ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 6 ಕೋಟಿ ಗ್ರಾಮೀಣ ಕುಟುಂಬಗಳನ್ನು ಡಿಜಿಟಲ್ ಸಾಕ್ಷರರನ್ನಾಗಿ ಮಾಡಲು ‘ಪ್ರಧಾನಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ ‘ (ಪಿಎಂಜಿಡಿಐಎಸ್ಎಚ್ಎ)ಕ್ಕೆ ತನ್ನ ಅನುಮೋದನೆ ನೀಡಿದೆ. 2019ರ ಮಾರ್ಚ್ ವೇಳೆಗೆ ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಸಾಕ್ಷರತೆಯನ್ನು ತರಲು ಈ ಯೋಜನೆಗೆ 2,351.38 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಇದು ಹಣಕಾಸು ಸಚಿವರು 2016-17ನೇ ಸಾಲಿನ ಬಜೆಟ್ ನಲ್ಲಿ ಪ್ರಕಟಿಸಿದ ಕಾರ್ಯಕ್ರಮಕ್ಕೆ ಅನುಗುಣವಾಗಿದೆ.
ಪಿಎಂಜಿಡಿಐಎಸ್ಎಚ್ಎ ಇಡೀ ವಿಶ್ವದಲ್ಲಿಯೇ ಅತ್ಯಂತ ಬೃಹತ್ ಡಿಜಿಟಲ್ ಸಾಕ್ಷರತೆ ಕಾರ್ಯಕ್ರಮವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಯೋಜನೆಯಡಿ, 2016-17ನೇ ಆರ್ಥಿಕ ವರ್ಷದಲ್ಲಿ 25 ಲಕ್ಷ; 2017-18ನೇ ಆರ್ಥಿಕ ವರ್ಷದಲ್ಲಿ 275 ಲಕ್ಷ; ಮತ್ತು 2018-19ನೇ ವಿತ್ತೀಯ ವರ್ಷದಲ್ಲಿ 300 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಭೌಗೋಳಿಕವಾಗಿ ಎಲ್ಲ ಪ್ರದೇಶವನ್ನೂ ಸಮಾನವಾಗಿ ತಲುಪುವ ಖಾತ್ರಿಗಾಗಿ, 250,000 ಗ್ರಾಮ ಪಂಚಾಯಿತಿಗಳ ಪೈಕಿ ಪ್ರತಿಯೊಂದೂ ಸರಾಸರಿ 200-300 ಅಭ್ಯರ್ಥಿಗಳನ್ನು ನೋಂದಣಿ ಮಾಡುವ ನಿರೀಕ್ಷೆ ಇದೆ. ಡಿಜಿಟಲ್ ಸಾಕ್ಷರತೆ ಹೊಂದಿದ ವ್ಯಕ್ತಿಗಳು ಕಂಪ್ಯೂಟರ್ ಗಳು/ಡಿಜಿಟಲ್ ಸಾಧನಗಳು (ಟ್ಯಾಬ್ ಲೆಟ್ ಗಳು, ಸ್ಮಾರ್ಟ್ ಫೋನ್ ಗಳು ಇತ್ಯಾದಿ) ಉಪಯೋಗಿಸಲು, ಇ-ಮೇಲ್ ಕಳುಹಿಸಲು ಮತ್ತು ಸ್ವೀಕರಿಸಲು, ಇಂಟರ್ನೆಟ್ ಬ್ರೌಸ್ ಮಾಡಲು, ಸರಕಾರದ ಸೇವೆಗಳನ್ನು ತಿಳಿಯಲು, ಮಾಹಿತಿಗಾಗಿ ಹುಡುಕಾಟ ನಡೆಸಲು, ನಗದು ರಹಿತ ವಹಿವಾಟು ನಡೆಸಲು ಸಮರ್ಥರಾಗುತ್ತಾರೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಐಟಿ ಬಳಕೆಯ ಚಟುವಟಿಕೆಯಲ್ಲಿ ಭಾಗಿಯಾಗುತ್ತಾರೆ.
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಕ್ರಿಯ ಸಹಯೋಗದೊಂದಿಗೆ ಅವರು ನಿಯುಕ್ತಿಗೊಳಿಸುವ ರಾಜ್ಯಗಳ ಜಾರಿ ಸಂಸ್ಥೆ, ಜಿಲ್ಲಾ ಇ ಆಡಳಿತ ಸಮಾಜ (ಡಿಇಜಿಎಸ್) ಇತ್ಯಾದಿ ಮೂಲಕವಾಗಿ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತನ್ನ ಒಟ್ಟಾರೆ ಮೇಲುಸ್ತುವಾರಿಯಲ್ಲಿ ಈ ಯೋಜನೆಯ ಅನುಷ್ಠಾನ ಮಾಡಲಿದೆ.
ಹಿನ್ನೆಲೆ:
ಶಿಕ್ಷಣ ಕುರಿತ 2014ರ ಎನ್.ಎಸ್.ಎಸ್.ಓ. ಸಮೀಕ್ಷೆಯ ರೀತ್ಯ ಗ್ರಾಮೀಣ ವಸತಿಗಳಲ್ಲಿ ಕೇವಲ ಶೇ.6ರಷ್ಟು ಕುಟುಂಬಗಳು ಮಾತ್ರವೇ ಕಂಪ್ಯೂಟರ್ ಹೊಂದಿವೆ. 16.85 ಕೋಟಿ ಕುಟುಂಬಗಳ ಪೈಕಿ ಶೇ.94ರಷ್ಟು ಅಂದರೆ 15 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳು ಕಂಪ್ಯೂಟರ್ ಹೊಂದಿಲ್ಲ ಮತ್ತು ಗಣನೀಯ ಪ್ರಮಾಣದ ಈ ಕುಟುಂಬಗಳು ಡಿಜಿಟಲ್ ಸಾಕ್ಷರತೆಯನ್ನು ಹೊಂದಿಲ್ಲ ಎಂಬುದನ್ನು ಪ್ರಚುರಪಡಿಸುತ್ತದೆ. ಪಿಎಂಜಿಡಿಐಎಸ್ಎಚ್ಎ ಯನ್ನು ಡಿಜಿಟಲ್ ಭಾರತ ಕಾರ್ಯಕ್ರಮದ ಅಡಿಯಲ್ಲಿ ಆರಂಭಿಸಲಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿನ 6 ಕೋಟಿ ಕುಟುಂಬಗಳನ್ನು ಡಿಜಿಟಲ್ ಸಾಕ್ಷರರನ್ನಾಗಿ ಮಾಡಲಿದೆ. ಇದು ಜನರಿಗೆ ಮಾಹಿತಿ, ಅರಿವು ಮತ್ತು ಕಂಪ್ಯೂಟರ್ ಗಳು/ಡಿಜಿಟಲ್ ಸಾಧನಗಳ ಬಳಕೆಯ ಕೌಶಲ ಕಲಿಸುವ ಮೂಲಕ ನಾಗರಿಕರನ್ನು ಸಬಲೀಕರಿಸಲಿದೆ.
ಮೊಬೈಲ್ ಫೋನ್ ಗಳ ಮೂಲಕ ನಗದು ರಹಿತ ವಹಿವಾಟಿಗೆ ಒತ್ತು ನೀಡುತ್ತಿರುವ ಸರ್ಕಾರ, ಡಿಜಿಟಲ್ ವ್ಯಾಲೆಟ್ ಗಳು, ಮೊಬೈಲ್ ಬ್ಯಾಂಕಿಂಗ್, ಯೂನಿಫೈಡ್ ಪೇಮೆಂಟ್ ಇಂಟರ್ ಫೇಸ್ (ಯುಪಿಐ), ಅನ್ ಸ್ಟ್ರಕ್ಚರ್ಡ್ ಸಂಪ್ಲಿಮೆಂಟರಿ ಸರ್ವೀಸ್ ಡಾಟಾ (ಯು.ಎಸ್.ಎಸ್.ಡಿ.) ಮತ್ತು ಆಧಾರ್ ಸಂಪರ್ಕಿತ ಪಾವತಿ ವ್ಯವಸ್ಥೆ (ಎ.ಇ.ಪಿ.ಎಸ್.) ಇತ್ಯಾದಿಗೂ ಒತ್ತು ನೀಡಿದೆ.
AKT/VBA/SH