ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟದ ಸಭೆಯಲ್ಲಿ ಭಾರತ ಸಂವಿಧಾನದ ಐದನೇ ಪರಿಶ್ಛೇದದಡಿ ರಾಜಸ್ಥಾನದಲ್ಲಿ ಪರಿಶಿಷ್ಟ ಪ್ರದೇಶಗಳ ವಿಸ್ತರಣೆಗೆ ಸಂಪುಟ ಸಮ್ಮತಿ ನೀಡಿತು. 12ನೇ ಫೆಬ್ರವರಿ 1981ರಲ್ಲಿ ಹೊರಡಿಸಿದ ಸಂವಿಧಾನ ಆದೇಶ (ಸಿಒ) 114ನ್ನು ಈ ಮೂಲಕ ರದ್ದುಗೊಳಿಸಿ, ಹೊಸ ಸಂವಿಧಾನ ಆದೇಶವನ್ನು ಹೊರಡಿಸಲಾಯಿತು.
ಹೊಸ ಸಿಒ ಘೋಷಣೆಯಿಂದ ರಾಜಸ್ಥಾನದ ಪರಿಶಿಷ್ಟ ವರ್ಗಗಳು ಸಂವಿಧಾನದ ಐದನೇ ಪರಿಶ್ಛೇದದಡಿ ಲಭ್ಯವಿರುವ ರಕ್ಷಣಾತ್ಮಕ ಕ್ರಮಗಳ ಪ್ರಯೋಜನವನ್ನು ಪಡೆದುಕೊಳ್ಳಲಿವೆ.
ಸಂವಿಧಾನದ ಐದನೇ ಪರಿಶ್ಛೇದದಡಿ ರಾಜ್ಯದಲ್ಲಿ ಪರಿಶಿಷ್ಟ ಪ್ರದೇಶಗಳ ವಿಸ್ತರಣೆಗೆ ಅವಕಾಶ ಮಾಡಿಕೊಡಬೇಕೆಂದು ರಾಜಸ್ಥಾನ ಸರ್ಕಾರವು ಮನವಿ ಸಲ್ಲಿಸಿತ್ತು.
ಫಲಾನುಭವಿಗಳು:
ರಾಜಸ್ಥಾನದ ಬನಸ್ವಾರಾ, ದುಂಗರ್ಪುರ್, ಪ್ರತಾಪ್ಗಢ ಜಿಲ್ಲೆಗಳು, ಉದಯಪುರ, ರಾಜಸಮಂಡ್, ಚಿತ್ತೋಗಢ, ಪಾಲಿ ಮತ್ತು ಶಿರೋಲಿ ಜಿಲ್ಲೆಯ ಭಾಗಶಃ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಪರಿಶಿಷ್ಟ ವರ್ಗಗಳವರು ಸಂವಿಧಾನದ ಐದನೇ ಪರಿಶ್ಛೇದದಡಿ ಲಭ್ಯವಿರುವ ರಕ್ಷಣಾತ್ಮಕ ಕ್ರಮಗಳ ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ.
ಬನಸ್ವಾರಾ, ದುಂಗರ್ಪುರ್, ಪ್ರತಾಪ್ಗಢ ಸಂಪೂರ್ಣ ಜಿಲ್ಲೆಗಳು; ಉದಯಪುರ, ರಾಜಸಮಂಡ್, ಚಿತ್ತೋಗಢ, ಪಾಲಿ ಮತ್ತು ಶಿರೋಲಿ ಜಿಲ್ಲೆಯ ಒಂಬತ್ತು ತೆಹಸಿಲ್ಗಳು, ಒಂದು ಸಂಪೂರ್ಣ ವಿಭಾಗ ಮತ್ತು 46 ಗ್ರಾಮಪಂಚಾಯಿತಿಗಳ 227 ಹಳ್ಳಿಗಳನ್ನು ಪರಿಶಿಷ್ಟ ಪ್ರದೇಶಗಳ ವ್ಯಾಪ್ತಿಗೆ ಸೇರಿಸಲಾಗಿದೆ.
ಪರಿಶಿಷ್ಟ ಪ್ರದೇಶಗಳ ಘೋಷಣೆಯಿಂದ, ವೆಚ್ಚಕ್ಕೆ ಹೆಚ್ಚುವರಿ ಅನುದಾನದ ಬಿಡುಗಡೆ ಅಗತ್ಯ ಇರುವುದಿಲ್ಲ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದಿವಾಸಿ ಉಪಯೋಜನೆ(ಈಗ ಆದಿವಾಸಿ ಉಪಯೋಜನೆ ಎಂದು ಮರುನಾಮಕರಣಗೊಂಡಿದೆ)ಯ ಭಾಗವಾಗಿರಲಿದ್ದು, ಪರಿಶಿಷ್ಟ ಪ್ರದೇಶಗಳಲ್ಲಿ ಶೀಘ್ರ ಅಭಿವೃದ್ಧಿಗೆ ವಿಶೇಷ ಗಮನ ಕೊಡಲು ಈ ಯೋಜನೆಯನ್ನು ರೂಪಿಸಲಾಗಿದೆ.
ಹಿನ್ನೆಲೆ:
ಸಂವಿಧಾನದ ಐದನೇ ಪರಿಶ್ಛೇದದ ಕಂಡಿಕೆ 6(1), (ವಿಧಿ 244/1)ರ ಪ್ರಕಾರ, “ಪರಿಶಿಷ್ಟ ಪ್ರದೇಶಗಳು’ ಎಂದರೆ, “ರಾಷ್ಟ್ರಪತಿಯವರು ಆದೇಶದ ಮೂಲಕ ಪರಿಶಿಷ್ಟ ಪ್ರದೇಶ ಎಂದು ಘೋಷಿಸಬಹುದಾದ ಪ್ರದೇಶಗಳು’. ಐದನೇ ಪರಿಶ್ಛೇದದ ಕಂಡಿಕೆ 6(2)ರ ಪ್ರಸ್ತಾವಗಳ ಅನ್ವಯ, ರಾಷ್ಟ್ರಪತಿಯವರು ರಾಜ್ಯವೊಂದರ ರಾಜ್ಯಪಾಲರ ಜೊತೆಗೆ ಚರ್ಚಿಸಿದ ಬಳಿಕ ಯಾವುದೇ ಸಮಯದಲ್ಲಿ ರಾಜ್ಯದಲ್ಲಿನ ಪರಿಶಿಷ್ಟ ಪ್ರದೇಶದ ವ್ಯಾಪ್ತಿಯನ್ನು ಹೆಚ್ಚಿಸಬಹುದು; ಯಾವುದೇ ರಾಜ್ಯ ಅಥವಾ ರಾಜ್ಯಗಳ ರಾಜ್ಯಪಾಲರ ಜೊತೆಗೆ ಚರ್ಚಿಸಿ, ಪರಿಶಿಷ್ಟ ಪ್ರದೇಶಗಳನ್ನು ರದ್ದುಗೊಳಿಸಬಹುದು, ಹೊಸ ಪರಿಶಿಷ್ಟ ಪ್ರದೇಶ ಯಾವುದು ಎಂದು ನೂತನ ಆದೇಶ ಹೊರಡಿಸಬಹುದು.
1950ರಲ್ಲಿ ಮೊದಲ ಬಾರಿಗೆ ಪರಿಶಿಷ್ಟ ಪ್ರದೇಶಗಳ ಅಧಿಸೂಚನೆಯನ್ನು ಹೊರಡಿಸಲಾಯಿತು. ರಾಜಸ್ಥಾನದಲ್ಲಿ ಪರಿಶಿಷ್ಟ ಪ್ರದೇಶವನ್ನು ಗುರುತಿಸಿ, 1981ರಲ್ಲಿ ಆದೇಶ ಹೊರಡಿಸಲಾಯಿತು. 2011ರ ಜನಗಣತಿ ಅನ್ವಯ ಜನ ಸಂಖ್ಯೆಯಲ್ಲಿ ಬದಲಾವಣೆ ಹಾಗೂ ನೂತನ ಜಿಲ್ಲೆಗಳ ಸೃಷ್ಟಿ/ಮರುಸಂಘಟನೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪರಿಶಿಷ್ಟ ಪ್ರದೇಶಗಳನ್ನು ವಿಸ್ತರಿಸಬೇಕು ಎಂದು ರಾಜಸ್ಥಾನ ಸರ್ಕಾರ ಮನವಿ ಸಲ್ಲಿಸಿತ್ತು.