Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬಜೆಟ್ ನಂತರದ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ಕುರಿತು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ವೆಬಿನಾರ್‌ ನಲ್ಲಿ ಪ್ರಧಾನಮಂತ್ರಿ ಭಾಷಣ

ಬಜೆಟ್ ನಂತರದ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ಕುರಿತು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ವೆಬಿನಾರ್‌ ನಲ್ಲಿ ಪ್ರಧಾನಮಂತ್ರಿ ಭಾಷಣ


ನಮಸ್ಕಾರ!

ಈ ಮಹತ್ವದ ಬಜೆಟ್ ವೆಬಿನಾರ್‌ ಗೆ ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ. “ಜನರು, ಆರ್ಥಿಕತೆ ಮತ್ತು ಇನೋವೇಶನ್ ನಲ್ಲಿ ಹೂಡಿಕೆ” – ಇದು ಅಭಿವೃದ್ಧಿ ಹೊಂದಿದ ಭಾರತದ ಭವಿಷ್ಯದ ದಿಕ್ಸೂಚಿ. ಈ ವರ್ಷದ ಬಜೆಟ್‌ ನಲ್ಲಿ ಇದರ ಪ್ರಭಾವವನ್ನು ನೀವು ವ್ಯಾಪಕವಾಗಿ ಕಾಣಬಹುದು. ಹಾಗಾಗಿ, ಈ ಬಜೆಟ್ ಭಾರತದ ಭವಿಷ್ಯದ ಸ್ಪಷ್ಟ ನಕ್ಷೆಯಾಗಿ ಹೊರಹೊಮ್ಮಿದೆ. ನಾವು ಮೂಲಸೌಕರ್ಯ ಮತ್ತು ಕೈಗಾರಿಕೆಗಳಲ್ಲಿ ಹೂಡಿಕೆಗೆ ಎಷ್ಟು ಪ್ರಾಮುಖ್ಯತೆ ನೀಡಿದ್ದೇವೆಯೋ, ಅಷ್ಟೇ ಪ್ರಾಮುಖ್ಯತೆಯನ್ನು ಜನರು, ಆರ್ಥಿಕತೆ ಮತ್ತು ಇನೋವೇಶನ್ ಗೂ ನೀಡಿದ್ದೇವೆ. ನಿಮಗೆಲ್ಲರಿಗೂ ತಿಳಿದಿರುವಂತೆ , ಸಾಮರ್ಥ್ಯ ವೃದ್ಧಿ ಮತ್ತು ಪ್ರತಿಭೆ ಅಭಿವೃದ್ಧಿ ದೇಶದ ಪ್ರಗತಿಗೆ ಮೂಲಾಧಾರವಾಗಿದೆ . ಆದ್ದರಿಂದ, ಅಭಿವೃದ್ಧಿಯ ಮುಂದಿನ ಹಂತದಲ್ಲಿ, ನಾವು ಈ ಕ್ಷೇತ್ರಗಳಲ್ಲಿ ಇನ್ನಷ್ಟು ಹೂಡಿಕೆ ಮಾಡಬೇಕಾಗಿದೆ. ಇದಕ್ಕಾಗಿ, ಎಲ್ಲಾ ಪಾಲುದಾರರು ಒಗ್ಗೂಡಿ ಮುಂದೆ ಬರಬೇಕಾಗುತ್ತದೆ. ಏಕೆಂದರೆ, ಇದು ದೇಶದ ಆರ್ಥಿಕ ಯಶಸ್ಸಿಗೆ ಅತ್ಯಗತ್ಯ. ಅದೇ ಸಮಯದಲ್ಲಿ, ಇದು ಪ್ರತಿಯೊಂದು ಸಂಸ್ಥೆಯ ಯಶಸ್ಸಿನ ಅಡಿಪಾಯವಾಗಿದೆ.

ಸ್ನೇಹಿತರೇ ,

ಜನರಲ್ಲಿ ಹೂಡಿಕೆ ಮಾಡುವ ದೃಷ್ಟಿಕೋನವು ಮೂರು ಸ್ತಂಭಗಳ ಮೇಲೆ ನಿಂತಿದೆ – ಶಿಕ್ಷಣ , ಕೌಶಲ್ಯ ಮತ್ತು ಆರೋಗ್ಯ ರಕ್ಷಣೆ !ದಶಕಗಳ ಬಳಿಕ ಭಾರತದ ಶಿಕ್ಷಣ ವ್ಯವಸ್ಥೆ ಹೇಗೆ ಮಹತ್ತರ ಬದಲಾವಣೆಗೆ ಸಾಕ್ಷಿಯಾಗುತ್ತಿದೆ ಎಂಬುದನ್ನು ಇಂದು ನೀವೆಲ್ಲರೂ ಗಮನಿಸುತ್ತಿದ್ದೀರಿ. ರಾಷ್ಟ್ರೀಯ ಶಿಕ್ಷಣ ನೀತಿಯಂತಹ ಮಹತ್ವದ ಕ್ರಮಗಳು, ಐಐಟಿಗಳ ವಿಸ್ತರಣೆ, ಶಿಕ್ಷಣದಲ್ಲಿ ತಂತ್ರಜ್ಞಾನದ ಅಳವಡಿಕೆ, ಕೃತಕ ಬುದ್ಧಿಮತ್ತೆಯ ಪೂರ್ಣ ಸಾಮರ್ಥ್ಯದ ಬಳಕೆ, ಪಠ್ಯಪುಸ್ತಕಗಳ ಡಿಜಿಟಲೀಕರಣ, 22 ಭಾರತೀಯ ಭಾಷೆಗಳಲ್ಲಿ ಕಲಿಕಾ ಸಾಮಗ್ರಿಗಳನ್ನು ಒದಗಿಸುವ ಪ್ರಯತ್ನಗಳು, ಇಂತಹ ಅನೇಕ ಕಾರ್ಯಕ್ರಮಗಳು ಮಿಷನ್ ಮಾದರಿಯಲ್ಲಿ ನಡೆಯುತ್ತಿವೆ. ಈ ಎಲ್ಲಾ ಪ್ರಯತ್ನಗಳಿಂದಾಗಿ, ಇಂದು ಭಾರತದ ಶಿಕ್ಷಣ ವ್ಯವಸ್ಥೆ 21ನೇ ಶತಮಾನದ ಜಗತ್ತಿನ ಅಗತ್ಯತೆಗಳು ಮತ್ತು ಗುಣಮಟ್ಟಕ್ಕೆ ತಕ್ಕಂತೆ ರೂಪಾಂತರಗೊಳ್ಳುತ್ತಿದೆ.

ಸ್ನೇಹಿತರೇ,

ಸರ್ಕಾರವು 2014 ರಿಂದ ಈವರೆಗೆ 3 ಕೋಟಿಗೂ ಹೆಚ್ಚು ಯುವಜನರಿಗೆ ಕೌಶಲ್ಯ ತರಬೇತಿಯನ್ನು ನೀಡಿದೆ. 1,000 ಐಟಿಐ ಸಂಸ್ಥೆಗಳನ್ನು ಉನ್ನತೀಕರಿಸಲು ಮತ್ತು 5 ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲು ನಾವು ಯೋಜನೆಗಳನ್ನು ಪ್ರಕಟಿಸಿದ್ದೇವೆ. ನಮ್ಮ ಗುರಿ ಏನೆಂದರೆ, ಯುವಜನರ ತರಬೇತಿಯು ನಮ್ಮ ಕೈಗಾರಿಕೆಗಳ ಅಗತ್ಯಗಳಿಗೆ ತಕ್ಕಂತೆ ಇರಬೇಕು. ಈ ನಿಟ್ಟಿನಲ್ಲಿ, ನಾವು ಜಾಗತಿಕ ತಜ್ಞರ ಸಹಕಾರವನ್ನು ಪಡೆಯುತ್ತಿದ್ದೇವೆ ಮತ್ತು ನಮ್ಮ ಯುವಜನರು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಸಜ್ಜಾಗುವಂತೆ ನೋಡಿಕೊಳ್ಳುತ್ತಿದ್ದೇವೆ. ಈ ಎಲ್ಲಾ ಪ್ರಯತ್ನಗಳಲ್ಲಿ ನಮ್ಮ ಕೈಗಾರಿಕೆ ಮತ್ತು ಶೈಕ್ಷಣಿಕ ಸಂಸ್ಥೆಗಳು ಪ್ರಮುಖ ಪಾತ್ರವನ್ನು ವಹಿಸಬೇಕಿದೆ. ಕೈಗಾರಿಕೆ ಮತ್ತು ಶೈಕ್ಷಣಿಕ ಸಂಸ್ಥೆಗಳು ಪರಸ್ಪರರ ಅಗತ್ಯಗಳನ್ನು ಅರಿತು ಪೂರೈಸಬೇಕು. ಯುವಜನರಿಗೆ ಕ್ಷಿಪ್ರವಾಗಿ ಬದಲಾಗುತ್ತಿರುವ ಜಗತ್ತಿಗೆ ಹೊಂದಿಕೊಳ್ಳಲು ಅವಕಾಶ ಸಿಗಬೇಕು, ಅವರಿಗೆ ವೃತ್ತಿಪರ ಅನುಭವ ದೊರೆಯಬೇಕು, ಪ್ರಾಯೋಗಿಕ ಕಲಿಕೆಗೆ ವೇದಿಕೆ ಒದಗಬೇಕು. ಇದಕ್ಕಾಗಿ, ಎಲ್ಲಾ ಪಾಲುದಾರರು ಕೈಜೋಡಿಸಬೇಕಾಗಿದೆ. ಯುವಜನರಿಗೆ ನವೀನ ಅವಕಾಶಗಳು ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ನೀಡಲು ನಾವು ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಈ ಯೋಜನೆಯಲ್ಲಿ ಎಲ್ಲಾ ಹಂತದ ಗರಿಷ್ಠ ಕೈಗಾರಿಕೆಗಳು ಭಾಗವಹಿಸುವಂತೆ ನಾವು ಖಚಿತಪಡಿಸಿಕೊಳ್ಳಬೇಕು.

ಸ್ನೇಹಿತರೇ,

ಈ ಬಜೆಟ್‌ನಲ್ಲಿ ನಾವು 10 ಸಾವಿರ ಹೆಚ್ಚುವರಿ ವೈದ್ಯಕೀಯ ಸೀಟುಗಳನ್ನು ಘೋಷಿಸಿದ್ದೇವೆ. ಮುಂದಿನ 5 ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ 75 ಸಾವಿರ ಸೀಟುಗಳನ್ನು ಹೆಚ್ಚಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಟೆಲಿ-ಮೆಡಿಸಿನ್ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತಿದೆ. ಹಗಲು ಆರೈಕೆ ಕ್ಯಾನ್ಸರ್ ಕೇಂದ್ರಗಳು ಮತ್ತು ಡಿಜಿಟಲ್ ಆರೋಗ್ಯ ಮೂಲಸೌಕರ್ಯಗಳ ಮೂಲಕ, ಗುಣಮಟ್ಟದ ಆರೋಗ್ಯ ಸೇವೆಯನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಗುರಿ ನಮ್ಮದು. ಇದು ಜನರ ಜೀವನದಲ್ಲಿ ಎಷ್ಟು ದೊಡ್ಡ ಪರಿವರ್ತನೆಯನ್ನು ತರುತ್ತದೆ ಎಂದು ನೀವು ಊಹಿಸಬಲ್ಲಿರಾ? ಇದು ಯುವಜನರಿಗೆ ಹಲವಾರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಈ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ನೀವು ಕೂಡ ಅಷ್ಟೇ ತ್ವರಿತವಾಗಿ ಕಾರ್ಯಪ್ರವೃತ್ತರಾಗಬೇಕು. ಆಗ ಮಾತ್ರ ಬಜೆಟ್ ಘೋಷಣೆಗಳ ಲಾಭವನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸಲು ನಮಗೆ ಸಾಧ್ಯವಾಗುತ್ತದೆ.

ಸ್ನೇಹಿತರೇ,

ಕಳೆದ 10 ವರ್ಷಗಳಲ್ಲಿ ನಾವು ಆರ್ಥಿಕತೆಯಲ್ಲಿ ಹೂಡಿಕೆಯನ್ನು ಭವಿಷ್ಯದ ದೃಷ್ಟಿಯಿಂದಲೇ ನೋಡಿದ್ದೇವೆ. ನಿಮಗೆ ತಿಳಿದಿರುವಂತೆ, 2047 ರ ವೇಳೆಗೆ ಭಾರತದ ನಗರ ಪ್ರದೇಶದ ಜನಸಂಖ್ಯೆಯು 90 ಕೋಟಿ ತಲುಪುವ ನಿರೀಕ್ಷೆಯಿದೆ. ಇಷ್ಟೊಂದು ದೊಡ್ಡ ಜನಸಂಖ್ಯೆಗೆ ಸುಸೂತ್ರ ಯೋಜಿತ ನಗರೀಕರಣ ಅತ್ಯಗತ್ಯ. ಇದಕ್ಕಾಗಿ, 1 ಲಕ್ಷ ಕೋಟಿ ರೂಪಾಯಿಗಳ ‘ನಗರ ಸವಾಲು ನಿಧಿ’ಯನ್ನು ಸ್ಥಾಪಿಸಲು ನಾವು ಮುಂದಾಗಿದ್ದೇವೆ. ಈ ನಿಧಿಯು ಆಡಳಿತ, ಮೂಲಸೌಕರ್ಯ ಮತ್ತು ಆರ್ಥಿಕ ಸ್ವಾವಲಂಬನೆಯ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಖಾಸಗಿ ಹೂಡಿಕೆಯನ್ನು ಹೆಚ್ಚಿಸುತ್ತದೆ. ನಮ್ಮ ನಗರಗಳು ಸುಸ್ಥಿರ ನಗರ ಸಂಚಾರ ವ್ಯವಸ್ಥೆ, ಡಿಜಿಟಲ್ ಸಂಯೋಜನೆ ಮತ್ತು ಹವಾಮಾನ ಬದಲಾವಣೆಗೆ ಸ್ಥಿತಿಸ್ಥಾಪಕತ್ವ ಯೋಜನೆಗಳಿಗೆ ಹೆಸರುವಾಸಿಯಾಗಲಿವೆ. ನಮ್ಮ ಖಾಸಗಿ ವಲಯ, ವಿಶೇಷವಾಗಿ ರಿಯಲ್ ಎಸ್ಟೇಟ್ ಮತ್ತು ಕೈಗಾರಿಕಾ ವಲಯಗಳು, ಯೋಜಿತ ನಗರೀಕರಣದತ್ತ ಗಮನ ಹರಿಸಿ ಅದನ್ನು ಮುನ್ನಡೆಸಬೇಕು. ಅಮೃತ್ 2.0 ಮತ್ತು ಜಲ ಜೀವನ್ ಮಿಷನ್‌ ನಂತಹ ಅಭಿಯಾನಗಳನ್ನು ಯಶಸ್ವಿಗೊಳಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು.

ಸ್ನೇಹಿತರೇ,

ಇಂದು, ನಾವು ಆರ್ಥಿಕತೆಯಲ್ಲಿ ಹೂಡಿಕೆಯ ಕುರಿತು ಚರ್ಚಿಸುವಾಗ, ಪ್ರವಾಸೋದ್ಯಮದ ವಿಫುಲ ಸಾಧ್ಯತೆಗಳ ಕಡೆಗೆ ವಿಶೇಷ ಗಮನ ಹರಿಸುವುದು ಅಗತ್ಯ. ಪ್ರವಾಸೋದ್ಯಮ ಕ್ಷೇತ್ರವು ನಮ್ಮ ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಡಿಪಿ) 10% ರಷ್ಟು ಕೊಡುಗೆ ನೀಡುವ ನಿರೀಕ್ಷೆಯಿದೆ. ಈ ವಲಯವು ಕೋಟ್ಯಂತರ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಸಾಮರ್ಥ್ಯ ಹೊಂದಿದೆ. ಹಾಗಾಗಿ, ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ಬಜೆಟ್‌ನಲ್ಲಿ ಹಲವಾರು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ದೇಶಾದ್ಯಂತ 50 ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಿ ಅಭಿವೃದ್ಧಿಪಡಿಸಲಾಗುವುದು. ಈ ತಾಣಗಳಲ್ಲಿರುವ ಹೋಟೆಲ್‌ಗಳಿಗೆ ಮೂಲಸೌಕರ್ಯ ಯೋಜನೆಗಳ ಸ್ಥಾನಮಾನ ನೀಡುವುದರಿಂದ ಪ್ರವಾಸೋದ್ಯಮವು ಇನ್ನಷ್ಟು ಸುಗಮವಾಗುತ್ತದೆ ಮತ್ತು ಸ್ಥಳೀಯ ಉದ್ಯೋಗ ಸೃಷ್ಟಿಯೂ ಹೆಚ್ಚುತ್ತದೆ. ಹೋಂ-ಸ್ಟೇ ಗಳಿಗಾಗಿ ಮುದ್ರಾ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ‘ಭಾರತದಲ್ಲಿ ಆರೋಗ್ಯಪೂರ್ಣ ಜೀವನ’ (Heal in India) ಮತ್ತು ‘ಬುದ್ಧನ ನಾಡು’ (Land of the Buddha)  ಅಭಿಯಾನಗಳ ಮೂಲಕ ವಿಶ್ವದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸಲಾಗುತ್ತಿದೆ. ಭಾರತವನ್ನು ಜಾಗತಿಕ ಮಟ್ಟದ ಪ್ರವಾಸೋದ್ಯಮ ಮತ್ತು ಸ್ವಾಸ್ಥ್ಯ ಕೇಂದ್ರವನ್ನಾಗಿ ರೂಪಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ.

ಸ್ನೇಹಿತರೇ,

ನಾವು ಪ್ರವಾಸೋದ್ಯಮದ ಕುರಿತು ಚರ್ಚಿಸುವಾಗ, ಹೋಟೆಲ್ ಉದ್ಯಮ ಮತ್ತು ಸಾರಿಗೆ ವಲಯದ ಜೊತೆಜೊತೆಗೆ, ಇತರ ಕ್ಷೇತ್ರಗಳಿಗೂ ಪ್ರವಾಸೋದ್ಯಮದಲ್ಲಿ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ. ಆದ್ದರಿಂದ, ನಮ್ಮ ಆರೋಗ್ಯ ಕ್ಷೇತ್ರದ ಪಾಲುದಾರರು ಆರೋಗ್ಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹೂಡಿಕೆ ಮಾಡಬೇಕು, ಈ ಸುವರ್ಣಾವಕಾಶವನ್ನು ಕೈಚೆಲ್ಲದೆ ಬಳಸಿಕೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ. ಯೋಗ ಮತ್ತು ಸ್ವಾಸ್ಥ್ಯ ಪ್ರವಾಸೋದ್ಯಮದ ಪೂರ್ಣ ಸಾಮರ್ಥ್ಯವನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು. ಶಿಕ್ಷಣ ಪ್ರವಾಸೋದ್ಯಮದಲ್ಲೂ ನಮಗೆ ವಿಪುಲ ಅವಕಾಶಗಳಿವೆ.

ಸ್ನೇಹಿತರೇ,

ದೇಶದ ಭವಿಷ್ಯವು ನಾವೀನ್ಯತೆಯಲ್ಲಿ ಮಾಡಲಾಗುವ ಹೂಡಿಕೆಯಿಂದ ನಿರ್ಧರಿಸಲ್ಪಡುತ್ತದೆ. ಕೃತಕ ಬುದ್ಧಿಮತ್ತೆಯು ಭಾರತೀಯ ಆರ್ಥಿಕತೆಗೆ ಹಲವಾರು ಲಕ್ಷ ಕೋಟಿ ರೂಪಾಯಿಗಳ ಬೆಳವಣಿಗೆಯನ್ನು ನೀಡುತ್ತದೆ. ಆದ್ದರಿಂದ, ನಾವು ಈ ದಿಕ್ಕಿನಲ್ಲಿ ವೇಗವಾಗಿ ಚಲಿಸಬೇಕಾಗಿದೆ. ಈ ಬಜೆಟ್‌ ನಲ್ಲಿ, AI-ಚಾಲಿತ ಶಿಕ್ಷಣ ಮತ್ತು ಸಂಶೋಧನೆಗಾಗಿ 500 ಕೋಟಿಗಳನ್ನು ನಿಗದಿಪಡಿಸಲಾಗಿದೆ. AI ನ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಭಾರತವು ರಾಷ್ಟ್ರೀಯ ದೊಡ್ಡ ಭಾಷಾ ಮಾದರಿಯನ್ನು ಸಹ ಸ್ಥಾಪಿಸುತ್ತದೆ. ಈ ದಿಕ್ಕಿನಲ್ಲಿ, ನಮ್ಮ ಖಾಸಗಿ ವಲಯವು ಸಹ ಪ್ರಪಂಚಕ್ಕಿಂತ ಒಂದು ಹೆಜ್ಜೆ ಮುಂದಿರಬೇಕು. AI ನಲ್ಲಿ ಆರ್ಥಿಕ ಪರಿಹಾರಗಳನ್ನು ಒದಗಿಸಬಲ್ಲ ವಿಶ್ವಾಸಾರ್ಹ, ಸುರಕ್ಷಿತ ಮತ್ತು ಪ್ರಜಾಪ್ರಭುತ್ವ ದೇಶಕ್ಕಾಗಿ ಜಗತ್ತು ಕಾಯುತ್ತಿದೆ. ನೀವು ಈಗ ಈ ವಲಯದಲ್ಲಿ ಹೆಚ್ಚು ಹೂಡಿಕೆ ಮಾಡಿದರೆ, ಭವಿಷ್ಯದಲ್ಲಿ ನಿಮಗೆ ಹೆಚ್ಚಿನ ಪ್ರಯೋಜನ ಸಿಗುತ್ತದೆ.

ಸ್ನೇಹಿತರೇ,

ಈಗ ಭಾರತವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆಯಾಗಿದೆ. ಸ್ಟಾರ್ಟಪ್‌ ಗಳನ್ನು ಉತ್ತೇಜಿಸಲು ಸರ್ಕಾರವು ಈ ಬಜೆಟ್‌ ನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಸಂಶೋಧನೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು 1 ಲಕ್ಷ ಕೋಟಿ ರೂಪಾಯಿಗಳ ಕಾರ್ಪಸ್ ನಿಧಿಯನ್ನು ಅಂಗೀಕರಿಸಲಾಗಿದೆ. ಇದು ಡೀಪ್ ಟೆಕ್ ಫಂಡ್ ಆಫ್ ಫಂಡ್ಸ್ ಜೊತೆಗೆ ಉದಯೋನ್ಮುಖ ವಲಯಗಳಲ್ಲಿ ಹೂಡಿಕೆಯನ್ನು ಹೆಚ್ಚಿಸುತ್ತದೆ. ಐಐಟಿ ಮತ್ತು ಐಐಎಸ್‌ಸಿಯಲ್ಲಿ 10 ಸಾವಿರ ಸಂಶೋಧನಾ ಫೆಲೋಶಿಪ್‌ಗಳ ವ್ಯವಸ್ಥೆ ಮಾಡಲಾಗಿದೆ. ಇದು ಸಂಶೋಧನೆಯನ್ನು ಉತ್ತೇಜಿಸುತ್ತದೆ ಮತ್ತು ಪ್ರತಿಭಾವಂತ ಯುವಕರಿಗೆ ಅವಕಾಶಗಳನ್ನು ಒದಗಿಸುತ್ತದೆ. ರಾಷ್ಟ್ರೀಯ ಜಿಯೋ-ಸ್ಪೇಷಿಯಲ್ ಮಿಷನ್ ಮತ್ತು ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಮೂಲಕ ನಾವೀನ್ಯತೆ ವೇಗವನ್ನು ಪಡೆಯುತ್ತದೆ. ಸಂಶೋಧನೆ ಮತ್ತು ನಾವೀನ್ಯತೆಯ ಕ್ಷೇತ್ರದಲ್ಲಿ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಾವು ಪ್ರತಿಯೊಂದು ಹಂತದಲ್ಲೂ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ.

ಸ್ನೇಹಿತರೇ,

ಜ್ಞಾನ ಭಾರತಂ ಮಿಷನ್, ಈ ಮಹತ್ಕಾರ್ಯದಲ್ಲಿ ನೀವೆಲ್ಲರೂ ಕೈಜೋಡಿಸುವಿರೆಂದು ಆಶಿಸುತ್ತೇನೆ. ಜ್ಞಾನ ಭಾರತಂ ಮಿಷನ್ ಮೂಲಕ ಭಾರತದ ಶ್ರೀಮಂತ ಹಸ್ತಪ್ರತಿ ಪರಂಪರೆಯನ್ನು ಸಂರಕ್ಷಿಸುವ ಘೋಷಣೆ ಅತ್ಯಂತ ಮಹತ್ವದ್ದು. ಈ ಮಿಷನ್‌ನಡಿ ಒಂದು ಕೋಟಿಗೂ ಅಧಿಕ ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ತದನಂತರ ರಾಷ್ಟ್ರೀಯ ಡಿಜಿಟಲ್ ಭಂಡಾರವನ್ನು ಸ್ಥಾಪಿಸಲಾಗುವುದು, ಇದರಿಂದ ಜಗತ್ತಿನ ವಿದ್ವಾಂಸರು ಮತ್ತು ಸಂಶೋಧಕರು ಭಾರತದ ಐತಿಹಾಸಿಕ ಮತ್ತು ಸಾಂಪ್ರದಾಯಿಕ ಜ್ಞಾನ ಸಂಪತ್ತನ್ನು ಅರಿಯಬಹುದು. ಭಾರತದ ಸಸ್ಯ ತಳಿ ಸಂಪನ್ಮೂಲಗಳನ್ನು ರಕ್ಷಿಸಲು ಸರ್ಕಾರವು ರಾಷ್ಟ್ರೀಯ ಜೀನ್ ಬ್ಯಾಂಕ್ ಅನ್ನು ಸ್ಥಾಪಿಸುತ್ತಿದೆ. ಈ ನಮ್ಮ ಉಪಕ್ರಮದ ಗುರಿಯು ಮುಂದಿನ ಪೀಳಿಗೆಗೆ ತಳಿ ಸಂಪನ್ಮೂಲ ಮತ್ತು ಆಹಾರ ಭದ್ರತೆಯನ್ನು ಖಾತರಿಪಡಿಸುವುದು. ಇಂತಹ ಪ್ರಯತ್ನಗಳ ವ್ಯಾಪ್ತಿಯನ್ನು ನಾವು ವಿಸ್ತರಿಸಬೇಕು. ನಮ್ಮ ವಿವಿಧ ಸಂಸ್ಥೆಗಳು ಮತ್ತು ವಲಯಗಳು ಈ ಕಾರ್ಯದಲ್ಲಿ ಸಹಭಾಗಿಗಳಾಗಬೇಕು.

ಸ್ನೇಹಿತರೇ ,

ಫೆಬ್ರವರಿಯಲ್ಲಿ ಭಾರತದ ಆರ್ಥಿಕತೆಯ ಬಗ್ಗೆ IMF ನೀಡಿದ ಅದ್ಭುತ ಅವಲೋಕನಗಳು ನಮ್ಮೆಲ್ಲರ ಮುಂದೆ ಇವೆ . ಈ ವರದಿಯ ಪ್ರಕಾರ , 2015 ಮತ್ತು 2025 ರ ನಡುವೆ … 2015 ಮತ್ತು 2025 ರ ನಡುವೆ , ಈ 10 ವರ್ಷಗಳಲ್ಲಿ , ಭಾರತದ ಆರ್ಥಿಕತೆಯು ಅರವತ್ತಾರು ಪ್ರತಿಶತ, ಅಂದರೆ 66 ಪ್ರತಿಶತದಷ್ಟು ಬೆಳವಣಿಗೆಯನ್ನು ದಾಖಲಿಸಿದೆ . ಭಾರತ ಈಗ 3.8 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿದೆ. ಈ ಬೆಳವಣಿಗೆ ಅನೇಕ ದೊಡ್ಡ ಆರ್ಥಿಕತೆಗಳಿಗಿಂತ ಹೆಚ್ಚಾಗಿದೆ. ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ದಿನ ದೂರವಿಲ್ಲ. ನಾವು ಸರಿಯಾದ ದಿಕ್ಕಿನಲ್ಲಿ ಸಾಗಬೇಕು , ಸರಿಯಾದ ಹೂಡಿಕೆಗಳನ್ನು ಮಾಡಬೇಕು ಮತ್ತು ಆ ಮೂಲಕ ನಮ್ಮ ಆರ್ಥಿಕತೆಯನ್ನು ವಿಸ್ತರಿಸಬೇಕು. ಮತ್ತು ಬಜೆಟ್ ಘೋಷಣೆಗಳ ಅನುಷ್ಠಾನವೂ ಇದರಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ , ನಿಮ್ಮೆಲ್ಲರ ಪಾತ್ರವೂ ಪ್ರಮುಖವಾಗಿದೆ .

ನಿಮ್ಮೆಲ್ಲರಿಗೂ ನನ್ನ ಹಾರ್ದಿಕ ಶುಭಾಶಯಗಳು. ಕಳೆದ ಕೆಲ ವರ್ಷಗಳಿಂದ ಬಜೆಟ್ ಮಂಡಿಸುವಾಗ, ‘ನೀವು ನಿಮ್ಮ ಪಾಡಿಗೆ ಕೆಲಸ ಮಾಡಿ, ನಾವು ನಮ್ಮ ಪಾಡಿಗೆ’ ಎಂಬ ಹಳೇ ಪದ್ಧತಿಯನ್ನು ತೊರೆದಿದ್ದೇವೆ ಎಂಬ ವಿಶ್ವಾಸ ನನಗಿದೆ. ಬಜೆಟ್ ತಯಾರಿಸುವ ಮುನ್ನ, ತಯಾರಿಸಿದ ಮೇಲೂ, ಘೋಷಿಸಿದ ಬಳಿಕವೂ, ಅನುಷ್ಠಾನದ ವಿಷಯಗಳಲ್ಲಿ ನಿಮ್ಮೊಂದಿಗೆ ಕೂಲಂಕಷವಾಗಿ ಚರ್ಚಿಸುತ್ತೇವೆ. ಸಾರ್ವಜನಿಕ ಸಹಭಾಗಿತ್ವದ ಈ ಮಾದರಿ ಬಹುಶಃ ಅಪರೂಪದ್ದು. ಈ ಚಿಂತನ-ಮಂಥನ ಕಾರ್ಯಕ್ರಮ ಪ್ರತಿ ವರ್ಷವೂ ಜನಪ್ರಿಯವಾಗುತ್ತಿರುವುದು, ಜನರು ಉತ್ಸಾಹದಿಂದ ಭಾಗವಹಿಸುತ್ತಿರುವುದು, ಬಜೆಟ್ ಪೂರ್ವದ ಚರ್ಚೆಗಳು ಅನುಷ್ಠಾನದ ನಂತರದ ಮಾತುಕತೆಗಳಿಗಿಂತ ಹೆಚ್ಚು ಮಹತ್ವದ್ದೆಂದು ಎಲ್ಲರೂ ಭಾವಿಸುತ್ತಿರುವುದು ನನಗೆ ಸಂತಸ ತಂದಿದೆ. ಈ ಸಾಮೂಹಿಕ ಚಿಂತನೆ ನಮ್ಮೆಲ್ಲರ ಕನಸುಗಳನ್ನು, 140 ಕೋಟಿ ಪ್ರಜೆಗಳ ಆಶೋತ್ತರಗಳನ್ನು ನನಸಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂಬ ದೃಢ ನಂಬಿಕೆ ನನಗಿದೆ. ನಿಮ್ಮೆಲ್ಲರಿಗೂ ಶುಭವಾಗಲಿ.

ಧನ್ಯವಾದಗಳು.

 

ಹಕ್ಕು ನಿರಾಕರಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಗಿದೆ.

 

*****