Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶಾಂತಿಯುತ ಉದ್ದೇಶಗಳಿಗಾಗಿ ಬಾಹ್ಯಾಕಾಶ ಬಳಸಿಕೊಳ್ಳುವ ಉದ್ದೇಶದ ಭಾರತ-ಓಮಾನ್ ನಡುವಿನ ಒಡಂಬಡಿಕೆಗೆ ಕೇಂದ್ರ ಸಂಪುಟದ ಅನುಮೋದನೆ.


ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಭಾರತ ಮತ್ತು ಓಮಾನ್ ದೇಶಗಳು 2018ರ ಫೆಬ್ರವರಿಯಲ್ಲಿ ಮಸ್ಕಟ್‍ನಲ್ಲಿ ಮಾಡಿಕೊಂಡಿದ್ದ, ಶಾಂತಿಯುತ ಉದ್ದೇಶಗಳಿಗಾಗಿ ಬಾಹ್ಯಾಕಾಶ ಬಳಸಿಕೊಳ್ಳುವ ಉದ್ದೇಶದ ಒಡಂಬಡಿಕೆಯನ್ನು ಕುರಿತು ಚರ್ಚಿಸಿ, ಅನುಮೋದನೆ ನೀಡಲಾಯಿತು. ಭಾರತದ ಪರವಾಗಿ `ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ’ (ಇಸ್ರೊ) ಮತ್ತು ಓಮಾನ್‍ನ ಪರವಾಗಿ ಆ ದೇಶದ ಸಾರಿಗೆ ಮತ್ತು ಸಂಪರ್ಕ ಸಚಿವಾಲಯಗಳು ಈ ಒಡಂಬಡಿಕೆಗೆ ಅಂಕಿತ ಹಾಕಿವೆ.

 

ವಿವರಗಳು;

 

* ಈ ಒಡಂಬಡಿಕೆಯು ಬಾಹ್ಯಾಕಾಶ ವಿಜ್ಞಾನ, ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನ ಮತ್ತು ಭೂಮಿಯ ದೂರಸಂವೇದಿ ಸೇರಿದಂತೆ ಇನ್ನಿತರ ಅನ್ವಯಿಕ ಅಂಶಗಳು, ಉಪಗ್ರಹ ಆಧರಿತ ದಿಕ್ಸೂಚಿ ಮಾರ್ಗದರ್ಶನ, ಅಂತರಿಕ್ಷ ವಿಜ್ಞಾನ ಮತ್ತು ಸಂಶೋಧನೆ, ಶೋಧನೌಕೆಗಳು ಮತ್ತು ಬಾಹ್ಯಾಕಾಶ ವ್ಯವಸ್ಥೆಗಳ ಬಳಕೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನದ ಅನ್ವಯಿಕತೆ ಮುಂತಾದ ಕ್ಷೇತ್ರಗಳಲ್ಲಿ ಸಹಕಾರವನ್ನು ಸಾಧ್ಯವಾಗಿಸಲಿದೆ.

 

* ಈ ಒಡಂಬಡಿಕೆಯ ಅನ್ವಯ ಜಂಟಿ ಕಾರ್ಯ ಸಮಿತಿಯನ್ನು ರಚಿಸಲಾಗುವುದು. ಇದರಲ್ಲಿ ಭಾರತದ ಬಾಹ್ಯಾಕಾಶ ಇಲಾಖೆ/ಇಸ್ರೊದ ಸದಸ್ಯರು ಮತ್ತು ಓಮಾನ್‍ನ ಪರವಾಗಿ ಆ ದೇಶದ ಸಾರಿಗೆ ಮತ್ತು ಸಂಪರ್ಕ ಸಚಿವಾಲಯದ ಸದಸ್ಯರು ಇರಲಿದ್ದಾರೆ. ಒಡಂಬಡಿಕೆಯನ್ನು ಅನುಷ್ಠಾನಗೊಳಿಸುವ ಬಗೆ ಮತ್ತು ಈ ಸಮಿತಿಯು ಕಾಲಮಿತಿಯನ್ನು ನಿರ್ಧರಿಸಲಿದೆ.

 

* ಈ ಒಡಂಬಡಿಕೆಯು ಭೂಮಿಯ ದೂರಸಂವೇದಿ ವ್ಯವಸ್ಥೆ, ಉಪಗ್ರಹ ಆಧರಿತ ದಿಕ್ಸೂಚಿ ಮಾರ್ಗದರ್ಶನ ಮತ್ತು ಬಾಹ್ಯಾಕಾಶ ಕುರಿತು ಹೊಸಹೊಸ ಸಂಶೋಧನೆಗಳನ್ನು ಕೈಗೆತ್ತಿಕೊಳ್ಳಲು ಮತ್ತು ಅನ್ವಯಿಕತೆಯ ಸಾಧ್ಯತೆಗಳನ್ನು ಪರಿಶೋಧಿಸಲು ಉತ್ತೇಜನ ನೀಡಲಿದೆ. 

 

ಅನುಷ್ಠಾನದ ವಿಧಾನ ಮತ್ತು ಗುರಿಗಳು:

 

* ಈ ಒಡಂಬಡಿಕೆಯ ಅನ್ವಯ ಎರಡೂ ದೇಶಗಳ ಸದಸ್ಯರು/ಪ್ರತಿನಿಧಿಗಳು ಇರುವಂತಹ ಜಂಟಿ ಕಾರ್ಯ ಸಮಿತಿಯು ಅಸ್ತಿತ್ವಕ್ಕೆ ಬರಲಿದ್ದು, ಕಾಲಮಿತಿಯೂ ಸೇರಿದಂತೆ ಈ ಒಡಂಬಡಿಕೆಯಲ್ಲಿನ ಇತರ ಅಂಶಗಳನ್ನು ಹೇಗೆ ಅನುಷ್ಠಾನಕ್ಕೆ ತರಬಹುದೆನ್ನುವುದನ್ನು ಇದು ತೀರ್ಮಾನಿಸಲಿದೆ.

 

ಪ್ರಯೋಜನಗಳು:

 

* ಮನುಕುಲದ ಉಪಯೋಗಕ್ಕಾಗಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಹೇಗೆ ಅಳವಡಿಸಿಕೊಳ್ಳಬಹುದೆನ್ನುವ ಕುರಿತು ಎರಡೂ ದೇಶಗಳು ಜತೆಯಾಗಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಈ ಒಡಂಬಡಿಕೆ ದಾರಿ ಮಾಡಿಕೊಡಲಿದೆ. ಇದರಿಂದಾಗಿ ದೇಶದ ಎಲ್ಲ ವರ್ಗಗಳ ಮತ್ತು ಪ್ರದೇಶಗಳ ಜನರಿಗೆ ಲಾಭವಾಗಲಿದೆ.

ಪರಿಣಾಮಗಳು:

 

* ಓಮಾನ್ ಜತೆಗಿನ ಸಹಕಾರದಿಂದಾಗಿ, ಮನುಕುಲದ ಒಳಿತಿಗಾಗಿ ಜಂಟಿಯಾಗಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಉಪಯೋಗಿಸಿಕೊಳ್ಳಬಹುದಾದಂತಹ ಚಟುವಟಿಕೆಗಳನ್ನು ವ್ಯಾಪಕವಾಗಿ ಕೈಗೆತ್ತಿಕೊಳ್ಳಲು ಇದರಿಂದ ಸಾಧ್ಯವಾಗಲಿದೆ.

 

ಹಿನ್ನೆಲೆ:

* ಓಮಾನ್ ದೇಶವು `ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ'(ಇಸ್ರೊ)ಯ ಸಹಕಾರದೊಂದಿಗೆ ತನ್ನ ಬಾಹ್ಯಾಕಾಶ ಯೋಜನೆಯನ್ನು ಅಭಿವೃದ್ಧಿಪಡಿಸಲು ಆಸಕ್ತಿಪಡಿಸಿದೆ. ಇದರ ಅಂಗವಾಗಿ ಓಮಾನ್‍ನ ಸಂಪರ್ಕ ಇಲಾಖೆಯ ನಾಲ್ವರು ಸದಸ್ಯರ ನಿಯೋಗವು 2011ರ ಮಾರ್ಚ್ ತಿಂಗಳಲ್ಲಿ ಇಸ್ರೊಗೆ ಭೇಟಿ ನೀಡಿತ್ತಲ್ಲದೆ, ಈ ಸಂಬಂಧವಾಗಿ ಇಸ್ರೊದ ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ ನಡೆಸಿತ್ತು. ಜೊತೆಗೆ, ಈ ನಿಯೋಗವು ಇಸ್ರೊದ ತಾಂತ್ರಿಕ ಸೌಲಭ್ಯಗಳ ಕಚೇರಿಗೂ ಭೇಟಿ ನೀಡಿತ್ತು. ನಂತರ ಓಮಾನ್‍ನ ಆಡಳಿತವು ಬಾಹ್ಯಾಕಾಶ ತಂತ್ರಜ್ಞಾನ ಸೌಲಭ್ಯ ಕ್ಷೇತ್ರದಲ್ಲಿ ಇಸ್ರೊದೊಂದಿಗೆ ಸಹಕಾರವನ್ನು ಹೊಂದುವ ಆಸಕ್ತಿಯನ್ನು ಭಾರತದಲ್ಲಿನ ತನ್ನ ರಾಯಭಾರಿಗೆ 2016ರ ಮೇ ತಿಂಗಳಲ್ಲಿ ವ್ಯಕ್ತಪಡಿಸಿತ್ತು.

 

* ಇದಕ್ಕೆ ಪೂರಕವಾಗಿ, ಶಾಂತಿಯುತ ಉದ್ದೇಶಗಳಿಗಾಗಿ ಬಾಹ್ಯಾಕಾಶದ ಬಳಕೆ ಮಾಡಿಕೊಳ್ಳಲು ಒಂದು ಒಡಂಬಡಿಕೆ ಮಾಡಿಕೊಳ್ಳಲು ಭಾರತ ಮತ್ತು ಓಮಾನ್ ಎರಡೂ ಒಪ್ಪಿಕೊಂಡವು. ಈ ಒಡಂಬಡಿಕೆಗೆ ಅಂಕಿತ ಹಾಕುವ ಸಮಯದಲ್ಲಿ ಭಾರತ ಸರಕಾರವನ್ನು `ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ’ (ಇಸ್ರೊ) ಮತ್ತು ಓಮಾನ್ ಸರಕಾರವನ್ನು ಅಲ್ಲಿನ ಸಾರಿಗೆ ಹಾಗೂ ಸಂಪರ್ಕ ಸಚಿವಾಲಯಗಳು ಪ್ರತಿನಿಧಿಸಿದ್ದವು. ಈ ಒಪ್ಪಂದಕ್ಕೆ ಎರಡೂ ದೇಶಗಳು 2018ರ ಫೆ.11ರಂದು ಮಸ್ಕಟ್‍ನಲ್ಲಿ ಅಂಕಿತ ಹಾಕಿವೆ.

 

 …………………………………