Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಡಾ. ಎಂ. ಕರುಣಾನಿಧಿ ನಿಧನಕ್ಕೆ ಸಂಪುಟ ಸಂತಾಪ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ, ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ 2018ರ ಆಗಸ್ಟ್ 7ರಂದು ನಿಧನರಾದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಡಾ. ಎಂ. ಕರುಣಾನಿಧಿ ಅವರಿಗೆ ಸಂತಾಪ ಸೂಚಿಸಿತು.

ಸಂಪುಟ ಅವರ ನೆನಪಿನಲ್ಲಿ ಎರಡು ನಿಮಿಷ ಮೌನ ಆಚರಿಸಿ, ನಂತರ ಸಂತಾಪ ಸೂಚಕ ನಿರ್ಣಯವನ್ನು ಅಂಗೀಕರಿಸಿತು. ಆ ನಿರ್ಣಯದ ಪಠ್ಯ ಈ ಕೆಳಗಿನಂತಿದೆ.

‘ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ 2018ರ ಆಗಸ್ಟ್ 7ರಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಡಾ. ಎಂ. ಕರುಣಾನಿಧಿ ಅವರ ನಿಧನಕ್ಕೆ ಸಚಿವ ಸಂಪುಟ ತೀವ್ರ ಸಂತಾಪ ಸೂಚಿಸಿದೆ. ಅವರ ನಿಧನದಿಂದ ದೇಶ ಓರ್ವ ಹಿರಿಯ ಹಾಗೂ ವಿಭಿನ್ನ ಕಲೈಂಗರ್ ಎಂದು ಕರೆಸಿಕೊಳ್ಳುತ್ತಿದ್ದ ನಾಯಕನನ್ನು ಕಳೆದುಕೊಂಡಂತಾಗಿದೆ.

ಅವರು ನಾಗಪಟ್ಟಣಂ ಜಿಲ್ಲೆಯ ತಿರುಕ್ಕುವಲಯ್ ಗ್ರಾಮದಲ್ಲಿ 1924ರ ಜೂನ್ 3ರಂದು ಜನಿಸಿದ್ದರು. ತಮಿಳುನಾಡಿನ ಸುದೀರ್ಘ ರಾಜಕೀಯ ಇತಿಹಾಸದಲ್ಲಿ ಅವರು ಹಲವು ಪ್ರಮುಖ ಸಾರ್ವಜನಿಕ ಹಾಗೂ ರಾಜಕೀಯ ಹುದ್ದೆಗಳನ್ನು ನಿರ್ವಹಿಸಿದ್ದರು. ಅವರು 1957ರ ಚುನಾವಣೆಯಲ್ಲಿ ಕುಲಿತ್ತಲೈ ಕ್ಷೇತ್ರದಿಂದ ಜಯಗಳಿಸುವ ಮೂಲಕ ತಮಿಳುನಾಡು ವಿಧಾನಸಭೆಯನ್ನು ಪ್ರವೇಶಿಸಿದರು. ಆಗ ಅವರ ವಯಸ್ಸು 33 ವರ್ಷ. ನಂತರ ಅವರು 1967ರಲ್ಲಿ ತಮಿಳುನಾಡು ಸರ್ಕಾರದಲ್ಲಿ ಸಚಿವರಾಗಿದ್ದರು. 1969ರಲ್ಲಿ ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅವರು ಅಲಂಕರಿಸಿದ್ದರು. ನಂತರ ಐದು ಬಾರಿ ಅವರು ತಮಿಳುನಾಡು ಮುಖ್ಯಮಂತ್ರಿ ಸ್ಥಾನವನ್ನು ನಿರ್ವಹಿಸಿದ್ದರು.

ರಾಜಕೀಯ ಜೀವನ ಮತ್ತು ವೃತ್ತಿ ಮಾತ್ರವಲ್ಲದೆ ಅವರು, ತಮಿಳು ಚಿತ್ರರಂಗದ ಖ್ಯಾತ ಚಿತ್ರಕಥೆಗಾರರು ಕೂಡ ಆಗಿದ್ದರು. ಅವರು ದ್ರಾವಿಡ ಚಳವಳಿಯ ಆದರ್ಶಗಳನ್ನು ಪ್ರಚುರಪಡಿಸಲು ಸಿನಿಮಾ ಮಾಧ್ಯಮವನ್ನು ಆಯ್ದುಕೊಂಡಿದ್ದರು. ಡಾ. ಎಂ. ಕರುಣಾನಿಧಿ ಅವರು ತಮ್ಮ ಬರವಣಿಗೆ ಮತ್ತು ಭಾಷಣ ಕಲೆಗೆ ಹೆಸರುವಾಸಿಯಾಗಿದ್ದರು. ತಮಿಳು ಸಾಹಿತ್ಯ ಕ್ಷೇತ್ರಕ್ಕೆ ಅವರು ತಮ್ಮ ಕವನ, ಸಂಭಾಷಣೆ, ಕಾದಂಬರಿ, ಆತ್ಮಚರಿತ್ರೆ, ನಾಟಕ, ಸಂಭಾಷಣೆ, ಚಿತ್ರಕಥೆ ಮತ್ತು ಸಿನಿಮಾ ಹಾಡುಗಳ ಮೂಲಕ ಮಹತ್ವದ ಕೊಡುಗೆ ನೀಡಿದ್ದಾರೆ.

ಅವರ ನಿಧನದಿಂದಾಗಿ ತಮಿಳುನಾಡು ಜನತೆ ತಮ್ಮ ಜನಪ್ರಿಯ ನಾಯಕನನ್ನು ಕಳೆದುಕೊಂಡಂತಾಗಿದೆ.

ಸಂಪುಟ ಮೃತ ಕುಟುಂಬದವರಿಗೆ ಮತ್ತು ತಮಿಳುನಾಡಿನ ಜನತೆಗೆ ಕೇಂದ್ರ ಸರ್ಕಾರದ ಪರವಾಗಿ ಮತ್ತು ಇಡೀ ರಾಷ್ಟ್ರದ ಪರವಾಗಿ ಹೃದಯಪೂರ್ವಕ ಸಂತಾಪವನ್ನು ಸೂಚಿಸುತ್ತದೆ.