ನನ್ನ ದೇಶವಾಸಿಗಳೇ ನಮಸ್ಕಾರ. ಚಳಿಗಾಲ ಈಗ ಮರಳುವ ಮಾರ್ಗದಲ್ಲಿದೆ. ವಸಂತ ಋತು ಈಗ ನಮ್ಮ ಬದುಕಿನಲ್ಲಿ ಕಾಲಿಡುತ್ತಿದೆ. ಶಿಶಿರಋತುವಿನ ಬಳಿಕ, ಮರಗಳಲ್ಲಿ ಹಣ್ಣಾದ ಹಾಗೂ ಒಣಗಿದ ಎಲೆಗಳು ಉದುರಿ, ಹೊಸ ಚಿಗುರು ಒಡೆಯಲು ಆರಂಭಿಸುತ್ತದೆ. ಹೂಗಳು ಅರಳುತ್ತವೆ. ನಮ್ಮ ಸುತ್ತಲಿನ ಪರಿಸರ ಹಚ್ಚ ಹಸುರಿನಿಂದ ಕಂಗೊಳಿಸುತ್ತವೆ. ಹಕ್ಕಿ, ಪಕ್ಷಿಗಳ ಕಲರವ ನಮ್ಮ ಹೃನ್ಮನ ಸೆಳೆಯುತ್ತವೆ. ಹೂವುಗಳು ಮಾತ್ರವೇ ಅಲ್ಲ, ಸೂರ್ಯ ರಶ್ಮಿಯಿಂದ ಮರದ ಕೊಂಬೆಗಳಲ್ಲಿ ಹಣ್ಣುಗಳು ಫಳಫಳ ಹೊಳೆಯುತ್ತವೆ. ಬೆಸಿಗೆಯ ಹಣ್ಣು ಮಾವಿನ ಹೂ ಬಿಡುತ್ತದೆ. ಅದೇ ವೇಳೆ ರೈತರ ಹೊಲಗದ್ದೆಗಳಲ್ಲಿ ಸಾಸಿವೆಯ ಗಿಡದಲ್ಲಿ ಹಳದಿಯ ಹೂವುಗಳು ಅರಳಿ ರೈತರ ಹೃದಯದಲ್ಲಿ ಆಶಾಭಾವನೆ ಮೂಡಿಸುತ್ತವೆ. ಕಡು ಕೆಂಪು ಬಣ್ಣದ ಕಾಡು ಮುತ್ತುಗದ ಹೂ ಅರಳಿ ಪರಿಮಳ ಸೂಸಿ, ಹೋಳಿಯ ಆಗಮನದ ಸುಳಿವು ನೀಡುತ್ತವೆ. ಕವಿ ಅಮಿರ್ ಕುಸ್ರೂ ಅವರು ಈ ಋತುಮಾನದ ಬದಲಾವಣೆಯನ್ನು ಆರಕ್ಷಕವಾಗಿ ಬಣ್ಣಿಸಿದ್ದಾರೆ. ಅಮೀರ್ ಕುಸ್ರೂ ಹೀಗೆ ಬರೆಯುತ್ತಾರೆ:
ಹೊಲದಲ್ಲಿ ಸಾಸಿವೆಯ ಹೂವಿನ ರಾಶಿ,
ಚಿಗುರಿದೆ ಮಾವು, ಅರಳಿದೆ ಮುತ್ತುಗ,
ಮರದ ಕೊಂಬೆಯಲಿ ಕೂಗುತಿದೆ ಕೋಗಿಲೆ.
ಪ್ರಕೃತಿ ದೇವಿ ಅತೀವ ಸಂತಸದಿಂದ ಇರುವಾಗ, ವಾತಾವರಣ ಆಹ್ಲಾದಕರವಾಗಿರುವಾಗ, ಮಾನವರಾದ ನಾವೂ ಕೂಡ ಇದನ್ನು ಪೂರ್ಣವಾಗಿ ಆನಂದಿಸಬೇಕು. ವಸಂತ ಪಂಚಮಿ, ಮಹಾ ಶಿವರಾತ್ರಿ ಮತ್ತು ಹೋಳಿ ಹಬ್ಬಗಳು ಅತೀವ ಸಂತಸವನ್ನು ಜನರ ಬದುಕಿನಲ್ಲಿ ತರುತ್ತವೆ. ಮಾನವತೆ, ಪ್ರೀತಿ ಮತ್ತು ಭ್ರಾತೃತ್ವ ವಾತಾವರಣದೊಂದಿಗೆ ನಾವು ವರ್ಷದ ಕೊನೆಯ ತಿಂಗಳು ಪಾಲ್ಗುಣಕ್ಕೆ ವಿದಾಯ ಹೇಳಲಿದ್ದೇವೆ ಮತ್ತು ಹೊಸ ಮಾಸ ಚೈತ್ರವನ್ನು ಸ್ವಾಗತಿಸಲು ಕಾತರರಾಗಿದ್ದೇವೆ. ವಸಂತ ಋತು, ಈ ಎರಡು ಮಾಸಗಳ ಸಂಯೋಗ ಎಂದೇ ಹೇಳಬಹುದು.
ನಾನು ಮನ್ ಕಿ ಬಾತ್ ಗೆ ಮುನ್ನ ನಾನು ನಿಮ್ಮೆಲ್ಲರ ಸಲಹೆ ಕೇಳುತ್ತೇನೆ. ಅದಕ್ಕೆ, ನರೇಂದ್ರ ಮೋದಿ ಆಪ್, ಟ್ವಿಟರ್, ಫೇಸ್ಬುಕ್, ಅಂಚೆ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಸಲಹೆಗಳು ಬರುತ್ತವೆ. ಇದಕ್ಕಾಗಿ ನಾನು ನಿಮ್ಮೆಲ್ಲರಿಗೂ ಧನ್ಯವಾದ ಅರ್ಪಿಸುತ್ತೇವೆ.
ನರೇಂದ್ರ ಮೋದಿ ಆಪ್ ನಲ್ಲಿ ಶೋಭಾ ಜಲನ್ ಎಂಬುವವರು ಹಲವರಿಗೆ ಇಸ್ರೋದ ಸಾಧನೆಯ ಬಗ್ಗೆ ತಿಳಿದಿಲ್ಲ ಎಂದು ಬರೆದಿದ್ದಾರೆ. ಹೀಗಾಗಿ ಇತ್ತೀಚೆಗೆ 104 ಉಪಗ್ರಹಗಳನ್ನು ಉಡಾವಣೆ ಮಾಡಿದ ಹಾಗೂ ಪ್ರತಿಬಂಧಕ ಕ್ಷಿಪಣಿ ಬಗ್ಗೆ ನಾನು ಕೆಲವು ಮಾಹಿತಿ ಕೊಡಬೇಕು ಎಂದು ಅವರು ಬಯಸಿದ್ದಾರೆ. ಶೋಭಾ ಅವರೇ, ಭಾರತದ ಹೆಮ್ಮೆಯ ಉಜ್ವಲ ಉದಾಹರಣೆಯ ಬಗ್ಗೆ ಗಮನ ಸೆಳೆದಿದ್ದಕ್ಕಾಗಿ ಧನ್ಯವಾದಗಳು. ಅದು ಬಡತನ ನಿರ್ಮೂಲನೆಯೇ ಇರಲಿ, ಕಾಯಿಲೆಗಳ ನಿರೋಧವೇ ಇರಲಿ, ವಿಶ್ವದೊಂದಿಗೆ ಸಂಪರ್ಕ ಸಾಧಿಸುವುದೇ ಇರಲಿ ಅಥವಾ ವಿಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನದ ಅರಿವಿನ ಪ್ರಚಾರವೇ ಇರಲಿ, ಅವುಗಳಲ್ಲಿ ತನ್ನದೇ ಆದ ಸಾಧನೆ ಮಾಡಿವೆ. 2017ರ ಫೆಬ್ರವರಿ 15 ಭಾರತಕ್ಕೆ ಅತೀವ ಹೆಮ್ಮೆಯ ದಿನ. ನಮ್ಮ ವಿಜ್ಞಾನಿಗಳು ಇಡೀ ವಿಶ್ವದಲ್ಲಿಯೇ ಭಾರತದ ಹೆಸರನ್ನು ಉತ್ತುಂಗಕ್ಕೆ ಏರಿಸಿದ್ದಾರೆ. ಇಸ್ರೋ ಕಳೆದ ಕೆಲವು ವರ್ಷಗಳಲ್ಲಿ ಅಭೂತಪೂರ್ವ ಸಾಧನೆಗಳನ್ನು ಯಶಸ್ವಿಯಾಗಿ ಮಾಡಿದೆ. ಮಂಗಳಯಾನದ ಯಶಸ್ಸಿನ ಬಳಿಕ, ಇತ್ತೀಚೆಗೆ ಇಸ್ರೋ, ಬಾಹ್ಯಾಕಾಶದಲ್ಲಿ ಹೊಸ ದಾಖಲೆ ಬರೆದಿದೆ. ಬೃಹತ್ ಅಭಿಯಾನದಲ್ಲಿ ಇಸ್ರೋ, ಏಕ ಕಾಲದಲ್ಲಿ 104 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದೆ. ಈ ಉಪಗ್ರಹಗಳು ವಿವಿಧ ರಾಷ್ಟ್ರಗಳಿಗೆ ಅಂದರೆ, ಅಮೆರಿಕ, ಇಸ್ರೇಲ್, ಕಜಕಿಸ್ತಾನ್, ನೆದರ್ ಲ್ಯಾಂಡ್ಸ್, ಸ್ವಿಟ್ಜರ್ ಲ್ಯಾಂಡ್, ಯು.ಎ.ಇ. ಮತ್ತು ಭಾರತಕ್ಕೆ ಸೇರಿದವುಗಳಾಗಿವೆ. ಒಂದೇ ಉಡಾವಣೆಯಲ್ಲಿ 104 ಉಪಗ್ರಹಗಳನ್ನು ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದ ಪ್ರಥಮ ರಾಷ್ಟ್ರ ಭಾರತವಾಗಿದೆ. ಮತ್ತು ಮತ್ತೊಂದು ಹೃದಯಸ್ಪರ್ಶಿ ಸಂಗತಿ ಎಂದರೆ, ಇದು ಪಿ.ಎಸ್.ಎಲ್.ವಿ.ಯ 38ನೇ ಸತತ ಯಶಸ್ವಿ ಉಡಾವಣೆಯಾಗಿದೆ. ಇದು ಕೇವಲ ಇಸ್ರೋದ ಸಾಧನೆಯಷ್ಟೇ ಅಲ್ಲ, ಭಾರತದ ಎಲ್ಲರ ಸಾಧನೆಯೂ ಆಗಿದೆ. ಇಸ್ರೋದ ಈ ಸಮರ್ಥ ಹಾಗೂ ವೆಚ್ಚ ಉಳಿತಾಯದ ಬಾಹ್ಯಾಕಾಶ ಕಾರ್ಯಕ್ರಮವು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಭಾರತದ ಮತ್ತು ಭಾರತೀಯ ವಿಜ್ಞಾನಿಗಳ ಈ ಸಾಧನೆಯನ್ನು ವಿಶ್ವ ಹೃದಯಪೂರ್ವಕವಾಗಿ ಶ್ಲಾಘಿಸಿದೆ.
ಸಹೋದರರೇ ಮತ್ತು ಸಹೋದರಿಯರೇ, ಈ 104 ಉಪಗ್ರಹಗಳ ಪೈಕಿ ಒಂದು ಅತ್ಯಂತ ಮಹತ್ವದ್ದು. ಅದು ಕಾರ್ಟೋಸ್ಯಾಟ್ 2ಡಿ. ಇದು ಭಾರತದ ಉಪಗ್ರಹ. ಇದು ತೆಗೆಯುವ ಚಿತ್ರಗಳು ಸಂಪನ್ಮೂಲಗಳ ಶೋಧನೆಗೆ ಹಾಗೂ ಮೂಲಸೌಕರ್ಯಕ್ಕೆ ಅತ್ಯಂತ ಉಪಯುಕ್ತ. ನಗರ ಪ್ರದೇಶಧ ಅಭಿವೃದ್ಧಿ ಹಾಗೂ ಯೋಜನೆಗಳಿಗೂ ಸಹಕಾರಿ. ಅದರಲ್ಲೂ ರೈತ ಸೋದರ ಸೋದರಿಯರಿಗೆ, ನಮ್ಮ ಹೊಸ ಉಪಗ್ರಹ ಕಾರ್ಟೋ ಸ್ಯಾಟ್ 2 ಡಿ ಅತ್ಯಂತ ಉಪಯುಕ್ತವಾಗಿದೆ. ನಮ್ಮ ಜಲ ಮೂಲಗಳಲ್ಲಿ ಎಷ್ಟು ಪ್ರಮಾಣದ ನೀರಿದೆ, ಅದನ್ನು ಹೇಗೆ ಉತ್ತಮವಾಗಿ ಬಳಸಿಕೊಳ್ಳಬಹುದು, ಈ ನಿಟ್ಟಿನಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳೇನು ಎಂಬುದನ್ನು ತಿಳಿಸುತ್ತದೆ. ಈ ಉಪಗ್ರಹ ಉಡಾವಣೆಯಾದ ಸ್ವಲ್ಪ ಹೊತ್ತಿನಲ್ಲೇ ಕೆಲವು ಚಿತ್ರಗಳನ್ನು ಕಳುಹಿಸಿದೆ. ಅದು ಕಾರ್ಯಾರಂಭ ಮಾಡಿದೆ. ಈ ಸಂಪೂರ್ಣ ಉಡಾವಣೆಯ ನೇತೃತ್ವವನ್ನು ನಮ್ಮ ಯುವ ವಿಜ್ಞಾನಿಗಳು ಮಾಡಿದ್ದಾರೆ, ಇದರಲ್ಲಿ ನಮ್ಮ ಮಹಿಳಾ ವಿಜ್ಞಾನಿಗಳ ಪಾತ್ರವೂ ಸಂತಸದ ವಿಷಯ. ಇಸ್ರೋದ ಈ ಯಶಸ್ಸಿನಲ್ಲಿ ಯುವ ಮತ್ತು ಮಹಿಳೆಯರ ಪ್ರಮುಖ ಪಾಲ್ಗೊಳ್ಳುವಿಕೆ ಮತ್ತೊಂದು ಹೆಮ್ಮೆಯ ವಿಷಯವಾಗಿದೆ. ನಮ್ಮ ದೇಶವಾಸಿಗಳ ಪರವಾಗಿ ನಾನು, ಇಸ್ರೋದ ವಿಜ್ಞಾನಿಗಳನ್ನು ಅಭಿನಂದಿಸುತ್ತೇನೆ. ಸಾಮಾನ್ಯ ಜನರಿಗಾಗಿ, ದೇಶ ಸೇವೆಗಾಗಿ ಅಂತರಿಕ್ಷ ವಿಜ್ಞಾನವನ್ನು ಅಳವಡಿಸುವ ವಿಚಾರದಲ್ಲಿ ಅವರು ಸದಾ ಜಾಗೃತರಾಗಿದ್ದಾರೆ. ಅವರು ಒಂದರ ಮೇಲೆ ಒಂದು ದಾಖಲೆ ಮಾಡುತ್ತಲೇ ಇದ್ದಾರೆ. ನಮ್ಮ ವಿಜ್ಞಾನಿಗಳು ಮತ್ತು ಅವರ ತಂಡವನ್ನು ಅಭಿನಂದಿಸಲು ಪದಗಳೇ ಸಾಲುವುದಿಲ್ಲ.
ಶೋಭಾ ಜೀ, ಅವರು ಮತ್ತೊಂದು ಪ್ರಶ್ನೆ ಕೇಳಿದ್ದಾರೆ. ಅದು ನಮ್ಮ ದೇಶದ ಸುರಕ್ಷತೆಯ ವಿಚಾರ. ಅದು ಭಾರತ ಪಡೆದುಕೊಂಡ ದೊಡ್ಡ ಶಕ್ತಿಯದ್ದಾಗಿದೆ. ಈ ಮಹತ್ವದ ವಿಚಾರದ ಬಗ್ಗೆ ಹೆಚ್ಚು ಚರ್ಚಿಸುವ ವಿಚಾರವಲ್ಲ ಆದರೂ, ಅದು ಶೋಭಾ ಅವರ ಗಮನ ಸೆಳೆದಿದೆ. ಭಾರತ ರಕ್ಷಣಾ ಕ್ಷೇತ್ರದಲ್ಲೂ ಯಶಸ್ವೀ ಪ್ರಯೋಗ ನಡೆಸಿದೆ. ಖಂಡಾಂತರ ಕ್ಷಿಪಣಿ ಬೇಧಕದ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಅದರ ಪರೀಕ್ಷೆಯ ವೇಳೆ, ಬೇಧಿಸುವ ತಂತ್ರಜ್ಞಾನದ ಈ ಕ್ಷಿಪಣಿ, ಭೂ ಮೇಲ್ಮೈನಿಂದ 100 ಕಿ.ಮೀ. ಎತ್ತರದಲ್ಲಿ ಶತ್ರುಪಡೆಯ ಕ್ಷಿಪಣಿಯನ್ನು ದ್ವಂಸ ಮಾಡಬಲ್ಲುದಾಗಿದ್ದು, ಆ ಯಶಸ್ಸು ಸಾಧಿಸಿದೆ. ಇದು ರಕ್ಷಣೆಯಲ್ಲಿ ಅಸಾಧಾರಣ ಸಾಮರ್ಥ್ಯದ ಗಣನೀಯ ಸಾಧನೆ. ಮತ್ತು ನಿಮಗೆ ಸಂತೋಷ ಆಗಬಹುದು. ವಿಶ್ವದಲ್ಲಿ ಕೇವಲ ನಾಲ್ಕು ಅಥವಾ ಐದು ರಾಷ್ಟ್ರಗಳು ಮಾತ್ರವೇ ಈ ಸಾಮರ್ಥ್ಯವನ್ನು ಹೊಂದಿವೆ. ಭಾರತದ ವಿಜ್ಞಾನಿಗಳು ಈ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. 2000 ಕಿ.ಮೀ. ದೂರದಿಂದ ಕೂಡ ಭಾರತದ ಮೇಲೆ ಕ್ಷಿಪಣಿ ದಾಳಿ ನಡೆಸಿದರೂ, ಅದನ್ನು ಆಕಾಶದಲ್ಲೇ ಹೊಡೆದುರುಳಿಸುವ ಶಕ್ತಿಯನ್ನು ಇದು ಹೊಂದಿದೆ.
ನಾವು ಹೊಸ ತಂತ್ರಜ್ಞಾನ ನೋಡಿದಾಗ ಅಥವಾ ಹೊಸ ವೈಜ್ಞಾನಿಕ ಯಶಸ್ಸಿನ ಹೆಜ್ಜೆಯನ್ನು ಇಟ್ಟಾಗ ನಮಗೆ ಸಹಜವಾಗೇ ಸಂತಸ ಎನಿಸುತ್ತದೆ. ಮಾನವ ಬದುಕಿನಲ್ಲಿ ಮತ್ತು ಅಭಿವೃದ್ಧಿಯಲ್ಲಿ ಕುತೂಹಲ ಎಂಬುದು ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ಯಾರಿಗೆ ವಿಶಿಷ್ಟವಾದ ಪ್ರತಿಭೆ ಮತ್ತು ಜ್ಞಾನ ಇರುತ್ತದೋ ಅವರು, ಕುತೂಹಲವನ್ನು ಕುತೂಹಲವಾಗಿ ಉಳಿಸಿಕೊಳ್ಳುತ್ತಾರೆ. ಹೊಸ ಕೌತುಕವನ್ನು ಶೋಧಿಸುತ್ತಾರೆ. ಹೊಸ ಕುತೂಹಲವನ್ನು ಶೋಧನೆಯ ಹಾದಿಯಲ್ಲಿ ಅನ್ವೇಷಿಸುತ್ತಾರೆ. ಈ ಅವಿರತ ಸ್ಫೂರ್ತಿ ಹೊಸ ಆವಿಷ್ಕಾರಗಳಿಗೆ ನಾಂದಿ ಹಾಡುತ್ತದೆ. ಅವರು ಅದಕ್ಕೆ ಉತ್ತರ ಸಿಗುವ ತನಕ ಬಿಡುವು ಪಡೆಯುವುದೇ ಇಲ್ಲ. ನಾವು ಸಾವಿರಾರು ವರ್ಷಗಳ ಮಾನವನ ಜೀವನ ಮತ್ತು ಪ್ರಗತಿಯಾತ್ರೆಯ ಮೇಲೆ ಪಕ್ಷೀನೋಟ ಬೀರಿದರೆ, ಈ ಶ್ರೇಷ್ಠ ಪಯಣಕ್ಕೆ ಎಲ್ಲಿಯೂ ಪೂರ್ಣ ವಿರಾಮ ಎಂಬುದಿಲ್ಲ ಎಂಬುದು ನಮಗೆ ಅರಿವಾಗುತ್ತದೆ. ಪೂರ್ಣ ವಿರಾಮ ಅಸಂಭವ. ಬ್ರಹ್ಮಾಂಡವನ್ನೂ, ಸೃಷ್ಟಿಯ ನಿಯಮಗಳನ್ನೂ, ಮಾನವನ ಮನಸ್ಸನ್ನೂ ತಿಳಿದುಕೊಳ್ಳುವ ಪ್ರಯತ್ನಕ್ಕೆ ಕೊನೆಯೇ ಇರುವುದಿಲ್ಲ. ಇದುವೇ ಹೊಸ ವಿಜ್ಞಾನ, ಹೊಸ ತಂತ್ರಜ್ಞಾನದ ಬುನಾದಿ. ಪ್ರತಿಯೊಂದು ಹೊಸ ತಂತ್ರಜ್ಞಾನ, ಪ್ರತಿಯೊಂದು ಹೊಸ ಬಗೆಯ ವಿಜ್ಞಾನ ಹೊಸ ಮನ್ವಂತರಕ್ಕೆ ಕಾರಣವಾಗುತ್ತದೆ.
ನನ್ನ ಯುವ ಸ್ನೇಹಿತರೇ, ನಾವು ವಿಜ್ಞಾನ ಮತ್ತು ವಿಜ್ಞಾನಿಗಳ ಕಠಿಣ ಪರಿಶ್ರಮದ ಬಗ್ಗೆ ಮಾತನಾಡುತ್ತಿರುವಾಗಲೀ, ನಾನು ಹಲವು ಬಾರಿ ಮನ್ ಕಿ ಬಾತ್ ನಲ್ಲಿ ಹೇಳಿದ್ದೇನೆ. ಅದೇನೆಂದರೆ, ನಮ್ಮ ಯುವ ಜನರಲ್ಲಿ ವಿಜ್ಞಾನದ ಆಕರ್ಷಣೆ ಹೆಚ್ಚಾಗಬೇಕು. ದೇಶಕ್ಕೆ ಹೆಚ್ಚು ಹೆಚ್ಚು ವಿಜ್ಞಾನಿಗಳ ಅಗತ್ಯವಿದೆ. ಇಂದಿನ ವಿಜ್ಞಾನಿಗಳು ನಮ್ಮ ಭವಿಷ್ಯದ ಪೀಳಿಗೆಯ ಬದುಕಿನಲ್ಲಿ ಬದಲಾವಣೆ ತರಬಲ್ಲವರಾಗುತ್ತಾರೆ.
ಮಹಾತ್ಮಾ ಗಾಂಧಿ ಅವರು ಪದೇ ಪದೇ ಹೇಳುತ್ತಿದ್ದರು. ‘ಯಾವುದೇ ವಿಜ್ಞಾನ ಪರಿಪೂರ್ಣ ರೂಪದಲ್ಲಿ ಆಕಾಶದಿಂದ ಬಿದ್ದುದಲ್ಲ’ ಎಂದು. ಎಲ್ಲ ವಿಜ್ಞಾನಗಳೂ ಅನುಭವದ ಮೂಲಕ ಮತ್ತು ಅಭಿವೃದ್ಧಿಯನ್ನು ಸಾಧಿಸಿದವೇ ಆಗಿವೆ”.
ಪೂಜ್ಯ ಬಾಪೂ ಅವರು, ‘ಉತ್ಸಾಹ,ಉದ್ಯಮ ಮತ್ತು ತ್ಯಾಗವನ್ನು ಪ್ರಶಂಸಿಸುವುದನ್ನು ಬಿಟ್ಟು ನನಗೆ ಬೇರೆ ಇಲ್ಲ, ಸತ್ಯದ ನಂತರದ ಅನ್ವೇಷಣೆಯಲ್ಲಿ ಆಧುನಿಕ ವಿಜ್ಞಾನಿಗಳನ್ನು ಅದು ಹುರಿದುಂಬಿಸಿದೆ’ ಎಂದೂ ಹೇಳಿದ್ದಾರೆ.
ಜನಸಾಮಾನ್ಯರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು, ವಿಜ್ಞಾನದ ಸಿದ್ಧಾಂತಗಳ ಸಹಜ ಉಪಯೋಗ ಹೇಗೆ ಆಗಬೇಕು, ಅದಕ್ಕೆ ಮಾಧ್ಯಮ ಯಾವುದು, ತಂತ್ರಜ್ಞಾನ ಹೇಗಿರಬೇಕು ಎಂದು ಆಲೋಚಿಸಿ ವಿಜ್ಞಾನವನ್ನು ಅಳವಡಿಸಿಕೊಂಡರೆ, ಅದುವೇ ಮಾನವತೆಗೆ ದೊಡ್ಡ ಕೊಡುಗೆಯಾಗುತ್ತದೆ. ಇತ್ತೀಚೆಗೆ 14ನೇ ಪ್ರವಾಸಿ ಭಾರತೀಯ ದಿವಸ್ ನಲ್ಲಿ, ನೀತಿ ಆಯೋಗ ಮತ್ತು ಭಾರತೀಯ ವಿದೇಶಾಂಗ ಸಚಿವಾಲಯ ಒಂದು ವಿಶಿಷ್ಟ ಸ್ಪರ್ಧೆಯನ್ನು ಏರ್ಪಡಿಸಿತ್ತು. ಸಾಮಾಜಿಕವಾಗಿ ಉಪಯುಕ್ತವಾಗಬಲ್ಲ ನಾವಿನ್ಯತೆಯನ್ನು ಅದು ಆಹ್ವಾನಿಸಿತ್ತು. ಈ ನಾವಿನ್ಯತೆಗಳನ್ನು ಗುರುತಿಸಿ ಪ್ರದರ್ಶಿಸಲಾಯಿತು ಮತ್ತು ಜನರಿಗೆ ಅದರ ಬಗ್ಗೆ ಮಾಹಿತಿಯನ್ನೂ ನೀಡಲಾಯಿತು, ಈ ನಾವಿನ್ಯ ಆವಿಷ್ಕಾರಗಳು ಸಾಮಾನ್ಯ ಜನರ ಬಳಕೆಗೆ ಹೇಗೆ ಬರುತ್ತವೆ, ಇವುಗಳ ಸಾಮೂಹಿಕ ಉತ್ಪಾದನೆ ಹೇಗೆ, ಅದರ ವಾಣಿಜ್ಯ ಬಳಕೆ ಹೇಗೆ ಎಂಬ ಬಗ್ಗೆ ಬೆಳಕು ಚೆಲ್ಲಲಾಯಿತು. ಆ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ಕಾರ್ಯ ಆಗಿರುವುದನ್ನು ನಾನು ನೋಡಿದೆ. ಒಂದು ಉದಾಹರಣೆಯನ್ನು ನೀಡುವುದಾದರೆ, ನಮ್ಮ ಬಡ ಮೀನುಗಾರ ಸೋದರರಿಗಾಗಿ ಒಂದು ಆವಿಷ್ಕಾರ ನೋಡಿದೆ. ಅದು ಒಂದು ಸಾಧಾರಣ ಮೊಬೈಲ್ ಆಪ್. ಆದರೆ ಅದು ಎಷ್ಟು ಶಕ್ತಿಶಾಲಿ ಎಂದರೆ, ಮೀನುಗಾರರು ಮೀನು ಹಿಡಿಯಲು ಸಮುದ್ರದ ನೀರಿಗೆ ಇಳಿದಾಗ, ಈ ಆಪ್, ಹೆಚ್ಚು ಉತ್ಪಾದಕತೆಯ ಸ್ಥಳಗಳ ಬಗ್ಗೆ ಮಾರ್ಗದರ್ಶನ ಮಾಡುತ್ತದೆ ಮತ್ತು ಅಲ್ಲದೆ ಗಾಳಿಯ ರಭಸದ ವೇಗ, ದಿಕ್ಕು, ಅಲೆಗಳ ಎತ್ತರ ಮೊದಲಾದ ಹಲವು ಮಾಹಿತಿಯನ್ನೂ ಒದಗಿಸುತ್ತದೆ. ಈ ಎಲ್ಲ ಮಾಹಿತಿಗಳೂ ಮೊಬೈಲ್ ಆಪ್ ಒಂದರಿಂದ ಲಭ್ಯವಾಗುತ್ತವೆ. ಇದು ನಮ್ಮ ಮೀನುಗಾರ ಸೋದರರು ಹೆಚ್ಚು ಮೀನುಗಳು ದೊರಕುವ ಸ್ಥಳದತ್ತ ಅತಿ ಕಡಿಮೆ ಅವಧಿಯಲ್ಲಿ ಹೋಗಲು ಸಹಕಾರಿಯಾಗಿದೆ ಮತ್ತು ಅದು ಅವರ ಜೀವನೋಪಾಯದ ಗಳಿಕೆ ಹೆಚ್ಚಿಸಲೂ ಅನುವಾಗಲಿದೆ.
ಕೆಲವೊಮ್ಮೆ ಸಮಸ್ಯೆಗಳು ಕೂಡ ಪರಿಹಾರಕ್ಕೆ ವಿಜ್ಞಾನದ ಅವಶ್ಯಕತೆಯನ್ನು ಒದಗಿಸುತ್ತದೆ. 2005ರಲ್ಲಿ, ಮುಂಬೈನಲ್ಲಿ ಅತಿಯಾದ ಮಳೆಯಾಯಿತು. ಅದು ಪ್ರವಾಹಕ್ಕೂ ಕಾರಣವಾಯಿತು ಮತ್ತು ಎತ್ತರದ ಸಾಗರದ ಅಲೆಗಳು ಎದ್ದವು. ಬದುಕು ದುಸ್ತರವಾಯಿತು. ಯಾವಾಗ ಪ್ರಾಕೃತಿಕ ವಿಕೋಪಗಳು ಎದುರಾಗುತ್ತವೋ, ಆಗ ಶೋಷಿತರು ಬಡವರು ಮೊದಲಿಗೆ ಇದಕ್ಕೆ ತುತ್ತಾಗುತ್ತಾರೆ. ಅಂಥ ಸನ್ನಿವೇಶದ ಬಗ್ಗೆ ಇಬ್ಬರು, ಕೆಲಸ ಮಾಡಿ, ಇಂಥ ವಿಕೋಪದಿಂದ ಮನೆಗಳನ್ನು ಕಾಪಾಡುವಂಥ ಆ ಮನೆಗಳಲ್ಲಿರುವವರ ಪ್ರಾಣ ಕಾಪಾಡುವಂಥ, ನೀರು ಮನೆಯಲ್ಲಿ ನಿಲ್ಲುವುದನ್ನು ತಡೆಯುವಂಥ, ನೀರಿನ ಪ್ರವಾಹದಿಂದ ಉಂಟಾಗುವ ಸಾಂಕ್ರಾಮಿಕ ರೋಗ ಪ್ರತಿರೋಧಿಸುವಂಥ ಮನೆಯ ವಿನ್ಯಾಸ ಮಾಡಿದ್ದಾರೆ. ಇಂಥ ಹಲವು ಸಂಖ್ಯೆಯ ಆವಿಷ್ಕಾರಗಳಿವೆ.
ನನ್ನ ಮಾತಿನ ಅರ್ಥ ಇಷ್ಟೇ. ಸಮಾಜದಲ್ಲಿ ಇಂಥ ಪಾತ್ರ ವಹಿಸುವ ಜನರು ತುಂಬಾ ಇದ್ದಾರೆ. ನಮ್ಮ ಸಮಾಜ ಕೂಡ ತಂತ್ರಜ್ಞಾನದತ್ತ ಹೊರಳುತ್ತಿದೆ. ನಮ್ಮ ವ್ಯವಸ್ಥೆಯೂ ತಂತ್ರಜ್ಞಾನ ಆಧಾರಿತವಾಗುತ್ತಿದೆ. ಒಂದು ರೀತಿಯಲ್ಲಿ ತಂತ್ರಜ್ಞಾನ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿದೆ. ಇತ್ತೀಚಿನ ದಿನಗಳಲ್ಲಿ, ಡಿಜಿ-ಧನ್ ಮೇಲೆ ಹೆಚ್ಚಿನ ಒತ್ತು ನೀಡುತ್ತಿರುವುದನ್ನು ಎಲ್ಲರೂ ಗಮನಿಸಿರಬಹುದು. ನಿಧಾನವಾಗಿ ಜನರು ತಮ್ಮ ನಗದು ವಹಿವಾಟಿನ ಮನೋಸ್ಥಿತಿಯಿಂದ ಹೊರಬಂದು ಡಿಜಿಟಲ್ ಹಣದತ್ತ ಸಾಗುತ್ತಿದ್ದಾರೆ. ಡಿಜಿಟಲ್ ವಹಿವಾಟು ಭಾರತದಲ್ಲಿ ತ್ವರಿತ ಏರಿಕೆ ಕಾಣುತ್ತಿದೆ. ಅದರಲ್ಲೂ ಯುವ ಪೀಳಿಗೆ, ಮೊಬೈಲ್ ಹ್ಯಾಂಡ್ ಸೆಟ್ ಮೂಲಕ ಡಿಜಿಟಲ್ ಪಾವತಿಯನ್ನು ರೂಢಿಸಿಕೊಳ್ಳುತ್ತಿದ್ದಾರೆ. ಇದು ನಿಜಕ್ಕೂ ಉತ್ತಮ ಹೆಜ್ಜೆ ಎಂದು ನಾನು ಭಾವಿಸುತ್ತೇನೆ. ಇತ್ತೀಚಿನ ದಿನಗಳಲ್ಲಿ, ಲಕ್ಕಿ ಗ್ರಾಹಕ ಯೋಜನೆ ಮತ್ತು ಡಿಜಿ-ಧನ್ ವ್ಯಾಪಾರಿ ಯೋಜನೆಗಳಿಗೆ ಅಭೂತಪೂರ್ವ ಬೆಂಬಲ ದೊರೆತಿದೆ. ಕಳೆದ ಎರಡು ತಿಂಗಳುಗಳಿಂದ 15 ಸಾವಿರ ಜನರು ಪ್ರತಿ ನಿತ್ಯ 1 ಸಾವಿರ ರೂಪಾಯಿ ಬಹುಮಾನ ಗೆಲ್ಲುತ್ತಿದ್ದಾರೆ. ಈ ಎರಡು ಯೋಜನೆಗಳಿಂದಾಗಿ ಡಿಜಿಟಲ್ ಪಾವತಿಯನ್ನು ಒಂದು ಸಾಮೂಹಿಕ ಆಂದೋಲನವಾಗಿ ಆರಂಭಿಸಲಾಗಿದೆ;ಇದಕ್ಕೆ ಅಭೂತಪೂರ್ವ ಸ್ವಾಗತ ದೇಶದಾದ್ಯಂತ ದೊರೆತಿದೆ. ಈವರೆಗೆ ಡಿಜಿ-ಧನ್ ಯೋಜನೆಯಡಿ 10 ಲಕ್ಷ ಜನರು ಬಹುಮಾನ ಪಡೆದಿದ್ದಾರೆ. 50 ಸಾವಿರಕ್ಕೂ ಹೆಚ್ಚು ವ್ಯಾಪಾರಿಗಳು ಬಹುಮಾನ ಗೆದ್ದಿದ್ದಾರೆ. ಸುಮಾರು 150 ಕೋಟಿ ರೂಪಾಯಿಗಳಷ್ಟು ಹಣವನ್ನು ಈ ಅಭಿಯಾನದಲ್ಲಿ ತೊಡಗಿಕೊಂಡಿರುವ ಜನರ ಪೈಕಿ ಕೆಲವರು ಗಳಿಸಿದ್ದಾರೆ. ಈ ಯೋಜನೆಯಡಿ 100ಕ್ಕೂ ಹೆಚ್ಚು ಗ್ರಾಹಕರು ತಲಾ ಒಂದು ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾರೆ. ನಾಲ್ಕು ಸಾವಿರಕ್ಕೂ ಹೆಚ್ಚು ವ್ಯಾಪಾರಿಗಳಿಗೆ ತಲಾ 50 ಸಾವಿರ ರೂಪಾಯಿಗಳ ಬಹುಮಾನ ದೊರೆತಿದೆ. ರೈತರು, ವ್ಯಾಪಾರಿಗಳು, ಸಣ್ಣ ಉದ್ದಿಮೆಗಳು, ವೃತ್ತಿಪರರು, ಗೃಹಿಣಿಯರು, ವಿದ್ಯಾರ್ಥಿಗಳು ಎಲ್ಲರೂ ಉತ್ಸಾಹದಿಂದ ಇದರಲ್ಲಿ ಭಾಗಿಗಳಾಗಿ ಲಾಭ ಪಡೆಯುತ್ತಿದ್ದಾರೆ. ನಾನು ಕೇವಲ ಯುವ ಜನರು ಮಾತ್ರವೇ ಇದರಲ್ಲಿ ತೊಡಗಿದ್ದಾರೆಯೇ ಎಂಬ ವಿಶ್ಲೇಷಣೆಯನ್ನು ತಿಳಿಯಬಯಸಿದಾಗ, ಹಿರಿಯ ವ್ಯಕ್ತಿಗಳೂ ಮುಂದೆ ಬಂದಿದ್ದಾರೆ ಎಂದು ತಿಳಿದು ಸಂತೋಷವಾಯಿತು, ಇದರಲ್ಲಿ 15 ವರ್ಷದ ಯುವಕರಿಂದ ಹಿಡಿದು 65-70ವರ್ಷದ ಹಿರಿಯರೂ ಭಾಗಿಯಾಗಿದ್ದಾರೆ.
ಮೈಸೂರಿನಿಂದ ಶ್ರೀಮಾನ್ ಸಂತೋಷ್ ಅವರು ಸಂತಸ ವ್ಯಕ್ತಪಡಿಸಿ, ನರೇಂದ್ರ ಮೋದಿ ಆಪ್ ನಲ್ಲಿ ಹೀಗೆ ಬರೆದಿದ್ದಾರೆ. ಲಕ್ಕಿ ಗ್ರಾಹಕ ಯೋಜನೆ ಅಡಿ, ಅವರಿಗೆ 1000 ರೂಪಾಯಿ ಬಹುಮಾನ ಬಂತಂತೆ. ಅವರು ತುಂಬಾ ಪ್ರಾಮಾಣಿಕವಾಗಿ ಬರೆದಿರುವುದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ. ಅವರಿಗೆ ಈ ಬಹುಮಾನ ಬಂದಾಗ, ಒಬ್ಬರು ಬಡ ವೃದ್ಧೆ ಅವರ ಮನೆಯಲ್ಲಿ ಉಂಟಾದ ಅಗ್ನಿ ದುರಂತದಲ್ಲಿ ಮನೆಯಲ್ಲಿದ್ದ ಎಲ್ಲ ವಸ್ತುಗಳನ್ನೂ ಕಳೆದುಕೊಂಡಿದ್ದರು. ಆಗ ಸಂತೋಷ್ ಅವರಿಗೆ ಈ ಹಣದ ಮೇಲೆ ತಮಗಿಂತ ಹೆಚ್ಚಾಗಿ ಆಕೆಗೆ ಹೆಚ್ಚು ಹಕ್ಕಿದೆ ಎನಿಸಿ, ಆ ಸಾವಿರ ರೂಪಾಯಿಯನ್ನು ಆಕೆಗೆ ನೀಡಿದರಂತೆ. ಇದರಿಂದ ತಮಗೆ ಅತೀವ ಸಂತೋಷವಾಗಿದೆ ಎಂದು ಸಂತೋಷ್ ತಿಳಿಸಿದ್ದಾರೆ. ಸಂತೋಷ್ ಅವರೇ ನಿಮ್ಮ ಹೆಸರು ಮತ್ತು ನೀವು ಮಾಡಿರುವ ಕಾರ್ಯ ಎರಡೂ ಸಂತೋಷದಾಯಕವೇ. ಇದು ಎಲ್ಲರಿಗೂ ತೃಪ್ತಿದಾಯಕ. ನೀವು ಮಾಡಿರುವ ಕಾರ್ಯ ಪ್ರೇರಣಾತ್ಮಕವಾಗಿದೆ.
22 ವರ್ಷಗಳ ಕ್ಯಾಬ್ ಚಾಲಕ ಸೋದರ ದೆಹಲಿಯ ಸಬೀರ್ ಅವರು ನೋಟುಗಳ ರದ್ದತಿಯ ಬಳಿಕ, ತಮ್ಮ ವಹಿವಾಟಿನಲ್ಲಿ ಡಿಜಿಟಲ್ ಮಾದರಿ ಅಳವಡಿಸಿಕೊಂಡಿದ್ದಾರೆ ಇದರಿಂದ, ಸರ್ಕಾರದ ಲಕ್ಕಿ ಗ್ರಾಹಕ್ ಯೋಜನೆ ಅಡಿ ಅವರು ಒಂದು ಲಕ್ಷ ರೂಪಾಯಿ ಬಹುಮಾನ ಗೆಲ್ಲುವಂತಾಗಿದೆ. ಅವರು ಚಾಲಕರಾಗಿ ತಮ್ಮ ವೃತ್ತಿ ಮುಂದುವರಿಸಿದ್ದರೂ, ಅವರು ಈ ಯೋಜನೆಯ ರಾಯಭಾರಿಯಾಗಿದ್ದಾರೆ. ಅವರು ತಮ್ಮ ಗ್ರಾಹಕರಿಗೆ ಸದಾ ಕಾಲ ಡಿಜಿಟಲ್ ಬಳಕೆಯ ಅರಿವು ಮೂಡಿಸುತ್ತಿದ್ದಾರೆ. ಅವರು ಉತ್ಸಾಹಭರಿತರಾಗಿ ಇತರರನ್ನೂ ಡಿಜಿಟಲ್ ಮಾಧ್ಯಮಕ್ಕೆ ಉತ್ತೇಜಿಸುತ್ತಿದ್ದಾರೆ.
ಒಬ್ಬರು ಸ್ನಾತಕೋತ್ತರ ವಿದ್ಯಾರ್ಥಿನಿ ಮಹಾರಾಷ್ಟ್ರದ ಪೂಜಾ ನೆಮಾಡೆ ಅವರು ಹೇಗೆ ತಮ್ಮ ಕುಟುಂಬದ ಸದಸ್ಯರು ರೂಪೇ ಕಾರ್ಡ್ ಮತ್ತು ಇ ವ್ಯಾಲೆಟ್ ಸೌಲಭ್ಯ ಬಳಸುತ್ತಿದ್ದಾರೆ ಮತ್ತು ಹೇಗೆ ಅದರಿಂದ ಆನಂದ ಪಡುತ್ತಿದ್ದಾರೆ ಹಾಗೂ ಒಂದು ಲಕ್ಷ ರೂಪಾಯಿಗಳ ಬಹುಮಾನದ ಹಣ ಎಷ್ಟು ಅವರಿಗೆ ಮಹತ್ವ ಎಂಬ ತಮ್ಮ ಅನುಭವವನ್ನು ಗೆಳೆಯರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇವರು ಇದನ್ನು ಅಭಿಯಾನದ ರೀತಿಯಲ್ಲಿ ಕೈಗೊಂಡಿದ್ದು, ಇತರರನ್ನೂ ಈ ವ್ಯಾಪ್ತಿಗೆ ತರುತ್ತಿದ್ದಾರೆ.
ನಾನು ನನ್ನ ದೇಶವಾಸಿಗಳನ್ನು ಅದರಲ್ಲೂ ಯುವಕರನ್ನು ಹಾಗೂ ಲಕ್ಕಿ ಗ್ರಾಹಕ ಯೋಜನೆ ಅಡಿ ಅಥವಾ ಡಿಜಿ ವ್ಯಾಪಾರ್ ಯೋಜನೆ ಅಡಿ ಬಹುಮಾನ ಪಡೆದಿರುವವರನ್ನು ಈ ಯೋಜನೆಯ ಸ್ವಯಂ ರಾಯಭಾರಿಗಳಾಗುವಂತೆ ಮತ್ತು ಇದು ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟವಾಗಿದ್ದು, ಈ ಆಂದೋಲನ ಮುಂದುವರಿಸುವಂತೆ ಕೋರುತ್ತೇನೆ. ನನ್ನ ಪ್ರಕಾರ, ಈ ಅಭಿಯಾನದಲ್ಲಿ ಭಾಗಿಯಾಗಿರುವ ಎಲ್ಲ ವ್ಯಕ್ತಿಗಳೂ ದೇಶದಲ್ಲಿ ಹೊಸ ಭ್ರಷ್ಟಾಚಾರ ವಿರೋಧಿ ಪಡೆ ರಚಿಸಿದ್ದಾರೆ. ಶುದ್ಧೀಕರಣ ಮತ್ತು ಸ್ವಚ್ಛತೆಯ ಉದ್ದೇಶದಲ್ಲಿ ನೀವು ಯೋಧರಾಗಿದ್ದೀರಿ. ಈ ಯೋಜನೆ ತನ್ನ 100ನೇ ದಿನವನ್ನು ಏಪ್ರಿಲ್ 14ರಂದು ಪೂರ್ಣಗೊಳಿಸುತ್ತದೆ ಎಂಬುದನ್ನು ನೀವೆಲ್ಲರೂ ಬಲ್ಲವರಾಗಿದ್ದೀರಿ. ಅಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಅದು ಅವಿಸ್ಮರಣೀಯ ದಿನ. 14ನೇ ಏಪ್ರಿಲ್ ಅಂದು ಕೋಟ್ಯಂತರ ರೂಪಾಯಿಗಳ ಬಹುಮಾನದ ಡ್ರಾ ಇದೆ. ಇದಕ್ಕಾಗಿ ಇನ್ನೂ 40-45ದಿನ ಬಾಕಿ ಇದೆ. ನೀವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸ್ಮರಣೆಯಲ್ಲಿ ಒಂದು ಕೆಲಸ ಮಾಡುತ್ತೀರಾ? ನಾವು ಇತ್ತೀಚೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125ನೇ ಜನ್ಮ ದಿನೋತ್ಸವ ಆಚರಿಸಿದೆವು. ಅವರನ್ನು ಸ್ಮರಿಸುತ್ತಾ, ನೀವು ಬೀಮ್ ಆಪ್ ಡೌನ್ ಲೋಡ್ ಮಾಡಿಕೊಳ್ಳಲು 125 ಜನರಿಗೆ ತಿಳಿಸಿಕೊಡಿ. ಈ ಆಪ್ ಮೂಲಕ ಹೇಗೆ ವಹಿವಾಟು ನಡೆಸಬೇಕು ಎಂಬುದನ್ನೂ ತಿಳಿಸಿಕೊಡಿ. ಅದರಲ್ಲೂ ಇದನ್ನು ನಿಮ್ಮ ನೆರೆಹೊರೆಯ ಸಣ್ಣ ವ್ಯಾಪಾರಿಗಳಿಗೆ ಕಲಿಸಿಕೊಡಿ. ಈ ಬಾರಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನೋತ್ಸವಕ್ಕೆ ಹಾಗೂ ಬೀಮ್ ಆಪ್ ಗೆ ವಿಶೇಷ ಮಹತ್ವ ನೀಡಿ. ಇದಕ್ಕಾಗಿ ನಾವು ಡಾ. ಬಾಬಾ ಸಾಹೇಬ್ ಅವರು ಹಾಕಿಕೊಟ್ಟಿರುವ ಬುನಾದಿಯನ್ನು ಭದ್ರಪಡಿಸಬೇಕು ಎಂದು ಹೇಳಲು ಇಚ್ಛಿಸುತ್ತೇನೆ. ನಾವು ಮನೆ ಬಾಗಿಲಿನಿಂದ ಮನೆ ಬಾಗಿಲಿಗೆ ಹೋಗಿ, ಎಲ್ಲ 125 ಕೋಟಿ ಜನರ ಕೈಯಲ್ಲೂ ಬೀಮ್ ಆಪ್ ಇರುವಂತೆ ಮಾಡಬೇಕು. ಇದು ಕೇವಲ 2-3 ತಿಂಗಳುಗಳ ಹಿಂದೆ ಆರಂಭವಾದದ್ದಾದರೂ, ಆಂದೋಲನವಾಗಿ ಸ್ಪಷ್ಟ ಪರಿಣಾಮ ಬೀರಿದೆ, ಹಲವು ಪಟ್ಟಣ, ಹಳ್ಳಿ ಹಾಗೂ ನಗರದಲ್ಲಿ ದೊಡ್ಡ ಯಶಸ್ಸು ಕಂಡಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕೃಷಿ ನಮ್ಮ ದೇಶದ ಮೂಲ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡುತ್ತದೆ. ಗ್ರಾಮಗಳ ಆರ್ಥಿಕ ಶಕ್ತಿ ದೇಶದ ಆರ್ಥಿಕ ಪ್ರಗತಿಗೆ ಚಾಲನೆ ನೀಡುತ್ತದೆ. ನಾನು ಇಂದು ನಿಮ್ಮೊಂದಿಗೆ ಒಂದು ಸಂತೋಷದ ಸುದ್ದಿಯನ್ನು ಹಂಚಿಕೊಳ್ಳ ಬಯಸುತ್ತೇನೆ. ನಮ್ಮ ರೈತ ಸೋದರರು ಮತ್ತು ಸೋದರಿಯರು ನಮ್ಮ ಕಣಜವನ್ನು ತುಂಬಲು ಶಕ್ತಿಮೀರಿ ಶ್ರಮಿಸಿದ್ದಾರೆ. ನಮ್ಮ ದೇಶದಲ್ಲಿ ರೈತಾಪಿ ಜನರ ಪರಿಶ್ರಮದಿಂದಾಗಿ, ದಾಖಲೆಯ ಆಹಾರ ಧಾನ್ಯ ಉತ್ಪಾದನೆ ಆಗಿದೆ. ಎಲ್ಲ ಸಂಕೇತಗಳೂ ನಮ್ಮ ರೈತರು ಹಿಂದಿನ ದಾಖಲೆಗಳನ್ನು ಮುರಿದಿದ್ದಾರೆ ಎಂಬುದನ್ನು ತೋರಿಸುತ್ತವೆ. ಈ ಬಾರಿ ನಮ್ಮ ರೈತರ ಜಮೀನಿನಲ್ಲಿ ಬೆಳೆ ಹೇಗೆ ನಳನಳಿಸುತ್ತಿದೆ ಎಂದರೆ, ಪ್ರತಿ ದಿನವೂ ಪೊಂಗಲ್ ಮತ್ತು ಬೈಸಾಕಿಯ ಆಚರಣೆಯಾಗಿದೆ. ಈ ವರ್ಷ ದೇಶದಲ್ಲಿ ಎರಡು ಸಾವಿರದ 700 ಲಕ್ಷ ಟನ್ ಗಳಷ್ಟು ಆಹಾರ ಧಾನ್ಯ ಉತ್ಪಾದಿಸಲಾಗಿದೆ. ಇದು ನಮ್ಮ ರೈತರು ಈ ಹಿಂದೆ ಮಾಡಿದ್ದ ದಾಖಲೆಗಿಂತ ಶೇಕಡ 8ರಷ್ಟು ಹೆಚ್ಚಾಗಿದೆ. ಹೀಗಾಗಿ ಇದು ಅಭೂತಪೂರ್ವ ಸಾಧನೆಯಾಗಿದೆ. ನಾನು ವಿಶೇಷವಾಗಿ ನಮ್ಮ ದೇಶದ ರೈತರನ್ನು ಅಭಿನಂದಿಸಲು ಇಚ್ಛಿಸುತ್ತೇನೆ. ನಮ್ಮ ರೈತರು ಸಾಂಪ್ರದಾಯಿಕ ಬೆಳೆಗಳಲ್ಲದೆ, ದೇಶದ ಬಡ ಜನತೆಯನ್ನು ಗಮನದಲ್ಲಿಟ್ಟುಕೊಂಡು ಬೇರೆ ಬೇರೆ ಬೇಳೆಕಾಳುಗಳನ್ನು ಬೆಳೆದಿರುವುದಕ್ಕೆ ನಮ್ಮ ರೈತರನ್ನು ಅಭಿನಂದಿಸುತ್ತೇನೆ. ನಮ್ಮ ಬಡ ಜನರ ಅಗತ್ಯಗಳನ್ನು ಪೂರೈಸಲು ರೈತರು 290 ಹೆಕ್ಟೇರ್ ಭೂಮಿಯಲ್ಲಿ ವಿವಿಧ ಬೇಳೆ ಕಾಳುಗಳನ್ನು ಬೆಳೆದಿದ್ದಾರೆ ಎಂದು ತಿಳಿಸಲು ಹರ್ಷಿಸುತ್ತೇನೆ. ಇದು ಕೇವಲ ಬೇಳೆಕಾಳುಗಳ ಉತ್ಪಾದನೆ ಮಾತ್ರವೇ ಅಲ್ಲ, ದೇಶದ ಬಡ ಜನರಿಗೆ ಅವರು ಮಾಡಿರುವ ಒಕ್ಕಲು ಸೇವೆ. ನನ್ನ ಒಂದು ಪ್ರಾರ್ಥನೆಯನ್ನು, ಒಂದು ವಿನಂತಿಯನ್ನು ಅಂಗೀಕರಿಸಿ, ನಮ್ಮ ದೇಶದ ಕೃಷಿ ಬಾಂಧವರು, ದಾಖಲೆಯ ಬೇಳೆಕಾಳುಗಳ ಉತ್ಪಾದನೆ ಮಾಡಿದ್ದಾರೆ.
ನನ್ನ ಪ್ರೀತಿಯ ದೇಶವಾಸಿಗಳೇ, ಹೆಚ್ಚಿನ ಸ್ವಚ್ಛತೆಗಾಗಿ ಸರ್ಕಾರ, ಸಮಾಜ, ಸಂಸ್ಥೆಗಳು, ಸಂಘಟನೆಗಳು, ಅಷ್ಟೇಕೆ ಪ್ರತಿಯೊಬ್ಬರೂ ತಮ್ಮದೇ ಆದ ಪ್ರಯತ್ನ ಮಾಡುತ್ತಿದ್ದಾರೆ. ಈ ಹಾದಿಯಲ್ಲಿ ಪ್ರತಿಯೊಬ್ಬರೂ, ಒಮ್ಮತದ ಮಾದರಿಯಲ್ಲಿ ಸ್ವಚ್ಛತೆಯ ಉದ್ದೇಶಕ್ಕಾಗಿ ಒಗ್ಗೂಡಿ ಶ್ರಮಿಸುತ್ತಿದ್ದಾರೆ. ಸರ್ಕಾರ ಕೂಡ ಈ ನಿಟ್ಟಿನಲ್ಲಿ ಸತತ ಪ್ರಯತ್ನ ಮಾಡುತ್ತಿದೆ. ಇತ್ತೀಚೆಗೆ ತೆಲಂಗಾಣದಲ್ಲಿ ಭಾರತ ಸರ್ಕಾರದ ಜಲ ಮತ್ತು ನೈರ್ಮಲ್ಯ ಸಚಿವಾಲಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು, ಇದರಲ್ಲಿ 23 ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಇದು ಕೇವಲ ನಾಲ್ಕು ಕೋಣೆಗಳ ಮಧ್ಯೆ ನಡೆದ ವಿಚಾರಗೋಷ್ಠಿಗೆ ಸೀಮೀತವಾಗಿರಲಿಲ್ಲ. ಆದರೆ, ಸ್ವಚ್ಛತೆಯ ಮಹತ್ವವನ್ನು ತೆಲಂಗಾಣದ ವಾರಂಗಲ್ ನಲ್ಲಿ ಪ್ರತ್ಯಕ್ಷವಾಗಿಯೂ ಮಾಡಿ ತೋರಿಸಲಾಯಿತು. ಫೆಬ್ರವರಿ 17 ಮತ್ತು 18ರಂದು ಹೈದ್ರಾಬಾದ್ ನಲ್ಲಿ ಶೌಚಗುಂಡಿಗಳನ್ನು ಖಾಲಿ ಮಾಡುವ ಕಸರತ್ತು ನಡೆಸಲಾಯಿತು. ಆರು ಮನೆಗಳ ಶೌಚಗುಂಡಿಗಳನ್ನು ಖಾಲಿ ಮಾಡಿ ಶುಚಿಗೊಳಿಸಲಾಯಿತು ಮತ್ತು ಅಧಿಕಾರಿಗಳು ಸ್ವತಃ ಎರಡು ಗುಂಡಿಗಳ ಶೌಚಾಲಯದ ಬಳಕೆಯ ಪ್ರಾತ್ಯಕ್ಷಿಕೆಯನ್ನು ತೋರಿಸಿದರು. ಅವುಗಳನ್ನು ಹೇಗೆ ಖಾಲಿ ಮಾಡುವುದು ಮತ್ತು ಮರು ಬಳಕೆ ಮಾಡುವುದು ಎಂಬುದನ್ನು ತೋರಿಸಲಾಯಿತು. ಈ ಹೊಸ ತಾಂತ್ರಿಕತೆಯ ಶೌಚಾಲಯಗಳ ಬಳಕೆ ಎಷ್ಟು ಸೂಕ್ತವಾಗಿದೆ ಎಂಬುದನ್ನು ಪ್ರದರ್ಶಿಸಲಾಯಿತು. ಇದರಿಂದ ಯಾವುದೇ ಅನಾನುಕೂಲ ಅಥವಾ ಅದನ್ನು ಬರಿದು ಮಾಡುವಲ್ಲಿ ಅಥವಾ ಈ ಶೌಚಾಲಯ ಶುಚಿಗೊಳಿಸುವಲ್ಲಿ ಯಾವುದೇ ಅಡೆತಡೆ ಇಲ್ಲ ಅಥವಾ ಯಾವುದೇ ಮಾನಸಿಕ ಅಡ್ಡಿ ಆತಂಕಗಳು ಅಡ್ಡ ಬರುವುದಿಲ್ಲ ಎಂಬುದನ್ನು ನಿರೂಪಿಸಲಾಯಿತು. ನಾವು ಇತರ ಶುಚಿತ್ವದ ಕಾರ್ಯಗಳನ್ನು ಮಾಡುವ ರೀತಿಯಲ್ಲಿಯೇ ಸ್ವತಃ ಈ ಶೌಚಾಲಯಗಳನ್ನು ಶುಚಿಗೊಳಿಸಬಹುದು ಎಂಬುದನ್ನು ತೋರಿಸಲಾಯಿತು. ಈ ಕಸರತ್ತು ಫಲ ನೀಡಿದೆ. ದೇಶದ ಮಾಧ್ಯಮಗಳು ಇದಕ್ಕೆ ವ್ಯಾಪಕ ಪ್ರಚಾರವನ್ನೂ ನೀಡಿವೆ ಮತ್ತು ಅದರ ಮಹತ್ವವನ್ನೂ ಸಾರಿವೆ. ಒಬ್ಬ ಐ.ಎ.ಎಸ್. ಅಧಿಕಾರಿ ಸ್ವತಃ ಶೌಚಾಲಯದ ಗುಂಡಿಯನ್ನು ಶುಚಿಗೊಳಿಸುತ್ತಾರೆ ಎಂಬುದನ್ನು ಜನ ನೋಡಿದರೆ ಸಹಜವಾಗಿಯೇ ಈ ವಿಷಯವನ್ನು ದೇಶವೂ ಗಮನಿಸುತ್ತದೆ. ಮತ್ತು ಶೌಚಗುಂಡಿಗಳಿಂದ ತೆಗೆಯಲಾದ ತ್ಯಾಜ್ಯ ಒಂದು ವ್ಯರ್ಥ ಕಸ ಮಾತ್ರ ಆದರೆ, ಇದನ್ನು ಗೊಬ್ಬರದ ಬಳಕೆ ರೂಪದಲ್ಲಿ ನೋಡಿದರೆ ಅದು ಒಂದು ಕಪ್ಪು ಬಂಗಾರ. ನಾವು ತ್ಯಾಜ್ಯವನ್ನು – ಸಂಪತ್ತಾಗಿ ಪರಿವರ್ತಿಸುವುದನ್ನು ಸ್ಪಷ್ಟವಾಗಿ ನೋಡಿದ್ದೇವೆ. ಇದು ಸಾಬೀತಾಗಿದೆ ಕೂಡ. ಆರು ಸದಸ್ಯರ ಕುಟುಂಬದಲ್ಲಿ ಎರಡು ಗುಂಡಿಗಳ ಮಾದರಿ ಶೌಚಾಲಯ ಐದು ವರ್ಷಗಳ ಅವಧಿಯಲ್ಲಿ ತುಂಬುತ್ತದೆ. ಬಳಿಕ ಈ ತ್ಯಾಜ್ಯವನ್ನು ಮತ್ತೊಂದು ಗುಂಡಿಗೆ ಸುಲಭವಾಗಿ ವರ್ಗಾಯಿಸಬಹುದು. ಈ ಗುಂಡಿಯಲ್ಲಿ ಶೇಖರಣೆಯಾದ ತ್ಯಾಜ್ಯ ಆರರಿಂದ 12 ತಿಂಗಳುಗಳ ಅವಧಿಯಲ್ಲಿ ಕೊಳೆತುಹೋಗುತ್ತದೆ. ಇದನ್ನು ಸುರಕ್ಷಿತವಾಗಿ, ಸುಲಭವಾಗಿ ಬಹು ಉಪಯುಕ್ತವಾದ “ಎನ್.ಪಿ.ಕೆ.’’ಯಾಗಿ ಬಳಕೆ ಮಾಡಬಹುದಾಗಿದೆ. ಎನ್.ಪಿ.ಕೆ. ಪೌಷ್ಟಿಕಯುಕ್ತವಾದ ನೈಟ್ರೋಜಿನ್ (ಸಾರಜನಕ), ಫಾಸ್ಫರಸ್ (ರಂಜಕ) ಮತ್ತು ಪೊಟಾಷಯಂ (ಸ್ಪಟಿಕೀಯ ಲವಣ) ಒಳಗೊಂಡಿರುತ್ತದೆ. ಇದು ರೈತರಿಗೆ ಉಪಯುಕ್ತ. ನಮ್ಮ ರೈತರಿಗೆ ಎನ್.ಪಿ.ಕೆ.ಯ ಬಗ್ಗೆ ಚೆನ್ನಾಗಿ ತಿಳಿದಿದೆ. ಇದು ಕೃಷಿ ವಲಯಕ್ಕೆ ಉತ್ತಮ ಗುಣಮಟ್ಟದ ಗೊಬ್ಬರವಾಗಿದೆ.
ಇತರರು ಕೂಡ ಸರ್ಕಾರ ಕೈಗೊಂಡಿರುವ ಕ್ರಮಗಳ ಸ್ವರೂಪದಲ್ಲೇ ಪ್ರಯೋಗಗಳನ್ನು ಮಾಡಬಹುದು. ಈಗ ದೂರದರ್ಶನವು ಸ್ವಚ್ಛತಾ ಸಮಾಚಾರ್ ಎಂಬ ಹೊಸ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ. ಇದು ಸ್ವಚ್ಛತೆಯ ಸುದ್ದಿ. ಇದರಲ್ಲಿ ಇಂಥ ವಿಚಾರಗಳನ್ನು ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ತೋರಿಸಲಾಗುತ್ತದೆ. ಈ ಕಾರ್ಯಕ್ರಮ ಹಲವರಿಗೆ ಲಾಭದಾಯಕವಾಗಿದೆ. ವಿವಿಧ ಸರ್ಕಾರಿ ಇಲಾಖೆಗಳು ನಿಯಮಿತವಾಗಿ, ಸ್ವಚ್ಛತಾ ಪಾಕ್ಷಿಕ ಆಚರಿಸುತ್ತಿವೆ. ಮಾರ್ಚ್ ನ ಮೊದಲ ಪಾಕ್ಷಿಕದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಬುಡಕಟ್ಟು ವ್ಯವಹಾರಗಳ ಸಚಿವಾಲಯದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಕೈ ಜೋಡಿಸಿವೆ. ಹಡಗು ಸಚಿವಾಲಯ ಮತ್ತು ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಸಚಿವಾಲಯಗಳು ಕೂಡ ಮಾರ್ಚ್ ತಿಂಗಳ ಕೊನೆಯ ಎರಡು ವಾರ ಸ್ವಚ್ಛತೆಯ ಅಭಿಯಾನ ಮುಂದುವರಿಸಲಿವೆ.
ನಾವು ಯಾರೇ ಭಾರತೀಯರು ಏನಾದರೂ ಗಣನೀಯ ಸಾಧನೆ ಮಾಡಿದಾಗ, ಇಡೀ ದೇಶವೇ ಹೊಸ ಚೈತನ್ಯ ಪಡೆಯುತ್ತದೆ ಮತ್ತು ಆತ್ಮ ವಿಶ್ವಾಸ ರೂಢಿಸಿಕೊಳ್ಳುತ್ತದೆ. ರಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ನಮ್ಮ ದೇಶದ ದಿವ್ಯಾಂಗದವರು ಮಾಡಿದ ಸಾಧನೆಯನ್ನು ನಾವೆಲ್ಲರೂ ಶ್ಲಾಘಿಸಿದ್ದೇವೆ. ಈ ತಿಂಗಳ ಆರಂಭದಲ್ಲಿ ಟಿ 20 ಅಂಧರ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನವನ್ನು ಮಣಿಸಿ ಭಾರತ ತಂಡ ಎರಡನೇ ಬಾರಿಗೆ ಸತತವಾಗಿ ಚಾಂಪಿಯನ್ ಆಗಿದೆ. ಇದು ನಮ್ಮ ದೇಶದ ಪ್ರತಿಷ್ಠೆಯನ್ನು ಉತ್ತುಂಗಕ್ಕೆ ಏರಿಸಿದೆ. ನಾನು ಮತ್ತೊಮ್ಮೆ ತಂಡದ ಎಲ್ಲ ಆಟಗಾರರನ್ನೂ ಅಭಿನಂದಿಸುತ್ತೇನೆ. ಈ ದಿವ್ಯಾಂಗದ ಗೆಳೆಯರ ಸಾಧನೆಗೆ ಇಡೀ ದೇಶ ಹೆಮ್ಮೆ ಪಟ್ಟಿದೆ. ದಿವ್ಯಾಂಗದ ಸೋದರ ಸೋದರಿಯರು ಬಹಳ ಸಾಮರ್ಥ್ಯ ಉಳ್ಳವರು, ಅವರು ಧೈರ್ಯವಂತರು, ದೃಢ ನಿಶ್ಚಯ ಉಳ್ಳವರು ಎಂಬುದು ನನ್ನ ಅಭಿಮತ. ನಾವು ಅವರಿಂದ ಪ್ರತಿಯೊಂದು ಕ್ಷಣದಲ್ಲೂ ಏನಾದರೂ ಕಲಿಯುವುದು ಇದೆ.
ಕ್ರೀಡೆಯ ವಿಚಾರವಾಗಲೀ, ಬಾಹ್ಯಾಕಾಶದ ವಿಚಾರವೇ ಇರಲಿ, ನಮ್ಮ ದೇಶದ ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ. ಅವರು ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಯುತ್ತಿದ್ದಾರೆ. ತಮ್ಮ ಸಾಧನೆಯಿಂದ ನಮ್ಮ ದೇಶಕ್ಕೆ ಶೋಭೆ ತರುತ್ತಿದ್ದಾರೆ. ಇತ್ತೀಚೆಗೆ ಏಷ್ಯನ್ ರಗ್ಬಿ ಸವೆನ್ಸ್ ಟ್ರೋಫಿಯಲ್ಲಿ ನಮ್ಮ ಮಹಿಳಾ ಆಟಗಾರರು ಬೆಳ್ಳಿಯ ಪದಕ ಗೆದ್ದಿದ್ದಾರೆ. ತಂಡದ ಎಲ್ಲ ಆಟಗಾರರಿಗೂ ನನ್ನ ಹೃತ್ಫೂರ್ವಕ ಅಭಿನಂದನೆಗಳು.
ಇಡೀ ವಿಶ್ವ ಮಾರ್ಚ್ 8ನ್ನು ಮಹಿಳಾ ದಿನವಾಗಿ ಆಚರಿಸುತ್ತದೆ. ನಮ್ಮ ದೇಶದಲ್ಲಿ ಕೂಡ ನಮ್ಮ ಹೆಣ್ಣು ಮಕ್ಕಳ ಬಗ್ಗೆ ಹೆಚ್ಚಿನ ಸಂವೇದನೆಯೊಂದಿಗೆ ಇನ್ನೂ ಹೆಚ್ಚು ಪ್ರಾಮುಖ್ಯತೆ ನೀಡುವ ಅಗತ್ಯವಿದೆ. ಬೇಟಿ ಬಚಾವೋ – ಬೇಟಿ ಪಡಾವೋ (ಹೆಣ್ಣು ಮಕ್ಕಳನ್ನು ಉಳಿಸಿ- ಹೆಣ್ಣು ಮಕ್ಕಳನ್ನು ಓದಿಸಿ) ಆಂದೋಲನಕ್ಕೆ ಉತ್ತಮವಾಗಿ ಮುನ್ನಡೆದಿದೆ. ಇದು ಈಗ ಸರ್ಕಾರದ ಕಾರ್ಯಕ್ರಮವಾಗಿ ಮಾತ್ರ ಉಳಿದಿಲ್ಲ. ಇದು ಸಾರ್ವಜನಿಕ ಶಿಕ್ಷಣ ಮತ್ತು ಸಾಮಾಜಿಕ ಕಾಳಜಿಯ ಆಂದೋಲನವಾಗಿ ಪರಿವರ್ತನೆಯಾಗಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಈ ಕಾರ್ಯಕ್ರಮ ಶ್ರೀಸಾಮಾನ್ಯನನ್ನೂ ತನ್ನಲ್ಲಿ ಸೇರಿಸಿಕೊಂಡಿದೆ; ದೇಶದ ಎಲ್ಲ ಮೂಲೆಗಳ ಜನರನ್ನೂ ಈ ಜ್ವಲಂತ ಸಮಸ್ಯೆಯ ಬಗ್ಗೆ ಚಿಂತಿಸುವಂತೆ ಮಾಡಿದೆ.; ಹಲವಾರು ವರ್ಷಗಳಿಂದ ಬೇರು ಬಿಟ್ಟಿದ್ದ ಜನರ ಸಾಂಪ್ರದಾಯಿಕ ನಂಬಿಕೆ ಮತ್ತು ಆಚಾರಗಳಿಗೆ ಸಂಬಂಧಿಸಿದ ಆಲೋಚನೆಯಲ್ಲಿ ಬದಲಾವಣೆಯನ್ನೂ ತಂದಿದೆ. ಮಗಳು ಹುಟ್ಟಿದಾಗ ಸಂಭ್ರಮಾಚರಣೆ ಮಾಡಿದ ಸುದ್ದಿ ಕೇಳಿದಾಗ ನಮಗೆ ಸಂತಸ ಮತ್ತು ಹರ್ಷವಾಗುತ್ತದೆ. ಸಾಮಾಜಿಕವಾಗಿ ನಮ್ಮ ಹೆಣ್ಣು ಮಕ್ಕಳನ್ನು ಒಪ್ಪಿಕೊಳ್ಳುವ ಸಾಮಾಜಿಕ ಮನಃಸ್ಥಿತಿ ಮೂಡುತ್ತಿದೆ. ತಮಿಳುನಾಡಿನ ಕುಡಲೂರು ಜಿಲ್ಲೆಯ, ವಿಶೇಷ ಅಭಿಯಾನದ ಮೂಲಕ ಬಾಲ್ಯ ವಿವಾಹ ನಿಷೇಧಿಸಲಾಗಿದೆ ಎಂದು ನಾನು ಕೇಳಿದ್ದೇನೆ. ಈವರೆಗೆ 175 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಜಿಲ್ಲಾಡಳಿತಗಳು ಸುಕನ್ಯಾ ಸಮೃದ್ಧಿ ಯೋಜನೆಯಡಿ 55-60 ಸಾವಿರ ಬ್ಯಾಂಕ್ ಖಾತೆಗಳನ್ನು ಹೆಣ್ಣು ಮಗುವಿನ ಹೆಸರಲ್ಲಿ ತೆತೆದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕತುವಾ ಜಿಲ್ಲೆಯಲ್ಲಿ ಎಲ್ಲ ಇಲಾಖೆಗಳನ್ನೂ ಬೇಟಿ ಬಚಾವೋ – ಬೇಟಿ ಪಡಾವೋ ಯೋಜನೆಯಲ್ಲಿ ಸೇರಿಸಲಾಗಿದ್ದು, ಈ ಮಾದರಿಯಲ್ಲಿ ಗ್ರಾಮ ಸಭೆಗಳ ಜೊತೆಗೆ ಅನಾಥ ಹೆಣ್ಣು ಮಕ್ಕಳನ್ನು ದತ್ತು ಸ್ವೀಕಾರಕ್ಕೆ ಜಿಲ್ಲಾಡಳಿತ ಪ್ರಯತ್ನ ಮಾಡುತ್ತಿದ್ದು, ಅವರ ಶಿಕ್ಷಣದ ಖಾತ್ರಿ ಒದಗಿಸುತ್ತಿದೆ. ಮಧ್ಯಪ್ರದೇಶದಲ್ಲಿ ಹರ್ ಘರ್ ದಸ್ತಕ್ ಕಾರ್ಯಕ್ರಮದಡಿ, ಪ್ರತಿ ಹಳ್ಳಿಗೆ ಹೋಗಿ ಪ್ರಚಾರ ಮಾಡಿ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಲಾಗುತ್ತಿದೆ. ರಾಜಾಸ್ತಾನದಲ್ಲಿ ನಿಮ್ಮ ಮಗು ನಿಮ್ಮ ವಿದ್ಯಾಲಯ ಪ್ರಚಾರ ಆರಂಭಿಸಿದ್ದು, ಶಾಲೆ ಬಿಟ್ಟ ಹೆಣ್ಣು ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲಾಗುತ್ತಿದೆ. ಮತ್ತು ಅವರು ಮತ್ತೆ ಶಿಕ್ಷಣ ಪಡೆಯುವಂತೆ ಪ್ರೇರೇಪಿಸಲಾಗುತ್ತಿದೆ. ಬೇಟಿ ಬಚಾವೋ-ಬೇಟಿ ಪಡಾವೋ ಅಭಿಯಾನ ಹಲವು ಸ್ವರೂಪ ಪಡೆದಿದೆ. ಇಡೀ ಆಂದೋಲನ ಈಗ ಜನಾಂದೋಲನವಾಗಿ ಮಾರ್ಪಟ್ಟಿದೆ. ಇದರ ಜೊತೆಗೆ ಹೊಸ ಕಲ್ಪನೆಗಳು, ಹೊಸ ವಿಚಾರಗಳು ಸೇರಿಕೊಳ್ಳುತ್ತಿವೆ. ಈ ಆಂದೋಲನ ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ರೂಪುಗೊಳ್ಳುತ್ತಿದೆ. ನಾವು ಮಾರ್ಚ್ 8ರಂದು ಮಹಿಳಾ ದಿನವನ್ನು ಆಚರಿಸಲು ಸಿದ್ಧರಾಗುತ್ತಿರುವಾಗ ಇದೊಂದು ಆರೋಗ್ಯಕರ ಬೆಳವಣಿಗೆಯ ಸಂಕೇತವಾಗಿದೆ. ಇಲ್ಲಿ ನಮ್ಮೆಲ್ಲರ ಭಾವನೆ ಒಂದೇ ಆಗಿದೆ.: –
ಆಕೆ ಒಂದು ಶಕ್ತಿ, ಆಕೆ ಸಶಕ್ತಳು, ಆಕೆ ಶಕ್ತಿಯಾಗಿ ಬಂದ ಭಾರತೀಯ ನಾರಿ
ಆಕೆ ಸಮಾನತೆಗೆ ಹಕ್ಕುಳ್ಳವಳಾಗಿದ್ದಾಳೆ – ಅದು ಹೆಚ್ಚೂ ಅಲ್ಲ ಕಡಿಮೆಯೂ ಅಲ್ಲ.
ನನ್ನ ದೇಶವಾಸಿಗಳೇ, ನಿಮ್ಮೆಲ್ಲರಿಗೂ ಮನ್ ಕಿ ಬಾತ್ ನಲ್ಲಿ ಕಾಲಕಾಲಕ್ಕೆ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶವಿದೆ. ಈ ಕಾರ್ಯಕ್ರಮದೊಂದಿಗೆ ನೀವೂ ಸೇರಿಕೊಳ್ಳಿ. ನಾನು ನಿಮ್ಮಿಂದ ಹಲವು ವಿಚಾರ ತಿಳಿಯುತ್ತೇನೆ. ವಾಸ್ತವವಾಗಿ ಏನೆಲ್ಲಾ ನಡೆಯುತ್ತಿದೆ, ನಮ್ಮ ಹಳ್ಳಿಗಳಲ್ಲಿ ಮತ್ತು ಬಡಜನರ ಮನಸ್ಸಿನಲ್ಲಿ ಮತ್ತು ಹೃದಯದಲ್ಲಿ ಏನೆಲ್ಲಾ ವಿಚಾರ ಇದೆ ಎಂಬುದನ್ನೂ ನಾನು ಇದರಿಂದ ತಿಳಿದುಕೊಳ್ಳುತ್ತಿದ್ದೇನೆ. ನಿಮ್ಮೆಲ್ಲರ ಕೊಡುಗೆಗೆ ನಾನು ಆಭಾರಿ.ಅನಂತಧನ್ಯವಾದಗಳು.
AKT/AK
Lauded @isro for their outstanding achievement of launching 104 satellites in one go, during today’s #MannKiBaat https://t.co/CdfWUJud8F
— Narendra Modi (@narendramodi) 26 February 2017
Spoke about Digi Dhan Melas & their role in furthering digital transactions & creating a corruption-free India. https://t.co/VnIyL1Zjfj
— Narendra Modi (@narendramodi) 26 February 2017
I call upon the people of India to download the BHIM App & get 125 more people to download the App by 14th April, Dr. Ambedkar’s Jayanti
— Narendra Modi (@narendramodi) 26 February 2017
Congratulated team for winning Blind T20 cricket world cup. India is immensely proud of their success. #MannKiBaathttps://t.co/srAq2h2rq8
— Narendra Modi (@narendramodi) 26 February 2017
This toilet pit emptying exercise undertaken by the Drinking Water & Sanitation Ministry is remarkable! https://t.co/rSX6GEyvhQ
— Narendra Modi (@narendramodi) 26 February 2017
“भारत की नारी है, सब में बराबर की अधिकारी है”…a tribute to Nari Shakti in today’s #MannKiBaat https://t.co/2Uj0XrrGE1
— Narendra Modi (@narendramodi) 26 February 2017
Hear the complete #MannKiBaat episode of February 2017 here. https://t.co/vM7B0MaFBh
— Narendra Modi (@narendramodi) 26 February 2017
असमिया, बंगाली, गुजराती, मैथिली, मराठी, पंजाबी, तमिल, कन्नड़ सहित 20 से भी ज्यादा भाषाओं में सुनें #MannKiBaat https://t.co/tTkaXQYi90
— Narendra Modi (@narendramodi) 26 February 2017