Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉಗಾಂಡಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ಅವರ ಭಾಷಣ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉಗಾಂಡಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ಉಗಾಂಡಾದ ಅಧ್ಯಕ್ಷರಾದ ಮುಸೆವೇನಿ ಅವರು ಕಂಪಾಲದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

 

ತಮ್ಮ ಭಾಷಣದಲ್ಲಿ ಪ್ರಧಾನ ಮಂತ್ರಿಯವರು ಉಗಾಂಡಾದಲ್ಲಿರುವ ಭಾರತೀಯ ಸಮುದಾಯದಲ್ಲಿ ತಾವೂ ಒಬ್ಬರೆಂಬ ಭಾವನೆ ತಮ್ಮಲ್ಲಿ ಮೂಡಿದೆ ಎಂದರು. ಅಧ್ಯಕ್ಷರಾದ ಮುಸೆವೇನಿ ಅವರು ಈ ಕಾರ್ಯಕ್ರಮದಲ್ಲಿ ಹಾಜರಿರುವುದು ಅವರು ಭಾರತೀಯರ ಬಗ್ಗೆ ಮತ್ತು ಉಗಾಂಡಾದಲ್ಲಿರುವ ಭಾರತೀಯ ಸಮುದಾಯದ ಬಗ್ಗೆ ಹೊಂದಿರುವ ಪ್ರೀತಿಯನ್ನು ತೋರಿಸುತ್ತದೆ ಎಂದರು. ಉಗಾಂಡಾದ ಸಂಸತ್ತಿನಲ್ಲಿ ಬುಧವಾರದಂದು ತಮಗೆ ಭಾಷಣ ಮಾಡುವ ಗೌರವದ ಅವಕಾಶ ಕೊಟ್ಟುದಕ್ಕಾಗಿ ಅವರು ಅಧ್ಯಕ್ಷರಾದ ಮುಸೆವೇನಿ  ಮತ್ತು ಉಗಾಂಡಾದ ಜನತೆಗೆ ಕೃತಜ್ಞತೆ ಸಲ್ಲಿಸಿದರು. 

 

ಭಾರತ ಮತ್ತು ಉಗಾಂಡಾದ ನಡುವಿನ ಬಾಂಧವ್ಯ ಶತಮಾನಗಳಷ್ಟು ಹಳೆಯದು ಎಂದು ಹೇಳಿದ ಪ್ರಧಾನ ಮಂತ್ರಿಗಳು ವಸಾಹತು ಶಾಹಿ ವಿರುದ್ದದ ಹೋರಾಟ ಮತ್ತು ಉಗಾಂಡಾದಲ್ಲಿ ರೈಲ್ವೇ ನಿರ್ಮಾಣವೂ ಸೇರಿದಂತೆ ಉಭಯ ದೇಶಗಳ ನಡುವಿನ ಚಾರಿತ್ರಿಕ ಸಂಪರ್ಕಗಳನ್ನು ಸ್ಮರಿಸಿಕೊಂಡರು. ಉಗಾಂಡಾದ ರಾಜಕೀಯದಲ್ಲಿಯೂ ಹಲವು ಭಾರತೀಯರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದೂ ಪ್ರಧಾನ ಮಂತ್ರಿಗಳು ಹೇಳಿದರು. 

 

ಭಾರತೀಯ ಸಮುದಾಯವು ಭಾರತೀಯತೆಯನ್ನು ಉಳಿಸಿಕೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿಯವರು ಆ ಭಾರತೀಯತೆ ಇಂದಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರತಿಫಲಿಸಿದೆ ಎಂದೂ ಹೇಳಿದರು. 

 

ಉಗಾಂಡಾವೂ ಸೇರಿದಂತೆ ಆಫ್ರಿಕಾದ ಎಲ್ಲಾ ದೇಶಗಳು ಭಾರತಕ್ಕೆ ಮುಖ್ಯ ಎಂದ ಪ್ರಧಾನ ಮಂತ್ರಿ ಅವರು ವಸಾಹತುಶಾಹಿಯ ವಿರುದ್ದ ಪರಸ್ಪರ ಹಂಚಿಕೊಂಡ ಹೋರಾಟದ ಚರಿತ್ರೆ, ವಿಸ್ತಾರವಾದ ಭಾರತೀಯ ಜನ ಸಮುದಾಯ ಮತ್ತು ಸಮಾನ ಅಭಿವೃದ್ದಿಯ ಸವಾಲುಗಳು  ಇದಕೆಲ್ಲ ಕಾರಣ ಎಂದರು. 

ಭಾರತವಿಂದು ವಿಶ್ವದಲ್ಲಿ ಅತ್ಯಂತ  ತ್ವರಿತಗತಿಯಿಂದ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಭಾರತವೀಗ ಕಾರುಗಳನ್ನು ಮತ್ತು ಸ್ಮಾರ್ಟ್ ಫೋನುಗಳನ್ನು ರಪ್ತು ಮಾಡುತ್ತಿದೆ ಎಂದು ಪ್ರಧಾನ ಮಂತ್ರಿಯವರು ಹೇಳಿದರು. ಡಿಜಿಟಲ್ ತಂತ್ರಜ್ಞಾನ ಭಾರತದ ಜನರ ಸಶಕ್ತೀಕರಣಕ್ಕೆ ಸಾಧನವಾಗುತ್ತಿದೆ ಮತ್ತು ದೇಶವೀಗ ನವೋದ್ಯಮಗಳಿಗೆ ಪ್ರಮುಖ ಕೇಂದ್ರವಾಗುತ್ತಿದೆ ಎಂದರು. 

 

ಭಾರತದ ವಿದೇಶಾಂಗ ನೀತಿಯಲ್ಲಿ ಆಫ್ರಿಕಾದ ಮಹತ್ವದ ಬಗ್ಗೆ ಪ್ರಧಾನ ಮಂತ್ರಿಯವರು ಮಾತನಾಡಿದರು. ಈ ಹಿನ್ನೆಲೆಯಲ್ಲಿ  ಅವರು 2015 ರಲ್ಲಿ ಹೊಸದಿಲ್ಲಿಯಲ್ಲಿ ನಡೆದ ಭಾರತ-ಆಫ್ರಿಕಾ ವೇದಿಕೆ ಸಮಾವೇಶವನ್ನು ಪ್ರಸ್ತಾಪಿಸಿದರು. ಇದಲ್ಲದೆ ಭಾರತ ಮತ್ತು ಇತರ ಆಫ್ರಿಕಾ ದೇಶಗಳ ನಡುವಿನ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆಗಳನ್ನೂ ಅವರು ಉಲ್ಲೇಖಿಸಿದರು. 

 

ಇತರ ಉಪಕ್ರಮಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನ ಮಂತ್ರಿಯವರು 3 ಬಿಲಿಯನ್  ಡಾಲರುಗಳಿಗೂ  ಅಧಿಕ ಮೊತ್ತದ ನೆರವಿನ ಯೋಜನೆಗಳು; ವಿದ್ಯಾರ್ಥಿ ವೇತನಗಳು, ಮತ್ತು ಇ-ವೀಸಾ ವ್ಯವಸ್ಥೆಗಳನ್ನು ಉಲ್ಲೇಖಿಸಿದರು. ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟದ ಸದಸ್ಯ ರಾಷ್ಟ್ರಗಳಲ್ಲಿ ಅರ್ಧದಷ್ಟು ರಾಷ್ಟ್ರಗಳು ಆಫ್ರಿಕಾದವು ಎಂದೂ ಪ್ರಧಾನ ಮಂತ್ರಿಯವರು ಹೇಳಿದರು.

 

ಹೊಸ ವಿಶ್ವ ವ್ಯವಸ್ಥೆಯಲ್ಲಿ ಏಶ್ಯಾ ಮತ್ತು ಆಫ್ರಿಕಾ ದೇಶಗಳು ಬಲಿಷ್ಟ ಪಾತ್ರವನ್ನು ವಹಿಸುತ್ತಿವೆ ಎಂದೂ ಪ್ರಧಾನ ಮಂತ್ರಿಗಳು ಅಭಿಪ್ರಾಯಪಟ್ಟರು.