Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ಮರಾಕಗಳ ಮೂಲಕ ರಾಷ್ಟ್ರಪ್ರೇಮ ಬೋಧನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2016ರ ಅಕ್ಟೋಬರ್ 31ರಂದು ‘ಏಕ್ ಭಾರತ್ ಶ್ರೇಷ್ಠ ಭಾರತ್’ ಉದ್ಘಾಟನೆ ವೇಳೆ “ಸರ್ದಾರ್ ಪಟೇಲ್ ಅವರು ನಮಗೆ ಅಖಂಡ ಭಾರತವನ್ನು ನೀಡಿದ್ದಾರೆ, ಇದೀಗ ಅದನ್ನು ಶ್ರೇಷ್ಠ ಭಾರತವನ್ನಾಗಿ ಮಾಡುವ ಸಾಮೂಹಿಕ ಹೊಣೆಗಾರಿಕೆ ದೇಶದ ಎಲ್ಲಾ 125 ಕೋಟಿ ಭಾರತೀಯ ಪ್ರಜೆಗಳ ಆದ್ಯ ಕರ್ತವ್ಯವಾಗಿದೆ” ಎಂದು ಹೇಳಿದ್ದರು. ನರೇಂದ್ರ ಮೋದಿ ಅವರಿಗೆ ಭಾರತದ ಪ್ರಧಾನಮಂತ್ರಿಯಾಗುವ ಮುಂಚೆಯೇ ಈ ಚಿಂತನೆ ಹೊಳೆದಿತ್ತು.

ನಮ್ಮ ಹೆಮ್ಮೆಯ ರಾಷ್ಟ್ರದ ಅಭಿವೃದ್ಧಿಗೆ ಮತ್ತು ಅದರ ಏಕತೆ ಸಾರ್ವಭೌಮತೆ, ಭದ್ರತೆಗಾಗಿ ಬಲಿದಾನ ಮಾಡಿದ ರಾಷ್ಟ್ರೀಯ ನಾಯಕರನ್ನು ಗೌರವಿಸುವ ಬಲವಾದ ನಂಬಿಕೆಯನ್ನು ನರೇಂದ್ರ ಮೋದಿ ಅವರು ಹೊಂದಿದ್ದಾರೆ. ಅವರು ನಮ್ಮ ಇತಿಹಾಸ ಮತ್ತು ಪರಂಪರೆ, ನಮ್ಮ ರಾಷ್ಟ್ರ ಪ್ರೇಮ ಮತ್ತು ಪ್ರಜ್ಞೆಯ ಭಾಗವಾಗಬೇಕು ಎಂದು ಬಯಸಿದ್ದಾರೆ.

ಇದಕ್ಕೆ ಒಂದು ಉದಾಹರಣೆ ಎಂದರೆ ದಂಡಿಯಲ್ಲಿ ರಾಷ್ಟ್ರೀಯ ಉಪ್ಪಿನ ಸತ್ಯಾಗ್ರಹ ಸ್ಮಾರಕ ನಿರ್ಮಾಣ, ಇದು 1930ರಲ್ಲಿ ಮಹಾತ್ಮ ಗಾಂಧಿ ನೇತೃತ್ವದಲ್ಲಿ ಅವರ 80 ಅನುಯಾಯಿಗಳು ಕೈಗೊಂಡ ದಂಡಿ ಚಲೋ ಸತ್ಯಾಗ್ರಹವನ್ನು ಬಿಂಬಿಸುವ ಶಕ್ತಿ ಮತ್ತು ಸ್ಫೂರ್ತಿಯ ಸಂಕೇತವಾಗಿದ್ದು, ಅದನ್ನು ಈ ಮೂಲಕ ಗೌರವಿಸಲಾಗುತ್ತಿದೆ.

182 ಮೀಟರ್ ಎತ್ತರದ ಸರ್ದಾರ್ ವಲ್ಲಭಬಾಯ್ ಪಟೇಲರ ಏಕತಾ ಮೂರ್ತಿ ಇದಕ್ಕೆ ಮತ್ತೊಂದು ಅತ್ಯುತ್ತಮ ಉದಾಹರಣೆ. ಇಂದು ವಿಶ್ವದ ಅತಿ ಎತ್ತರದ ಪ್ರತಿಮೆ ಎಂದು ಗುರುತಿಸಲ್ಪಡುತ್ತಿರುವ ಈ ಪ್ರತಿಮೆ ಕನಸನ್ನು ನರೇಂದ್ರ ಮೋದಿ ಅವರು ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗಲೇ ಕಂಡಿದ್ದರು. ಈ ಪ್ರತಿಮೆ ಕೇವಲ ಭಾರತವನ್ನು ಒಗ್ಗೂಡಿಸಿದ ಉಕ್ಕಿನ ಮನುಷ್ಯನಿಗೆ ಮಾಡಿದ ಸಮರ್ಪಣೆಯಲ್ಲ, ಎಲ್ಲ ಭಾರತೀಯರು ಅತ್ಯಂತ ಹೆಮ್ಮೆಪಡುವಂತಹ ಸ್ಮಾರಕವಾಗಿದೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬ, ಬೋಸ್ ಅವರಿಗೆ ಸಂಬಂಧಿಸಿದ ಕಡತಗಳನ್ನು ವರ್ಗೀಕರಿಸಬೇಕು ಮತ್ತು ಬಹಿರಂಗಗೊಳಿಸುವ ಬೇಡಿಕೆಯನ್ನು ದಶಕಗಳ ಕಾಲದಿಂದ ಇಡುತ್ತಲೇ ಬಂದಿತ್ತು, ನಂತರದ ಸರ್ಕಾರಗಳು ಆ ಬಗ್ಗೆ ಖಚಿತ ನಿರ್ಧಾರ ಕೈಗೊಳ್ಳಲು ನಿರಾಕರಿಸಿದ್ದವು. 2015ರ ಅಕ್ಟೋಬರ್ ರಲ್ಲಿ ನರೇಂದ್ರ ಮೋದಿ ಅವರು ನೇತಾಜಿ ಅವರ ಕುಟುಂಬಕ್ಕೆ ತಮ್ಮ ನಿವಾಸದಲ್ಲಿ ಔತಣಕೂಟ ಆಯೋಜಿಸಿದ್ದರು. ‘ಇತಿಹಾಸವನ್ನು ಕಟ್ಟಿಹಾಕಲು ನನಗೆ ಯಾವುದೇ ಕಾರಣವಿಲ್ಲ ಎಂದು ಹೇಳಿದ್ದ ಅವರು, ಯಾರು ಇತಿಹಾಸವನ್ನು ಮರೆಯುತ್ತಾರೋ ಅವರು ಇತಿಹಾಸವನ್ನು ಸೃಷ್ಟಿಸುವ ಶಕ್ತಿಯನ್ನೂ ಸಹ ಕಳೆದುಕೊಳ್ಳುತ್ತಾರೆ ಎಂದು ಪ್ರಧಾನಿ ಹೇಳಿದ್ದರು. ಬೋಸ್ ಅವರಿಗೆ ಸಂಬಂಧಿಸಿದ ಕಡತಗಳನ್ನು ಕ್ಷಿಪ್ರವಾಗಿ ವರ್ಗೀಕರಿಸಲಾಯಿತು ಮತ್ತು ಅವುಗಳನ್ನು ಡಿಜಿಟಲ್ ವೇದಿಕೆಯಡಿ ಬಹಿರಂಗಗೊಳಿಸಲಾಯಿತು.

1940ರ ಮಧ್ಯ ಭಾಗದಲ್ಲಿ ಭಾರತೀಯ ರಾಷ್ಟ್ರೀಯ ಸೇನೆಯ ಯೋಧರು ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜ ಹಾರಿಸುವ ಪ್ರಯತ್ನ ನಡೆಸಿದ್ದರು. ಆದರೆ ದಶಕಗಳ ಕಾಲ ಅವರ ವಿಚಾರಣೆಗೆ ಗುರಿಪಡಿಸಿದ ಕಟ್ಟಡ ಕೆಂಪುಕೋಟೆ ಆವರಣದಲ್ಲಿರುವುದೇ ಮರೆತು ಹೋಗಿತ್ತು. ಈ ವರ್ಷ ಸುಭಾಷ್ ಚಂದ್ರ ಬೋಸ್ ಅವರ ಜಯಂತಿಯಂದು ಪ್ರಧಾನಮಂತ್ರಿ ಅವರು ಅದೇ ಕಟ್ಟಡದಲ್ಲಿ ಮ್ಯೂಸಿಯಂ ಉದ್ಘಾಟಿಸಿ ಅದನ್ನು ನೇತಾಜಿಗೆ ಮತ್ತು ಭಾರತೀಯ ರಾಷ್ಟ್ರೀಯ ಸೇನೆ – ಐಎನ್ಎಗೆ ಸಮರ್ಪಿಸಿದರು. ಈ ಮ್ಯೂಸಿಯಂ ನಾಲ್ಕು ವಸ್ತುಸಂಗ್ರಹಾಲಯದ ಸಮುಚ್ಛಯ ಒಳಗೊಂಡಿದ್ದು, ಇದನ್ನು ಒಟ್ಟಾಗಿ ‘ಕ್ರಾಂತಿ ಮಂದಿರ’ ಎಂದು ಕರೆಯಲಾಗುತ್ತಿದೆ. 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮ ಮತ್ತು ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಬಿಂಬಿಸುವ ಮ್ಯೂಸಿಯಂಗಳು ಸಹ ಈ ಸಮುಚ್ಛಯದ ಭಾಗವಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ನೇತಾಜಿ ಸುಭಾಷ್ ಚಂದ್ರ ಬೋಸ್ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ಪ್ರಕಟಿಸಿದ್ದು, ಪ್ರಕೋಪ ನಿರ್ವಹಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಓರ್ವ ಪೊಲೀಸ್ ಸಿಬ್ಬಂದಿಗೆ ಈ ಗೌರವ ನೀಡಲಾಗುವುದು.
ಕಳೆದ ನಾಲ್ಕು ವರ್ಷದಿಂದೀಚೆಗೆ ಹಲವು ಸ್ಮಾರಕಗಳಿಂದಾಗಿ ನಮ್ಮ ಇತಿಹಾಸದ ಹಲವು ಶ್ರೇಷ್ಠ ನಾಯಕರ ಕೊಡುಗೆಗಳನ್ನು ನಾವು ನೆನಪಿಸಿಕೊಳ್ಳುವಂತಾಗಿದೆ.

ನರೇಂದ್ರ ಮೋದಿ ಅವರ ಒಂದು ಪ್ರಮುಖ ಚಿಂತನೆ ಎಂದರೆ ಅದು ಪಂಚತೀರ್ಥ-ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರಿಗೆ ಐದು ಸ್ಮಾರಕಗಳನ್ನು ಸಮರ್ಪಿಸುವುದು. ಅವುಗಳೆಂದರೆ ಅಂಬೇಡ್ಕರ್ ಜನ್ಮಸ್ಥಳ ಮಾಹೊ, ಬ್ರಿಟನ್ ನಲ್ಲಿ ಅವರು ವ್ಯಾಸಂಗ ಮಾಡುತ್ತಿದ್ದಾಗ ತಂಗಿದ್ದ ಲಂಡನ್ನಿನ ಸ್ಥಳ, ನಾಗ್ಪುರದ ದೀಕ್ಷಾ ಭೂಮಿ, ದೆಹಲಿಯ ಮಹಪರಿನಿರ್ವಾಣ ಸ್ಥಳ ಮತ್ತು ಮುಂಬೈನ ಚೈತ್ಯ ಭೂಮಿ. ನರೇಂದ್ರ ಮೋದಿ ಅವರು ಗುಜರಾತ್ ನ ಮುಖ್ಯಮಂತ್ರಿಯಾಗಿದ್ದ ವೇಳೆ ಕಛ್ ನಲ್ಲಿ ಶಾಮ್ ಜಿ ಕೃಷ್ಣ ವರ್ಮಾ ಸ್ಮಾರಕವನ್ನು ಸಮರ್ಪಿಸಿದ್ದರು.

ಹರ್ಯಾಣದಲ್ಲಿ ಅವರು, ಶ್ರೇಷ್ಠ ಸಮಾಜ ಸುಧಾರಕ ಸರ್ ಚೋತುರಾಮ್ ಅವರ ಪ್ರತಿಮೆ ಅನಾವರಣಗೊಳಿಸಿದ್ದರು.
ಪ್ರಧಾನಿ ಅವರು, ಇತ್ತೀಚೆಗೆ ಕರಾವಳಿಯ ಅರಬ್ಬೀ ಸಮುದ್ರದ ಮುಂಬೈ ಕರಾವಳಿಯಲ್ಲಿ ಶಿವಾಜಿ ಸ್ಮಾರಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ದೆಹಲಿಯ ರಾಷ್ಟ್ರೀಯ ವಿಜ್ಞಾನ ಕೇಂದ್ರದಲ್ಲಿ ಪ್ರಧಾನಮಂತ್ರಿ ಅವರು, ಸರ್ದಾರ್ ಪಟೇಲ್ ಗ್ಯಾಲರಿ ಉದ್ಘಾಟಿಸಿದ್ದರು.
ಇತ್ತೀಚೆಗೆ ಪ್ರಧಾನಮಂತ್ರಿ ಅವರು, ರಾಷ್ಟ್ರ ಸೇವೆಯಲ್ಲಿ ತೊಡಗಿದ್ದಾಗ ಹುತಾತ್ಮರಾದ 33 ಸಾವಿರ ಪೊಲೀಸ್ ಸಿಬ್ಬಂದಿಯ ತ್ಯಾಗ ಮತ್ತು ಬಲಿದಾನದ ಗೌರವಾರ್ಥ ನಿರ್ಮಿಸಿರುವ ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು ದೇಶಕ್ಕೆ ಸಮರ್ಪಿಸಿದರು. ಅದಾದ ವಾರದೊಳಗೆ ರಾಷ್ಟ್ರೀಯ ಯುದ್ಧ ಸ್ಮಾರಕವನ್ನೂ ಕೂಡ ಅನಾವರಣಗೊಳಿಸಿದರು. ಸ್ವಾತಂತ್ರ್ಯಾನಂತರ ನಡೆದ ಎಲ್ಲಾ ಕಾರ್ಯಾಚರಣೆ ಮತ್ತು ಯುದ್ಧಗಳಲ್ಲಿ ಹುತಾತ್ಮರಾದ ಯೋಧರಿಗೆ ಈ ಸ್ಮಾರಕವನ್ನು ಸಮರ್ಪಿಸಲಾಗಿದೆ.

ಸ್ಮಾರಕಗಳು ತ್ಯಾಗ, ಬಲಿದಾನದ ಸಂಕೇತಗಳಾಗಿವೆ. ಅವರ ಕೊಡುಗೆಗಳನ್ನು ಮುಂದಿಟ್ಟುಕೊಂಡು ನಾವು ಉತ್ತಮ ಜೀವನ ರೂಪಿಸಿಕೊಳ್ಳಬಹುದಾಗಿದೆ. ಅವು ಪ್ರಸ್ತುತ ಹಾಗೂ ಭವಿಷ್ಯದ ತಲೆಮಾರಿಗೆ ಸ್ಫೂರ್ತಿಯ ಸೆಲೆಗಳಾಗಿವೆ.

ಈ ಸ್ಮಾರಕಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಿರ್ಮಿಸಲಾಗಿದ್ದು, ಅವು ರಾಷ್ಟ್ರಪ್ರೇಮದ ಸ್ಮರಣಿಕೆಗಳಾಗಿರುವುದಷ್ಟೇ ಅಲ್ಲದೆ, ನಮ್ಮಲ್ಲಿ ಹೆಮ್ಮೆ ಹಾಗೂ ಏಕತಾಭಾವ ಸೃಷ್ಟಿಸಿ, ಸದಾಕಾಲ ಅವುಗಳನ್ನು ಸ್ಮರಿಸುವಂತೆ ಮಾಡುತ್ತದೆ.