ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ ‘ಮನದ ಮಾತಿಗೆ’ ನಿಮೆಲ್ಲರಿಗೂ ಸ್ವಾಗತ. ಇತ್ತೀಚಿನ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿದೆ ಮತ್ತು ಎಲ್ಲೆಡೆ ಕ್ರಿಕೆಟ್ ವಾತಾವರಣವಿದೆ. ಕ್ರಿಕೆಟ್ ನಲ್ಲಿ ಶತಕದ ರೋಮಾಂಚನ ಏನೆಂದು ನಮ್ಮೆಲ್ಲರಿಗೂ ಚೆನ್ನಾಗಿ ತಿಳಿದಿದೆ, ಆದರೆ ಇಂದು ನಾನು ನಿಮ್ಮೊಂದಿಗೆ ಕ್ರಿಕೆಟ್ ಬಗ್ಗೆ ಮಾತನಾಡುವುದಿಲ್ಲ, ಆದರೆ ಭಾರತ ಬಾಹ್ಯಾಕಾಶದಲ್ಲಿ ಮಾಡಿದ ಅದ್ಭುತ ಶತಕದ ಬಗ್ಗೆ ಮಾತನಾಡುತ್ತೇನೆ. ಕಳೆದ ತಿಂಗಳು, ದೇಶವು ಇಸ್ರೋ 100 ನೇ ರಾಕೆಟ್ ಉಡಾವಣೆಗೆ ಸಾಕ್ಷಿಯಾಯಿತು. ಇದು ಕೇವಲ ಒಂದು ಸಂಖ್ಯೆಯಲ್ಲ, ಬಾಹ್ಯಾಕಾಶ ವಿಜ್ಞಾನದಲ್ಲಿ ಹೊಸ ಎತ್ತರವನ್ನು ಮುಟ್ಟುವ ನಮ್ಮ ಸಂಕಲ್ಪವನ್ನೂ ಪ್ರತಿಬಿಂಬಿಸುತ್ತದೆ. ನಮ್ಮ ಬಾಹ್ಯಾಕಾಶ ಪ್ರಯಾಣವು ತುಂಬಾ ಸಾಮಾನ್ಯ ರೀತಿಯಲ್ಲಿ ಆರಂಭವಾಯಿತು. ಪ್ರತಿ ಹಂತದಲ್ಲೂ ಸವಾಲುಗಳಿದ್ದವು ಆದರೆ ನಮ್ಮ ವಿಜ್ಞಾನಿಗಳು ಪ್ರತಿಯೊಂದರಲ್ಲೂ ವಿಜಯಶಾಲಿಗಳಾಗಿ ಹೊರಹೊಮ್ಮುತ್ತಾ ಮುಂದುವರಿಯುತ್ತಿದ್ದರು. ಕಾಲಕ್ರಮೇಣ ಬಾಹ್ಯಾಕಾಶ ಹಾರಾಟದಲ್ಲಿ ನಮ್ಮ ಯಶಸ್ಸಿನ ಪಟ್ಟಿ ಸಾಕಷ್ಟು ಉದ್ದವಾಗುತ್ತಾ ಹೋಯಿತು. ಅದು ಉಡಾವಣಾ ವಾಹನಗಳ ತಯಾರಿಕೆಯಾಗಿರಲಿ, ಚಂದ್ರಯಾನ, ಮಂಗಳಯಾನ, ಆದಿತ್ಯ ಎಲ್ -1 ರ ಯಶಸ್ಸು ಆಗಿರಲಿ ಅಥವಾ ಒಂದೇ ರಾಕೆಟ್ ಮೂಲಕ 104 ಉಪಗ್ರಹಗಳನ್ನು ಒಂದೇ ಬಾರಿಗೆ ಬಾಹ್ಯಾಕಾಶಕ್ಕೆ ಕಳುಹಿಸುವ ಅಭೂತಪೂರ್ವ ಧ್ಯೇಯವಾಗಲಿ – ಇಸ್ರೋ ಯಶಸ್ಸಿನ ವ್ಯಾಪ್ತಿ ಸಾಕಷ್ಟು ವಿಸ್ತಾರವಾಗಿದೆ. ಕಳೆದ 10 ವರ್ಷಗಳಲ್ಲೇ ಸುಮಾರು 460 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ಇದರಲ್ಲಿ ಇತರ ದೇಶಗಳ ಹಲವಾರು ಉಪಗ್ರಹಗಳೂ ಸೇರಿವೆ. ಇತ್ತೀಚಿನ ವರ್ಷಗಳ ಒಂದು ದೊಡ್ಡ ವಿಷಯವೆಂದರೆ ಬಾಹ್ಯಾಕಾಶ ವಿಜ್ಞಾನಿಗಳ ನಮ್ಮ ತಂಡದಲ್ಲಿ ನಾರೀ ಶಕ್ತಿಯ ಪಾಲ್ಗೊಳ್ಳುವಿಕೆ ನಿರಂತರವಾಗಿ ಅಧಿಕವಾಗುತ್ತಿದೆ. ಇಂದು ಬಾಹ್ಯಾಕಾಶ ವಲಯ ನಮ್ಮ ಯುವಪೀಳಿಗೆಯ ಬಹಳ ಅಚ್ಚುಮೆಚ್ಚಿನ ಕ್ಷೇತ್ರವಾಗುತ್ತಿರುವುದನ್ನು ನೋಡಿ ಕೂಡಾ ಬಹಳ ಸಂತೋಷವಾಗುತ್ತದೆ. ಈ ಕ್ಷೇತ್ರದಲ್ಲಿ ನೂರಾರು ಸಂಖ್ಯೆಯಲ್ಲಿ ನವೋದ್ಯಮಗಳು ಮತ್ತು ಖಾಸಗಿ ವಲಯದ ಬಾಹ್ಯಾಕಾಶ ಕಂಪೆನಿಗಳು ಪಾಲ್ಗೊಳ್ಳುತ್ತವೆ ಎಂಬುದನ್ನು ಕಳೆದ ಕೆಲವು ವರ್ಷಗಳ ಹಿಂದೆ ಯಾರು ತಾನೇ ಯೋಚಿಸಿದ್ದರು. ಜೀವನದಲ್ಲಿ ಅದ್ಭುತ ಮತ್ತು ರೋಮಾಂಚಕಾರಿಯಾಗಿರುವ ಏನನ್ನಾದರೂ ಮಾಡಲು ಬಯಸುವ ನಮ್ಮ ಯುವಜನತೆಗೆ ಬಾಹ್ಯಾಕಾಶ ಕ್ಷೇತ್ರ ಅತ್ಯುತ್ತಮ ಆಯ್ಕೆಯಾಗುತ್ತಿದೆ.
ಸ್ನೇಹಿತರೇ, ಮುಂದಿನ ಕೆಲವೇ ದಿನಗಳಲ್ಲಿ ನಾವು ‘ರಾಷ್ಟ್ರೀಯ ವಿಜ್ಞಾನ ದಿನ‘ ಆಚರಿಸಲಿದ್ದೇವೆ. ನಮ್ಮ ಮಕ್ಕಳು ಮತ್ತು ಯುವಕರು ವಿಜ್ಞಾನದಲ್ಲಿ ಆಸಕ್ತಿ ಮತ್ತು ಅಭಿರುಚಿ ಹೊಂದುವುದು ಬಹಳ ಮುಖ್ಯ. ಇದಕ್ಕಾಗಿ ನನ್ನಲ್ಲಿ ಒಂದು ಉಪಾಯವಿದೆ. ಇದನ್ನು ನೀವು ‘ವಿಜ್ಞಾನಿಯಾಗಿ ಒಂದು ದಿನ’ ಎಂದು ಕರೆಯಬಹುದು, ಅಂದರೆ, ನೀವು ಒಂದು ದಿನವನ್ನು ವಿಜ್ಞಾನಿಯಾಗಿ, ವೈಜ್ಞಾನಿಕವಾಗಿ ಕಳೆದು ನೋಡಿ. ನೀವು ನಿಮ್ಮ ಅನುಕೂಲಕ್ಕೆ ಅನುಗುಣವಾಗಿ, ನಿಮ್ಮ ಇಚ್ಛೆಗೆ ಅನುಗುಣವಾಗಿ, ಯಾವುದೇ ದಿನವನ್ನು ಆಯ್ಕೆ ಮಾಡಿಕೊಳ್ಳಬಹುದು. ಆ ದಿನದಂದು ನೀವು ಯಾವುದೇ ಸಂಶೋಧನಾ ಪ್ರಯೋಗಾಲಯ, ತಾರಾಲಯ ಅಥವಾ ಬಾಹ್ಯಾಕಾಶ ಕೇಂದ್ರದಂತಹ ಪ್ರದೇಶಗಳಿಗೆ ಖಂಡಿತವಾಗಿಯೂ ಹೋಗಿ. ಇದರಿಂದ ವಿಜ್ಞಾನದ ಬಗೆಗಿನ ನಿಮ್ಮ ಜಿಜ್ಞಾಸೆ ಮತ್ತಷ್ಟು ಹೆಚ್ಚಾಗುತ್ತದೆ. ಬಾಹ್ಯಾಕಾಶ ಮತ್ತು ವಿಜ್ಞಾನದಂತಹ, ಭಾರತ ಕ್ಷಿಪ್ರ ಗತಿಯಲ್ಲಿ ತನ್ನ ಗುರುತನ್ನು ಸಾಧಿಸುತ್ತಿರುವ ಮತ್ತೊಂದು ಕ್ಷೇತ್ರವೂ ಇದೆ- ಅದೇ ಎಐ ಅಂದರೆ ಕೃತಕ ಬುದ್ಧಿಮತ್ತೆ. ಇತ್ತೀಚೆಗಷ್ಟೇ, ನಾನು ಎಐ ಸಮ್ಮೇಳನದಲ್ಲಿ ಭಾಗವಹಿಸಲು ಪ್ಯಾರಿಸ್ ಗೆ ತೆರಳಿದ್ದೆ. ಅಲ್ಲಿ ಈ ಕ್ಷೇತ್ರದಲ್ಲಿ ಭಾರತದ ಪ್ರಗತಿಯನ್ನು ಜಗತ್ತು ಬಹಳವಾಗಿ ಪ್ರಶಂಸಿಸಿತು. ನಮ್ಮ ದೇಶದಲ್ಲಿ ಇಂದು ಜನರು ಎಐ ಅನ್ನು ವಿವಿಧ ರೀತಿಯಲ್ಲಿ ಬಳಸುತ್ತಿರುವ ಉದಾಹರಣೆಗಳನ್ನು ನಾವು ನೋಡುತ್ತಿದ್ದೇವೆ. ಉದಾಹರಣೆಗೆ, ತೆಲಂಗಾಣದ ಅದಿಲಾಬಾದ್ ನ ಸರ್ಕಾರಿ ಶಾಲೆಯಲ್ಲಿ ತೋಡಸಮ್ ಕೈಲಾಶ್ ಜಿ ಎಂಬ ಶಿಕ್ಷಕರಿದ್ದಾರೆ. ಡಿಜಿಟಲ್ ಹಾಡುಗಳು ಮತ್ತು ಸಂಗೀತದಲ್ಲಿ ಅವರಿಗಿರುವ ಅಪಾರ ಆಸಕ್ತಿಯು ನಮ್ಮ ಅನೇಕ ಬುಡಕಟ್ಟು ಭಾಷೆಗಳನ್ನು ಉಳಿಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತಿದೆ. ಅವರು ಎಐ ಪರಿಕರಗಳ ಸಹಾಯದಿಂದ ಕೊಲಾಮಿ ಭಾಷೆಯಲ್ಲಿ ಹಾಡು ಸಂಯೋಜಿಸುವ ಮೂಲಕ ಅಚ್ಚರಿಯ ಕೆಲಸ ಮಾಡಿದ್ದಾರೆ. ಅವರು ಕೊಲಾಮಿ ಮಾತ್ರವಲ್ಲದೇ ಇತರ ಹಲವಾರು ಭಾಷೆಗಳಲ್ಲಿ ಹಾಡುಗಳನ್ನು ಸಂಯೋಜಿಸಲು ಎಐ ಬಳಸುತ್ತಿದ್ದಾರೆ. ನಮ್ಮ ಬುಡಕಟ್ಟು ಸೋದರ ಸೋದರಿಯರು ಸಾಮಾಜಿಕ ಮಾಧ್ಯಮದಲ್ಲಿ ಅವರ ಹಾಡುಗಳನ್ನು ಬಹಳ ಇಷ್ಟಪಡುತ್ತಿದ್ದಾರೆ. ಅದು ಬಾಹ್ಯಾಕಾಶ ಕ್ಷೇತ್ರವೇ ಆಗಲಿ ಅಥವಾ ಕೃತಕ ಬುದ್ಧಿಮತ್ತೆಯೇ ಆಗಿರಲಿ, ಹೆಚ್ಚುತ್ತಿರುವ ನಮ್ಮ ಯುವಪೀಳಿಗೆಯ ಪಾಲ್ಗೊಳ್ಳುವಿಕೆಯು ಹೊಸ ಕ್ರಾಂತಿಯನ್ನೇ ಹುಟ್ಟು ಹಾಕುತ್ತಿದೆ. ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಮತ್ತು ಪ್ರಯತ್ನಿಸುವಲ್ಲಿ ಭಾರತೀಯರು ಯಾರಿಗೂ ಕಡಿಮೆಯಿಲ್ಲ.
ನನ್ನ ಪ್ರೀತಿಯ ದೇಶಬಾಂಧವರೇ, ಮುಂದಿನ ತಿಂಗಳು ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಾಗಿದೆ. ಇದು ನಮ್ಮ ನಾರಿ ಶಕ್ತಿಗೆ ನಮಿಸುವ ಒಂದು ವಿಶೇಷ ಸಂದರ್ಭವಾಗಿದೆ. ದೇವೀ ಮಹಾತ್ಮೆಯಲ್ಲಿ ಈ ರೀತಿ ಹೇಳಲಾಗಿದೆ –
ವಿದ್ಯಾಯಾಃ ಸಮಸ್ತಾಃ ತವ ದೇವೀ ಭೇದಾಃ
ಸ್ತ್ರೀಯಃ ಸಮಸ್ತಾಃ ಸಕಲಾ ಜಗತ್ಸು
ಎಂದರೆ ಎಲ್ಲಾ ವಿದ್ಯೆಗಳೂ, ದೇವಿಯ ವಿವಿಧ ಸ್ವರೂಪಗಳ ಅಭಿವ್ಯಕ್ತಿಯಾಗಿದೆ ಮತ್ತು ಸಮಸ್ತ ಜಗತ್ತಿನ ನಾರಿ ಶಕ್ತಿಯಲ್ಲಿಯೂ ಕೂಡಾ ಅದರದ್ದೇ ಪ್ರತಿರೂಪವಿದೆ. ನಮ್ಮ ಸಂಸ್ಕೃತಿಯಲ್ಲಿ, ಹೆಣ್ಣು ಮಕ್ಕಳಿಗೆ ಗೌರವ ನೀಡುವುದು ಅತ್ಯಂತ ಮುಖ್ಯವಾಗಿದೆ. ನಮ್ಮ ಸ್ವಾತಂತ್ರ್ಯ ಹೋರಾಟ ಮತ್ತು ಸಂವಿಧಾನ ರಚನೆಯಲ್ಲಿ ದೇಶದ ಮಾತೃ ಶಕ್ತಿಯು ಅತಿ ದೊಡ್ಡ ಪಾತ್ರ ವಹಿಸಿದೆ. ಸಂವಿಧಾನ ಸಭೆಯಲ್ಲಿ ನಮ್ಮ ರಾಷ್ಟ್ರಧ್ವಜವನ್ನು ಪ್ರಸ್ತುತ ಪಡಿಸುವಾಗ ಹಂಸಾ ಮೆಹ್ತಾ ಅವರು ಹೇಳಿದ್ದನ್ನು ನಾನು ನಿಮ್ಮೆಲ್ಲರೊಂದಿಗೆ ಅವರದೇ ಧ್ವನಿಯಲ್ಲಿ ಹಂಚಿಕೊಳ್ಳುತ್ತಿದ್ದೇನೆ.
# ಆಡಿಯೋ
ಈ ಉನ್ನತ ಕಟ್ಟಡದ ಮೇಲೆ ಹಾರುವ ಈ ಮೊದಲ ಧ್ವಜವು ಭಾರತದ ಮಹಿಳೆಯರ ಕೊಡುಗೆಯಾಗಿರಬೇಕು. ನಾವು ಕೇಸರಿ ಬಣ್ಣವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ನಾವು ಹೋರಾಡಿದ್ದೇವೆ, ನರಳಿದ್ದೇವೆ ಮತ್ತು ತ್ಯಾಗ ಮಾಡಿದ್ದೇವೆ. ಇಂದು ನಾವು ನಮ್ಮ ಗುರಿಯನ್ನು ಸಾಧಿಸಿದ್ದೇವೆ. ನಮ್ಮ ಸ್ವಾತಂತ್ರ್ಯದ ಈ ಸಂಕೇತವನ್ನು ಪ್ರಸ್ತುತಪಡಿಸುವ ಮೂಲಕ, ನಾವು ಮತ್ತೊಮ್ಮೆ ರಾಷ್ಟ್ರಕ್ಕೆ ನಮ್ಮ ಸೇವೆಗಳನ್ನು ನೀಡುತ್ತೇವೆ. ಮಹಾನ್ ರಾಷ್ಟ್ರಕ್ಕಾಗಿ ಕೆಲಸ ಮಾಡಲು, ಶ್ರೇಷ್ಠ ಭಾರತವನ್ನು ನಿರ್ಮಿಸಲು ಮತ್ತು ರಾಷ್ಟ್ರಗಳ ನಡುವೆ ಒಂದು ಹೆಮ್ಮೆಯ ರಾಷ್ಟವನ್ನು ನಿರ್ಮಿಸುತ್ತೇವೆಂದು ನಾವು ಪ್ರತಿಜ್ಞೆ ಮಾಡುತ್ತೇವೆ. ನಾವು ಸಾಧಿಸಿದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಉದ್ದೇಶಕ್ಕಾಗಿ ಕೆಲಸ ಮಾಡಲು ನಾವು ಪ್ರತಿಜ್ಞೆ ಮಾಡುತ್ತೇವೆ.
ಸ್ನೇಹಿತರೆ, ಹಂಸಾ ಮೆಹತಾ ಅವರು ನಮ್ಮ ರಾಷ್ಟ್ರ ಧ್ವಜದ ನಿರ್ಮಾಣದಿಂದ ಹಿಡಿದು ಅದಕ್ಕಾಗಿ ಬಲಿದಾನಗೈದ ದೇಶಾದ್ಯಂತದ ಮಹಿಳೆಯರ ಕೊಡುಗೆಯನ್ನು ಎತ್ತಿ ತೋರಿಸಿದರು. ನಮ್ಮ ತ್ರಿವರ್ಣ ಧ್ವಜದಲ್ಲಿರುವ ಕೇಸರಿ ಬಣ್ಣದಲ್ಲೂ ಈ ಭಾವನೆ ಪ್ರತಿ ಫಲಿಸುತ್ತದೆ ಎನ್ನುವುದು ಅವರ ಅನಿಸಿಕೆಯಾಗಿತ್ತು. ನಮ್ಮ ನಾರಿ ಶಕ್ತಿಯು ಭಾರತವನ್ನು ಸಶಕ್ತ ಮತ್ತು ಸಮೃದ್ಧವಾಗಿಸಲು ತನ್ನ ಅಮೂಲ್ಯ ಕೊಡುಗೆ ನೀಡುತ್ತದೆ ಎನ್ನುವ ವಿಶ್ವಾಸವನ್ನು ಅವರು ವ್ಯಕ್ತ ಪಡಿಸಿದ್ದರು. ಇಂದು ಅವರ ಮಾತುಗಳು ನಿಜವೆಂದು ಸಾಬೀತಾಗುತ್ತಿವೆ. ನೀವು ಯಾವುದೇ ಕ್ಷೇತ್ರದತ್ತ ನೋಡಿದರೂ, ಮಹಿಳೆಯರ ಕೊಡುಗೆ ಎಷ್ಟು ವಿಸ್ತಾರವಾಗಿದೆ ಎನ್ನುವುದು ಗೋಚರವಾಗುತ್ತದೆ. ಸ್ನೇಹಿತರೇ ಈ ಬಾರಿ ಮಹಿಳಾ ದಿನದಂದು ನಮ್ಮ ಮಹಿಳಾ ಶಕ್ತಿಗೆ ಸಮರ್ಪಣೆ ಮಾಡುವಂತಹ ಉಪಕ್ರಮವೊಂದನ್ನು ಕೈಗೊಳ್ಳಲಿದ್ದೇನೆ. ಈ ವಿಶೇಷ ಸಂದರ್ಭದಲ್ಲಿ, ನಾನು ನನ್ನ ಸಾಮಾಜಿಕ ಮಾಧ್ಯಮ ಖಾತೆಗಳಾದ ಎಕ್ಸ್, ಇನ್ ಸ್ಟಾಗ್ರಾಮ್ ಅನ್ನು ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿದಂತಹ, ಆವಿಷ್ಕಾರ ಮಾಡಿರುವಂತಹ, ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವಂತಹ ದೇಶದ ಕೆಲವು ಸ್ಪೂರ್ತಿದಾಯಕ ಮಹಿಳೆಯರಿಗೆ ಒಂದು ದಿನದ ಮಟ್ಟಿಗೆ ಹಸ್ತಾಂತರಿಸಲಿದ್ದೇನೆ. ಮಾರ್ಚ್ 8 ರಂದು ಈ ಮಹಿಳೆಯರು, ತಮ್ಮ ಕಾರ್ಯ ಮತ್ತು ಅನುಭವಗಳನ್ನು ದೇಶವಾಸಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ. ಪ್ಲಾಟ್ ಫಾಂ ನನ್ನದಾಗಿರಬಹುದು, ಆದರೆ ಅಲ್ಲಿ ಈ ಮಹಿಳೆಯರ ಅನುಭವ, ಅವರು ಎದುರಿಸಿದ್ದ ಸವಾಲುಗಳು ಮತ್ತು ಅವರ ಯಶಸ್ಸಿನ ಕುರಿತ ಮಾತುಕತೆಗಳಿರುತ್ತವೆ. ಈ ಅವಕಾಶ ನಿಮ್ಮದೂ ಆಗಬೇಕೆಂದು ನೀವು ಬಯಸಿದಲ್ಲಿ, NamoApp ನಲ್ಲಿ ಸಿದ್ಧಪಡಿಸಿರುವ ವಿಶೇಷ ವೇದಿಕೆಯ ಮೂಲಕ, ಈ ಪ್ರಯೋಗದ ಭಾಗವಾಗಿ ಮತ್ತು ನನ್ನ X ಮತ್ತು Instagram ಖಾತೆಯಿಂದ ಇಡೀ ವಿಶ್ವಕ್ಕೆ ನಿಮ್ಮ ಮಾತುಗಳನ್ನು ತಲುಪಿಸಿ, ಹಾಗಾದರೆ ಬನ್ನಿ ಈ ಮಹಿಳಾ ದಿನದಂದು, ನಾವೆಲ್ಲರೂ ಸೇರಿ ಅದಮ್ಯ ಮಹಿಳಾ ಶಕ್ತಿಯನ್ನು ಆಚರಿಸೋಣ, ಗೌರವಿಸೋಣ. ನಮಸ್ಕರಿಸೋಣ.
ನನ್ನ ಪ್ರೀತಿಯ ದೇಶವಾಸಿಗಳೇ, ಉತ್ತರಾಖಂಡದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ರೋಮಾಂಚನವನ್ನು ನಿಮ್ಮಲ್ಲಿ ಬಹಳಷ್ಟು ಜನರು ಆನಂದಿಸಿಯೇ ಇದ್ದೀರಿ. ಈ ಕ್ರೀಡಾಕೂಟದಲ್ಲಿ ದೇಶಾದ್ಯಂತದ 11 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡಿದರು. ಈ ಕ್ರೀಡಾಕೂಟವು ದೇವಭೂಮಿಯ ಹೊಸ ರೂಪವನ್ನು ಪ್ರಸ್ತುತಪಡಿಸಿತು. ಉತ್ತರಾಖಂಡ್ ಈಗ ದೇಶದಲ್ಲಿ ಬಲಿಷ್ಠ ಕ್ರೀಡಾ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಉತ್ತರಾಖಂಡದ ಆಟಗಾರರು ಕೂಡ ಅದ್ಭುತ ಪ್ರದರ್ಶನ ನೀಡಿದರು. ಈ ಬಾರಿ ಉತ್ತರಾಖಂಡ್ 7 ನೇ ಸ್ಥಾನ ಪಡೆದಿದ್ದು, ಇದೇ ಕ್ರೀಡೆಯ ಶಕ್ತಿಯಾಗಿದೆ, ಇದು ವ್ಯಕ್ತಿಗಳು ಮತ್ತು ಸಮುದಾಯಗಳನ್ನು ಮಾತ್ರವಲ್ಲದೆ ಇಡೀ ರಾಜ್ಯವನ್ನೇ ಪರಿವರ್ತಿಸುತ್ತದೆ. ಇದು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುವುದರ ಜೊತೆಗೆ, ಉತ್ಕೃಷ್ಟ ಸಂಸ್ಕೃತಿಗೆ ಉತ್ತೇಜನ ನೀಡುತ್ತದೆ.
ಸ್ನೇಹಿತರೇ, ಇಂದು ಈ ಕ್ರೀಡೆಗಳ ಕೆಲವು ಸ್ಮರಣೀಯ ಪ್ರದರ್ಶನಗಳ ಬಗ್ಗೆ ದೇಶಾದ್ಯಂತ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಪಂದ್ಯಗಳಲ್ಲಿ ಅತ್ಯಂತ ಅಧಿಕ ಚಿನ್ನದ ಪದಕಗಳನ್ನು ಗೆದ್ದ ಸರ್ವೀಸಸ್ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಹೇಳುತ್ತಿದ್ದೇನೆ. ರಾಷ್ಟ್ರೀಯ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಕ್ರೀಡಾಪಟುವನ್ನೂ ನಾನು ಪ್ರಶಂಸಿಸುತ್ತಿದ್ದೇನೆ. ನಮ್ಮಲ್ಲಿನ ಬಹಳಷ್ಟು ಕ್ರೀಡಾಪಟುಗಳು ಖೇಲೋ ಇಂಡಿಯಾದ ಕೊಡುಗೆಯಾಗಿದ್ದಾರೆ. ಹಿಮಾಚಲ ಪ್ರದೇಶದ ಸಾವನ್ ಬರವಾಲ್, ಮಹಾರಾಷ್ಟ್ರದ ಕಿರಣ್ ಮಾತ್ರೇ, ತೇಜಸ್ ಶಿರಸೇ ಅಥವಾ ಆಂಧ್ರ ಪ್ರದೇಶದ ಜ್ಯೋತಿ ಯಾರಾಜಿ, ಇವರೆಲ್ಲರೂ ದೇಶಕ್ಕೆ ಹೊಸ ಭರವಸೆ ನೀಡಿದ್ದಾರೆ. ಉತ್ತರ ಪ್ರದೇಶದ ಜಾವಲಿನ್ ಎಸೆತಗಾರ ಸಚಿನ್ ಯಾದವ್ ಮತ್ತು ಹರಿಯಾಣದ ಹೈ ಜಂಪರ್ ಪೂಜಾ ಮತ್ತು ಕರ್ನಾಟಕದ ಈಜುಗಾರ್ತಿ ಧಿನಿಧಿ ದೇಸಿಂಧು ಅವರಂತೂ ದೇಶವಾಸಿಗಳ ಹೃದಯ ಗೆದ್ದಿದ್ದಾರೆ. ಇವರು ಮೂರು ಹೊಸ ರಾಷ್ಟ್ರೀಯ ದಾಖಲೆಯನ್ನೇ ಬರೆದು ಅಚ್ಚರಿ ಮೂಡಿಸಿದ್ದಾರೆ. ಈ ಬಾರಿಯ ರಾಷ್ಟ್ರೀಯ ಕ್ರೀಡೆಗಳಲ್ಲಿ ಹದಿ ಹರೆಯದ ಚಾಂಪಿಯನ್ ಗಳ ಸಂಖ್ಯೆಯಂತೂ ಆಶ್ಚರ್ಯ ಮೂಡಿಸುವಂತಿದೆ. 15 ವರ್ಷದ ಶೂಟರ್ ಗೆವಿನ ಆಂಟನೀ, ಉತ್ತರ ಪ್ರದೇಶದ ಹ್ಯಾಮರ್ ಎಸೆತದ ಆಟಗಾರ್ತಿ 16 ವರ್ಷ ವಯಸ್ಸಿನ ಅನುಷ್ಕಾ ಯಾದವ್, ಮಧ್ಯ ಪ್ರದೇಶದ 19 ವರ್ಷದ ಪೋಲ್ ವಾಲ್ಟರ್ ದೇವ್ ಕುಮಾರ್ ಮೀಣಾ ಅವರುಗಳು ಭಾರತದ ಕ್ರೀಡಾ ಭವಿಷ್ಯವು ಅತ್ಯಂತ ಪ್ರತಿಭಾವಂತ ಯುವ ಪೀಳಿಗೆಯ ಕೈಯಲ್ಲಿದೆ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಉತ್ತರಾಖಂಡದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟವು ಸೋಲನ್ನು ಎಂದಿಗೂ ಒಪ್ಪಿಕೊಳ್ಳದವರು ಖಂಡಿತವಾಗಿಯೂ ಗೆದ್ದೇ ಗೆಲ್ಲುತ್ತಾರೆ ಎಂಬುದನ್ನು ತೋರಿಸಿಕೊಟ್ಟಿದೆ. ಆರಾಮವಾಗಿ ಎಲ್ಲಾ ಸೌಕರ್ಯಗಳೊಂದಿಗೆ ಯಾರೂ ಚಾಂಪಿಯನ್ ಆಗುವುದಿಲ್ಲ. ನಮ್ಮ ಯುವ ಕ್ರೀಡಾಪಟುಗಳ ದೃಢನಿಶ್ಚಯ ಮತ್ತು ಶಿಸ್ತಿನಿಂದ ಭಾರತ ಇಂದು ಜಾಗತಿಕ ಕ್ರೀಡಾ ಶಕ್ತಿ ಕೇಂದ್ರವಾಗುವ ನಿಟ್ಟಿನಲ್ಲಿ ಕ್ಷಿಪ್ರಗತಿಯಿಂದ ಸಾಗುತ್ತಿದೆ ಎಂಬುದು ನನಗೆ ಸಂತೋಷ ತರುವ ವಿಷಯವಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಡೆಹರಾಡೂನ್ ನಲ್ಲಿ ರಾಷ್ಟ್ರೀಯ ಕ್ರೀಡಾಕೂಟದ ಉದ್ಘಾಟನೆಯ ಸಂದರ್ಭದಲ್ಲಿ ನಾನು ಒಂದು ಮುಖ್ಯವಾದ ವಿಷಯ ಕುರಿತು ಮಾತನಾಡಿದೆ, ಮತ್ತು ಅದು ದೇಶದಲ್ಲಿ ಒಂದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಆ ವಿಷಯವೇ ಬೊಜ್ಜು ಅಥವಾ ಸ್ಥೂಲಕಾಯತೆ. ಒಂದು ಆರೋಗ್ಯಪೂರ್ಣ ಮತ್ತು ಸದೃಢ ದೇಶದ ನಿರ್ಮಾಣಕ್ಕಾಗಿ ನಾವು ಸ್ಥೂಲಕಾಯತೆಯ ಸಮಸ್ಯೆಯನ್ನು ಎದುರಿಸಬೇಕು. ಒಂದು ಅಧ್ಯಯನದ ಪ್ರಕಾರ ಇಂದು ಪ್ರತಿ ಎಂಟು ಮಂದಿಯಲ್ಲಿ ಓರ್ವ ವ್ಯಕ್ತಿ ಸ್ಥೂಲಕಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ ವರ್ಷಗಳಲ್ಲಿ ಸ್ಥೂಲಕಾಯದ ಸಮಸ್ಯೆ ಎರಡುಪಟ್ಟು ಹೆಚ್ಚಾಗಿದೆ, ಆದರೆ, ಇದಕ್ಕಿಂತ ಹೆಚ್ಚು ಚಿಂತಿಸಬೇಕಾದ ವಿಷಯವೆಂದರೆ ಈ ಸ್ಥೂಲಕಾಯ ಅಥವಾ ಬೊಜ್ಜಿನ ಸಮಸ್ಯೆಯು ನಾಲ್ಕುಪಟ್ಟು ಅಧಿಕವಾಗಿದೆ. 2022 ರಲ್ಲಿ ವಿಶ್ವಾದ್ಯಂತ ಸುಮಾರು 250 ಕೋಟಿ ಜನರು ಅಧಿಕ ತೂಕ ಹೊಂದಿದವರಾಗಿದ್ದರು ಅಂದರೆ ಅಗತ್ಯಕ್ಕಿಂತ ಅತಿ ಹೆಚ್ಚು ದೇಹದ ತೂಕ ಹೊಂದಿದ್ದರು ಎಂದು ವಿಶ್ವ ಆರೋಗ್ಯ ಸಂಘಟನೆ- ಡಬ್ಲ್ಯುಎಚ್ ಒ ದ ದತ್ತಾಂಶ ಹೇಳುತ್ತದೆ. ಈ ಸಂಖ್ಯೆಯು ನಿಜಕ್ಕೂ ಬಹಳ ಗಂಭೀರ ವಿಷಯವಾಗಿದೆ ಮತ್ತು ಈ ರೀತಿ ಏಕಾಯಿತೆಂದು ನಮ್ಮೆಲ್ಲರನ್ನೂ ಯೋಚಿಸುವಂತೆ ಮಾಡುತ್ತದೆ.ಅಧಿಕ ತೂಕ ಅಥವಾ ಸ್ಥೂಲಕಾಯ ಅನೇಕ ಸಮಸ್ಯೆಗಳಿಗೆ, ತೊಂದರೆಗಳಿಗೆ ಕಾರಣವಾಗುತ್ತದೆ. ನಾವೆಲ್ಲರೂ ಒಟ್ಟಾಗಿ, ಸಣ್ಣ ಸಣ್ಣ ಪ್ರಯತ್ನಗಳಿಂದ ಈ ಸವಾಲನ್ನು ಎದುರಿಸಬಹುದು, ಇದಕ್ಕಾಗಿ ನಾನು ಸೂಚಿಸಿದ ಒಂದು ವಿಧಾನವೆಂದರೆ “ಅಡಿಗೆಗೆ ಎಣ್ಣೆಯ ಬಳಕೆಯನ್ನು ಶೇಕಡಾ 10 ರಷ್ಟು ಕಡಿಮೆ ಮಾಡುವುದು” ಪ್ರತಿ ತಿಂಗಳೂ ಅಡಿಗೆಗಾಗಿ ಬಳಸುವ ಎಣ್ಣೆಯಲ್ಲಿ ಶೇಕಡಾ 10 ರಷ್ಟು ಕಡಿಮೆ ಮಾಡುತ್ತೇವೆಂದು ನೀವೆಲ್ಲರೂ ನಿರ್ಧಾರ ಮಾಡಿ. ಅಡಿಗೆಗಾಗಿ ಖರೀದಿಸುವ ಎಣ್ಣೆಯನ್ನು ಖರೀದಿಸುವ ಸಮಯದಲ್ಲಿಯೇ ಶೇಕಡಾ ಹತ್ತರಷ್ಟು ಕಡಿಮೆ ಖರೀದಿಸುತ್ತೇವೆಂದು ನಿರ್ಧರಿಸಬಹುದು. ಸ್ಥೂಲಕಾಯ ಅಥವಾ ಬೊಜ್ಜಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಲಿದೆ. ನಾನು ಇಂದು ಮನ್ ಕಿ ಬಾತ್ ನಲ್ಲಿ ಈ ವಿಷಯ ಕುರಿತಂತೆ ಕೆಲವು ವಿಶೇಷ ಸಂದೇಶಗಳನ್ನೂ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದು ಬಯಸುತ್ತೇನೆ. ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ಡಾ ಅವರಿಂದಲೇ ಆರಂಭಿಸೋಣ. ಇವರು ಸ್ವತಃ ಸ್ಥೂಲಕಾಯವನ್ನು ಯಶಸ್ವಿಯಾಗಿ ನಿಯಂತ್ರಿಸಿ ತೋರಿಸಿದ್ದಾರೆ:
# ಆಡಿಯೋ
ಎಲ್ಲರಿಗೂ ನಮಸ್ಕಾರ, ನಾನು ನೀರಜ್ ಚೋಪ್ರಾ, ಇಂದು ನಾನು ತಮಗೆ ಹೇಳಬಯಸುವುದೇನಂದರೆ, ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಬಾರಿ ಸ್ಥೂಲಕಾಯ ಅಂದರೆ ಒಬೆಸಿಟಿ ಬಗ್ಗೆ ‘ಮನ್ ಕಿ ಬಾತ್’ ನಲ್ಲಿ ಚರ್ಚಿಸಿದ್ದಾರೆ, ಇದು ನಮ್ಮ ದೇಶಕ್ಕೆ ಬಹಳ ಮುಖ್ಯವಾದ ವಿಷಯವಾಗಿದೆ, ಮತ್ತು ನಾನು ಇದನ್ನು ನನಗೂ ಹೋಲಿಸಬಯಸುತ್ತೇನೆ, ಏಕೆಂದರೆ ನಾನು ಮೈದಾನಕ್ಕೆ ಹೋಗಲು ಪ್ರಾರಂಭಿಸಿದಾಗ ಆ ಸಮಯದಲ್ಲಿ ನಾನು ತುಂಬಾ ಸ್ಥೂಲಕಾಯನಾಗಿದ್ದೆ. ಯಾವಾಗ ನಾನು ತರಬೇತಿ ಪಡೆಯಲಾರಂಭಿಸಿದೆ ಮತ್ತು ಒಳ್ಳೆಯ ಆಹಾರ ಸೇವಿಸಲು ಪ್ರಾರಂಭಿಸಿದೆ, ಆರೋಗ್ಯದಲ್ಲಿ ಬಹಳ ಸುಧಾರಣೆ ಆಯಿತು ಮತ್ತು ನಾನು ವೃತ್ತಿಪರ ಅಥ್ಲೀಟ್ ಆದಾಗ, ಅದರಲ್ಲಿ ನನಗೆ ಸಾಕಷ್ಟು ಸಹಾಯ ಸಿಕ್ಕಿತು ಮತ್ತು ಪೋಷಕರು ಸಹ ಕೆಲವು ಹೊರಾಂಗಣ ಕ್ರೀಡೆಗಳನ್ನು ಆಡಬೇಕು ಅಥವಾ ತಮ್ಮ ಮಕ್ಕಳನ್ನು ಕರೆದುಕೊಂಡು ಉತ್ತಮ ಆರೋಗ್ಯಕರ ಜೀವನಶೈಲಿಯನ್ನು ರೂಪಿಸಿಕೊಳ್ಳಬೇಕು ಎಂದು ನಾನು ಹೇಳಲು ಬಯಸುತ್ತೇನೆ. ಚೆನ್ನಾಗಿ ಊಟ ಮಾಡಬೇಕು ಮತ್ತು ವ್ಯಾಯಾಮಕ್ಕಾಗಿ ದಿನಕ್ಕೆ ಒಂದು ಗಂಟೆ ಅಥವಾ ನಿಮ್ಮ ದೇಹಕ್ಕೆ ಎಷ್ಟು ಬೇಕೋ ಅಷ್ಟು ಸಮಯವನ್ನು ನೀಡಬೇಕು. ನಾನು ಇನ್ನೂ ಒಂದು ವಿಷಯ ಹೇಳ ಬಯಸುತ್ತೇನೆ, ಇತ್ತೀಚೆಗೆ ನಮ್ಮ ಪ್ರಧಾನಿಯವರು ಆಹಾರದಲ್ಲಿ ಬಳಸುವ ಎಣ್ಣೆಯನ್ನು ಶೇಕಡಾ 10 ರಷ್ಟು (10%) ಕಡಿಮೆಗೊಳಿಸಬೇಕು ಎಂದು ಹೇಳಿದ್ದರು, ಏಕೆಂದರೆ ನಾವು ಅನೇಕ ಬಾರಿ ಕರಿದ ಪದಾರ್ಥಗಳನ್ನು ತಿನ್ನುತ್ತೇವೆ, ಇದು ಸ್ಥೂಲಕಾಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆದ್ದರಿಂದ ಇಂತಹ ವಸ್ತುಗಳನ್ನು ಉಪಯೋಗಿಸದೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ನಾನು ಎಲ್ಲರಿಗೂ ಹೇಳಬಯಸುತ್ತೇನೆ. ನಾನು ತಮ್ಮಲ್ಲಿ ವಿನಂತಿಸಿಕೊಳ್ಳುವುದು ಇಷ್ಟೇ ಮತ್ತು ಒಟ್ಟಾಗಿ ನಾವು ನಮ್ಮ ದೇಶವನ್ನು ಕಟ್ಟೋಣ, ಧನ್ಯವಾದಗಳು.
ನೀರಜ್ ಅವರೇ, ತಮಗೆ ತುಂಬಾ ಧನ್ಯವಾದಗಳು. ಖ್ಯಾತ ಅಥ್ಲೀಟ್ ನಿಖತ್ ಜರೀನ್ ಅವರು ಕೂಡ ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ:
# ಆಡಿಯೋ
ಹಾಯ್, ನನ್ನ ಹೆಸರು ನಿಖತ್ ಜರೀನ್ ಮತ್ತು ನಾನು ಎರಡು ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಆಗಿದ್ದೇನೆ. ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ‘ಮನ್ ಕಿ ಬಾತ್’ ನಲ್ಲಿ ಸ್ಥೂಲಕಾಯದ ಬಗ್ಗೆ ಪ್ರಸ್ತಾಪಿಸಿದ್ದಾರೆ ಮತ್ತು ಇದು ರಾಷ್ಟ್ರೀಯ ಕಾಳಜಿ ಎಂದು ನಾನು ಭಾವಿಸುತ್ತೇನೆ. ನಾವು ನಮ್ಮ ಆರೋಗ್ಯದ ಬಗ್ಗೆ ಗಂಭೀರವಾಗಿರಬೇಕು, ಏಕೆಂದರೆ ಭಾರತದಲ್ಲಿ ಸ್ಥೂಲಕಾಯವು ಎಷ್ಟು ವೇಗವಾಗಿ ಹರಡುತ್ತಿದೆ ಎಂಬುದನ್ನರಿತು ನಾವು ಅದನ್ನು ನಿಲ್ಲಿಸಬೇಕು ಮತ್ತು ಸಾಧ್ಯವಾದಷ್ಟು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಲು ಪ್ರಯತ್ನಿಸಬೇಕು. ನಾನೊಬ್ಬ ಅಥ್ಲೀಟ್ ಆಗಿ ಆರೋಗ್ಯಕರ ಆಹಾರ ಕ್ರಮವನ್ನು ಅನುಸರಿಸಲು ಪ್ರಯತ್ನಿಸುತ್ತೇನೆ ಏಕೆಂದರೆ ನಾನು ತಪ್ಪಿಯೂ ಅನಾರೋಗ್ಯಕರ ಆಹಾರವನ್ನು ತೆಗೆದುಕೊಂಡರೆ ಅಥವಾ ಎಣ್ಣೆಯುಕ್ತ ಪದಾರ್ಥಗಳನ್ನು ಸೇವಿಸಿದರೆ ಅದು ನನ್ನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಾನು ರಿಂಗ್ನಲ್ಲಿ ಬೇಗನೆ ಸುಸ್ತಾಗುತ್ತೇನೆ ಅಲ್ಲದೆ, ನಾನು ಖಾದ್ಯತೈಲದಂತಹ ವಸ್ತುಗಳನ್ನು ಸಾಧ್ಯವಾದಷ್ಟು ಕಡಿಮೆ ಬಳಸಲು ಪ್ರಯತ್ನಿಸುತ್ತೇನೆ. ಅದರ ಬದಲಿಗೆ ಆರೋಗ್ಯಕರ ಆಹಾರ ಮತ್ತು ದೈನಂದಿನ ದೈಹಿಕ ಚಟುವಟಿಕೆಯನ್ನು ಮಾಡಲು ಪ್ರಯತ್ನಿಸುತ್ತೇನೆ. ಇದರಿಂದಾಗಿ ನಾನು ಯಾವಾಗಲೂ ಫಿಟ್ ಆಗಿರುತ್ತೇನೆ. ನಮ್ಮಂತಹ ಸಾಮಾನ್ಯ ಜನರು ದಿನಾಲು ನೌಕರಿ ಮುಂತಾದ ಕೆಲಸಕ್ಕೆ ಹೋಗುತ್ತೇವೆ. ನನ್ನ ಪ್ರಕಾರ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಗಂಭೀರವಾಗಿರಬೇಕು ಮತ್ತು ಪ್ರತಿ ದಿನ ಯಾವುದಾದರೊಂದು ದೈಹಿಕ ಚಟುವಟಿಕೆಯನ್ನು ಮಾಡಬೇಕು ಎಂದು ನಾನು ಭಾವಿಸುತ್ತೇನೆ. ಇದರಿಂದ ನಾವು ಹೃದಯಾಘಾತ ಮತ್ತು ಕ್ಯಾನ್ಸರ್ನಂತಹ ಕಾಯಿಲೆಗಳಿಂದ ದೂರವಿರಬಹುದು. ನಮ್ಮನ್ನು ನಾವು ಫಿಟ್ ಆಗಿ ಇರಿಸಿಕೊಳ್ಳಬೇಕು. ಏಕೆಂದರೆ ನಾವು ಫಿಟ್ ಆಗಿದ್ದರೆ ‘ಭಾರತವು ಫಿಟ್’ ಆಗಿರುತ್ತದೆ.
ನಿಖತ್ ಅವರು ನಿಜವಾಗಿಯೂ ಕೆಲವು ಉತ್ತಮ ಅಂಶಗಳನ್ನು ನೀಡಿದ್ದಾರೆ. ಈಗ ಡಾ.ದೇವಿ ಶೆಟ್ಟಿಯವರು ಏನು ಹೇಳುತ್ತಾರೆಂಬುದನ್ನು ಕೇಳೋಣ. ಅವರು ಬಹಳ ಗೌರವಾನ್ವಿತ ಹೆಸರಾಂತ ವೈದ್ಯರೆಂಬುದು ತಮಗೆ ತಿಳಿದಿದೆ. ಅವರು ನಿರಂತರವಾಗಿ ಈ ವಿಷಯದ ಮೇಲೆ ಕೆಲಸ ಮಾಡುತ್ತಿದ್ದಾರೆ:
# ಆಡಿಯೋ
ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಯವರಿಗೆ ಅವರ ಅತ್ಯಂತ ಜನಪ್ರಿಯವಾದ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಸ್ಥೂಲಕಾಯದ ಬಗ್ಗೆ ಜಾಗೃತಿ ಮೂಡಿಸಿದ್ದಕ್ಕಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಸ್ಥೂಲಕಾಯತೆ ಇಂದು ಸೌಂದರ್ಯವರ್ಧಕ ಸಮಸ್ಯೆಯಲ್ಲ; ಇದೊಂದು ತುಂಬಾ ಗಂಭೀರವಾದ ವೈದ್ಯಕೀಯ ಸಮಸ್ಯೆಯಾಗಿದೆ. ಇಂದು ಭಾರತದಲ್ಲಿ ಹೆಚ್ಚಿನ ಯುವಕರು ಬೊಜ್ಜು ಹೊಂದಿದ್ದಾರೆ. ಇಂದು ಸ್ಥೂಲಕಾಯಕ್ಕೆ ಮುಖ್ಯ ಕಾರಣವೆಂದರೆ ಕಳಪೆ ಗುಣಮಟ್ಟದ ಆಹಾರ ಸೇವನೆ, ಅದರಲ್ಲೂ ವಿಶೇಷವಾಗಿ ಅಕ್ಕಿ, ಚಪಾತಿ ಮತ್ತು ಸಕ್ಕರೆಯಂತಹ ಕಾರ್ಬೋಹೈಡ್ರೇಟ್ಗಳ ಹೆಚ್ಚಿನ ಸೇವನೆ ಮತ್ತು ಎಣ್ಣೆಯ ಹೆಚ್ಚಿನ ಬಳಕೆ. ಸ್ಥೂಲಕಾಯವು ಹೃದ್ರೋಗ, ಅಧಿಕ ರಕ್ತದೊತ್ತಡ, ಕೊಬ್ಬಿನ ಯಕೃತ್ತು ಮತ್ತು ಇತರ ಅನೇಕ ಸಮಸ್ಯೆಗಳಂತಹ ಪ್ರಮುಖ ವೈದ್ಯಕೀಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಎಲ್ಲಾ ಯುವಕರಿಗೆ ನನ್ನ ಸಲಹೆಯೆಂದರೆ; ವ್ಯಾಯಾಮವನ್ನು ಪ್ರಾರಂಭಿಸಿ ನಿಮ್ಮ ಆಹಾರಕ್ರಮವನ್ನು ನಿಯಂತ್ರಿಸಿ ಮತ್ತು ಇದರ ಬಗ್ಗೆ ತುಂಬಾ ಸಕ್ರಿಯರಾಗಿದ್ದು ನಿಮ್ಮ ತೂಕವನ್ನು ಗಮನಿಸುತ್ತಿರಿ. ಮತ್ತೊಮ್ಮೆ ನಾನು ನಿಮ್ಮೆಲ್ಲರಿಗೂ ತುಂಬಾ ಸಂತೋಷದ ಆರೋಗ್ಯಕರ ಭವಿಷ್ಯವನ್ನು ಬಯಸುತ್ತೇನೆ, ಶುಭವಾಗಲಿ ಮತ್ತು ದೇವರು ಆಶೀರ್ವದಿಸಲಿ.
ಸ್ನೇಹಿತರೇ, ಆಹಾರದಲ್ಲಿ ಕಡಿಮೆ ಎಣ್ಣೆಯನ್ನು ಬಳಸುವುದು ಮತ್ತು ಸ್ಥೂಲಕಾಯತೆಯನ್ನು ನಿಭಾಯಿಸುವುದು ವೈಯಕ್ತಿಕ ಆಯ್ಕೆ ಮಾತ್ರವಲ್ಲ, ಕುಟುಂಬದ ಬಗ್ಗೆ ನಮ್ಮ ಜವಾಬ್ದಾರಿಯೂ ಆಗಿದೆ. ಆಹಾರದಲ್ಲಿ ಎಣ್ಣೆಯನ್ನು ಅತಿಯಾಗಿ ಬಳಸುವುದರಿಂದ ಹೃದ್ರೋಗ, ಮಧುಮೇಹ ಮತ್ತು ಹೈಪರ್ ಟೆನ್ಶನ್ನಂತಹ ಅನೇಕ ಕಾಯಿಲೆಗಳು ಉಂಟಾಗಬಹುದು. ನಮ್ಮ ಆಹಾರ ಪದ್ಧತಿಯಲ್ಲಿ ಸಣ್ಣ-ಪುಟ್ಟ ಬದಲಾವಣೆಗಳನ್ನು ಮಾಡುವುದರಿಂದ, ನಾವು ನಮ್ಮ ಭವಿಷ್ಯವನ್ನು ಸಬಲ, ಸದೃಢವಾಗಿ ಮತ್ತು ರೋಗಮುಕ್ತವಾಗಿ ಮಾಡಬಹುದು. ಆದ್ದರಿಂದ, ನಾವು ಯಾವುದೇ ವಿಳಂಬವಿಲ್ಲದೆ ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಹೆಚ್ಚಿಸಬೇಕು ಮತ್ತು ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಒಟ್ಟಾಗಿ ನಾವು ಇದನ್ನು ಕ್ರೀಡೆಗಳ ರೂಪದಲ್ಲಿ ಬಹಳ ಪರಿಣಾಮಕಾರಿಯಾಗಿ ಮಾಡಬಹುದು. ಉದಾಹರಣೆಗೆ, ಇಂದು ‘ಮನ್ ಕಿ ಬಾತ್’ ಸಂಚಿಕೆಯ ನಂತರ, ನಾನು 10 ಜನರನ್ನು ಒತ್ತಾಯಿಸುತ್ತೇನೆ ಮತ್ತು ಪ್ರಶ್ನಿಸುತ್ತೇನೆ, ಅವರು ತಮ್ಮ ಆಹಾರದಲ್ಲಿನ ಎಣ್ಣೆಯನ್ನು 10% ರಷ್ಟು ಕಡಿಮೆ ಮಾಡಲು ಸಾಧ್ಯವೇ? ಮತ್ತು ಅವರಿಂದ ಕೂಡ ಭವಿಷ್ಯದಲ್ಲಿ 10 ಹೊಸ ಜನ ಹೊಸಬರಿಗೆ ಇದೇ ರೀತಿಯ ಸವಾಲನ್ನು ನೀಡಬೇಕೆಂದು ನಾನು ವಿನಂತಿಸುತ್ತೇನೆ. ಸ್ಥೂಲಕಾಯತೆಯ ವಿರುದ್ಧ ಹೋರಾಡಲು ಇದು ಬಹಳಷ್ಟು ಸಹಾಯ ಮಾಡುತ್ತದೆ ಎಂದು ನಾನು ನಂಬಿದ್ದೇನೆ.
ಸ್ನೇಹಿತರೇ, ಏಷ್ಯಾಟಿಕ್ ಸಿಂಹ, ಹಂಗುಲ್, ಪಿಗ್ಮಿ ಹಾಗ್ ಗಳು ಮತ್ತು ಸಿಂಹ-ಬಾಲದ ಮಕಾಕ್ಗಳು ಇವುಗಳಲ್ಲಿ ಏನು ಸಮಾನತೆಯಿದೆ ಎಂಬುದು ನಿಮಗೆ ತಿಳಿದಿದೆಯೇ? ಇವೆಲ್ಲವೂ ಜಗತ್ತಿನ ಬೇರೆಲ್ಲೂ ಸಿಗುವುದಿಲ್ಲ, ನಮ್ಮ ದೇಶದಲ್ಲಿ ಮಾತ್ರ ಸಿಗುತ್ತವೆ ಎಂಬುದು ಉತ್ತರ. ವಾಸ್ತವವಾಗಿ, ನಾವು ಸಸ್ಯ ಮತ್ತು ಪ್ರಾಣಿಗಳ ಅತ್ಯಂತ ರೋಮಾಂಚಕ ಪರಿಸರ ವ್ಯವಸ್ಥೆಯನ್ನು ಹೊಂದಿದ್ದೇವೆ ಮತ್ತು ಈ ವನ್ಯಜೀವಿಗಳು ನಮ್ಮ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಅಂತರ್ಗತವಾಗಿವೆ. ಅನೇಕ ಜೀವಿಗಳನ್ನು ನಮ್ಮ ದೇವಾನುದೇವತೆಗಳ ವಾಹನಗಳಾಗಿಯೂ ನೋಡಲಾಗುತ್ತದೆ. ಮಧ್ಯ ಭಾರತದಲ್ಲಿನ ಅನೇಕ ಬುಡಕಟ್ಟು ಜನಗಳು ಬಾಘೇಶ್ವರನನ್ನು ಪೂಜಿಸುತ್ತಾರೆ. ಮಹಾರಾಷ್ಟ್ರದಲ್ಲಿ ವಾಘೋಬಾ ನನ್ನು ಪೂಜಿಸುವ ಸಂಪ್ರದಾಯವಿದೆ. ಅಯ್ಯಪ್ಪ ದೇವರಿಗೂ ಹುಲಿಗೂ ಬಹಳ ಆಳವಾದ ಸಂಬಂಧವಿದೆ. ಸುಂದರಬನ್ನಲ್ಲಿ ಬೊನ್-ಬೀಬಿಯನ್ನು ಪೂಜಿಸಲಾಗುತ್ತದೆ, ಅವಳ ಸವಾರಿ ಹುಲಿಯಾಗಿದೆ. ನಮ್ಮ ಕರ್ನಾಟಕದಲ್ಲಿ ಹುಲಿವೇಶ, ತಮಿಳುನಾಡಿನ ಪುಲಿ ಮತ್ತು ಕೇರಳದ ಪುಲಿಕಲಿ ಯಂತಹ ಅನೇಕ ಸಾಂಸ್ಕೃತಿಕ ನೃತ್ಯಗಳಿವೆ, ಅವು ಪ್ರಕೃತಿ ಮತ್ತು ವನ್ಯಜೀವಿಗಳೊಂದಿಗೆ ಸಂಬಂಧ ಹೊಂದಿವೆ. ನಮ್ಮ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ವನ್ಯಜೀವಿ ರಕ್ಷಣೆಗೆ ಸಂಬಂಧಿಸಿದ ಕೆಲಸದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಕಾರಣ ನಾನು ಅವರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಕರ್ನಾಟಕದ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಹುಲಿಯನ್ನು ಪೂಜಿಸುವ ಸೋಲಿಗ ಬುಡಕಟ್ಟು ಜನಾಂಗದವರಿಗೆ ಇದರ ಶ್ರೇಯಸ್ಸು ಸಲ್ಲುತ್ತದೆ. ಇವುಗಳಿಂದಾಗಿ ಈ ಪ್ರದೇಶದಲ್ಲಿ ಮನುಷ್ಯ-ಪ್ರಾಣಿ ಸಂಘರ್ಷ ಇಲ್ಲವೆಂದೇ ಹೇಳಬಹುದು. ಗುಜರಾತ್ನಲ್ಲಿಯೂ ಜನರು ಗಿರ್ ನಲ್ಲಿ ಏಷ್ಯಾಟಿಕ್ ಸಿಂಹಗಳ ರಕ್ಷಣೆ ಮತ್ತು ಸಂರಕ್ಷಣೆಗೆ ಗಣನೀಯ ಕೊಡುಗೆ ನೀಡಿದ್ದಾರೆ. ಅವರು ಪ್ರಕೃತಿಯೊಂದಿಗೆ ಸಹಬಾಳ್ವೆ ಎಂದರೆ ಏನೆಂದು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಸ್ನೇಹಿತರೇ, ಈ ಪ್ರಯತ್ನಗಳಿಂದಾಗಿ, ಹುಲಿ, ಚಿರತೆ, ಏಷ್ಯಾಟಿಕ್ ಸಿಂಹಗಳು, ಘೇಂಡಾಮೃಗ ಮತ್ತು ಬಾರಾಶಿಂಗ್ ಗಳ ಸಂಖ್ಯೆಯು ಕಳೆದ ಹಲವಾರು ವರ್ಷಗಳಿಂದ ವೇಗವಾಗಿ ಹೆಚ್ಚುತ್ತಿದೆ ಮತ್ತು ಕಾಡು ಪ್ರಾಣಿಗಳ ಸಂಖ್ಯೆಯು ಹೆಚ್ಚಾಗಿದೆ. ಭಾರತದಲ್ಲಿ ಜೀವವೈವಿಧ್ಯತೆಯು ಎಷ್ಟು ಸುಂದರವಾಗಿದೆ ಎಂಬುದನ್ನು ಸಹ ಗಮನಿಸಬೇಕು. ಏಷ್ಯಾಟಿಕ್ ಸಿಂಹಗಳು ದೇಶದ ಪಶ್ಚಿಮ ಭಾಗದಲ್ಲಿ ಕಂಡುಬರುತ್ತವೆ, ಆದರೆ ಹುಲಿಯ ಶ್ರೇಣಿಯು ಪೂರ್ವ, ಮಧ್ಯ ಮತ್ತು ದಕ್ಷಿಣ ಭಾರತದಲ್ಲಿದ್ದರೆ, ರೈನೋ ಈಶಾನ್ಯದಲ್ಲಿ ಕಂಡುಬರುತ್ತವೆ. ಭಾರತದ ಪ್ರತಿಯೊಂದು ಭಾಗವೂ ಕೇವಲ ಪ್ರಕೃತಿಗೆ ಸಂವೇದನಶೀಲವಾಗಿರದೆ, ವನ್ಯಜೀವಿ ರಕ್ಷಣೆಗೂ ಬದ್ಧವಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳೊಂದಿಗೆ ಅನೇಕ ತಲೆಮಾರುಗಳ ಸಂಬಂಧ ಹೊಂದಿರುವ ಅನುರಾಧಾ ರಾವ್ ಅವರ ಬಗ್ಗೆ ನನಗೆ ಹೇಳಲಾಗಿದೆ. ಅನುರಾಧಾ ಜೀ ಚಿಕ್ಕ ವಯಸ್ಸಿನಲ್ಲೇ ಪ್ರಾಣಿ ಕಲ್ಯಾಣಕ್ಕೆ ತನ್ನನ್ನು ಅರ್ಪಿಸಿಕೊಂಡಿದ್ದರು. ಮೂರು ದಶಕಗಳ ಕಾಲ ಅವರು ಜಿಂಕೆ ಮತ್ತು ನವಿಲುಗಳ ರಕ್ಷಣೆಯನ್ನು ತಮ್ಮ ಧ್ಯೇಯವನ್ನಾಗಿ ಮಾಡಿಕೊಂಡರು. ಇಲ್ಲಿನ ಜನರು ಅವರನ್ನು ‘ಜಿಂಕೆ ಮಹಿಳೆ’ ಎಂದು ಕರೆಯುತ್ತಾರೆ. ಮುಂದಿನ ತಿಂಗಳ ಆರಂಭದಲ್ಲಿ ನಾವು ವಿಶ್ವ ವನ್ಯಜೀವಿ ದಿನವನ್ನು ಆಚರಿಸುತ್ತೇವೆ. ವನ್ಯಜೀವಿ ರಕ್ಷಣೆಗೆ ಸಂಬಂಧಿಸಿದ ಜನರನ್ನು ಪ್ರೋತ್ಸಾಹಿಸಲು ನಾನು ನಿಮ್ಮನ್ನು ವಿನಂತಿಸುತ್ತೇನೆ. ಈ ಕ್ಷೇತ್ರದಲ್ಲಿ ಈಗ ಅನೇಕ ಸ್ಟಾರ್ಟ್ಅಪ್ಗಳು ಹುಟ್ಟಿಕೊಂಡಿರುವುದು ನನಗೆ ತುಂಬಾ ತೃಪ್ತಿ ತಂದಿದೆ.
ಸ್ನೇಹಿತರೇ, ಇದು ಬೋರ್ಡ್ ಎಕ್ಸಾಮ್ ಸೀಸನ್. ನನ್ನ ಯುವ ಸ್ನೇಹಿತರಿಗೆ ಅಂದರೆ ಪರೀಕ್ಷಾ ಯೋಧರಿಗೆ ಅವರ ಪರೀಕ್ಷೆಗಳಿಗೆ ಶುಭ ಹಾರೈಸುತ್ತೇನೆ. ಯಾವುದೇ ಒತ್ತಡವಿಲ್ಲದೆ ಪೂರ್ಣ ಧನಾತ್ಮಕ ಮನೋಭಾವದಿಂದ ನಿಮ್ಮ ಪೇಪರ್ಗಳನ್ನು ಬರೆಯಿರಿ. ಪ್ರತಿ ವರ್ಷ ‘ಪರೀಕ್ಷಾ ಪೇ ಚರ್ಚಾ’ ದಲ್ಲಿ ನಾವು ಪರೀಕ್ಷೆಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ನಮ್ಮ ಪರೀಕ್ಷಾ ಯೋಧರೊಂದಿಗೆ ಮಾತನಾಡುತ್ತೇವೆ. ಈಗ ಈ ಕಾರ್ಯಕ್ರಮ ಸಾಂಸ್ಥಿಕ ರೂಪ ಪಡೆಯುತ್ತಿರುವುದು ನನಗೆ ಖುಷಿ ತಂದಿದೆ. ಅದಕ್ಕೆ ಹೊಸ ತಜ್ಞರನ್ನೂ ಸೇರಿಸಲಾಗುತ್ತಿದೆ. ಈ ವರ್ಷ ನಾವು ‘ಪರೀಕ್ಷಾ ಪೇ ಚರ್ಚಾ’ ಅನ್ನು ಹೊಸ ರೂಪದಲ್ಲಿ ಚರ್ಚಿಸಲು ಪ್ರಯತ್ನಿಸಿದ್ದೇವೆ. ಪರಿಣಿತರ ಜೊತೆಗೆ ಎಂಟು ವಿಭಿನ್ನ ಸಂಚಿಕೆಗಳನ್ನೂ ಸೇರಿಸಲಾಯಿತು. ಆಹಾರ ಮತ್ತು ಪಾನೀಯದ ಜೊತೆಗೆ ಒಟ್ಟಾರೆ ಪರೀಕ್ಷೆಗಳಿಂದ ಆರೋಗ್ಯ ರಕ್ಷಣೆ ಮತ್ತು ಮಾನಸಿಕ ಆರೋಗ್ಯದವರೆಗಿನ ವಿಷಯಗಳನ್ನು ಸಹ ನಾವು ಚರ್ಚಿಸಿದ್ದೇವೆ. ಅಲ್ಲಿ ಕೊನೆಯದಾಗಿ ಕಳೆದ ವರ್ಷದ ಟಾಪರ್ಗಳು ತಮ್ಮ ಆಲೋಚನೆಗಳು ಮತ್ತು ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಂಡರು.
ಈ ಬಗ್ಗೆ ಅನೇಕ ಯುವಕರು, ಅವರ ಪೋಷಕರು ಮತ್ತು ಶಿಕ್ಷಕರು ನನಗೆ ಪತ್ರ ಬರೆದಿದ್ದಾರೆ. ಅವರು ಈ ಸ್ವರೂಪವನ್ನು ತುಂಬಾ ಇಷ್ಟಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ, ಏಕೆಂದರೆ ಪ್ರತಿಯೊಂದು ವಿಷಯವನ್ನು ಅದರಲ್ಲಿ ವಿವರವಾಗಿ ಚರ್ಚಿಸಲಾಗಿದೆ. ನಮ್ಮ ಯುವ ಸ್ನೇಹಿತರು ಸಹ ಇನ್ಸ್ಟಾಗ್ರಾಮ್ ನಲ್ಲಿ ಈ ಸಂಚಿಕೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಿದ್ದಾರೆ. ದೆಹಲಿಯ ಸುಂದರ್ ನರ್ಸರಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ನಿಮ್ಮಲ್ಲಿ ಹಲವರು ಇಷ್ಟಪಟ್ಟಿದ್ದಾರೆ. ಇದುವರೆಗೆ ‘ಪರೀಕ್ಷಾ ಪೇ ಚರ್ಚಾ’ದ ಈ ಸಂಚಿಕೆಗಳನ್ನು ನೋಡಲು ಸಾಧ್ಯವಾಗದ ನಮ್ಮ ಯುವ ಗೆಳೆಯರು ಇದನ್ನು ಅವಶ್ಯವಾಗಿ ನೋಡಿರಿ. ಈ ಎಲ್ಲಾ ಸಂಚಿಕೆಗಳನ್ನು ನಮೋ ಯ್ಯಾಪ್ ನಲ್ಲಿ ಇರಿಸಲಾಗಿದೆ. ಮತ್ತೊಮ್ಮೆ ನನ್ನ ಪರೀಕ್ಷಾ ಯೋಧರಿಗೆ ನನ್ನ ಸಂದೇಶವೆಂದರೆ “ಸಂತೋಷದಿಂದಿರಿ ಮತ್ತು ಒತ್ತಡದಿಂದ ಮುಕ್ತರಾಗಿರಿ”.
ನನ್ನ ಆತ್ಮೀಯ ಸ್ನೇಹಿತರೇ, ಈ ‘ಮನ್ ಕಿ ಬಾತ್’ ಅನ್ನು ಇಲ್ಲಿಗೆ ಮುಕ್ತಾಯಗೊಳಿಸುತ್ತಿದ್ದೇನೆ. ಮುಂದಿನ ತಿಂಗಳು ಮತ್ತೊಮ್ಮೆ ನಾವು ಹೊಸ ವಿಷಯಗಳೊಂದಿಗೆ ‘ಮನ್ ಕಿ ಬಾತ್’ ನಲ್ಲಿ ಚರ್ಚಿಸೋಣ. ನಿಮ್ಮ ಪತ್ರಗಳನ್ನು, ನಿಮ್ಮ ಸಂದೇಶಗಳನ್ನು ನೀವು ನನಗೆ ಕಳುಹಿಸುತ್ತಾ ಇರಿ. ಆರೋಗ್ಯವಾಗಿರಿ, ಸಂತೋಷವಾಗಿರಿ. ಅನಂತಾನಂತ ಧನ್ಯವಾದಗಳು. ನಮಸ್ಕಾರ .
*****
#MannKiBaat has begun. Tune in! https://t.co/xHcnF6maX4
— PMO India (@PMOIndia) February 23, 2025
Last month, we witnessed @isro's 100th launch, reflecting India's resolve to reach new heights in space science every day. #MannKiBaat pic.twitter.com/XYnASFYuEi
— PMO India (@PMOIndia) February 23, 2025
Spend a day experiencing life as a scientist, urges PM @narendramodi during #MannKiBaat pic.twitter.com/YU7OXplfZ8
— PMO India (@PMOIndia) February 23, 2025
India is rapidly making its mark in Artificial Intelligence. Here is a unique effort from Telangana. #MannKiBaat pic.twitter.com/UZ0el0OBJc
— PMO India (@PMOIndia) February 23, 2025
A special initiative for Nari Shakti. #MannKiBaat pic.twitter.com/hTtHKgEWd2
— PMO India (@PMOIndia) February 23, 2025
India is moving rapidly towards becoming a global sporting powerhouse. #MannKiBaat pic.twitter.com/HoeAt5uHK6
— PMO India (@PMOIndia) February 23, 2025
Let's fight obesity. #MannKiBaat pic.twitter.com/9ETtAvyaMl
— PMO India (@PMOIndia) February 23, 2025
India has a vibrant ecosystem of wildlife. #MannKiBaat pic.twitter.com/o5E6A2sqmU
— PMO India (@PMOIndia) February 23, 2025