Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2024-25 ರಿಂದ 2028-29ರ ಹಣಕಾಸು ವರ್ಷಕ್ಕೆ “ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ-II (ವಿವಿಪಿ-II)” ಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟವು ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ-II (ವಿವಿಪಿ-II) ಅನ್ನು ಕೇಂದ್ರ ವಲಯದ ಯೋಜನೆಯಾಗಿ (ಶೇ.100 ಕೇಂದ್ರದ ಧನಸಹಾಯ) ಅನುಮೋದಿಸಿದೆ. ಇದು ‘ಸುರಕ್ಷಿತ, ಸುಭದ್ರ ಮತ್ತು ಚೈತನ್ಯಶೀಲ ಭೂ ಗಡಿ’ಗಳಿಗಾಗಿ ವಿಕಸಿತ ಭಾರತ@2047 ರ ದೃಷ್ಟಿಗೆ ಸರ್ಕಾರದ ಬದ್ಧತೆಯನ್ನು ಹೆಚ್ಚಿಸುತ್ತದೆ. ಈಗಾಗಲೇ ವಿವಿಪಿ-I ಅಡಿಯಲ್ಲಿ ಒಳಗೊಂಡಿರುವ ಉತ್ತರದ ಗಡಿಯನ್ನು ಹೊರತುಪಡಿಸಿ ಅಂತರರಾಷ್ಟ್ರೀಯ ಭೂ ಗಡಿಗಳ (ಐ ಎಲ್‌ ಬಿ) ಪಕ್ಕದ ಬ್ಲಾಕ್‌ ಗಳಲ್ಲಿರುವ ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ಈ ಕಾರ್ಯಕ್ರಮವು ನೆರವು ನೀಡುತ್ತದೆ.

ಒಟ್ಟು 6,839 ಕೋಟಿ ರೂ.ಗಳ ವೆಚ್ಚದಲ್ಲಿ, ಈ ಕಾರ್ಯಕ್ರಮವನ್ನು 2028-29ರ ಹಣಕಾಸು ವರ್ಷದವರೆಗೆ ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಗುಜರಾತ್, ಜಮ್ಮು ಮತ್ತು ಕಾಶ್ಮೀರ (ಕೇಂದ್ರಾಡಳಿತ ಪ್ರದೇಶ), ಲಡಾಖ್ (ಕೇಂದ್ರಾಡಳಿತ ಪ್ರದೇಶ), ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತ್ರಿಪುರ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಆಯ್ದ ಆಯಕಟ್ಟಿನ ಹಳ್ಳಿಗಳಲ್ಲಿ ಅನುಷ್ಠಾನಗೊಳಿಸಲಾಗುವುದು.

ಸಮೃದ್ಧ ಮತ್ತು ಸುರಕ್ಷಿತ ಗಡಿಗಳನ್ನು ಖಚಿತಪಡಿಸಿಕೊಳ್ಳಲು ಉತ್ತಮ ಜೀವನ ಪರಿಸ್ಥಿತಿಗಳು ಮತ್ತು ಸಾಕಷ್ಟು ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವುದು, ಗಡಿಯಾಚೆಗಿನ ಅಪರಾಧಗಳನ್ನು ನಿಯಂತ್ರಿಸುವುದು ಮತ್ತು ಗಡಿಯಲ್ಲಿನ ಜನರನ್ನು ರಾಷ್ಟ್ರದೊಂದಿಗೆ ಸಂಯೋಜಿಸುವುದು ಮತ್ತು ಅವರನ್ನು ಆಂತರಿಕ ಭದ್ರತೆಗೆ ಪ್ರಮುಖವಾಗಿರುವ ʼಗಡಿ ಕಾವಲು ಪಡೆಗಳ ಕಣ್ಣು ಮತ್ತು ಕಿವಿಗಳಾಗಿʼ ಬೆಳೆಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.

ಈ ಕಾರ್ಯಕ್ರಮವು ಹಳ್ಳಿಯೊಳಗೆ ಅಥವಾ ಹಳ್ಳಿಗಳ ಸಮೂಹದೊಳಗೆ ಮೂಲಸೌಕರ್ಯ ಅಭಿವೃದ್ಧಿ, ಮೌಲ್ಯ ಸರಪಳಿ ಅಭಿವೃದ್ಧಿ (ಸಹಕಾರಿ ಸಂಘಗಳು, ಸ್ವಸಹಾಯ ಸಂಘಗಳು ಇತ್ಯಾದಿಗಳ ಮೂಲಕ), ಗಡಿ ನಿರ್ದಿಷ್ಟ ಜನಸಂಪರ್ಕ ಚಟುವಟಿಕೆ, ಸ್ಮಾರ್ಟ್ ತರಗತಿಗಳಂತಹ ಶಿಕ್ಷಣ ಮೂಲಸೌಕರ್ಯ, ಪ್ರವಾಸೋದ್ಯಮ ಸರ್ಕ್ಯೂಟ್‌ ಗಳ ಅಭಿವೃದ್ಧಿ ಮತ್ತು ಗಡಿ ಪ್ರದೇಶಗಳಲ್ಲಿ ವೈವಿಧ್ಯಮಯ ಮತ್ತು ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಲು ಕೆಲಸಗಳು/ಯೋಜನೆಗಳಿಗೆ ಹಣವನ್ನು ಒದಗಿಸುತ್ತದೆ.

ಸಹಕಾರಿ ವಿಧಾನದಲ್ಲಿ ಸಿದ್ಧಪಡಿಸಲಾದ ಗ್ರಾಮ ಕ್ರಿಯಾ ಯೋಜನೆಗಳ ಆಧಾರದ ಮೇಲೆ, ಕಾರ್ಯಕ್ರಮ‌ಗಳು ಗಡಿ-ನಿರ್ದಿಷ್ಟ, ರಾಜ್ಯ ಮತ್ತು ಗ್ರಾಮ-ನಿರ್ದಿಷ್ಟವಾಗಿರುತ್ತವೆ.

ಈ ಗ್ರಾಮಗಳಿಗೆ ಸರ್ವಋತು ರಸ್ತೆ ಸಂಪರ್ಕವನ್ನು ರಸ್ತೆ ಅಭಿವೃದ್ಧಿ ಸಚಿವಾಲಯವು  ಈಗಾಗಲೇ ಅನುಮೋದಿಸಿರುವ ಪಿ ಎಂ ಜಿ ಎಸ್‌ ವೈ-IV ಅಡಿಯಲ್ಲಿ ಕೈಗೊಳ್ಳಲಾಗುವುದು. ಸಂಪುಟ ಕಾರ್ಯದರ್ಶಿಯವರ ಅಧ್ಯಕ್ಷತೆಯ ಉನ್ನತ-ಮಟ್ಟದ ಸಮಿತಿಯು ಗಡಿ ಪ್ರದೇಶಗಳಲ್ಲಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಯೋಜನೆಯ ಮಾರ್ಗಸೂಚಿಗಳಲ್ಲಿ ಸೂಕ್ತ ಸಡಿಲಿಕೆಗಳನ್ನು ಪರಿಗಣಿಸುತ್ತದೆ.

ಯೋಜನೆಯ ಮಾನದಂಡಗಳ ಪ್ರಕಾರ ಗುರುತಿಸಲಾದ ಗ್ರಾಮಗಳಲ್ಲಿ ಅಸ್ತಿತ್ವದಲ್ಲಿರುವ ವೈಯಕ್ತಿಕ ಮತ್ತು ಗೃಹ ಮಟ್ಟದ ಕಲ್ಯಾಣ ಯೋಜನೆಗಳಲ್ಲಿ ಸಂಪೂರ್ಣತೆಯನ್ನು ಸಾಧಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ. ಈ ಕಾರ್ಯಕ್ರಮವು 4 ವಿಷಯಾಧಾರಿತ ಪ್ರದೇಶಗಳಲ್ಲಿನ ಅಂತಹ ಬ್ಲಾಕ್‌ ಗಳಲ್ಲಿರುವ ಎಲ್ಲಾ ಹಳ್ಳಿಗಳನ್ನು ಅಸ್ತಿತ್ವದಲ್ಲಿರುವ ಯೋಜನೆಯ ಮಾನದಂಡಗಳ ಅಡಿಯಲ್ಲಿ ಸಮನ್ವಯದ ಮೂಲಕ, ಸರ್ವಋತು ರಸ್ತೆ ಸಂಪರ್ಕ, ದೂರಸಂಪರ್ಕ, ದೂರದರ್ಶನ ಸಂಪರ್ಕ ಮತ್ತು ವಿದ್ಯುದ್ಧೀಕರಣವನ್ನು ಸಾಧಿಸುವ ಗುರಿಯನ್ನು ಹೊಂದಿದೆ.

ಈ ಗ್ರಾಮಗಳಲ್ಲಿ ಜಾತ್ರೆಗಳು ಮತ್ತು ಉತ್ಸವಗಳು, ಜಾಗೃತಿ ಶಿಬಿರಗಳು, ರಾಷ್ಟ್ರೀಯ ದಿನಗಳ ಆಚರಣೆ, ಕೇಂದ್ರ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಸರ್ಕಾರಿ ಅಧಿಕಾರಿಗಳ ನಿಯಮಿತ ಭೇಟಿಗಳು ಮತ್ತು ಅಂತಹ ಗ್ರಾಮಗಳಲ್ಲಿ ರಾತ್ರಿ ತಂಗುವಿಕೆಗಳು ಸೇರಿದಂತೆ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಈ ಕಾರ್ಯಕ್ರಮವು ಉತ್ಸಾಹವನ್ನು ಹೆಚ್ಚಿಸಲು ಒತ್ತು ನೀಡುತ್ತದೆ. ಇದು ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಈ ಗ್ರಾಮಗಳ ಸ್ಥಳೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉತ್ತೇಜಿಸುತ್ತದೆ.

ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುವುದು ಮತ್ತು ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರಧಾನಮಂತ್ರಿ ಗತಿ ಶಕ್ತಿಯಂತಹ ಮಾಹಿತಿ ದತ್ತಸಂಚಯಗಳನ್ನು ಬಳಸಲಾಗುವುದು.

ವಿವಿಪಿ-Iರ ಜೊತೆಗೆ ವಿವಿಪಿ-II ಯೋಜನೆಯು ಗಡಿ ಗ್ರಾಮಗಳನ್ನು ಸ್ವಾವಲಂಬಿ ಮತ್ತು ಚೈತನ್ಯಶೀಲವನ್ನಾಗಿ ಮಾಡುವ ಒಂದು ಪರಿವರ್ತನಾತ್ಮಕ ಉಪಕ್ರಮವಾಗಿದೆ.

 

*****