Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದಾದ್ರಾ ಮತ್ತು ನಗರ ಹವೇಲಿಯ ಸಿಲ್ವಾಸಾಕ್ಕೆ ಪ್ರಧಾನಮಂತ್ರಿ ಭೇಟಿ

ದಾದ್ರಾ ಮತ್ತು ನಗರ ಹವೇಲಿಯ ಸಿಲ್ವಾಸಾಕ್ಕೆ ಪ್ರಧಾನಮಂತ್ರಿ ಭೇಟಿ

ದಾದ್ರಾ ಮತ್ತು ನಗರ ಹವೇಲಿಯ ಸಿಲ್ವಾಸಾಕ್ಕೆ ಪ್ರಧಾನಮಂತ್ರಿ ಭೇಟಿ

ದಾದ್ರಾ ಮತ್ತು ನಗರ ಹವೇಲಿಯ ಸಿಲ್ವಾಸಾಕ್ಕೆ ಪ್ರಧಾನಮಂತ್ರಿ ಭೇಟಿ


1400 ಕೋ.ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ ಮತ್ತು ಉದ್ಘಾಟನೆ, ದಾದ್ರಾ ಮತ್ತು ನಗರ ಹವೇಲಿಗಳ ಮಾಹಿತಿ ತಂತ್ರಜ್ಞಾನ ನೀತಿ ಅನಾವರಣ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದಾದ್ರಾ ಮತ್ತು ನಗರ ಹವೇಲಿಯ ಸಿಲ್ವಾಸ್ಸಾದಲ್ಲಿ ಹಲವಾರು ಅಭಿವೃದ್ದಿ ಯೋಜನೆಗಳಿಗೆ ಶಿಲಾನ್ಯಾಸ ಮಾಡಿದರು ಹಾಗು ಉದ್ಘಾಟನೆ ನೆರವೇರಿಸಿದರು.

ಅವರು ದಾದ್ರಾ ಮತ್ತು ನಗರ ಹವೇಲಿಯ ಸಾಯ್ಲಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಶಿಲಾನ್ಯಾಸ ನೆರವೇರಿಸಿದರು.

ದಾದ್ರಾ ಮತ್ತು ನಗರ ಹವೇಲಿಗಳ ಮಾಹಿತಿ ತಂತ್ರಜ್ಞಾನ ನೀತಿಯನ್ನು ಪ್ರಧಾನ ಮಂತ್ರಿ  ಅವರು ಬಿಡುಗಡೆ ಮಾಡಿದರು.  ಎಂ-ಆರೋಗ್ಯ ಮೊಬೈಲ್ ಆಪ್ ಮತ್ತು ದಾದ್ರಾ ಮತ್ತು ನಗರ ಹವೇಲಿಗಳಲ್ಲಿ ಮನೆ-ಮನೆಯಿಂದ ತ್ಯಾಜ್ಯ ಸಂಗ್ರಹಿಸುವ , ವಿಂಗಡಿಸುವ, ಸಂಸ್ಕರಿಸುವ ವ್ಯವಸ್ಥೆಗೂ ಚಾಲನೆ ನೀಡಲಾಯಿತು. ಅವರು ಆಯುಷ್ಮಾನ್ ಭಾರತದ ಫಲಾನುಭವಿಗಳಿಗೆ ಗೋಲ್ಡ್ ಕಾರ್ಡುಗಳನ್ನು ವಿತರಿಸಿದರಲ್ಲದೆ ಫಲಾನುಭವಿಗಳಿಗೆ ವನ ಅಧಿಕಾರ ಪತ್ರವನ್ನೂ ವಿತರಿಸಿದರು.

ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ಅವರು ಇಂದು ಒಟ್ಟು 1400 ಕೋ.ರೂ. ವೆಚ್ಚದ ಅಭಿವೃದ್ದಿ ಯೋಜನೆಗಳನ್ನು   ಉದ್ಘಾಟಿಸಲಾಗಿದೆ ಅಥವಾ ಅವುಗಳಿಗೆ ಶಿಲಾನ್ಯಾಸ ಮಾಡಲಾಗಿದೆ ಎಂದರು. ಈ  ವಿವಿಧ ಯೋಜನೆಗಳು ಸಂಪರ್ಕ, ಆರೋಗ್ಯ ಮೂಲಸೌಕರ್ಯ, ಶಿಕ್ಷಣ ಇತ್ಯಾದಿಗಳಿಗೆ ಸಂಬಂಧಪಟ್ಟವು ಎಂದು ಅವರು ವಿವರಿಸಿದರು.

ಹೊಸ ಕೈಗಾರಿಕಾ ನೀತಿ ಮತ್ತು ಮಾಹಿತಿ ತಂತ್ರಜ್ಞಾನ ನೀತಿಗಳನ್ನು ಕೈಗಾರಿಕೆಗಳಿಗೆ ಉತ್ತೇಜನ ನೀಡುವುದಕ್ಕಾಗಿ ರೂಪಿಸಲಾಗಿದೆ ಎಂದರು.

ದೇಶದ ನಾಗರಿಕರ ಕಲ್ಯಾಣಕ್ಕೆ ತಮ್ಮ ಸರಕಾರ ಬದ್ದವಾಗಿರುವುದನ್ನು ಅವರು ಪುನರುಚ್ಚರಿಸಿದರು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ( ಎಲ್ಲರೊಂದಿಗೆ ಎಲ್ಲರ ವಿಕಾಸ)    ಮಂತ್ರದೊಂದಿಗೆ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದವರು ಹೇಳಿದರು.

ದಾಮನ್ ಮತ್ತು ದಿಯು ಹಾಗು ದಾದ್ರಾ ಮತ್ತು ನಗರ ಹವೇಲಿಗಳು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲ್ಪಟ್ಟಿರುವುದನ್ನು ಪ್ರಧಾನಿಯವರು ಗಮನಿಸಿದರು. ಎರಡೂ ಕೇಂದ್ರಾಡಳಿತ ಪ್ರದೇಶಗಳು ಸೀಮೆ ಎಣ್ಣೆ ಮುಕ್ತ ಎಂದೂ ಘೋಷಿಸಲ್ಪಟ್ಟಿರುವುದನ್ನು ಪ್ರಸ್ತಾಪಿಸಿದ ಅವರು ಇಂದು ಎರಡೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತೀ ಮನೆಯೂ ಎಲ್.ಪಿ. ಜಿ.ಸಂಪರ್ಕ, ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ ಹೊಂದಿದೆ ಎಂದರು.

ಪ್ರಧಾನಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ ಎರಡೂ ಕೇಂದ್ರಾಡಳಿತ ಪ್ರದೇಶಗಳ ಬಡ ನಿವಾಸಿಗಳಿಗೆ ಮನೆಯನ್ನು ಮಂಜೂರು ಮಾಡಲಾಗಿದ್ದು,  ಎರಡೂ ಕೇಂದ್ರಾಡಳಿತ ಪ್ರದೇಶಗಳ ಜನತೆಗೆ ಆಯುಷ್ಮಾನ ಭಾರತ್ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಗೋಲ್ಡ್ ಕಾರ್ಡುಗಳನ್ನು ನೀಡಲಾಗಿರುವುದನ್ನೂ ಪ್ರಧಾನ ಮಂತ್ರಿ ಅವರು ಪ್ರಸ್ತಾಪಿಸಿದರು.

ಕಳೆದ 3 ವರ್ಷಗಳಲ್ಲಿ ಎರಡೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 9000 ಕೋ.ರೂ.ಗಳನ್ನು ಹೂಡಿಕೆ ಮಾಡಲಾಗಿದೆ , ಇದರಿಂದ ಸರಣಿ ಅಭಿವೃದ್ದಿ ಯೋಜನೆಗಳು ಕಾರ್ಯಾರಂಭ ಮಾಡಿವೆ ಎಂಬುದರತ್ತ ಅವರು ಗಮನ ಸೆಳೆದರು. ವೈದ್ಯಕೀಯ ಕಾಲೇಜಿಗೆ ಶಿಲಾನ್ಯಾಸ ಮಾಡುವುದರೊಂದಿಗೆ ದಾದರ್ ಮತ್ತು ನಗರ ಹವೇಲಿ ಹಾಗು ದಾಮನ್ ಮತ್ತು ದಿಯುಗಳಿಗೆ ಮೊಟ್ತ ಮೊದಲ ವೈದ್ಯಕೀಯ ಕಾಲೇಜು ಲಭಿಸಿದಂತಾಗಿದೆ. ಈ ವರ್ಷವೇ ವೈದ್ಯಕೀಯ ಕಾಲೇಜು ಕಾರ್ಯಾರಂಭ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಲಾಗುತ್ತದೆ  ಎಂದೂ ಅವರು ತಿಳಿಸಿದರು. ಇದುವರೆಗೆ ಕೇಂದ್ರಾಡಳಿತ ಪ್ರದೇಶಗಳು ವರ್ಷಕ್ಕೆ ಬರೇ 15 ವೈದ್ಯಕೀಯ ಸೀಟುಗಳನ್ನು ಹೊಂದಿದ್ದರೆ  ಈ ವೈದ್ಯಕೀಯ ಕಾಲೇಜು ಸ್ಥಾಪನೆಯಿಂದ 150 ವೈದ್ಯಕೀಯ ಸೀಟುಗಳು ಲಭಿಸುತ್ತವೆ . ವೈದ್ಯಕೀಯ ಕಾಲೇಜು ಜನತೆಗೆ ಸುಧಾರಿತ ವೈದ್ಯಕೀಯ ಸವಲತ್ತುಗಳನ್ನು ಒದಗಿಸುತ್ತದೆ ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು.

ಆಯುಷ್ಮಾನ ಭಾರತ್ ಕುರಿತು ಮಾತನಾಡಿದ ಅವರು ಇದೊಂದು ಜಗತ್ತಿನ ಅತ್ಯಂತ ದೊಡ್ಡ ಆರೋಗ್ಯ ರಕ್ಷಣಾ ಯೋಜನೆಯಾಗಿದೆ ಮತ್ತು ಪ್ರತೀ ದಿನ 10 ಸಾವಿರ ಬಡವರು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಯೋಜನೆ ಜಾರಿಗೆ ಬಂದ 100 ದಿನಗಳಲ್ಲಿ 7 ಲಕ್ಷಕ್ಕೂ ಅಧಿಕ ಬಡ ರೋಗಿಗಳು ಇದರ ಪ್ರಯೋಜನ ಪಡೆದಿದ್ದಾರೆ ಎಂದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಬಡವರಿಗೆ ನಗರಗಳಲ್ಲಿ ಮತ್ತು ಹಳ್ಳಿಗಳಲ್ಲಿ ಖಾಯಂ ಮನೆಗಳನ್ನು ನಿರ್ಮಿಸುವ ವ್ಯಾಪಕ ಆಂದೋಲನ ಜಾರಿಯಲ್ಲಿದೆ ಎಂದೂ ಪ್ರಧಾನ ಮಂತ್ರಿ ತಿಳಿಸಿದರು.

ಹಿಂದಿನ ಸರಕಾರಗಳು 5 ವರ್ಷಗಳಲ್ಲಿ ಬರೇ 25 ಲಕ್ಷ ಮನೆಗಳನ್ನು ನಿರ್ಮಿಸಿದ್ದವು, ನಾವು 5 ವರ್ಷಗಳಲ್ಲಿ 1 ಕೋಟಿ 25 ಲಕ್ಷಕ್ಕೂ ಅಧಿಕ  ಮನೆಗಳನ್ನು ನಿರ್ಮಿಸಿದ್ದೇವೆ ಎಂದವರು ತಮ್ಮ ಹಾಗು ಹಿಂದಿನ ಸರಕಾರದ ಸಾಧನೆಯನ್ನು ತುಲನೆ ಮಾಡಿದರು.

ದಾದ್ರಾ ಮತ್ತು ನಗರ ಹವೇಲಿಗಳಲ್ಲಿಯೇ 13,000 ಮಹಿಳೆಯರಿಗೆ ಉಚಿತ ಅನಿಲ ಸಂಪರ್ಕಗಳನ್ನು ನೀಡಲಾಗಿದೆ ಎಂಬುದನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿ ಅವರು ಬುಡಕಟ್ಟು ಜನರ ಕಲ್ಯಾಣವನ್ನು ಖಾತ್ರಿಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದೂ ತಿಳಿಸಿದರು. ವನ್ ಧನ ಯೋಜನಾ ಅಡಿಯಲ್ಲಿ ಆರಣ್ಯೋತ್ಪನ್ನಗಳ ಮೌಲ್ಯವರ್ಧನೆಗೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ, ಹಾಗು ಬುಡಕಟ್ಟು ಜನರ ಸಂಸ್ಕೃತಿ ರಕ್ಷಣೆಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ದಾದ್ರಾ ಮತ್ತು ನಗರ ಹವೇಲಿಗಳು ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳನ್ನು ಹೊಂದಿವೆ. ಈ ಪ್ರದೇಶವನ್ನು ಪ್ರವಾಸೋದ್ಯಮ ನಕಾಶೆಯಲ್ಲಿ ತರಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಮೀನುಗಾರರ ಆದಾಯ ಹೆಚ್ಚಿಸಲು ನೀಲಿ ಕ್ರಾಂತಿಯಡಿಯಲ್ಲಿ ಕೆಲಸಗಳನ್ನು ಮಾಡಲಾಗುತ್ತಿದೆ. ಮೀನುಗಾರಿಕಾ ವಲಯದ ಸುಧಾರಣೆಗೆ ವಿಶೇಷ ನಿಧಿಯನ್ನು ಸ್ಥಾಪಿಸಲಾಗಿದೆ. 7,500  ಕೋ.ರೂ.ಗಳನ್ನು ಈ ನಿಧಿಯಡಿ ಈ ವಲಯಕ್ಕೆ ಉತ್ತೇಜನ ನೀಡುವುದಕ್ಕಾಗಿ ಒದಗಿಸಲಾಗಿದೆ ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು.

125 ಕೋಟಿ ಭಾರತೀಯರು ತಮ್ಮ ಕುಟುಂಬ ಎಂದು  ಹೇಳಿದ ಪ್ರಧಾನ ಮಂತ್ರಿಗಳು ತಾವು ಅವರ ಕಲ್ಯಾಣಕ್ಕೆ ಬದ್ದರಾಗಿರುವುದಾಗಿಯೂ ತಿಳಿಸಿದರು.