಒಂದು ರೀತಿಯಲ್ಲಿ ಸಮಾಜವ್ಯಾಪಿ ಸಮಸ್ಯೆಗೆ ಪರಿಹಾರ ಹೇಗಿರಬೇಕು ಎಂಬುದರ ನೋಟ ನಿಮ್ಮ ಮಾತಿನಲ್ಲಿ ನನಗೆ ಕಂಡುಬರುತ್ತದೆ. ಮನದ ಮಾತು ದೇಶ ಮತ್ತು ಸಮಾಜಕ್ಕೆ ಒಂದು ಕನ್ನಡಿಯಂತಿದೆ. ಇದು ನಮಗೆ ದೇಶ ಬಾಂಧವರ ಆಂತರಿಕ ಸಾಮರ್ಥ್ಯ, ಶಕ್ತಿ ಮತ್ತು ಪ್ರತಿಭೆಯ ಕೊರತೆ ಇಲ್ಲ. ಆ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಒಗ್ಗೂಡಿಸುವ, ಅವಕಾಶಗಳನ್ನು ಒದಗಿಸುವ, ಅದನ್ನು ಕಾರ್ಯರೂಪಕ್ಕೆ ತರುವ ಅವಶ್ಯಕತೆಯಿದೆ. ದೇಶದ ಅಭಿವೃದ್ಧಿಗಾಗಿ ದೇಶದ 130 ಕೋಟಿ ಜನರು ಸಾಮರ್ಥ್ಯಥ್ರ್ಯದೊಂದಿಗೆ ಸಕ್ರಿಯವಾಗಿ ತೊಡಗಲು ಬಯಸುತ್ತಾರೆ ಎಂಬುದನ್ನು ಮನದ ಮಾತು ತಿಳಿಸುತ್ತದೆ. ಮನದ ಮಾತಿನಲ್ಲಿ ನನಗೆ ಎಷ್ಟೊಂದು ಪತ್ರಗಳು ಬರುತ್ತವೆ,  ಎಷ್ಟೊಂದು ದೂರವಾಣಿ ಕರೆಗಳು ಬರುತ್ತವೆ. ಎಷ್ಟೊಂದು ಸಂದೇಶಗಳು ದೊರೆಯುತ್ತವೆ ಆದರೆ ದೂರುಗಳು ಬಹಳ ಕಡಿಮೆಯೇ ಇರುತ್ತವೆ. ಆದರೆ ಯಾರಾದರೂ ಏನಾದರೂ ಬೇಕೆಂದು ಕೇಳಿರುವುದು ಅದರಲ್ಲೂ ತಮ್ಮ ಸ್ವಾರ್ಥಕ್ಕಾಗಿ ಕೇಳಿರುವುದು ಕಳೆದ 5 ವರ್ಷಗಳಲ್ಲಿ ನನ್ನ ಗಮನಕ್ಕೆ ಬಂದಿಲ್ಲ. ದೇಶದ ಪ್ರಧಾನಮಂತ್ರಿಗೆ ಪತ್ರ ಬರೆದರೂ ತನಗಾಗಿ ಏನೂ ಕೇಳುವುದಿಲ್ಲ ಎಂಬುದನ್ನು ನೀವು ಊಹಿಸಬಹುದೇ! ಅಂದರೆ ದೇಶದ ಕೋಟ್ಯಾಂತರ ಜನರ ಭಾವನೆ ಎಷ್ಟು ಮಹತ್ತರವಾದದ್ದು ಎಂಬುದನ್ನು ನೀವೇ ಊಹಿಸಿ. ನಾನು ಈ ವಿಷಯಗಳನ್ನು ವಿಶ್ಲೇಷಣೆ ಮಾಡಿದಾಗ ನನ್ನ ಮನಸ್ಸಿಗೆ ಎಷ್ಟು ಸಂತೋಷವಾಗುವುದು ನನಗೆ ಎಷ್ಟೊಂದು ಶಕ್ತಿ ದೊರೆಯುತ್ತದೆ ಎಂಬುದನ್ನು ನೀವೇ ಕಲ್ಪಿಸಿಕೊಳ್ಳಬಹುದು.  ನನ್ನನ್ನು ನೀವೇ ಮುನ್ನಡೆಸುತ್ತೀರಿ, ನನಗೆ ವೇಗವನ್ನು ನೀಡುತ್ತೀರಿ, ಕ್ಷಣ ಕ್ಷಣವೂ ಜೀವಂತಿಕೆಯನ್ನು ತುಂಬುತ್ತಿದ್ದೀರಿ ಎಂಬ ಕಲ್ಪನೆ ನಿಮಗಿಲ್ಲ. ಇದೇ ಬಾಂಧವ್ಯವನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೆ. ಇಂದು ನನ್ನ ಮನಸ್ಸು ಸಂಭ್ರಮಿಸುತ್ತಿದೆ. ನಾನು ಕೊನೆಯ ಹಂತದಲ್ಲಿ 3-4 ತಿಂಗಳುಗಳ ನಂತರ ಮತ್ತೆ ಭೇಟಿಯಾಗೋಣ ಎಂದಾಗ ಜನರು ಅದರಲ್ಲೂ ರಾಜಕೀಯ ಅರ್ಥವನ್ನು ಹುಡುಕಿದ್ದರು. ಮೋದಿಜಿ ಅವರಿಗೆ ಎಷ್ಟು ಆತ್ಮ ವಿಶ್ವಾಸವಿದೆ, ಎಷ್ಟು ನಂಬಿಕೆ ಇದೆ ಎಂದು ಜನರು ಅನ್ನುತ್ತಿದ್ದರು. ಆತ್ಮ ವಿಶ್ವಾಸ ಮೋದಿಯದ್ದಲ್ಲ. ಈ ವಿಶ್ವಾಸ ನಿಮ್ಮ ವಿಶ್ವಾಸದ ಬುನಾದಿಯಾಗಿದೆ. ನೀವೇ ವಿಶ್ವಾಸದ ರೂಪ ಧರಿಸಿದ್ದೀರಿ. ಆದ್ದರಿಂದಲೇ ಕೊನೆಯ ಮನದ ಮಾತಿನಲ್ಲಿ ಕೆಲ ತಿಂಗಳ ನಂತರ ಮತ್ತೆ ಭೇಟಿಯಾಗೋಣ ಎಂದು ಸಹಜವಾಗಿಯೇ ಹೇಳಿದ್ದೆ. ನಿಜ ಹೇಳಬೇಕೆಂದರೆ ನಾನು ಬಂದಿಲ್ಲ ನೀವು ನನ್ನನ್ನು  ಕರೆತಂದಿರುವಿರಿ. ನೀವೇ ನನ್ನನ್ನು ಆರಿಸಿದ್ದೀರಿ. ನೀವೇ ನನಗೆ ಮತ್ತೊಮ್ಮೆ ಮಾತನಾಡುವ ಅವಕಾಶ ನೀಡಿದ್ದೀರಿ. ಇದೇ ಭಾವನೆಯೊಂದಿಗೆ ಬನ್ನಿ ನಮ್ಮ ಮನದ ಮಾತನ್ನು ಮುಂದುವರೆಸೋಣ. 

ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಣೆಯಾದಾಗ ಅದರ ವಿರೋಧ ರಾಜನೈತಿಕ ಪರಿಧಿಗೆ ಸೀಮಿತವಾಗಿರಲಿಲ್ಲ. ರಾಜಕೀಯ ಧುರೀಣರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಜೈಲಿನ ಸಲಾಕೆಗಳವರೆಗೆ ಚಳುವಳಿ ಹಬ್ಬಿರಲಿಲ್ಲ. ಜನರ ಮನದಲ್ಲಿ ಆಕ್ರೋಶವಿತ್ತು. ಕಳೆದುಹೋದ ಪ್ರಜಾಪ್ರಭುತ್ವದ ತಪನವಿತ್ತು. ಹಗಲು ರಾತ್ರಿ ಸಮಯಕ್ಕೆ ಸರಿಯಾಗಿ ಊಟ ಮಾಡುತ್ತಿದ್ದರೆ ಹಸಿವೆ ಏನೆಂಬುದು ಅರ್ಥವಾಗುವುದಿಲ್ಲ. ಹಾಗೆಯೇ ಸಾಮಾನ್ಯ ಜೀವನದಲ್ಲಿ ಪ್ರಜಾಪ್ರಭುತ್ವದ ಅಧಿಕಾರದ ಅನುಕೂಲಗಳೇನು ಎಂಬುದು ಪ್ರಜಾಪ್ರಭುತ್ವದ ಅಧಿಕಾರ ಕಿತ್ತುಕೊಂಡಾಗ ಅರ್ಥವಾಗುತ್ತದೆ. ಆಪತ್ಕಾಲದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಜೀವನದುದ್ದಕ್ಕೂ ತನ್ನದೇನನ್ನೋ ಕಿತ್ತುಕೊಂಡಂತಹ ಅನುಭವವಾಗುತ್ತಿತ್ತು. ತಾನು ಜೀವನದುದ್ದಕ್ಕೂ ಬಳಸದೇ ಇದ್ದುದನ್ನೂ ಕಿತ್ತುಕೊಂಡರೆ ಎಂಬ ನೋವು ಅವನ ಮನದಲ್ಲಿತ್ತು. ಭಾರತದ ಸಂವಿಧಾನ ಕೆಲ ವ್ಯವಸ್ಥೆ ಮಾಡಿರುವುದರಿಂದ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ. ಸಮಾಜ ವ್ಯವಸ್ಥೆಯನ್ನು ಮುನ್ನಡೆಸಲು ಸಂವಿಧಾನದ ಅವಶ್ಯಕತೆಯಿದೆ. ಕಾಯ್ದೆ ಕಾನೂನು, ನಿಯಮಗಳ ಅವಶ್ಯಕತೆಯಿದೆ. ಅಧಿಕಾರ ಮತ್ತು ಕರ್ತವ್ಯದ ಮಾತೂ ನಡೆಯುತ್ತದೆ ಆದರೆ ಕಾನೂನು ಮತ್ತು ನಿಯಮಗಳ ಹೊರತಾಗಿ ಪ್ರಜಾಪ್ರಭುತ್ವವೆಂಬುದು ನಮ್ಮ ಸಂಸ್ಕಾರ, ಪ್ರಜಾಪ್ರಭುತ್ವ ನಮ್ಮ ಸಂಸ್ಕೃತಿ ಮತ್ತು ಪ್ರಜಾಪ್ರಭುತ್ವ ನಮ್ಮ ಬಳುವಳಿಯಾಗಿದೆ ಎಂದು ಭಾರತ ಹೆಮ್ಮೆಯಿಂದ ಹೇಳಬಲ್ಲುದು. ಈ ಬಳುವಳಿಯೊಂದಿಗೆಯೇ ನಾವು ಬೆಳೆದಿದ್ದೇವೆ. ಆದ್ದರಿಂದಲೇ ಅದರ ಕೊರತೆ ದೇಶದ ಜನರ ಅನುಭವಕ್ಕೆ ಬರುತ್ತದೆ. ತುರ್ತು ಪರಿಸ್ಥಿತಿಯಲ್ಲಿ ನಾವು ಅನುಭವಿಸಿದ್ದೇವೆ. ಆದ್ದರಿಂದಲೇ ದೇಶ ತನಗಾಗಿ, ತನ್ನ ಹಿತಕ್ಕಾಗಿ ಅಲ್ಲದೇ ಪ್ರಜಾಪ್ರಭುತ್ವದ ರಕ್ಷಣೆಗೆ ಕರೆ ನೀಡಿತ್ತು. ಬಹುಶಃ ವಿಶ್ವದ ಯಾವುದೇ ದೇಶದ ಜನತೆ ತಮ್ಮ ಇತರೆ ಹಕ್ಕುಗಳು, ಅವಶ್ಯಕತೆಗಳು, ಅಧಿಕಾರಗಳನ್ನು ಲೆಕ್ಕಿಸದೇ ಕೇವಲ ಪ್ರಜಾಪ್ರಭುತ್ವಕ್ಕಾಗಿ ಮತದಾನ ಮಾಡಿರಲಿಕ್ಕಿಲ್ಲ. ಇಂಥ ಒಂದು ಚುನಾವಣೆಯನ್ನು ನಮ್ಮ ದೇಶ 77 ರಲ್ಲಿ ಕಂಡಿತ್ತು. ಇತ್ತೀಚೆಗೆ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ಮಹಾಪರ್ವ, ಬಹುದೊಡ್ಡ ಚುನಾವಣಾ ಅಭಿಯಾನ ಪೂರ್ಣಗೊಂಡಿದೆ. ಬಡವ ಬಲ್ಲಿದರಿಂದ ಎಲ್ಲರೂ ಈ ಪರ್ವದಲ್ಲಿ ಸಂತೋಷದಿಂದ ನಮ್ಮ ದೇಶದ ಭವಿಷ್ಯ ನಿರ್ಧರಿಸಲು ಕಾತುರರಾಗಿದ್ದರು. 

ಯಾವುದೇ ವಸ್ತು ನಮ್ಮ ಹತ್ತಿರದಲ್ಲಿಯೇ ಇದ್ದಾಗ ನಾವು ಅದರ ಮಹತ್ವವನ್ನು ಕಡೆಗಣಿಸುತ್ತೇವೆ. ಅದರ ಅದ್ಭುತ ವಿಷಯಗಳೂ ಗಣನೆಗೆ ಬರುವುದಿಲ್ಲ. ನಮಗೆ ದೊರೆತ ಬಹಳ ಅಮೂಲ್ಯವಾದ ಪ್ರಜಾಪ್ರಭುತ್ವವನ್ನು ನಾವು ಗ್ರ್ಯಾಂಟೆಡ್ ಆಗಿ ತೆಗೆದುಕೊಳ್ಳುತ್ತೇವೆ, ಆದರೆ ಸಹಸ್ರಾರು ವರ್ಷಗಳ ಸಾಧನೆಯಿಂದ, ತಲೆಮಾರುಗಳ ಸಂಸ್ಕಾರಗಳಿಂದ, ಒಂದು ವಿಶಾಲವಾದ ಮನಸ್ಥಿತಿಯಿಂದ ವ್ಯಕ್ತಿಗತವಾಗಿ – ಪ್ರಜಾಪ್ರಭುತ್ವ ಬಹಳ ಅಮೂಲ್ಯವಾದದ್ದು ಮತ್ತು ಈ ಪ್ರಜಾಪ್ರಭುತ್ವಕ್ಕೆ ನಮ್ಮ ನರನಾಡಿಗಳಲ್ಲಿ ಸ್ಥಳ ದೊರೆತಿದೆ ಎಂಬುದನ್ನು ನೆನಪಿಸಿಕೊಡಬೇಕು. ಭಾರತದಲ್ಲಿ ನಡೆದ 2019 ರ ಚುನಾವಣೆಯಲ್ಲಿ 61 ಕೋಟಿ ಜನರು ಮತದಾನ ಮಾಡಿದರು. 61 ಕೋಟಿ ಜನ! ಈ ಸಂಖ್ಯೆ ನಮಗೆ ಬಹಳ ಸಾಮಾನ್ಯವಾದುದೆನ್ನಿಸಬಹುದು. ಆದರೆ ವಿಶ್ವಮಟ್ಟದಲ್ಲಿ ಹೇಳುವುದಾದರೆ ಚೀನಾ ಒಂದನ್ನು ಬಿಟ್ಟು ಭಾರತದಲ್ಲಿ ಬೇರಾವುದೇ ದೇಶದ ಜನಸಂಖ್ಯೆಗಿಂತ ಹೆಚ್ಚಿನ ಜನರು ಮತದಾನ ಮಾಡಿದ್ದರು. 2019 ರ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಿದವರ ಒಟ್ಟು ಸಂಖ್ಯೆ ಅಮೇರಿಕದ ಒಟ್ಟು ಜನಸಂಖ್ಯೆಗಿಂತಲೂ ಅಧಿಕ. ಸುಮಾರು ದುಪ್ಪಟ್ಟು ಸಂಖ್ಯೆ. ಭಾರತದಲ್ಲಿಯ ಒಟ್ಟು ಮತದಾರರ ಸಂಖ್ಯೆ ಯುರೋಪ್ನ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚು. ಇದು ನಮ್ಮ  ಪ್ರಜಾಪ್ರಭುತ್ವದ ವ್ಯಾಪಕತೆ ಮತ್ತು ವಿಶಾಲತೆಯ ಪರಿಚಯ ನೀಡುತ್ತದೆ.  2019 ರ ಲೋಕಸಭೆ ಚುನಾವಣೆ ಇತಿಹಾಸದಲ್ಲಿಯೇ ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವದ ಚುನಾವಣೆ ಎನಿಸಿದೆ. ಇಂಥ ಒಂದು ಚುನಾವಣೆಯನ್ನು ಪೂರ್ಣಗೊಳಿಸಲು ಎಷ್ಟೊಂದು ಸಂಪನ್ಮೂಲಗಳ ಮತ್ತು ಮಾನವ ಶಕ್ತಿಯ ಅವಶ್ಯಕತೆಯಿರಬಹುದು ಎಂಬುದನ್ನು ನೀವು ಊಹಿಸಬಹುದು. ಲಕ್ಷಾಂತರ ಶಿಕ್ಷಕರು, ಅಧಿಕಾರಿಗಳು ಮತ್ತು ಕೆಲಸಗಾರರ ಹಗಲಿರುಳಿನ ಶ್ರಮದಿಂದ ಚುನಾವಣೆ ಸಾಧ್ಯವಾಗಿದೆ. ಪ್ರಜಾಪ್ರಭುತ್ವದ ಈ ಮಹಾಯಾಗವನ್ನು ಸಫಲತೆಯಿಂದ ಪೂರ್ಣಗೊಳಿಸಲು ಅರೆಸೇನಾಪಡೆಯ ಸುಮಾರು 3 ಲಕ್ಷ ಸೈನಿಕರು ಕರ್ತವ್ಯ ಮೆರೆದಿದ್ದಾರೆ. ಹಾಗೆಯೇ ಬೇರೆ ಬೇರೆ ರಾಜ್ಯಗಳ ಸುಮಾರು 20 ಲಕ್ಷ ಪೋಲಿಸರು ಕೂಡಾ ಸಂಪೂರ್ಣ ಪರಿಶ್ರಮವಹಿಸಿದ್ದಾರೆ. ಈ ಜನರ ಕಠಿಣ ಪರಿಶ್ರಮದ ಫಲವಾಗಿ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಮತದಾನವಾಗಿದೆ. ಮತದಾನಕ್ಕಾಗಿ ಸಂಪೂರ್ಣ ದೇಶದಲ್ಲಿ ಸುಮಾರು 10 ಲಕ್ಷ ಮತದಾನ ಕೇಂದ್ರಗಳು, ಸುಮಾರು 40 ಲಕ್ಷಕ್ಕಿಂತ ಹೆಚ್ಚು ಇವಿಎಂ ಮೆಶಿನ್ಗಳು 17 ಲಕ್ಷಕ್ಕಿಂತ ಹೆಚ್ಚು ವಿವಿ ಪ್ಯಾಟ್ ಮೆಶಿನ್ಗಳು. ಎಷ್ಟೊಂದು ದೊಡ್ಡ ಪ್ರಮಾಣದ ತಯಾರಿ ಎಂದು ನೀವು ಊಹಿಸಬಹುದು. ಯಾವುದೇ ಮತದಾರನೂ ತನ್ನ ಮತ ನೀಡುವ ಅಧಿಕಾರದಿಂದ ವಂಚಿತನಾಗಬಾರದು ಎಂಬುದನ್ನು ಖಾತರಿಪಡಿಸಲು ಇದೆಲ್ಲವನ್ನೂ ಮಾಡಲಾಗಿತ್ತು. ಅರುಣಾಚಲ ಪ್ರದೇಶದ ಒಂದು ದೂರದ ಸ್ಥಳದಲ್ಲಿ ಕೇವಲ ಓರ್ವ ಮಹಿಳಾ ಮತದಾರಳಿಗಾಗಿ ಮತದಾನ ಕೇಂದ್ರ ಸ್ಥಾಪಿಸಲಾಗಿತ್ತು. ಚುನಾವಣಾ ಅಧಿಕಾರಿಗಳು ಅಲ್ಲಿಗೆ ತಲುಪಲು ಎರಡೆರಡು ದಿನ ಪಯಣಿಸಬೇಕಿತ್ತು ಎಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ಇದೇ ಪ್ರಜಾಪ್ರಭುತ್ವದ ನಿಜವಾದ ಸಮ್ಮಾನವಲ್ಲವೇ. ವಿಶ್ವದ ಅತಿ ಎತ್ತರದಲ್ಲಿ ಸ್ಥಾಪಿತವಾದ ಮತದಾನ ಕೇಂದ್ರವೂ ಭಾರತದಲ್ಲಿಯೇ ಇದೆ. ಈ ಮತದಾನ ಕೇಂದ್ರ ಹಿಮಾಚಲ ಪ್ರದೇಶದ ಲಾಹೌಲ್ – ಸ್ಫಿತಿ ಕ್ಷೇತ್ರದಲ್ಲಿ 15,000 ಅಡಿ ಎತ್ತರದಲ್ಲಿದೆ. ಇದಲ್ಲದೆ ಈ ಬಾರಿಯ ಚುನಾವಣೆಯಲ್ಲಿ ಹೆಮ್ಮೆ ಪಡುವಂಥ ಮತ್ತೊಂದು ವಿಷಯವಿದೆ. ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಮಹಿಳೆಯರು ಪುರುಷರಂತೆ ಉತ್ಸಾಹದಿಂದ ಮತದಾನ ಮಾಡಿದರು. ಈ ಬಾರಿಯ ಚುನಾವಣೆಯಲ್ಲಿ ಮಹಿಳೆಯರು ಮತ್ತು ಪುರುಷರ ಮತದಾನ ಹೆಚ್ಚು ಕಡಿಮೆ ಸಮವಾಗಿತ್ತು. ಇದರೊಟ್ಟಿಗೆ ಉತ್ಸಾಹ ಹೆಚ್ಚಿಸುವಂಥ ಸತ್ಯ ಇನ್ನೂ ಒಂದಿದೆ – ಇಂದು ಸಂಸತ್ತಿನಲ್ಲಿ 78 ಮಹಿಳಾ ಸಂಸದರಿರುವುದು ದಾಖಲೆಯ ಸಂಗತಿಯಾಗಿದೆ. ನಾನು ಚುನಾವಣಾ ಆಯೋಗಕ್ಕೆ, ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಪ್ರತಿ ವ್ಯಕ್ತಿಗೆ ಅನಂತ ಅನಂತ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಮತ್ತು ಭಾರತದ ಜಾಗರೂಕ ಮತದಾರರಿಗೆ ನಮಿಸುತ್ತೇನೆ. 

ನನ್ನ ಪ್ರಿಯ ದೇಶಬಾಂಧವರೆ, ನೀವು ಬಹಳಷ್ಟು ಸಲ ‘ಬೊಕೆ ಅಲ್ಲ ಬುಕ್’ ಎಂದು ನಾನು ಹೇಳಿದ್ದನ್ನು ಕೇಳಿರಬಹುದು. ನಾವು ಆದರ ಸತ್ಕಾರ ಮಾಡುವಾಗ ಹೂವಿನ ಬದಲಾಗಿ ಪುಸ್ತಕಗಳನ್ನು ನೀಡಬಹುದೇ ಎಂಬುದು ನನ್ನ ಆಗ್ರಹವಾಗಿತ್ತು. ಅಂದಿನಿಂದ ಜನರು ಹೆಚ್ಚೆಚ್ಚು ಪುಸ್ತಕಗಳನ್ನು ನೀಡುತ್ತಿದ್ದಾರೆ. ನನಗೆ ಇತ್ತೀಚೆಗೆ ಯಾರೋ ಪ್ರೇಮ್ಚಂದ್ ಅವರ ಲೋಕಪ್ರಿಯ ಕಥೆಗಳು ಎಂಬ ಪುಸ್ತಕ ನೀಡಿದರು. ನನಗೆ ಬಹಳ ಖುಷಿ ಎನಿಸಿತು. ಹೆಚ್ಚಿನ ಸಮಯ ದೊರೆಯದಿದ್ದರೂ ಪ್ರವಾಸದ ವೇಳೆ ನನಗೆ ಮತ್ತೊಮ್ಮೆ ಅವರ ಕೆಲವು ಕಥೆಗಳನ್ನು ಓದುವ ಅವಕಾಶ ಲಭಿಸಿತು. ಪ್ರೇಮ್ಚಂದ್ ತಮ್ಮ ಕಥೆಗಳಲ್ಲಿ ರೂಪಿಸಿರುವ ಸಮಾಜದ ಚಿತ್ರಣ ಓದುತ್ತಾ ಹೋದಂತೆ ನಿಮ್ಮ ಮನದಲ್ಲಿ ಮೂಡುತ್ತಾ ಹೋಗುತ್ತದೆ. ಅವರು ಬರೆದ ಒಂದೊಂದೂ ವಿಷಯ ಜೀವ ತಳೆಯುತ್ತಾ ಸಾಗುತ್ತದೆ. ಸಹಜ, ಸರಳ ಭಾಷೆಯಲ್ಲಿ ಮಾನವೀಯ ಸಂವೇದನೆಗಳನ್ನು ಅಭಿವ್ಯಕ್ತಪಡಿಸುವ ಅವರ ಕಥೆಗಳು ನನ್ನ ಮನಸ್ಸನ್ನೂ  ತಾಕಿದವು. ಅವರ ಕಥೆಗಳಲ್ಲಿ ಸಂಪೂರ್ಣ ಭಾರತದ ಮನಸ್ಥಿತಿ ಮಿಳಿತವಾಗಿದೆ. ಅವರು ಬರೆದ ‘ನಶಾ’ ಎಂಬ ಕಥೆಯನ್ನು ನಾನು ಓದುತ್ತಿದ್ದಾಗ ನನ್ನ ಮನಸ್ಸು ಸಮಾಜದಲ್ಲಿ ಪಸರಿಸಿದ ಆರ್ಥಿಕ ವಿಷಮತೆಯತ್ತ ಹೊರಳಿತು. ನನಗೆ ನನ್ನ ಯೌವನದ ದಿನಗಳಲ್ಲಿ ಹೇಗೆ ರಾತ್ರಿ ಪೂರ್ತಿ ಈ ವಿಷಯದ ಕುರಿತು ಚರ್ಚೆ ನಡೆಯುತ್ತಿತ್ತು ಎಂಬುದು ನೆನಪಾಯಿತು. ಜಮೀನ್ದಾರರ ಮಗ ಈಶ್ವರೀ ಮತ್ತು ಬಡ ಕುಟುಂಬದ ಬೀರ್ ನ ಈ ಕಥೆಯಿಂದ -ನೀವು ಎಚ್ಚರವಾಗಿರದಿದ್ದರೆ ದುಷ್ಟರ ಸಂಗ ಯಾವಾಗ ನಿಮ್ಮನ್ನು ಮುತ್ತಿಕೊಳ್ಳುತ್ತದೆ ಎಂಬುದು ತಿಳಿಯುವುದೇ ಇಲ್ಲ ಎಂಬುದು ಅರ್ಥವಾಗುತ್ತದೆ. ನನ್ನ ಮನಸ್ಸನ್ನು ಗಾಢವಾಗಿ ಕಲಕಿದ ಇನ್ನೊಂದು ಕಥೆ “ಈದ್ಗಾ”. ಓರ್ವ ಬಾಲಕನ ಸಂವೇದನಶೀಲತೆ ಮತ್ತು ತನ್ನ ಅಜ್ಜಿಗಾಗಿ ಆತನ ನಿರ್ಮಲ ಪ್ರೇಮ, ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಪರಿಪಕ್ವ ಭಾವ. 4-5 ವರ್ಷಗಳ ವಯಸ್ಸಿನ ಹಾಮೀದ್ ಜಾತ್ರೆಯಿಂದ ಇಕ್ಕಳ ತೆಗೆದುಕೊಂಡು ತನ್ನ ಅಜ್ಜಿಯ ಬಳಿ ತಲುಪಿದಾಗ ನಿಜವಾಗಿಯೂ ಮಾನವೀಯ ಸಂವೇದನೆ ಪರಾಕಾಷ್ಟೆ ತಲುಪುತ್ತದೆ. ಈ ಕಥೆಯ ಕೊನೇ ಸಾಲುಗಳು ಬಹಳ ಭಾವುಕವಾಗಿವೆ ಏಕೆಂದರೆ ಅದರಲ್ಲಿ ಜೀವನದ ಬಹು ದೊಡ್ಡ ನಿಜಾರ್ಥ ಅಡಗಿದೆ. ಬಾಲಕ ಹಾಮೀದ್ ವೃದ್ಧ ಹಾಮೀದ್ ನ ಪಾತ್ರ ಮಾಡಿದ್ದ. ವೃದ್ಧೆ ಆಮೀನಾ ಬಾಲಕಿ ಆಮೀನಾ ಆಗಿಬಿಟ್ಟಿದ್ದಳು.

ಇಂಥದೇ ಒಂದು ಮಾರ್ಮಿಕ ಕಥೆ “ಪೂಸ್ ಕಿ ರಾತ್”. ಈ ಕಥೆಯಲ್ಲಿ ಒಬ್ಬ ಬಡ ಕೃಷಿಕನ ಜೀವನದ ವಿಡಂಬನೆಯ ಚಿತ್ರಣ ನೋಡಲು ಸಿಕ್ಕಿತು. ತನ್ನ ಬೆಳೆ ನಷ್ಟವಾದ ಮೇಲೆ ಕೂಡಾ ಹಲ್ದು ಎಂಬ ರೈತ ನಡುಗುವ ಚಳಿಯಲ್ಲಿ ಹೊಲದಲ್ಲಿ ಮಲಗುವ ಪ್ರಮೇಯವಿಲ್ಲ ಎಂದು ಸಂತೋಷಪಡುತ್ತಾನೆ. ಈ ಕಥೆಗಳು ನೂರಾರು ವರ್ಷಗಳಷ್ಟು ಹಳೆಯದಾದರೂ ಇವುಗಳು ಇಂದಿಗೂ ಪ್ರಸ್ತುತವೆನಿಸುತ್ತವೆ. ಇವುಗಳನ್ನು ಓದಿದ ಮೇಲೆ ನನಗೆ ವಿಭಿನ್ನ ಪ್ರಕಾರದ ಅನುಭವವಾಗಿದೆ. 

ಓದುವ ಕುರಿತು ಮಾತಾಡುತ್ತಿರುವಾಗ, ಯಾವುದೋ ಮಾಧ್ಯಮದಲ್ಲಿ ಕೇರಳದ ಅಕ್ಷರಾ ಗ್ರಂಥಾಲಯದ ಕುರಿತು ಓದುತ್ತಿದ್ದೆ. ಈ ಗ್ರಂಥಾಲಯ ಇಡುಕ್ಕಿಯ ದಟ್ಟವಾದ ಅರಣ್ಯ ಪ್ರದೇಶದ ಮಧ್ಯದಲ್ಲಿರುವ ಒಂದು ಪುಟ್ಟ ಗ್ರಾಮದಲ್ಲಿದೆ ಎಂದು ತಿಳಿಯಲು ನಿಮಗೆ ಆಶ್ಚರ್ಯವೆನ್ನಿಸಬಹುದು. ಇಲ್ಲಿಯ ಪ್ರಾಥಮಿಕ ವಿದ್ಯಾಲಯದ ಶಿಕ್ಷಕ ಪಿ ಕೆ ಮುರುಳಿಧರನ್ ಮತ್ತು ಪುಟ್ಟ ಚಹಾ ಗೂಡಂಗಡಿಯನ್ನು ನಡೆಸುವ ಪಿ ವಿ ಚಿನ್ನತಂಬಿ, ಇವರಿಬ್ಬರೂ ಈ ಗ್ರಂಥಾಲಯಕ್ಕಾಗಿ ಬಹಳ ಶ್ರಮಿಸಿದ್ದಾರೆ. ಮೂಟೆಯಲ್ಲಿ ಕಟ್ಟಿಕೊಂಡು ಬೆನ್ನ ಮೇಲೆ ಹೇರಿಕೊಂಡು ಪುಸ್ತಕಗಳನ್ನು ಇಲ್ಲಿಗೆ ತಂದ ದಿನಗಳೂ ಇವೆ. ಇಂದು ಈ ಗ್ರಂಥಾಲಯ ಬುಡಕಟ್ಟು ಜನರ ಜೊತೆಗೆ ಎಲ್ಲರಿಗೂ ಒಂದು ಹೊಸ ದಿಕ್ಕನ್ನು ತೋರುತ್ತಿದೆ.                                                                    

ಗುಜರಾತಿನ – ‘ವಾಂಚೆ ಗುಜರಾತ್ ಅಭಿಯಾನ’ ಯಶಸ್ವಿ ಪ್ರಯೋಗವಾಗಿತ್ತು. ಲಕ್ಷಾಂತರ ಸಂಖ್ಯೆಯಲ್ಲಿ ಎಲ್ಲ ವಯೋಮಾನದ, ಎಲ್ಲ ವರ್ಗದ ಜನರು ಪುಸ್ತಕಗಳನ್ನು ಓದಲು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಇಂದಿನ ಡಿಜಿಟಲ್ ಯುಗದಲ್ಲಿ, ಗೂಗಲ್ ಗುರುವಿನ ಸಮಯದಲ್ಲಿ, ನೀವು ನಿಮ್ಮ ದೈನಂದಿನ ಕೆಲಸದ ನಡುವೆ ಕೆಲ ಸಮಯವನ್ನು ಪುಸ್ತಕಗಳನ್ನು ಓದಲು ಮೀಸಲಿರಿಸಿ ಎಂದು ನಾನು ನಿಮ್ಮನ್ನು ಆಗ್ರಹಿಸುತ್ತೇನೆ. ನೀವು ಇದನ್ನು ಖಂಡಿತ ಆನಂದಿಸುತ್ತೀರಿ ಮತ್ತು ನೀವು ಯಾವುದೇ ಪುಸ್ತಕ ಓದಿದರೂ ನರೇಂದ್ರ ಮೋದಿ ಆಪ್ ನಲ್ಲಿ ಖಂಡಿತಾ ಬರೆಯಿರಿ. ಮನದ ಮಾತಿನ ಕೇಳುಗರೆಲ್ಲರೂ ಆ ಬಗ್ಗೆ ತಿಳಿಯಲಿ.

ನನ್ನ ಪ್ರಿಯ ದೇಶ ಬಾಂಧವರೇ, ನಮ್ಮ ದೇಶದ ಜನರು ಕೇವಲ ವರ್ತಮಾನದ ವಿಷಯಗಳಲ್ಲದೇ, ಭವಿಷ್ಯದಲ್ಲೂ ಸವಾಲಾಗಬಹುದಾದಂತಹ ವಿಷಯಗಳ ಕುರಿತು ಚಿಂತಿಸುತ್ತಿದ್ದಾರೆ ಎಂಬುದನ್ನು ಅರಿತು ನನಗೆ ಸಂತೋಷವಾಗುತ್ತಿದೆ. ನಾನು NarendraModi App ಮತ್ತು Mygovನಲ್ಲಿ ನಿಮ್ಮ ಅಭಿಪ್ರಾಯಗಳನ್ನು ಓದುತ್ತಿದ್ದೆ ಹಾಗೂ ನೀರಿನ ಸಮಸ್ಯೆ ಕುರಿತು ಬಹಳಷ್ಟು ಜನರು ಬರೆದಿದ್ದಾರೆ. ಬೆಳಗಾವಿಯ ಪವನ್ ಗೌರಾಯಿ, ಭುವನೇಶ್ವರದ ಸಿತಾಂಶು ಮೋಹನ್ ಪರೀದಾ, ಹಾಗೂ ಯಶ್ ಶರ್ಮಾ, ಶಾಹಬ್ ಅಲ್ತಾಫ್ ಇನ್ನೂ ಕೆಲವಾರು ಜನರು ನನಗೆ ನೀರಿನ ಸವಾಲುಗಳ ಬಗ್ಗೆ ಬರೆದಿದ್ದಾರೆ. ನಮ್ಮ ಸಂಸ್ಕೃತಿಯಲ್ಲಿ ನೀರಿಗೆ ಬಹಳ ಮಹತ್ವ ನೀಡಲಾಗಿದೆ. ಋಗ್ವೇದದ ಆಪಃ ಸೂಕ್ತದಲ್ಲಿ ನೀರಿನ ಬಗ್ಗೆ ಹೇಳಲಾಗಿದೆ. 

ಆಪೊ ಹಿಷ್ಟಾ ಮಯೋ ಭುವಃ, ಸ್ಥಾ ನ ಊರ್ಜೆ ದಧಾತನ, ಮಹೆ ರಣಾಯ ಚಕ್ಷಸೆ, 

ಯೊ ವಃ ಶಿವತಮೊ ರಸಃ, ತಸ್ಯ ಭಾಜಯತೆ ನಃ, ಉಷತೀರಿವ ಮಾತರಃ.

ಅಂದರೆ, ಜಲವೇ ಪ್ರಾಣ ಶಕ್ತಿ, ಶಕ್ತಿಯ ಮೂಲ, ನೀವು ತಾಯಿಯ ಸಮಾನ ಅಂದರೆ ಮಾತೆಯಂತೆ ಆಶೀರ್ವದಿಸಿ. ನಿಮ್ಮ ಕೃಪೆ ನಮ್ಮ ಮೇಲೆ ಸದಾ ಇರಲಿ. ಎಂದರ್ಥ. ನೀರಿನ ಅಭಾವದಿಂದ ದೇಶದ ಎಷ್ಟೋ ಭಾಗಗಳು ಪ್ರತಿವರ್ಷವೂ ಸಂಕಷ್ಟಕ್ಕೊಳಗಾಗುತ್ತವೆ. ನಮ್ಮ ದೇಶದಲ್ಲಿ ವರ್ಷಪೂರ್ತಿ ಮಳೆಯಿಂದ ಲಭಿಸುವ ನೀರಿನ ಕೇವಲ 8% ರಷ್ಟು ನೀರನ್ನು ಮಾತ್ರ ಸಂರಕ್ಷಿಸಲಾಗುತ್ತದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಕೇವಲ 8%, ಈಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲೇಬೇಕಾದ ಸಮಯ ಸನ್ನಿಹಿತವಾಗಿದೆ. ಜನರ ಪಾಲುದಾರಿಕೆಯಿಂದ, ಜನರ ಶಕ್ತಿಯಿಂದ 130 ಕೋಟಿ ದೇಶಬಾಂಧವರ ಸಾಮರ್ಥ್ಯ, ಸಹಕಾರ ಮತ್ತು ಸಂಕಲ್ಪದಿಂದ ಉಳಿದ ಇತರ ಸಮಸ್ಯೆಗಳಂತೆ ನಾವು ಈ ಸಮಸ್ಯೆಗೂ ಪರಿಹಾರ ಕಂಡುಕೊಳ್ಳುತ್ತೇವೆ ಎಂಬ ವಿಶ್ವಾಸ ನನಗಿದೆ. ನೀರಿನ ಮಹತ್ವವನ್ನು ಉಚ್ಚಮಟ್ಟದಲ್ಲಿ ಪರಿಗಣಿಸಿ ದೇಶದಲ್ಲಿ ಜಲಶಕ್ತಿ ಸಚಿವಾಲಯ ನಿರ್ಮಿಸಲಾಗಿದೆ. ಇದರಿಂದ ನೀರಿಗೆ ಸಂಬಂಧಿಸಿದ ಎಲ್ಲ ವಿಷಯಗಳ ಕುರಿತು ಶೀಘ್ರಗತಿಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು. ಕೆಲ ದಿನಗಳ ಹಿಂದೆ ನಾನು ಹೊಸ ಪ್ರಯೋಗಕ್ಕೆ ಪ್ರಯತ್ನಿಸಿದೆ. ದೇಶದ ಎಲ್ಲ ಸರಪಂಚರಿಗೆ ಪತ್ರ ಬರೆದೆ. ನೀರಿನ ಉಳಿತಾಯಕ್ಕಾಗಿ. ನೀರು ಸಂಗ್ರಹಣೆಗೆ, ಮಳೆ ನೀರಿನ ಒಂದೊಂದು ಹನಿಯನ್ನು ಸಂರಕ್ಷಿಸಲು ಗ್ರಾಮ ಸಭೆಗಳನ್ನು ಆಯೋಜಿಸಿ, ಗ್ರಾಮಸ್ಥರೊಂದಿಗೆ ಚರ್ಚಿಸಬೇಕೆಂದು ಗ್ರಾಮ ಮುಖ್ಯಸ್ಥರಿಗೆ ಬರೆದೆ. ಅವರು ಈ ಕೆಲಸದಲ್ಲಿ ಸಾಕಷ್ಟು ಉತ್ಸಾಹ ತೋರಿದ್ದಾರೆ ಎಂದು ನನಗೆ ಆನಂದವಾಗಿದೆ. ಈ ತಿಂಗಳ 22 ನೇ ತಾರೀಖಿನಂದು ಸಾವಿರಾರು ಪಂಚಾಯಿತಿಗಳಲ್ಲಿ ಕೋಟ್ಯಾಂತರ ಜನರು ಶ್ರಮದಾನ ಮಾಡಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ಜನರು ನೀರಿನ ಒಂದೊಂದು ಹನಿಯನ್ನು ಸಂರಕ್ಷಿಸಲು ಸಂಕಲ್ಪಗೈದರು. 

ಇಂದು ಮನದ ಮಾತಿನಲ್ಲಿ ನಾನು ಒಬ್ಬ ಸರಪಂಚರ ಮಾತನ್ನು ಕೇಳಿಸಬಯಸುತ್ತೇನೆ. ಜಾರ್ಖಂಡ್ದ ಹಜಾರಿಬಾಗ್ ಜಿಲ್ಲೆಯ ಕಟಕಂಸಾಂಡಿ ಬ್ಲಾಕ್ನ ಲುಪುಂಗ್ ಪಂಚಾಯತಿಯ ಸರಪಂಚರು ನಮ್ಮೆಲ್ಲರಿಗೂ ಏನೆಂದು ಸಂದೇಶ ನೀಡಿದ್ದಾರೆ ಕೇಳಿ 

“ನನ್ನ ಹೆಸರು ದಿಲೀಪ್ ಕುಮಾರ್ ರವಿದಾಸ್. ಜಲ ಸಂರಕ್ಷಣೆಗೆ ಪ್ರಧಾನ ಮಂತ್ರಿಗಳು ನಮಗೆ ಪತ್ರ ಬರೆದಾಗ ಪ್ರಧಾನಿಗಳು ನಮಗೆ ಪತ್ರ ಬರೆದಿದ್ದಾರೆ ಎಂದು ನಂಬಲಾಗಲಿಲ್ಲ. 22 ನೇ ತಾರೀಖಿನಂದು ಗ್ರಾಮಸ್ಥರನ್ನು ಒಗ್ಗೂಡಿಸಿ ಪ್ರಧಾನ ಮಂತ್ರಿಗಳು ಬರೆದ ಪತ್ರ ಓದಿ ಹೇಳಿದಾಗ ಅವರೆಲ್ಲರೂ ಬಹಳ ಉತ್ಸುಕರಾದರು. ನೀರಿನ ಸಂರಕ್ಷಣೆಗಾಗಿ ಕೊಳಗಳ ಸ್ವಚ್ಛತೆ ಮತ್ತು ಹೊಸ ಕೊಳಗಳ ನಿರ್ಮಾಣಕ್ಕೆ ಶ್ರಮದಾನ ಮಾಡಿ ತಮ್ಮ ಪಾಲುದಾರಿಕೆ ನಿಭಾಯಿಸಲು ಸಿದ್ಧರಾದರು. ಮಳೆಗಾಲಕ್ಕೆ ಮೊದಲೇ ಈ ಉಪಾಯ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ನಮಗೆ ನೀರಿನ ಅಭಾವವಾಗುವುದಿಲ್ಲ.  ನಮ್ಮ ಪ್ರಧಾನಮಂತ್ರಿಗಳು ನಮಗೆ ಸರಿಯಾದ ಸಮಯಕ್ಕೆ ನೆನಪಿಸಿದ್ದು ಒಳ್ಳೆಯದಾಯಿತು”.

ಬಿರ್ಸಾ ಮುಂಡಾ ನೆಲದಲ್ಲಿ ಪ್ರಕೃತಿಯೊಂದಿಗೆ ಹೊಂದಿಕೊಂಡು ಜೀವಿಸುವುದು ಸಂಸ್ಕೃತಿಯ ಒಂದು ಭಾಗವಾಗಿದೆ. ಅಲ್ಲಿಯ ಜನ ಮತ್ತೊಮ್ಮೆ ಜಲ ಸಂರಕ್ಷಣೆಗೆ ಸಕ್ರೀಯವಾಗಿ ಪಾಲ್ಗೊಳ್ಳಲು ಸಿದ್ಧರಾಗಿದ್ದಾರೆ. ನನ್ನ ಕಡೆಯಿಂದ ಎಲ್ಲ ಗ್ರಾಮ ಮುಖ್ಯಸ್ಥüರಿಗೆ ಮತ್ತು ಎಲ್ಲ ಸರಪಂಚರಿಗೆ ಅವರ ಕೆಲಸದಲ್ಲಿ ಶುಭವಾಗಲಿ ಎಂದು ಹಾರೈಸುತ್ತೇನೆ. ದೇಶದಾದ್ಯಂತ ಜಲ ಸಂರಕ್ಷಣೆಗೆ ಪಣ ತೊಟ್ಟ ಬಹಳಷ್ಟು ಜನ ಸರಪಂಚರಿದ್ದಾರೆ. ಒಂದು ರೀತಿಯಲ್ಲಿ ಇದು ಸಂಪೂರ್ಣ ಗ್ರಾಮಕ್ಕೆ ದೊರೆತ ಅವಕಾಶವಾಗಿದೆ. ಗ್ರಾಮದ ಜನತೆ ತಮ್ಮ ಗ್ರಾಮಗಳಲ್ಲಿ ಜಲಮಂದಿರ ನಿರ್ಮಾಣದ ಸ್ಪರ್ದೆಯಲ್ಲಿ ತೊಡಗಿರುವಂತೆ ಭಾಸವಾಗುತ್ತಿದೆ. ಸಾಮೂಹಿಕ ಪ್ರಯತ್ನದಿಂದ ದೊಡ್ಡ ಸಕಾರಾತ್ಮಕ ಫಲಿತಾಂಶಗಳು ಲಭಿಸುತ್ತವೆ. ಸಂಪೂರ್ಣ ದೇಶದಲ್ಲಿ ಜಲಸಂಕಟದಿಂದ ಪಾರಾಗುವ ಒಂದೇ ಸೂತ್ರ ಇರಲಾರದು. ಇದಕ್ಕಾಗಿ ದೇಶದ ಬೇರೆ ಬೇರೆ ಸ್ಥಳಗಳಲ್ಲಿ ವಿಭಿನ್ನ ರೀತಿಯಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಎಲ್ಲರ ಗುರಿ ಒಂದೇ. ಅದೇ ನೀರಿನ ಉಳಿತಾಯ, ಜಲ ಸಂರಕ್ಷಣೆ. 

ಪಂಜಾಬ್ನಲ್ಲಿ ಒಳಚರಂಡಿಗಳನ್ನು ದುರಸ್ತಿ ಮಾಡಲಾಗುತ್ತಿದೆ. ಈ ಪ್ರಯತ್ನದಿಂದ ನೀರು ನಿಲ್ಲುವ ಸಮಸ್ಯೆಯಿಂದ ಮುಕ್ತಿ ಲಭಿಸುವುದು. ತೆಲಂಗಾಣದ ತಿಮ್ಮೈ ಪಲ್ಲಿಯಲ್ಲಿ ಟ್ಯಾಂಕ್ ನಿರ್ಮಾಣದಿಂದ ಜನರ ಜೀವನ ಬದಲಾಗುತ್ತಿದೆ. ರಾಜಸ್ಥಾನದ ಕಬೀರ್ಧಾಮ್ ನಲ್ಲಿ ಹೊಲಗದ್ದೆಗಳಲ್ಲಿ ನಿರ್ಮಿಸಲಾದ ಪುಟ್ಟ ಹೊಂಡಗಳಿಂದ ಬಹು ದೊಡ್ಡ ಬದಲಾವಣೆ ಸಾಧ್ಯವಾಗಿದೆ. ತಮಿಳುನಾಡಿನ ವೆಲ್ಲೋರ್ದಲ್ಲಿ ಕೈಗೊಳ್ಳಲಾದ ಒಂದು ಸಾಮೂಹಿಕ ಪ್ರಯತ್ನದ ಕುರಿತು ನಾನು ಓದುತ್ತಿದ್ದೆ, ಅಲ್ಲಿ ನಾಗ ನದಿಯ ಪುನರುಜ್ಜೀವನ ಕಾರ್ಯಕ್ಕೆ 20 ಸಾವಿರ ಮಹಿಳೆಯರು ಒಗ್ಗೂಡಿ ಬಂದರು. ಗಡ್ವಾಲದ ಮಹಿಳೆಯರು ಒಗ್ಗೂಡಿ ಮಳೆ ನೀರು ಸಂಗ್ರಹ ಕುರಿತು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿರುವ ಬಗ್ಗೆಯೂ ನಾನು ಓದಿದ್ದೇನೆ. ಇಂಥ ಹಲವಾರು ಪ್ರಯತ್ನಗಳು ಮಾಡಲಾಗುತ್ತಿದೆ ಎಂದು ನಾನು ನಂಬಿದ್ದೇನೆ. ನಾವೆಲ್ಲರೂ ಒಗ್ಗೂಡಿ ಶ್ರಮವಹಿಸಿ ಇಂಥ ಪ್ರಯತ್ನಗಳನ್ನು ಮಾಡಿದಾಗ ಅಸಾಧ್ಯವೂ ಸಾಧ್ಯವಾಗುತ್ತದೆ. ಜನರು ಒಂದಾದಾಗ ಜಲವು ಸುರಕ್ಷಿತವಾಗುತ್ತದೆ. ಮನದ ಮಾತಿನ ಮೂಲಕ ಇಂದು ನಾನು ದೇಶದ ಜನತೆಯ ಮುಂದೆ ಮೂರು ಬೇಡಿಕೆಗಳನ್ನು ಇಡುತ್ತಿದ್ದೇನೆ.

                ದೇಶದ ಜನತೆ ಸ್ವಚ್ಛತೆಗೆ ಹೇಗೆ ಒಂದು ಚಳುವಳಿಯ ರೂಪವನ್ನು ನೀಡಿದ್ದರೋ, ಹಾಗೆಯೇ ಜಲ ಸಂರಕ್ಷಣೆಯನ್ನೂ ಒಂದು ಜನಾಂದೋಲನವಾಗಿ ಆರಂಭಿಸಿ ಎಂಬುದು ನನ್ನ ಮೊದಲ ಮನವಿ. ನಾವೆಲ್ಲರೂ ಒಗ್ಗೂಡಿ ನೀರಿನ ಒಂದೊಂದು ಹನಿಯನ್ನು ರಕ್ಷಿಸುವ ಸಂಕಲ್ಪಗೈಯ್ಯೋಣ ಮತ್ತು ನೀರು ಆ ಪರಮಾತ್ಮ ನೀಡಿದ ಪ್ರಸಾದ ಎಂಬುದು ನನ್ನ ವಿಶ್ವಾಸ. ನೀರು ಸ್ಫಟಿಕ ರೂಪಿ, ಹಿಂದೆ ಸ್ಫಟಿಕ ಸ್ಪರ್ಶ ದಿಂದ ಲೋಹ ಚಿನ್ನವಾಗುತ್ತದೆ ಎಂದು ಹೇಳಲಾಗುತ್ತಿತ್ತು. ನೀರೇ ಸ್ಫಟಿಕ ಮತ್ತು ಈ ಸ್ಫಟಿಕ ಸ್ಪರ್ಶದಿಂದ ನವ ಜೀವನ ನಿರ್ಮಾಣವಾಗುತ್ತದೆ ಎಂದು ನಾನು ಹೇಳುತ್ತೇನೆ. ನೀರಿನ ಒಂದೊಂದು ಹನಿಯನ್ನೂ ಸಂರಕ್ಷಿಸಲು ಒಂದು ಜಾಗೃತಿ ಚಳುವಳಿ ಆರಂಭಿಸಿ, ಇದರಲ್ಲಿ ನೀರಿನ ಸಮಸ್ಯೆಗಳ ಕುರಿತು ತಿಳಿಸಿ ಜೊತೆಗೆ ಜಲ ಸಂರಕ್ಷಣೆಯ ವಿಧಿ ವಿಧಾನಗಳನ್ನು ಪ್ರಚಾರ ಮಾಡಿ. ವಿಶಿಷ್ಠವಾದ ಪ್ರಚಾರಗಳ ನೇತೃತ್ವ ವಹಿಸಲು ಆಗ್ರಹಿಸುತ್ತೇನೆ. ಚಲನ ಚಿತ್ರ ಜಗತ್ತೇ ಆಗಿರಲಿ, ಕ್ರೀಡಾ ಜಗತ್ತೇ ಆಗಿರಲಿ, ನಮ್ಮ ಮಾಧ್ಯಮ ಮಿತ್ರರೇ ಆಗಿರಲಿ, ಸಾಮಾಜಿಕ ಸಂಘಟನೆಗಳೊಂದಿಗೆ ಕೆಲಸ ಮಾಡುವವರೇ ಆಗಿರಲಿ, ಸಾಂಸ್ಕøತಿಕ ಸಂಘಟನೆಗಳೊಂದಿಗೆ ಕೆಲಸ ಮಾಡುವವರಾಗಿರಲಿ, ಕಥೆ ಕೀರ್ತನೆಗಳನ್ನು ಹೇಳುವವರಾಗಿರಲಿ, ಎಲ್ಲರೂ ತಮ್ಮದೇ ರೀತಿಯಲ್ಲಿ ಈ ಚಳುವಳಿಯ ನೇತೃತ್ವ ವಹಿಸಲಿ. ಸಮಾಜವನ್ನು ಜಾಗೃತಗೊಳಿಸಲಿ, ಸಮಾಜವನ್ನು ಒಗ್ಗೂಡಿಸಲಿ, ಸಮಾಜದೊಂದಿಗೆ ಕೈಜೋಡಿಸಲಿ. ನೀವೇ ನೋಡಿ ನಮ್ಮ ಕಣ್ಣ ಮುಂದೆಯೇ ನಾವು ಪರಿವರ್ತನೆ ಆಗುವುದನ್ನು ಕಾಣಬಹುದಾಗಿದೆ.

ದೇಶವಾಸಿಗಳಲ್ಲಿ ನನ್ನ 2 ನೇ ಮನವಿ – ನಮ್ಮ ದೇಶದಲ್ಲಿ ಅನಾದಿಕಾಲದಿಂದಲೂ ಜಲ ಸಂರಕ್ಷಣೆಗೆ ಹಲವಾರು ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಜಲ ಸಂರಕ್ಷಣೆಯ ಆ ಪಾರಂಪರಿಕ ವಿಧಾನಗಳನ್ನು ಹಂಚಿಕೊಳ್ಳುವಂತೆ ನಿಮ್ಮೆಲ್ಲರಲ್ಲೂ ಕೇಳಿಕೊಳ್ಳುತ್ತೇನೆ. ನಿಮಗೆ ಪೋರ್ಬಂದರ್ನಲ್ಲಿರುವ ಪೂಜ್ಯ ಬಾಪೂಜಿಯವರ ಜನ್ಮ ಸ್ಥಳಕ್ಕೆ ಭೇಟಿ ನೀಡುವ ಅವಕಾಶ ಲಭಿಸಿರಬಹುದು. ಪೂಜ್ಯ ಬಾಪೂಜಿಯವರ ಮನೆ ಹಿಂದೆಯೇ ಇನ್ನೊಂದು ಮನೆಯಿದೆ. ಅಲ್ಲಿ 200 ವರ್ಷಗಳಷ್ಟು ಹಳೆಯದಾದ ನೀರಿನ ಟ್ಯಾಂಕ್ ಇದೆ. ಇಂದಿಗೂ ಅದರಲ್ಲಿ ನೀರಿದೆ. ಮಳೆ ನೀರನ್ನು ಹಿಡಿದಿಡುವ ವ್ಯವಸ್ಥೆಯಿದೆ. ಕೀರ್ತಿ ಮಂದಿರಕ್ಕೆ ಯಾರೇ ಭೇಟಿ ನೀಡಲಿ ಆ ನೀರಿನ ಟ್ಯಾಂಕ್ ಖಂಡಿತ ನೋಡಿ ಎಂದು ನಾನು ಯಾವತ್ತೂ ಹೇಳುತ್ತೇನೆ. ಇಂಥ ಹಲವು ಬಗೆಯ ಪ್ರಯತ್ನಗಳು ವಿವಿಧೆಡೆ ಆಗಿರಬಹುದು. 

ನಿಮ್ಮಲ್ಲಿ ನನ್ನ 3 ನೇ ವಿನಂತಿ – ಜಲ ಸಂರಕ್ಷಣೆಯಲ್ಲಿ ಮಹತ್ವಪೂರ್ಣ ಪಾಲುದಾರಿಕೆ ನೀಡುತ್ತಿರುವ ಜನರ, ಸ್ವಯಂ ಸೇವಾ ಸಂಸ್ಥೆಗಳ ಮತ್ತು ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬರ ಕುರಿತಾದ ಮಾಹಿತಿಯನ್ನು ಹಂಚಿಕೊಳ್ಳಿ. ಇದರಿಂದ ನೀರಿನ ಸಮೃದ್ಧತೆಗಾಗಿ ಸಮರ್ಪಿತವಾದ, ನೀರಿಗಾಗಿ ಸಕ್ರಿಯವಾಗಿ ಕೆಲಸ ಮಾಡುವ ಸಂಘಟನೆಗಳ ಮತ್ತು ವ್ಯಕ್ತಿಗಳ ಒಂದು ಮಾಹಿತಿ ಕೋಶವನ್ನು ತಯಾರಿಸಲು ಸಹಾಯವಾಗುತ್ತದೆ. ಬನ್ನಿ ನಾವೆಲ್ಲರೂ ಜಲಸಂರಕ್ಷಣೆಗೆ ಸಂಬಂಧಿಸಿದ ಹೆಚ್ಚು ವಿಧಾನಗಳ ಪಟ್ಟಿ ತಯಾರಿಸಿ ಜನರನ್ನು ಜಲಸಂರಕ್ಷಣೆಗೆ ಪ್ರೇರೇಪಿಸೋಣ. ನೀವು # #JanShakti4JalShakti ಹ್ಯಾಶ್ಟ್ಯಾಗ್ ಬಳಸಿ ನಿಮ್ಮ ಬಳಿ ಇರುವ ಮಾಹಿತಿಯನ್ನು ಹಂಚಿಕೊಳ್ಳಬಹುದಾಗಿದೆ.

ನನ್ನ ಪ್ರಿಯ ದೇಶಬಾಂಧವರೇ, ಇನ್ನೊಂದು ವಿಷಯಕ್ಕೂ ಸಹ ನಿಮಗೆ ಮತ್ತು ವಿಶ್ವದ ಎಲ್ಲ ಜನತೆಗೆ ಕೃತಜ್ಞತೆ ಸಲ್ಲಿಸಬೇಕಿದೆ. ಜೂನ್ 21 ಕ್ಕೆ ಮತ್ತೊಮ್ಮೆ ಯೋಗ ದಿನದಂದು ನೀವೆಲ್ಲರೂ ಒಗ್ಗೂಡಿ ಸಕ್ರೀಯವಾಗಿ ಹೊಸ ಹುಮ್ಮಸ್ಸಿನೊಂದಿಗೆ ಪ್ರತಿಯೊಂದು ಕುಟುಂಬದಿಂದ ಮೂರು ನಾಲ್ಕು ಪೀಳಿಗೆಯವರು ಜೊತೆಗೂಡಿ ಯೋಗದಿನಾಚರಣೆಯಲ್ಲಿ ಪಾಲ್ಗೊಂಡಿದ್ದೀರಿ. ಸಮಗ್ರ ಆರೋಗ್ಯ ರಕ್ಷಣೆಗಾಗಿ ಮೂಡಿರುವ ಜಾಗೃತಿಯಿಂದಾಗಿ ಯೋಗ ದಿನದ ಮಹತ್ವ ಹೆಚ್ಚುತ್ತಾ ಸಾಗಿದೆ. ಪ್ರತಿಯೊಬ್ಬರೂ ವಿಶ್ವದ ಮೂಲೆ ಮೂಲೆಯಲ್ಲೂ ಯಾವುದೇ ಯೋಗಪ್ರೇಮಿ ಸೂರ್ಯೋದಯವನ್ನು ಸ್ವಾಗತಿಸಿದರೆ ಸೂರ್ಯಾಸ್ತದೊಂದಿಗೆ ಆ ಯಾತ್ರೆ ಮುಕ್ತಾಯಗೊಳ್ಳುವುದು. ಯೋಗ ಎಷ್ಟು ಪ್ರಸಿದ್ಧವಾಗಿದೆ ಎಂದರೆ ವಿಶ್ವದಲ್ಲಿ ಯೋಗ ಅರಿಯದ ಮಾನವರಿರುವ ಯಾವುದೇ ಸ್ಥಳವೇ ಇಲ್ಲ. ಯೋಗ ಇಷ್ಟೊಂದು ಬೃಹದಾಕಾರ ಪಡೆದಿದೆ. ಭಾರತದಲ್ಲಿ ಹಿಮಾಲಯದಿಂದ ಹಿಂದು ಮಹಾಸಾಗರದವರೆಗೆ. ಸಿಯಾಚಿನ್ನಿಂದ ಸಬ್ಮೆರಿನ್ವರೆಗೆ, ಏರ್ ಫೋರ್ಸ್ ನಿಂದ ಏರ್ಕ್ರಾಫ್ಟ್ ಕ್ಯಾರಿಯರ್ಗಳವರೆಗೆ, ಎ ಸಿ ಜಿಮ್ಗಳಿಂದ ಸುಡುವ ಮರುಭೂಮಿವರೆಗೆ, ಗ್ರಾಮಗಳಿಂದ ನಗರಗಳವರೆಗೆ ಸಾಧ್ಯವಿರುವ ಪ್ರತಿಯೊಂದು ಸ್ಥಳದಲ್ಲಿಯೂ ಯೋಗವನ್ನು ಮಾಡುವುದಷ್ಟೇ ಅಲ್ಲ ಎಲ್ಲರೂ ಒಗ್ಗೂಡಿ ಸಂಭ್ರಮಿಸಿದರು. 

ವಿಶ್ವದ ಎಷ್ಟೋ ರಾಷ್ಟ್ರಗಳ ರಾಷ್ಟ್ರಪತಿಗಳು,  ಪ್ರಧಾನ ಮಂತ್ರಿಗಳು, ಪ್ರಸಿದ್ಧ ವ್ಯಕ್ತಿಗಳು, ಸಾಮಾನ್ಯ ನಾಗರಿಕರು ನನಗೆ ಟ್ವಿಟ್ಟರ್ ಮೂಲಕ ತಮ್ಮ ದೇಶದಲ್ಲಿ ಯೋಗಾಚರಣೆ ನಡೆಸಿದರು ಎಂಬುದನ್ನು ತೋರಿಸಿದರು. ಅಂದು ಇಡೀ ವಿಶ್ವವೇ ಒಂದು ಸಂತುಷ್ಟ ಕುಟುಂಬದಂತೆ ಕಾಣಿಸುತ್ತಿತ್ತು.

ಒಂದು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಆರೋಗ್ಯವಂತ ಸಂವೇದನಶೀಲ ಜನರ ಅವಶ್ಯಕತೆಯಿರುತ್ತದೆ. ಯೋಗ ಇದನ್ನು ಧೃಡಪಡಿಸುತ್ತದೆ. ಆದ್ದರಿಂದ ಯೋಗದ ಪ್ರಚಾರ ಮತ್ತು ಪ್ರಸಾರ ಸಮಾಜ ಸೇವೆಯ ಒಂದು ಮಹತ್ತರವಾದ ಕೆಲಸವಾಗಿದೆ. ಇಂಥ ಸೇವೆಯನ್ನು ಪರಿಗಣಿಸಿ ಸನ್ಮಾನಿಸುವುದು ಅವಶ್ಯಕವಲ್ಲವೇ? 2019 ನೇ ಸಾಲಿನಲ್ಲಿ ಯೋಗದ ಪ್ರಚಾರ ಮತ್ತು ಅಭಿವೃದ್ಧಿಯಲ್ಲಿ ಉತ್ಕøಷ್ಟ ಸೇವೆ ಸಲ್ಲಿಸಿದವರಿಗೆ ಪ್ರಧಾನ ಮಂತ್ರಿ ಪ್ರಶಸ್ತಿಯ ಘೋಷಣೆ ಮಾಡುವುದು ನನ್ನಲ್ಲಿ ಹೊಸ ಸಂತಸವನ್ನು ಮೂಡಿಸಿತ್ತು. ಯೋಗದ ಪ್ರಚಾರ ಮತ್ತು ಪ್ರಸಾರಕ್ಕೆ ನೀವು ಊಹಿಸಲೂ ಆಗದಂತಹ ಕೆಲಸಗಳನ್ನು ಮಾಡಿದ ವಿಶ್ವಾದ್ಯಂತದ ಸಂಘಟನೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು. ಉದಾಹರಣೆಗೆ ‘ಜಪಾನ್ ಯೋಗನಿಕೇತನ’ ತೆಗೆದುಕೊಳ್ಳಿ. ಇದು ಯೋಗವನ್ನು ಜಪಾನ್ನಾದ್ಯಂತ ಜನಪ್ರಿಯಗೊಳಿಸಿದೆ ಮತ್ತು ತರಬೇತಿ ನೀಡುತ್ತಿದೆ. ಇಲ್ಲವೆ ಇಟಲಿಯ ಮಿಸ್ ಆಂಟೋನಿಟಾ ರೋಸಿ ಅವರ ಹೆಸರೇ ತೆಗೆದುಕೊಳ್ಳಿ. ಅವರು ಸರ್ವ ಯೋಗ ಇಂಟರ್ ನ್ಯಾಷನಲ್ ಅನ್ನು ಪ್ರಾರಂಭಿಸಿದರು ಮತ್ತು ಯೂರೋಪಿನಾದ್ಯಂತ ಯೋಗದ ಪ್ರಚಾರ-ಪ್ರಸಾರ ಮಾಡಿದರು. ಇದು ತಮಗೆ ತಾವೇ ಪ್ರೇರಣೆಯಾಗುವಂಥ ಒಂದು ಉದಾಹರಣೆಯಾಗಿದೆ. ಯೋಗಕ್ಕೆ ಸಂಬಂಧ ಪಟ್ಟ ಈ ವಿಷಯದಲ್ಲಿ, ಭಾರತೀಯರಾಗಿ ನಾವು ಹಿಂದೆ ಉಳಿಯುತ್ತೇವೆಯೇ? ಮುಂಗೇರ್ನ, ಬಿಹಾರ್ ಯೋಗ ವಿದ್ಯಾಲಯವನ್ನು ಸನ್ಮಾನಿಸಲಾಯಿತು, ಈ ಸಂಸ್ಥೆ ಕಳೆದ ಹಲವಾರು ದಶಕಗಳಿಂದ ಯೋಗಕ್ಕೆ ಸರ್ಮಪಿತವಾಗಿದೆ. ಹೀಗೇ, ಸ್ವಾಮಿ ರಾಜ ಋಷಿ ಮುನಿಯನ್ನೂ ಸನ್ಮಾನಿಸಲಾಯಿತು ಅವರು ಲೈಫ್ ಮಿಷನ್ ಮತ್ತು ಲಕುಲಿಶ್ ಯೋಗ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದಾರೆ. ಯೋಗದ ವ್ಯಾಪಕವಾದ ಸಂಭ್ರಮಾಚರಣೆ ಮತ್ತು ಯೋಗದ ಸಂದೇಶವನ್ನು ಮನೆ ಮನೆಗೂ ತಲುಪಿಸುವವರಿಗೆ ಸನ್ಮಾನ, ಈ ಎರಡೂ ವಿಷಯಗಳು ಈ ಬಾರಿಯ ಯೋಗವನ್ನು ವಿಶೇಷವಾಗಿಸಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಯಾತ್ರೆ ಹೊಸ ಭಾವನೆ, ಹೊಸ ಅನುಭೂತಿ, ಹೊಸ ಸಂಕಲ್ಪ, ಹೊಸ ಸಾಮರ್ಥ್ಯದೊಂದಿಗೆ ಇಂದು ಆರಂಭವಾಗಿದೆ. ಜೊತೆಗೆ ನಾನು ನಿಮ್ಮ ಸಲಹೆಗಳಿಗಾಗಿ ಎದುರು ನೋಡುತ್ತಿರುತ್ತೇನೆ. ನಿಮ್ಮ ವಿಚಾರಗಳೊಂದಿಗೆ ಬೆರೆಯುವುದು ನನಗೊಂದು ಮಹತ್ವಪೂರ್ಣ  ಯಾತ್ರೆಯಾಗಿದೆ. ಮನದ ಮಾತು ನೆಪ ಮಾತ್ರ. ಬನ್ನಿ, ನಾವು ಭೇಟಿಯಾಗೋಣ ನಮ್ಮ ಮಾತುಗಳನ್ನು ಮುಂದುವರೆಸೋಣ. ನಿಮ್ಮ ಭಾವನೆಗಳನ್ನ ಕೇಳುತ್ತಲೇ ಇರುತ್ತೇನೆ, ನೆನಪಿನಲ್ಲಿಟ್ಟುಕೊಳ್ಳುತ್ತೇನೆ ಮತ್ತು ಅರ್ಥಮಾಡಿಕೊಳ್ಳತ್ತೇನೆ. ಹಾಗೂ ಕೆಲವೊಮ್ಮೆ ಆ ಭಾವನೆಗಳನ್ನೇ ರೂಢಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ನಿಮ್ಮ ಆಶೀರ್ವಾದ ಸದಾ ನನ್ನ ಮೇಲಿರಲಿ. ನೀವೇ ನನಗೆ ಪ್ರೇರಣೆ, ನೀವೇ ನನ್ನ ಶಕ್ತಿ. ಬನ್ನಿ ನಾವು ಒಗ್ಗೂಡಿ ‘ಮನದ ಮಾತಿನ’ ಆನಂದ ಪಡೆಯುತ್ತಾ ಜೀವನದ ಜವಾಬ್ದಾರಿಗಳನ್ನ ನಿಭಾಯಿಸೋಣ. ಮುಂದಿನ ತಿಂಗಳು ಮತ್ತೊಂದು ಮನದ ಮಾತಿನಲ್ಲಿ ಮತ್ತೆ ಭೇಟಿಯಾಗೋಣ. ನಿಮ್ಮೆಲ್ಲರಿಗೂ ನನ್ನ ಅನಂತ ಅನಂತ ಧನ್ಯವಾದಗಳು.

ನಮಸ್ಕಾರ.