Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪರಿಷ್ಕೃತ ಖೇಲೋ ಇಂಡಿಯಾ ಕಾರ್ಯಕ್ರಮಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2017-18 ರಿಂದ 2019-20ರ ಅವಧಿಗಾಗಿ 1,756ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪರಿಷ್ಕೃತ ಖೇಲೋ ಇಂಡಿಯಾ (ಆಟವಾಡು ಭಾರತ) ಕಾರ್ಯಕ್ರಮಕ್ಕೆ ತನ್ನ ಅನುಮೋದನೆ ನೀಡಿದೆ. ಇದು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಒಂದು ವಿಶಿಷ್ಠ ಕ್ಷಣವಾಗಿದ್ದು, ಈ ಕಾರ್ಯಕ್ರಮವು ವೈಯಕ್ತಿಕ ವಿಕಾಸ, ಸಮುದಾಯ ಅಭಿವೃದ್ದಿ, ಆರ್ಥಿಕ ಅಭಿವೃದ್ಧಿ ಮತ್ತು ರಾಷ್ಟ್ರದ ಪ್ರಗತಿಗೆ  ಕ್ರೀಡೆಯನ್ನು ಒಂದು ಪ್ರಧಾನ ಸಾಧನವಾಗಿ ಮುಖ್ಯವಾಹಿನಿಗೆ ತರುವ ಉದ್ದೇಶ ಹೊಂದಿದೆ.

 

ಪರಿಷ್ಕೃತ  ಖೇಲೋ ಇಂಡಿಯಾ ಕಾರ್ಯಕ್ರಮವು, ಮೂಲಸೌಕರ್ಯ, ಸಮುದಾಯ ಕ್ರೀಡೆ, ಪ್ರತಿಭೆಯ ಗುರುತಿಸುವಿಕೆ, ಔನ್ನತ್ಯಕ್ಕಾಗಿ ತರಬೇತಿ, ಸ್ಪರ್ಧಾ ಸ್ವರೂಪ ಮತ್ತು ಕ್ರೀಡಾ ಆರ್ಥಿಕತೆ ಸೇರಿದಂತೆ ಇಡೀ ಕ್ರೀಡಾ ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ.

ಪ್ರಮುಖ ಲಕ್ಷಣಗಳು:

ಕಾರ್ಯಕ್ರಮದ ಕೆಲವು ಪ್ರಮುಖ ಲಕ್ಷಣಗಳು ಈ ಕೆಳಕಂಡವುಗಳನ್ನು ಒಳಗೊಂಡಿವೆ:

  • ಆಯ್ದ ಕ್ರೀಡಾ ವಿಭಾಗಗಳಲ್ಲಿ ಪ್ರತಿ ವರ್ಷ 1000 ಹೆಚ್ಚು ಪ್ರತಿಭಾವಂತ ಯುವ ಅಥ್ಲೀಟ್ ಗಳಿಗಾಗಿ ಅಭೂತಪೂರ್ವವಾದ ಇಡೀ ಭಾರತಕ್ಕೆ ಅನ್ವಯಿಸುವ ಕ್ರೀಡಾ ವಿದ್ಯಾರ್ಥಿ ವೇತನ ಯೋಜನೆ.
  • ಈ ಯೋಜನೆಯಡಿ ಆಯ್ಕೆಯಾದ ಪ್ರತಿಯೊಬ್ಬ ಅಥ್ಲೀಟ್ ಸತತ 8 ವರ್ಷಗಳವರೆಗೆ ವಾರ್ಷಿಕ 5 ಲಕ್ಷ ರೂಪಾಯಿಗಳ ವಿದ್ಯಾರ್ಥಿ ವೇತನ ಪಡೆಯಲಿದ್ದಾರೆ.
  • ಇದೇ ಮೊದಲ ಬಾರಿಗೆ, ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ ಔನ್ನತ್ಯ ಗಳಿಸಲು ಉತ್ಕೃಷ್ಟ ಮತ್ತು ಪ್ರತಿಭಾನ್ವಿತ ಯುವಜನರಿಗೆ ದೀರ್ಘಾವಧಿಯ ಅಥ್ಲೀಟ್ ಅಭಿವೃದ್ಧಿ ಹಾದಿ ದೊರಕುವಂತೆ ಮಾಡಲಾಗುತ್ತಿದೆ ಮತ್ತು ವಿಶ್ವ ಮಟ್ಟದಲ್ಲಿ ಜಯಗಳಿಸಲು ಉನ್ನತ ಸ್ಪರ್ಧಾತ್ಮಕತೆಯ ಪಡೆಯನ್ನು ಸಜ್ಜುಗೊಳಿಸುತ್ತದೆ.
  • ಈ ಕಾರ್ಯಕ್ರಮವು ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಸ್ಪರ್ಧಾತ್ಮಕ ಕ್ರೀಡೆಗಳು ಮತ್ತು ಶಿಕ್ಷಣದ ಎರಡೂ ಹಾದಿಯಲ್ಲಿ ಸಾಗಲು ಅನುವಾಗುವಂತೆ ದೇಶಾದ್ಯಂತ ಇರುವ 20 ವಿಶ್ವವಿದ್ಯಾಲಯಗಳನ್ನು ಕ್ರೀಡಾ ಔನ್ನತ್ಯದ ತಾಣಗಳಾಗಿ ಉತ್ತೇಜಿಸುವ ಗುರಿ ಹೊಂದಿದೆ.
  •  ಆರೋಗ್ಯಪೂರ್ಣ ಜೀವನ ಶೈಲಿಯೊಂದಿಗೆ ಸಕ್ರಿಯ ಜನತೆಯನ್ನು ರಚಿಸುವ ಗುರಿಯನ್ನೂ ಈ ಕಾರ್ಯಕ್ರಮ ಹೊಂದಿದೆ.
  • ಈ ಕಾರ್ಯಕ್ರಮವು 10-18ರ ವಯೋಮಾನದ 200 ದಶಲಕ್ಷಕ್ಕೂ ಹೆಚ್ಚು ಮಕ್ಕಳನ್ನು ವ್ಯಾಪಕ ರಾಷ್ಟ್ರೀಯ ದೈಹಿಕ ಸಾಮರ್ಥ್ಯ ಕಾರ್ಯಕ್ರಮದ ವ್ಯಾಪ್ತಿಗೆ ತರುತ್ತದೆ, ಇದು ಕೇವಲ ಈ ವಯೋಮಾನದ ಮಕ್ಕಳ ದೈಹಿಕ ಕ್ಷಮತೆಯನ್ನಷ್ಟೇ ಅಲ್ಲದೆ, ಅವರ ಕ್ಷಮತೆ ಸಂಬಂಧಿತ ಚಟುವಟಿಕೆಗಳನ್ನೂ ಪ್ರೋತ್ಸಾಹಿಸುತ್ತದೆ.

ಪರಿಣಾಮ:

  • ಲಿಂಗ ಸಮಾನತೆ ಮತ್ತು ಸಾಮಾಜಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಕ್ರೀಡೆಯ ಶಕ್ತಿಯನ್ನು  ಕೂಡ ಸಂಪೂರ್ಣವಾಗಿ ಗುರುತಿಸಲಾಗಿದ್ದು, ಈ ಉದ್ದೇಶಗಳ ಸಾಧನೆಗೆ ವಿಶೇಷ ಕ್ರಮಗಳನ್ನು ಒದಗಿಸಲಾಗುತ್ತಿದೆ.
  • ಈ ಕಾರ್ಯಕ್ರಮವು ತೊಂದರೆಗೊಳಗಾದ ಮತ್ತು ವಂಚಿತ ಪ್ರದೇಶಗಳಲ್ಲಿ ವಾಸಿಸುವ ಯುವಜನರನ್ನು ಅನುತ್ಪಾದಕ ಮತ್ತು ವಿಚ್ಛಿದ್ರಕಾರಕ ಚಟುವಟಿಕೆಗಳಿಂದ ದೂರವಿರಿಸಲು ಮತ್ತು ರಾಷ್ಟ್ರದ-ನಿರ್ಮಾಣ ಪ್ರಕ್ರಿಯೆಯ ಮುಖ್ಯವಾಹಿನಿಗೆ ತರಲು ಅವರನ್ನು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಗುರಿ ಹೊಂದಿದೆ.
  • ಈ ಕಾರ್ಯಕ್ರಮವು ಸಂಘಟಿತ ಕ್ರೀಡಾ ಸ್ಪರ್ಧೆಗಳಲ್ಲಿ ಗರಿಷ್ಠ ಅವಕಾಶ ಒದಗಿಸಲು ಶಾಲಾ ಮತ್ತು ಕಾಲೇಜು ಮಟ್ಟದಲ್ಲಿ ಸ್ಪರ್ಧೆಯ ಗುಣಮಟ್ಟವನ್ನು ಹೆಚ್ಚಿಸುವ ಪ್ರಯತ್ನ ಮಾಡಲಿದೆ.
  • ಇದು ಕ್ರೀಡಾ ಉತ್ತೇಜನದ ಎಲ್ಲಾ ಅಂಶಗಳಲ್ಲಿ ಇತ್ತೀಚಿನ ಬಳಕೆದಾರ-ಸ್ನೇಹಿ ತಂತ್ರಜ್ಞಾನದ ಬಳಕೆಯನ್ನು ಒಳಗೊಂಡಿದೆ, ಕ್ರೀಡಾ ತರಬೇತಿ ಪ್ರಸಾರಕ್ಕಾಗಿ ಮೊಬೈಲ್ ಆನ್ವಯಿಕಗಳ ಬಳಕೆ; ಪ್ರತಿಭೆ ಗುರುತಿಸುವಿಕೆಗಾಗಿ ರಾಷ್ಟ್ರೀಯ ಕ್ರೀಡೆ ಪ್ರತಿಭೆ ಶೋಧ  ಪೋರ್ಟಲ್;ಸ್ಥಳೀಯ ಕ್ರೀಡೆಗಳಿಗೆ ಸಂವೇದಾತ್ಮಕ ಅಂತರ್ಜಾಲಪುಟ; ಕ್ರೀಡಾ ಮೂಲಸೌಕರ್ಯವನ್ನು ಶೋಧಿಸಲು ಮತ್ತು ಬಳಸಿಕೊಳ್ಳುವುದಕ್ಕಾಗಿ ಜಿಐಎಸ್ಆಧಾರಿತ ಮಾಹಿತಿ ಇತ್ಯಾದಿ ವ್ಯವಸ್ಥೆಗಳನ್ನು ಹೊಂದಿದೆ.
  • ಈ ಕಾರ್ಯಕ್ರಮವು “ಎಲ್ಲರಿಗೂ ಕ್ರೀಡೆ’’ ಮತ್ತು “ಔನ್ನತ್ಯಕ್ಕಾಗಿ ಕ್ರೀಡೆ’’ ಎಂಬುದನ್ನು ಉತ್ತೇಜಿಸಲೂ ಶ್ರಮಿಸುತ್ತದೆ.
  • *****