Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಾಣಿಜ್ಯ ಭವನ ಶಿಲಾನ್ಯಾಸ ಸಮಾರಂಭದಲ್ಲಿ ಪ್ರಧಾನ ಮಂತ್ರಿ.


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯಲ್ಲಿ ಕೇಂದ್ರ ಸರಕಾರದ ವಾಣಿಜ್ಯ ಇಲಾಖೆಯ ಹೊಸ ಕಚೇರಿ ಸಂಕೀರ್ಣ -ವಾಣಿಜ್ಯ ಭವನಕ್ಕೆ ಶಿಲಾನ್ಯಾಸ ಮಾಡಿದರು.

ಭವನದ ಕಾಮಗಾರಿಯು ನಿಗದಿತ ಅವಧಿಗಿಂತ ಮುಂಚಿತವಾಗಿ ಮುಗಿಯುವ ವಿಶ್ವಾಸವನ್ನು ಪ್ರಧಾನ ಮಂತ್ರಿ ಅವರು ವ್ಯಕ್ತಪಡಿಸಿದರು. ನವ ಭಾರತದ ಸ್ಪೂರ್ತಿಯನ್ನು ಗಮನದಲ್ಲಿಟ್ಟುಕೊಂಡು, ರಾಜಧಾನಿಯಲ್ಲಿ ಕೂಡಾ ಪ್ರಮುಖ ಕಟ್ಟಡ ಯೋಜನೆಗಳು ಅನಪೇಕ್ಷಿತವಾಗಿ ವಿಳಂಬವಾಗುತ್ತಿರುವ ಹಳೆಯ ಪದ್ದತಿಗೆ ತಿಲಾಂಜಲಿ ನೀಡಲಾಗುತ್ತಿದೆ ಎಂಬುದನ್ನವರು ಒತ್ತಿ ಹೇಳಿದರು. ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರ , ಡಾ. ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕ , ಪ್ರವಾಸೀ ಭಾರತೀಯ ಕೇಂದ್ರ ಮತ್ತು ಕೇಂದ್ರೀಯ ಮಾಹಿತಿ ಆಯೋಗದ ಹೊಸ ಕಚೇರಿ ಕಟ್ಟಡಗಳನ್ನು ಅವರು ಈ ನಿಟ್ಟಿನಲ್ಲಿ ಉದಾಹರಿಸಿದರು.

ಸರಕಾರದ ಕಾರ್ಯನಿರ್ವಹಣೆಯಲ್ಲಿಯ ಅಡೆತಡೆಗಳನ್ನು, ವಿಳಂಬ ನೀತಿಯನ್ನು ನಿವಾರಿಸಿದ್ದರ ಫಲಿತಾಂಶ ಇದಾಗಿದೆ ಎಂದು ಪ್ರಧಾನ ಮಂತ್ರಿಗಳು ಹೇಳಿದರು. ಹೊಸ ಕಚೇರಿ ಕಟ್ಟಡ –ವಾಣಿಜ್ಯ ಭವನ ಭಾರತೀಯ ವಾಣಿಜ್ಯ ರಂಗದಲ್ಲಿಯ ವಿಳಂಬ ಧೋರಣೆಯನ್ನು ನಿವಾರಿಸುವ ನಿಟ್ಟಿನಲ್ಲಿ ಇನ್ನಷ್ಟು ಅನುಕೂಲತೆಗಳನ್ನು ಒದಗಿಸುವ ನಿರೀಕ್ಷೆಯನ್ನು ಪ್ರಧಾನ ಮಂತ್ರಿಗಳು ವ್ಯಕ್ತಪಡಿಸಿದರು. ದೇಶದ ಜನಾಂಗೀಯ ವೈವಿಧ್ಯತೆಯನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿಗಳು ನಮ್ಮ ಯುವ ಜನಾಂಗದ ಆಶೋತ್ತರಗಳನ್ನು ಈಡೇರಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದರು.

ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಂಡದ್ದರ ಬಗ್ಗೆ ಪ್ರಸ್ತಾಪಿಸಿದ ಪ್ರಧಾನ ಮಂತ್ರಿಗಳು ಹೊಸ ಕಟ್ಟಡ ನಿರ್ಮಾಣವಾಗುತ್ತಿರುವ ಈ ಭೂಮಿಯು ಈ ಮೊದಲು ಪೂರೈಕೆ ಮತ್ತು ವಿಲೇವಾರಿ ಮಹಾನಿರ್ದೇಶನಾಲಯದ ಅಧೀನದಲ್ಲಿತ್ತು. ಅದು ಈಗ ಸರಕಾರಿ ಇ-ಮಾರುಕಟ್ಟೆ ಸ್ಥಳ (ಜಿ.ಇ.ಎಂ) ಆಗಿ ಬದಲಾಗಿದೆ.ಮತ್ತು ಅತ್ಯಂತ ಕಿರು ಅವಧಿಯಲ್ಲಿ 8,700 ಕೋ.ರೂ.ಮೌಲ್ಯದ ವ್ಯವಹಾರಕ್ಕೆ ಸಾಕ್ಷಿಯಾಗಿದೆ ಎಂದವರು ನುಡಿದರು. ಜಿ.ಎ.ಎಂ. ನ ಇನ್ನಷ್ಟು ವಿಸ್ತರಣೆಯ ನಿಟ್ತಿನಲ್ಲಿ ವಾಣಿಜ್ಯ ಇಲಾಖೆ ಕಾರ್ಯನಿರ್ವಹಿಸಬೇಕು, ಆ ಮೂಲಕ ದೇಶದ ಸಣ್ನ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ ಲಾಭವಾಗುವಂತೆ ಮಾಡಬೇಕು ಎಂದವರು ಮನವಿ ಮಾಡಿದರು. ಜಿ.ಎಸ್.ಟಿ.ಯ ಪ್ರಯೋಜನಗಳ ಬಗ್ಗೆ ಮಾತನಾಡಿದ ಪ್ರಧಾನ ಮಂತ್ರಿಗಳು ಜನ ಸ್ನೇಹಿ ಮತ್ತು ಅಭಿವೃದ್ಧಿ ಸ್ನೇಹೀ ಹಾಗು ಹೂಡಿಕೆ ಸ್ನೇಹೀ ಪರಿಸರವನ್ನು ನಿರ್ಮಾಣ ಮಾಡಲು ಕೇಂದ್ರ ಸರಕಾರವು ಸತತ ಪ್ರಯತ್ನಗಳನ್ನು ನಡೆಸುತ್ತಿದೆ ಎಂದರು.

ವಿವಿಧ ಬೃಹತ್ ಆರ್ಥಿಕ ಮಾನದಂಡಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನ ಮಂತ್ರಿಗಳು ಜಾಗತಿಕ ಆರ್ಥಿಕತೆಯಲ್ಲಿ ಭಾರತವೀಗ ಹೇಗೆ ಪ್ರಮುಖ ಪಾತ್ರವಹಿಸುತ್ತಿದೆ ಎಂಬ ಬಗ್ಗೆಯೂ ವಿವರಿಸಿದರು. ಭಾರತವೀಗ ಅತ್ಯುನ್ನತ ಹಣಕಾಸು ತಂತ್ರಜ್ಞಾನದ ಐದು ದೇಶಗಳಲ್ಲಿ ಒಂದಾಗಿರುವ ಬಗ್ಗೆ ವಿವರಿಸಿದ ಅವರು “ವ್ಯಾಪಾರಕ್ಕೆ ಅನುಕೂಲಕರ ವಾತಾವರಣ” ಮತ್ತು ’ಉದ್ಯಮಕ್ಕೆ ಅನುಕೂಲಕರ ವಾತಾವರ” ಎಂಬ ವಿಷಯಗಳು ಪರಸ್ಪರ ಅಂತರ್ ಸಂಪರ್ಕಿತ ಜಗತ್ತಿನಲ್ಲಿ “ಜೀವಿಸಲು ಅನುಕೂಲಕರ ವಾತಾವರಣ” ಕ್ಕೆ ಸಂಬಂಧಿಸಿದವಾಗಿವೆ ಎಂದರು.

ರಪ್ತು ಹೆಚ್ಚಳದ ಅಗತ್ಯವನ್ನು ಪ್ರತಿಪಾದಿಸಿದ ಪ್ರಧಾನ ಮಂತ್ರಿಗಳು ಈ ನಿಟ್ಟಿನಲ್ಲಿ ರಾಜ್ಯಗಳನ್ನು ಸಕ್ರಿಯ ಪಾಲುದಾರರನ್ನಾಗಿ ಮಾಡಬೇಕಿದೆ ಎಂದರು. ಪ್ರಸ್ತುತ ಇರುವ 1.6 ಪ್ರತಿಶತ ಜಾಗತಿಕ ರಫ್ತು ಪ್ರಮಾಣವನ್ನು ಕನಿಷ್ಟ 3.4 ಪ್ರತಿಶತಕ್ಕೆ ಏರಿಸಲು ವಾಣಿಜ್ಯ ಇಲಾಖೆ ನಿರ್ಧಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದ ಅವರು ಅದೇ ರೀತಿ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಬೇಕು , ಆಮದನ್ನು ಕಡಿಮೆ ಮಾಡಬೇಕು ಎಂದರು. ಈ ನಿಟ್ಟಿನಲ್ಲಿ ಅವರು ವಿದ್ಯುನ್ಮಾನ ಉತ್ಪಾದನೆಯ ಉದಾಹರಣೆಯನ್ನು ನೀಡಿದರು. ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಕೇಂದ್ರ ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದರು.