Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಿ.ಎನ್. ಪಣಿಕ್ಕರ್ ಓದುವ ದಿನ – ಓದುವ ಮಾಸದ ಆಚರಣೆಯ ಉದ್ಘಾಟನೆ ವೇಳೆ ಪ್ರಧಾನಮಂತ್ರಿಯವರ ಭಾಷಣ

s20170617107706


ಓದುವ ಮಾಸದ ಆಚರಣೆಯ ಈ ಸಂದರ್ಭದಲ್ಲಿ ಇಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸದ ವಿಷಯವಾಗಿದೆ. ಇದನ್ನು ಆಯೋಜಿಸಿರುವುದಕ್ಕಾಗಿ ನಾನು ಪಿ.ಎನ್. ಪಣಿಕ್ಕರ್ ಪ್ರತಿಷ್ಠಾನಕ್ಕೆ ಧನ್ಯವಾದಗಳನ್ನು ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಓದುವುದಕ್ಕಿಂತ ದೊಡ್ಡ ಆನಂದ ಮತ್ತೊಂದಿಲ್ಲ ಮತ್ತು ಅರಿವಿಗಿಂತ ಮಿಗಿಲಾದ ಬಲ ಯಾವುದೂ ಇಲ್ಲ.

ಸ್ನೇಹಿತರೆ,

ಸಾಕ್ಷರತೆಯ ಕ್ಷೇತ್ರದಲ್ಲಿ ಕೇರಳ ಇಡೀ ದೇಶಕ್ಕೇ ದಾರಿದೀಪವಾಗಿದೆ ಮತ್ತು ಸ್ಫೂರ್ತಿಯಾಗಿದೆ.

ಪ್ರತಿಶತ 100ರಷ್ಟು ಸಾಕ್ಷರತೆ ಹೊಂದಿದ ಪ್ರಥಮ ನಗರ ಮತ್ತು ನೂರಕ್ಕೆ ನೂರು ಸಾಕ್ಷರತೆ ಹೊಂದಿದ ಪ್ರಥಮ ಜಿಲ್ಲೆ ಕೇರಳದ್ದಾಗಿದೆ. ಶತ ಪ್ರತಿಶತ ಪ್ರಾಥಮಿಕ ಶಿಕ್ಷಣ ಗಳಿಸಿದ ಪ್ರಥಮ ರಾಜ್ಯ ಕೇರಳವೇ ಆಗಿದೆ. ದೇಶದ ಕೆಲವು ಅತ್ಯಂತ ಹಳೆಯ ಕಾಲೇಜು, ಶಾಲೆ ಮತ್ತು ಗ್ರಂಥಾಲಯಗಳು ಕೇರಳದಲ್ಲಿ ಸ್ಥಾಪಿತವಾಗಿವೆ.

ಇದನ್ನು ಸರ್ಕಾರದಿಂದ ಮಾತ್ರವೇ ಸಾಧಿಸಲು ಸಾಧ್ಯವಿಲ್ಲ. ಈ ಗಮನಾರ್ಹ ಸಾಧನೆಯಲ್ಲಿ ಸಾಮಾಜಿಕ ಸಂಘಟನೆಗಳು ಮತ್ತು ನಾಗರಿಕರೂ ಸಕ್ರಿಯ ಪಾತ್ರ ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಜನರ ಪಾಲ್ಗೊಳ್ಳುವಿಕೆಯಲ್ಲಿ ಕೇರಳ ಒಂದು ಉದಾಹರಣೆಯಾಗಿದೆ. ನಾನು ದಿವಂಗತ ಶ್ರೀ. ಪಿ.ಎನ್. ಪಣಿಕ್ಕರ್ ರಂಥ ವ್ಯಕ್ತಿಗಳು ಮತ್ತು ಅವರ ಪ್ರತಿಷ್ಠಾನದ ಕಾರ್ಯವನ್ನು ಶ್ಲಾಘಿಸುತ್ತೇನೆ. ಶ್ರೀ. ಪಿ.ಎನ್. ಪಣಿಕ್ಕರ್ ಕೇರಳದಲ್ಲಿ ಗ್ರಂಥಾಲಯ ಜಾಲದ ಹಿಂದಿನ ಸ್ಫೂರ್ತಿಯಾಗಿದ್ದಾರೆ. ಅವರು ಕೇರಳ ಗ್ರಂದಶಾಲ ಸಂಗಮದ ಮೂಲಕ 1945ರಲ್ಲಿ 47 ಗ್ರಾಮೀಣ ಗ್ರಂಥಾಲಯಗಳನ್ನು ಸ್ಥಾಪಿಸಿದ್ದಾರೆ.

ನಮ್ಮ ಕೆಲಸಕ್ಕೆ ಸಂಬಂಧಿಸಿದ ವಿಚಾರಗಳಿಗಷ್ಟೇ ಓದುವುದು ಮತ್ತು ಜ್ಞಾನ ಸೀಮಿತವಾಗಬಾರದು ಎಂದು ನಾನು ಭಾವಿಸುತ್ತೇನೆ. ಅದು ಸಾಮಾಜಿಕ ಜವಾಬ್ದಾರಿ, ದೇಶಸೇವೆ ಮತ್ತು ಮಾನವತೆಯ ಸೇವೆ ಮಾಡುವ ಮನೋಭಾವ ಅಭಿವೃದ್ಧಿ ಪಡಿಸಲೂ ನೆರವಾಗಬೇಕು. ಇದು ದೇಶದ ಹಾಗೂ ಸಮಾಜದಲ್ಲಿರುವ ಪಿಡುಗುಗಳನ್ನು ಗುಣಪಡಿಸುವಂತಿರಬೇಕು. ಇದು ಶಾಂತಿಯ ಜೊತೆಗೆ ದೇಶದ ಏಕತೆ, ಸಮಗ್ರತೆಗೆ ಗೌರವ ನೀಡುವ ಕಲ್ಪನೆಯನ್ನೂ ಪ್ರಸಾರ ಮಾಡಬೇಕು.
ಒಬ್ಬ ಶಿಕ್ಷಿತ ಮಹಿಳೆ ಎರಡು ಕುಟುಂಬವನ್ನು ಸಾಕ್ಷರಗೊಳಿಸುತ್ತಾಳೆ ಎಂಬ ಮಾತಿದೆ. ಕೇರಳ ಈ ನಿಟ್ಟಿನಲ್ಲಿ ಮಾದರಿಯಾಗಿದೆ.
ಪಿ.ಎನ್. ಪಣಿಕ್ಕರ್ ಪ್ರತಿಷ್ಠಾನವು ವಿವಿಧ ಸರ್ಕಾರಿ ಸಂಸ್ಥೆಗಳು, ಖಾಸಗಿ ವಲಯದ ಕಾಯಗಳು ಮತ್ತು ನಾಗರಿಕ ಸಮಾಜದ ಸಂಘಟನೆಗಳೊಡಗೂಡಿ ಓದುವ ಉಪಕ್ರಮ ಆರಂಭಿಸುತ್ತಿದೆ ಎಂದು ನಾನು ತಿಳಿದಿದ್ದೇನೆ. 2022ರಹೊತ್ತಿಗೆ 300 ದಶಲಕ್ಷ ತಲುಪುವುದು ಅರ ಗುರಿಯಾಗಿದೆ. ಈ ಅಭಿಯಾನದ ಮುಖ್ಯ ಉದ್ದೇಶ ಪ್ರಗತಿ ಮತ್ತು ಸಮೃದ್ಧಿಯ ಸಾಧನವಾಗಿ ಓದನ್ನು ಉತ್ತೇಜಿಸುವುದಾಗಿದೆ. ಓದುವುದು ಒಬ್ಬರ ಚಿಂತನೆಗಳನ್ನು ವಿಸ್ತಾರಗೊಳಿಸುತ್ತದೆ. ಉತ್ತಮವಾಗಿ ಓದಿದ ಜನರು ಭಾರತ ಜಾಗತಿಕವಾಗಿ ಔನ್ನತ್ಯ ಸಾಧಿಸಲು ನೆರವಾಗುತ್ತಾರೆ.

ಇದೇ ಸ್ಪೂರ್ತಿಯೊಂದಿಗೆ, ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇದೇ ರೀತಿಯ ವಾಂಚೇ ಗುಜರಾತ್ ಎಂಬ ಹೆಸರಿನ ಅಭಿಯಾನ ಮಾಡಿದ್ದೆ. ಇದರ ಅರ್ಥ ” ಓದು ಗುಜರಾತ್”. ನಾನು ಜನರಿಗೆ ಉತ್ತೇಜನ ನೀಡಲು ಸಾರ್ವಜನಿಕ ಗ್ರಂಥಾಲಯವೊಂದಕ್ಕೆ ಹೋಗಿದ್ದೆ. ಈ ಚಳವಳಿ ನಿರ್ದಿಷ್ಟವಾಗಿ ಯುವ ಪೀಳಿಗೆಯನ್ನು ಗುರಿಯಾಗಿಟ್ಟುಕೊಂಡಿತ್ತು. ನಾನು ಸಾರ್ವಜನಿಕರಿಗೆ ತಮ್ಮ ತಮ್ಮ ಹಳ್ಳಿಗಳಲ್ಲಿ ‘ಗ್ರಂಥ ಮಂದಿರ’ ಅಂದರೆ ಪುಸ್ತಕಗಳ ದೇವಾಲಯ ನಿರ್ಮಿಸುವ ನಿಟ್ಟಿನಲ್ಲಿ ಚಿಂತಿಸುವಂತೆ ಮನವಿ ಮಾಡಿದ್ದೆ. ಇದು 50 ಅಥವಾ 100 ಪುಸ್ತಕದಿಂದ ಆರಂಭವಾಗಲಿ.

ನಾನು ಹೂಗುಚ್ಛದ ಬದಲು ಒಂದು ಪುಸ್ತಕವನ್ನು ನೀಡುವಂತೆ ಮನವಿ ಮಾಡಿದ್ದೆ. ಇಂಥ ನಿರ್ಧಾರಗಳು ದೊಡ್ಡ ಬದಲಾವಣೆ ತರುತ್ತವೆ.
ಸ್ನೇಹಿತರೇ,

ಉಪನಿಷತ್ತಿನ ಕಾಲದಿಂದಲೂ ಜ್ಞಾನಿಗಳನ್ನು ಯುಗಗಳಿಂದ ಗೌರವಿಸಲಾಗುತ್ತಿದೆ. ನಾವು ಈಗ ಮಾಹಿತಿಯ ಯುಗದಲ್ಲಿದ್ದೇವೆ. ಇಂದಿಗೂ ಜ್ಞಾನವೇ ಉತ್ತಮ ದಾರಿ ದೀಪ. ಡಿಜಿಟಲ್ ಗ್ರಂಥಾಲಯದ ಪ್ರಾಯೋಗಿಕ ಯೋಜನೆಗಾಗಿ ಪಣಿಕ್ಕರ್ ಪ್ರತಿಷ್ಠಾನವು ದೆಹಲಿಯ ಭಾರತೀಯ ಗ್ರಂಥಾಲಯ ಚಳವಳಿಯ ಸಹಯೋಗದಲ್ಲಿ ರಾಜ್ಯದ 18 ಸಾರ್ವಜನಿಕ ಗ್ರಂಥಾಲಯಗಳೊಂದಿಗೆ ಶ್ರಮಿಸುತ್ತಿದೆ.
ಇಡೀ ದೇಶದಲ್ಲಿ ಇಂಥ ಓದುವ ಮತ್ತು ಗ್ರಂಥಾಲಯ ಚಳವಳಿಯನ್ನು ನೋಡಲು ಬಯಸುತ್ತೇನೆ. ಈ ಚಳವಳಿಯು ಜನರನ್ನು ಸಾಕ್ಷರರನ್ನಾಗಿಸಲಷ್ಟೇ ಸೀಮಿತವಾಗಿರಬಾರದು. ಇದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯನ್ನು ತರುವ ನೈಜ ಗುರಿ ಸಾಧನೆಗಾಗಿ ಪ್ರಯತ್ನಿಸಬೇಕು. ಉತ್ತಮ ಜ್ಞಾನದ ತಳಹದಿಯು ಉತ್ತಮ ಸಮಾಜದ ಉತ್ತಮ ವಿನ್ಯಾಸವನ್ನು ಹೊಂದಿರಬೇಕು.
ರಾಜ್ಯ ಸರ್ಕಾರ ಜೂನ್ 19ನ್ನು ಓದುವ ದಿನ ಎಂದು ಘೋಷಿಸಿರುವುದನ್ನು ಕೇಳಿ ಸಂತೋಷವಾಯಿತು. ಸಹಜವಾಗಿಯೇ ಈ ಚಟುವಟಿಕೆಯನ್ನು ಜನಪ್ರಿಯಗೊಳಿಸಲು ಹಲವು ಪ್ರಯತ್ನ ನಡೆದಿರುತ್ತದೆ.

ಭಾರತ ಸರ್ಕಾರ ಕೂಡ ಈ ಪ್ರತಿಷ್ಠಾನದ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದೆ. 1 ಕೋಟಿ 20 ಲಕ್ಷ ರೂಪಾಯಿಗಳನ್ನು ಕಳೆದ ಎರಡು ವರ್ಷದಲ್ಲಿ ಪ್ರತಿಷ್ಠಾನಕ್ಕೆ ನೀಡಲಾಗಿದೆ ಎಂದು ನನಗೆ ತಿಳಿಸಲಾಗಿದೆ.

ಈಗ ಪ್ರತಿಷ್ಠಾನವು ಡಿಜಿಟಲ್ ಸಾಕ್ಷರತೆಯತ್ತ ಗಮನ ಹರಿಸಿರುವುದು ನನಗೆ ಸಂತಸ ತಂದಿದೆ. ಇದು ಈ ಹೊತ್ತಿನ ಅಗತ್ಯವಾಗಿದೆ.
ಸ್ನೇಹಿತರೇ,

ನಾನು ಜನಶಕ್ತಿಯಲ್ಲಿ ನಂಬಿಕೆ ಇಟ್ಟಿದ್ದೇನೆ. ಇದು ಉತ್ತಮ ಸಮಾಜ ಮತ್ತು ರಾಷ್ಟ್ರ ನಿರ್ಮಾಣ ಮಾಡುವ ಸಾಮರ್ಥ್ಯ ಹೊಂದಿದೆ.
ನಾನು ಈ ಸಭೆಯಲ್ಲಿರುವ ಎಲ್ಲ ಯುವಜನರಿಗೆ ಓದುವ ಸಂಕಲ್ಪ ಮಾಡುವಂತೆ ಮನವಿ ಮಾಡುತ್ತೇನೆ ಮತ್ತು ಹಾಗೆ ಮಾಡಲು ಅವಕಾಶ ಮಾಡಿಕೊಡಿ ಎಂದು ಎಲ್ಲರಿಗೂ ತಿಳಿಸುತ್ತೇನೆ.

ಒಟ್ಟಾಗಿ, ನಾವೆಲ್ಲರೂ ಮತ್ತೆ ಭಾರತವನ್ನು ಜ್ಞಾನದ ಮತ್ತು ಬುದ್ಧಿವಂತಿಕೆಯ ನಾಡಾಗಿ ಮಾಡೋಣ.

ಧನ್ಯವಾದಗಳು!

*****

AKT/SH