Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪುಲ್ವಾಮಾದ ಭಯೋತ್ಪಾದಕ ದಾಳಿಯ ಕುರಿತಂತೆ ಪ್ರಧಾನಮಂತ್ರಿಯವರ ಹೇಳಿಕೆ


ಪುಲ್ವಾಮಾ ಭಯೋತ್ಪಾದಕ ದಾಳಿಯ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆ ಆಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ದುಷ್ಕರ್ಮಿಗಳು ಮತ್ತು ಅವರಿಗೆ ಕುಮ್ಮಕ್ಕು ಮತ್ತು ನೆರವು ನೀಡುತ್ತಿರುವವರು ದೊಡ್ಡ ತಪ್ಪು ಮಾಡಿದ್ದಾರೆ ಮತ್ತು ಅವರು ಅದಕ್ಕೆ ದೊಡ್ಡ ಬೆಲೆ ತೆರುತ್ತಾರೆ ಎಂದು ಪ್ರಧಾನಮಂತ್ರಿ ಎಚ್ಚರಿಕೆ ನೀಡಿದ್ದಾರೆ. ಕ್ರಮ ಜರುಗಿಸಲು ಭದ್ರತಾ ಪಡೆಗಳಿಗೆ ಸ್ವಾತಂತ್ರ್ಯ ನೀಡಲಾಗಿದೆ ಎಂದು ಅವರು ಹೇಳಿದರು. ಭಾರತವನ್ನು ಅಸ್ಥಿರಗೊಳಿಸಿದ ಭ್ರಮೆಯಲ್ಲಿ ಬದುಕದಂತೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.

ಅವರು ಇಂದು ನವದೆಹಲಿ ಮತ್ತು ವಾರಾಣಸಿ ನಡುವಿನ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ನವದೆಹಲಿಯ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರುವ ಮುನ್ನ ಸಭಿಕರನ್ನುದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಧಾನಿಯವರು ಮಾಡಿದ ಭಾಷಣದಲ್ಲಿ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ಕುರಿತು ಅವರ ನೀಡಿದ ಹೇಳಿಕೆಗಳ ಸಂಗ್ರಹದ ಕನ್ನಡ ಪಠ್ಯ ಈ ಕೆಳಕಂಡಂತಿದೆ:

“ಮೊದಲನೆಯದಾಗಿ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನನ್ನ ಗೌರವ ನಮನಗಳು. ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತೆತ್ತಿದ್ದಾರೆ. ಈ ದುಃಖದ ಸಂದರ್ಭದಲ್ಲಿ ತಮ್ಮ ಆಪ್ತರನ್ನು ಕಳೆದುಕೊಂಡ ಅವರ ಕುಟುಂಬದವರಿಗೆ ನಾನು ಹೃದಯಾಂತರಾಳದಿಂದ ಸಂತಾಪವನ್ನು ಸೂಚಿಸುತ್ತೇನೆ.

ನನಗೆ ಗೊತ್ತು, ನಡೆದ ಘಟನೆಯ ಬಗ್ಗೆ ನಿಮಗೆ ತೀವ್ರ ಆಕ್ರೋಶವಿದೆ. ನಿಮ್ಮ ರಕ್ತ ಕುದಿಯುತ್ತಿದೆ. ಈ ಸಂದರ್ಭದಲ್ಲಿ ಸಾಕಷ್ಟು ನಿರೀಕ್ಷೆಗಳು ಇರುತ್ತವೆ ಮತ್ತು ಬಲವಾದ ಪ್ರತಿರೋಧದ ಭಾವನೆ ಇರುತ್ತದೆ ಇದು ಸರ್ವೇ ಸಾಮಾನ್ಯ.

ನಾವು ನಮ್ಮ ಭದ್ರತಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ನಮಗೆ ನಮ್ಮ ಭದ್ರತಾ ಪಡೆಗಳ ಶೌರ್ಯ ಮತ್ತು ಧೈರ್ಯದ ಬಗ್ಗೆ ಸಂಪೂರ್ಣ ನಂಬಿಕೆ ಇದೆ. ದೇಶಭಕ್ತಿಯ ಸ್ಫೂರ್ತಿಯಿಂದ ಜನರು ಸೂಕ್ತ ಮಾಹಿತಿಯನ್ನು ನಮ್ಮ ಸಂಸ್ಥೆಗಳಿಗೆ ಒದಗಿಸಿದಲ್ಲಿ, ನಾವು ಭಯೋತ್ಪಾದಕನ್ನು ಬಗ್ಗುಬಡಿಯುವ ಪ್ರಯತ್ನವನ್ನು ತೀವ್ರಗೊಳಿಸಬಹುದು.

ನಾನು ಭಯೋತ್ಪಾದಕ ಗುಂಪುಗಳಿಗೆ ಮತ್ತು ಅವುಗಳಿಗೆ ನೆರವು ಮತ್ತು ಕುಮ್ಮಕ್ಕು ನೀಡುತ್ತಿರುವವರಿಗೆ ದೊಡ್ಡ ತಪ್ಪು ಮಾಡಿದ್ದೀರಿ ಎಂದು ಹೇಳಲು ಬಯಸುತ್ತೇನೆ. ಈ ಕೃತ್ಯಕ್ಕಾಗಿ ಅವರು ದೊಡ್ಡ ಅತಿ ದೊಡ್ಡ ಬೆಲೆ ತೆರಬೇಕಾಗುತ್ತದೆ.

ಯಾರು ಈ ದಾಳಿಯ ಹಿಂದೆ ಇದ್ದಾರೋ, ಈ ದುಷ್ಕೃತ್ಯ ಎಸಗಿದ ಆ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆ ಆಗಲಿದೆ ಎಂದು ನಾನು ಭರವಸೆ ನೀಡುತ್ತೇನೆ.

ನಮ್ಮನ್ನು ಟೀಕಿಸುತ್ತಿರುವವರ ಭಾವನೆಗಳನ್ನೂ ನಾನು ಅರ್ಥ ಮಾಡಿಕೊಳ್ಳುತ್ತೇನೆ. ಅವರಿಗೆ ಸಂಪೂರ್ಣ ಹಕ್ಕಿದೆ. ಆದಾಗ್ಯೂ, ಇದು ಅತ್ಯಂತ ಸೂಕ್ಷ್ಮ ಮತ್ತು ಭಾವನಾತ್ಮಕ ವಿಷಯವಾಗಿರುವುದರಿಂದ ನಾನು ನನ್ನ ಎಲ್ಲ ಸ್ನೇಹಿತರಿಗೆ ಮನವಿ ಮಾಡಿಕೊಳ್ಳುವುದೇನೆಂದರೆ, ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಇಡೀ ದೇಶವೇ ಒಗ್ಗಟ್ಟಿನಿಂದ ನಿಲ್ಲಬೇಕು. ನಾವು ಒಕ್ಕೊರಲಿನಿಂದ ಮಾತನಾಡಬೇಕು ಮತ್ತು ರಾಜಕೀಯ ಮೀರಿ ಬೆಳೆಯಬೇಕು. ನಮ್ಮದು ಒಂದೇ ದೇಶ, ಒಕ್ಕೊರಲಿನಿಂದ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತೇವೆ ಎಂಬ ಸಂದೇಶ ವಿಶ್ವದಾದ್ಯಂತ ಹಬ್ಬಬೇಕು. ಆ ಹೋರಾಟದಲ್ಲಿ ನಾವು ಗೆಲ್ಲಬೇಕು.

ನಮ್ಮ ನೆರೆಯ ರಾಷ್ಟ್ರ ಈಗಾಗಲೇ ಜಾಗತಿಕ ಸಮುದಾಯದಿಂದ ಚದುರಿ ಹೋಗಿದೆ. ಈ ಹೇಯ ಕೃತ್ಯಗಳಿಂದ ಮತ್ತು ಅಲೌಕಿಕ ವಿನ್ಯಾಸದಿಂದ ಭಾರತವನ್ನು ಅಸ್ಥಿರಗೊಳಿಸುತ್ತಿದ್ದೇನೆ ಎಂದು ಅದು ತಿಳಿದಿದ್ದರೆ, ಅದು ಭ್ರಮೆ ಮಾತ್ರ. ಅದು ಭಾರತವನ್ನು ಅಸ್ಥಿರಗೊಳಿಸುತ್ತೇನೆಂಬ ಹಗಲುಗನಸು ಕಾಣುವುದನ್ನು ನಿಲ್ಲಿಸಬೇಕು. ನಮ್ಮ ಈ ನೆರೆಯ ದೇಶ ಈಗಾಗಲೇ ಆರ್ಥಿಕವಾಗಿ ಹತಾಶ ಸ್ಥಿತಿಯಲ್ಲಿದೆ, ಅಂಥ ಪ್ರಯತ್ನಗಳಿಂದ ಅದು ತಾನೇ ಹಾಳಾಗುತ್ತದೆ ಎಂಬುದನ್ನು ತಿಳಿಯಬೇಕು. ಯಾರು ಇಂಥ ಮಾರ್ಗ ಹಿಡಿಯುತ್ತಾರೋ ಅವರು ತಮಗೆ ತಾವೇ ನಾಶವಾಗುತ್ತಾರೆ ಎಂಬುದು ಪದೇ ಪದೇ ಸಾಬೀತಾಗಿದೆ. ನಾವು ಅಳವಡಿಸಿಕೊಂಡಿರುವ ಮಾರ್ಗ ಪ್ರಗತಿ ಮತ್ತು ಅಭಿವೃದ್ಧಿ. .

130 ಕೋಟಿ ಭಾರತೀಯರು ಅಂಥ ಯಾವುದೇ ಕೃತ್ಯ ಅಥವಾ ದಾಳಿಗೆ ತಕ್ಕ ಉತ್ತರ ಕೊಡುತ್ತಾರೆ. ಹಲವು ದೊಡ್ಡ ರಾಷ್ಟ್ರಗಳು ಈಗಾಗಲೇ ಈ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದು, ಭಾರತದ ಹಿಂದೆ ನಿಂತಿವೆ ಮತ್ತು ಭಾರತಕ್ಕೆ ಬೆಂಬಲ ಸಾರಿವೆ. ನಾವು ಆ ಎಲ್ಲ ರಾಷ್ಟ್ರಗಳಿಗೆ ಆಭಾರಿಯಾಗಿದ್ದೇನೆ ಮತ್ತು ಜಾಗತಿಕವಾಗಿ ಭಯೋತ್ಪಾದನೆಯ ವಿರುದ್ಧ ಹೋರಾಡಲು ಕೈಜೋಡಿಸುವಂತೆ ಕೋರುತ್ತೇನೆ. ಇಡೀ ದೇಶವೇ ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕೆ ಒಂದಾಗಿ ನಿಂತಾಗ ಭಯೋತ್ಪಾದನೆಯ ಪಿಡುಗು,ಹೇಳ ಹೆಸರಿಲ್ಲದಂತಾಗುತ್ತದೆ.

ಸ್ನೇಹಿತರೇ, ಪುಲ್ವಾಮಾ ದಾಳಿಯ ಬಳಿಕ, ನಾವು ದುಃಖದ ಸ್ಥಿತಿಯಲ್ಲಿದ್ದೇವೆ ಮತ್ತು ತೀವ್ರ ಆಕ್ರೋಶಗೊಂಡಿದ್ದೇವೆ. ಆದಾಗ್ಯೂ, ದೇಶವು ಅಂಥ ದಾಳಿಗಳನ್ನು ಬಲವಾಗಿ ಎದಿರಿಸುತ್ತದೆ ಎಂದು ನಾನು ಹೇಳಲು ಇಚ್ಛಿಸುತ್ತೇನೆ. ಭಾರತ ಎಂದಿಗೂ ಎದೆಗುಂದುವುದಿಲ್ಲ. ನಮ್ಮ ಧೈರ್ಯಶಾಲಿ ಯೋಧರು ತಮ್ಮಪ್ರಾಣವನ್ನೇ ಬಲಿಕೊಟ್ಟಿದ್ದಾರೆ. ಹುತಾತ್ಮರು ಎರಡು ಕನಸುಗಳಿಗಾಗಿ ಜೀವಿಸುತ್ತಾರೆ ಒಂದು ದೇಶದ ಸುರಕ್ಷತೆ ಮತ್ತೊಂದು ದೇಶದ ಸಮೃದ್ಧಿ. ನಾನು ನಮ್ಮ ಹುತಾತ್ಮರಿಗೆ ಗೌರವದಿಂದ ನಮಿಸುತ್ತೇನ. ಅವರ ಆಶೀರ್ವಾದ ಕೋರುತ್ತೇನೆ ಮತ್ತು ದೇಶಕ್ಕಾಗಿ ಅವರು ಯಾವ ಕನಸುಗಳನ್ನು ಇಟ್ಟುಕೊಂಡು ಬಲಿದಾನ ಮಾಡಿದರೋ ಅವರ ಕನಸುಗಳನ್ನು ನನಸು ಮಾಡಲು ಯಾವುದೇ ಅವಕಾಶವನ್ನು ಕೈಚೆಲ್ಲುವುದಿಲ್ಲ ಎಂದು ನಿಮಗೆ ಭರವಸೆ ನೀಡುತ್ತೇನೆ. ಹುತಾತ್ಮರ ಗೌರವಾರ್ಥ ನಾವು ಅಭಿವೃದ್ಧಿಯ ಪಥಕ್ಕೆ ವೇಗ ನೀಡಲು ಶ್ರಮಿಸುತ್ತೇವೆ.

ವಂದೇ ಭಾರತ್ ಎಕ್ಸ್ ಪ್ರೆಸ್ ವಿನ್ಯಾಸಗೊಳಿಸಿ, ಕಾರ್ಯಾಚರಣೆಗೆ ತರಲು ಶ್ರಮಿಸಿದ ಎಲ್ಲ ಕಾರ್ಮಿಕರಿಗೂ, ಎಂಜಿನಿಯರುಗಳಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಚೆನ್ನೈನಲ್ಲಿ ನಿರ್ಮಾಣವಾದ, ಈ ರೈಲು ನವದೆಹಲಿ ಮತ್ತು ವಾರಾಣಸಿಯ ನಡುವೆ ತನ್ನ ಪ್ರಥಮ ಸಂಚಾರ ಆರಂಭಿಸುತ್ತಿದೆ. ಇದು ಏಕ ಭಾರತ ಶ್ರೇಷ್ಠ ಭಾರತದ ಬಲ ಮತ್ತು ಅದುವೇ ವಂದೇ ಭಾರತ್.