ಪ್ರಶ್ನೆ 1: | ಒಂದು ಕುಂದುಕೊರತೆಗೆ ಸಂಬಂಧಿಸಿದ ನನ್ನ ಅರ್ಜಿಯನ್ನು ನಾನು ಮಾನ್ಯ ಪ್ರಧಾನಮಂತ್ರಿಯವರಿಗೆ ಸಲ್ಲಿಸಬೇಕೆಂದಿದ್ದೇನೆ. ದಯವಿಟ್ಟು, ಇದರ ವಿಧಿವಿಧಾನವನ್ನು ತಿಳಿಸಿರಿ.
ನಾನು ನನ್ನ ಈ ಅರ್ಜಿಯನ್ನು ಪ್ರಧಾನಮಂತ್ರಿ ಅವರ ಕಾರ್ಯಾಲಯದಲ್ಲಿ ದಾಖಲಿಸುವುದು ಹೇಗೆ? ಪ್ರಧಾನಮಂತ್ರಿ ಅವರ ಕಚೇರಿಯಲ್ಲಿ ನಾನು ಈ ಅರ್ಜಿಯನ್ನು ಎಲ್ಲಿಗೆ ಕಳುಹಿಸಬೇಕು? ನಾನು ಈ ಅರ್ಜಿಯನ್ನು ನೇರವಾಗಿ ಮಾನ್ಯ ಪ್ರಧಾನಮಂತ್ರಿ ಅವರಿಗೆ ಸಲ್ಲಿಸಬಹುದೇ ಅಥವಾ ಅವರಿಗೆ ಆನ್ ಲೈನ್ ಮೂಲಕ ಕಳುಹಿಸಬಹುದೇ? |
ಉತ್ತರ: | ಮಾನ್ಯ ಪ್ರಧಾನಮಂತ್ರಿಗಳ ಕಚೇರಿಯ ವೆಬ್ ಸೈಟ್ ಆದ https://www.pmindia.gov.in/ ನಲ್ಲಿ `ರೈಟ್ ಟು ದಿ ಪ್ರೈಮ್ ಮಿನಿಸ್ಟರ್’ ಎಂಬ ಇಂಟರ್ ಆಕ್ಟೀವ್ ಪೇಜಿನ ಕೊಂಡಿ (ಲಿಂಕ್) ಇದೆ. ಇದರ ಮೆನುವಿನಲ್ಲಿ ಕೆಳಭಾಗದಲ್ಲಿ -> ಇಂಟರ್ ಆಕ್ಟ್ ವಿತ್ ಹಾನರಬಲ್ ಪ್ರೈಮ್ ಮಿನಿಸ್ಟರ್’(-> ಪ್ರಧಾನ ಮಂತ್ರಿಯವರೊಂದಿಗೆ ಸಂವಾದ ) ಎಂದಿದೆ. ಅಲ್ಲದೆ, ಇದರಲ್ಲಿ -> ರೈಟ್ ಟು ದಿ ಪ್ರೈಮ್ ಮಿನಿಸ್ಟರ್ (->ಪ್ರಧಾನಿಯವರಿಗೊಂದು ಪತ್ರ). ಎಂಬ ಸೌಲಭ್ಯವೂ ಇದೆ. ಈ ಲಿಂಕ್ (ಕೊಂಡಿ) ಮಾನ್ಯ ಪ್ರಧಾನಮಂತ್ರಿ ಅವರ ಕಾರ್ಯಾಲಯದ ವೆಬ್ ಸೈಟ್ ನ [https://www.pmindia.gov.in/] ಹೋಮ್ ಪೇಜ್ ನಲ್ಲೂ ಲಭ್ಯವಿದೆ. ಇದನ್ನು ಉಪಯೋಗಿಸಿಕೊಂಡು ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು/ಕುಂದುಕೊರತೆಯ ಅರ್ಜಿಗಳನ್ನು ಮಾನ್ಯ ಪ್ರಧಾನಮಂತ್ರಿಗಳಿಗೆ/ ಪ್ರಧಾನಮಂತ್ರಿ ಅವರ ಕಚೇರಿಗೆ ಸಲ್ಲಿಸಬಹುದು. ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಸಾರ್ವಜನಿಕರು CPGRAMS ಪುಟಕ್ಕೆ ಹೋಗಬೇಕು. ಅಲ್ಲಿ ನೀವು ನಿಮ್ಮ ಸಮಸ್ಯೆ/ಕುಂದುಕೊರತೆಯನ್ನು ದಾಖಲಿಸಬೇಕು. ನಂತರ ಅದು ನಿಮಗೊಂದು ನೋಂದಣಿ ಸಂಖ್ಯೆಯನ್ನು ಕೊಡುತ್ತದೆ. ಇದಲ್ಲದೆ, ಸಾರ್ವಜನಿಕರು ತಮ್ಮ ಕುಂದುಕೊರತೆಗಳಿಗೆ ಸಂಬಂಧಿಸಿದ ಸರಿಯಾದ ದಾಖಲೆಗಳನ್ನು ಅಪ್ ಲೋಡ್ ಮಾಡಲು ಕೂಡ ಅವಕಾಶವಿದೆ. ಇವುಗಳ ಜೊತೆಗೆ ನಿಮ್ಮ ಸಮಸ್ಯೆಗಳನ್ನು ಇನ್ನೂ ಅನೇಕ ವಿಧಗಳಲ್ಲಿ ಮಾನ್ಯ ಪ್ರಧಾನಮಂತ್ರಿ ಅವರ ಕಚೇರಿಗೆ ತಲುಪಿಸಬಹುದು. ಅವು ಹೀಗಿವೆ:(i) ಅಂಚೆ ಮೂಲಕವಾದರೆ `ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಾಲಯ, ಸೌತ್ ಬ್ಲಾಕ್, ನವ ದೆಹಲಿ-110011′ ಈ ವಿಳಾಸಕ್ಕೆ ಕಳುಹಿಸಬಹುದು. (ii) ಖುದ್ದಾಗಿ ತಲುಪಿಸುವುದಾದರೆ `ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಾಲಯದ ಅಂಚೆ ಕೌಂಟರ್, ಸೌತ್ ಬ್ಲಾಕ್, ಹೊಸದೆಹಲಿ-110011′ ಇಲ್ಲಿ ಕೊಡಿ. (iii) ಫ್ಯಾಕ್ಸ್ ಮೂಲಕ ಕಳುಹಿಸುವುದಾದರೆ `ಫ್ಯಾಕ್ಸ್ ಸಂಖ್ಯೆ 011-23016857′ ಇಲ್ಲಿಗೆ ರವಾನಿಸಿ. |
ಪ್ರಶ್ನೆ 2: | ನನಗೆ ಕೆಲವು ಒಳ್ಳೆಯ ಚಿಂತನೆಗಳು/ಆಲೋಚನೆಗಳು ಇವೆ. ಇವುಗಳನ್ನು ನಾನು ಮಾನ್ಯ ಪ್ರಧಾನಮಂತ್ರಿಗಳೊಂದಿಗೆ ಹಂಚಿಕೊಳ್ಳುವುದು ಹೇಗೆ? ಹಾಗೆಯೇ, ಮಾನ್ಯ ಪ್ರಧಾನಮಂತ್ರಿ ಅವರಿಗೆ ನಾನು ಕೆಲವು ಸಲಹೆಗಳನ್ನು ಕೊಡಬೇಕೆಂದಿದ್ದೇನೆ. ಇದಕ್ಕಿರುವ ವಿಧಿವಿಧಾನಗಳೇನು? |
ಉತ್ತರ: | ನಾಗರಿಕರು ತಮ್ಮಲ್ಲಿರುವ ರಚನಾತ್ಮಕ/ಒಳ್ಳೆಯ ಆಲೋಚನೆಗಳನ್ನು ಅಥವಾ ಚಿಂತನೆಗಳನ್ನು ಮಾನ್ಯ ಪ್ರಧಾನಮಂತ್ರಿಯವರೊಂದಿಗೆ/ ಅವರ ಕಾರ್ಯಾಲಯದೊಂದಿಗೆ ಹಂಚಿಕೊಳ್ಳಬಹುದು. ಇದಕ್ಕಾಗಿ ಸಾರ್ವಜನಿಕರು ಪ್ರಧಾನಮಂತ್ರಿಗಳ ಕಾರ್ಯಾಲಯದ ವೆಬ್ ಸೈಟಿನ ಹೋಮ್ ಪೇಜ್ ನಲ್ಲಿರುವ “ಶೇರ್ ಯುವರ್ ಐಡಿಯಾಸ್, ಇನ್ ಸೈಟ್ಸ್ ಅಂಡ್ ಥಾಟ್ಸ್” ಎಂಬ ಲಿಂಕ್ ಅನ್ನು ಉಪಯೋಗಿಸಿಕೊಳ್ಳಬಹುದು. ಇದು https://www.pmindia.gov.in/ -> ಪ್ರಧಾನ ಮಂತ್ರಿಯವರೊಂದಿಗೆ ಸಂವಾದ ಇಲ್ಲಿ ಸಿಗುತ್ತದೆ. ಇದರಲ್ಲಿ ಮೆನುವಿನ ಕೆಳಭಾಗದಲ್ಲಿ -> ಶೇರ್ ಯುವರ್ ಐಡಿಯಾಸ್, ಇನ್ ಸೈಟ್ಸ್ ಅಂಡ್ ಥಾಟ್ಸ್. ಎಂದಿದೆ. ಇದಲ್ಲದೆ, ನಾಗರಿಕರು ತಮ್ಮ ಸಲಹೆಗಳು/ಆಲೋಚನೆಗಳು/ಚಿಂತನೆಗಳನ್ನು ಮಾನ್ಯ ಪ್ರಧಾನಮಂತ್ರಿಗಳೊಂದಿಗೆ / ಅವರ ಕಚೇರಿಯೊಂದಿಗೆ ಇನ್ನೂ ಕೆಲವು ವಿಧಾನಗಳಲ್ಲಿ ಹಂಚಿಕೊಳ್ಳಬಹುದು. ಅವು ಹೀಗಿವೆ:
(1) ಅಂಚೆ ಮೂಲಕವಾದರೆ `ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಾಲಯ, ಸೌತ್ ಬ್ಲಾಕ್, ಹೊಸದೆಹಲಿ-110011′ ಈ ವಿಳಾಸಕ್ಕೆ ತಲುಪಿಸಬಹುದು.
(2) ಖುದ್ದಾಗಿ ತಲುಪಿಸುವುದಾದರೆ `ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಾಲಯದ ಅಂಚೆ ಕೌಂಟರ್, ಸೌತ್ ಬ್ಲಾಕ್, ಹೊಸದೆಹಲಿ-110011′ ಇಲ್ಲಿ ಕೊಡಿ.
(3) ಫ್ಯಾಕ್ಸ್ ಮೂಲಕ ಕಳುಹಿಸುವುದಾದರೆ `ಫ್ಯಾಕ್ಸ್ ಸಂಖ್ಯೆ 011-23016857′ ಇಲ್ಲಿಗೆ ರವಾನಿಸಿ.
|
ಪ್ರಶ್ನೆ 3: |
ಮಾನ್ಯ ಪ್ರಧಾನಮಂತ್ರಿಗಳಿಗೋ ಅಥವಾ ಅವರ ಕಾರ್ಯಾಲಯಕ್ಕೋ ರವಾನಿಸಿದ ಒಂದು ಅರ್ಜಿಯ/ಪತ್ರದ ಸ್ಥಿತಿಗತಿಗಳನ್ನು ನಾಗರಿಕರು ತಿಳಿದುಕೊಳ್ಳುವುದು ಹೇಗೆ?
-ಪ್ರಧಾನಮಂತ್ರಿಗಳಿಗೆ/ ಅವರ ಕಚೇರಿಗೆ ನಾನು ……… ಇಂತಿಂಥ ದಿನದಂದು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಕ್ರಮ ಗಳನ್ನು ದಯವಿಟ್ಟು ನನಗೆ ತಿಳಿಸಿ. ಏಕೆಂದರೆ, ನನ್ನ ಅರ್ಜಿಯನ್ನು ಪ್ರಧಾನಮಂತ್ರಿಗಳ ಕಾರ್ಯಾಲಯದ ಸಿಬ್ಬಂದಿ `ಗುರುತು ಸಂಖ್ಯೆ: ಪಿಎಂಒಪಿಜಿ/ ದಿನಾಂಕ/ ವರ್ಷ/ 123456789′ ನೀಡಿ, ………. ಇಲಾಖೆಗೆ ಕಳುಹಿಸಿಕೊಟ್ಟಿದ್ದಾರೆ.
-ನಾನು ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೊಂದು ಅರ್ಜಿ ಸಲ್ಲಿಸಿದ್ದೆ. ಅವರು ಇದನ್ನು ಪತ್ರ ಸಂಖ್ಯೆ: ಪಿಎಂಒಪಿಜಿ/ದಿನಾಂಕ/ವರ್ಷ/123456789 …….ರಾಜ್ಯ ಸರ್ಕಾರಕ್ಕೆ ಮುಂದಿನ ಕ್ರಮಕ್ಕಾಗಿ ಇಂಥ ದಿನಾಂಕ/ತಿಂಗಳು/ವರ್ಷದಂದು ಕಳಿಸಿಕೊಟ್ಟಿದ್ದಾರೆ. ದಯವಿಟ್ಟು ಇದರ ಸ್ಥಿತಿಗತಿ ಏನಾಗಿದೆಯೆಂಬುದನ್ನು ನನಗೆ ತಿಳಿಸಿ.
-ನಾನು ಪ್ರಧಾನಮಂತ್ರಿಗಳಿಗೆ ಇಂಥ ದಿನಾಂಕ/ತಿಂಗಳು/ವರ್ಷದಂದು, ……… ನೋಂದಣಿ ಸಂಖ್ಯೆಯನ್ನು ಹೊಂದಿರುವ ಒಂದು ಅಹವಾಲನ್ನು ಆನ್ ಲೈನ್ ಮೂಲಕ ಗಮನಕ್ಕೆ ತಂದಿದ್ದೆ. ಪಿಎಂಒಪಿಜಿ/ದಿನಾಂಕ/ವರ್ಷ/123456789 ಕ್ರಮಸಂಖ್ಯೆಯುಳ್ಳ ಈ ದೂರನ್ನು ……..ದಿನದಂದು ಪ್ರಧಾನಮಂತ್ರಿಗಳ ಕಾರ್ಯಾಲಯವು ಕಂಪ್ಯೂಟರಿನಲ್ಲಿ …….. ಸಚಿವಾಲಯಕ್ಕೆ ಕಳುಹಿಸಿ ಕೊಟ್ಟಿದೆ. ನನ್ನ ಅಹವಾಲಿನಲ್ಲಿ ಪ್ರಸ್ತಾಪಿಸಿದ್ದ ಸಮಸ್ಯೆಯನ್ನು ಬಗೆಹರಿಸಲಾಗಿದೆಯೋ, ಇಲ್ಲವೋ ಎನ್ನುವುದನ್ನು ದಯವಿಟ್ಟು ನನಗೆ ತಿಳಿಸಿ.
|
ಉತ್ತರ: |
ಸಾಮಾನ್ಯವಾಗಿ ಮಾನ್ಯ ಪ್ರಧಾನಮಂತ್ರಿ ಅವರ ಕಾರ್ಯಾಲಯಕ್ಕೆ ಸಾರ್ವಜನಿಕ ಕುಂದುಕೊರತೆಯನ್ನು ಹೊತ್ತ ಪತ್ರಗಳು/ಅರ್ಜಿಗಳ ಮಹಾಪೂರವೇ ಬರುತ್ತದೆ. ಇಂಥ ಪತ್ರಗಳಲ್ಲಿರುವ ವಿಚಾರಗಳು/ವಿಷಯಗಳು/ಸಮಸ್ಯೆಗಳು/ಕುಂದುಕೊರತೆಗಳು ನಾನಾ ಸಚಿವಾಲಯಗಳ/ ಇಲಾಖೆಗಳ/ ಅಥವಾ ರಾಜ್ಯ ಸರ್ಕಾರಗಳ/ ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಗೆ ಸೇರಿರುತ್ತವೆ. ಈ ಪತ್ರ/ಅರ್ಜಿ/ಅಹವಾಲುಗಳನ್ನೆಲ್ಲ ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಾಲಯದಲ್ಲಿರುವ ಸಾರ್ವಜನಿಕ ಶಾಖೆಯಲ್ಲಿ ಪರಿಷ್ಕರಿಸಲಾಗುತ್ತದೆ. ಇದಕ್ಕೆಂದೇ ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಾಲಯದಲ್ಲಿ ಪೂರ್ಣಪ್ರಮಾಣದ ಸಿಬ್ಬಂದಿ ವರ್ಗವಿದೆ. ಈ ಪರಿಷ್ಕರಣೆಯ ಹಂತದಲ್ಲಿ ಒಂದೊಂದು ಪತ್ರ/ಅರ್ಜಿ/ಅಹವಾಲಿಗೆ ಸಂಬಂಧಿಸಿದಂತೆಯೂ ಅದರಲ್ಲಿರುವ ಒಕ್ಕಣೆಯನ್ನು ಆಧರಿಸಿ, ಸೂಕ್ತ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಲಾಗುವುದು. ಹೀಗೆ ಸಂಪರ್ಕಿಸಲಾಗುವ ವ್ಯಕ್ತಿಗಳಲ್ಲಿ ಮಾನ್ಯ ಪ್ರಧಾನಮಂತ್ರಿಗಳೂ ಸೇರಿದ್ದಾರೆ. ಇವುಗಳಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಬಹುದೆಂದು ತೋರುವ ಅರ್ಜಿ/ಅಹವಾಲುಗಳನ್ನು ಸಂಬಂಧಿಸಿದ ಸಚಿವಾಲಯ/ಇಲಾಖೆಗಳು/ರಾಜ್ಯ ಸರ್ಕಾರಗಳಿಗೆ ಕಳುಹಿಸಿಕೊಡಲಾಗುವುದು. ಮಾನ್ಯ ಪ್ರಧಾನಮಂತ್ರಿ ಅವರ ಕಾರ್ಯಾಲಯದಲ್ಲಿರುವ `ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಮತ್ತು ನಿಗಾ ವ್ಯವಸ್ಥೆ ಘಟಕ’ದ (ಸಿಪಿಜಿಆರ್ಎಎಂಎಸ್) ಸಿಬ್ಬಂದಿ ಈ ಕೆಲಸವನ್ನು ಮಾಡುತ್ತಾರೆ. ಹೀಗೆ ಕಳುಹಿಸುವಾಗ `ದಯವಿಟ್ಟು ಈ ಸಮಸ್ಯೆಯ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿ ವಿನಂತಿ. ಬಳಿಕ ಈ ಸಂಬಂಧವಾಗಿ ನೀವು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಅರ್ಜಿದಾರರಿಗೆ ಉತ್ತರ ಕಳುಹಿಸಿಕೊಡಿ. ಜೊತೆಗೆ, ಅದನ್ನು ಮಾನ್ಯ ಪ್ರಧಾನಮಂತ್ರಿ ಅವರ ಕಾರ್ಯಾಲಯದ ಪೋರ್ಟಲ್ ಗೂ ಅಪ್ ಲೋಡ್ ಮಾಡಬೇಕಾಗಿ ವಿನಂತಿ’ ಎಂಬ ಷರಾ ಇರುತ್ತದೆ. ಆದರೆ, ಮಾನ್ಯ ಪ್ರಧಾನಮಂತ್ರಿಯವರ ಕಾರ್ಯಾಲಯಕ್ಕೆ ಹೀಗೆ ಹರಿದುಬರುವ ಅರ್ಜಿ/ಅಹವಾಲುಗಳಲ್ಲಿ ಕೆಲವಕ್ಕೆ ಪರಿಹಾರವನ್ನು ಒದಗಿಸುವುದು ಸಾಧ್ಯವಿರುವುದಿಲ್ಲ. ಇಂಥ ಅರ್ಜಿ/ಅಹವಾಲುಗಳನ್ನು ನಿಯಮಗಳ ಪ್ರಕಾರ ಜೋಪಾನವಾಗಿ ಇಡಲಾಗುವುದು.
-ಇನ್ನು ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಅಂಚೆ ಮೂಲಕ/ಖುದ್ದಾಗಿ/ಫ್ಯಾಕ್ಸ್ ಮೂಲಕವೂ ಇಂಥ ಅರ್ಜಿಗಳು/ಅಹವಾಲುಗಳು ಬರುತ್ತಿರುತ್ತವೆ. ಇವುಗಳಲ್ಲಿ ಯಾವುದಕ್ಕೆ ಪರಿಹಾರ ಸಾಧ್ಯವೆನಿಸುತ್ತದೋ ಅವುಗಳನ್ನು `ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಮತ್ತು ನಿಗಾ ವ್ಯವಸ್ಥೆ ಘಟಕ’ದ (ಸಿಪಿಜಿಆರ್ಎಎಂಎಸ್) ಸಂಬಂಧಿಸಿದ ಇಲಾಖೆಗಳಿಗೆ ಆನ್ ಲೈನ್ ಮೂಲಕ ಕಳುಹಿಸಿ ಕೊಡುತ್ತಾರೆ. ಈ ಪತ್ರದ ಮೇಲೆ ದೂರಿನ ಸಂಖ್ಯೆಯನ್ನೂ ಬರೆಯಲಾಗುವುದು. ಬಳಿಕ, ಈ ದೂರಿಗೆ ಸಂಬಂಧಿಸಿದ ಸ್ವೀಕೃತಿ ರಸೀದಿಯನ್ನು ಅಂಚೆ ಮೂಲಕ ದೂರುದಾರರಿಗೆ ರವಾನಿಸಲಾಗುವುದು. ದೂರುದಾರರು ತಾವು ದೂರು ಸಲ್ಲಿಸುವಾಗ ತಮ್ಮ ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಗಳನ್ನು ಒದಗಿಸಿದ್ದರೆ, ಇ-ಮೇಲ್/ಎಸ್ಎಂಎಸ್ ಮೂಲಕ ಕೂಡ ಇಂಥ ಸ್ವೀಕೃತಿ ಸಂದೇಶವನ್ನು ಕಳುಹಿಸಲಾಗುವುದು.
-ಇನ್ನು ಆನ್ ಲೈನ್ ಮೂಲಕ ಬರುವ ದೂರುಗಳು/ಅಹವಾಲುಗಳನ್ನು ಕೂಡ ಪರಿಷ್ಕರಿಸಲಾಗುವುದು. ಇವುಗಳಲ್ಲಿ ಯಾವುದಕ್ಕೆ ಪರಿಹಾರ ಸಾಧ್ಯವೆನಿಸುತ್ತದೋ ಅವುಗಳನ್ನು ಆನ್ ಲೈನ್ ಮೂಲಕವೇ ಸಂಬಂಧಿಸಿದ/ಸೂಕ್ತ ಇಲಾಖೆಗೆ ಕಳುಹಿಸಿ ಕೊಡಲಾಗುವುದು. ಈ ವಿಧಾನವು ಯಾವುದೇ ಪತ್ರವನ್ನಾಗಲಿ, ಸ್ವೀಕೃತಿ ಸಂದೇಶವನ್ನಾಗಲಿ ಒಳಗೊಂಡಿರುವುದಿಲ್ಲ. ಆದರೆ, ದೂರು ಸಲ್ಲಿಸಿದವರು ತಮ್ಮ ಇ-ಮೇಲ್ ವಿಳಾಸ/ಮೊಬೈಲ್ ಸಂಖ್ಯೆ ಕೊಟ್ಟಿದ್ದರೆ, ಇ-ಮೇಲ್/ಎಸ್ಎಂಎಸ್ ಮೂಲಕ ಸ್ವೀಕೃತಿ ಸಂದೇಶ ಕಳುಹಿಸಲಾಗುವುದು.
-ಸಾರ್ವಜನಿಕರು/ನಾಗರಿಕರು ತಮ್ಮ ಅರ್ಜಿಗಳ/ಅಹವಾಲುಗಳ ಸ್ಥಿತಿಗತಿಗಳನ್ನು ತಮ್ಮ ದೂರಿನ ಸಂಖ್ಯೆಯನ್ನು ಉಪಯೋಗಿಸಿಕೊಂಡು http://pgportal.gov.in/Status ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ತಿಳಿದುಕೊಳ್ಳಬಹುದು. ದೂರು/ಅಹವಾಲುಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು/ಇಲಾಖೆಗಳು/ಸಚಿವಾಲಯಗಳು ತೆಗೆದುಕೊಂಡಿರುವ ಕ್ರಮವನ್ನು ಚುಟುಕಾಗಿ ಮತ್ತು ದೂರುದಾರರಿಗೆ ಬರೆದಿರುವ ಉತ್ತರದ ಪ್ರತಿಯನ್ನು ಕೂಡ ಈ ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡಲಾಗುವುದು.
-ಇದಲ್ಲದೆ, ಸರಕಾರಿ ಕೆಲಸದ ದಿನಗಳಂದು ಕಚೇರಿಯ ವೇಳೆಯಲ್ಲಿ ಮಾನ್ಯ ಪ್ರಧಾನಮಂತ್ರಿ ಅವರ ಕಾರ್ಯಾಲಯದ ಸಾರ್ವಜನಿಕ ಕುಂದುಕೊರತೆ ವಿಭಾಗಕ್ಕೆ ದೂರವಾಣಿ ಕರೆ ಮಾಡಿಯೂ ತಮ್ಮ ಅರ್ಜಿ/ಅಹವಾಲುಗಳ ಸ್ಥಿತಿಗತಿಗಳನ್ನು ತಿಳಿದುಕೊಳ್ಳಬಹುದು. ದೂರವಾಣಿ ಸಂಖ್ಯೆ: 011-23386447.
-ಮಾನ್ಯ ಪ್ರಧಾನಮಂತ್ರಿಗಳಿಗೆ/ ಅವರ ಕಾರ್ಯಾಲಯಕ್ಕೆ ಬರುವ ದೂರು/ಅರ್ಜಿ/ಅಹವಾಲುಗಳನ್ನು ಸಂಬಂಧಿಸಿದ ಇಲಾಖೆಗೆ ಕಳುಹಿಸಿಕೊಡಲಾಗುವುದು. ಹೀಗಾಗಿ, ಸಾರ್ವಜನಿಕರು ತಮ್ಮ ದೂರುಗಳಿಗೆ ಸಂಬಂಧಿಸಿದಂತೆ ಯಾವ ಕ್ರಮ ಕೈಗೊಳ್ಳಲಾಗಿದೆ/ ಅದರ ಸ್ಥಿತಿಗತಿ ಏನಾಗಿದೆ ಎಂಬುದನ್ನು ಆಯಾ ಸಚಿವಾಲಯ/ಇಲಾಖೆ/ರಾಜ್ಯ ಸರ್ಕಾರಗಳಿಂದಲೂ ತಿಳಿದುಕೊಳ್ಳಬಹುದು. ಇದಕ್ಕೆಂದೇ http://pgportal.gov.in/Status ಪೋರ್ಟಲ್ ನಲ್ಲಿ ಆಯಾ ಸಚಿವಾಲಯ/ಇಲಾಖೆ/ ಅಧಿಕಾರಿಗಳ ಹುದ್ದೆ/ದೂರವಾಣಿ ಸಂಖ್ಯೆ ಇತ್ಯಾದಿಗಳನ್ನು ಕೂಡ ನೀಡಲಾಗಿರುತ್ತದೆ.
|
ಪ್ರಶ್ನೆ 4: |
ನಾನು ಇಂಥ ದಿನಾಂಕ/ತಿಂಗಳು/ವರ್ಷದಂದು ಮಾನ್ಯ ಪ್ರಧಾನಮಂತ್ರಿಗಳಿಗೆ/ಅವರ ಕಾರ್ಯಾಲಯಕ್ಕೆ ಒಂದು ಅಹವಾಲನ್ನು ಸಲ್ಲಿಸಿದ್ದೆ/ರವಾನಿಸಿದ್ದೆ. ಅದನ್ನು ಮಾನ್ಯ ಪ್ರಧಾನಮಂತ್ರಿ ಅವರ ಕಾರ್ಯಾಲಯವು ಇಂಥ ದಿನಾಂಕ/ತಿಂಗಳು/ವರ್ಷದಂದು, 123456789 ನೋಂದಣಿ ಸಂಖ್ಯೆಯೊಂದಿಗೆ, …..ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ. ದಯವಿಟ್ಟು, ಇದಕ್ಕೆ ಸಂಬಂಧಿಸಿದಂತೆ ಬರೆದಿರುವ ಟಿಪ್ಪಣಿಗಳ ಪ್ರತಿಯನ್ನು ನನಗೆ ಒದಗಿಸಿರಿ.
-ನಾನು ಸಲ್ಲಿಸಿದ್ದ ದೂರನ್ನು ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಾಲಯವು ಇಂಥ ದಿನಾಂಕ/ತಿಂಗಳು/ವರ್ಷದಂದು,ಇಂಥ ನೋಂದಣಿ ಸಂಖ್ಯೆ 123456789 ಮೂಲಕ …….ಸಚಿವಾಲಯಕ್ಕೆ ರವಾನಿಸಿದೆ. ಈ ಸಂಬಂಧದ ಕಡತವನ್ನು ನಾನು ಪರಿಶೀಲಿಸಬೇಕಾಗಿದೆ. ಹೀಗಾಗಿ ದಯವಿಟ್ಟು ಈ ಸಂಬಂಧದ ಮಾಹಿತಿ/ಕಡತವನ್ನು ನನಗೆ ಒದಗಿಸಿ.
-ನಾನು ಇಂಥ ದಿನಾಂಕ/ತಿಂಗಳು/ವರ್ಷದಂದು ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಒಂದು ಅರ್ಜಿ/ಅಹವಾಲು ಸಲ್ಲಿಸಿದ್ದೆ. ಅದನ್ನು ಇಂಥ ದಿನಾಂಕ/ತಿಂಗಳು/ವರ್ಷದಂದು ಅಲ್ಲಿಂದ ಇಂಥ ದಿನಾಂಕ/ತಿಂಗಳು/ವರ್ಷದಂದು, ಇಂಥ ನೋಂದಣಿ ಸಂಖ್ಯೆ 123456789 ಮೂಲಕ ……ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಈ ಸಂಬಂಧ ಆಗಿರುವ ದಿನದಿನದ ಪ್ರಗತಿ ಏನೆಂಬುದನ್ನು ದಯವಿಟ್ಟು ನನಗೆ ತಿಳಿಸಿ.
|
ಉತ್ತರ: | ಸಾರ್ವಜನಿಕರಿಂದ ನಾನಾ ವಿಧಗಳಲ್ಲಿ ಹರಿದುಬರುವ ಅರ್ಜಿ/ಅಹವಾಲು/ಪತ್ರ ಇತ್ಯಾದಿಗಳನ್ನು ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಾಲಯದಲ್ಲಿರುವ ಸಾರ್ವಜನಿಕ ಕುಂದುಕೊರತೆಗಳ ಶಾಖೆಯ ಸಿಬ್ಬಂದಿ ಪರಿಷ್ಕರಿಸುತ್ತಾರೆ. ನಂತರ ಇವೆಲ್ಲವನ್ನೂ ಕಂಪ್ಯೂಟರೀಕರಣ ಮಾಡಲಾಗುವುದು. ಆದರೆ, ಈ ಸಾಫ್ಟ್ ವೇರಿನಲ್ಲಿ ಕಡತಗಳಲ್ಲಿರುವ ಟಿಪ್ಪಣಿಗಳನ್ನು ಪ್ರತ್ಯೇಕವಾಗಿ ಸಂರಕ್ಷಿಸಿ ಇಡುವಂಥ ಮತ್ತು ಈ ದೂರುಗಳಿಗೆ ಸಂಬಂಧಿಸಿದಂತೆ ಆಗುವ ಪ್ರತಿದಿನದ ಪ್ರಗತಿಯನ್ನು ದಾಖಲಿಸುವಂಥ ಸೌಲಭ್ಯವಿಲ್ಲ. |
ಪ್ರಶ್ನೆ 5: | ಮಾನ್ಯ ಪ್ರಧಾನಮಂತ್ರಿ ಅವರ ಕಾರ್ಯಾಲಯಕ್ಕೆ ಆನ್ ಲೈನ್ ಮೂಲಕ ನಾನೊಂದು ಅರ್ಜಿ/ಅಹವಾಲು ಸಲ್ಲಿಸಿದ್ದೆ. ಅದನ್ನು …..ಸಚಿವಾಲಯಕ್ಕೆ/…..ರಾಜ್ಯ ಸರ್ಕಾರಕ್ಕೆ ಕಳುಹಿಸಿ ಕೊಡಲಾಗಿದೆ. ಈ ಸಂಬಂಧದ ಪತ್ರದ/ಟಿಪ್ಪಣಿ ಸಂದೇಶದ ಒಂದು ಪ್ರತಿಯನ್ನು ನನಗೆ ಒದಗಿಸಿ. |
ಉತ್ತರ: | ಆನ್ ಲೈನ್ ಮೂಲಕ ಬಂದ ಅರ್ಜಿ/ಅಹವಾಲುಗಳನ್ನು ಕಂಪ್ಯೂಟರ್ ಮೂಲಕವೇ ಸಂಬಂಧಿಸಿದ ಇಲಾಖೆ/ಸಚಿವಾಲಯ/ರಾಜ್ಯ ಸರ್ಕಾರಗಳಿಗೆ ರವಾನಿಸಲಾಗುವುದು. ಹೀಗಾಗಿ, ಇಲ್ಲಿ ಇಂಥ ಪತ್ರದ ಅವಶ್ಯಕತೆಯೇ ಉದ್ಭವಿಸುವುದಿಲ್ಲ. |
ಪ್ರಶ್ನೆ 6: | ಮಾನ್ಯ ಪ್ರಧಾನಮಂತ್ರಿಗಳಿಗೆ ನಾನೊಂದು ಅರ್ಜಿ/ಅಹವಾಲು/ದೂರು ಸಲ್ಲಿಸಬೇಕಾಗಿದೆ. ದಯವಿಟ್ಟು ನನಗೆ ಅವರ ಇ-ಮೇಲ್ ವಿಳಾಸವನ್ನು ಕೊಡಿ. |
ಉತ್ತರ: | ಮಾನ್ಯ ಪ್ರಧಾನಮಂತ್ರಿಗಳು ಅಧಿಕೃತವಾಗಿ ಯಾವುದೇ ಇ-ಮೇಲ್ ವಿಳಾಸವನ್ನು ಹೊಂದಿಲ್ಲ. ಆದರೆ, ನೀವು ಆನ್ ಲೈನ್ ಮೂಲಕ ದೂರು/ಅರ್ಜಿ/ಅಹವಾಲು ಸಲ್ಲಿಸಲು ಬಯಸುವುದಾದರೆ, ದಯವಿಟ್ಟು ಪ್ರಶ್ನೆ 1ನ್ನು ಗಮನಿಸಿ. |
ಪ್ರಶ್ನೆ 7: | ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಸಲ್ಲಿಸುವ ಅರ್ಜಿ/ಅಹವಾಲುಗಳನ್ನು ಬಗೆಹರಿಸಲು ಏನಾದರೂ ನಿರ್ದಿಷ್ಟ ವಿಧಾನ/ಕಾಲಮಿತಿ ಇದೆಯೇ? |
ಉತ್ತರ: | ಪರಿಹರಿಸಲು ಸಾಧ್ಯವೆನ್ನಬಹುದಾದ ಅರ್ಜಿ/ಅಹವಾಲುಗಳನ್ನೆಲ್ಲ ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಾಲಯದ ಸಾರ್ವಜನಿಕ ಕುಂದುಕೊರತೆ ವಿಭಾಗದ (ಸಿಪಿಜಿಆರ್ಎಎಂಎಸ್) ಸಿಬ್ಬಂದಿಯು ಸಂಬಂಧಿಸಿದ ಸಚಿವಾಲಯ/ಇಲಾಖೆ/ ರಾಜ್ಯ ಸರ್ಕಾರಗಳಿಗೆ ಕಳುಹಿಸಿ ಕೊಡುತ್ತದೆ. ಈ ವಿಭಾಗದ ಆಡಳಿತವನ್ನು ನೋಡಿಕೊಳ್ಳುವ `ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆ’ ವಿಭಾಗವು ಈ ಸಂಬಂಧವಾಗಿ ನಿರ್ದಿಷ್ಟ ವಿಧಿವಿಧಾನಗಳನ್ನು ಸೂಚಿಸುತ್ತದೆ. ಇದನ್ನು ಈ ಇಲಾಖೆಯ ವೆಬ್ ಸೈಟಿನಲ್ಲಿ ನೋಡಬಹುದು. |
ಪ್ರಶ್ನೆ 8: | ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಸಲ್ಲಿಸುವ ಅರ್ಜಿ/ಅಹವಾಲು ಇತ್ಯರ್ಥವನ್ನು ನೋಡಿಕೊಳ್ಳಲು ಏನಾದರೂ ಒಂದು ವ್ಯವಸ್ಥೆ ಇದೆಯೇ? |
ಉತ್ತರ: | ಪರಿಹರಿಸಲು ಸಾಧ್ಯವಿದೆ ಎನ್ನುವಂಥ ಅರ್ಜಿ/ಅಹವಾಲುಗಳನ್ನೆಲ್ಲ ಸೂಕ್ತ ಸಚಿವಾಲಯಗಳು/ಇಲಾಖೆಗಳು/ರಾಜ್ಯ ಸರ್ಕಾರಗಳಿಗೆ ಕಳುಹಿಸಿ ಕೊಡಲಾಗುವುದು. ಇದಾದ ಬಳಿಕ ಅರ್ಜಿ/ಅಹವಾಲುಗಳ ಇತ್ಯರ್ಥವು ಇವುಗಳ ವ್ಯಾಪ್ತಿಯಲ್ಲಿರುತ್ತದೆ. ಆದರೂ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆ ಇತ್ಯರ್ಥ ಇಲಾಖೆಯು ಕೂಡ ಕಾಲಕಾಲಕ್ಕೆ ಗಮನಹರಿಸಿ, ಅರ್ಜಿ/ಅಹವಾಲುಗಳ ಸ್ಥಿತಿಗತಿ ಏನಾಗಿದೆ ಎನ್ನುವುದನ್ನು ನೋಡುತ್ತದೆ. |
ಪ್ರಶ್ನೆ 9: | ತಮ್ಮ ಕಚೇರಿಗೆ ಸಾರ್ವಜನಿಕರಿಂದ ಬರುವ ಅರ್ಜಿ/ಅಹವಾಲು/ಮನವಿ/ಪತ್ರ ಇತ್ಯಾದಿಗಳಿಗೆಲ್ಲ ಸ್ವತಃ ಮಾನ್ಯ ಪ್ರಧಾನಮಂತ್ರಿಗಳೇ ಉತ್ತರಿಸುವರೇ? |
ಉತ್ತರ: | ಮಾನ್ಯ ಪ್ರಧಾನಮಂತ್ರಿ ಅವರ ಕಚೇರಿಗೆ ಬರುವ ಅರ್ಜಿ/ಅಹವಾಲು/ಮನವಿ/ಪತ್ರ ಇತ್ಯಾದಿಗಳಲ್ಲಿರುವ ವಿಚಾರ ಮತ್ತು ಒಕ್ಕಣೆಯನ್ನು ಆಧರಿಸಿ, ನಾನಾ ಹಂತಗಳಲ್ಲಿ ಇವಕ್ಕೆಲ್ಲ ಉತ್ತರಿಸಲಾಗುತ್ತದೆ. ಹೀಗೆ ಉತ್ತರಿಸುವವರಲ್ಲಿ ಮಾನ್ಯ ಪ್ರಧಾನಮಂತ್ರಿ ಅವರು ಕೂಡ ಸೇರಿದ್ದಾರೆ. |
ಆಡಳಿತ ಮತ್ತು ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ಆಗಾಗ ಕೇಳುವ ಪ್ರಶ್ನೆಗಳು | |
ಪ್ರಶ್ನೆ 1: |
ಮಾನ್ಯ ಪ್ರಧಾನಮಂತ್ರಿ ಅವರ ಕಾರ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಹೆಸರು, ಅವರ ಹುದ್ದೆಗಳು ಮತ್ತು ದೂರವಾಣಿ ಸಂಖ್ಯೆಗಳನ್ನು ನನಗೆ ಒದಗಿಸಿ.
-ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮಾನ್….. ಇವರ ದೂರವಾಣಿ ಸಂಖ್ಯೆ ಮತ್ತು ಹುದ್ದೆಯ ಹೆಸರನ್ನು ನನಗೆ ತಿಳಿಸಿ.
|
ಉತ್ತರ: | ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಹೆಸರು, ಅವರ ಹುದ್ದೆಗಳು ಮತ್ತು ದೂರವಾಣಿ ಸಂಖ್ಯೆಗಳು ಪ್ರಧಾನಮಂತ್ರಿಗಳ ಕಾರ್ಯಾಲಯದ ವೆಬ್ ಸೈಟ್ https://www.pmindia.gov.in/ -> ಅಧಿಕಾರಿಗಳ ಪಟ್ಟಿ (ಮೆನುವಿನ ಕೆಳಭಾಗದಲ್ಲಿ) ಇಲ್ಲಿ ಲಭ್ಯವಿದೆ) |
ಪ್ರಶ್ನೆ 2: |
ಭಾರತದ ಮಾನ್ಯ ಪ್ರಧಾನಮಂತ್ರಿ ಅವರ ಆಪ್ತ ಕಾರ್ಯದರ್ಶಿ ಮತ್ತು ವಿಶೇಷ ಕರ್ತವ್ಯಾಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ನನಗೆ ನೀಡಿ.
-ಮಾನ್ಯ ಪ್ರಧಾನಮಂತ್ರಿ ಅವರ ಕಾರ್ಯಾಲಯದಲ್ಲಿ ….. ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ…… ಅವರ ಮೊಬೈಲ್ ಫೋನ್ ನಂಬರನ್ನು ದಯವಿಟ್ಟು ಕೊಡಿ.
|
ಉತ್ತರ: | ಮಾನ್ಯ ಪ್ರಧಾನಮಂತ್ರಿ ಅವರ ಕಾರ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಹೆಸರು https://www.pmindia.gov.in/ -> ಅಧಿಕಾರಿಗಳ ಪಟ್ಟಿ (ಮೆನುವಿನ ಕೆಳಭಾಗದಲ್ಲಿ). ಇಲ್ಲಿ ಲಭ್ಯವಿದೆ. ಆದರೆ, ಒಬ್ಬ ಅಧಿಕಾರಿಯ ಮೊಬೈಲ್ ಸಂಖ್ಯೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದು ಒಬ್ಬ ವ್ಯಕ್ತಿಯ ಖಾಸಗಿತನದ ಉಲ್ಲಂಘನೆಯಾಗುತ್ತದೆ. ಮಾಹಿತಿ ಹಕ್ಕು ಕಾಯ್ದೆಯ 8(1)(ಜೆ) ಪರಿಚ್ಛೇದವೂ ಹೀಗೆ ಅಧಿಕಾರಿಗಳ ಮೊಬೈಲ್ ಸಂಖ್ಯೆಯನ್ನು ಕೊಡದೆ ಇರಲು ವಿನಾಯಿತಿ ನೀಡಿದೆ. |
ಪ್ರಶ್ನೆ 3: | ಮಾನ್ಯ ಪ್ರಧಾನಮಂತ್ರಿ ಅವರ ಕಾರ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಮತ್ತು ಇತರ ಸಿಬ್ಬಂದಿ ವರ್ಗದ ವೇತನದ ವಿವರಗಳನ್ನು ಒದಗಿಸಿ. |
ಉತ್ತರ: | ಮಾನ್ಯ ಪ್ರಧಾನಮಂತ್ರಿ ಅವರ ಕಾರ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಮತ್ತು ಇತರ ಸಿಬ್ಬಂದಿ ವರ್ಗದ ವೇತನದ/ಗೌರವಧನದ/ಸಂಭಾವನೆಯ ವಿವರಗಳನ್ನು 2005ರ ಮಾಹಿತಿ ಹಕ್ಕಿನ ಕಾಯ್ದೆಯ 4(1)(ಬಿ) ಪರಿಚ್ಛೇದದಡಿ ಪ್ರಧಾನಮಂತ್ರಿಗಳ ಕಾರ್ಯಾಲಯದ ವೆಬ್ ಸೈಟಿನಲ್ಲಿ ನೀಡಲಾಗಿದೆ. ನೀವು https://www.pmindia.gov.in/ ಗೆ ಹೋಗಿ, ಅಲ್ಲಿ ಮೆನುವಿನ ಕೆಳಭಾಗದಲ್ಲಿರುವ ಮಾಹಿತಿ ಹಕ್ಕು ಕಾಯಿದೆ ಉಪಶೀರ್ಷಿಕೆಯ ಮೇಲೆ ಕ್ಲಿಕ್ ಮಾಡಿದರೆ ಈ ವಿವರಗಳು ಲಭ್ಯ. |
ಪ್ರಶ್ನೆ 4: |
ಕಳೆದ ಹಣಕಾಸು ವರ್ಷದಲ್ಲಿ ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಾಲಯವು ಮಾಡಿರುವ ಖರ್ಚು-ವೆಚ್ಚದ ವಿವರಗಳನ್ನು ನೀಡಿ.
-ಜೊತೆಗೆ, ಪ್ರಧಾನಮಂತ್ರಿಗಳ ಕಾರ್ಯಾಲಯದಲ್ಲಿ ಪ್ರತೀ ತಿಂಗಳೂ `ವೇತನ’ದ ಹೆಸರಿನಲ್ಲಿ ಆಗುವ ವೆಚ್ಚವೆಷ್ಟು?
|
ಉತ್ತರ: | ಕಳೆದ ಹಣಕಾಸು ವರ್ಷದಲ್ಲಿ ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಾಲಯವು ಮಾಡಿರುವ ಖರ್ಚು-ವೆಚ್ಚದ ವಿವರಗಳನ್ನು ಕೂಡ 2005ರ ಮಾಹಿತಿ ಹಕ್ಕಿನ ಕಾಯ್ದೆಯ 4(1)(ಬಿ) ಪರಿಚ್ಛೇದದಡಿ ಪ್ರಧಾನಮಂತ್ರಿಗಳ ಕಾರ್ಯಾಲಯದ ವೆಬ್ ಸೈಟಿನಲ್ಲಿ ನೀಡಲಾಗಿದೆ. ನೀವು https://www.pmindia.gov.in/ -> ಮಾಹಿತಿ ಹಕ್ಕು ಕಾಯಿದೆ ಉಪಶೀರ್ಷಿಕೆಯ ಮೇಲೆ ಕ್ಲಿಕ್ ಮಾಡಿದರೆ ಈ ವಿವರಗಳು ಲಭ್ಯ |
ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ಸಂಬಂಧಿಸಿದಂತೆ ಆಗಾಗ ಕೇಳಲಾಗುವ ಪ್ರಶ್ನೆಗಳು | |
ಪ್ರಶ್ನೆ 1: | ನನ್ನ ವೈದ್ಯಕೀಯ ವೆಚ್ಚಕ್ಕೆ ಬೇಕಾದ ಧನಸಹಾಯವನ್ನು ನಾನು ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಪಡೆದುಕೊಳ್ಳುವುದು ಹೇಗೆ? |
ಉತ್ತರ: | ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯ ಮೂಲಕ ನಿಮಗೆ ಬೇಕಾದ ನೆರವನ್ನು ಪಡೆದುಕೊಳ್ಳುವುದು ತುಂಬಾ ಸುಲಭ. ಇದರ ಅಡಿಯಲ್ಲಿ ನೀವು ವೈದ್ಯಕೀಯ ಚಿಕಿತ್ಸೆ/ ಸರ್ಕಾರಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ/ ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ ಯೋಜನೆಯಡಿ ಗುರುತಿಸಿರುವ ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿಸಿಕೊಳ್ಳುವ ಶಸ್ತ್ರಚಿಕಿತ್ಸೆ ಇತ್ಯಾದಿಗಳಿಗೆ ಸಂಬಂಧಿಸಿದ ವೈದ್ಯಕೀಯ ಪ್ರಮಾಣಪತ್ರ/ ಅಂದಾಜು ವೆಚ್ಚಗಳನ್ನು ಆಯಾ ಆಸ್ಪತ್ರೆಗಳಿಂದ ಮೊದಲು ಪಡೆದುಕೊಳ್ಳಿ. ಬಳಿಕ, ಇವನ್ನೆಲ್ಲ ನಿಮ್ಮ ಕುಟುಂಬದ ವಾರ್ಷಿಕ ಆದಾಯ ಪ್ರಮಾಣಪತ್ರದ ಜತೆಗೆ , ತುಂಬಾ ಸರಳವಾಗಿ ಮಾನ್ಯ ಪ್ರಧಾನಮಂತ್ರಿಗಳಿಗೆ ಅರ್ಜಿ ಬರೆದು ಕಳುಹಿಸಿ. ಈ ಯೋಜನೆಯಡಿ ಹೇಗೆ ನೆರವನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ತಿಳಿಸುವ ಸಂಪೂರ್ಣ ಮಾಹಿತಿಯು ಪ್ರಧಾನಮಂತ್ರಿಗಳ ಕಾರ್ಯಾಲಯದ ವೆಬ್ ಸೈಟ್ www.pmindia.gov.in ಮತ್ತು https://pmnrf.gov.in ಈ ಎರಡೂ ಕಡೆಗಳಲ್ಲಿ ಸಿಗುತ್ತದೆ. |
ಪ್ರಶ್ನೆ 2: |
ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯ ಮೂಲಕ ಯಾರ್ಯಾರಿಗೆ ನೆರವು ನೀಡಲಾಗಿದೆ ಎನ್ನುವ ವಿವರವನ್ನು ದಯವಿಟ್ಟು ಒದಗಿಸಿ.
-ಪ್ರಧಾನಮಂತ್ರಿ ಅವರ ರಾಷ್ಟ್ರೀಯ ಪರಿಹಾರ ನಿಧಿಯ ಮೂಲಕ ಶ್ರೀಮತಿ/ಶ್ರೀ ………. ಇವರಿಗೆ ಎಷ್ಟು ಆರ್ಥಿಕ ಸಹಾಯ ನೀಡಲಾಗಿದೆ?
|
ಉತ್ತರ: | ಪ್ರಧಾನಮಂತ್ರಿ ಅವರ ರಾಷ್ಟ್ರೀಯ ಪರಿಹಾರ ನಿಧಿಯ ಮೂಲಕ ನೆರವನ್ನು ಕೇಳುವುದು ನೂರಕ್ಕೆ ನೂರರಷ್ಟು ಖಾಸಗಿ ವಿಷಯವಾಗಿದೆ. ಆದ್ದರಿಂದ, ಈ ವಿವರಗಳನ್ನು ಮೂರನೇ ವ್ಯಕ್ತಿಯೊಬ್ಬರಿಗೆ ನೀಡುವುದು ವ್ಯಕ್ತಿಗಳ ಖಾಸಗಿತನದ ಹಕ್ಕಿನ ಮೇಲಿನ ಅತಿಕ್ರಮಣವಾಗುತ್ತದೆ. ಹೀಗಾಗಿ, ಮಾಹಿತಿ ಹಕ್ಕಿನ ಕಾಯ್ದೆಯ 8(1)(ಜೆ) ಪರಿಚ್ಛೇದವು ಇಂಥ ಮಾಹಿತಿಗಳನ್ನು ನೀಡುವುದನ್ನು ನಿಷೇಧಿಸಿದೆ. |
ಪ್ರಶ್ನೆ 3: | ಪ್ರಧಾನಮಂತ್ರಿ ಅವರ ರಾಷ್ಟ್ರೀಯ ಪರಿಹಾರ ನಿಧಿಯ ವರ್ಷಂಪ್ರತಿ ಆದಾಯ ಮತ್ತು ವೆಚ್ಚದ ವಿವರಗಳನ್ನು ದಯವಿಟ್ಟು ಒದಗಿಸಿ. |
ಉತ್ತರ: | ಉತ್ತರ: ಪ್ರಧಾನಮಂತ್ರಿ ಅವರ ರಾಷ್ಟ್ರೀಯ ಪರಿಹಾರ ನಿಧಿಯ ವರ್ಷಂಪ್ರತಿ ಆದಾಯ ಮತ್ತು ವೆಚ್ಚದ ವಿವರಗಳು ಪ್ರಧಾನಮಂತ್ರಿಗಳ ಕಾರ್ಯಾಲಯದ ವೆಬ್ ಸೈಟ್ www.pmindia.gov.in ಮತ್ತು https://pmnrf.gov.in ಈ ಎರಡೂ ಕಡೆಗಳಲ್ಲಿ ಸಿಗುತ್ತದೆ. |
ಮಾಹಿತಿ ಹಕ್ಕಿನ ಕಾಯ್ದೆ ಮತ್ತು ಮನವಿಗಳಿಗೆ ಸಂಬಂಧಿಸಿದಂತೆ ಆಗಾಗ ಕೇಳಲಾಗುವ ಪ್ರಶ್ನೆಗಳು | |
ಪ್ರಶ್ನೆ 1: | ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಾಲಯದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯ ಸಂಪರ್ಕ ವಿಳಾಸವನ್ನು ಕೊಡಿ. |
ಉತ್ತರ: | ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ,
ಮಾನ್ಯ ಪ್ರಧಾನಮಂತ್ರಿ ಅವರ ಕಾರ್ಯಾಲಯ, ಸೌತ್ ಬ್ಲಾಕ್, ನವದೆಹಲಿ-110011. ದೂರವಾಣಿ ಸಂಖ್ಯೆ: 011-23382590, ಫ್ಯಾಕ್ಸ್ ನಂಬರ್: 011-23388157, ಇ-ಮೇಲ್: rti-pmo.applications[at]gov[dot]in |
ಪ್ರಶ್ನೆ 2: |
ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಾಲಯದಲ್ಲಿ ಮಾಹಿತಿ ಹಕ್ಕಿನ ಕಾಯ್ದೆಯಡಿ ಕಾರ್ಯ ನಿರ್ವಹಿಸುತ್ತಿರುವ ಮೇಲ್ಮನವಿ ನ್ಯಾಯಾಧಿಕರಣದ ಸಂಪರ್ಕ ವಿಳಾಸವನ್ನು ದಯವಿಟ್ಟು ಕೊಡಿ.
-ಮಾಹಿತಿ ಹಕ್ಕಿನ ಕಾಯ್ದೆಯಡಿ ನಾನು ಪ್ರಧಾನಮಂತ್ರಿಗಳ ಕಾರ್ಯಾಲಯದಲ್ಲಿ ಮನವಿ ಸಲ್ಲಿಸಬೇಕೆಂದಿದ್ದೇನೆ. ಅಲ್ಲಿ ನಾನು ಯಾರನ್ನು ಸಂಪರ್ಕಿಸಬೇಕು ತಿಳಿಸಿ.
|
ಉತ್ತರ: | ನಿರ್ದೇಶಕರು (ಮಾಹಿತಿ ಹಕ್ಕು ಕಾಯ್ದೆ), ಪ್ರಧಾನಮಂತ್ರಿ ಅವರ ಕಾರ್ಯಾಲಯ,
ಸೌತ್ ಬ್ಲಾಕ್, ಹೊಸದೆಹಲಿ-110011, ದೂರವಾಣಿ ಸಂಖ್ಯೆ: 011-23074072 (ಕಚೇರಿ), ಫ್ಯಾಕ್ಸ್: 011-23388157/ 23019545/ 23016857. ಮಾಹಿತಿ ಹಕ್ಕು ಕಾಯ್ದೆಯಡಿ ಮನವಿ ಸಲ್ಲಿಸುವವರು ಸಂಪರ್ಕಿಸಬೇಕಾದ ಇ-ಮೇಲ್: rti[dot]appeal[at]gov[dot]in |
ಪ್ರಶ್ನೆ 3: |
ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ಅಗತ್ಯವಾದ ಮಾಹಿತಿಗಳನ್ನು ಪಡೆಯಲು ನಾಗರಿಕರಿಗೆ ಇರುವ ಮಾರ್ಗಗಳೇನು?
-ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ಮಾಹಿತಿ ಪಡೆಯಲು ಅನುಸರಿಸಬೇಕಾದ ರೀತಿರಿವಾಜುಗಳು/ವಿಧಿವಿಧಾನಗಳೇನು?
|
ಉತ್ತರ: | ಈ ಸಂಬಂಧದ ವಿವರಗಳು ಪ್ರಧಾನಮಂತ್ರಿಗಳ ಕಾರ್ಯಾಲಯದ ವೆಬ್ ಸೈಟ್ https://www.pmindia.gov.in/ -> Right to Information (ಮೆನುವಿನ ಕೆಳಭಾಗದಲ್ಲಿ) ಇಲ್ಲಿ ಲಭ್ಯ. ಜೊತೆಗೆ, ಆಸಕ್ತರು ಪ್ರಧಾನಮಂತ್ರಿಗಳ ಕಾರ್ಯಾಲಯದ ವೆಬ್ ಸೈಟ್ https://www.pmindia.gov.in->Right to Informationನಲ್ಲಿರುವ ಮಾಹಿತಿ ಅನ್ವೇಷಕರಿಗೆ(ಆರ್ ಟಿಐ ಅಭ್ಯರ್ಥಿಗಳು)ಪ್ರಮುಖ ಸಲಹಕಾರ ಎನ್ನುವ ಉಪಶೀರ್ಷಿಕೆಗೂ ಭೇಟಿ ನೀಡಬಹುದು. |
ಇತರೆ ಮಾಹಿತಿಗಳಿಗೆ ಸಂಬಂಧಿಸಿದಂತೆ ಆಗಾಗ ಕೇಳುವ ಪ್ರಶ್ನೆಗಳು | |
ಪ್ರಶ್ನೆ 1: |
ಇಂಥ ದಿನಾಂಕ/ತಿಂಗಳು/ವರ್ಷದಂದು ನಡೆದ `ಪ್ರಗತಿ’ ಸಭೆಯ ವಿವರಗಳನ್ನು ನನಗೆ ಒದಗಿಸಿ.
-`ಪ್ರಗತಿ’ ಸಭೆಯಲ್ಲಿ ……. ಈ ವಿಷಯಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ತೀರ್ಮಾನ/ಗಳ ವಿವರವನ್ನು ಕೊಡಿ.
|
ಉತ್ತರ: | ಇದುವರೆಗೆ ನಡೆದಿರುವ ಪ್ರತಿಯೊಂದೂ `ಪ್ರಗತಿ’ ಸಭೆಯ ವಿವರಗಳು www.pragati.nic.in ವೆಬ್ ಸೈಟಿನಲ್ಲಿ ಲಭ್ಯ. |
ಪ್ರಶ್ನೆ 2: | ಮಾನ್ಯ ಪ್ರಧಾನಮಂತ್ರಿಯವರು ಘೋಷಿಸಿರುವ ಹಲವು ಯೋಜನೆಗಳು/ಪ್ಯಾಕೇಜುಗಳಿಗೆ ಸಂಬಂಧಿಸಿದ ವಿವರಗಳನ್ನು ಒದಗಿಸಿ. |
ಉತ್ತರ: | ಮಾನ್ಯ ಪ್ರಧಾನಮಂತ್ರಿಯವರು ಬೇರೆಬೇರೆ ಸಂದರ್ಭಗಳಲ್ಲಿ ಹತ್ತಾರು ಯೋಜನೆಗಳು/ಪ್ಯಾಕೇಜುಗಳನ್ನು ಘೋಷಿಸುತ್ತಿರುತ್ತಾರೆ. ಇವೆಲ್ಲವೂ ಮಾನ್ಯ ಪ್ರಧಾನಮಂತ್ರಿಗಳ ಭಾಷಣಗಳ ಭಾಗವಾಗಿದ್ದು, ಇವೆಲ್ಲವನ್ನೂ ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಾಲಯದ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿದೆ (ಲಿಂಕ್: https://pmindia.gov.in/en/tag/pmspeech/). |
ಪ್ರಶ್ನೆ 3: |
ಮಾನ್ಯ ಪ್ರಧಾನಮಂತ್ರಿಯವರು ………. ಸಂದರ್ಭದಲ್ಲಿ ಮಾಡಿದ ಭಾಷಣದ ಪ್ರತಿಯನ್ನು ದಯವಿಟ್ಟು ನನಗೆ ಒದಗಿಸಿ.
-ಮಾನ್ಯ ಪ್ರಧಾನಮಂತ್ರಿಯವರು ಇಂಥ ದಿನ/ತಿಂಗಳು/ವರ್ಷದಂದು ಮಾಡಿದ ಭಾಷಣದ ಪಠ್ಯವನ್ನು ನನಗೆ ಒದಗಿಸಿ.
|
ಉತ್ತರ: | ಮಾನ್ಯ ಪ್ರಧಾನಮಂತ್ರಿಯವರ ಭಾಷಣಗಳು ಪ್ರಧಾನಮಂತ್ರಿಗಳ ಕಾರ್ಯಾಲಯದ ವೆಬ್ ಸೈಟಿನಲ್ಲಿ ಸಿಗುತ್ತವೆ (ಲಿಂಕ್: https://pmindia.gov.in/en/tag/pmspeech/). | ಸಾರ್ವಜನಿಕ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಆಗಾಗ ಕೇಳಲಾಗುವ ಪ್ರಶ್ನೆಗಳು |
---|