Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಿಲಾಯನ್ಸ್ ಫೌಂಡೇಶನ್ ನ ಯೂತ್‌ ಸ್ಪೋರ್ಟ್ಸ್ ಕಾರ್ಯಕ್ರಮವನ್ನು ಉದ್ಘಾಟಿಸಿ (ವಿಡಿಯೋ ಕಾನ್ಫರೆನ್ಸ್ ಮೂಲಕ) 23ನೇ ಜುಲೈ 2016 ರಂದು ಮಾನ್ಯ ಪ್ರಧಾನ ಮಂತ್ರಿಗಳವರು ಮಾಡಿದ ಭಾಷಣದ ಅವತರಣಿಕೆ

ರಿಲಾಯನ್ಸ್ ಫೌಂಡೇಶನ್ ನ  ಯೂತ್‌ ಸ್ಪೋರ್ಟ್ಸ್ ಕಾರ್ಯಕ್ರಮವನ್ನು ಉದ್ಘಾಟಿಸಿ (ವಿಡಿಯೋ ಕಾನ್ಫರೆನ್ಸ್ ಮೂಲಕ) 23ನೇ ಜುಲೈ  2016  ರಂದು    ಮಾನ್ಯ ಪ್ರಧಾನ ಮಂತ್ರಿಗಳವರು ಮಾಡಿದ ಭಾಷಣದ ಅವತರಣಿಕೆ


ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು. ಸಾಮಾನ್ಯ ವ್ಯಕ್ತಿಯೂ ಕೂಡ ಕ್ರೀಡೆಯನ್ನು ತನ್ನ ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು. ಕ್ರೀಡೆಯನ್ನು ನಾವು ಜೀವನದ ಭಾಗವನ್ನಾಗಿ ಮಾಡಿಕೊಳ್ಳದಿದ್ದರೆ ಒಂದು ರೀತಿಯಿಂದ ನಮ್ಮ ಜೀವನದ ವಿಕಾಸವೇ ಆಗುವುದಿಲ್ಲ. ದೈಹಿಕ ಸದೃಢತೆಗೆ ಕ್ರೀಡೆ ಅವಶ್ಯಕವೆಂದು ಕೆಲವರ ತಲೆಯಲ್ಲಿ ತುಂಬಿಕೊಂಡಿದೆ. ಇದು ಬಹಳ ಸೀಮಿತವಾದ ಯೋಚನೆ. ವ್ಯಕ್ತಿತ್ವದ ಸಂಪೂರ್ಣ ವಿಕಾಸಕ್ಕಾಗಿ, ಸರ್ವಾಂಗೀಣ ಅಭಿವೃದ್ಧಿಗಾಗಿ ಕ್ರೀಡೆಯು ಜೀವನದ ಭಾಗವಾಗಿರುವುದು ಬಹಳ ಅನಿವಾರ್ಯ. ಕ್ರೀಡೆಯಿಂದ ಸಾಮಾಜಿಕ ಜೀವನದೊಂದಿಗೆ ರಾಷ್ಟ್ರ ಜೀವನದ ವಿಕಾಸವೂ ಆಗುತ್ತದೆ.

ಭಾರತದಂತಹ ದೇಶದಲ್ಲಿ 100 ಭಾಷೆಗಳು, 1700 ಆಡು ಭಾಷೆಗಳು, ಅನೇಕ ಪ್ರಕಾರದ ಉಡುಗೆ-ತೊಡುಗೆಗಳು, ನಾನಾ ಪ್ರಕಾರದ ಊಟೋಪಚಾರಗಳಿವೆ. ನಮ್ಮ ದೇಶದಲ್ಲಿ ಒಂದು ಮೂಲೆಯಿಂದ ಇನ್ನೊಂದು ಮೂಲೆಯವರೆಗೆ ಜಿಲ್ಲಾ ಮಟ್ಟದಲ್ಲಿ ತಂಡಗಳು ಆಟಗಳನ್ನು ವರ್ಷಪೂರ್ತೀ ಆಡುತ್ತಿದ್ದರೆ ಅದು ಕೇವಲ ಕ್ರೀಡೆಯಾಗಿ ಉಳಿಯುವುದಿಲ್ಲ ಅದು ರಾಷ್ಟ್ರೀಯ ಏಕತೆಗೆ ಅತಿ ದೊಡ್ಡ ಆಧಾರ ದೊರೆತಂತಾಗುತ್ತದೆ. ಭಾರತದಲ್ಲಿ ಕ್ರೀಡೆ ವ್ಯಕ್ತಿತ್ವದ ವಿಕಾಸದೊಂದಿಗೆ ಸಮಾಜದೊಳಗೆ ಒಂದು ಪ್ರಕಾರದ ಸಾಮರಸ್ಯಕ್ಕಾಗಿ ಬೇಕಾಗಿದೆ . ಏಕೆಂದರೆ ಕ್ರೀಡೆಗಳಿದ್ದರೆ ಕ್ರೀಡಾ ಮನೋಭಾವ ಮೂಡುತ್ತದೆ, ಯಾವಾಗ ಕ್ರೀಡಾ ಮನೋಭಾವ ಮೂಡುತ್ತದೋ ಆಗ ಕೌಟುಂಬಿಕ ಜೀವನದಲ್ಲಿ, ಸಾಮಾಜಿಕ ಜೀವನದಲ್ಲಿ, ರಾಷ್ಟ್ರಜೀವನದಲ್ಲಿ ಈ ಸಾಮರಸ್ಯವು ಕೆಲಸ ಮಾಡುತ್ತದೆ,ತೆರೆದ ಮನಸ್ಸನ್ನು ಮೂಡಿಸುತ್ತದೆ, ಇನ್ನೊಬ್ಬರನ್ನು ಸ್ವೀಕರಿಸುವ ಸಾಮರ್ಥ್ಯವನ್ನು ನೀಡುತ್ತದೆ.

ಕ್ರೀಡೆಯಲ್ಲಿ ಗೆಲುವಿನ ಆನಂದ ಎಷ್ಟಿದೆಯೋ, ಅದಕ್ಕಿಂತ ಹೆಚ್ಚು ಸೋಲನ್ನು ಅರಗಿಸಿಕೊಳ್ಳುವ ಶಕ್ತಿ ಕ್ರೀಡೆಯಿಂದ ಬರುತ್ತದೆ. ಯಾವ ವ್ಯಕ್ತಿ ಜೀವನದಲ್ಲಿ ಕ್ರೀಡಾಳು ಆಗಿದ್ದಾನೋ ಅವನು ಎಡವಿ ಬೀಳುತ್ತಾನೆ, ಪುನಃ ಎದ್ದು ನಿಲ್ಲುತ್ತಾನೆ, ಅವನೆಂದೂ ತನ್ನ ಜೀವನದಲ್ಲಿ ಇಂತಹ ಅವಕಾಶಗಳು ಬಂದಾಗ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಕ್ರೀಡೆಯಿಂದ ಜೀವನದಲ್ಲಿ ವಿಶೇಷ ಗುಣಗಳ ವಿಕಾಸವಾಗುತ್ತದೆ, ಜೀವನಪೂರ್ತೀ ಹೋರಾಡುವ ಸಾಮರ್ಥ್ಯ ಕೊಡುತ್ತದೆ, ಆಟಗಾರ ಎಂದೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಯಾವ ವ್ಯಕ್ತಿ ಶಾರೀರಿಕವಾಗಿ ಆಟವಾಡುತ್ತಾನೋ, ನಾನು ಅವನ ಕುರಿತು ಮಾತನಾಡುವುದಿಲ್ಲ. ಶರೀರ ಮತ್ತು ಮನಸ್ಸಿನೊಂದಿಗೆ ಆಟವಾಡುವವನು ಇದನ್ನು ಪಡೆದುಕೊಳ್ಳುತ್ತಾನೆ. ಆದ್ದರಿಂದಲೇ ಕ್ರೀಡೆಗೆ ವೈಯಕ್ತಿಕ ಜೀವನ ಮತ್ತು ರಾಷ್ಟ್ರ ಜೀವನದಲ್ಲಿ ಮಹತ್ವವಿರಬೇಕು. ನೀವಿಂದು ಫುಟ್‌ಬಾಲ್‌ ಆಟವನ್ನು ಪ್ರಾರಂಭಿಸುತ್ತಿದ್ದೀರ, ಆಟ ಆಡುತ್ತಿದ್ದೀರ, ದೇಶದ ಯುವ ಪೀಳಿಗೆಯೊಂದಿಗೆ ಸೇರಿ ಕ್ರೀಡೆಗೆ ಮಹತ್ವ ಕೊಡುವ ಪ್ರಯತ್ನವನ್ನು ಮಾಡಿದ ರಿಲಾಯನ್ಸ್ ಸ್ಪೋರ್ಟ್ಸ್ ಫೌಂಡೇಶನ್ ಗೆ ನಾನು ಶುಭಾಶಯಗಳನ್ನು ಹೇಳುತ್ತೇನೆ. ಪ್ರತಿಭೆಯನ್ನು ಹುಡುಕುವುದು ಅತಿದೊಡ್ಡ ಕೆಲಸವಾಗಿರುತ್ತದೆ. ಎಲ್ಲಿಯವರೆಗೆ ಸಮಗ್ರವಾಗಿ ನಮ್ಮ ಮಕ್ಕಳಿಗೆ ಆಟವಾಡುವ ಅವಕಾಶಗಳು ದೊರೆಯುವುದಿಲ್ಲವೋ ಅಲ್ಲಿಯವರೆಗೆ ಅವರ ಪ್ರತಿಭೆಯು ತಿಳಿದುಬರುವುದಿಲ್ಲ. ಇಂದು ಸ್ಪೋರ್ಟ್ಸ್‌ನ ಜೊತೆಗೆ ಗ್ಲಾಮರ್ ಕೂಡ ಸೇರಿಕೊಂಡಿದೆ. ಹಾಗಾಗಿ ಮಕ್ಕಳನ್ನೇನೋ ಅನೇಕರು ಕ್ರೀಡಾಳುಗಳನ್ನಾಗಿ ಮಾಡಬಯಸುತ್ತಾರೆ, ಆದರೆ ಬೆಳಿಗ್ಗೆ 4 ಘಂಟೆಗೆ ಎದ್ದು ಅಭ್ಯಾಸ ಮಾಡುವ ವಿಷಯ ಬಂದಾಗ ಸ್ವಲ್ಪ ಹಿಂಜರಿಯುತ್ತಾರೆ, ಮೊದಲು ಇದರಲ್ಲಿ ಗ್ಲಾಮರ್ ಬರಲಿ, ಇಲ್ಲವೇ ಸೆಲೆಬ್ರಟಿಯ ಸ್ಟೇಟಸ್‌, ಏನೇ ಬರಲಿ, ಕ್ರೀಡೆ ಕಠಿಣ ಪರಿಶ್ರಮವಿಲ್ಲದೇ ಮುಂದುವರೆಯಲು ಸಾಧ್ಯವಿಲ್ಲ.

ರಿಲಾಯನ್ಸ್ ಸ್ಪೋರ್ಟ್ಸ್ ಫೌಂಡೇಶನ್ ಮೂಲಕ ನಿರಂತರವಾಗಿ ಕ್ರೀಡೆಗೆ ಪ್ರೋತ್ಸಾಹ ನೀಡಲು ತಳಮಟ್ಟದಲ್ಲಿ ಅನೇಕ ಸ್ಪರ್ಧೆಗಳು ನೆಡೆಯುತ್ತಿರಲಿ ಮತ್ತು ಈ ಸ್ಪರ್ಧೆಗಳಿಂದ ಪ್ರತಿಭೆಗಳು ಹೊರಹೊಮ್ಮುತ್ತವೆ ಮತ್ತು ಎಷ್ಟು ಪ್ರತಿಭೆಗಳು ಹೊರ ಹೊಮ್ಮುತ್ತವೋ ನಮಗೆ ಅಷ್ಟೇ ಹೆಚ್ಚು ಲಾಭಗಳಾಗುತ್ತವೆ. ರಿಲಾಯನ್ಸ್ ಸ್ಪೋರ್ಟ್ಸ್ ಫೌಂಡೇಶನ್ ಗೆ ಮತ್ತು ಸಹೋದರಿ ನೀತಾ ಅವರಿಗೆ ನನ್ನ ಅನೇಕ-ಅನೇಕ ಶುಭಾಶಯಗಳು. ಇನ್ನು ಸಕಲ ವಿದ್ಯಾರ್ಥಿಗಳಿಗೆ, ನನ್ನ ಬಾಲ ಮಿತ್ರರಿಗೆ- ಯಾವಾಗಲೂ ಕ್ರೀಡಾ ಜೀವನದಲ್ಲಿನ ಸೋಲನ್ನು ಒಂದು ಅವಕಾಶವೆಂದು ತಿಳಿದುಕೊಳ್ಳಿ, ಸೋಲಿನಿಂದ ಎಂದಿಗೂ ಕಂಗೆಡಬೇಡಿ. ಸೋಲು ಕಲಿಸುತ್ತದೆ, ಬಹಳಷ್ಟು ಕಲಿಸುತ್ತದೆ ಮತ್ತು ಯಾರು ಆಡುವುದಿಲ್ಲವೋ ಅವರು ಗೆಲ್ಲುವುದೂ ಇಲ್ಲ ಮತ್ತು ಸೋಲುವುದೂ ಇಲ್ಲ. ಯಾರು ಆಟ ಆಡುವನೋ ಅವನೇ ಅರಳುವವನು, ಗೆಲ್ಲುವವನೂ ಅವನೇ, ಸೋಲುವವನೂ ಅವನೇ ಆದರೆ ಅವನು ಆಟ ಆಡತ್ತಿರಬೇಕು.

ಯಾರು ಆಡುವರೋ ಅವರು ಅರಳುವರು, ನೀವು ಆಟವನ್ನೇ ಆಡದಿದ್ದರೆ ಅರಳಲು ಹೇಗೆ ಸಾಧ್ಯ. ಆದ್ದರಿಂದ ನೀವು ಜೀವನದಲ್ಲಿ ಅರಳ ಬೇಕೆಂದಿದ್ದರೆ, ವ್ಯಕ್ತಿತ್ವದ ವಿಕಾಸವಾಗಬೇಕು. ಕಮಲದ ಹೂ ಅರಳಿದಂತೆ, ಒಂದು ಸಸಿ ಹುಟ್ಟಿದಂತೆ ಜೀವನವೂ ಅರಳುತ್ತದೆ. ಆಟವು ಅರಳುವುದಕ್ಕೆ ಬೇಕಾಗಿರುವ ಬಹುದೊಡ್ಡ ಔಷಧಿಯಾಗಿದೆ, ಬಹುದೊಡ್ಡ ಅವಕಾಶವಾಗಿದೆ,ಇದುಎಲ್ಲಕ್ಕಿಂತ ದೊಡ್ಡ ಸವಾಲೂ ಕೂಡ ಆಗಿದೆ. ಹಾಗಾಗಿಯೇ ನಾನಿಂದು ಇಲ್ಲಿ ಸೇರಿರುವ ಎಲ್ಲ ಬಾಲ ಕ್ರೀಡಾ ಮಿತ್ರರ ಮೂಲಕ ಕ್ರೀಡಾ ಜಗತ್ತಿಗೆ ಸಂಬಂಧಿಸಿದ ಎಲ್ಲರಿಗೂ ಶುಭಾಶಯಗಳನ್ನು ಹೇಳುತ್ತೇನೆ. ಸ್ಪೋರ್ಟ್ಸ್ – ಶಬ್ದದಿಂದಲೇ ಕ್ರೀಡಾ ಜಗತ್ತಿನ ದಿಕ್ಕುಗಳೇನು, ಕ್ರೀಡಾ ಜಗತ್ತಿನ ದೃಷ್ಟಿಕೋನಗಳೇನುಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಬಹುದಾಗಿದೆ. ನಾವು ” Sportsಎಂದು ಹೇಳಿದಾಗ: S – stands for Skill-ಕೌಶಲ್ಯ, P stand for Perseverance-ಪರಿಶ್ರಮ, O stands for Optimism-ಅಶಾವಾದ, R stands for Resilience-ಸ್ಥಿತಿಸ್ಥಾಪಕತ್ವ, T stands for Tenacity-ಜಿಗುಟುತನ, S stands for Stamina-ದೃಢತೆ”. ಇವಲ್ಲಾ ವಿಚಾರಗಳನ್ನಿಟ್ಟುಕೊಂಡು ನಮ್ಮ ಸಂರಚನೆ ಮಾಡಿಕೊಂಡರೆ ನಮಗೆ ಅಪಾರ ಸಫಲತೆ ಸಿಗುವುದು ಮತ್ತು ಈ ಸಂದರ್ಭದಲ್ಲಿ ನಿಮ್ಮಲ್ಲರಿಗೂ ಅನೇಕ-ಅನೇಕ ಶುಭಾಶಯಗಳನ್ನು ಹೇಳುತ್ತಿದ್ದೇನೆ.

ನಿಮಗೆ ಒಳಿತಾಗಲಿ .