Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದೇಶಾದ್ಯಂತ ವಿವಿಧ ಡಿಜಿಟಲ್ ಇಂಡಿಯಾ ಉಪಕ್ರಮಗಳ ಫಲಾನುಭವಿಗಳೊಂದಿಗೆ ವಿಡಿಯೋ ಬ್ರಿಜ್ ಮೂಲಕ ಪ್ರಧಾನಿ ಸಂವಾದ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು, ದೇಶಾದ್ಯಂತದ ವಿವಿಧ ಡಿಜಿಟಲ್ ಇಂಡಿಯಾ ಅಭಿಯಾನ ಯೋಜನೆಯ ಫಲಾನುಭವಿಗಳೊಂದಿಗೆ ವಿಡಿಯೋ ಬ್ರಿಜ್ ಮೂಲಕ ಸಂವಾದ ನಡೆಸಿದರು. ಸಮಾನ ಸೇವಾ ಕೇಂದ್ರಗಳು, ಎನ್.ಐ.ಸಿ.

ಕೇಂದ್ರಗಳು, ರಾಷ್ಟ್ರೀಯ ಜ್ಞಾನ ಜಾಲ, ಬಿಪಿಓಗಳು, ಮೊಬೈಲ್ ಉತ್ಪಾದನಾ ಘಟಕಗಳು ಮತ್ತು ಮೈಗೌ ಸ್ವಯಂಸೇವಕರ ಮೂಲಕ 50 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಈ ವಿಡಿಯೋ ಬ್ರಿಜ್ ನಲ್ಲಿ ಸಂಪರ್ಕ ಸಾಧಿಸಿದರು. ಇದು ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆವಿಡಿಯೋ ಬ್ರಿಜ್ ಮೂಲಕ ಪ್ರಧಾನಮಂತ್ರಿಯವರು ನಡೆಸುತ್ತಿರುವ ಸಂವಾದ ಸರಣಿಯ ಆರನೇ ಸಂವಾದವಾಗಿದೆ.

ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ, ಎಲ್ಲ ಕ್ಷೇತ್ರದ ಜನರೂ ಅದರಲ್ಲೂ ಗ್ರಾಮೀಣ ಪ್ರದೇಶದ ಜನರು ಡಿಜಿಟಲ್ ರಂಗದಲ್ಲಿ ಸಬಲರಾಗುವುದನ್ನು ಖಾತ್ರಿಪಡಿಸಲು ಡಿಜಿಟಲ್ ಇಂಡಿಯಾವನ್ನು ಆರಂಭ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನು ಸಾಕಾರಗೊಳಿಸಲು ಸರ್ಕಾರವು, ಗ್ರಾಮಗಳನ್ನು ಫೈಬರ್ ಆಪ್ಟಿಕ್ ಮೂಲಕ ಸಂಪರ್ಕಿಸುವ, ನಾಗರಿಕರನ್ನು ಡಿಜಿಟಲ್ ಶಿಕ್ಷಿತರನ್ನಾಗಿ ಮಾಡುವ, ಮೊಬೈಲ್ ನಿಂದ ಸೇವೆಗಳನ್ನು ನೀಡುವ ಮತ್ತು ವಿದ್ಯುನ್ಮಾನ ಉತ್ಪಾದನೆ ಉತ್ತೇಜಿಸುವುದನ್ನೂ ಒಳಗೊಂಡ ಸಮಗ್ರ ನೀತಿಯ ಮೂಲಕ ಶ್ರಮಿಸುತ್ತಿದೆ ಎಂದೂ ಅವರು ತಿಳಿಸಿದರು.

ತಂತ್ರಜ್ಞಾನದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ತಂತ್ರಜ್ಞಾನ ಸುಗಮ ಜೀವನ ನಿರ್ವಹಣೆ ತಂದಿದೆ ಮತ್ತು ಸರ್ಕಾರದ ಪ್ರಯತ್ನಗಳು ತಂತ್ರಜ್ಞಾನದ ಪ್ರಯೋಜನಗಳು ಸಮಾಜದ ಎಲ್ಲ ವರ್ಗದವರಿಗೂ ದೊರೆಯುವುದನ್ನು ಖಾತ್ರಿಪಡಿಸುತ್ತಿದೆ ಎಂದರು.

ಭೀಮ್ ಆಪ್ ಸೇರಿದಂತೆ ಆನ್ ಲೈನ್ ಪಾವತಿಯ ವಿವಿಧ ಅವಕಾಶಗಳ ಮೂಲಕ, ರೈಲ್ವೆ ಟಿಕೆಟ್ ಆನ್ ಲೈನ್ ಬುಕ್ಕಿಂಗ್ ಮತ್ತು ವಿದ್ಯಾರ್ಥಿ ವೇತನದ ವಿದ್ಯುನ್ಮಾನ ವಿತರಣೆ ಮತ್ತು ಬ್ಯಾಂಕ್ ಖಾತೆಗಳಿಗೆ ಪಿಂಚಣಿ ಜಮೆ ಇತ್ಯಾದಿ ಶ್ರೀಸಾಮಾನ್ಯರ ಮೇಲಿನ ಹೊರೆಯನ್ನು ತಗ್ಗಿಸಿವೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ಸಮಾನ ಸೇವಾ ಕೇಂದ್ರ (ಸಿಎಸ್ ಸಿ)ಗಳ ಮಹತ್ವವನ್ನು ವಿವರಿಸಿದ ಪ್ರಧಾನಿ, ದೇಶಾದ್ಯಂತ ಸಿಎಸ್.ಸಿ.ಗಳು ಗ್ರಾಮೀಣ ಭಾರತಕ್ಕೆ ಡಿಜಿಟಲ್ ಸೇವೆ ಒದಗಿಸುತ್ತಿವೆ ಎಂದರು. ಸಿ.ಎಸ್.ಸಿ.ಗಳು ಗ್ರಾಮ ಮಟ್ಟದ ಉದ್ದಿಮೆ(ವಿಎಲ್.ಇ)ಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿವೆ ಮತ್ತು 10 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿವೆ ಎಂದರು. 2.92 ಲಕ್ಷ ಸಿಎಸ್.ಸಿ.ಗಳು ಗ್ರಾಮೀಣ ಭಾರತದಲ್ಲಿ ಸರ್ಕಾರದ ಮತ್ತು ಇತರ ವಿವಿಧ ಸೇವೆಗಳನ್ನು ಪಡೆಯಲು ನೆರವಾಗಿದ್ದರೆ, 2.15 ಲಕ್ಷ ಗ್ರಾಮ ಪಂಚಾಯ್ತಿಗಳಲ್ಲಿ ಇತರ ಸೇವೆಗಳು ದೊರೆಯುತ್ತಿವೆ ಎಂದರು.

ಈ ಸಂವಾದದ ವೇಳೆ, ಹೆಚ್ಚು ಡಿಜಿಟಲ್ ಪಾವತಿಯಿಂದಾಗಿ ಮಧ್ಯವರ್ತಿಗಳ ಹಾವಳಿ ತಪ್ಪಿದೆ ಎಂದರು. ಭಾರತದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಡಿಜಿಟಲ್ ಪಾವತಿ ಗಣನೀಯ ಏರಿಕೆ ಆಗಿದ್ದು, ಭಾರತೀಯ ಆರ್ಥಿಕತೆಯನ್ನು ಡಿಜಿಟಲ್ ಮತ್ತು ಪಾರದರ್ಶಕಗೊಳಿಸಿದೆ ಎಂದರು.

ಪ್ರಧಾನಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರ ಅಭಿಯಾನ (ಪಿಎಂಜಿಡಿಐಎಸ್.ಎಚ್.ಎ) ಬಗ್ಗೆ ಮಾತನಾಡಿದ ಪ್ರಧಾನಿ, ಈ ಯೋಜನೆ ಈಗಾಗಲೇ 1.25 ಕೋಟಿ ಜನರಿಗೆ ಡಿಜಿಟಲ್ ಕೌಶಲ ಮತ್ತು ತರಬೇತಿ ನೀಡಿದ್ದು, ಈ ಪೈಕಿ ಶೇ.70ರಷ್ಟು ಅಭ್ಯರ್ಥಿಗಳು ಎಸ್.ಸಿ., ಎಸ್.ಟಿ. ಮತ್ತು ಓಬಿಸಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದರು. 20 ಗಂಟೆಗಳ ಬೇಸಿಕ್ ಕಂಪ್ಯೂಟರ್ ತರಬೇತಿಯ ಮೂಲಕ ಆರು ಕೋಟಿ ಜನರಿಗೆ ಬೇಸಿಕ್ ಕಂಪ್ಯೂಟರ್ ತರಬೇತಿ ಮತ್ತು ಡಿಜಿಟಲ್ ಕೌಶಲ ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದರು.

ಡಿಜಿಟಲ್ ಇಂಡಿಯಾ ಬಿಪಿಓ ವಲಯವನ್ನು ಸಾಕಷ್ಟು ಪರಿವರ್ತಿಸಿದೆ. ಇದಕ್ಕೂ ಮುನ್ನ ಬಿಪಿಓಗಳು ಕೇವಲ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿದ್ದವು, ಈಗ ಅವು ಎಲ್ಲ ಪಟ್ಟಣ ಮತ್ತು ನಗರಗಳಿಗೂ ವ್ಯಾಪಿಸಿದ್ದು, ಉದ್ಯೋಗಾವಕಾಶ ಕಲ್ಪಿಸುತ್ತಿವೆ ಎಂದರು. ಭಾರತದ ಬಿಪಿಓ ಉತ್ತೇಜನ ಯೋಜನೆ ಮತ್ತು ಈಶಾನ್ಯ ವಲಯಕ್ಕೆ ಪ್ರತ್ಯೇಕ ಬಿಪಿಓ ಉತ್ತೇಜನ ಯೋಜನೆಗಳು ಗ್ರಾಮೀಣ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಜನರಿಗೆ ಹೊಸ ಉದ್ಯೋಗಾವಕಾಶ ಕಲ್ಪಿಸಿವೆ ಎಂದರು. ದೇಶದಾದ್ಯಂತ ತೆರೆಯುತ್ತಿರುವ ಬಿಪಿಓ ಘಟಕಗಳಿಂದಾಗಿ ಈಗ ದೇಶದ ಯುವಕರು ಮನೆಯ ಬಳಿಯೇ ಉದ್ಯೋಗ ಪಡೆಯುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು.

ವಿವಿಧ ವಿದ್ಯುನ್ಮಾನ ಉತ್ಪಾದನಾ ಘಟಕಗಳ ನೌಕರರೊಂದಿಗೆ ಸಂವಾದ ನಡೆಸಿದ ಪ್ರಧಾನಿ, ಭಾರತವು ಕಳೆದ ನಾಲ್ಕು ವರ್ಷಗಳಲ್ಲಿ ವಿಧ್ಯುನ್ಮಾನ ಯಂತ್ರಾಂಶ ಉತ್ಪಾದನೆಯಲ್ಲಿ ಸಾಕಷ್ಟು ದೂರ ಸಾಗಿದೆ. ಭಾರತದಲ್ಲಿ ವಿಧ್ಯುನ್ಮಾನ ಉತ್ಪಾದನೆ ಉತ್ತೇಜಿಸಲು ಸರ್ಕಾರ, ವಿಧ್ಯುನ್ಮಾನ ಉತ್ಪಾದನಾ ಕ್ಲಸ್ಟರ್ (ಇ.ಎಂ.ಸಿ.) ಯೋಜನೆ ತಂದಿದ್ದು, ಇದರ ಮೂಲಕ 23 ಇಎಂಸಿಗಳನ್ನು 15 ರಾಜ್ಯಗಳಲ್ಲಿ ತೆರೆಯಲಾಗಿದೆ ಎಂದರು. ಈ ಯೋಜನೆಯು ಹತ್ತಿರ ಹತ್ತಿರ ಆರು ಲಕ್ಷ ಜನರಿಗೆ ಉದ್ಯೋಗ ಒದಗಿಸುವ ನಿರೀಕ್ಷೆ ಇದೆ ಎಂದ ಪ್ರಧಾನಿ, 2014ರಲ್ಲಿ ದೇಶದಲ್ಲಿ ಕೇವಲ ಎರಡೇ ಎರಡಿದ್ದ ಮೊಬೈಲ್ ಫೋನ್ ಉತ್ಪಾದನಾ ಕಾರ್ಖಾನೆಗಳು ಈಗ 120 ಆಗಿವೆ ಎಂದರು. ಈ ಘಟಕಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 4.5ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಸಿವೆ ಎಂದರು.

ಬಲವಾದ ಡಿಜಿಟಲ್ ಭಾರತ ನಿರ್ಮಾಣದಲ್ಲಿ ರಾಷ್ಟ್ರೀಯ ಜ್ಞಾನ ಜಾಲ (ಎನ್.ಕೆ.ಎನ್.) ಮಹತ್ವದ ಬಗ್ಗೆ ಪ್ರಧಾನಿ ಮಾತನಾಡಿದರು. ಎನ್.ಕೆ.ಎನ್. ಭಾರತದ 1700 ಪ್ರಮುಖ ಸಂಶೋಧನೆ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಬೆಸೆದಿದೆ, ಈ ಮೂಲಕ 5 ಕೋಟಿಯಷ್ಟು ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ, ಶಿಕ್ಷಣವೇತ್ತರಿಗೆ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಶಕ್ತಿಯುತ ವೇದಿಕೆ ಕಲ್ಪಿಸಿದೆ ಎಂದರು.

ಮೈಗೌ ವೇದಿಕೆಯ ಸ್ವಯಂಸೇವಕರೊಂದಿಗೂ ಪ್ರಧಾನಮಂತ್ರಿ ಸಂವಾದ ನಡೆಸಿದರು, ಸಿಟಿಜನ್ ಎಂಗೇಜ್ಮೆಂಟ್ ಪ್ಲಾಟ್ ಫಾಂ ಅನ್ನು ಸರ್ಕಾರ ರಚನೆಯಾದ ಎರಡು ತಿಂಗಳುಗಳಲ್ಲೇ ರಚಿಸಲಾಯಿತು. ಈ ವೇದಿಕೆಯಲ್ಲಿ ಸುಮಾರು 60 ಲಕ್ಷ ಸ್ವಯಂಸೇವಕರು ಸಂಪರ್ಕಹೊಂದಿದ್ದು, ಕಲ್ಪನೆ, ಸಲಹೆ ನೀಡುತ್ತಿದ್ದಾರೆ ಮತ್ತು ನವ ಭಾರತ ನಿರ್ಮಾಣದಲ್ಲಿ ಹಲವು ಕಾರ್ಯಕರ್ತರು ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಮೋದಿ ಹೇಳಿದರು. ಡಿಜಿಟಲ್ ಇಂಡಿಯಾ ಮೂಲಕ 4 ಇ ಗಳು ಅಂದರೆ ಎಡ್ಯುಕೇಷನ್ (ಶಿಕ್ಷಣ), ಎಂಪ್ಲಾಯ್ಮೆಂಟ್ (ಉದ್ಯೋಗ), ಆಂತ್ರಪೆನರ್ಶಿಪ್ (ಉದ್ಯಮಶೀಲತೆ) ಮತ್ತು ಎಂಪವರ್ಮೆಂಟ್ (ಸಬಲೀಕರಣ) ಸಾಧಿಸಲಾಗುತ್ತಿದೆ ಎಂದರು.

ಪ್ರಧಾನಿಯವರೊಂದಿಗೆ ಸಂವಾದ ನಡೆಸಿದ ಡಿಜಿಟಲ್ ಇಂಡಿಯಾದ ವಿವಿಧ ಯೋಜನೆಯ ಫಲಾನುಭವಿಗಳು ತಮ್ಮ ಜೀವನ ಸುಧಾರಣೆಯಲ್ಲಿ ಈ ಯೋಜನೆಗಳು ಎಷ್ಟು ಮಹತ್ವದ ಪಾತ್ರ ವಹಿಸಿದವು ಎಂಬುದನ್ನು ವಿವರಿಸಿದರು. ಸಮಾನ ಸೇವಾ ಕೇಂದ್ರ (ಸಿಎಸ್.ಸಿ.)ಗಳು ಹೇಗೆ ಉದ್ಯೋಗಾವಕಾಶವನ್ನು ಕಲ್ಪಿಸಿದವು ಮತ್ತು ಸುಗಮ ಜೀವನಕ್ಕೆ ವಿವಿಧ ಸೇವೆಗಳು ಹೇಗೆ ನೆರವಾದವು ಎಂಬುದನ್ನು ವಿವರಿಸಿದರು.

****