Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮದುರೈನ ಏಮ್ಸ್ ನೊಂದಿಗೆ ದೇಶದ ಎಲ್ಲ ಮೂಲೆಗಳಿಗೂ ಬ್ರಾಂಡ್ ಏಮ್ಸ್ ತಂದಂತಾಗುತ್ತದೆ: ಪಿ.ಎಂ.

ಮದುರೈನ ಏಮ್ಸ್ ನೊಂದಿಗೆ ದೇಶದ ಎಲ್ಲ ಮೂಲೆಗಳಿಗೂ ಬ್ರಾಂಡ್ ಏಮ್ಸ್ ತಂದಂತಾಗುತ್ತದೆ: ಪಿ.ಎಂ.

ಮದುರೈನ ಏಮ್ಸ್ ನೊಂದಿಗೆ ದೇಶದ ಎಲ್ಲ ಮೂಲೆಗಳಿಗೂ ಬ್ರಾಂಡ್ ಏಮ್ಸ್ ತಂದಂತಾಗುತ್ತದೆ: ಪಿ.ಎಂ.

ಮದುರೈನ ಏಮ್ಸ್ ನೊಂದಿಗೆ ದೇಶದ ಎಲ್ಲ ಮೂಲೆಗಳಿಗೂ ಬ್ರಾಂಡ್ ಏಮ್ಸ್ ತಂದಂತಾಗುತ್ತದೆ: ಪಿ.ಎಂ.


ತಮಿಳುನಾಡಿನ ಮದುರೈ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಆರೋಗ್ಯ ಆರೈಕೆ ಸೌಲಭ್ಯ ಮತ್ತು ಸೇವೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದು ಮದುರೈ ಏಮ್ಸ್ ಗೆ ಶಂಕುಸ್ಥಾಪನೆ ನೆರೆವೇರಿಸಿ ಹಲವು ಯೋಜನೆಗಳನ್ನು ಉದ್ಘಾಟಿಸಿದರು.
 
ಹೊಸ ಏಮ್ಸ್ ಮದುರೈನ ತೋಪ್ಪುರ್ ನಲ್ಲಿ ಸ್ಥಾಪನೆಯಾಗಲಿದೆ. ಇದು ಈ ವಲಯದಲ್ಲಿ ಮುಂದುವರಿದ ಆರೋಗ್ಯ ಆರೈಕೆ, ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗೆ ಒತ್ತು ನೀಡಲಿದೆ. ಪ್ರಥಮತಃ ಈ ತಾಣ ತಮಿಳುನಾಡಿನ ಹಿಂದುಳಿದ ದಕ್ಷಿಣ ಜಿಲ್ಲೆಗಳಲ್ಲಿ ವಾಸಿಸುವ ಜನರಿಗೆ ಪ್ರಯೋಜನವಾಗಲಿದೆ.
 
ಮದುರೈನಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, “ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಮದುರೈನಲ್ಲಿಂದು ಶಂಕುಸ್ಥಾಪನೆ ನೆರವೇರಿಸಿರುವುದು ನಮ್ಮ ಏಕ ಭಾರತ ಶ್ರೇಷ್ಠ ಭಾರತ ಮುನ್ನೋಟವನ್ನು ಬಿಂಬಿಸುತ್ತದೆ. ದೆಹಲಿಯಲ್ಲಿ ಏಮ್ಸ್ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಬ್ರಾಂಡ್ ನೇಮ್ ಸಂಪಾದಿಸಿದೆ. ಮದುರೈನ ಏಮ್ಸ್ ನೊಂದಿಗೆ ಈ ಆರೋಗ್ಯ ಆರೈಕೆಯ ಬ್ರಾಂಡ್ ಅನ್ನು ದೇಶದ ಎಲ್ಲ ಮೂಲೆಗಳಿಗೂ – ಕಾಶ್ಮೀರದಿಂದ ಮದುರೈವರೆಗೆ, ಗುವಾಹಟಿಯಿಂದ ಗುಜರಾತ್ ವರೆಗೆ ತೆಗೆದುಕೊಂಡು ಹೋದಂತಾಗುತ್ತದೆ ಎಂದು ನಾವು ಹೇಳಬಹುದು. ಮದುರೈನ ಏಮ್ಸ್ ನಿಂದ ತಮಿಳುನಾಡಿನ ಸಂಪೂರ್ಣ ಜನತೆಗೆ ಪ್ರಯೋಜನವಾಗಲಿದೆ” ಎಂದರು.
 
ದೇಶದಾದ್ಯಂತ 73 ವೈದ್ಯಕೀಯ ಕಾಲೇಜುಗಳನ್ನು ಮೇಲ್ದರ್ಜೆಗೇರಿಸುವ ಗುರಿ ಹೊಂದಿರುವ ಪ್ರಧಾನಮಂತ್ರಿ ಆರೋಗ್ಯ ಸುರಕ್ಷಾ ಯೋಜನೆಯ ಭಾಗವಾಗಿ ರಾಜಾಜಿ ವೈದ್ಯಕೀಯ ಕಾಲೇಜು, ಮದುರೈ, ತಂಜಾವೂರು ವೈದ್ಯಕೀಯ ಕಾಲೇಜು ಮತ್ತು ತಿರುನೆಲ್ವೇಲಿ ವೈದ್ಯಕೀಯ ಕಾಲೇಜುಗಳ ಸೂಪರ್ ಸ್ಪೆಷಾಲಿಟಿ ವಿಭಾಗವನ್ನೂ ಪ್ರಧಾನಮಂತ್ರಿಯವರು ಉದ್ಘಾಟಿಸಿದರು. ಮೂರು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೂಪರ್ ಸ್ಪೆಷಾಲಿಟಿ ವಿಭಾಗಗಳನ್ನು ತಾವು ಉದ್ಘಾಟಿಸಿದ್ದಕ್ಕಾಗಿ ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದರು.
 
ಆರೋಗ್ಯ ವಲಯದ ಮೇಲೆ ಸರ್ಕಾರ ನೀಡಿರುವ ಒತ್ತು ಕುರಿತು ಪುನರುಚ್ಚರಿಸಿದ ಪ್ರಧಾನಮಂತ್ರಿ, ಪ್ರತಿಯೊಬ್ಬರೂ ಆರೋಗ್ಯದಿಂದ ಇರಬೇಕು ಎಂಬುದನ್ನು ಖಾತ್ರಿ ಪಡಿಸಲು ಮತ್ತು ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುವುದು ಇದರ ಕಲ್ಪನೆಯಾಗಿದೆ ಎಂದರು.
 
“ಇಂದ್ರ ಧನುಷ್ ಅಭಿಯಾನ ಕಾರ್ಯನಿರ್ವಹಿಸುತ್ತಿರುವ ವೇಗ ಮತ್ತು ಪ್ರಮಾಣ ರೋಗ ತಡೆಗಟ್ಟುವ ಆರೋಗ್ಯ ಸೇವೆಯಲ್ಲಿ ಹೊಸ ಮಾದರಿಯನ್ನು ರೂಪಿಸಿದೆ. ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಮತ್ತು ಪ್ರಧಾನಮಂತ್ರಿ ಸುರಕ್ಷಾ ಮಾತೃತ್ವ ಅಭಿಯಾನ ಸುರಕ್ಷಿತ ಪ್ರಸವವನ್ನು ಸಮೂಹ ಆಂದೋಲನವಾಗಿ ಪರಿವರ್ತಿಸಿದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಯು.ಜಿ. ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು ಶೇ.30ರಷ್ಟು ಹೆಚ್ಚಿಸಲಾಗಿದೆ”ಎಂದರು.
 
ಆಯುಷ್ಮಾನ್ ಭಾರತ್ ಕುರಿತಂತೆ ಮಾತನಾಡಿದ ಪ್ರಧಾನಮಂತ್ರಿ, ಜನರಿಗೆ ಸಾರ್ವತ್ರಿಕ ಆರೋಗ್ಯ ಸೇವೆ ಖಾತ್ರಿಪಡಿಸುವ ನಿಟ್ಟಿನಲ್ಲಿ ಇದು ದೊಡ್ಡ ಹೆಜ್ಜೆಯಾಗಿದೆ ಎಂದರು. ಈ ಯೋಜನೆಯಡಿ ತಮಿಳುನಾಡಿನ 1 ಕೋಟಿ 57 ಲಕ್ಷ ಜನರು ಸೇರಿದ್ದಾರೆ ಎಂದು ಸಂತೃಪ್ತಿ ವ್ಯಕ್ತಪಡಿಸಿದರು. ಕೇವಲ 3 ತಿಂಗಳುಗಳಲ್ಲಿ ಸುಮಾರು 89000 ಫಲಾನುಭವಿಗಳು ಈ ಯೋಜನೆಯಡಿ ಪ್ರಯೋಜನ ಪಡೆದಿದ್ದು, ತಮಿಳುನಾಡಿನಲ್ಲಿ ಚಿಕಿತ್ಸೆ ಪಡೆದ ಒಳ ರೋಗಿಗಳಿಗೆ 200 ಕೋಟಿ ರೂಪಾಯಿ ಅನುಮೋದನೆಗೊಂಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. ತಮಿಳುನಾಡು ಈಗಾಗಲೇ 1320 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಆರಂಭಿಸಿದೆ ಎಂದು ತಿಳಿದು ಸಂತೋಷವಾಗಿದೆ ಎಂದರು.
 
ರೋಗ ನಿಯಂತ್ರಣ ಕ್ಷೇತ್ರದಲ್ಲಿ 2025ರ ಹೊತ್ತಿಗೆ ಕ್ಷಯವನ್ನು ನಿರ್ಮೂಲನೆ ಮಾಡಲು ಸರ್ಕಾರ ಬದ್ಧವಾಗಿದೆ. ನಾವು ತಾಂತ್ರಿಕ ಮತ್ತು ಹಣಕಾಸು ನೆರವನ್ನು ರಾಜ್ಯಗಳಿಗೆ ಒದಗಿಸುತ್ತಿದ್ದೇವೆ ಎಂದು ಪ್ರಧಾನಮಂತ್ರಿ ತಿಳಿಸಿದರು.  ರಾಜ್ಯ ಸರ್ಕಾರ 2023ರಲ್ಲೇ ಕ್ಷಯವನ್ನು ನಿರ್ಮೂಲನೆ ಮಾಡಲು, ಕ್ಷಯ ಮುಕ್ತ ಚೆನ್ನೈ ಉಪಕ್ರಮವನ್ನು ಹೆಚ್ಚಿಸುತ್ತಿದೆ ಎಂದು ತಿಳಿದು ಸಂತೋಷವಾಯಿತು ಎಂದರು, ರಾಷ್ಟ್ರೀಯ ಟಿ.ಬಿ. ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿರುವ ತಮಿಳುನಾಡು ಸರ್ಕಾರವನ್ನು ಅವರು ಶ್ಲಾಘಿಸಿದರು.
 
ಪ್ರಧಾನಮಂತ್ರಿಯವರು 12 ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಕೇಂದ್ರಗಳಿಗೂ ರಾಜ್ಯದಲ್ಲಿ ಚಾಲನೆ ನೀಡಿದರು. ನಮ್ಮ ನಾಗರಿಕರಿಗೆ ಸುಗಮ ಜೀವನ ನಡೆಸಲು ನೀಡುತ್ತಿರುವ ನೆರವಿಗೆ ಇದು ಮತ್ತೊಂದು ಉದಾಹಣೆ ಎಂದು ಹೇಳಿದರು.
 
ಮದುರೈನಿಂದ ಪ್ರಧಾನಮಂತ್ರಿಯವರು ಕೊಚ್ಚಿಗೆ ಪ್ರಯಾಣ ಬೆಳೆಸಿದರು, ಅಲ್ಲಿ ಅವರು ತೈಲ ಮತ್ತು ಅನಿಲ ವಲಯದ ವಿಸ್ತರಣೆಗೆ ಸಂಬಂಧಿಸಿದ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
 
 
 
 
 
*****