Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಡ್ವಾಂಟೇಜ್ ಅಸ್ಸಾಂ 2.0 ಬಂಡವಾಳ ಹೂಡಿಕೆ ಮತ್ತು ಮೂಲಸೌಕರ್ಯ ಶೃಂಗಸಭೆ 2025 ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಅಡ್ವಾಂಟೇಜ್ ಅಸ್ಸಾಂ 2.0 ಬಂಡವಾಳ ಹೂಡಿಕೆ ಮತ್ತು ಮೂಲಸೌಕರ್ಯ ಶೃಂಗಸಭೆ 2025 ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಸ್ಸಾಂನ ಗುವಾಹಟಿಯಲ್ಲಿ ಅಡ್ವಾಂಟೇಜ್ ಅಸ್ಸಾಂ 2.0 ಹೂಡಿಕೆ ಮತ್ತು ಮೂಲಸೌಕರ್ಯ ಶೃಂಗಸಭೆ 2025 ಅನ್ನು ಉದ್ಘಾಟಿಸಿದರು.  ಕಾರ್ಯಕ್ರಮಕ್ಕೆ ಎಲ್ಲಾ ಗಣ್ಯರನ್ನು ಸ್ವಾಗತಿಸಿದ  ಶ್ರೀ ನರೇಂದ್ರ ಮೋದಿ ಅವರು, “ಪೂರ್ವ ಭಾರತ ಮತ್ತು ಈಶಾನ್ಯ ಭಾರತ ಇಂದು ಭವಿಷ್ಯದ ಹೊಸ ಪಯಣವನ್ನು ಆರಂಭಿಸುತ್ತಿವೆ ಮತ್ತು ಅಡ್ವಾಂಟೇಜ್ ಅಸ್ಸಾಂ, ಅಸ್ಸಾಂನ ಅದ್ಭುತ ಸಾಮರ್ಥ್ಯ ಮತ್ತು ಪ್ರಗತಿಯನ್ನು ಪ್ರಪಂಚದೊಂದಿಗೆ ಬೆಸೆದುಕೊಳ್ಳುವ ಒಂದು ಬೃಹತ್  ಉಪಕ್ರಮವಾಗಿದೆ’’ ಎಂದು ಹೇಳಿದರು.

ಭಾರತದ ಸಮೃದ್ಧಿಯಲ್ಲಿ ಪೂರ್ವ ಭಾರತ ವಹಿಸಿದ ಪ್ರಮುಖ ಪಾತ್ರಕ್ಕೆ ಇತಿಹಾಸ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. “ಇಂದು ನಾವು ವಿಕಸಿತ ಭಾರತದತ್ತ ಸಾಗುತ್ತಿರುವಾಗ ಪೂರ್ವ ಭಾರತ ಮತ್ತು ಈಶಾನ್ಯವು ತಮ್ಮ ನಿಜವಾದ ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ” ಎಂದು ಪ್ರಧಾನಿ ಆಶಾವಾದ ವ್ಯಕ್ತಪಡಿಸಿದರು. ಅಡ್ವಾಂಟೇಜ್ ಅಸ್ಸಾಂ ಒಂದೇ ಮನೋಭಾವದ ಪ್ರಾತಿನಿಧ್ಯವಾಗಿದೆ ಎಂದು ಅವರು ಹೇಳಿದರು ಮತ್ತು ಇಂತಹ ಭವ್ಯ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಅಸ್ಸಾಂ ಸರ್ಕಾರ ಮತ್ತು ಮುಖ್ಯಮಂತ್ರಿ ಅವರನ್ನು ಅಭಿನಂದಿಸಿದರು. ‘ಎ ಫಾರ್ ಅಸ್ಸಾಂ’ ಎಂಬುದು ರೂಢಿಯಾಗುವ ಸಮಯ ಹೆಚ್ಚು ದೂರವಿಲ್ಲ ಎಂದು 2013ರಲ್ಲಿ ಹೇಳಿದ್ದ ತಮ್ಮ ಮಾತುಗಳನ್ನು ಅವರು ನೆನಪಿಸಿಕೊಂಡರು.

”ಜಾಗತಿಕ ಅನಿಶ್ಚಿತತೆಗಳ ನಡುವೆಯೂ, ತಜ್ಞರು ಒಂದು ಅಂಶವನ್ನು ಅವಿರೋಧವಾಗಿ ಒಪ್ಪುತ್ತಾರೆ: ಅದು ಭಾರತದ ಕ್ಷಿಪ್ರ ಪ್ರಗತಿ’’ ಎಂದು ಪ್ರಧಾನಮಂತ್ರಿ ಹೇಳಿದರು. ಇಂದಿನ ಭಾರತವು ಈ ಶತಮಾನದ ಮುಂದಿನ 25 ವರ್ಷಗಳ ಕಾಲ ದೀರ್ಘಾವಧಿಯ ದೂರದೃಷ್ಟಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಭಾರತದ ಯುವಜನತೆಯ  ಮೇಲೆ ಜಗತ್ತು ಅಪಾರ ನಂಬಿಕೆಯನ್ನು ಹೊಂದಿದೆ, ಇದು ವೇಗವಾಗಿ ಕೌಶಲ್ಯ ಮತ್ತು ನಾವೀನ್ಯತೆ ಪಡೆಯುತ್ತಿದೆ ಎಂದು ಅವರು ಒತ್ತಿ ಹೇಳಿದರು. ಭಾರತದ ನವ-ಮಧ್ಯಮ ವರ್ಗವು ಬಡತನದಿಂದ ಹೊಸ ಆಕಾಂಕ್ಷೆಗಳೊಂದಿಗೆ ಹೊರಬರುತ್ತಿದೆ ಎಂಬ ವಿಶ್ವಾಸ ಹೆಚ್ಚುತ್ತಿದೆ ಎಂದು ಅವರು ಉಲ್ಲೇಖಿಸಿದರು. ರಾಜಕೀಯ ಸ್ಥಿರತೆ ಮತ್ತು ನೀತಿ ನಿರಂತರತೆಯನ್ನು ಬೆಂಬಲಿಸುವ ಭಾರತದ 140 ಕೋಟಿ ಜನರ ಮೇಲೆ ಜಗತ್ತು ಇರಿಸಿರುವ ನಂಬಿಕೆಯನ್ನು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ, ಸುಧಾರಣೆಗಳನ್ನು ಜಾರಿಗೆ ತರುವ ಭಾರತದ ಆಡಳಿತದ ವೈಖರಿಯನ್ನು ಪ್ರಸ್ತಾಪಿಸಿದರು. ಅಲ್ಲದೆ, ಭಾರತವು ತನ್ನ ಸ್ಥಳೀಯ ಪೂರೈಕೆ ಸರಣಿಯನ್ನು ಬಲಪಡಿಸುತ್ತಿದೆ ಮತ್ತು ವಿವಿಧ ಜಾಗತಿಕ ಪ್ರದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ ಎಂಬ ಬಗ್ಗೆ ಅವರು ಗಮನಸೆಳೆದರು. ಪೂರ್ವ ಏಷ್ಯಾ ಮತ್ತು ಹೊಸ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್‌ನೊಂದಿಗೆ ಬಲವಾದ ಸಂಪರ್ಕವನ್ನು ಅವರು ಉಲ್ಲೇಖಿಸಿ, ಇದು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದರು.

ಅಸ್ಸಾಂನಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಭಾಗವಹಿಸಿದ್ದವರನ್ನು ಗಮನಿಸಿ ಭಾರತದ ಮೇಲೆ ಜಾಗತಿಕವಾಗಿ ಹೆಚ್ಚುತ್ತಿರುವ ನಂಬಿಕೆಯನ್ನು ಪ್ರಸ್ತಾಪಿಸಿದ ಶ್ರೀ ನರೇಂದ್ರ ಮೋದಿ, “ಭಾರತದ ಬೆಳವಣಿಗೆಗೆ ಅಸ್ಸಾಂನ ಕೊಡುಗೆ ಸ್ಥಿರವಾಗಿ ಹೆಚ್ಚುತ್ತಿದೆ” ಎಂದು ಹೇಳಿದರು. ಅಡ್ವಾಂಟೇಜ್ ಅಸ್ಸಾಂ ಶೃಂಗಸಭೆಯ ಮೊದಲ ಆವೃತ್ತಿಯನ್ನು 2018 ರಲ್ಲಿ ನಡೆಸಲಾಯಿತು, ಆ ಸಮಯದಲ್ಲಿ ಅಸ್ಸಾಂನ ಆರ್ಥಿಕತೆಯು 2.75 ಲಕ್ಷ ಕೋಟಿ ರೂ. ಮೌಲ್ಯದ್ದಾಗಿತ್ತು ಎಂದು ಅವರು ಉಲ್ಲೇಖಿಸಿದರು. ಇಂದು, ಅಸ್ಸಾಂ ಸುಮಾರು 6 ಲಕ್ಷ ಕೋಟಿ ರೂ. ಆರ್ಥಿಕತೆ ಹೊಂದಿರುವ ರಾಜ್ಯವಾಗಿದೆ ಎಂದು ಅವರು ಹೇಳಿದರು. ತಮ್ಮ ಸರ್ಕಾರದಡಿಯಲ್ಲಿ ಅಸ್ಸಾಂನ ಆರ್ಥಿಕತೆಯು ಕೇವಲ ಆರು ವರ್ಷಗಳಲ್ಲಿ ದ್ವಿಗುಣಗೊಂಡಿದೆ ಎಂದು ಒತ್ತಿ ಹೇಳಿದರು. ಅಲ್ಲದೆ, ಇದು ಕೇಂದ್ರ ಮತ್ತು ರಾಜ್ಯದಲ್ಲಿರುವ ತಮ್ಮ ಸರ್ಕಾರಗಳ ಎರಡು ಪರಿಣಾಮವಾಗಿದೆ ಎಂದು ಅವರು ಹೇಳಿದರು. ಅಸ್ಸಾಂನಲ್ಲಿನ ಹಲವು ಹೂಡಿಕೆಗಳು ಅದನ್ನು ಅನಿಯಮಿತ ಸಾಧ್ಯತೆಗಳ ರಾಜ್ಯವನ್ನಾಗಿ ಪರಿವರ್ತಿಸಿವೆ ಎಂದು ಅವರು ಹೇಳಿದರು. ಅಸ್ಸಾಂ ಸರ್ಕಾರ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಉತ್ತಮ ಹೂಡಿಕೆ ವಾತಾವರಣವನ್ನು ಸೃಷ್ಟಿಸುವತ್ತ ಗಮನಹರಿಸುತ್ತಿದೆ ಎಂದು ಪ್ರಧಾನಿ ಬಲವಾಗಿ ಪ್ರತಿಪಾದಿಸಿದರು. ಇತ್ತೀಚಿನ ವರ್ಷಗಳಲ್ಲಿ ಸಂಪರ್ಕ-ಸಂಬಂಧಿತ ಮೂಲಸೌಕರ್ಯದಲ್ಲಿ ತಮ್ಮ ಸರ್ಕಾರ ವ್ಯಾಪಕವಾಗಿ ಕೆಲಸ ಮಾಡಿದೆ ಎಂದು ಉಲ್ಲೇಖಿಸಿದ ಅವರು, 2014ಕ್ಕೂ ಮುನ್ನ ಬ್ರಹ್ಮಪುತ್ರ ನದಿಯ ಮೇಲೆ ಕೇವಲ ಮೂರು ಸೇತುವೆಗಳು ಮಾತ್ರ ಇದ್ದವು, ಅವುಗಳನ್ನು 70 ವರ್ಷಗಳ ಅವಧಿಯಲ್ಲಿ ನಿರ್ಮಿಸಲಾಗಿದೆ ಎಂದು ಅವರು ಒಂದು ಉದಾಹರಣೆಯನ್ನು ನೀಡಿದರು. ಆದರೆ ಕಳೆದ 10 ವರ್ಷಗಳಲ್ಲಿ, ನಾಲ್ಕು ಹೊಸ ಸೇತುವೆಗಳನ್ನು ನಿರ್ಮಿಸಲಾಗಿದೆ. ಈ ಸೇತುವೆಗಳಲ್ಲಿ ಒಂದಕ್ಕೆ ಭಾರತ ರತ್ನ ಭೂಪೇನ್ ಹಜಾರಿಕಾ ಹೆಸರಿಡಲಾಗಿದೆ. 2009 ಮತ್ತು 2014ರ ನಡುವೆ, ಅಸ್ಸಾಂ ಸರಾಸರಿ ರೈಲು ಬಜೆಟ್ ನಿಂದ 2,100 ಕೋಟಿಗಳನ್ನು ಪಡೆದುಕೊಂಡಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು ಆದರೆ ತಮ್ಮ ಸರ್ಕಾರವು ಅಸ್ಸಾಂನ ರೈಲ್ವೆ ಬಜೆಟ್ ಅನ್ನು 10,000 ಕೋಟಿ ರೂ.ಗೆ ಅಂದರೆ ನಾಲ್ಕು ಪಟ್ಟು ಹೆಚ್ಚಿಸಿದೆ ಎಂದು ಹೇಳಿದರು. ಅಸ್ಸಾಂನಲ್ಲಿ 60ಕ್ಕೂ ಅಧಿಕ ರೈಲು ನಿಲ್ದಾಣಗಳನ್ನು ಆಧುನೀಕರಿಸಲಾಗುತ್ತಿದೆ ಮತ್ತು ಈಶಾನ್ಯದ ಮೊದಲ ಸೆಮಿ ಹೈಸ್ಪೀಡ್ ರೈಲು ಈಗ ಗುವಾಹಟಿ ಮತ್ತು ನ್ಯೂ ಜಲಪೈಗುರಿ ನಡುವೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.

ಅಸ್ಸಾಂನಲ್ಲಿ ವಾಯು ಸಂಪರ್ಕದ ತ್ವರಿತ ವಿಸ್ತರಣೆಯ ಕುರಿತು ಮಾತನಾಡಿದ ಪ್ರಧಾನಮಂತ್ರಿ, 2014ರವರೆಗೆ ಕೇವಲ ಏಳು ಮಾರ್ಗಗಳಲ್ಲಿ ಮಾತ್ರ ವಿಮಾನಗಳು ಕಾರ್ಯನಿರ್ವಹಿಸುತ್ತಿದ್ದವು, ಆದರೆ ಈಗ ಸುಮಾರು 30 ಮಾರ್ಗಗಳಲ್ಲಿ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು. ಈ ವಿಸ್ತರಣೆಯು ಸ್ಥಳೀಯ ಆರ್ಥಿಕತೆಗೆ ಗಮನಾರ್ಹ ಉತ್ತೇಜನ ನೀಡಿದೆ ಮತ್ತು ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು. ಈ ಬದಲಾವಣೆಗಳು ಕೇವಲ ಮೂಲಸೌಕರ್ಯಕ್ಕೆ ಸೀಮಿತವಾಗಿಲ್ಲ, ಆದರೆ ಕಳೆದ ದಶಕದಲ್ಲಿ ಹಲವು ಶಾಂತಿ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು ಮತ್ತು ದೀರ್ಘಕಾಲದಿಂದ ಬಾಕಿ ಉಳಿದಿದ್ದ ಗಡಿ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು. ಅಸ್ಸಾಂನ ಪ್ರತಿಯೊಂದು ಪ್ರದೇಶ, ಪ್ರತಿಯೊಬ್ಬ ನಾಗರಿಕ ಮತ್ತು ಪ್ರತಿಯೊಬ್ಬ ಯುವಕರು ರಾಜ್ಯದ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು.

“ಭಾರತವು ಆರ್ಥಿಕತೆಯ ಎಲ್ಲಾ ವಲಯಗಳು ಮತ್ತು ಹಂತಗಳಲ್ಲಿ ಗಮನಾರ್ಹ ಸುಧಾರಣೆಗಳಿಗೆ ಒಳಗಾಗುತ್ತಿದೆ ಮತ್ತು ವ್ಯಾಪಾರವನ್ನು ಸುಲಭಗೊಳಿಸಲು ನಿರಂತರ ಪ್ರಯತ್ನಗಳನ್ನು ಮಾಡಲಾಗಿದೆ ಮತ್ತು ಉದ್ಯಮ ಮತ್ತು ನಾವೀನ್ಯತೆ ಸಂಸ್ಕೃತಿ ಉತ್ತೇಜಿಸಲು ಸಮಗ್ರ ಪೂರಕ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ” ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ನವೋದ್ಯಮಗಳು, ಪಿಎಲ್ಐ ಯೋಜನೆಗಳ ಮೂಲಕ ಉತ್ಪಾದನೆ ಮತ್ತು ಹೊಸ ಉತ್ಪಾದನಾ ಕಂಪನಿಗಳು ಮತ್ತು ಎಂಎಸ್‌ಎಂಇಗಳಿಗೆ ತೆರಿಗೆ ವಿನಾಯಿತಿಗಳಿಗಾಗಿ ಅತ್ಯುತ್ತಮ ನೀತಿಗಳನ್ನು ರೂಪಿಸಲಾಗಿದೆ ಎಂದು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ದೇಶದ ಮೂಲಸೌಕರ್ಯದಲ್ಲಿ ಸರ್ಕಾರ ಮಾಡುತ್ತಿರುವ ಗಣನೀಯ ಹೂಡಿಕೆಗಳನ್ನೂ ಸಹ ಅವರು ಉಲ್ಲೇಖಿಸಿದರು. ಸಾಂಸ್ಥಿಕ ಸುಧಾರಣೆ, ಕೈಗಾರಿಕೆ, ಮೂಲಸೌಕರ್ಯ ಮತ್ತು ನಾವೀನ್ಯತೆಗಳ ಸಂಯೋಜನೆಯು ಭಾರತದ ಪ್ರಗತಿಯ ಅಡಿಪಾಯವನ್ನು ರೂಪಿಸುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಡಬಲ್ ಎಂಜಿನ್ ವೇಗದಲ್ಲಿ ಮುನ್ನಡೆಯುತ್ತಿರುವ ಅಸ್ಸಾಂನಲ್ಲಿಯೂ ಈ ಪ್ರಗತಿಯನ್ನು ಕಾಣಲಾಗುತ್ತಿದೆ ಎಂದು ಅವರು ಹೇಳಿದರು. 2030ರ ವೇಳೆಗೆ ಅಸ್ಸಾಂ 150 ಶತಕೋಟಿ ಡಾಲರ್‌ ಆರ್ಥಿಕತೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ ಎಂದು ಅವರು ಪ್ರಸ್ತಾಪಿಸಿದರು. ಅಸ್ಸಾಂನ ಸಮರ್ಥ ಮತ್ತು ಪ್ರತಿಭಾನ್ವಿತ ಜನರು ಮತ್ತು ಅವರ ಸರ್ಕಾರದ ಬದ್ಧತೆಯ ಕಾರಣದಿಂದಾಗಿ ಅಸ್ಸಾಂ ಈ ಗುರಿಯನ್ನು ಸಾಧಿಸಬಹುದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಆಗ್ನೇಯ ಏಷ್ಯಾ ಮತ್ತು ಭಾರತದ ನಡುವಿನ ಹೆಬ್ಬಾಗಿಲಾಗಿ ಅಸ್ಸಾಂ ಹೊರಹೊಮ್ಮುತ್ತಿದೆ ಎಂದು ಹೇಳಿದ ಶ್ರೀ ನರೇಂದ್ರ ಮೋದಿ ಈ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರವು ಈಶಾನ್ಯ ಪರಿವರ್ತನಾ ಕೈಗಾರಿಕೀಕರಣ ಯೋಜನೆ ‘ಉನ್ನತಿ’ಯನ್ನು ಆರಂಭಿಸಿದೆ ಎಂದರು. ‘ಉನ್ನತಿ’ ಯೋಜನೆಯು ಅಸ್ಸಾಂ ಸೇರಿ ಇಡೀ ಈಶಾನ್ಯ ಪ್ರದೇಶದಾದ್ಯಂತ ಕೈಗಾರಿಕೆ, ಹೂಡಿಕೆ ಮತ್ತು ಪ್ರವಾಸೋದ್ಯಮಕ್ಕೆ ವೇಗ ನೀಡುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ಯೋಜನೆ ಮತ್ತು ಅಸ್ಸಾಂನ ಅಪರಿಮಿತ ಸಾಮರ್ಥ್ಯದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುವಂತೆ ಅವರು ಉದ್ಯಮ ಪಾಲುದಾರರಿಗೆ ಕರೆ ನೀಡಿದರು. ಅಸ್ಸಾಂನ ನೈಸರ್ಗಿಕ ಸಂಪನ್ಮೂಲಗಳು ಮತ್ತು ಆಯಕಟ್ಟಿನ ಸ್ಥಳವು ಅದನ್ನು ಹೂಡಿಕೆಗೆ ಆದ್ಯತೆಯ ತಾಣವನ್ನಾಗಿ ಮಾಡಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. ಅಸ್ಸಾಂ ಚಹಾವನ್ನು ಅಸ್ಸಾಂನ ಸಾಮರ್ಥ್ಯದ ಉದಾಹರಣೆಯಾಗಿ ಉಲ್ಲೇಖಿಸಿದ ಅವರು, ಅಸ್ಸಾಂ ಚಹಾವು ಕಳೆದ 200 ವರ್ಷಗಳಲ್ಲಿ ಜಾಗತಿಕ ಬ್ರಾಂಡ್ ಆಗಿ ಮಾರ್ಪಟ್ಟಿದ್ದು, ಇದು ಇತರ ವಲಯಗಳಲ್ಲಿಯೂ ಪ್ರಗತಿಗೆ ಪ್ರೇರಣೆ ನೀಡುತ್ತದೆ ಎಂದರು.  

ಜಾಗತಿಕ ಆರ್ಥಿಕತೆಯಲ್ಲಿ ಆಗುತ್ತಿರುವ ಗಮನಾರ್ಹ ಬದಲಾವಣೆಗಳು, ಜಗತ್ತಿನಾದ್ಯಂತ ಸ್ಥಿತಿಸ್ಥಾಪಕತ್ವ ಪೂರೈಕೆ ಸರಣಿಗೆ ಬೇಡಿಕೆ ಹೆಚ್ಚುತ್ತಿರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿ  ”ಭಾರತವು ತನ್ನ ಉತ್ಪಾದನಾ ವಲಯವನ್ನು ಮುನ್ನಡೆಸಲು ಮಿಷನ್-ಮೋಡ್ ಪ್ರಯತ್ನಗಳನ್ನು ಆರಂಭಿಸಿದೆ’’ ಎಂದು ಹೇಳಿದರು. ಮೇಕ್ ಇನ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಔಷಧಗಳು, ಎಲೆಕ್ಟ್ರಾನಿಕ್ಸ್ ಮತ್ತು ಆಟೋಮೊಬೈಲ್‌ಗಳಂತಹ ವಲಯಗಳಲ್ಲಿ ಕಡಿಮೆ ವೆಚ್ಚದ ಉತ್ಪಾದನೆಯನ್ನು ಉತ್ತೇಜಿಸುವತ್ತ ಗಮನಹರಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು. ಭಾರತದ ಉದ್ಯಮವು ದೇಶೀಯ ಬೇಡಿಕೆಗಳನ್ನು ಪೂರೈಸುವುದಲ್ಲದೆ, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಉತ್ಪಾದನಾ ಶ್ರೇಷ್ಠತೆಗೆ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿದೆ ಎಂದು ಅವರು ಹೇಳಿದರು. ಈ ಉತ್ಪಾದನಾ ಕ್ರಾಂತಿಯಲ್ಲಿ ಅಸ್ಸಾಂ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಪ್ರಧಾನಿ ಉಲ್ಲೇಖಿಸಿದರು.

ಜಾಗತಿಕ ವ್ಯಾಪಾರದಲ್ಲಿ ಅಸ್ಸಾಂ ಸದಾ ತನ್ನ ಪಾಲನ್ನು ಹೊಂದಿದೆ ಎಂದು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ ಇಂದು, ಭಾರತದ ಕಡಲಾಚೆಯ ನೈಸರ್ಗಿಕ ಅನಿಲ ಉತ್ಪಾದನೆಯ ಶೇಕಡ 50ಕ್ಕೂ ಅಧಿಕ ಅಸ್ಸಾಂನಿಂದ ಬರುತ್ತದೆ ಮತ್ತು ಇತ್ತೀಚಿನ ವರ್ಷಗಳಲ್ಲಿ ಅಸ್ಸಾಂನ ಸಂಸ್ಕರಣಾಗಾರಗಳ ಸಾಮರ್ಥ್ಯದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ಹೇಳಿದರು. ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್‌ಗಳು ಮತ್ತು ಹಸಿರು ಇಂಧನದಂತಹ ಕ್ಷೇತ್ರಗಳಲ್ಲಿ ಅಸ್ಸಾಂ ವೇಗವಾಗಿ ಹೊರಹೊಮ್ಮುತ್ತಿದೆ ಎಂದು ಅವರು ಪ್ರಸ್ತಾಪಿಸಿದರು. ಸರ್ಕಾರಿ ನೀತಿಗಳಿಂದಾಗಿ ಅಸ್ಸಾಂ ಹೈಟೆಕ್ ಕೈಗಾರಿಕೆಗಳು ಮತ್ತು ನವೋದ್ಯಮಗಳ ತಾಣವಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು.

ಇತ್ತೀಚಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ನಾಮ್ರೂಪ್ -4 ಸ್ಥಾವರಕ್ಕೆ ಅನುಮೋದನೆ ನೀಡಿರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಿ, ಈ ಯೂರಿಯಾ ಉತ್ಪಾದನಾ ಘಟಕವು ಭವಿಷ್ಯದಲ್ಲಿ ಇಡೀ ಈಶಾನ್ಯ ಮತ್ತು ದೇಶದ ಬೇಡಿಕೆಯನ್ನು ಪೂರೈಸುತ್ತದೆ ಎಂದು ಹೇಳಿದರು. “ಅಸ್ಸಾಂ ಪೂರ್ವ ಭಾರತದಲ್ಲಿ ಪ್ರಮುಖ ಉತ್ಪಾದನಾ ಕೇಂದ್ರವಾಗುವ ದಿನಗಳು ದೂರವಿಲ್ಲ” ಎಂದು ಅವರು ಹೇಳಿದರು. ಈ ಗುರಿಯನ್ನು ಸಾಧಿಸುವಲ್ಲಿ ಕೇಂದ್ರ ಸರ್ಕಾರವು ಅಸ್ಸಾಂ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದರು.

21ನೇ ಶತಮಾನದ ಜಗತ್ತಿನ ಪ್ರಗತಿಯು ಡಿಜಿಟಲ್ ಕ್ರಾಂತಿ, ನಾವೀನ್ಯತೆ ಮತ್ತು ತಾಂತ್ರಿಕ ಪ್ರಗತಿಯ ಮೇಲೆ ಅವಲಂಬಿತವಾಗಿದೆ ಎಂದು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ “ನಾವು ಉತ್ತಮವಾಗಿ ಸಿದ್ಧರಾದಷ್ಟೂ, ನಾವು ಜಾಗತಿಕವಾಗಿ ಬಲಶಾಲಿಯಾಗುತ್ತೇವೆ” ಎಂದು ಹೇಳಿದರು. ಸರ್ಕಾರವು 21ನೇ ಶತಮಾನದ ನೀತಿಗಳು ಮತ್ತು ಕಾರ್ಯತಂತ್ರಗಳೊಂದಿಗೆ ಮುಂದುವರಿಯುತ್ತಿದೆ ಎಂದು ಅವರು ಹೇಳಿದರು. ಕಳೆದ ದಶಕದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಉತ್ಪಾದನೆಯಲ್ಲಿ ಭಾರತದ ಗಮನಾರ್ಹ ಪ್ರಗತಿಯನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿ, ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಈ ಯಶೋಗಾಥೆಯನ್ನು ಪುನರಾವರ್ತಿಸುವ ಬಯಕೆಯನ್ನು ವ್ಯಕ್ತಪಡಿಸಿದರು. ಅಸ್ಸಾಂ ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಗೆ ಪ್ರಮುಖ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಪ್ರಧಾನಿ ಹೆಮ್ಮೆಯಿಂದ ಹೇಳಿದರು ಮತ್ತು ಈಶಾನ್ಯದಲ್ಲಿ ತಾಂತ್ರಿಕ ಬೆಳವಣಿಗೆಯನ್ನು ಉತ್ತೇಜಿಸುವ ಅಸ್ಸಾಂನ ಜಾಗಿರೋಡ್‌ನಲ್ಲಿ ಟಾಟಾ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಪರೀಕ್ಷಾ ಸೌಲಭ್ಯ ಇತ್ತೀಚೆಗೆ ಉದ್ಘಾಟನೆ ಮಾಡಿದ್ದನ್ನು ಉಲ್ಲೇಖಿಸಿದರು. ಸೆಮಿಕಂಡಕ್ಟರ್ ವಲಯದಲ್ಲಿ ನಾವೀನ್ಯತೆಗಾಗಿ ಐಐಟಿಯೊಂದಿಗಿನ ಸಹಯೋಗ ಮತ್ತು ದೇಶದಲ್ಲಿ ಸೆಮಿಕಂಡಕ್ಟರ್ ಸಂಶೋಧನಾ ಕೇಂದ್ರದ ಮೇಲೆ ನಡೆಯುತ್ತಿರುವ ಕೆಲಸವನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಈ ದಶಕದ ಅಂತ್ಯದ ವೇಳೆಗೆ, ಎಲೆಕ್ಟ್ರಾನಿಕ್ ವಲಯದ ಮೌಲ್ಯವು $500 ಬಿಲಿಯನ್ ಡಾಲರ್‌ ತಲುಪುತ್ತದೆ ಎಂದು ಪ್ರಧಾನಿ ಅಂದಾಜು ಮಾಡಿದರು. “ಭಾರತದ ವೇಗ ಮತ್ತು ಪ್ರಮಾಣದೊಂದಿಗೆ ದೇಶವು ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುತ್ತದೆ, ಲಕ್ಷಾಂತರ ಜನರಿಗೆ ಉದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ಅಸ್ಸಾಂನ ಆರ್ಥಿಕತೆಗೆ ಪ್ರಯೋಜನವನ್ನು ನೀಡುತ್ತದೆ” ಎಂದು ಅವರು ವಿಶ್ವಾಸದಿಂದ ನುಡಿದರು.

“ಭಾರತವು ಕಳೆದ ದಶಕದಲ್ಲಿ ತನ್ನ ಪರಿಸರ ಜವಾಬ್ದಾರಿಗಳನ್ನು ಅರ್ಥಮಾಡಿಕೊಂಡು ನೀತಿ ನಿರ್ಧಾರಗಳನ್ನು ಕೈಗೊಂಡಿದೆ ಮತ್ತು ಜಗತ್ತು ಭಾರತದ ನವೀಕರಿಸಬಹುದಾದ ಇಂಧನ ಮಿಷನ್ ಅನ್ನು ಮಾದರಿ ಪದ್ದತಿಯೆಂದು ಪರಿಗಣಿಸುತ್ತದೆ” ಎಂದು ಪ್ರಧಾನಿ ಹೇಳಿದರು. ಕಳೆದ ಹತ್ತು ವರ್ಷಗಳಲ್ಲಿ ಭಾರತವು ಸೌರ, ಪವನ ಮತ್ತು ಸುಸ್ಥಿರ ಇಂಧನ ಸಂಪನ್ಮೂಲಗಳಲ್ಲಿ ಗಮನಾರ್ಹ ಹೂಡಿಕೆಗಳನ್ನು ಮಾಡಿದೆ ಎಂದು ಅವರು ಒತ್ತಿ ಹೇಳಿದರು. ಇದು ಪರಿಸರ ಬದ್ಧತೆಗಳನ್ನು ಪೂರೈಸಿದ್ದಲ್ಲದೆ, ದೇಶದ ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯವನ್ನು ಹಲವು ಪಟ್ಟು ವಿಸ್ತರಿಸಿದೆ ಎಂದು ಅವರು ಹೇಳಿದರು. 2030ರ ವೇಳೆಗೆ ದೇಶವು 500 ಗಿಗ್ಯಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸೇರ್ಪಡೆ ಮಾಡುವ ಗುರಿಯನ್ನು ಹೊಂದಿದೆ ಎಂದು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು. “2030ರ ವೇಳೆಗೆ 5 ಮಿಲಿಯನ್ ಮೆಟ್ರಿಕ್ ಟನ್  ವಾರ್ಷಿಕ ಹಸಿರು ಹೈಡ್ರೋಜನ್ ಉತ್ಪಾದನೆಯನ್ನು ಸಾಧಿಸುವ ಧ್ಯೇಯದೊಂದಿಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ” ಎಂದು ಅವರು ಹೇಳಿದರು. ದೇಶದಲ್ಲಿ ಬೆಳೆಯುತ್ತಿರುವ ಅನಿಲ ಮೂಲಸೌಕರ್ಯವು ಬೇಡಿಕೆಯನ್ನು ಹೆಚ್ಚಿಸಲು ಕಾರಣವಾಗಿದೆ ಮತ್ತು ಇಡೀ ಅನಿಲ ಆಧಾರಿತ ಆರ್ಥಿಕ ವಲಯವು ವೇಗವಾಗಿ ವಿಸ್ತರಿಸುತ್ತಿದೆ ಎಂದು ಅವರು, ಈ ಪಯಣದಲ್ಲಿ ಅಸ್ಸಾಂ ಗಮನಾರ್ಹ ಪ್ರಯೋಜನವನ್ನು ಹೊಂದಿದೆ ಎಂದು ಹೇಳಿದರು. ಪಿಎಲ್ ಐ ಯೋಜನೆಗಳು ಮತ್ತು ಹಸಿರು ಉಪಕ್ರಮಗಳಿಗಾಗಿ ನೀತಿಗಳು ಸೇರಿದಂತೆ ಕೈಗಾರಿಕೆಗಳಿಗೆ ಸರ್ಕಾರವು ಹಲವು ಮಾರ್ಗಗಳನ್ನು ಸೃಷ್ಟಿಸಿದೆ ಎಂದು ಅವರು ಒತ್ತಿ ಹೇಳಿದರು. ನವೀಕರಿಸಬಹುದಾದ ಇಂಧನ ವಲಯದಲ್ಲಿ ಅಸ್ಸಾಂ ನಾಯಕ ರಾಜ್ಯವಾಗಿ ಹೊರಹೊಮ್ಮಬೇಕೆಂಬ ಬಯಕೆಯನ್ನು ಅವರು ವ್ಯಕ್ತಪಡಿಸಿದರು ಮತ್ತು ಅಸ್ಸಾಂನ ಸಾಮರ್ಥ್ಯವನ್ನು ಗರಿಷ್ಠಗೊಳಿಸುವಂತೆ ಉದ್ಯಮ ನಾಯಕರಿಗೆ ಕರೆ ನೀಡಿದರು.

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವಲ್ಲಿ ಪೂರ್ವ ಭಾರತವು ಮಹತ್ವದ ಪಾತ್ರ ವಹಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು. “ಇಂದು,ಈಶಾನ್ಯ ಮತ್ತು ಪೂರ್ವ ಭಾರತವು ಮೂಲಸೌಕರ್ಯ, ಸಾಗಾಣೆ, ಕೃಷಿ, ಪ್ರವಾಸೋದ್ಯಮ ಮತ್ತು ಕೈಗಾರಿಕೆಗಳಲ್ಲಿ ವೇಗವಾಗಿ ಮುನ್ನಡೆಯುತ್ತಿದೆ” ಎಂದು ಹೇಳಿದರು. ಭಾರತದ ಅಭಿವೃದ್ಧಿ ಪಯಣವನ್ನು ಮುನ್ನಡೆಸುವ ಈ ಪ್ರದೇಶವು ಜಗತ್ತು ನೋಡುವ ದಿನಗಳು ದೂರವಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಅಸ್ಸಾಂ ಜೊತೆಗಿನ ಈ ಪಯಣಣದಲ್ಲಿ ಎಲ್ಲರೂ ಪಾಲುದಾರರು ಮತ್ತು ಸಹವರ್ತಿಗಳಾಗಬೇಕು ಎಂದು  ಅವರು ಆಹ್ವಾನ ನೀಡಿದರು ಮತ್ತು ಜಾಗತಿಕ ದಕ್ಷಿಣದಾದ್ಯಂತ ಭಾರತದ ಸಾಮರ್ಥ್ಯಗಳನ್ನು ಹೊಸ ಎತ್ತರಕ್ಕೆ ಏರಿಸುವ ರಾಜ್ಯವನ್ನಾಗಿ ಮಾಡಲು ಸಾಮೂಹಿಕ ಪ್ರಯತ್ನಗಳಿಗೆ ಕರೆ ನೀಡುವ ಮೂಲಕ ಪ್ರಧಾನಿ ಅವರು, ಹೂಡಿಕೆದಾರರು ಮತ್ತು ಕೈಗಾರಿಕಾ ನಾಯಕರ ಕೊಡುಗೆಗಳನ್ನು ಸಂಪೂರ್ಣವಾಗಿ ಬೆಂಬಲಿಸುವ ಮೂಲಕ ಅವರ ವಿಶ್ವಾಸವನ್ನು ವೃದ್ಧಿಸಿದರು.

ಅಸ್ಸಾಂ ರಾಜ್ಯಪಾಲ ಶ್ರೀ ಲಕ್ಷ್ಮಣ್ ಪ್ರಸಾದ್ ಆಚಾರ್ಯ, ಅಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಸಚಿವರಾದ ಡಾ. ಎಸ್. ಜೈಶಂಕರ್‌,  ಶ್ರೀ ಸರ್ಬಾನಂದ ಸೋನೋವಾಲ್, ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ, ತ್ರಿಪುರ ಮುಖ್ಯಮಂತ್ರಿ ಡಾ. ಮಾಣಿಕ್ ಸಹಾ, ಕೇಂದ್ರ ರಾಜ್ಯ ಸಚಿವ ಶ್ರೀ ಪಾಬಿತ್ರ ಮಾರ್ಗರಿಟಾ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಗುವಾಹಟಿಯಲ್ಲಿ ಫೆಬ್ರವರಿ 25 ರಿಂದ 26 ರವರೆಗೆ ಅಡ್ವಾಂಟೇಜ್ ಅಸ್ಸಾಂ 2.0 ಹೂಡಿಕೆ ಮತ್ತು ಮೂಲಸೌಕರ್ಯ ಶೃಂಗಸಭೆ 2025 ನಡೆಯಲಿದೆ. ಇದು ಉದ್ಘಾಟನಾ ಸಮಾರಂಭದಲ್ಲಿ ಏಳು ಸಚಿವರ ಗೋಷ್ಠಿಗಳು ಮತ್ತು 14 ವಿಷಯಾಧಾರಿತ ಗೋಷ್ಠಿಗಳನ್ನು ಒಳಗೊಂಡಿದೆ. ಇದು ರಾಜ್ಯದ ಆರ್ಥಿಕ ಚಿತ್ರಣವನ್ನು ವಿವರಿಸುವ ಸಮಗ್ರ ಪ್ರದರ್ಶನವನ್ನು ಸಹ ಒಳಗೊಂಡಿದೆ. ಅದರ ಕೈಗಾರಿಕಾ ಬೆಳವಣಿಗೆ, ಜಾಗತಿಕ ವ್ಯಾಪಾರ ಪಾಲುದಾರಿಕೆಗಳು, ಕೈಗಾರಿಕೆಗಳ ಬೂಮಿಂಗ್  ಮತ್ತು 240ಕ್ಕೂ ಅಧಿಕ ಪ್ರದರ್ಶಕರನ್ನು ಒಳಗೊಂಡ ಸಕ್ರಿಯ ಎಂಎಸ್‌ ಎಂಇ ವಲಯವನ್ನು ಕೇಂದ್ರೀಕರಿಸುತ್ತದೆ.

ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳು, ಜಾಗತಿಕ ನಾಯಕರು ಮತ್ತು ಹೂಡಿಕೆದಾರರು, ನೀತಿ ನಿರೂಪಕರು, ಉದ್ಯಮ ತಜ್ಞರು, ನವೋದ್ಯಮಗಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಇತರರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

 

 

*****