Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ-ಚೀನಾ ಅನೌಪಚಾರಿಕ ಶೃಂಗಸಭೆ


ಭಾರತದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಮತ್ತು ಚೀನಾ ಗಣರಾಜ್ಯದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ 2018ರ ಏಪ್ರಿಲ್ 27 ಮತ್ತು 28ರಂದು ವುಹಾನ್ ನಲ್ಲಿ ಮೊದಲ ಅನೌಪಚಾರಿಕ ಶೃಂಗಸಭೆ ನಡೆಸಿದರು. ಅವರು ದ್ವಿಪಕ್ಷೀಯ ವಿಷಯಗಳಲ್ಲದೆ, ಜಾಗತಿಕ ಪ್ರಾಮುಖ್ಯತೆಯ ಹಲವು ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಪ್ರಸಕ್ತ ಹಾಗೂ ಭವಿಷ್ಯದ ಅಂತಾರಾಷ್ಟ್ರೀಯ ಸ್ಥಿತಿಗತಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಭಿವೃದ್ಧಿಯ ಆದ್ಯತೆಗಳು ಮತ್ತು ಮುನ್ನೋಟಗಳ ಬಗ್ಗೆ ಪರಸ್ಪರ ಸಮಾಲೋಚಿಸಿದರು.

ಕಾರ್ಯತಂತ್ರ ಮತ್ತು ನಿರ್ಣಾಯಕ ಸ್ವಾಯತ್ತತೆ ಮೂಲಕ ಭಾರತ ಮತ್ತು ಚೀನಾ ಏಕಕಾಲದಲ್ಲಿ ದೊಡ್ಡ ಆರ್ಥಿಕ ಮತ್ತು ಪ್ರಮುಖಶಕ್ತಿಯಾಗಿ ಹೊರಹೊಮ್ಮುತ್ತಿವೆ ಎಂದು ನಂಬಲಾಗಿದ್ದು, ಅವುಗಳ ಪರಿಣಾಮ ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಉಂಟಾಗಲಿದೆ. ಪ್ರಸಕ್ತ ಜಾಗತಿಕ ಅನಿಶ್ಚಿತತೆಗಳ ನಡುವೆಯೂ ಭಾರತ ಮತ್ತು ಚೀನಾ ಶಾಂತಿಯ ಜತೆಗೆ ಸ್ಥಿರತೆ ಕಾಯ್ದುಕೊಂಡು ಸಮತೋಲಿತ ಸಂಬಂಧಗಳನ್ನು ಹೊಂದುವ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲಾಯಿತು. 21ನೇ ಶತಮಾನ ಏಷ್ಯಾದ ಶತಮಾನ ಆಗಿರುವ ಹಿನ್ನೆಲೆಯಲ್ಲಿ ಅದಕ್ಕೆ ಪೂರಕ ವಾತಾವರಣ ನಿರ್ಮಿಸಲು ಮತ್ತು ಏಷ್ಯಾ ಖಂಡದ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ದ್ವಿಪಕ್ಷೀಯ ಸಂಬಂಧಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಉಭಯ ನಾಯಕರು ಒಪ್ಪಿದರು. ಕೊನೆಯಲ್ಲಿ ಇಬ್ಬರೂ ಸಹ ರಾಷ್ಟ್ರೀಯ ಆಧುನೀಕರಣ ಮತ್ತು ತಮ್ಮ ತಮ್ಮ ಜನರ ಶ್ರೇಯೋಭಿವೃದ್ಧಿಗಾಗಿ ಸುಸ್ಥಿರ ರೀತಿಯಲ್ಲಿ ಪರಸ್ಪರ ಅನುಕೂಲವಾಗುವಂತಹ ನಿಕಟ ಅಭಿವೃದ್ಧಿ ಸಹಭಾಗಿತ್ವ ಬಲವರ್ಧನೆಗೆ ನಿರ್ಧರಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಕಾರ್ಯತಂತ್ರ ಮತ್ತು ದೀರ್ಘಕಾಲೀನ ಮುನ್ನೋಟದ ಭಾಗವಾಗಿ ಭಾರತ ಮತ್ತು ಚೀನಾ ಸಂಬಂಧಗಳ ಅಭವೃದ್ಧಿ ಬಗ್ಗೆ ಪರಾಮರ್ಶಿಸಿದರು. ಭವಿಷ್ಯದ ಸಂಬಂಧಗಳನ್ನು ಗಟ್ಟಿಗೊಳಿಸಲು ವಿಸ್ತಾರವಾದ ವೇದಿಕೆ ಹಾಗೂ ಕಾರ್ಯತಂತ್ರವನ್ನು ಸಿದ್ಧಪಡಿಸಲು ಸಮಾಲೋಚನೆಗಳು ಹಾಗೂ ಗಂಭೀರ ಪ್ರಯತ್ನಗಳನ್ನು ನಡೆಸಲು ನಾಯಕರು ಒಪ್ಪಿದರು. ಉಭಯ ದೇಶಗಳು ಪರಸ್ಪರ ಸೂಕ್ಷ್ಮತೆಗಳನ್ನು, ಆತಂಕಗಳನ್ನು ಮತ್ತು ಆಶೋತ್ತರಗಳನ್ನು ಗಮನದಲ್ಲಿರಿಸಿಕೊಂಡು ಒಟ್ಟಾರೆ ಸಂಬಂಧದ ದೃಷ್ಟಿಯಿಂದ ಪ್ರಬುದ್ಧತೆ ಮತ್ತು ವಿವೇಕದಿಂದ ಶಾಂತಿಯುತ ರೀತಿಯಲ್ಲಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಸಮ್ಮತಿ ಸೂಚಿಸದವು.

ಉಭಯ ನಾಯಕರು ಭಾರತ ಮತ್ತು ಚೀನಾ ಗಡಿ ಪ್ರಶ್ನೆಯ ಬಗ್ಗೆ ವಿಶೇಷ ಪ್ರತಿನಿಧಿಗಳ ಕಾರ್ಯವನ್ನು ಬೆಂಬಲಿಸಿದರು ಮತ್ತು ಪರಸ್ಪರ ನ್ಯಾಯಯುತ, ಸರ್ವಸಮ್ಮತ ಮತ್ತು ಪರಸ್ಪರ ಒಪ್ಪಬಹುದಾದ ಇತ್ಯರ್ಥವನ್ನು ಮಾಡಿಕೊಳ್ಳುವ ಪ್ರಯತ್ನಗಳನ್ನು ಚುರುಕುಗೊಳಿಸಲು ಆಗ್ರಹಿಸಿದರು. ಒಟ್ಟಾರೆ ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆಯ ದೃಷ್ಟಿಯಿಂದ ಭಾರತ ಮತ್ತು ಚೀನಾ ಗಡಿ ಭಾಗದಲ್ಲಿ ಎಲ್ಲ ರೀತಿಯಲ್ಲೂ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಪ್ರಾಮುಖ್ಯತೆ ನೀಡಬೇಕು ಎಂದು ಉಭಯ ನಾಯಕರು ಬಲವಾಗಿ ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ ಗಡಿ ವ್ಯವಹಾರಗಳ ನಿರ್ವಹಣೆಗೆ ಪರಿಣಾಮಕಾರಿ ಮತ್ತು ಪರಸ್ಪರ ಅರ್ಥಮಾಡಿಕೊಂಡು ವಿಶ್ವಾಸ ವೃದ್ಧಿಸಲು ಮಿಲಿಟರಿಗಳ ನಡುವೆ ಕಾರ್ಯತಂತ್ರ ಸಂವಹನ ಕಾಯ್ದುಕೊಳ್ಳುವ ವಿಷಯಗಳಿಗೆ ಪರಸ್ಪರ ಸಹಮತ ಸೂಚಿಸಿದವು. ಈಗಾಗಲೇ ಉಭಯ ದೇಶಗಳು ಒಪ್ಪಿರುವಂತೆ ಪರಸ್ಪರ ಮತ್ತು ಸಮಾನ ಭದ್ರತೆ ತತ್ವ ಸೇರಿದಂತೆ ಹಲವು ವಿಶ್ವಾಸ ವೃದ್ಧಿ ಕ್ರಮಗಳನ್ನು ಜಾರಿಗೊಳಿಸಲು ಉಭಯ ನಾಯಕರು ತಮ್ಮ ಮಿಲಿಟರಿ ಪಡೆಗಳಿಗೆ ಸೂಚಿಸಿದರು ಮತ್ತು ಗಡಿ ಭಾಗದಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ಕಾರ್ಯತಂತ್ರ ಪಾಲಿಸಲು ಮಾಹಿತಿ ವಿನಿಮಯ ಹಾಗೂ ಹಾಲಿ ಇರುವ ಸಾಂಸ್ಥಿಕ ವ್ಯವಸ್ಥೆಗಳ ಬಲವರ್ಧನೆಗೆ ಒಪ್ಪಿಗೆ ನೀಡಲಾಯಿತು.

ಎರಡೂ ದೇಶಗಳ ಆರ್ಥಿಕತೆಗಳು ಅನುಕೂಲತೆಗಳನ್ನು ಹೊಂದಿರುವುದನ್ನು ಬಳಸಿಕೊಂಡು ಸಮತೋಲಿತ ಮತ್ತು ಸುಸ್ಥಿರ ರೀತಿಯಲ್ಲಿ ದ್ವಿಪಕ್ಷೀಯ ವ್ಯಾಪಾರ ಮತ್ತು ಬಂಡವಾಳ ಹೂಡಿಕೆಯನ್ನು ಇನ್ನಷ್ಟು ಮುಂದೆ ಕೊಂಡೊಯ್ಯಲು ಉಭಯ ನಾಯಕರು ಒಪ್ಪಿಗೆ ಸೂಚಿಸಿದರು. ಜನರ ನಡುವೆ ಹೆಚ್ಚಿನ ಸಾಂಸ್ಕೃತಿಕ ವಿನಿಮಯ ಉತ್ತೇಜಿಸುವ ಮಾರ್ಗೋಪಾಯಗಳ ಬಗ್ಗೆ ನಾಯಕರು ಚರ್ಚಿಸಿದರು ಮತ್ತು ಆ ನಿಟ್ಟಿನಲ್ಲಿ ಹೊಸ ಕಾರ್ಯತಂತ್ರಗಳನ್ನು ಹುಡುಕಲು ಸಮ್ಮತಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಭಾರತ ಮತ್ತು ಚೀನಾ ಎರಡು ಪ್ರಮುಖ ಆರ್ಥಿಕ ರಾಷ್ಟ್ರಗಳಾಗಿದ್ದು, ಅವುಗಳ ಪ್ರಾದೇಶಿಕ ಮತ್ತು ಜಾಗತಿಕ ಹಿತಾಸಕ್ತಿಗಳು ಒಂದರ ಮೇಲೊಂದು ಓವರ್ ಲ್ಯಾಪ್ ಆಗುತ್ತಿವೆ ಎಂದು ಪ್ರತಿಪಾದಿಸಿದರು. ಸಮಾನ ಹಿತಾಸಕ್ತಿಯ ಎಲ್ಲ ವಿಷಯಗಳ ಬಗ್ಗೆ ಸಂವಹನ ಕಾರ್ಯತಂತ್ರ ಬಲವರ್ಧನೆಗೆ ಹೆಚ್ಚಿನ ಸಮಾಲೋಚನೆಗಳ ಅಗತ್ಯವಿದೆ ಎಂದು ಉಭಯ ನಾಯಕರು ಒಪ್ಪಿದರು. ಕಾರ್ಯತಂತ್ರ ಸಂವಹನದ ಮೂಲಕ ಸಕಾರಾತ್ಮಕ ಪ್ರಭಾವ ಉಂಟಾಗುವುದಲ್ಲದೆ, ಅದು ಪರಸ್ಪರ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಅದು ಪ್ರಾದೇಶಿಕ ಮತ್ತು ಜಾಗತಿಕ ಸ್ಥಿರತೆಗೂ ನೆರವಾಗುತ್ತದೆ ಎಂದು ಉಭಯ ನಾಯಕರು ವಿಶ್ವಾಸ ವ್ಯಕ್ತಪಡಿಸಿದರು.

ಉಭಯ ನಾಯಕರು ಭಾರತ ಮತ್ತು ಚೀನಾ ಪ್ರತ್ಯೇಕವಾಗಿ ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ತಮ್ಮದೇ ಆದ ಆರ್ಥಿಕ ಪ್ರಗತಿ ಮತ್ತು ಬೆಳವಣಿಗೆಗಳ ಮೂಲಕ ಮಹತ್ವದ ಕೊಡುಗೆ ನೀಡಿರುವುದನ್ನು ಒಪ್ಪಿ ಭವಿಷ್ಯದಲ್ಲೂ ಸಹ ಜಾಗತಿಕ ಅಭಿವೃದ್ಧಿಗೆ ಇಂಜಿನ್ ಆಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲು ಸಮ್ಮತಿಸಿದರು. ಜಗತ್ತಿನ ಎಲ್ಲ ಪ್ರದೇಶಗಳಲ್ಲೂ ಬಡತನ ಮತ್ತು ಅಸಮಾನತೆಯನ್ನು ನಿವಾರಿಸಲು ಮತ್ತು ಎಲ್ಲ ರಾಷ್ಟ್ರಗಳ ಅಭಿವೃದ್ಧಿಗೆ ಜಾಗತಿಕ ಆರ್ಥಿಕ ಭಾಗಿ ವ್ಯವಸ್ಥೆ ಬಹು ಹಂತದ ಮುಕ್ತ ವ್ಯವಸ್ಥೆಗಳನ್ನು ಹೊಂದಲು ಜಂಟಿಯಾಗಿ ನೆರವಾಗಲು ಇಬ್ಬರೂ ನಾಯಕರು ಒಪ್ಪಿಗೆ ನೀಡಿದರು.

ಉಭಯ ನಾಯಕರು ಪರಸ್ಪರ ತಮ್ಮ ತಮ್ಮ ವಿದೇಶಾಂಗ ನೀತಿಗಳ ಮೂಲಕ ಜಾಗತಿಕ ಅಭಿವೃದ್ಧಿ ಮತ್ತು ಗುರಿ ಸಾಧನೆಗೆ ಶ್ರಮಿಸುವ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಅಲ್ಲದೆ ಆಹಾರ ಭದ್ರತೆ, ಸುಸ್ಥಿರ ಅಭಿವೃದ್ಧಿ, ಹವಾಮಾನ ವೈಪರೀತ್ಯ ಸೇರಿದಂತೆ ಜಾಗತಿಕ ಸವಾಲುಗಳಿಗೆ ಸುಸ್ಥಿರ ಪರಿಹಾರಗಳನ್ನು ಕಂಡುಕೊಳ್ಳಲು ಸಕಾರಾತ್ಮಕ ಮತ್ತು ಪೂರಕವಾಗಿ, ಜಂಟಿಯಾಗಿ ನೆರವು ನೀಡಲು ಪರಸ್ಪರ ಉಭಯ ದೇಶಗಳು ಒಪ್ಪಿದವು. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಅಗತ್ಯತೆಗಳನ್ನು ಪೂರೈಸಲು ಹಾಗೂ ಅವುಗಳನ್ನು ಪ್ರತಿನಿಧಿಸುವಂತೆ ಮಾಡಲು ಹಣಕಾಸು ಮತ್ತು ರಾಜಕೀಯ ಸಂಸ್ಥೆಗಳಲ್ಲಿ ಸುಧಾರಣೆಗಳನ್ನು ತರುವ ಪ್ರಾಮುಖ್ಯತೆಯನ್ನು ಉಭಯ ನಾಯಕರು ಬಲವಾಗಿ ಪ್ರತಿಪಾದಿಸಿದರು.

ಭಾರತ ಮತ್ತು ಚೀನಾ ಎರಡು ಪ್ರಮುಖ ರಾಷ್ಟ್ರಗಳಾಗಿವೆ ಮತ್ತು ಆರ್ಥಿಕತೆಗಳು ಬೆಳೆಯುತ್ತಿವೆ. ಆ ಮೂಲಕ ತಮ್ಮ ವಿಸ್ತಾರವಾದ ಅಭಿವೃದ್ಧಿ ಅನುಭವಗಳನ್ನು ಹಾಗೂ ರಾಷ್ಟ್ರೀಯ ಸಾಮರ್ಥ್ಯಗಳನ್ನು ವಿಸ್ತರಿಸುತ್ತಿದ್ದು, 21ನೇ ಶತಮಾನದಲ್ಲಿ ಮನುಕುಲ ಎದುರಿಸುತ್ತಿರುವ ಸವಾಲುಗಳಿಗೆ ಸುಸ್ಥಿರ ಹಾಗೂ ಆವಿಷ್ಕಾರಿ ಪರಿಹಾರಗಳನ್ನು ಕಂಡುಕೊಳ್ಳಲು ಜಂಟಿಯಾಗಿ ಕೈಜೋಡಿಸಲು ಉಭಯ ದೇಶಗಳು ಒಪ್ಪಿದವು. ರೋಗಗಳ ನಿಯಂತ್ರಣ, ನೈಸರ್ಗಿಕ ಪ್ರಕೋಪಗಳ ತಡೆಗೆ ಸಮನ್ವಯದ ಕಾರ್ಯತಂತ್ರ, ಹವಾಮಾನ ವೈಪರೀತ್ಯ ಸಮಸ್ಯೆ ಮತ್ತು ಡಿಜಿಟಲೀಕರಣ ಉತ್ತೇಜನ ಮತ್ತಿತರ ಅಂಶಗಳು ಸೇರಿವೆ. ಈ ವಿಷಯಗಳಲ್ಲಿ ತಮ್ಮೆಲ್ಲ ಸಂಪನ್ಮೂಲ ಮತ್ತು ಪರಿಣಿತಿಯನ್ನು ಒಗ್ಗೂಡಿಸಿ, ಮನುಕುಲದ ಒಳಿತಿಗಾಗಿ ಸವಾಲುಗಳನ್ನು ಎದುರಿಸಲು ನಿಗದಿತ ಜಾಗತಿಕ ಕಾರ್ಯಜಾಲ ಅಭಿವೃದ್ಧಿಗೆ ಎರಡೂ ದೇಶಗಳು ಸಹಮತ ಸೂಚಿಸಿದವು.

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಭಯೋತ್ಪಾದನೆಯ ಅಪಾಯಗಳನ್ನು ಗುರುತಿಸಿದ್ದು, ಅಂತಹ ಕೃತ್ಯಗಳನ್ನು ಬಲವಾಗಿ ಖಂಡಿಸುವುದಾಗಿ ಪುನರುಚ್ಚರಿಸಿದರು ಮತ್ತು ಎಲ್ಲ ಬಗೆಯ ಭಯೋತ್ಪಾದನೆಗಳಿಗೆ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದರು. ಭಯೋತ್ಫಾದನೆ ನಿಗ್ರಹಕ್ಕೆ ಪರಸ್ಪರ ಸಹಕರಿಸುವ ಬದ್ಧತೆಯನ್ನು ಉಭಯ ನಾಯಕರು ವ್ಯಕ್ತಪಡಿಸಿದರು.

ಅನೌಪಚಾರಿಕ ಶೃಂಗಸಭೆಯಿಂದಾಗಿ ಉಭಯ ನಾಯಕರಿಗೆ ನೇರ, ಮುಕ್ತ ಹಾಗೂ ಸೌಹಾರ್ದ ವಾತಾವರಣದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಸಾಧ್ಯವಾಯಿತು. ಭವಿಷ್ಯದಲ್ಲೂ ಸಹ ಇಂತಹ ಮಾತುಕತೆಗಳನ್ನು ನಡೆಸುವ ಅಗತ್ಯವಿದೆ ಎಂದು ಎರಡೂ ದೇಶಗಳು ಹೇಳಿದವು. ಎರಡೂ ದೇಶಗಳು ದೇಶೀಯವಾಗಿ, ಪ್ರಾದೇಶಿಕವಾಗಿ ಮತ್ತು ಜಾಗತಿಕವಾಗಿ ತಮ್ಮ ನೀತಿಗಳಿಗೆ ಅನುಗುಣವಾಗಿ ಆದ್ಯತೆಗಳು ಮತ್ತು ಮುನ್ನೋಟಗಳನ್ನು ಒಳಗೊಂಡಂತೆ ಕಾರ್ಯತಂತ್ರ ಸಂವಹನ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಮುಂದಿನ ದಿನಗಳಲ್ಲಿ ಮಾತುಕತೆಗಳನ್ನು ನಡೆಸಲು ತೀರ್ಮಾನಿಸಿದವು. ಇದು ಉಭಯ ದೇಶಗಳ ಅಭಿವೃದ್ಧಿ ಆಶೋತ್ತರಗಳು ಮತ್ತು ಪರಸ್ಪರ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ವಿಶ್ವಾಸದಿಂದ ಭವಿಷ್ಯದಲ್ಲಿ ಸಂಬಂಧಗಳನ್ನು ಅರ್ಥೈಸಿಕೊಳ್ಳಲು ನೆರವಾಗುತ್ತದೆ.