ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ 30 ಶಾಲಾ ವಿದ್ಯಾರ್ಥಿನಿಯರು ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಭಾರತೀಯ ಸೇನೆಯು ನಿಯಮಿತವಾಗಿ ಆಯೋಜಿಸುವ ಸದ್ಭಾವನಾ ಕಾರ್ಯಾಚರಣೆಯ ಭಾಗವಾಗಿ ಈ ವಿದ್ಯಾರ್ಥಿಗಳು ಪ್ರಸ್ತುತ ದೇಶದ ನಾನಾ ಭಾಗಗಳ ಪ್ರವಾಸದಲ್ಲಿದ್ದಾರೆ.
ಪ್ರಧಾನಮಂತ್ರಿಯವರು, ಶಿಕ್ಷಣ, ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣ, ಸ್ವಚ್ಛ ಭಾರತ ಮತ್ತು ಅವರ ಕನಸುಗಳು ಮತ್ತು ಆಶೋತ್ತರಗಳೂ ಸೇರಿದಂತೆ ಹಲವು ವಿಷಯಗಳ ಕುರಿತಂತೆ ಸಂವಾದ ನಡೆಸಿದರು.
ವಿದ್ಯಾರ್ಥಿನಿಯರು ಸಂವಾದದ ಕೇಳಿದ ಹಲವು ಪ್ರಶ್ನೆಗಳಿಗೆ ನೀಡಿದ ಉತ್ತರದಲ್ಲಿ ಪ್ರಧಾನಿಯವರು, ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಕೈಗೊಳ್ಳಲಾಗಿರುವ ವಿವಿಧ ಕ್ರಮಗಳ ಬಗ್ಗೆ ವಿವರಿಸಿದರು. ಪ್ರವಾಸೋದ್ಯಮ ಮತ್ತು ಆರೋಗ್ಯ ಸೇರಿದಂತೆ ಸ್ವಚ್ಛ ಭಾರತ ಅಭಿಯಾನದ ಮೂಲಕ ಹೆಚ್ಚಬಹುದಾದ ಲಾಭಗಳ ಕುರಿತಂತೆಯೂ ಅವರು ಪ್ರಸ್ತಾಪಿಸಿದರು. ಏಕಾಗ್ರತೆಯನ್ನು ಹೆಚ್ಚಿಸುವುದೂ ಸೇರಿದಂತೆ ಯೋಗದಿಂದ ಆಗುವ ಪ್ರಯೋಜನದ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು.
ನಾಗರಿಕ ಸೇವೆಗೆ ಜಮ್ಮು ಮತ್ತು ಕಾಶ್ಮೀರದ ಯುವಕರು ಬರುತ್ತಿರುವ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಮತ್ತು ಅವರು ಕ್ರೀಡೆಯಲ್ಲೂ ತಮ್ಮ ಸಾಮರ್ಥ್ಯ ಪ್ರದರ್ಶಿಸುತ್ತಿದ್ದಾರೆ ಎಂದ ಪ್ರಧಾನಿಯವರು, ಭಾರತಕ್ಕೆ ಉಜ್ವಲ ಭವಿಷ್ಯವಿದ್ದು, ಜಮ್ಮು ಮತ್ತು ಕಾಶ್ಮೀರದ ಮಕ್ಕಳು ಹಾಗೂ ಯುವಕರು ದೇಶಕ್ಕೆ ದೊಡ್ಡ ಕೊಡುಗೆ ನೀಡಬಹುದು ಎಂದು ತಿಳಿಸಿದರು.
*****