Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಲೋಕಸಭೆಯಲ್ಲಿ ರಾಷ್ಟ್ರಪತಿಯವರು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಪ್ರಧಾನಮಂತ್ರಿಗಳ ಉತ್ತರ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಂದು, ಲೋಕಸಭೆಯಲ್ಲಿ ರಾಷ್ಟ್ರಪತಿಯವರು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಉತ್ತರ ನೀಡಿದರು. ಚರ್ಚೆಗೆ ಚೈತನ್ಯ ತುಂಬಿದ ಮತ್ತು ಒಳನೋಟ ಬೀರುವಂಥ ಅಂಶಗಳನ್ನು ಹಂಚಿಕೊಂಡ ವಿವಿಧ ಸದಸ್ಯರಿಗೆ ಅವರು ಧನ್ಯವಾದ ಅರ್ಪಿಸಿದರು.

ಜನಶಕ್ತಿಯ ವಿಶೇಷತೆಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಈ ಜನಶಕ್ತಿಯ ಬಲದಿಂದಲೇ ಬಡ ಕುಟುಂಬದಲ್ಲಿ ಜನಿಸಿದ ವ್ಯಕ್ತಿ ಭಾರತದ ಪ್ರಧಾನಮಂತ್ರಿ ಆಗಲು ಸಾಧ್ಯವಾಯಿತು ಎಂದರು.

ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ದೇಶಕ್ಕಾಗಿ ಬಲಿದಾನ ಮಾಡುವ ಅವಕಾಶ ಸಿಗದ ತಮ್ಮಂಥ ಹಲವು ಜನರಿದ್ದಾರೆ ಎಂದ ಪ್ರಧಾನಮಂತ್ರಿಯವರು, ಆದರೆ, ಸ್ವತಂತ್ರ ಭಾರತದಲ್ಲಿ ಹುಟ್ಟಿದ ಇವರು, ದೇಶಕ್ಕಾಗಿ ಬದುಕುತ್ತಿದ್ದಾರೆ ಮತ್ತು ದೇಶ ಸೇವೆ ಮಾಡುತ್ತಿದ್ದಾರೆ ಎಂದರು. ಜನ ಶಕ್ತಿಯ ಮೇಲಿನ ನಂಬಿಕೆ ಉತ್ತಮ ಫಲಿತಾಂಶವನ್ನೇ ನೀಡುತ್ತದೆ ಎಂದ ಅವರು, ನಮ್ಮ ಜನತೆಯ ಅಂತರ್ಗತ ಶಕ್ತಿಯನ್ನು ಅರ್ಥಮಾಡಿಕೊಳ್ಳುವಂತೆ ಮತ್ತು ಪ್ರಸಂಸಿಸುವಂತೆ ಹಾಗೂ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಂತೆ ಸದಸ್ಯರಿಗೆ ಕರೆ ನೀಡಿದರು. ಬಜೆಟ್ ಮಂಡನೆ ದಿನಾಂಕವನ್ನು ಮುಂಚಿತಗೊಳಿಸಿರುವ ಹಿಂದಿನ ತರ್ಕವನ್ನು ವಿವರಿಸಿದ ಪ್ರಧಾನಮಂತ್ರಿಯವರು, ಇದು ನಿಧಿಯ ಉತ್ತಮ ಬಳಕೆಯ ಖಾತ್ರಿ ಒದಗಿಸುತ್ತದೆ ಎಂದು ಹೇಳಿದರು. ಅದೇ ರೀತಿ, ದೇಶದ ಸಾರಿಗೆ ವಲಯಕ್ಕೆ ಈಗ ಸಮಗ್ರವಾದ ದೃಷ್ಟಿಕೋನದ ಅಗತ್ಯವಿದ್ದು, ಇದು ಕೇವಲ ಒಂದೇ ಕೇಂದ್ರ ಬಜೆಟ್ ನಿಂದ ಸಾಧ್ಯವಾಗುತ್ತದೆ ಎಂದರು.

ತಾವು ಅಧಿಕಾರ ವಹಿಸಿಕೊಂಡ ತರುವಾಯ ಆಗಿರುವ ಬದಲಾವಣೆಗಳ ಬಗ್ಗೆ ಪ್ರಧಾನ ಮಂತ್ರಿಯವರು ಸಂತೃಪ್ತಿ ವ್ಯಕ್ತಪಡಿಸಿದರು. ಹಗರಣಗಳಿಂದಾಗಿ ಎಷ್ಟು ಹಣ ನಷ್ಟವಾಯಿತು ಎಂಬ ಚರ್ಚೆ ನಡೆಯುತ್ತಿದ್ದ ಕಾಲ ಬದಲಾಗಿ ಈಗ ಎಷ್ಟು ಕಪ್ಪುಹಣ ವಸೂಲಿ ಮಾಡಲಾಗಿದೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.

ತಮ್ಮ ಹೋರಾಟ ಬಡವರಿಗಾಗಿ ಮತ್ತು ಬಡವರಿಗೆ ಅವರ ಬಾಕಿ ಕೊಡಿಸಲಿಕ್ಕಾಗಿ ಎಂದು ಘೋಷಿಸಿದ ಪ್ರಧಾನ ಮಂತ್ರಿಯವರು, ಈ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದರು. ಈ ಸರ್ಕಾರ ಎಲ್ಲ ವಿಚಾರಗಳನ್ನೂ ಚುನಾವಣೆ ದೃಷ್ಟಿಯಿಂದ ನೋಡುವುದಿಲ್ಲ ಮತ್ತು ಸರ್ಕಾರಕ್ಕೆ ದೇಶದ ಹಿತವೇ ಪ್ರಮಮೋಚ್ಛ ಎಂದು ತಿಳಿಸಿದರು.

ಹಳೆ ನೋಟುಗಳ ಚಲಾವಣೆ ಹಿಂಪಡೆದ ಕ್ರಮವನ್ನು ಸ್ವಚ್ಛ ಭಾರತಕ್ಕೆ ಹೋಲಿಸಿದ ಪ್ರಧಾನಮಂತ್ರಿಯವರು, ಕಪ್ಪು ಹಣ ಮತ್ತು ಭ್ರಷ್ಟಾಚಾರದಿಂದ ಭಾರತವನ್ನು ಶುದ್ಧೀಕರಿಸುವ ಆಂದೋಲನ ಇದೆಂದು ಹೇಳಿದರು.

ಹಳೆಯ ನೋಟುಗಳ ಚಲಾವಣೆ ರದ್ಧತಿಗೆ ಸಂಬಂಧಿಸಿದಂತೆ ಪದೇ ಪದೇ ನಿಯಮಗಳನ್ನು ಬದಲಾವಣೆ ಮಾಡುತ್ತಿರುವ ಬಗ್ಗೆ ಕೇಳಿಬಂದಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು, ಈ ಪ್ರಕ್ರಿಯೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿರುವರಿಗಿಂತ ಒಂದು ಹೆಜ್ಜೆ ಮುಂದೆ ಇರಲು ಈ ಬದಲಾವಣೆ ಮಾಡಲಾಯಿತು ಎಂದರು. ಮನ್ರೇಗಾ ನಿಯಮಗಳನ್ನು ಸುಮಾರು ಸಾವಿರಕ್ಕೂ ಹೆಚ್ಚು ಬಾರಿ ಬದಲಾವಣೆ ಮಾಡಲಾಗಿದೆ ಎಂಬ ಅಂಶವನ್ನೂ ಅವರು ಉಲ್ಲೇಖಿಸಿದರು.

ರೈತರಿಗೆ ನೆರವಾಗುವ ಮತ್ತು ಲಾಭವಾಗುವ ರೀತಿಯಲ್ಲಿ ಬೆಳೆ ವಿಮೆಯಂಥ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಿ ತಿಳಿಸಿದರು.

ದೇಶದ ಸಶಸ್ತ್ರ ಪಡೆಗಳನ್ನು ಪ್ರಶಂಸಿಸಿದ ಪ್ರಧಾನಮಂತ್ರಿಯವರು, ಅವರು ದೇಶವನ್ನು ರಕ್ಷಿಸಲು ಸಂಪೂರ್ಣ ಸಮರ್ಥರಾಗಿದ್ದಾರೆ ಎಂದು ತಿಳಿಸಿದರು.

AKT/NT