ಭಾರತ-ಯುರೋಪಿಯನ್ ಒಕ್ಕೂಟದ ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿಯ (ಟಿಟಿಸಿ) ಎರಡನೇ ಸಭೆಯು ಫೆಬ್ರವರಿ 28, 2025 ರಂದು ನವದೆಹಲಿಯಲ್ಲಿ ನಡೆಯಿತು. ಭಾರತದ ಪರವಾಗಿ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್; ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಸಹ-ಅಧ್ಯಕ್ಷತೆ ವಹಿಸಿದ್ದರು. ಯುರೋಪಿಯನ್ ಒಕ್ಕೂಟದ ಪರವಾಗಿ ತಂತ್ರಜ್ಞಾನ ಸಾರ್ವಭೌಮತ್ವ, ಭದ್ರತೆ ಮತ್ತು ಪ್ರಜಾಪ್ರಭುತ್ವದ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಶ್ರೀಮತಿ ಹೆನ್ನಾ ವಿರ್ಕ್ಕುನೆನ್, ವ್ಯಾಪಾರ ಮತ್ತು ಆರ್ಥಿಕ ಭದ್ರತೆ, ಅಂತರ-ಸಾಂಸ್ಥಿಕ ಸಂಬಂಧಗಳು ಮತ್ತು ಪಾರದರ್ಶಕತೆಯ ಆಯುಕ್ತೆ ಶ್ರೀ ಮರೋಸ್ ಸೆಫ್ಕೋವಿಕ್ ಮತ್ತು ಸ್ಟಾರ್ಟ್ಅಪ್, ಸಂಶೋಧನೆ ಮತ್ತು ನಾವೀನ್ಯತೆ ಆಯುಕ್ತೆ ಶ್ರೀಮತಿ ಎಕಟೆರಿನಾ ಜಹರೈವಾ ಅವರು ಸಹ-ಅಧ್ಯಕ್ಷತೆ ವಹಿಸಿದ್ದರು.
ವ್ಯಾಪಾರ, ವಿಶ್ವಾಸಾರ್ಹ ತಂತ್ರಜ್ಞಾನ ಮತ್ತು ಭದ್ರತೆಯ ಸವಾಲುಗಳನ್ನು ಎದುರಿಸಲು ಪ್ರಮುಖ ದ್ವಿಪಕ್ಷೀಯ ವೇದಿಕೆಯಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಏಪ್ರಿಲ್ 2022 ರಲ್ಲಿ ಭಾರತ-ಇಯು ಟಿಟಿಸಿಯನ್ನು ಸ್ಥಾಪಿಸಿದ್ದರು. ಮುಕ್ತ ಮಾರುಕಟ್ಟೆ ಆರ್ಥಿಕತೆಗಳು, ಹಂಚಿಕೆಯ ಮೌಲ್ಯಗಳು ಮತ್ತು ಬಹುತ್ವ ಸಮಾಜಗಳನ್ನು ಹೊಂದಿರುವ ಎರಡು ದೊಡ್ಡ ಮತ್ತು ರೋಮಾಂಚಕ ಪ್ರಜಾಪ್ರಭುತ್ವಗಳಾಗಿ ಭಾರತ ಮತ್ತು ಯುರೋಪಿಯನ್ ಒಕ್ಕೂಟವು ಬಹುಧ್ರುವೀಯ ಜಗತ್ತಿನಲ್ಲಿ ಸಹಜ ಪಾಲುದಾರರಾಗಿವೆ.
ಯುರೋಪಿಯನ್ ಒಕ್ಕೂಟ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಆಳವಾದ ಮತ್ತು ಹೆಚ್ಚುತ್ತಿರುವ ಕಾರ್ಯತಂತ್ರದ ಸಮನ್ವಯವು ಜಾಗತಿಕ ಭೌಗೋಳಿಕ ರಾಜಕೀಯ ಭೂದೃಶ್ಯದ ಬದಲಾಗುತ್ತಿರುವ ಡೈನಾಮಿಕ್ಸ್ ಗೆ ಪ್ರತಿಕ್ರಿಯೆಯಾಗಿದೆ ಮತ್ತು ಜಾಗತಿಕ ಸ್ಥಿರತೆ, ಆರ್ಥಿಕ ಭದ್ರತೆ ಮತ್ತು ಸುಸ್ಥಿರ ಮತ್ತು ಅಂತರ್ಗತ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಸಾಮಾನ್ಯ ಆಸಕ್ತಿಯಾಗಿದೆ. ಆ ನಿಟ್ಟಿನಲ್ಲಿ, ಎರಡೂ ಕಡೆಯವರು ನಿಯಮ ಆಧಾರಿತ ಅಂತರರಾಷ್ಟ್ರೀಯ ಕ್ರಮದ ಪ್ರಾಮುಖ್ಯತೆ ಮತ್ತು ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ, ಪಾರದರ್ಶಕತೆ ಮತ್ತು ವಿವಾದಗಳ ಶಾಂತಿಯುತ ಪರಿಹಾರದ ತತ್ವಗಳಿಗೆ ಸಂಪೂರ್ಣ ಗೌರವವನ್ನು ಮತ್ತೊಮ್ಮೆ ಒತ್ತಿ ಹೇಳಿದರು. ವ್ಯಾಪಾರ ಮತ್ತು ತಂತ್ರಜ್ಞಾನದ ನಡುವಿನ ಹೆಚ್ಚುತ್ತಿರುವ ನಿರ್ಣಾಯಕ ಸಂಪರ್ಕಗಳು, ಎರಡೂ ಪಾಲುದಾರರ ಆರ್ಥಿಕತೆಯನ್ನು ಹೆಚ್ಚಿಸಲು ಈ ವಿಷಯಗಳ ಕುರಿತು ಸಹಕಾರದ ಸಾಮರ್ಥ್ಯ ಮತ್ತು ಸಂಬಂಧಿತ ಭದ್ರತಾ ಸವಾಲುಗಳ ಕುರಿತು ಒಟ್ಟಾಗಿ ಕೆಲಸ ಮಾಡುವ ಅಗತ್ಯತೆಯನ್ನು, ಇಯು ಮತ್ತು ಭಾರತದ ನಡುವಿನ ಹಂಚಿಕೆಯ ಅಂಗೀಕಾರವನ್ನು ಟಿಟಿಸಿ ಪ್ರತಿಬಿಂಬಿಸುತ್ತದೆ. ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು, ಸಂಪರ್ಕವನ್ನು ಬಲಪಡಿಸಲು ಮತ್ತು ಹಸಿರು ಮತ್ತು ಸ್ವಚ್ಛ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ಮುಂದಕ್ಕೆ ಕೊಂಡೊಯ್ಯಲು ತಮ್ಮ ಪಾಲುದಾರಿಕೆಯ ಸಾಮರ್ಥ್ಯವನ್ನು ಎರಡೂ ಕಡೆಯವರು ಗಮನಿಸಿದರು.
ಭಾರತ-ಇಯು ಟಿಟಿಸಿಯ ಮೊದಲ ಸಭೆಯು ಮೇ 16, 2023 ರಂದು ಬ್ರಸೆಲ್ಸ್ ನಲ್ಲಿ ನಡೆಯಿತು. ಟಿಟಿಸಿ ಸಚಿವರ ಸಭೆಯು ಮುಂದಿನ ದಾರಿಗೆ ರಾಜಕೀಯ ಮಾರ್ಗದರ್ಶನವನ್ನು ನೀಡಿತು. ತರುವಾಯ 24 ನವೆಂಬರ್ 2023 ರಂದು, ವರ್ಚುವಲ್ ಮೋಡ್ ನಲ್ಲಿ ನಡೆದ ಸಭೆಯು ಮೂರು ಟಿಟಿಸಿ ಕಾರ್ಯಕಾರಿ ಗುಂಪುಗಳು ಮಾಡಿದ ಪ್ರಗತಿಯನ್ನು ಪರಿಶೀಲಿಸಿತು.
ಕಾರ್ಯತಂತ್ರದ ತಂತ್ರಜ್ಞಾನಗಳು, ಡಿಜಿಟಲ್ ಆಡಳಿತ ಮತ್ತು ಡಿಜಿಟಲ್ ಸಂಪರ್ಕದ ಕುರಿತ ಕಾರ್ಯಕಾರಿ ಗುಂಪು 1
ಕಾರ್ಯತಂತ್ರದ ತಂತ್ರಜ್ಞಾನಗಳು, ಡಿಜಿಟಲ್ ಆಡಳಿತ ಮತ್ತು ಡಿಜಿಟಲ್ ಸಂಪರ್ಕ ಕುರಿತಾದ ಕಾರ್ಯಕಾರಿ ಗುಂಪು 1 ರ ಮೂಲಕ ಭಾರತ ಮತ್ತು ಯುರೋಪಿಯನ್ ಒಕ್ಕೂಟವು ತಮ್ಮ ಹಂಚಿಕೆಯ ಮೌಲ್ಯಗಳಿಗೆ ಅನುಗುಣವಾಗಿ ತಮ್ಮ ಡಿಜಿಟಲ್ ಸಹಕಾರವನ್ನು ಆಳಗೊಳಿಸುವ ಮಹತ್ವವನ್ನು ಪುನರುಚ್ಚರಿಸಿವೆ. ಮಾನವ ಕೇಂದ್ರಿತ ಡಿಜಿಟಲ್ ರೂಪಾಂತರವನ್ನು ವೇಗಗೊಳಿಸಲು ಮತ್ತು ಆರ್ಥಿಕತೆಗಳು ಮತ್ತು ಸಮಾಜಗಳಿಗೆ ಪ್ರಯೋಜನಕಾರಿಯಾಗುವ ಎಐ, ಸೆಮಿಕಂಡಕ್ಟರ್ ಗಳು, ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ ಮತ್ತು 6ಜಿ ಯಂತಹ ಮುಂದುವರಿದ ಮತ್ತು ವಿಶ್ವಾಸಾರ್ಹ ಡಿಜಿಟಲ್ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ವೇಗಗೊಳಿಸಲು ಎರಡೂ ಕಡೆಯವರು ತಮ್ಮ ತಮ್ಮ ಸಾಮರ್ಥ್ಯಗಳನ್ನು ಬಳಸಿಕೊಳ್ಳಲು ಬದ್ಧರಾಗಿದ್ದಾರೆ. ಈ ಉದ್ದೇಶಕ್ಕಾಗಿ ಸ್ಪರ್ಧಾತ್ಮಕತೆಯನ್ನು ಮತ್ತಷ್ಟು ಹೆಚ್ಚಿಸಲು ಮತ್ತು ತಮ್ಮ ಆರ್ಥಿಕ ಭದ್ರತೆಯನ್ನು ಹೆಚ್ಚಿಸಲು ಇಯು-ಭಾರತ ಸಂಶೋಧನೆ ಮತ್ತು ನಾವೀನ್ಯತೆಯನ್ನು ಬಲಪಡಿಸಲು ಜಂಟಿಯಾಗಿ ಕೆಲಸ ಮಾಡಲು ಬದ್ಧವಾಗಿವೆ. ಸೈಬರ್-ಸುರಕ್ಷಿತ ಡಿಜಿಟಲ್ ಪರಿಸರ ವ್ಯವಸ್ಥೆಯಲ್ಲಿ ಜಾಗತಿಕ ಸಂಪರ್ಕವನ್ನು ಉತ್ತೇಜಿಸಲು ಎರಡೂ ಕಡೆಯವರು ಬದ್ಧತೆ ತೋರಿದ್ದಾರೆ.
ಮುಕ್ತ ಮತ್ತು ಎಲ್ಲರನ್ನೂ ಒಳಗೊಂಡ ಡಿಜಿಟಲ್ ಆರ್ಥಿಕತೆಗಳು ಮತ್ತು ಡಿಜಿಟಲ್ ಸಮಾಜಗಳ ಅಭಿವೃದ್ಧಿಯಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ (ಡಿಪಿಐ) ಮಹತ್ವವನ್ನು ಗುರುತಿಸಿ, ಭಾರತ ಮತ್ತು ಯುರೋಪಿಯನ್ ಒಕ್ಕೂಟವು ಮಾನವ ಹಕ್ಕುಗಳನ್ನು ಗೌರವಿಸುವ ಮತ್ತು ವೈಯಕ್ತಿಕ ದತ್ತಾಂಶ, ಗೌಪ್ಯತೆ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳನ್ನು ರಕ್ಷಿಸುವ ಆಯಾ ಡಿಪಿಐಗಳ ಪರಸ್ಪರ ಕಾರ್ಯಸಾಧ್ಯತೆಯ ಕಡೆಗೆ ಕೆಲಸ ಮಾಡಲು ಸಹಕರಿಸಲು ಒಪ್ಪಿಕೊಂಡಿವೆ. ಮೂರನೇ ದೇಶಗಳಿಗೆ ಡಿಪಿಐ ಪರಿಹಾರಗಳನ್ನು ಜಂಟಿಯಾಗಿ ಉತ್ತೇಜಿಸಲು ಎರಡೂ ಕಡೆಯವರು ಬದ್ಧರಾಗಿದ್ದಾರೆ ಮತ್ತು ಗಡಿಯಾಚೆಗಿನ ಡಿಜಿಟಲ್ ವಹಿವಾಟುಗಳನ್ನು ಹೆಚ್ಚಿಸಲು ಮತ್ತು ಪರಸ್ಪರ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಇ-ಸಹಿಗಳ ಪರಸ್ಪರ ಗುರುತಿಸುವಿಕೆಯ ಅಗತ್ಯವನ್ನು ಒತ್ತಿ ಹೇಳಿದರು.
ಸೆಮಿಕಂಡಕ್ಟರ್ ಪೂರೈಕೆ ಸರಪಳಿಗಳ ದೃಢತೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಸಹಯೋಗವನ್ನು ಉತ್ತೇಜಿಸಲು ಎರಡೂ ಕಡೆಯವರು ತಮ್ಮ ಬದ್ಧತೆಯನ್ನು ಒತ್ತಿ ಹೇಳಿದರು. ಆ ನಿಟ್ಟಿನಲ್ಲಿ, ಚಿಪ್ ವಿನ್ಯಾಸ, ವೈವಿಧ್ಯತೆಯ ಏಕೀಕರಣ, ಸುಸ್ಥಿರ ಸೆಮಿಕಂಡಕ್ಟರ್ ತಂತ್ರಜ್ಞಾನಗಳು, ಪ್ರಕ್ರಿಯೆ ವಿನ್ಯಾಸ ಕಿಟ್ ಗಾಗಿ ಸುಧಾರಿತ ಪ್ರಕ್ರಿಯೆಗಳಿಗೆ ತಂತ್ರಜ್ಞಾನ ಅಭಿವೃದ್ಧಿ (ಪಿಡಿಕೆ) ಮುಂತಾದವುಗಳಲ್ಲಿ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಅನ್ವೇಷಿಸಲು ಅವರು ಒಪ್ಪಿಕೊಂಡರು. ಸುಸ್ಥಿರ, ಸುರಕ್ಷಿತ ಮತ್ತು ವೈವಿಧ್ಯಮಯ ಸೆಮಿಕಂಡಕ್ಟರ್ ಉತ್ಪಾದನಾ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ತಾಂತ್ರಿಕ ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ಪೂರೈಕೆ ಸರಪಳಿ ದೃಢತೆಯನ್ನು ಖಚಿತಪಡಿಸಿಕೊಳ್ಳಲು ಇಯು ಮತ್ತು ಭಾರತದ ಸೆಮಿಕಂಡಕ್ಟರ್ ಪೂರಕ ವ್ಯವಸ್ಥೆಗಳ ಬಲವರ್ಧನೆಯನ್ನು ಎರಡೂ ಕಡೆಯವರು ಉತ್ತೇಜಿಸುತ್ತಾರೆ. ಇದಲ್ಲದೆ, ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರಲ್ಲಿ ಪ್ರತಿಭಾ ವಿನಿಮಯವನ್ನು ಸುಗಮಗೊಳಿಸುವ ಮತ್ತು ಸೆಮಿಕಂಡಕ್ಟರ್ ಕೌಶಲ್ಯಗಳನ್ನು ಬೆಳೆಸುವ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಲು ಬದ್ಧರಾಗಿದ್ದಾರೆ.
ಸುರಕ್ಷಿತ, ಸುಭದ್ರ, ವಿಶ್ವಾಸಾರ್ಹ, ಮಾನವ ಕೇಂದ್ರಿತ, ಸುಸ್ಥಿರ ಮತ್ತು ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ (ಎಐ) ಗೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ದೃಷ್ಟಿಕೋನವನ್ನು ಉತ್ತೇಜಿಸಲು ಎರಡೂ ಕಡೆಯವರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಇದಲ್ಲದೆ, ಎಐ ನಲ್ಲಿ ನಿರಂತರ ಮತ್ತು ಪರಿಣಾಮಕಾರಿ ಸಹಕಾರವನ್ನು ಖಚಿತಪಡಿಸಿಕೊಳ್ಳುವ ದೃಷ್ಟಿಯಿಂದ, ಯುರೋಪಿಯನ್ ಎಐ ಕಚೇರಿ ಮತ್ತು ಭಾರತ ಎಐ ಮಿಷನ್ ಸಹಕಾರವನ್ನು ಗಾಢವಾಗಿಸಲು, ನಾವೀನ್ಯತೆಯ ಪೂರಕ ವ್ಯವಸ್ಥೆಯನ್ನು ಉತ್ತೇಜಿಸಲು ಮತ್ತು ವಿಶ್ವಾಸಾರ್ಹ ಎಐ ಅನ್ನು ಅಭಿವೃದ್ಧಿಪಡಿಸಲು ಸಾಮಾನ್ಯ ಮುಕ್ತ ಸಂಶೋಧನಾ ಪ್ರಶ್ನೆಗಳ ಕುರಿತು ಮಾಹಿತಿ ವಿನಿಮಯವನ್ನು ಉತ್ತೇಜಿಸಲು ಒಪ್ಪಿಕೊಂಡರು. ಲಾರ್ಜ್ ಲಾಂಗ್ವೇಜ್ ಮಾಡೆಲ್ ಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಮತ್ತು ನೈತಿಕ ಮತ್ತು ಜವಾಬ್ದಾರಿಯುತ ಎಐ ಗಾಗಿ ಪರಿಕರಗಳು ಮತ್ತು ಚೌಕಟ್ಟುಗಳನ್ನು ಅಭಿವೃದ್ಧಿಪಡಿಸುವಂತಹ ಜಂಟಿ ಯೋಜನೆಗಳ ಮೂಲಕ ಮಾನವ ಅಭಿವೃದ್ಧಿ ಮತ್ತು ಸಾಮಾನ್ಯ ಒಳಿತಿಗಾಗಿ ಎಐ ಸಾಮರ್ಥ್ಯವನ್ನು ಬಳಸಿಕೊಳ್ಳಲು ಒಪ್ಪಿಕೊಂಡರು. ನೈಸರ್ಗಿಕ ವಿಕೋಪಗಳು, ಹವಾಮಾನ ಬದಲಾವಣೆ ಮತ್ತು ಬಯೋಇನ್ಫರ್ಮ್ಯಾಟಿಕ್ಸ್ ಕ್ಷೇತ್ರಗಳಲ್ಲಿ ಹೆಚ್ಚಿನ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಅಪ್ಲಿಕೇಶನ್ ಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಸಹಕಾರದಲ್ಲಿನ ಪ್ರಗತಿಯನ್ನು ಇವು ಆಧರಿಸಿವೆ.
ಸಂಶೋಧನೆ ಮತ್ತು ಅಭಿವೃದ್ಧಿ ಆದ್ಯತೆಗಳನ್ನು ಜೋಡಿಸಲು ಮತ್ತು ಸುರಕ್ಷಿತ ಮತ್ತು ವಿಶ್ವಾಸಾರ್ಹ ದೂರಸಂಪರ್ಕ ಮತ್ತು ದೃಢವಾದ ಪೂರೈಕೆ ಸರಪಳಿಗಳನ್ನು ರಚಿಸಲು ಭಾರತ್ 6ಜಿ ಅಲೈಯನ್ಸ್ ಮತ್ತು ಇಯು 6ಜಿ ಸ್ಮಾರ್ಟ್ ನೆಟ್ವರ್ಕ್ಸ್ ಮತ್ತು ಸರ್ವೀಸಸ್ ಇಂಡಸ್ಟ್ರಿ ಅಸೋಸಿಯೇಷನ್ ನಡುವೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಭಾರತ ಮತ್ತು ಇಯು ಸ್ವಾಗತಿಸಿದವು. ಎರಡೂ ಕಡೆಯವರು ಐಟಿ ಮತ್ತು ದೂರಸಂಪರ್ಕ ಪ್ರಮಾಣೀಕರಣದ ಮೇಲೆ ಸಹಕಾರವನ್ನು ಹೆಚ್ಚಿಸುತ್ತಾರೆ ಮತ್ತು ಪರಸ್ಪರ ಕಾರ್ಯಸಾಧ್ಯವಾದ ಜಾಗತಿಕ ಮಾನದಂಡಗಳನ್ನು ಉತ್ತೇಜಿಸುವಲ್ಲಿ ವಿಶೇಷ ಗಮನಹರಿಸುತ್ತಾರೆ.
ಇದಲ್ಲದೆ, ಡಿಜಿಟಲ್ ಕೌಶಲ್ಯ ಅಂತರವನ್ನು ಕಡಿಮೆ ಮಾಡಲು, ಪ್ರಮಾಣೀಕರಣಗಳ ಪರಸ್ಪರ ಗುರುತಿಸುವಿಕೆಯನ್ನು ಅನ್ವೇಷಿಸಲು ಮತ್ತು ಕೌಶಲ್ಯಪೂರ್ಣ ವೃತ್ತಿಪರರ ಕಾನೂನಾತ್ಮಕ ಮಾರ್ಗಗಳನ್ನು ಉತ್ತೇಜಿಸಲು ಮತ್ತು ಪ್ರತಿಭೆಯ ವಿನಿಮಯಕ್ಕಾಗಿ ಕೆಲಸ ಮಾಡಲು ಎರಡೂ ಕಡೆಯವರು ಒಪ್ಪಿಕೊಂಡರು.
2024ರ ಸೆಪ್ಟೆಂಬರ್ನಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟ ಗ್ಲೋಬಲ್ ಡಿಜಿಟಲ್ ಕಾಂಪ್ಯಾಕ್ಟ್ ಅನುಷ್ಠಾನಕ್ಕೆ ಸಹಕರಿಸಲು ಉಭಯ ಕಡೆಯವರು ಒಪ್ಪಿಕೊಂಡರು, ಇದು ಅವರ ಹಂಚಿಕೆಯ ಉದ್ದೇಶಗಳನ್ನು ಸಾಧಿಸುವ ಪ್ರಮುಖ ಸಾಧನವಾಗಿದೆ. ಮುಂಬರುವ ಮಾಹಿತಿ ಸೊಸೈಟಿ +20 ಕುರಿತ ವಿಶ್ವ ಶೃಂಗಸಭೆಯು ಇಂಟರ್ನೆಟ್ ಆಡಳಿತದ ಬಹು-ಪಾಲುದಾರರ ಮಾದರಿಗೆ ಜಾಗತಿಕ ಬೆಂಬಲವನ್ನು ಕಾಯ್ದುಕೊಳ್ಳುತ್ತದೆ ಮತ್ತು ಅದನ್ನು ಹೆಚ್ಚಿಸುತ್ತದೆ ಎಂದು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಎರಡೂ ಕಡೆಯವರು ಗಮನಿಸಿದರು.
ಸ್ವಚ್ಛ ಮತ್ತು ಹಸಿರು ತಂತ್ರಜ್ಞಾನಗಳನ್ನು ಕುರಿತ ಕಾರ್ಯಕಾರಿ ಗುಂಪು 2
ಭಾರತ ಮತ್ತು ಯುರೋಪಿಯನ್ ಒಕ್ಕೂಟವು ಕ್ರಮವಾಗಿ 2070 ಮತ್ತು 2050 ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸಲು ಸ್ವಚ್ಛ ಮತ್ತು ಹಸಿರು ತಂತ್ರಜ್ಞಾನಗಳ ಕುರಿತ ಕಾರ್ಯಕಾರಿ ಗುಂಪು 2 ರ ಅಡಿಯಲ್ಲಿ ಗುರುತಿಸಲಾದ ಆದ್ಯತೆಯ ಕೆಲಸಗಳ ಮಹತ್ವವನ್ನು ನೆನಪಿಸಿಕೊಂಡವು. ಈ ಗುರಿಗಳನ್ನು ಸಾಧಿಸಲು ಹೊಸ ಸ್ವಚ್ಛ ತಂತ್ರಜ್ಞಾನಗಳು ಮತ್ತು ಮಾನದಂಡಗಳಲ್ಲಿ ಗಮನಾರ್ಹ ಹೂಡಿಕೆಯ ಅಗತ್ಯವಿರುತ್ತದೆ. ಸಂಶೋಧನೆ ಮತ್ತು ನಾವೀನ್ಯತೆ (ಆರ್&ಐ) ಮೇಲೆ ಒತ್ತು ನೀಡುವುದರಿಂದ ಇಯು ಮತ್ತು ಭಾರತದ ನಡುವೆ ತಾಂತ್ರಿಕ ಸಹಯೋಗ ಮತ್ತು ಉತ್ತಮ ಅಭ್ಯಾಸಗಳ ವಿನಿಮಯವನ್ನು ಹೆಚ್ಚಿಸುತ್ತದೆ. ಸಮಾನಾಂತರವಾಗಿ, ಮಾರುಕಟ್ಟೆಯನ್ನು ವೃದ್ಧಿಸಲು ತಾಂತ್ರಿಕ ನಾವೀನ್ಯತೆಗಳನ್ನು ಬೆಂಬಲಿಸುವುದರಿಂದ ಭಾರತ ಮತ್ತು ಇಯು ಉದ್ಯಮಗಳು ಆಯಾ ಮಾರುಕಟ್ಟೆಗಳಿಗೆ ಪ್ರವೇಶವನ್ನು ಹೆಚ್ಚಿಸುತ್ತವೆ ಮತ್ತು ನವೀನ ತಂತ್ರಜ್ಞಾನಗಳ ವ್ಯಾಪಕ ಅಳವಡಿಕೆಗೆ ಅನುಕೂಲವಾಗುತ್ತದೆ. ಇದು ಭಾರತ ಮತ್ತು ಇಯು ಇನ್ಕ್ಯುಬೇಟರ್ ಗಳು, ಎಸ್ ಎಂ ಇ ಗಳು ಮತ್ತು ಸ್ಟಾರ್ಟ್-ಅಪ್ ಗಳ ನಡುವಿನ ಸಹಕಾರ ಮತ್ತು ಅಂತಹ ತಂತ್ರಜ್ಞಾನಗಳಲ್ಲಿ ಮಾನವ ಸಂಪನ್ಮೂಲ ಸಾಮರ್ಥ್ಯ ಮತ್ತು ದಕ್ಷತೆಯನ್ನು ನಿರ್ಮಿಸುವ ಸಾಧ್ಯತೆಗಳನ್ನು ತೆರೆಯುತ್ತದೆ.
ಈ ನಿಟ್ಟಿನಲ್ಲಿ, ವಿದ್ಯುಚ್ಚಾಲಿತ ವಾಹನಗಳಿಗೆ (ಇವಿಗಳು) ಬ್ಯಾಟರಿಗಳ ಮರುಬಳಕೆ, ಸಾಗರ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ತ್ಯಾಜ್ಯದಿಂದ ಹೈಡ್ರೋಜನ್ ಗೆ ಸಂಘಟಿತ ಕರೆಗಳ ಮೂಲಕ ಜಂಟಿ ಸಂಶೋಧನಾ ಸಹಕಾರಕ್ಕೆ ಎರಡೂ ಕಡೆಯವರು ಒಪ್ಪಿಕೊಂಡರು. ಅಂದಾಜು ಒಟ್ಟು ಸಂಯೋಜಿತ ಬಜೆಟ್ ಸರಿಸುಮಾರು 60 ಮಿಲಿಯನ್ ಯುರೋ ಆಗಿದ್ದು, ಹೊರೈಸನ್ ಯುರೋಪ್ ಕಾರ್ಯಕ್ರಮ ಮತ್ತು ಭಾರತೀಯ ಕೊಡುಗೆಗೆ ಅನುಗುಣವಾಗಿರುತ್ತದೆ. ಇವಿ ಗಳಿಗೆ ಬ್ಯಾಟರಿಗಳ ಮರುಬಳಕೆಯ ಮೇಲೆ, ವಿವಿಧ ರೀತಿಯ ಹೊಂದಿಕೊಳ್ಳುವ/ಕಡಿಮೆ ವೆಚ್ಚದ/ಮರುಬಳಕೆ ಮಾಡಲು ಸುಲಭವಾದ ಬ್ಯಾಟರಿಗಳ ಮೂಲಕ ಬ್ಯಾಟರಿ ಮರುಬಳಕೆಯ ಮೇಲೆ ಕೇಂದ್ರೀಕರಿಸಲಾಗುತ್ತದೆ. ಸಾಗರ ಪ್ಲಾಸ್ಟಿಕ್ ಕಸದಲ್ಲಿ, ಜಲವಾಸಿ ಕಸವನ್ನು ಪತ್ತೆಹಚ್ಚಲು, ಅಳೆಯಲು ಮತ್ತು ವಿಶ್ಲೇಷಿಸಲು ಮತ್ತು ಸಮುದ್ರ ಪರಿಸರದ ಮೇಲೆ ಮಾಲಿನ್ಯದ ಒಟ್ಟು ಪರಿಣಾಮವನ್ನು ಕಡಿಮೆ ಮಾಡಲು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಕೇಂದ್ರೀಕರಿಸಲಾಗುತ್ತದೆ. ಜೈವಿಕ ತ್ಯಾಜ್ಯದಿಂದ ಹೈಡ್ರೋಜನ್ ಉತ್ಪಾದಿಸಲು ಹೆಚ್ಚಿನ ದಕ್ಷತೆಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಲಾಗುವುದು.
ಭವಿಷ್ಯದ ಕ್ರಮಗಳಿಗೆ ಆಧಾರವಾಗಿ ಗುರುತಿಸಲಾದ ಸಹಕಾರ ಕ್ಷೇತ್ರಗಳಲ್ಲಿ ತಜ್ಞರ ನಡುವಿನ ಗಣನೀಯ ವಿನಿಮಯದ ಮಹತ್ವವನ್ನು ಎರಡೂ ಕಡೆಯವರು ನೆನಪಿಸಿಕೊಂಡರು. ಭಾರತೀಯ ತಜ್ಞರು ಜನವರಿ 2024 ರಲ್ಲಿ ಇಟಲಿಯ ಇಸ್ಪ್ರಾದಲ್ಲಿರುವ ಜಂಟಿ ಸಂಶೋಧನಾ ಕೇಂದ್ರ (ಜೆ ಆರ್ ಸಿ) ಇ-ಮೊಬಿಲಿಟಿ ಲ್ಯಾಬ್ ನಲ್ಲಿ ಇವಿ ಇಂಟರ್ ಆಪರೇಬಿಲಿಟಿ ಮತ್ತು ಎಲೆಕ್ಟ್ರೋಮ್ಯಾಗ್ನೆಟಿಕ್ ಕಾಂಪಾಟಿಬಿಲಿಟಿ (ಇಎಂಸಿ) ಕುರಿತು ತರಬೇತಿ ಮತ್ತು ಪರಸ್ಪರ ಕಲಿಕೆಯ ಅಭ್ಯಾಸದಲ್ಲಿ ಭಾಗವಹಿಸಿದ್ದಾರೆ. ಇದಲ್ಲದೆ, ಭಾರತದೊಂದಿಗೆ ಇಯು-ಭಾರತೀಯ ಸಂವಾದ ಮತ್ತು ಮೂಲಸೌಕರ್ಯ ಪ್ರಮಾಣೀಕರಣ ಪ್ರಕ್ರಿಯೆಗಳನ್ನು ವೇಗಗೊಳಿಸುವಲ್ಲಿ ಉದ್ಯಮದ ತೊಡಗಿಸಿಕೊಳ್ಳುವಿಕೆಯನ್ನು ಗಾಢವಾಗಿಸಲು, ಭಾರತದ ಪುಣೆಯ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಎ ಆರ್ ಎ ಐ) ಸಂಸ್ಥೆಯಲ್ಲಿ ಮತ್ತು ಆನ್ಲೈನ್ ನಲ್ಲಿ ಇವಿ ಚಾರ್ಜಿಂಗ್ ತಂತ್ರಜ್ಞಾನಗಳು (ಪ್ರಮಾಣೀಕರಣ ಮತ್ತು ಪರೀಕ್ಷೆ) ಕುರಿತು ಜಂಟಿ ಹೈಬ್ರಿಡ್ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಇವಿ ಬ್ಯಾಟರಿಗಳ ಮರುಬಳಕೆ ತಂತ್ರಜ್ಞಾನದಲ್ಲಿ ಭಾರತ ಮತ್ತು ಇಯು ಸ್ಟಾರ್ಟ್ಅಪ್ ಗಳ ನಡುವೆ ವಿನಿಮಯವನ್ನು ಗುರುತಿಸಲು, ಬೆಂಬಲಿಸಲು ಮತ್ತು ಸಂಘಟಿಸಲು ಎರಡೂ ಕಡೆಯವರು ಹೊಂದಾಣಿಕೆ ಕಾರ್ಯಕ್ರಮವನ್ನು ಸಹ ಮುಕ್ತಾಯಗೊಳಿಸಿದರು. ಸಮುದ್ರ ಪ್ಲಾಸ್ಟಿಕ್ ಕಸಕ್ಕಾಗಿ ಮೌಲ್ಯಮಾಪನ ಮತ್ತು ಮೇಲ್ವಿಚಾರಣಾ ಸಾಧನಗಳನ್ನು ಸಹ ತಜ್ಞರು ಜಂಟಿಯಾಗಿ ಚರ್ಚಿಸಿದರು. ಅಂತಿಮವಾಗಿ, ಸಮುದ್ರ ಪ್ಲಾಸ್ಟಿಕ್ ಮಾಲಿನ್ಯವನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಎಲ್ಲಾ ಮಧ್ಯಸ್ಥಗಾರರನ್ನು ಒಳಗೊಂಡ ಪ್ರಾಯೋಗಿಕ ಪರಿಹಾರಗಳನ್ನು ರಚಿಸಲು ಇಯು-ಭಾರತದ ಸಹಕಾರವನ್ನು ಉತ್ತೇಜಿಸಲು “ಐಡಿಯಾಥಾನ್” ಅನ್ನು ವಿನ್ಯಾಸಗೊಳಿಸಲಾಗಿದೆ.
ಇ-ಮೊಬಿಲಿಟಿ ಕ್ಷೇತ್ರದಲ್ಲಿ ಸಹಕಾರಿ, ಸಾಮರಸ್ಯದ ಪರೀಕ್ಷಾ ಪರಿಹಾರಗಳಿಗಾಗಿ ಪೂರ್ವ-ಪ್ರಮಾಣಿತ ಸಂಶೋಧನೆ ಮತ್ತು ಜ್ಞಾನ ವಿನಿಮಯ ಸೇರಿದಂತೆ ಇವಿ ಚಾರ್ಜಿಂಗ್ ಮೂಲಸೌಕರ್ಯಕ್ಕಾಗಿ ಸಾಮರಸ್ಯದ ಮಾನದಂಡಗಳ ಕುರಿತು ಸಹಕಾರವನ್ನು ಅನ್ವೇಷಿಸಲು ಎರಡೂ ಕಡೆಯವರು ಒಪ್ಪಿಕೊಂಡರು. ಹೈಡ್ರೋಜನ್-ಸಂಬಂಧಿತ ಸುರಕ್ಷತಾ ಮಾನದಂಡಗಳು, ಮಾನದಂಡಗಳ ವಿಜ್ಞಾನ ಮತ್ತು ಜಂಟಿಯಾಗಿ ನಡೆಸಿದ ಹಿಂದಿನ ಸಂಶೋಧನಾ ಯೋಜನೆಗಳ ಫಲಿತಾಂಶವಾಗಿ ತ್ಯಾಜ್ಯನೀರು ಸಂಸ್ಕರಣಾ ತಂತ್ರಜ್ಞಾನಗಳ ಮಾರುಕಟ್ಟೆ ಬಳಕೆಯಲ್ಲಿ ಸಹಯೋಗವನ್ನು ಹೆಚ್ಚಿಸುವುದು ಹೇಗೆ ಎಂಬುದನ್ನು ಅನ್ವೇಷಿಸಲು ಎರಡೂ ಕಡೆಯವರು ಒಪ್ಪಿಕೊಂಡರು.
ವ್ಯಾಪಾರ, ಹೂಡಿಕೆ ಮತ್ತು ದೃಢವಾದ ಮೌಲ್ಯ ಸರಪಳಿಗಳನ್ನು ಕುರಿತ ಕಾರ್ಯಕಾರಿ ಗುಂಪು 3
ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವೆ ನಿಕಟ ಆರ್ಥಿಕ ಪಾಲುದಾರಿಕೆಯನ್ನು ನಿರ್ಮಿಸುವ ಉದ್ದೇಶದಿಂದ ವ್ಯಾಪಾರ, ಹೂಡಿಕೆ ಮತ್ತು ದೃಢವಾದ ಮೌಲ್ಯ ಸರಪಳಿಗಳ ಕುರಿತು ಕಾರ್ಯಕಾರಿ ಗುಂಪು 3 ರ ಅಡಿಯಲ್ಲಿ ನಡೆದಿರುವ ಉತ್ಪಾದಕ ಚರ್ಚೆಗಳನ್ನು ಭಾರತ ಮತ್ತು ಯುರೋಪಿಯನ್ ಒಕ್ಕೂಟವು ಗಮನಿಸಿದವು. ಹೆಚ್ಚುತ್ತಿರುವ ಸವಾಲಿನ ಭೌಗೋಳಿಕ ರಾಜಕೀಯ ಸಂದರ್ಭದಲ್ಲಿ, ಸಂಪತ್ತು ಮತ್ತು ಹಂಚಿಕೆಯ ಸಮೃದ್ಧಿಯನ್ನು ಸೃಷ್ಟಿಸಲು ಎರಡೂ ಕಡೆಯವರು ಒಟ್ಟಾಗಿ ಕೆಲಸ ಮಾಡಲು ಬದ್ಧರಾಗಿದ್ದಾರೆ. ಕಾರ್ಯಕಾರಿ ಗುಂಪು 3 ರ ಅಡಿಯಲ್ಲಿನ ಕೆಲಸವು ಪ್ರತ್ಯೇಕ ಮಾರ್ಗಗಳಲ್ಲಿ ಪ್ರಗತಿಯಲ್ಲಿರುವ ಮುಕ್ತ ವ್ಯಾಪಾರ ಒಪ್ಪಂದ (ಎಫ್ ಟಿ ಎ), ಹೂಡಿಕೆ ಸಂರಕ್ಷಣಾ ಒಪ್ಪಂದ (ಐಪಿಎ) ಮತ್ತು ಭೌಗೋಳಿಕ ಸೂಚನೆ ಒಪ್ಪಂದದ ಮೇಲೆ ನಡೆಯುತ್ತಿರುವ ಮಾತುಕತೆಗಳಿಗೆ ಪೂರಕವಾಗಿದೆ.
ಕೃಷಿಯಲ್ಲಿ, ಭಾರತ ಮತ್ತು ಇಯು ಆಹಾರ ಭದ್ರತೆಗಾಗಿ ಆಕಸ್ಮಿಕ ಯೋಜನೆಯಲ್ಲಿ ಸಹಕರಿಸಲು ಉದ್ದೇಶಿಸಿವೆ ಮತ್ತು ಜಿ20 ಚೌಕಟ್ಟಿನ ಮೂಲಕ ಸಹಕಾರಕ್ಕಾಗಿ ಉತ್ತೇಜಿಸಲಾದ ಹವಾಮಾನ-ಸ್ಥಿತಿಸ್ಥಾಪಕ ಅಭ್ಯಾಸಗಳು, ಬೆಳೆ ವೈವಿಧ್ಯೀಕರಣ ಮತ್ತು ಮೂಲಸೌಕರ್ಯ ಸುಧಾರಣೆಗಳಿಗೆ ಸಂಬಂಧಿಸಿದ ಹಂಚಿಕೆಯ ಸಂಶೋಧನೆ ಮತ್ತು ನಾವೀನ್ಯತೆ ಅಗತ್ಯಗಳ ಕುರಿತು ಸಾಮಾನ್ಯ ಪ್ರಯತ್ನಗಳನ್ನು ಸ್ವಾಗತಿಸಿವೆ. ಔಷಧೀಯ ವಲಯದಲ್ಲಿ, ದುರ್ಬಲತೆಗಳನ್ನು ನಕ್ಷೆ ಮಾಡುವ ಮೂಲಕ, ಸುಸ್ಥಿರ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಮತ್ತು ಅಡಚಣೆಗಳನ್ನು ತಡೆಗಟ್ಟಲು ಮುಂಚಿನ ಎಚ್ಚರಿಕೆ ವ್ಯವಸ್ಥೆಗಳನ್ನು ಸ್ಥಾಪಿಸುವ ಮೂಲಕ ಸಕ್ರಿಯ ಔಷಧೀಯ ಪದಾರ್ಥಗಳ (ಎಪಿಐ) ಪೂರೈಕೆ ಸರಪಳಿಗಳಲ್ಲಿ ಪಾರದರ್ಶಕತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಎರಡೂ ಕಡೆಯವರು ಹೊಂದಿದ್ದಾರೆ. ಸೌರ ಶಕ್ತಿ, ಕಡಲಾಚೆಯ ಪವನ ಮತ್ತು ಶುದ್ಧ ಹೈಡ್ರೋಜನ್ ಪೂರೈಕೆ ಸರಪಳಿಗಳನ್ನು ಬಲಪಡಿಸುವ ಗುರಿಯನ್ನು ಶುದ್ಧ ತಂತ್ರಜ್ಞಾನ ಸಹಯೋಗ ಹೊಂದಿದೆ. ಇದು ಪ್ರಾದೇಶಿಕ ಸಾಮರ್ಥ್ಯಗಳು ಮತ್ತು ಹೂಡಿಕೆಯ ಪ್ರೋತ್ಸಾಹಗಳು ಮತ್ತು ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ ಆದ್ಯತೆಗಳ ಕುರಿತು ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುತ್ತದೆ, ಹಾಗೆಯೇ ದುರ್ಬಲತೆಗಳನ್ನು ನಿರ್ಣಯಿಸುವ ವಿಧಾನಗಳು, ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡುವ ವಿಧಾನಗಳನ್ನು ಚರ್ಚಿಸುತ್ತದೆ ಮತ್ತು ಪೂರೈಕೆ ಸರಪಳಿಗಳ ಸಂಭಾವ್ಯ ಸಮನ್ವಯವನ್ನು ಅನ್ವೇಷಿಸುತ್ತದೆ. ಈ ಎಲ್ಲಾ ಕ್ಷೇತ್ರಗಳಲ್ಲಿ, ಭಾರತ ಮತ್ತು ಇಯು ಹೂಡಿಕೆಯನ್ನು ಉತ್ತೇಜಿಸಲು, ಉತ್ತಮ ಅಭ್ಯಾಸಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ನಿಯಮಿತ ಮಾತುಕತೆಗಳು, ಸಂಶೋಧನಾ ಸಹಯೋಗಗಳು ಮತ್ತು ವ್ಯಾಪಾರದಿಂದ ವ್ಯಾಪಾರ ತೊಡಗಿಸಿಕೊಳ್ಳುವಿಕೆಗಳ ಮೂಲಕ ಅಪಾಯಗಳನ್ನು ತಗ್ಗಿಸಲು ಕೆಲಸ ಮಾಡುತ್ತವೆ, ಇದರಿಂದಾಗಿ ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಖಾತ್ರಿಪಡಿಸುತ್ತವೆ.
ಟಿಟಿಸಿ ಚೌಕಟ್ಟಿನೊಳಗೆ ಸಹಕಾರದ ಮೂಲಕ ಸಂಬಂಧಿತ ಆದ್ಯತೆಯ ಮಾರುಕಟ್ಟೆ ಪ್ರವೇಶ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ ಎಂದು ಎರಡೂ ಕಡೆಯವರು ಒಪ್ಪಿಕೊಂಡರು. ಹಲವಾರು ಇಯು ಸಸ್ಯ ಉತ್ಪನ್ನಗಳ ಮಾರುಕಟ್ಟೆಯನ್ನು ಅನುಮೋದಿಸುವ ಭಾರತದ ಉಪಕ್ರಮಗಳನ್ನು ಇಯು ಕಡೆಯವರು ಶ್ಲಾಘಿಸಿದರು, ಹಾಗೆಯೇ ಹಲವಾರು ಭಾರತೀಯ ಜಲಕೃಷಿ ಸಂಸ್ಥೆಗಳನ್ನು ಪಟ್ಟಿ ಮಾಡುವುದನ್ನು ಮತ್ತು ಕೃಷಿ ಸಾವಯವ ಉತ್ಪನ್ನಗಳಿಗೆ ಸಮಾನತೆಯ ವಿಷಯವನ್ನು ಕೈಗೆತ್ತಿಕೊಂಡಿರುವುದನ್ನು ಭಾರತದ ಕಡೆಯವರು ಶ್ಲಾಘಿಸಿದರು. ಟಿಟಿಸಿ ಪರಿಶೀಲನಾ ಕಾರ್ಯವಿಧಾನದ ಅಡಿಯಲ್ಲಿ ಈ ವಿಷಯಗಳ ಕುರಿತು ತಮ್ಮ ಪ್ರಯತ್ನಗಳನ್ನು ಮುಂದುವರಿಸಲು ಮತ್ತು ಪರಸ್ಪರ ಗುರುತಿಸಲಾದ ಉಳಿದ ಸಮಸ್ಯೆಗಳ ಕುರಿತು ತಮ್ಮ ತೊಡಗಿಸುಕೊಳ್ಳುವಿಕೆಯನ್ನು ಮುಂದುವರಿಸಲು ಎರಡೂ ಕಡೆಯವರು ಒಪ್ಪಿಕೊಂಡರು.
ಆರ್ಥಿಕ ಭದ್ರತೆಯನ್ನು ಉತ್ತೇಜಿಸಲು ಬೆಳೆಯುತ್ತಿರುವ ಪ್ರಾಮುಖ್ಯತೆಯ ಕ್ಷೇತ್ರವಾದ ವಿದೇಶಿ ನೇರ ಹೂಡಿಕೆಗಳನ್ನು ಪರಿಶೀಲಿಸುವಲ್ಲಿ ಉತ್ತಮ ಅಭ್ಯಾಸಗಳ ಬಗ್ಗೆ ಎರಡೂ ಕಡೆಯವರು ವಿನಿಮಯ ಮಾಡಿಕೊಂಡರು.
ಪ್ರಸ್ತುತ ಸವಾಲಿನ ಭೌಗೋಳಿಕ ರಾಜಕೀಯ ಸಂದರ್ಭದಲ್ಲಿ ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯತ್ತ ಭಾರತ ಮತ್ತು ಇಯು ತಮ್ಮ ಬದ್ಧತೆಯನ್ನು ಬಲಪಡಿಸಿವೆ. ಅದೇ ಸಮಯದಲ್ಲಿ, ಡಬ್ಲ್ಯು ಟಿ ಒ ಸದಸ್ಯರಿಗೆ ಆಸಕ್ತಿಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಮತ್ತು ಸಮರ್ಥವಾಗಿ ಪರಿಹರಿಸಲು ಸಾಧ್ಯವಾಗುವಂತೆ ಅದಕ್ಕೆ ಅಗತ್ಯವಾದ ಸುಧಾರಣೆಗಳನ್ನು ತರುವ ಅಗತ್ಯವನ್ನು ಅವರು ಗುರುತಿಸಿದರು. ಕಾರ್ಯನಿರ್ವಹಣೆಯ ವಿವಾದ ಇತ್ಯರ್ಥ ವ್ಯವಸ್ಥೆಯ ಮಹತ್ವವನ್ನು ಎರಡೂ ಕಡೆಯವರು ಗುರುತಿಸಿದರು. ಈ ಉದ್ದೇಶಕ್ಕಾಗಿ, ಎಂಸಿ14 ಸೇರಿದಂತೆ ಡಬ್ಲ್ಯು ಟಿ ಒ ದೃಢವಾದ ಫಲಿತಾಂಶಗಳನ್ನು ನೀಡಲು ಸಹಾಯ ಮಾಡಲು ತಮ್ಮ ಸಂವಾದ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಆಳಗೊಳಿಸಲು ಒಪ್ಪಿಕೊಂಡರು.
ಎರಡೂ ಕಡೆಯವರು ಹಲವಾರು ದ್ವಿಪಕ್ಷೀಯ ಮಾರ್ಗಗಳ ಮೂಲಕ ವ್ಯಾಪಾರ ಮತ್ತು ಡಿಕಾರ್ಬೊನೈಸೇಶನ್ ಕುರಿತು ಆಳವಾದ ಚರ್ಚೆಗಳನ್ನು ನಡೆಸಿದ್ದಾರೆ ಮತ್ತು ವಿಶೇಷವಾಗಿ ಇಯು ನ ಕಾರ್ಬನ್ ಬಾರ್ಡರ್ ಮೆಕ್ಯಾನಿಸಂ (ಸಿಬಿಎಎಂ) ಅನುಷ್ಠಾನದ ಕುರಿತು ಪಾಲುದಾರರೊಂದಿಗೆ ಜಂಟಿಯಾಗಿ ತೊಡಗಿಸಿಕೊಂಡಿದ್ದಾರೆ. ಸಿಬಿಎಎಂ ಅನುಷ್ಠಾನದಿಂದ ಉಂಟಾಗುವ ಸವಾಲುಗಳನ್ನು, ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಂಬಂಧಿಸಿದಂತೆ ಎರಡೂ ಕಡೆಯವರು ಚರ್ಚಿಸಿದರು ಮತ್ತು ಅವುಗಳನ್ನು ನಿಭಾಯಿಸಲು ಒಪ್ಪಿಕೊಂಡರು.
ಟಿಟಿಸಿ ಅಡಿಯಲ್ಲಿ ತಮ್ಮ ತೊಡಗಿಸಿಕೊಳ್ಳುವಿಕೆಯನ್ನು ವಿಸ್ತರಿಸಲು ಮತ್ತು ಆಳಗೊಳಿಸಲು ಮತ್ತು ಟಿಟಿಸಿಯ ಈ ಯಶಸ್ವಿ ಎರಡನೇ ಸಭೆಯಲ್ಲಿ ನಿಗದಿಪಡಿಸಿದ ಗುರಿಗಳನ್ನು ಈಡೇರಿಸಲು ಒಟ್ಟಾಗಿ ಕೆಲಸ ಮಾಡಲು ತಮ್ಮ ಬದ್ಧತೆಯನ್ನು ಸಹ-ಅಧ್ಯಕ್ಷರು ಪುನರುಚ್ಚರಿಸಿದರು. ಒಂದು ವರ್ಷದೊಳಗೆ ಟಿಟಿಸಿಯ ಮೂರನೇ ಸಭೆಯಲ್ಲಿ ಮತ್ತೆ ಭೇಟಿಯಾಗಲು ಅವರು ಒಪ್ಪಿಕೊಂಡರು.
*****
India is delighted to welcome the President of the @EU_Commission, Ursula von der Leyen and other distinguished members of the College of Commissioners. This level of engagement is both historic and unparalleled. India-EU friendship is both natural as well as organic. Our talks… pic.twitter.com/1NjYIVIEGD
— Narendra Modi (@narendramodi) February 28, 2025
The sectors our talks covered included trade, technology, innovation, skill development, mobility and more. We also seek to deepen investment linkages. At the same time, our commitment to sustainability remains paramount, reflecting in the discussions around green hydrogen,… pic.twitter.com/ao42PwgAeJ
— Narendra Modi (@narendramodi) February 28, 2025
India and Europe share a strong partnership built on shared values, innovation and sustainability. Our close collaboration is shaping a better future for our planet. Together, we will work towards a prosperous world. https://t.co/6iVP4UGv69
— Narendra Modi (@narendramodi) February 28, 2025