ನವದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಮಸೂದೆ – 2019ಕ್ಕೆ ಸಂಪುಟ ಅನುಮೋದನೆ; ಅಂತಾರಾಷ್ಟ್ರೀಯ ಪರ್ಯಾಯ ವ್ಯಾಜ್ಯ ಪರಿಹಾರ ಕೇಂದ್ರದ ಅಧೀನದಲ್ಲಿರುವ ಸ್ವತ್ತನ್ನು 2019ರ ಮಾರ್ಚ್ 2ರಿಂದ ಅನ್ವಯವಾಗುವಂತೆ ನವದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರಕ್ಕೆ ವರ್ಗಾವಣೆ; ಸುಗ್ರೀವಾಜ್ಞೆಗೆ ಬದಲಾಗಿ ಈ ಮಸೂದೆಯನ್ನು ಮುಂಬರುವ ಸಂಸತ್ ಅಧಿವೇಶನದಲ್ಲಿ ಮಂಡನೆ
ಭಾರತವನ್ನು ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಮುಂಚೂಣಿ ಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರಗಳನ್ನು ತೆರೆಯಲು ಅಗತ್ಯವಾದ ಸ್ವತಂತ್ರ್ಯ ಮತ್ತು ಸ್ವಾಯತ್ತ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆ, ನವದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ(ಎನ್ ಡಿ ಐ ಎ ಸಿ) ಮಸೂದೆ – 2019ಕ್ಕೆ ಇಂದು ಅನುಮೋದನೆ ನೀಡಿದ್ದು, ಇದನ್ನು ಮುಂಬರುವ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗುವುದು.
ಪರಿಣಾಮ:
ಸಾಂಸ್ಥಿಕ ಮಧ್ಯಸ್ಥಿಕೆ ಕೇಂದ್ರಗಳಿಂದ ಸರ್ಕಾರಕ್ಕೆ ಮತ್ತು ಅದರ ಸಂಸ್ಥೆಗಳಿಗೆ ಹಾಗೂ ವ್ಯಾಜ್ಯಗಳೇರ್ಪಟ್ಟಿರುವ ಕಕ್ಷಿದಾರರಿಗೆ ಹಲವು ರೀತಿಯ ಪ್ರಯೋಜನಗಳು ದೊರಕಲಿವೆ.
ಇದರಿಂದಾಗಿ ಭಾರತದಲ್ಲಿ ಗುಣಮಟ್ಟದ ಮಧ್ಯಸ್ಥಿಕೆ ತಜ್ಞರು ಲಭ್ಯವಾಗಲಿದ್ದಾರೆ ಮತ್ತು ವೆಚ್ಚದ ನಿಟ್ಟಿನಲ್ಲಿ ಹೇಳುವುದಾದರೂ ಇದರಿಂದ ಸಾಕಷ್ಟು ಅನುಕೂಲವಿದೆ.
ಈ ಮಸೂದೆ ಭಾರತ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ತಾಣವಾಗಿ ರೂಪುಗೊಳ್ಳಲು ಸಹಕರಿಸುತ್ತದೆ.
ಈ ಮಸೂದೆಯಿಂದ ಸಾಂಸ್ಥಿಕ ಮಧ್ಯಸ್ಥಿಕೆಗೆ ಸ್ವತಂತ್ರ ಹಾಗೂ ಸ್ವಾಯತ್ತ ಸಂಸ್ಥೆಗಳನ್ನು ರಚಿಸಲು ಸಹಾಯಕವಾಗುತ್ತದೆ ಮತ್ತು 2019ರ ಮಾರ್ಚ್ 2ರಿಂದ ಅನ್ವಯವಾಗುವಂತೆ ಅಂತಾರಾಷ್ಟ್ರೀಯ ಪರ್ಯಾಯ ವ್ಯಾಜ್ಯ ಪರಿಹಾರ ಕೇಂದ್ರ(ಐಸಿಎ ಡಿಆರ್) ಅಧೀನದಲ್ಲಿರುವ ಆಸ್ತಿ ಹಾಗೂ ಸ್ವತ್ತನ್ನು ನವದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ(ಎನ್ ಡಿ ಐ ಎ ಸಿ)ಕ್ಕೆ ವರ್ಗಾವಣೆ ಮಾಡಲಾಗುವುದು.
ಜಾರಿ:
ರಾಷ್ಟ್ರಪತಿ ಅವರು, ಭಾರತವನ್ನು ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರಗಳನ್ನು ತೆರೆಯಲು ಸ್ವತಂತ್ರ ಹಾಗೂ ಸ್ವಾಯತ್ತ ವ್ಯವಸ್ಥೆಯನ್ನು ಸೃಷ್ಟಿಸಲು ನವದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ – 2019 ಸುಗ್ರೀವಾಜ್ಞೆಗೆ, 2019 ಮಾರ್ಚ್ 2 ರಂದು ಸಹಿ ಮಾಡಿದ್ದರು. ಅದರ ಬದಲಿಗೆ ಈ ಮಸೂದೆ ಜಾರಿಗೆ ಬರಲಿದೆ.
ಈ ಮಸೂದೆ ಜಾರಿಯಿಂದ ನವದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಸುಗ್ರೀವಾಜ್ಞೆ – 2019 ನಿರಶನಗೊಳ್ಳಲಿದೆ. ಸುಗ್ರೀವಾಜ್ಞೆಯಡಿ ಈವರೆಗೆ ಕೈಗೊಂಡಿರುವ ಮತ್ತು ಕೈಗೊಳ್ಳಲಿರುವ ಎಲ್ಲ ಕ್ರಮಗಳು/ಚಟುವಟಿಕೆಗಳು ಮಸೂದೆಯ ಅಂಶಗಳೊಳಗೆ ಸೇರ್ಪಡೆಯಾಗುತ್ತದೆ.
ಹಿನ್ನೆಲೆ:
ಪರ್ಯಾಯ ವ್ಯಾಜ್ಯ ಪರಿಹಾರ(ಎಡಿಆರ್) ಕಾರ್ಯತಂತ್ರದ ಮೂಲಕ ಭಾರತ ಸರ್ಕಾರ ಅಂತಾರಾಷ್ಟ್ರೀಯ ಮತ್ತು ದೇಶೀಯ ವಾಣಿಜ್ಯ ವ್ಯಾಜ್ಯಗಳನ್ನು ತ್ವರಿತವಾಗಿ ಬಗೆಹರಿಸಲು ಸ್ವತಂತ್ರ ಮತ್ತು ಸ್ವಾಯತ್ತ ಕೇಂದ್ರಗಳನ್ನು ತೆರೆಯಲು ಉತ್ಸುಕವಾಗಿದೆ. ಈ ನಿಟ್ಟಿನಲ್ಲಿ 2017 ರಲ್ಲಿ ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ನೇತೃತ್ವದಲ್ಲಿ ಉನ್ನತಮಟ್ಟದ ಸಮಿತಿ(ಹೆಚ್ ಎಲ್ ಸಿ)ಯನ್ನು ರಚಿಸಲಾಗಿತ್ತು. ಈ ಉನ್ನತ ಮಟ್ಟದ ಸಮಿತಿ, 1995ರಲ್ಲಿ ಸಾರ್ವಜನಿಕ ನಿಧಿಯನ್ನು ಬಳಸಿ ಸ್ಥಾಪಿಸಿದ್ದ ಅಂತಾರಾಷ್ಟ್ರೀಯ ಪರ್ಯಾಯ ವ್ಯಾಜ್ಯ ಪರಿಹಾರ ಕೇಂದ್ರ(ಐಸಿಎಡಿಆರ್)ವನ್ನು ಸರ್ಕಾರವೇ ತನ್ನ ಸ್ವಾಧೀನಕ್ಕೆ ಪಡೆದು, ಅದನ್ನು ರಾಷ್ಟ್ರೀಯ ಜೇಷ್ಠತಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವಂತೆ ಶಿಫಾರಸು ಮಾಡಿತ್ತು.
ಉನ್ನತ ಮಟ್ಟದ ಸಮಿತಿಯ ಶಿಫಾರಸ್ಸುಗಳನ್ನು ಪರಿಗಣಿಸಿ, ನವದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ(ಎನ್ ಡಿ ಐ ಎ ಸಿ) ಮಸೂದೆ – 2018 ಅನ್ನು, 2017ರ ಡಿಸೆಂಬರ್ 15ರಂದು ನಡೆದಿದ್ದ ಸಂಪುಟ ಸಭೆ ಸಂಸತ್ತಿನಲ್ಲಿ ಮಂಡಿಸಲು ಅನುಮೋದನೆ ನೀಡಿತ್ತು. ಲೋಕಸಭೆಯಲ್ಲಿ 2018ರ ಜನವರಿ 5ರಂದು ಮಸೂದೆಯನ್ನು ಮಂಡಿಸಲಾಗಿತ್ತು ಮತ್ತು 2019ರ ಜನವರಿ 4ರಂದು ಲೋಕಸಭೆ ಮಸೂದೆಯನ್ನು ಅಂಗೀಕರಿಸಿತ್ತು. ನವದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ, ಮಸೂದೆಯನ್ನು ರಾಜ್ಯಸಭೆ ಕೈಗೆತ್ತಿಕೊಂಡು 248ನೇ ಅಧಿವೇಶನದಲ್ಲಿ ಅನುಮೋದನೆ ನೀಡಲಿಲ್ಲ. ಆ ನಂತರ ಸಂಸತ್ 2019ನೇ ಫೆಬ್ರವರಿ 13ರಂದು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತು.
ರಾಷ್ಟ್ರಪತಿಗಳು ಭಾರತವನ್ನು ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ತಾಣವನ್ನಾಗಿ ಮಾಡುವ ಮತ್ತು ಭಾರತದಲ್ಲಿ ವ್ಯಾಪಾರಕ್ಕೆ ಅನುಕೂಲಕರ ವಾತಾವರಣ ನಿರ್ಮಾಣಕ್ಕೆ ಉತ್ತೇಜಿಸುವ ತುರ್ತು ಅಗತ್ಯತೆ ಮತ್ತು ವಿಷಯದ ಗಂಭೀರತೆಯನ್ನು ಅರಿತು 2019ರ ಮಾರ್ಚ್ 2ರಂದು ‘ನವದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಸುಗ್ರೀವಾಜ್ಞೆ – 2019 ಜಾರಿಗೊಳಿಸಿದರು. ಸಂವಿಧಾನದ ಕಲಂ 107(5) ಮತ್ತು 123(2) ಅಂಶಗಳನ್ವಯ ನವದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಮಸೂದೆ – 2019ಅನ್ನು ಸಂಸತ್ತಿನಲ್ಲಿ ಮಂಡಿಸಲು ಉದ್ದೇಶಿಸಲಾಗಿದೆ. ಇದು ನವದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಸುಗ್ರೀವಾಜ್ಞೆ – 2019ರ ಬದಲಿಗೆ ಜಾರಿಗೆ ಬರಲಿದೆ.
ಎನ್ ಡಿ ಐ ಎ ಸಿ – ಭವಿಷ್ಯದ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ತಾಣ
ನವದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ(ಎನ್ ಡಿ ಐ ಎ ಸಿ) ಅಧ್ಯಕ್ಷರ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದ್ದು, ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಅಥವಾ ಹೈಕೋರ್ಟ್ ನ ನ್ಯಾಯಮೂರ್ತಿ ಅಥವಾ ಕಾನೂನು ಮತ್ತು ನಿರ್ವಹಣೆ ಅಥವಾ ಮಧ್ಯಸ್ಥಿಕೆ ಆಡಳಿತದಲ್ಲಿ ಅನುಭವ ಹಾಗೂ ವಿಶೇಷ ಜ್ಞಾನ ಹೊಂದಿರುವ ದಕ್ಷ ವ್ಯಕ್ತಿಗಳನ್ನು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ಜೊತೆ ಸಮಾಲೋಚನೆ ನಡೆಸಿ, ಅಧ್ಯಕ್ಷರನ್ನಾಗಿ ನೇಮಕ ಮಾಡಲಿದೆ. ಅಧ್ಯಕ್ಷರಲ್ಲದೆ, ಆಯೋಗದಲ್ಲಿ ಇಬ್ಬರು ಪೂರ್ಣಕಾಲಿಕ ಅಥವಾ ಅರೆಕಾಲಿಕ ಸದಸ್ಯರಿರಲಿದ್ದಾರೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಂಸ್ಥಿಕ ಮಧ್ಯಸ್ಥಿಕೆಯಲ್ಲಿ ಅನುಭವ ಮತ್ತು ಅಪರಿಮಿತ ಜ್ಞಾನ ಹೊಂದಿರುವ ದಕ್ಷರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗುವುದು. ಇದಲ್ಲದೆ ವಾಣಿಜ್ಯ ಮತ್ತು ಕೈಗಾರಿಕಾ ವಲಯವನ್ನು ಪ್ರತಿನಿಧಿಸುವ ಒಬ್ಬ ಪ್ರತಿನಿಧಿಯನ್ನು ಅರೆಕಾಲಿಕ ಸದಸ್ಯರನ್ನಾಗಿ ನಾಮಕರಣ ಮಾಡಲಾಗುವುದು. ಅವರ ಅವಧಿ ಪುನರಾವರ್ತನೆಗೊಳ್ಳುತ್ತಿರುತ್ತದೆ. ಅಲ್ಲದೆ, ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಮತ್ತು ಹಣಕಾಸು ಸಚಿವಾಲಯದ ವೆಚ್ಚ ವಿಭಾಗದ ಹಣಕಾಸು ಸಲಹೆಗಾರರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈ ಎನ್ ಡಿ ಐ ಎ ಸಿಯ ಪದನಿಮಿತ್ತ ಸದಸ್ಯರಾಗಿರುತ್ತಾರೆ.
ಎನ್ ಡಿ ಐ ಎ ಸಿಯ ಗುರಿ ಮತ್ತು ಧ್ಯೇಯೋದ್ದೇಶಗಳು
ಎ) ಅಂತಾರಾಷ್ಟ್ರೀಯ ಮತ್ತು ದೇಶೀಯ ಮಧ್ಯಸ್ಥಿಕೆಗಳನ್ನು ನಡೆಸುವ ಪ್ರಮುಖ ಸಂಸ್ಥೆಯನ್ನಾಗಿ ಅಭಿವೃದ್ಧಿಪಡಿಸಲು ನಿಗದಿತ ಸುಧಾರಣೆಗಳನ್ನು ತರುವುದು.
ಬಿ) ಮಧ್ಯಸ್ಥಿಕೆ, ರಾಜಿ ಮತ್ತು ಸಂಧಾನ ಪ್ರಕ್ರಿಯೆಗಳನ್ನು ನಡೆಸಲು ಪೂರಕ ಹಾಗೂ ಆಡಳಿತಾತ್ಮಕ ಸಹಕಾರ ನೀಡುವುದು.
ಸಿ) ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮಾಣೀಕೃತ ಮಧ್ಯಸ್ಥಿಕೆಗಾರರು, ಸಂಧಾನಕಾರರು ಮತ್ತು ರಾಜೀಕಾರರ ಪಟ್ಟಿಯನ್ನು ನಿರ್ವಹಿಸುವುದು ಮತ್ತು ವಿಶೇಷ ಸಮೀಕ್ಷೆದಾರರು ಮತ್ತು ತನಿಖಾಧಿಕಾರಿಗಳನ್ನು ಹೊಂದುವುದು.
ಡಿ) ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಮತ್ತು ಸಂಧಾನಗಳನ್ನು ವೃತ್ತಿಪರ ರೀತಿಯಲ್ಲಿ ನಡೆಸಲು ಅಗತ್ಯ ಅನುಕೂಲಗಳನ್ನು ಸೃಷ್ಟಿಸುವುದು.
ಇ) ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಧಾನ ಮತ್ತು ಮಧ್ಯಸ್ಥಿಕೆಗಳನ್ನು ಕಡಿಮೆ ವೆಚ್ಚದಲ್ಲಿ ಮತ್ತು ಸಕಾಲದಲ್ಲಿ ಒದಗಿಸುವುದು.
ಎಫ್) ಪರ್ಯಾಯ ವ್ಯಾಜ್ಯ ಪರಿಹಾರ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅಧ್ಯಯನಗಳನ್ನು ಉತ್ತೇಜಿಸುವುದು ಮತ್ತು ವ್ಯಾಜ್ಯಗಳ ಇತ್ಯರ್ಥ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಪ್ರೋತ್ಸಾಹಿಸುವುದು.
ಜಿ) ಪರ್ಯಾಯ ವ್ಯಾಜ್ಯ ಪರಿಹಾರ ವ್ಯವಸ್ಥೆ ಉತ್ತೇಜಿಸುತ್ತಿರುವ ಇತರೆ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಹಾಗೂ ಸಂಘ ಸಂಸ್ಥೆಗಳು, ಸೊಸೈಟಿಗಳಿಗೆ ಸಹಕಾರ ನೀಡುವುದು.