ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಜರ್ಮನಿಯ ನಡುವೆ ಪರ್ಯಾಯ ವೈದ್ಯಕೀಯ ವಲಯದ ಸಹಕಾರ ಉದ್ದೇಶ(ಜೆಡಿಐ)ಕ್ಕೆ ಸಂಬಂಧಿಸಿದ ಜಂಟಿ ಘೋಷಣೆಗೆ ತನ್ನ ಅನುಮೋದನೆ ನೀಡಿದೆ.
ಜೆಡಿಐಗೆ ಅಂಕಿತ ಹಾಕುವುದರಿಂದ ಎರಡೂ ದೇಶಗಳ ನಡುವೆ ಸಾಂಪ್ರದಾಯಿಕ/ಪರ್ಯಾಯ ವೈದ್ಯಕೀಯ ಕ್ಷೇತ್ರದಲ್ಲಿನ ದ್ವಿಪಕ್ಷೀಯ ಸಹಕಾರ ಹೆಚ್ಚಳವಾಗಲಿದೆ. ಅಲ್ಲದೆ ಪರ್ಯಾಯ ವೈದ್ಯಕೀಯ ಸಹಯೋಗದ ಸಂಶೋಧನೆ, ತರಬೇತಿ ಮತ್ತು ವೈಜ್ಞಾನಿಕ ಸಾಮರ್ಥ್ಯ ವರ್ಧನೆಯ ಪ್ರಯತ್ನದೊಂದಿಗೆ ಜೆಡಿಐ ಅಡಿಯಲ್ಲಿ ಎರಡೂ ದೇಶಗಳು ಆಯುಷ್ ವಲಯದಲ್ಲಿ ಉದ್ಯೋಗಾವಕಾಶಗಳ ಹೆಚ್ಚಳಕ್ಕೆ ಕೊಡುಗೆ ನೀಡಲಿವೆ.
ಇದರಿಂದ ಯಾವುದೇ ಹೆಚ್ಚುವರಿ ಆರ್ಥಿಕ ಪರಿಣಾಮ ಇರುವುದಿಲ್ಲ. ಸಂಶೋಧನೆ ನಡೆಸಲು, ತರಬೇತಿ ಕೋರ್ಸ್, ಸಮಾವೇಶ/ಸಭೆಗೆ ತಗಲುವ ಆರ್ಥಿಕ ಸಂಪನ್ಮೂಲವನ್ನು ಹಾಲಿ ಹಂಚಿಕೆ ಮಾಡಿರುವ ಹಣದಲ್ಲಿ ಮತ್ತು ಆಯುಷ್ ಸಚಿವಾಲಯದ ಪ್ರಸಕ್ತ ಯೋಜನೆಗಳಿಂದ ಭರಿಸಲಾಗುತ್ತದೆ.
ಹಿನ್ನೆಲೆ:
ಭಾರತವು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳಲ್ಲಿ ಅಭಿವೃದ್ಧಿ ಹೊಂದಿದೆ. ಅದಕ್ಕೆ ಜಾಗತಿಕ ಆರೋಗ್ಯ ಸನ್ನಿವೇಶದಲ್ಲಿ ಅದ್ಭುತ ಸಾಮರ್ಥ್ಯವೂ ಇದೆ. ಜರ್ಮನಿ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದೆ. ಆಯುಷ್ ಸಚಿವಾಲಯ ಭಾರತೀಯ ವೈದ್ಯ ಪದ್ಧತಿಯನ್ನು ಜಾಗತಿಕವಾಗಿ ಪ್ರಚಾರ ಮಾಡುವ ತನ್ನ ಕಡ್ಡಾಯ ಕಾರ್ಯಕ್ರಮದ ಭಾಗವಾಗಿ, ಚೀಣಾ, ಮಲೇಷಿಯಾ, ಟ್ರಿನಿಡ್ಯಾಡ್ ಮತ್ತು ಟೋಬ್ಯಾಗೋ, ಹಂಗೇರಿ, ಬಾಂಗ್ಲಾದೇಶ, ನೇಪಾಳ, ಮಾರಿಷಸ್, ಮಂಗೋಲಿಯಾ ಮತ್ತು ಮಯನ್ಮಾರ್ ನಡುವೆ ತಿಳಿವಳಿಕೆ ಒಪ್ಪಂದದ ಮೂಲಕ ಪರಿಣಾಮಕಾರಿ ಹೆಜ್ಜೆ ಇಟ್ಟಿದೆ.
ಸಚಿವಾಲಯವು ಬರ್ಲಿನ್ ನಲ್ಲಿರುವ ಭಾರತೀಯ ಧೂತಾವಾಸದ ಶಿಫಾರಸು ಮತ್ತು ಸಹಕಾರದಿಂದ ಜರ್ಮನಿಯಲ್ಲಿ ಆಯುರ್ವೇದದ ಪ್ರೋತ್ಸಾಹಕ್ಕೆ ಹಲವು ಕ್ರಮ ಕೈಗೊಂಡಿದೆ. ಈ ಪೈಕಿ ಒಂದು ಪ್ರಮುಖ ಹೆಜ್ಜೆ ಎಂದರೆ, ಮೊಣಕಾಲಿನ ಅಸ್ಥಿ ಸಂದಿವಾತ ಕುರಿತಂತೆ ಆಯುರ್ವೇದ ವಿಜ್ಞಾನದ ಸಂಶೋಧನೆಯ ಕೇಂದ್ರೀಯ ಮಂಡಳಿ (ಸಿಸಿಆರ್.ಎ.ಎಸ್.) ಮತ್ತು ಬರ್ಲಿನ್ ನ ಚರೈಟ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸಹಯೋಗಿ ಸಂಶೋಧನಾ ಯೋಜನೆ ಕೈಗೊಂಡಿರುವುದು. ಈ ಪ್ರಯತ್ನದ ಫಲಿತಾಂಶ ಉತ್ತೇಜನಕಾರಿಯಾಗಿದೆ ಮತ್ತು ವೈದ್ಯಕೀಯ ಪ್ರಯೋಗದಲ್ಲಿ ರೋಗಿಗಳಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. ಈ ಅಧ್ಯಯನ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಪ್ರಕಟಣೆಯ ಹಂತದಲ್ಲಿದೆ.
ಆಯುಷ್ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ) ಶ್ರೀ. ಶ್ರೀಪಾದ್ ಯಸ್ಸೋ ನಾಯಕ್ ನೇತೃತ್ವದ ನಿಯೋಗ 2016ರ ಅಕ್ಟೋಬರ್ 15-19ರವರೆಗೆ ಜರ್ಮನ್ ಗೆ ಭೇಟಿ ನೀಡಿ, 2ನೇ ಐರೋಪ್ಯ ವಿಶ್ವ ಆಯುರ್ವೇದ ಕಾಂಗ್ರೇಸ್ (ಇಡಬ್ಲ್ಯುಎಸಿ)ಯಲ್ಲಿ ಪಾಲ್ಗೊಂಡಿತ್ತು ಮತ್ತು ಜರ್ಮನಿಯ ಪ್ರಾಧಿಕಾರಗಳೊಂದಿಗೆ ಮಾತುಕತೆ ನಡೆಸಿತ್ತು. ಈ ಕಾಂಗ್ರೆಸ್ ಗೆ ಆಯುಷ್ ಸಚಿವಾಲಯ ಬೆಂಬಲ ನೀಡಿತ್ತು. ಈ ಭೇಟಿಯ ಕಾಲದಲ್ಲಿ ಆಯುಷ್ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ) ರೊಂದಿಗೆ ಸಂಸದೀಯ ರಾಜ್ಯ ಕಾರ್ಯದರ್ಶಿ ಶ್ರೀಮತಿ ಇನ್ಗ್ರಿಡ್ ಫಿಸ್ಚಬಚ್ ದ್ವಿಪಕ್ಷೀಯ ಸಭೆ ನಡೆಸಿದ್ದರು, ಈ ವೇಳೆ ಎರಡೂ ಕಡೆಯವರು ಆಯುಷ್ ಮತ್ತು ಸ್ವಾಭಾವಿಕ ವೈದ್ಯ ಕ್ಷೇತ್ರದಲ್ಲಿ ಜೆಡಿಐಗೆ ಮಾತುಕತೆ ಮತ್ತು ಕರಡು ಸಿದ್ಧಪಡಿಸುವ ಪ್ರಕ್ರಿಯೆಗೆ ಒಪ್ಪಿಗೆ ಸೂಚಿಸಿದ್ದರು. ಈ ಜೆಡಿಐ ಭಾರತ-ಜರ್ಮನಿ ಬಾಂಧವ್ಯಕ್ಕೆ ಚೈತನ್ಯ ನೀಡಲಿದ್ದು, ಎರಡು ರಾಷ್ಟ್ರಗಳ ನಡುವಿನ ಸಹಕಾರ ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ.
*******
AKT/SH