Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಿಯವರ ಮುಂಬರುವ ಇಸ್ರೇಲ್ ಮತ್ತು ಜರ್ಮನಿ ಪ್ರವಾಸ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು 2017ರ ಜುಲೈ 4ರಿಂದ 6ರವರೆಗೆ ಇಸ್ರೇಲ್ ಗೆ ಭೇಟಿ ನೀಡಲಿದ್ದಾರೆ. 2017ರ ಜುಲೈ 6ರಿಂದ 8ರವರೆಗೆ ಪ್ರಧಾನಮಂತ್ರಿಯವರು ಜರ್ಮನಿಯ ಹ್ಯಾಂಬರ್ಗ್ ಗೂ ಭೇಟಿ ನೀಡಲಿದ್ದು, 12ನೇ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಫೇಸ್ ಬುಕ್ ನಲ್ಲಿ ಸರಣಿ ಪೋಸ್ಟ್ ಹಾಕಿರುವ ಪ್ರಧಾನಿಯವರು ಈ ಕೆಳಕಂಡಂತೆ ತಿಳಿಸಿದ್ದಾರೆ:

“ಪ್ರಧಾನಮಂತ್ರಿ ಬೆಂಜಿಮನ್ ನೆತನ್ಯಾಹು ಅವರ ಆಹ್ವಾನದ ಮೇರೆಗೆನಾನು 2017ರ ಜುಲೈ 4-6ರವರೆಗೆ ಇಸ್ರೇಲ್ ಗೆ ಭೇಟಿ ನೀಡುತ್ತಿದ್ದೇನೆ.

ಹೀಗೆ ಭೇಟಿ ನೀಡುತ್ತಿರುವ ಪ್ರಥಮ ಭಾರತದ ಪ್ರಧಾನಿಯಾಗಿದ್ದೇನೆ, ಎರಡೂ ದೇಶಗಳನ್ನು ಮತ್ತು ಜನರನ್ನು ಹತ್ತಿರಕ್ಕೆ ತರಲಿರುವ ಈ ಅಭೂತಪೂರ್ವ ಭೇಟಿಯನ್ನು ನಾನು ಎದಿರು ನೋಡುತ್ತಿದ್ದೇನೆ.

ಈ ವರ್ಷ ಭಾರತ ಮತ್ತು ಇಸ್ರೇಲ್ ತಮ್ಮ ರಾಜತಾಂತ್ರಿಕ ಬಾಂಧವ್ಯದ 25ನೇ ವರ್ಷ ಆಚರಿಸುತ್ತಿವೆ.

ನಾನು ಪ್ರಧಾನಮಂತ್ರಿ ನೇತನ್ಯಾಹು ಅವರೊಂದಿಗೆ ನಮ್ಮ ಪಾಲುದಾರಿಕೆಯ ಪೂರ್ಣ ಆಯಾಮಗಳ ಮತ್ತು ಪರಸ್ಪರರಿಗೆ ಲಾಭವಾಗುವ ವೈವಿಧ್ಯಮಯ ಕ್ಷೇತ್ರಗಳನ್ನು ಬಲಪಡಿಸುವ ಕುರಿತಂತೆ ಆಳವಾದ ಮಾತುಕತೆ ನಡೆಸಲಿದ್ದೇನೆ. ಪ್ರಮುಖ ಸಮಾನ ಸವಾಲಾಗಿರುವ ಭಯೋತ್ಪಾದನೆಯ ಕುರಿತೂ ಮಾತನಾಡುವ ಅವಕಾಶವಿದೆ.

ಕಳೆದ ವರ್ಷ ನವೆಂಬರ್ ನಲ್ಲಿ ನವದೆಹಲಿಯಲ್ಲಿ ಸ್ವಾಗತಿಸುವ ಅವಕಾಶ ಪಡೆದಿದ್ದ ಅಧ್ಯಕ್ಷ ರೆವೆನ್ ರುವಿ ರಿವ್ಲಿನ್ ಹಾಗೂ ಇತರ ಹಿರಿಯ ನಾಯಕರನ್ನೂ ಭೇಟಿ ಮಾಡಲಿದ್ದೇನೆ.

ಭೇಟಿಯ ಸಮಯದಲ್ಲಿ ನನ್ನ ಕಾರ್ಯಕ್ರಮಗಳು ನನಗೆ ಇಸ್ರೇಲಿ ಸಮಾಜದ ಎಲ್ಲ ವರ್ಗದೊಂದಿಗೆ ತೊಡಗಿಸಿಕೊಳ್ಳಲು ಅವಕಾಶ ನೀಡುತ್ತದೆ. ನಾನು ನಿರ್ದಿಷ್ಟವಾಗಿ ಎರಡೂ ದೇಶಗಳ ನಡುವಿನ ಜನರ ಸಂಪರ್ಕಕ್ಕೆ ನಿರಂತರ ಕೊಂಡಿಯಾಗಿರುವ ಇಸ್ರೇಲ್ ನಲ್ಲಿರುವ ದೊಡ್ಡ ಸಂಖ್ಯೆಯ ಚೈತನ್ಯದಾಯಕ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲು ಕಾತರಿಸುತ್ತಿದ್ದೇನೆ.

ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ, ನಾನು ಪ್ರಮುಖ ಭಾರತೀಯ ಮತ್ತು ಇಸ್ರೇಲಿ ಸಿ.ಇ.ಓ.ಗಳು ಮತ್ತು ನವೋದ್ಯಮಗಳೊಂದಿಗೆ ಸೇರಿ, ಹೂಡಿಕೆ ಮತ್ತು ವಾಣಿಜ್ಯ ಸಹಯೋಗದಲ್ಲಿ ನಮ್ಮ ಹಂಚಿಕೆಯ ಆದ್ಯತೆಗಳನ್ನು ವಿಸ್ತರಿಸುವ ಕುರಿತು ಚರ್ಚಿಸಲಿದ್ದೇನೆ. ಇದರ ಜೊತೆಗೆ, ಸ್ಥಳ ಭೇಟಿ ಮೂಲಕ ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿ ಇಸ್ರೇಲ್ ನ ಸಾಧನೆಗಳ ಒಳನೋಟಗಳನ್ನು ಕಾಣುತ್ತೇನೆಂದು ನಾನು ಭಾವಿಸುತ್ತೇನೆ.

ನನ್ನ ವಾಸ್ತವ್ಯದ ವೇಳೆ, ನಾನು, ಮಾನವ ಇತಿಹಾಸದಲ್ಲೇ ಅತ್ಯಂತ ದೊಡ್ಡ ದುರಂತಗಳಲ್ಲಿ ಒಂದೆಂದು ಪರಿಗಣಿಸಲಾಗುವ ಹತ್ಯಾಕಾಂಡದ ಸಂತ್ರಸ್ತರಿಗೆ ಗೌರವ ಸಲ್ಲಿಸಲು ನಾನು ಯಾದ್ ವಶೆಮ್ ಸ್ಮಾರಕ ಮ್ಯೂಸಿಯಂ ಗೆ ಭೇಟಿ ನೀಡಲಿದ್ದೇನೆ. ಬಳಿಕ, ನಾನು 1918ರಲ್ಲಿ ಹೈಫಾ ವಿಮೋಚನೆಯ ವೇಳೆ ಬಲಿದಾನಗೈದ ಪರಾಕ್ರಮಿ ಭಾರತೀಯ ಯೋಧರಿಗೆ ಗೌರವ ನಮನ ಸಲ್ಲಿಸಲಿದ್ದೇನೆ.

ಜುಲೈ 6ರ ಸಂಜೆ, ನಾನು ಜರ್ಮನಿ ಆತಿಥ್ಯ ವಹಿಸಿರುವ 12ನೇ ಜಿ-20 ಶೃಂಗದಲ್ಲಿ ಭಾಗಿಯಾಗಲು ಹ್ಯಾಂಬರ್ಗ್ ಭೇಟಿ ಆರಂಭಿಸಲಿದ್ದೇನೆ. ಎರಡು ದಿನಗಳ ಕಾಲ ಅಂದರೆ ಜುಲೈ 7 ಮತ್ತು 8ರಂದು, ನಾನು ಜಿ 20 ರಾಷ್ಟ್ರಗಳ ನಾಯಕರೊಂದಿಗೆ ಇಂದು ನಮ್ಮ ಜಗತ್ತಿನ ಆರ್ಥಿಕ ಪ್ರಗತಿ, ಸುಸ್ಥಿರ ಅಭಿವೃದ್ಧಿ ಮತ್ತು ಶಾಂತಿ ಹಾಗೂ ಸ್ಥಿರತೆಯ ಮೇಲೆ ಪರಿಣಾಮ ಬೀರುತ್ತಿರುವ ಪ್ರಮುಖ ವಿಚಾರಗಳ ಕುರಿತು ಮಾತುಕತೆ ನಡೆಸಲು ಎದಿರು ನೋಡುತ್ತಿದ್ದೇನೆ.

ಕಳೆದ ವರ್ಷ ಹ್ಯಾಂಗ್ ಝೌನಲ್ಲಿ ನಡೆದ ಶೃಂಗದಿಂದ ಇಲ್ಲಿನವರೆಗಿನ ಪ್ರಗತಿ ಮತ್ತು ಭಯೋತ್ಪಾದನೆ, ಹವಾಮಾನ, ಸುಸ್ಥಿರ ಅಭಿವೃದ್ಧಿ, ಪ್ರಗತಿ ಮತ್ತು ವಾಣಿಜ್ಯ, ಡಿಜಿಟಲೀಕರಣ, ಆರೋಗ್ಯ, ಉದ್ಯೋಗ, ವಲಸೆ, ಮಹಿಳಾ ಸಬಲೀಕರಣ ಮತ್ತು ಆಫ್ರಿಕಾದೊಂದಿಗಿನ ಪಾಲುದಾರಿಕೆ ಕುರಿತು ನಡೆದಿದ್ದ ಚಿಂತನೆಗಳನ್ನು ನಾವು ಪರಾಮರ್ಶಿಸಲಿದ್ದೇವೆ. ಈ ವರ್ಷ ಆಯ್ಕೆ ಮಾಡಲಾಗಿರುವ ಧ್ಯೇಯ ವಾಕ್ಯ‘ಅಂತರ ಸಂಪರ್ಕಿತ ವಿಶ್ವವನ್ನು ರೂಪುಗೊಳಿಸುವುದು’ ಎಂಬುದಾಗಿದೆ.

ಹಿಂದಿನಂತೆ, ಶೃಂಗಸಭೆಯ ವೇಳೆ ನಾಯಕರುಗಳನ್ನು ಭೇಟಿ ಮಾಡಿ, ಪರಸ್ಪರ ಹಿತಕ್ಕೆ ಸಂಬಂಧಿಸಿದ ದ್ವಿಪಕ್ಷೀಯ ಮಾತುಕತೆ ನಡೆಸಲು ಮತ್ತು ಅಭಿಪ್ರಾಯ ಹಂಚಿಕೊಳ್ಳಲು ಎದಿರು ನೋಡುತ್ತಿದ್ದೇನೆ.”

***

AKT/AK