Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹರಿಯಾಣ ಸ್ವರ್ಣ ಜಯಂತಿ ಆಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಗಳ ಭಾಷಣ

ಹರಿಯಾಣ ಸ್ವರ್ಣ ಜಯಂತಿ ಆಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಗಳ ಭಾಷಣ

ಹರಿಯಾಣ ಸ್ವರ್ಣ ಜಯಂತಿ ಆಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಗಳ ಭಾಷಣ


ಇಂದು ಹರಿಯಾಣವು ತನ್ನ ಸ್ವರ್ಣ ಜಯಂತಿಯ ಆಚರಣೆಯನ್ನು ಆರಂಭಿಸುತ್ತಿದೆ. ಇಂತಹ ಮಹತ್ವಪೂರ್ಣ ಸಂದರ್ಭದಲ್ಲಿ ಎಲ್ಲ ಹರಿಯಣವಾಸಿಗಳಿಗೂ ನನ್ನ ಅನೇಕಾನೇಕ ಶುಭ ಹಾರೈಕೆಗಳು. ಮುಖ್ಯಮಂತ್ರಿಗಳು ಹೇಳಿದಂತೆಯೇ ಈ ಸ್ವರ್ಣಜಯಂತಿಯ ಮಹೋತ್ಸವದ ಸಂದರ್ಭ ಯಾವುದೇ ಪಕ್ಷದ್ದಾಗಲೀ, ಯಾವುದೇ ಸರ್ಕಾರದ್ದಾಗಲೀ ಅಲ್ಲ, ಈ ಸಂದರ್ಭ ಎಲ್ಲ ಹರಿಯಣವಿಗಳಿಗೆ ಸೇರಿದ್ದು. ಮನುಷ್ಯನ ಜೀವನದಲ್ಲೂ ಹುಟ್ಟುಹಬ್ಬ ಆಚರಿಸುವುದು,ಕೆಲವು ವಿಶೇಷ ಸಂದರ್ಭಗಳನ್ನು ಆಚರಿಸುವುದು ಇವೆಲ್ಲಾ ಆ ವ್ಯಕ್ತಿಯು ಕೆಲವು ಹೊಸ ಸಂಕಲ್ಪ ತೆಗೆದುಕೊಳ್ಳುವಂತೆ ಪ್ರೇರೇಪಿಸುತ್ತದೆ. ಹಾಗೇಯೇ ಇಂತಹ ಸಂದರ್ಭಗಳು ನಮ್ಮ ರಾಜ್ಯಕ್ಕೆ, ನಮ್ಮ ಸಮಾಜಕ್ಕೆ ಏನಾದರೂ ಹೊಸದನ್ನು ಮಾಡುವಂತೆ ಪ್ರೇರೇಪಿಸುತ್ತದೆ.

ಈ ಸ್ವರ್ಣಜಯಂತಿಯ ಸಮಯದಲ್ಲಿ ನಾನು ಎಲ್ಲ ಹರಿಯಾಣವಾಸಿಗಳಲ್ಲಿ ಪ್ರಾರ್ಥಿಸಿಕೊಳ್ಳುವುದಿಷ್ಟೆ. 1966 ರಲ್ಲಿ ಹರಿಯಾಣ ರಚನೆಗಾಗಿ ಯಾವ ಅಂಶಗಳನ್ನಿಡಲಾಗಿತ್ತೋ, ಯಾವ ಆಂದೋಲನವನ್ನು ನಡೆಸಲಾಗಿತ್ತೋ, ಯಾವ ವಿಚಾರವನ್ನು ಪ್ರಸ್ತುತಪಡಿಸಲಾಗಿತ್ತೋ, ಆ ಕಾಲದ ದಿನಪತ್ರಿಕೆ ಇರಬಹುದು,ಆ ಸಮಯದ ತಿಳುವಳಿಕೆಗಳಿರಬಹುದು,ಒಮ್ಮೆ ಆ ಎಲ್ಲ ವಿಷಯಗಳ ಬಗ್ಗೆ ಹರಿಯಾಣವಿಗಳು ಯೋಚಿಸಬೇಕು. ಯಾವ ಉದ್ದೇಶ್ಯದಿಂದ ಹೊರಟಿದ್ದೆವು? , ಯಾವ ರಸ್ತೆಯಲ್ಲಿ ಹೊರಟಿದ್ದೆವು ? ,ಯಾವ ಗುರಿ ತಲುಪಲು ಹೊರಟಿದ್ದೆವು? ಎಲ್ಲಿಯವರೆಗೆ ತಲುಪಿದ್ದೇವೆ? ಇನ್ನೂ ಎಷ್ಟು ನಡೆಯಬೇಕು? ಬೇಗಬೇಗ ತಲುಪಲು ಏನು ಮಾಡಬೇಕು? ಎಂದು ಯೋಚಿಸಿ ಲೆಕ್ಕಾಚಾರ ಹಾಕುವ ಸಮಯವಿದು.

ಕಳೆದ 50 ವರ್ಷಗಳ ಗೌರವ ಗಾಥ, ಕಳೆದ 50 ವರ್ಷಗಳಲ್ಲಿ ಇದಕ್ಕಾಗಿ ಹೋರಾಡಿದ ಪ್ರತಿಯೊಬ್ಬನ ಶೌರ್ಯ, ಪರಾಕ್ರಮಗಳು ಇಂದು ಹರಿಯಾಣವನ್ನು ಇಲ್ಲಿಗೆ ತಲುಪಿಸಿದೆ. ಆದರೆ ಇಂದಿಗೆ 10 ವರ್ಷಗಳ ಹಿಂದೆ ಯಾವ ವೇಗದಲ್ಲಿ ವ್ಯವಹಾರಗಳು ನಡೆಯುತ್ತಿದ್ದವು , ಮಾತು ನಡೆಯುತ್ತಿತ್ತು. ಹಳ್ಳಿಯ ಮಂಚದಲ್ಲಿ ಕುಳಿತು, ಲಘು ಹಾಸ್ಯ ಮಾಡುತ್ತಾ ಅರ್ಥಗರ್ಭಿತವಾದ ಸಮಯಕ್ಕೆ ಸರಿಯಾದ ಮಾತುಗಳನ್ನಾಡುವ ಸಾಮರ್ಥ್ಯ ಹರಿಯಾಣದ ವ್ಯಕ್ತಿಗೆ ಇರುತ್ತಿತ್ತು. ಬಹಳ ಆಳವಾದ ಮಾತನ್ನು ಅವನು ಅಷ್ಟೇ ಚೆನ್ನಾಗಿ ತನ್ನ ಗ್ರಾಮೀಣ ಭಾಷೆಯಲ್ಲಿ ಹೇಳಬಲ್ಲವನಾಗಿದ್ದನು.

ಈ ಭೂಮಿಯಲ್ಲಿ ನಿಮ್ಮಗಳ ಮಧ್ಯೆ ಬಹಳ ವರ್ಷ ಕೆಲಸ ಮಾಡುವ ಸೌಭಾಗ್ಯ ನನಗೆ ಲಭಿಸಿತ್ತು. ಹೀಗಾಗಿ ಈ ವಿಷಯಗಳ ಬಗ್ಗೆ ನನಗೆ ಚೆನ್ನಾಗಿ ಅರಿವಿದೆ. ಹರಿಯಾಣ ಒಂದು ಚಿಕ್ಕ ಪ್ರದೇಶವೇ ಆಗಿದ್ದರೂ , ಜೀವನದಲ್ಲಿ ಹರಿಯಾಣದ ವ್ಯಕ್ತಿಯ ಬೆವರಿನ ವಾಸನೆಯಿಲ್ಲದ ಯಾವ ಕ್ಷೇತ್ರವೂ ಇಲ್ಲವಂದೇ ಹೇಳಬಹುದು. ಹರಿಯಾಣದ ಜನ ಹೆಚ್ಚಾಗಿ ರೈತಾಪಿ ಕೆಲಸ ಮಾಡುತ್ತಾರೆ , ಆದರೆ ಹರಿಯಾಣದ ಜನ ವ್ಯಾಪಾರದಲ್ಲೂ ಉನ್ನತ ಮಟ್ಟ ತಲುಪಿದ್ದಾರೆ. ಹಿಂದೂಸ್ಥಾನದ ಅನೇಕ ರಾಜ್ಯಗಳಲ್ಲಿ ನೆಲೆಸಿದ್ದಾರೆ ಅವರು ವ್ಯಾಪಾರದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.

ಹರಿಯಾಣದವರು ಹಳ್ಳಿಯಲ್ಲಿ ಬೇಸಾಯ ಮಾಡುತ್ತಾರೆ ಎಂದು ಜನರಿಗನ್ನಿಸುತ್ತದೆ, ಆದರೆ ಈ ದೇಶದ ಪ್ರತಿ 10 ಸೈನಿಕರಲ್ಲಿ ಒಬ್ಬ ಸೈನಿಕ ಹರಿಯಾಣದವನಾಗಿರುತ್ತಾನೆ. ದೇಶಕ್ಕಾಗಿ ಹರಿಯಾಣದವರು ಬಲಿದಾನ ನೀಡಿದ್ದಾರೆ. ಇವರು ಅತಿಉತ್ತಮವಾಗಿ ತಮ್ಮನ್ನು ಗುರುತಿಸಿಕೊಳ್ಳದಿರುವ ಯಾವ ಕ್ಷೇತ್ರವೂ ಇಲ್ಲವೆನ್ನಬಹುದು. ಹರಿಯಾಣದ ಇನ್ನೊಂದು ವಿಷೇಷತೆಯೆಂದರೆ ಹರಿಯಾಣದಲ್ಲಿ ಸ್ವಾಮಿ ದಯಾನಂದ ಸರಸ್ವತಿಯವರ ಪ್ರಭಾವ ಬಹಳ ಹೆಚ್ಚು ಆಳವಾಗಿ ಬೇರೂರಿದೆ. ಇಲ್ಲಿ ಈಗಲೂ ನೂರಾರು ಕುಟುಂಬಗಳು ಹೇಗಿವೆಯೆಂದರೆ – ಸ್ವಾಮಿ ದಯಾನಂದ ಸರಸ್ವತಿಯವರ ನೆನಪು ಮಾಡಿದಾಕ್ಷಣ ಅವರುಗಳ ಕಣ್ಣಲ್ಲಿ ಮಿಂಚು ಹರಿದು ಹೋಗುತ್ತದೆ. ಈ ಭೂಮಿಯ ಮೇಲೆ ಅನೇಕ ಮಹಾಪುರುಷರ ಹೆಸರಿನ ನೆರಳು ಅಂಕಿತಗೊಂಡಿದೆ.

ಪ್ರಪಂಚದಲ್ಲಿ ಅನೇಕಾನೇಕ ಯುದ್ದಗಳು ಆಗಿರಬಹುದು, ಆದರೆ ಯುದ್ದಭೂಮಿಯಲ್ಲಿ ಜನನ-ಮರಣದ ಆಟ ನಡೆಯುವಂತಹ ಯುದ್ದವು ವಿಶ್ವದಲ್ಲೆಲ್ಲೂ ನಡೆದಿಲ್ಲ, ಅಲ್ಲೇ ಜೀವನದ ಆದರ್ಶಗಳ ಉತ್ತಮೋತ್ತಮವಾದ ,ಸಾವಿರಾರು ವರ್ಷ ಮಾರ್ಗದರ್ಶನ ನೀಡಬಲ್ಲ ಗೀತೋಪದೇಶದಂತಹ ರಚನೆ ಆ ಯುದ್ದಭೂಮಿಯಲ್ಲೇ ಆಗಿದೆ. ಇದೊಂದು ಬೇರೆಲ್ಲೂ ಸಂಭವಿಸದ ಘಟನೆ. ಇಲ್ಲವಾದಲ್ಲಿ ಚಿಂತನ-ಮನನ, ಮನದ ಶಾಂತಚಿತ್ತ ಮೂಲೆಯಲ್ಲಿ, ಮುಳುಗಿ ನೋಡಿದ ನಂತರ ಕೆಲವು ಅಂಶಗಳು ಹೊರಹೊಮ್ಮುತ್ತವೆ. ಆದರೆ ಯುದ್ದಭೂಮಿಯ ವಿಷೇಷತೆಯಾದರೂ ಏನು ಅದನ್ನೊಮ್ಮೆ ನೋಡಿ, ರಣರಂಗದಲ್ಲಿ ಜೀವನದ ಆದರ್ಶದ ತತ್ವಜ್ಞಾನವನ್ನು ಉಣಬಡಿಸಲಾಗುತ್ತಿದೆ, ಇಂತಹ ಭೂಮಿಯಿದು. ಆದರೆ ಇದರಲ್ಲಿ ಎಷ್ಟು ಮಹಾನತೆಯಿದೆಯೋ ಅಷ್ಟೇ ದೊಡ್ಡ ಜವಾಬ್ದಾರಿಗಳಿವೆ. ನನ್ನ ಮನಸ್ಸಿನಲ್ಲಿ ಸದಾ ಒಂದು ವಿಷಯದ ಬಗ್ಗೆ ನೋವಿರುತ್ತಿತ್ತು , ಅದೇನೆಂದರೆ ಇಂತಹ ಸಂಸ್ಕಾರಿ ಪ್ರದೇಶ,ಇಂತಹ ಶಕ್ತಿಶಾಲಿ ಪ್ರದೇಶ,ಯಾವಾಗಲೂ ಹೊಸ ವಿಚಾರಗಳನ್ನು ಸ್ವೀಕರಿಸುವ ಪ್ರದೇಶ,ಇಲ್ಲಿ ತಾಯಿಯ ಗರ್ಭದಲ್ಲೇ ಹೆಣ್ಣುಮಕ್ಕಳನ್ನು ಕೊಲ್ಲಲು ಕಾರಣವೇನು?

ನಾನು ಮನೋಹರಲಾಲ್ ಜೀಯವರಿಗೂ ಅಭಿನಂದಿಸಬಯಸುತ್ತೇನೆ, ಹಾಗೂ ಹರಿಯಾಣದ ಜನತೆಯನ್ನೂ ಅಭಿನಂದಿಸ ಬಯಸುತ್ತೇನೆ. ನಾನು ಮಗಳನ್ನು ಉಳಿಸಿ,ಮಗಳನ್ನು ಓದಿಸಿ ಅಭಿಯಾನಕ್ಕಾಗಿ ಹರಿಯಾಣದ ಜನತೆಯಿಂದ ಹೆಣ್ಣುಮಕ್ಕಳ ಜೀವನದ ರಕ್ಷಣೆಯ ಭಿಕ್ಷೆಯನ್ನು ಕೇಳಿದ್ದೆ. ಹರಿಯಾಣದ ಜನತೆಯು ಈ ಭಾವನೆಯನ್ನು ಗೌರವಿಸಿತೆಂದು ಇಂದು ನಾನು ಸಂತೋಷದಿಂದ ಹೇಳಬಲ್ಲೆ. ಇಂದು ಸಂಪೂರ್ಣ ದೇಶದಲ್ಲಿ ಲಿಂಗಾನುಪಾತದ ಸ್ಥಿತಿಯಲ್ಲಿ ಸುಧಾರಣೆ ಉಂಟಾಗುತ್ತಿದೆ, ತೀವ್ರಗತಿಯಿಂದ ಸುಧಾರಣೆ ತರುತ್ತಿದ್ದಾರೆ.ಇದನ್ನು ಹರಿಯಾಣದ ಪ್ರದೇಶ ತರುತ್ತಿದೆ.

ನಾನು ಆ ತಾಯಿಯರಿಗೆ ಅಭಿನಂದನೆ ಸಲ್ಲಿಸ ಬಯಸುತ್ತೇನೆ ಯಾಕೆಂದರೆ ಇವರು ಸೊಸೆಯ ಗರ್ಭದ ಹೆಣ್ಣುಮಗುವನ್ನು ಅತ್ತೆಯ ರೂಪದಲ್ಲಿ, ತಾಯಿಯ ರೂಪದಲ್ಲಿ ರಕ್ಷಿಸುವ ಸಂಕಲ್ಪ ಮಾಡಿದ್ದಾರೆ. ನಾನು ಆ ನಮ್ಮ ಹಿರಿಯರಿಗೆ ಗೌರವ ಸೂಚಿಸಬಯಸುತ್ತೇನೆ. ಏಕೆಂದರೆ ಅವರು ಹರಿಯಾಣದಲ್ಲಿ ಮಗಳನ್ನು ಕೊಲ್ಲೆವು , ಸಾಯಲು ಬಿಡೆವು, ಎಂಬ ಸಂಕಲ್ಪವನ್ನಿಟ್ಟುಕೊಂಡು ಸುಧಾರಣೆಯ ನೇತೃತ್ವ ವಹಿಸಿದ್ದಾರೆ. ಸಮಾಜದ ಪ್ರತಿಯೊಂದು ವರ್ಗಕ್ಕೂ ಹಾಗೂ ನನ್ನ ಪ್ರಕಾರ ಈ ಸ್ವರ್ಣಜಯಂತಿಯ ಅವಕಾಶವನ್ನುಪಯೋಗಿಸಿಕೊಂಡು ಇಲ್ಲಿಯ ಎಲ್ಲ ಹಿರಿಯರಿಗೂ , ದೊಡ್ಡವರಿಗೂ ತಲೆಬಾಗಿ ನಮಿಸುವ ಅವಕಾಶ ನನಗೆ ದೊರೆತಿದೆ. ಈ ಹರಿಯಾಣದ ಹೆಣ್ಣುಮಕ್ಕಳು ಕೇವಲ ಹರಿಯಾಣಕ್ಕಲ್ಲ, ಸಂಪೂರ್ಣ ಭಾರತದೇಶದ ಹೆಮ್ಮೆ , ಘನತೆ, ಗೌರವಗಳ ಮೂರ್ತಿಯಾಗಿಬಿಟ್ಟಿದ್ದಾರೆ.

ಈ ಸ್ವರ್ಣಜಯಂತಿಯ ಶುಭ ಸಂದರ್ಭದಲ್ಲಿ ಪ್ರತಿಯೊಬ್ಬ ಹರಿಯಾಣಿಯು ಮಗಳನ್ನು ಉಳಿಸುವ ವಿಚಾರದಲ್ಲಿ ಕೆಲವು ಪ್ರತಿಜ್ಞೆಗಳನ್ನು ಮಾಡಬೇಕು. ಯಾವ ಹರಿಯಾಣಿಯೂ ಯಾವುದೇ ಹೆಣ್ಣುಮಗುವನ್ನು ಕೊಲ್ಲದಂತೆ ಎಚ್ಚರಿಕೆ ವಹಿಸುತ್ತೇವೆ. ಮಗಳಿಗೆ ಜನ್ಮ ನೀಡುವ ಅಧಿಕಾರದ ರಕ್ಷಣೆಯನ್ನು ಪ್ರತಿ ಹರಿಯಾಣಿಯೂ ಮಾಡುವನು ಎಂಬ ಪ್ರತಿಜ್ಞೆ ಮಾಡಬೇಕು. ಇದಕ್ಕಿಂತಾ ಹೆಚ್ಚಿನ ಸ್ವರ್ಣಜಯಂತಿಯ ಸಾರ್ಥಕತೆ ಇನ್ಯಾವುದರಲ್ಲೂ ಸಿಗದು.

ಹರಿಯಾಣದ ಕೆಲವು ಜಿಲ್ಲೆಗಳನ್ನು ಇಂದು ಬಯಲು ಶೌಚ ಮುಕ್ತವೆಂದು ಘೋಷಿಸಲಾಯಿತು. ಇದಕ್ಕಾಗಿಯೂ ನಾನು ಮನೋಹರ ಲಾಲ್ ಜೀ ಯವರ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. 21ನೇ ಶತಮಾನದ 150 ವರ್ಷಗಳೂ ಕಳೆದುಹೋದವು. ಆದರೂ ಈಗಲೂ ನಮ್ಮ ತಾಯಂದಿರು, ಸಹೋದರಿಯರು ತೆರೆದ ಪ್ರದೇಶದಲ್ಲಿ ಶೌಚಕ್ಕೆ ಕೂರುವುದು ಸರಿಯೇ? ಇದೆಷ್ಟು ನಾಚಿಕೆ ಹೇಸಿಗೆಯ ವಿಷಯ, ನೀವೇ ಕಲ್ಪಿಸಿಕೊಳ್ಳಿ, ಅವರುಗಳು ಸಂಕೋಚದಿಂದ ಸೂರ್ಯ ಹುಟ್ಟುವ ಮೊದಲು ಶೌಚಕ್ಕೆ ತೆರಳಬೇಕು ಅಥವಾ ಸೂರ್ಯ ಮುಳುಗುವ ನಿರೀಕ್ಷೆ ಮಾಡಬೇಕು. ಎಷ್ಟೇ ಕಷ್ಟವಾದರೂ ನಾಚಿಕೆಯಿಂದ ಇಡೀ ದಿನ ಎಲ್ಲಿಗೂ ಹೋಗಲಾರಳು, ಇದಕ್ಕಿಂತ ಹೆಚ್ಚಿನ ಹಿಂಸೆ ಯಾವುದು? ನಾನು ಸರ್ಕಾರವನ್ನು ಅಭಿನಂದಿಸುತ್ತಾ ನಮ್ಮ ಹಳ್ಳಿಗಳಲ್ಲಿ ಎಲ್ಲೂ ಯಾರಿಗೂ ಬಯಲಲ್ಲಿ ಶೌಚ ಮಾಡುವ ಪ್ರಮೇಯ ಬರದಿರಲೆಂದು ಹರಿಯಾಣದವರಿಂದ ಅಪೇಕ್ಷಿಸುತ್ತೇನೆ. ಈ ಸ್ವರ್ಣಜಯಂತಿಯ ಸಂದರ್ಭದಲ್ಲಿ ಸಂಪೂರ್ಣ ಹರಿಯಾಣವನ್ನು ಬಯಲು ಶೌಚ ಮುಕ್ತ ಮಾಡಿರೆಂದು ಬಯಸುತ್ತೇನೆ . ಹರಿಯಾಣವು ಇದನ್ನು ಖಂಡಿತಾ ಮಾಡಬಲ್ಲದು ಎಂಬ ನಂಬಿಕೆ ನನಗಿದೆ.

ಇಂದು ಹರಿಯಾಣವು ಸಂಪೂರ್ಣ ಭಾರತಕ್ಕೆ ಒಂದು ಹೊಸ ಮಾರ್ಗವನ್ನು ತೋರಿಸಿದೆ. ಇದಕ್ಕಾಗಿ ನಾನು ಮುಖ್ಯಮಂತ್ರಿಗಳನ್ನು ಹಾಗೂ ಅವರ ಪೂರ್ಣ ತಂಡವನ್ನು ಅಭಿನಂದಿಸುತ್ತೇನೆ. ಅವರು ಕೆಲವು ಜಿಲ್ಲೆಗಳನ್ನು , ಸುಮಾರು ಎಂಟು ಜಿಲ್ಲೆಗಳನ್ನು, ಸೀಮೆಎಣ್ಣೆ ಮುಕ್ತವನ್ನಾಗಿ ಮಾಡಿದ್ದಾರೆ. ಎಂಟು ಜಿಲ್ಲೆಗಳು ಸೀಮೆಎಣ್ಣೆ ಮುಕ್ತವಾಗಿವೆ. ಈ ಬಗ್ಗೆ ನನಗೆ ಒಂದು ವಿಷಯ ಅರ್ಥವಾಗುತ್ತಿಲ್ಲ, ಅದೇನೆಂದರೆ, ಕರಂಟು ಬಂದಿದೆ, ಮನೆಯಲ್ಲಿ ಗ್ಯಾಸ್ ಸಂಪರ್ಕ ಬಂದಿದೆ. ಗ್ಯಾಸ್ ಸಿಲಿಂಡರ್ ಇದೆ, ಆದರೂ ಸೀಮೆಎಣ್ಣೆಯ ಕೋಟಾವೂ ನಡೆಯುತ್ತಲೇ ಬಂದಿದೆ. ಯಾರ ಹೆಸರಲ್ಲಿ ಸೀಮೆಎಣ್ಣೆಯ ಕೋಟಾ ಇದೆಯೋ ಅವನಿಗೆ ಅದು ಬೇಕಾಗಿಲ್ಲ ಅವನು ಅದನ್ನು ತೆಗೆದುಕೊಳ್ಳುತ್ತಲೂ ಇಲ್ಲ. ಯಾವನೋ ಮಧ್ಯವರ್ತಿ,ಯಾರೋ ದಲ್ಲಾಲ ಅದರಲ್ಲಿ ಕಾಳಸಂತೆಯ ಆಟವಾಡುತ್ತಿದ್ದಾನೆ, ಅಂಥವರು ಸೀಮೆಎಣ್ಣೆಯನ್ನು ಡೀಜಲ್ಲಿನೊಡನೆ ಬೆರೆಸುತ್ತಿದ್ದಾರೆ,ವಾಹನಗಳನ್ನು ಅದರಲ್ಲಿ ಓಡಿಸುತ್ತಾರೆ ಮತ್ತು ಪರಿಸರಕ್ಕೆ ಹಾನಿ ಉಂಟುಮಾಡುತ್ತಿದ್ದಾರೆ. ವಿದೇಶೀ ಹಣದ ದುರುಪಯೋಗ ಮಾಡುತ್ತಿದ್ದಾರೆ.

ನಾನು ಇಡೀ ದೇಶದ ಎಲ್ಲ ಸರ್ಕಾರಗಳನ್ನೂ ನೀವು ಹೀಗೆ ಅನ್ಯಾಯವಾಗುತ್ತಿರುವ ಸೀಮೆಎಣ್ಣೆಯನ್ನು ಉಳಿಸಿರಿ, ನಿಮಗೆ ಎಷ್ಟು ಹಣ ಉಳಿಯುವುದೋ, ಅದಕ್ಕಿಂತ ಹೆಚ್ಚಿನ ಹಣವನ್ನು ನಾನು ನಿಮಗೆ ಕೊಡುತ್ತೇನೆ, ಆದರೆ ಖಂಡಿತಾ ಉಳಿಸಬೇಕು ಎಂದು ಕೇಳಿಕೊಂಡೆ. ಇಂದು ಹರಿಯಾಣವು ಎಂಟು ಜಿಲ್ಲೆಗಳನ್ನು ಸೀಮೆಎಣ್ಣೆ ಮುಕ್ತವನ್ನಾಗಿ ಮಾಡಿದೆ, ಹಾಗೂ ಮಾರ್ಚಿ ತಿಂಗಳ ಒಳಗೆ ಪೂರ್ತಿ ಹರಿಯಾಣವನ್ನು ಸೀಮೆಎಣ್ಣೆಯ ಈ ಘೋರ ದಂಧೆ ಯಿಂದ ಮುಕ್ತ ಮಾಡಲಾಗುವುದು ಎಂಬುದಾಗಿ ನನಗೆ ಭರವಸೆ ನೀಡಿದ್ದಾರೆ. ಈ ಕಾರ್ಯದ ಕಾಯಕಲ್ಪಕ್ಕೆ ಸ್ವರ್ಣ ಜಯಂತಿಯ ಸಮಯಕ್ಕಿಂತ ಸೂಕ್ತ ಸಮಯ ಇನ್ಯಾವುದು?

ನನಗೆ ತುಂಬಾ ಸಂತಸತಂದ ವಿಷಯವೆಂದರೆ ಈ ಸ್ವರ್ಣ ಜಯಂತಿಯ ಸಮಯದಲ್ಲಿ ಸರಕಾರಿ ಕಾರ್ಯಕ್ರಮಗಳನ್ನೇನೂ ಹಾಕಿಕೊಂಡಿಲ್ಲ. ಇದನ್ನು ಜನತೆಯ ಒಂದು ಸಂಕಲ್ಪ ದಿನಾಚರಣೆಯ ರೂಪದಲ್ಲಿ ಆಚರಿಸಲಾಗುತ್ತಿದೆ. ಜನ-ಭಾಗಿದಾರಿಕೆಯಿಂದ ಹರಿಯಾಣವು ಹೇಗೆ ಮುಂದುವರೆಯಬೇಕು ? ಪ್ರತಿ ಹರಿಯಾಣಿಯೂ ಏನಾದರೂ ಕೊಡುಗೆ ನೀಡಬೇಕು. ಈ ಸ್ವರ್ಣ ಜಯಂತಿಯ ಸಂದರ್ಭದಲ್ಲಿ ಒಂದುವೇಳೆ ಹರಿಯಾಣದ ಪ್ರಜೆಯು ಒಂದು ಹೆಜ್ಜೆ ಮುಂದಿಟ್ಟರೆ, ಹರಿಯಾಣವು ಎರಡೂವರೆ ಕೋಟಿ ಹೆಜ್ಜೆ ಇಟ್ಟಂತಾಗುತ್ತದೆ . ಈ ಸ್ವರ್ಣ ಜಯಂತಿಯ ಸಂದರ್ಭದಲ್ಲಿ ಒಂದು ಬಾರಿ ಹರಿಯಾಣವು ಎರಡೂವರೆ ಕೋಟಿ ಹೆಜ್ಜೆ ಮುಂದಿಟ್ಟುಬಿಟ್ಟರೆ, ಹರಿಯಾಣಕ್ಕಿಂತ ಮುಂದೆ ನಡೆಯಲು ಹಿಂದೂಸ್ಥಾನದ ಯಾವ ರಾಜ್ಯಕ್ಕೆ ತಾನೆ ಸಾಧ್ಯ? ನೀವೇ ಹೇಳಿ .

ಹರಿಯಾಣದ ಜನತೆ ಈ ಬಗ್ಗೆ ಪ್ರತಿಜ್ಞೆ ಮಾಡಬೇಕೋ? ಬೇಡವೋ? ನಾವು ಹರಿಯಾಣವನ್ನು ನಂಬರ್ ಒಂದು ಆಗಿಸಲು ಪ್ರಯತ್ನ ಪಡಬೇಕೋ? ಬೇಡವೋ? ನಮ್ಮಲ್ಲಿರುವ ಸಾಮರ್ಥ್ಯದಿಂದ ನಾವು ಮುಂದಿದ್ದೇವೆ. ಆದರೆ ನಮ್ಮಲ್ಲಿ ಇನ್ನೂ ಅನೇಕ ಶಕ್ತಿಗಳಿವೆ, ಅವುಗಳನ್ನು ನಾವು ಇನ್ನೂ ಗುರುತಿಸಿಯೂ ಇಲ್ಲ. ನಮ್ಮ ಆ ಶಕ್ತಿಗಳನ್ನು ಗುರುತಿಸಿ , ನಾವು ಮಾತ್ರ ಮುಂದುವರೆಯೋಣ. ದೆಹಲಿ. ದೆಹಲಿಯ ಸುತ್ತಲೂ ನೀವೇ ಇದ್ದೀರಿ ಹರಿಯಾಣಿಗಳು, ಒಂದುವೇಳೆ ನೀವು ಮುಂದೆ ನಡೆದರೆ ದೆಹಲಿ ನಿಮ್ಮಿಂದ ಸ್ವಲ್ಪ ಹಿಂದೆ ಉಳಿಯಬಹುದು. ನಿಮ್ಮ ತಾಕತ್ತಿನ ಲಾಭದಿಂದ ದಿಲ್ಲಿಯೂ ಮುಂದುವರೆಯುತ್ತೆ, ದೇಶದ ರಾಜಧಾನಿಯದು, ಹಿಂದೂಸ್ಥಾನಕ್ಕೆ ಮುಂದುವರೆಯುವ ಅವಕಾಶ ನೀಡುವ ತಾಕತ್ತು ಹರಿಯಾಣಕ್ಕಿದೆ.

ಭೌಗೋಳಿಕವಾಗಿ ನೀವೆಂಥ ಜಾಗದಲ್ಲಿದ್ದೀರೆಂದರೆ, ನೀವು ದೇಶಕ್ಕೇ ತಾಕತ್ತು ಕೊಡಬಲ್ಲಿರಿ. ಇದಕ್ಕಾಗಿ ಸ್ವರ್ಣ ಜಯಂತಿಯ ಅವಕಾಶ ಆ ಹೊಸ ಗಡಿ-ರೇಖೆಗಳನ್ನು ದಾಟುವಂತದ್ದಾಗಿರಲಿ. ಜನಸಾಮಾನ್ಯರ ಸಂಕಲ್ಪದ್ದಾಗಿರಲಿ. ಬದಲಾವಣೆ ನಮ್ಮ ಹಳ್ಳಿಯಿಂದಲೇ ಆರಂಭವಾಗಲಿ. ಬದಲಾವಣೆ ನಮ್ಮ ಬಡಾವಣೆಯಿಂದಾಗಲಿ, ಇದರ ಪರಿಣಾಮವಾಗಿ ಸಂಪೂರ್ಣ ಹರಿಯಾಣದಲ್ಲಿ ಬದಲಾವಣೆಯ ಪ್ರಭಾವ ಉಂಟಾಗುವಂತೆ ಆಗಲಿ. ಒಂದುವೇಳೆ ಈ ಭಾವನೆಗಳೂಡನೆ ಸ್ವರ್ಣ ಜಯಂತಿಯನ್ನು ಆಚರಿಸುವುದಾದಲ್ಲಿ, ಅನೇಕ ಕಾರ್ಯಕ್ರಮಗಳನ್ನು ಮಾಡೋಣ, ಜನ ಭಾಗೀದಾರಿಕೆಯೊಡನೆ ಮಾಡೋಣ ಮತ್ತು ಈ ಕಾರ್ಯಕ್ರಮವನ್ನು, ಕಾರ್ಯಕ್ರಮಕ್ಕಾಗಿ ಅಲ್ಲ ಏನನ್ನಾದರೂ ಸಾಧಿಸಲಿಕ್ಕಾಗಿ, ಯಾವುದಾದರೊಂದು ಉದ್ದೇಶ್ಯ ಪೂರ್ತಿಗಾಗಿ ಮಾಡೋಣ.

ನೀವು ನೋಡಿರಿ . ಹರಿಯಾಣದಲ್ಲಿ ಎಷ್ಟು ತಾಕತ್ತಿದೆ ಎಂದು ನೀವು ನೋಡಿರಿ . ಎಷ್ಟು ತಾಕತ್ತಿದೆಯೆಂದರೆ ಆದು ದೇಶವನ್ನು ಇನ್ನೂ ಮುಂದೆ ತೆಗೆದುಕೊಂಡು ಹೋಗಲು ಒಂದು ಗ್ರೋಥ್ ಎಂಜಿನ್ ನ ರೂಪದಲ್ಲಿ ಕೆಲಸ ಮಾಡುತ್ತದೆ, ನಾನು ಮತ್ತೊಮ್ಮೆ ಪ್ರಪಂಚದಾದ್ಯಂತ ಹರಡಿಕೊಂಡಿರುವ ಹರಿಯಾಣವಾಸಿಗಳಿಗೆ, ಹರಿಯಾಣದಲ್ಲೇ ವಾಸಿಸುವ ಎಲ್ಲ ಪ್ರಜೆಗಳಿಗೆ. ಈ ಸ್ವರ್ಣ ಜಯಂತಿಯ ಅನೇಕಾನೇಕ ಶುಭಾಶಯ ಗಳನ್ನು ಕೋರುತ್ತಾ,ನಾವು ಶಾಂತಿ, ಸದ್ಭಾವನೆಯ ಮಂತ್ರವನ್ನಿಟ್ಟುಕೊಂಡು, ಹೆಗಲಿಗೆ ಹೆಗಲನ್ನಿತ್ತು, ಮಂಬರುವ ಜನಾಂಗದ ಸುಖೀ ಭವಿಷ್ಯಕ್ಕಾಗಿ ಸರಿಯಾದ ದಿಕ್ಕಿನಲ್ಲಿ ನಡೆಯೋಣ ಎಂದು ಹೇಳುತ್ತೇನೆ..

ಯಾವ ಕನಸನ್ನಿಟ್ಟುಕೊಂಡು ಹರಿಯಾಣವನ್ನು ರಚಿಸಲಾಯಿತೋ ಆ ಕನಸುಗಳನ್ನು ಸಾಕಾರಗೊಳಿಸುವುದಕ್ಕಾಗಿ ಒಂದು ದೊಡ್ಡ ಹೆಜ್ಜೆ ಇಡುವ ಉದ್ದೇಶ್ಯವನ್ನಿಟ್ಟುಕೊಂಡು ನಡೆಯೋಣ, ಹರಿಯಾಣಕ್ಕೆ ಈ ತಾಕತ್ತಿದೆ ಎಂಬುದು ನನ್ನ ಸಂಪೂರ್ಣ ನಂಬಿಕೆ. ಹರಿಯಾಣವು ಇದನ್ನು ಮಾಡಬಲ್ಲದು ಎಂಬುದು ನನ್ನ ಸಂಪೂರ್ಣ ವಿಶ್ವಾಸ. ಯಾರ ಮೇಲೆ ವಿಶ್ವಾಸವಿರುತ್ತದೆಯೋ ಅವರಿಂದ ಮಾತ್ರ ಏನನ್ನಾದರೂ ನಿರೀಕ್ಷಿಸಲು ಸಾಧ್ಯ.

ಸ್ವರ್ಣ ಜಯಂತಿಯ ಈ ಸಂದರ್ಭದಲ್ಲಿ ನೀವುಗಳು ಇನ್ನೂ ಹೊಸ ಎತ್ತರಕ್ಕೆ ಏರುವಿರಿ ಎಂಬ ವಿಶ್ವಾಸ ನನಗಿದೆ.
ನಿಮಗೆ ನನ್ನ ಅನೇಕಾನೇಕ ಶುಭ ಹಾರೈಕೆಗಳು.