ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಶೇ.64ಕ್ಕೂ ಹೆಚ್ಚು ಕಬ್ಬಿಣಾಂಶವಿರುವ ಕಬ್ಬಿಣದ ಅದಿರು (ಹೆಂಟೆ ಮತ್ತು ಪುಡಿ) ನ್ನು ಎಂ.ಎಂ.ಟಿ.ಸಿ ಮೂಲಕ ಜಪಾನಿನ ಉಕ್ಕು ಕಾರ್ಖಾನೆಗಳು ಹಾಗೂ ದಕ್ಷಿಣ ಕೊರಿಯಾದ ಪೋಸ್ಕೋಗೆ ಐದು ವರ್ಷ ಕಾಲ (1.4.2018 ರಿಂದ 31.3.2023ರವರೆಗೆ) ಸರಬರಾಜು ಮಾಡಲು ಸಮ್ಮತಿ ನೀಡಲಾಗಿದೆ.
ವಿವರಗಳು:
1) ಪ್ರಸ್ತುತ ದೀರ್ಘಕಾಲೀನ ಒಪ್ಪಂದ(ಎಲ್ಟಿಎ)ವು 31.3.2018ರವರೆಗೆ ಚಾಲ್ತಿಯಲ್ಲಿತ್ತು. ಜಪಾನಿನ ಉಕ್ಕು ಕಾರ್ಖಾನೆಗಳು ಹಾಗೂ ದಕ್ಷಿಣ ಕೊರಿಯಾದ ಪೋಸ್ಕೋ ಜತೆ ಮಾಡಿಕೊಂಡಿರುವ ಒಪ್ಪಂದವು ಐದು ವರ್ಷ ಕಾಲ ಅಂದರೆ, 1.4.2018ರಿಂದ 31.3.2023ರವರೆಗೆ ಇರಲಿದೆ.
2) ಈ ಒಪ್ಪಂದದಡಿ ವರ್ಷವೊಂದಕ್ಕೆ ರಫ್ತು ಮಾಡಬಹುದಾದ ಅದಿರಿನ ಪ್ರಮಾಣ ಕನಿಷ್ಠ 3.8 ದಶಲಕ್ಷ ಟನ್ ಹಾಗೂ ಗರಿಷ್ಠ 5.5 ದಶಲಕ್ಷ ಟನ್. ಎನ್ಎಂಡಿಸಿ ಮೂಲದ ಹಾಗೂ ಎನ್ಎಂಡಿಸಿ ಅಲ್ಲದ ಮೂಲಗಳ ಕಬ್ಬಿಣದ ಅದಿರನ್ನು ರಫ್ತು ಮಾಡಬಹುದಾಗಿದ್ದು, ರಫ್ತಿನ ಪ್ರಮಾಣಾತ್ಮಕ ಗರಿಷ್ಠ ಮಿತಿ- ಬೈಲಾದಿಲಾ ಹೆಂಟೆ ಪ್ರಮಾಣ ವಾರ್ಷಿಕ 1.81 ದಶಲಕ್ಷ ಮೆಟ್ರಿಕ್ ಟನ್ ಮತ್ತು ಬೈಲಾದಿಲಾ ಪುಡಿ ವಾರ್ಷಿಕ 2.71 ದಶಲಕ್ಷ ಮೆಟ್ರಿಕ್ ಟನ್.
3) ಈ ದೀರ್ಘಕಾಲೀನ ಒಪ್ಪಂದದಡಿ ಜೆಎಸ್ಎಂ ಮತ್ತು ದಕ್ಷಿಣ ಕೊರಿಯಾದ ಪೋಸ್ಕೋಗೆ ಶೇ.64ಕ್ಕಿಂತ ಹೆಚ್ಚು ಕಬ್ಬಿಣಾಂಶವಿರುವ ಅದಿರನ್ನು ಪೂರೈಸಬೇಕಾಗುತ್ತದೆ. ಉದ್ಧೇಶಿತ ಪೂರೈಕೆ ವಿವರ ಹೀಗಿದೆ:
ದಕ್ಷಿಣ ಕೊರಿಯಾದ ಪೋಸ್ಕೋಗೆ |
ವಾರ್ಷಿಕ 0.8 ರಿಂದ 1.2 ದಶಲಕ್ಷ ಟನ್ ರಫ್ತು |
ಜಪಾನಿನ್ ಉಕ್ಕು ಕಾರ್ಖಾನೆಗಳಿಗೆ | ವಾರ್ಷಿಕ 3 ರಿಂದ 4.3 ದಶಲಕ್ಷ ಟನ್ ರಫ್ತು |
---|
4) ಪ್ರಸ್ತುತ ಚಾಲ್ತಿಯಲ್ಲಿರುವ ಏಕೈಕ ಏಜೆನ್ಸಿ ಎಂ.ಎಂ.ಟಿ.ಸಿ ಮೂಲಕ ಕಾರ್ಯಾಚರಣೆ ಹಾಗೂ ರಫ್ತು ಮಾಡುವಿಕೆ, ಎಫ್.ಓ.ಬಿ ದರದಲ್ಲಿ ಶೇ 2.8ರಷ್ಟು ವ್ಯಾಪಾರ ಲಾಭಾಂಶ ಕಾರ್ಯನೀತಿ ಮುಂದುವರಿಯಲಿದೆ.
ಉಪಯೋಗಗಳು:
ದೀರ್ಘಕಾಲೀನ ಒಪ್ಪಂದಗಳ ಮೂಲಕ ಕಬ್ಬಿಣದ ಅದಿರು ರಫ್ತು ಮಾಡುವ ನೀತಿಯು ದೀರ್ಘಕಾಲೀನ ಸಹವರ್ತಿ ದೇಶಗಳಾದ ಜಪಾನ್ ಮತ್ತು ದಕ್ಷಿಣ ಕೊರಿಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುತ್ತದೆ, ರಫ್ತು ಮಾರುಕಟ್ಟೆಯನ್ನು ಖಾತ್ರಿಗೊಳಿಸುವ ಮೂಲಕ ವಿದೇಶಿ ವಿನಿಮಯದ ಹರಿವಿಗೆ ನೆರವಾಗಲಿದೆ.
ಈ ಒಪ್ಪಂದದಿಂದ ದೇಶದ ಅದಿರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಲಭ್ಯವಾಗಲಿದ್ದು, ಸ್ಥಿರ ಆರ್ಥಿಕ ವ್ಯವಸ್ಥೆಯನ್ನು ಖಾತ್ರಿಗೊಳಿಸುತ್ತದೆ. ಗಣಿಗಾರಿಕೆ, ಸಾಗಣೆ ಮತ್ತು ಸಂಬಂಧಿಸಿದ ಕ್ಷೇತ್ರದಲ್ಲಿ ಪರೋಕ್ಷ- ಅಪರೋಕ್ಷ ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ.
ಹಿನ್ನೆಲೆ:
ಭಾರತವು ಜಪಾನ್ ಗೆ ಕಬ್ಬಿಣದ ಅದಿರನ್ನು ಆರು ದಶಕದಿಂದ ರಫ್ತು ಮಾಡುತ್ತಿದ್ದು, ಅದು ದ್ವಿಪಕ್ಷೀಯ ಸಂಬಂಧದ ಸ್ಥಿರ ಭಾಗವಾಗಿದೆ. ಎಂ.ಎಂ.ಟಿ.ಸಿ ಜಪಾನಿನ ಉಕ್ಕು ಕಾರ್ಖಾನೆಗಳಿಗೆ 1963ರಿಂದ ಹಾಗೂ ದಕ್ಷಿಣ ಕೊರಿಯಾಕ್ಕೆ 1973ರಿಂದ ಕಬ್ಬಿಣದ ಅದಿರು ಸರಬರಾಜು ಮಾಡುತ್ತಿದೆ. ಜೆಎಸ್ಎಂಗಳು ಮತ್ತು ದಕ್ಷಿಣ ಕೊರಿಯಾದ ಪೋಸ್ಕೋಗೆ ಅದಿರು ಪೂರೈಕೆಗೆ ಮಾಡಿಕೊಂಡಿದ್ದ ಮೂರು ವರ್ಷ ಅವಧಿಯ ಒಪ್ಪಂದವು ಮಾರ್ಚ್ 31, 2018ಕ್ಕೆ ಅಂತ್ಯಗೊಂಡಿತ್ತು. ಜೂನ್ 24, 2015ರಲ್ಲಿ ನಡೆದ ಸಂಪುಟ ಸಭೆಯಲ್ಲಿ ಮೂರು ವರ್ಷ ಅವಧಿಯ ದೀರ್ಘಕಾಲೀನ ಒಪ್ಪಂದ(2015 ರಿಂದ 2018) ಮಾಡಿಕೊಳ್ಳಲು ಎಂ.ಎಂ.ಟಿ.ಸಿ ಲಿಮಿಟೆಡ್ಗೆ ಅಧಿಕಾರ ನೀಡಲಾಗಿತ್ತು.
…………………………………..