ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಸುಂದರ್ ನರ್ಸರಿಯಲ್ಲಿ 8ನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ (ಪಿಪಿಸಿ) ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪ್ರಧಾನಮಂತ್ರಿಯವರು ದೇಶಾದ್ಯಂತದ ವಿದ್ಯಾರ್ಥಿಗಳೊಂದಿಗೆ ತಮ್ಮ ಅನೌಪಚಾರಿಕ ಸಂವಾದದಲ್ಲಿ ವ್ಯಾಪಕ ವಿಷಯಗಳ ಬಗ್ಗೆ ಚರ್ಚಿಸಿದರು. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಸಾಂಪ್ರದಾಯಿಕವಾಗಿ ನೀಡಲಾಗುವ ಎಳ್ಳಿನಿಂದ ತಯಾರಿಸಿದ ಸಿಹಿತಿಂಡಿಗಳನ್ನು ಅವರು ವಿತರಿಸಿದರು.
ಪೋಷಣೆಯ ಮೂಲಕ ಅರಳಿಸಿ
ಪೌಷ್ಠಿಕಾಂಶದ ವಿಷಯದ ಕುರಿತು ಮಾತನಾಡಿದ ಶ್ರೀ ಮೋದಿ, ವಿಶ್ವಸಂಸ್ಥೆಯು 2023ನೇ ವರ್ಷವನ್ನು ‘ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ’ ಎಂದು ಘೋಷಿಸಿದೆ ಮತ್ತು ಭಾರತದ ಪ್ರಸ್ತಾಪದ ಮೇರೆಗೆ ಪ್ರಪಂಚದಾದ್ಯಂತ ಅದನ್ನು ಪ್ರೋತ್ಸಾಹಿಸಿದೆ ಎಂದು ಹೇಳಿದರು. ಸರಿಯಾದ ಪೋಷಣೆಯು ಅನೇಕ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುವುದರಿಂದ ಭಾರತ ಸರ್ಕಾರವು ಪೌಷ್ಟಿಕಾಂಶದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಬಲವಾಗಿ ಒತ್ತಾಯಿಸಿದೆ ಎಂದು ಅವರು ಹೇಳಿದರು. ಭಾರತದಲ್ಲಿ ಸಿರಿಧಾನ್ಯವನ್ನು ಸೂಪರ್ಫುಡ್ ಎಂದು ಕರೆಯಲಾಗುತ್ತದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಭಾರತದಲ್ಲಿ ಬೆಳೆಗಳು, ಹಣ್ಣುಗಳು ಮುಂತಾದವುಗಳು ನಮ್ಮ ಪರಂಪರೆಗೆ ಸಂಬಂಧಿಸಿವೆ ಎಂದ ಅವರು, ಪ್ರತಿ ಹೊಸ ಬೆಳೆ ಅಥವಾ ಋತುವನ್ನು ದೇವರಿಗೆ ಅರ್ಪಿಸಲಾಗುತ್ತದೆ ಮತ್ತು ಭಾರತದಾದ್ಯಂತ ಹೆಚ್ಚಿನ ಸ್ಥಳಗಳಲ್ಲಿ ಹಬ್ಬಗಳನ್ನು ಆಚರಿಸಲಾಗುತ್ತದೆ ಎಂದು ಉದಾಹರಣೆ ನೀಡಿದರು. ಭಗವಂತನಿಗೆ ನೈವೇದ್ಯ ಮಾಡಿದ ಅನ್ನವನ್ನು ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ ಎಂದು ಅವರು ವಿವರಿಸಿದರು. ಶ್ರೀ ಮೋದಿಯವರು ಮಕ್ಕಳಿಗೆ ಕಾಲಕಾಲಕ್ಕೆ ದೊರೆಯುವ ಹಣ್ಣುಗಳನ್ನು ತಿನ್ನುವಂತೆ ಕರೆ ನೀಡಿದರು. ಜಂಕ್ ಫುಡ್, ಎಣ್ಣೆಯುಕ್ತ ಆಹಾರ ಮತ್ತು ಸಂಸ್ಕರಿಸಿದ ಹಿಟ್ಟಿನಿಂದ ತಯಾರಿಸಿದ ಆಹಾರ ಉತ್ಪನ್ನಗಳನ್ನು ತ್ಯಜಿಸುವಂತೆ ಅವರು ಮಕ್ಕಳನ್ನು ಪ್ರೋತ್ಸಾಹಿಸಿದರು. ಸರಿಯಾದ ರೀತಿಯಲ್ಲಿ ಆಹಾರವನ್ನು ಸೇವಿಸುವುದರ ಮಹತ್ವದ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಮಕ್ಕಳು ತಮ್ಮ ಆಹಾರವನ್ನು ನುಂಗುವ ಮೊದಲು ಕನಿಷ್ಠ 32 ಬಾರಿ ಅಗಿಯಬೇಕು ಎಂದು ಹೇಳಿದರು. ನೀರು ಕುಡಿಯುವಾಗ ಗುಟುಕುಗುಟುಕಾಗಿ ಕುಡಿದು ಅದನ್ನು ಸವಿಯಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು. ಸರಿಯಾದ ಸಮಯಕ್ಕೆ ಸರಿಯಾದ ಆಹಾರವನ್ನು ಸೇವಿಸುವ ವಿಷಯದ ಕುರಿತು ಶ್ರೀ ಮೋದಿಯವರು ರೈತರ ಉದಾಹರಣೆಯನ್ನು ನೀಡಿದರು. ರೈತರು ಬೆಳಿಗ್ಗೆ ಹೊಲಗಳಿಗೆ ಹೋಗುವ ಮೊದಲು ಹೊಟ್ಟೆ ತುಂಬಾ ಉಪಹಾರ ಸೇವಿಸುತ್ತಾರೆ ಮತ್ತು ಸೂರ್ಯಾಸ್ತಕ್ಕೂ ಮೊದಲು ತಮ್ಮ ರಾತ್ರಿ ಊಟವನ್ನು ಸೇವಿಸುತ್ತಾರೆ ಎಂದು ಹೇಳಿದರು. ಇದೇ ರೀತಿಯ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಂತೆ ಅವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಪೋಷಣೆ ಮತ್ತು ಸ್ವಾಸ್ಥ್ಯ
ಸ್ವಾಸ್ಥ್ಯದ ಬಗ್ಗೆ ಚರ್ಚಿಸಿದ ಪ್ರಧಾನಿ, ಅನಾರೋಗ್ಯವಿಲ್ಲ ಎಂದರೆ ನಾವು ಆರೋಗ್ಯವಾಗಿದ್ದೇವೆ ಎಂದರ್ಥವಲ್ಲ ಮತ್ತು ಸ್ವಾಸ್ಥ್ಯದ ಬಗ್ಗೆ ಮಕ್ಕಳು ಗಮನ ಹರಿಸುವಂತೆ ಒತ್ತಾಯಿಸಿದರು. ದೇಹದ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ನಿದ್ರೆ ಮಾಡುವುದು ಬಹಳ ಮುಖ್ಯ ಎಂದು ಅವರು ಹೇಳಿದರು. ಮಾನವನ ಸ್ವಾಸ್ಥ್ಯದಲ್ಲಿ ನಿದ್ರೆಯ ಮಹತ್ವದ ಕುರಿತು ಹಲವು ಸಂಶೋಧಣೆಗಳು ನಡೆಯುತ್ತಿವೆ ಎಂದು ಹೇಳಿದರು. ಮಾನವ ದೇಹಕ್ಕೆ ಸೂರ್ಯನ ಬೆಳಕಿನ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಶ್ರೀ ಮೋದಿ ಅವರು ಬೆಳಿಗ್ಗೆ ಸೂರ್ಯನ ಬೆಳಕಿನಲ್ಲಿ ಕೆಲವು ನಿಮಿಷಗಳ ಕಾಲ ನಿಲ್ಲುವ ಅಭ್ಯಾಸವನ್ನು ಬೆಳೆಸಿಕೊಳ್ಳುವಂತೆ ಮಕ್ಕಳನ್ನು ಪ್ರೋತ್ಸಾಹಿಸಿದರು. ಸೂರ್ಯೋದಯದ ನಂತರ ಮರದ ಕೆಳಗೆ ನಿಂತು ಆಳವಾದ ಉಸಿರನ್ನು ತೆಗೆದುಕೊಳ್ಳುವಂತೆ ಅವರು ಮಕ್ಕಳಿಗೆ ಹೇಳಿದರು. ಒಬ್ಬ ವ್ಯಕ್ತಿಯು ಜೀವನದಲ್ಲಿ ಪ್ರಗತಿ ಹೊಂದಲು, ಏನನ್ನು, ಯಾವಾಗ, ಹೇಗೆ ಮತ್ತು ಏಕೆ ತಿನ್ನುತ್ತಾನೆ ಎಂಬುದರಲ್ಲಿ ಪೌಷ್ಠಿಕಾಂಶದ ಪ್ರಾಮುಖ್ಯತೆ ಇರುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.
ಒತ್ತಡವನ್ನು ನಿವಾರಿಸುವುದು
ಒತ್ತಡವನ್ನು ನಿವಾರಿಸುವ ವಿಷಯದ ಕುರಿತು ಪ್ರಧಾನಮಂತ್ರಿಯವರು, 10 ಅಥವಾ 12 ನೇ ತರಗತಿಯಂತಹ ಶಾಲಾ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸದಿದ್ದರೆ ಜೀವನವೇ ವ್ಯರ್ಥ ಎಂಬ ಭಾವನೆ ನಮ್ಮ ಸಮಾಜದಲ್ಲಿ ಬೇರೂರಿರುವುದು ವಿಷಾದನೀಯ ಎಂದು ಹೇಳಿದರು. ಇದರಿಂದ ಮಕ್ಕಳ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಿದೆ ಎಂದರು. ಕ್ರಿಕೆಟ್ ಪಂದ್ಯದಲ್ಲಿ ಚೆಂಡಿನ ಮೇಲೆ ಬ್ಯಾಟ್ಸ್ಮನ್ ನ ಏಕಾಗ್ರತೆಯನ್ನು ಉಲ್ಲೇಖಿಸಿದ ಶ್ರೀ ಮೋದಿಯವರು, ಬ್ಯಾಟ್ಸ್ಮನ್ ನಂತೆ ಹೊರಗಿನ ಒತ್ತಡವನ್ನು ತಪ್ಪಿಸಿ ಮತ್ತು ತಮ್ಮ ಅಧ್ಯಯನದ ಮೇಲೆ ಮಾತ್ರ ಗಮನಹರಿಸಿ, ಇದು ಒತ್ತಡವನ್ನು ಜಯಿಸಲು ಸಹಾಯ ಮಾಡುತ್ತದೆ ಎಂದು ಮಕ್ಕಳನ್ನು ಪ್ರೋತ್ಸಾಹಿಸಿದರು.
ನಿಮಗೆ ನೀವೇ ಸವಾಲು ಹಾಕಿಕೊಳ್ಳಿ
ವಿದ್ಯಾರ್ಥಿಗಳು ಉತ್ತಮವಾಗಿ ತಯಾರಾಗಿರಬೇಕು ಮತ್ತು ಎಲ್ಲಾ ಸಮಯದಲ್ಲೂ ತಮಗೆ ತಾವೇ ತಾವು ಸವಾಲು ಹಾಕಿಕೊಳ್ಳುತ್ತಿರಬೇಕು ಎಂದ ಪ್ರಧಾನಮಂತ್ರಿಯವರು, ಬಹುತೇಕ ಮಂದಿ ತಮ್ಮ ವಿರುದ್ಧ ತಾವೇ ಹೋರಾಡುವುದಿಲ್ಲ ಎಂದು ಹೇಳಿದರು. ಆತ್ಮಾವಲೋಕನದ ಪ್ರಾಮುಖ್ಯತೆಯ ಕುರಿತು ಮಾತನಾಡಿದ ಅವರು, ತಾವು ಏನಾಗಬಹುದು, ಏನು ಸಾಧಿಸಬಹುದು ಮತ್ತು ಯಾವ ಕ್ರಮಗಳು ತಮಗೆ ತೃಪ್ತಿಯನ್ನು ತರುತ್ತವೆ ಎಂದು ಪದೇ ಪದೇ ತಮ್ಮನ್ನು ತಾವು ಕೇಳಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಒತ್ತಾಯಿಸಿದರು. ಪತ್ರಿಕೆಗಳು ಅಥವಾ ಟಿವಿಗಳಂತಹ ದೈನಂದಿನ ಬಾಹ್ಯ ಪ್ರಭಾವಗಳಿಂದ ಗಮನವು ಬೇರೆಡೆಗೆ ತಿರುಗಬಾರದು, ಬದಲಿಗೆ ಕಾಲಾನಂತರದಲ್ಲಿ ನಿರಂತರವಾಗಿ ವಿಕಸನಗೊಳ್ಳಬೇಕು ಎಂದು ಅವರು ಎತ್ತಿ ತೋರಿಸಿದರು. ಅನೇಕ ಜನರು ದಿಕ್ಕು ತೋಚದೆ ತಮ್ಮ ಮನಸ್ಸನ್ನು ಅಲೆದಾಡಿಸುತ್ತಾರೆ ಎಂದು ಪ್ರಧಾನಿ ಹೇಳಿದರು. ಅವರು ತಮ್ಮ ನಿರ್ಧಾರಗಳಲ್ಲಿ ನಿಷ್ಕಾಳಜಿತನವನ್ನು ಹೊಂದಿರಬಾರದು ಮತ್ತು ಸವಾಲುಗಳನ್ನು ಎದುರಿಸಲು ನೆರವಾಗುವ ಶಾಂತತೆಯನ್ನು ಕಂಡುಕೊಳ್ಳಲು ಮನಸ್ಸು ಮಾಡಬೇಕು ಎಂದು ಸಲಹೆ ನೀಡಿದರು.
ನಾಯಕತ್ವದ ಕಲೆ
ಪರಿಣಾಮಕಾರಿ ನಾಯಕತ್ವದ ಬಗ್ಗೆ ಸಲಹೆಗಳನ್ನು ಹಂಚಿಕೊಳ್ಳುವಂತೆ ವಿದ್ಯಾರ್ಥಿಯೊಬ್ಬರು ಕೇಳಿದಾಗ, ಹೊರನೋಟವು ನಾಯಕನನ್ನು ವ್ಯಾಖ್ಯಾನಿಸುವುದಿಲ್ಲ, ಬದಲಿಗೆ ಇತರರಿಗೆ ಮಾದರಿಯಾಗಿ ಮುನ್ನಡೆಸುವವನು ನಾಯಕನಾಗಿರುತ್ತಾನೆ ಎಂದು ಶ್ರೀ ಮೋದಿ ಹೇಳಿದರು. ಇದನ್ನು ಸಾಧಿಸಲು, ವ್ಯಕ್ತಿಗಳು ತಮ್ಮನ್ನು ತಾವು ಬದಲಾಯಿಸಿಕೊಳ್ಳಬೇಕು ಮತ್ತು ಅವರ ನಡವಳಿಕೆಯು ಈ ಬದಲಾವಣೆಯನ್ನು ಪ್ರತಿಬಿಂಬಿಸಬೇಕು ಎಂದು ಅವರು ಹೇಳಿದರು. “ನಾಯಕತ್ವವನ್ನು ಹೇರಲಾಗುವುದಿಲ್ಲ, ಬದಲಿಗೆ ನಿಮ್ಮ ಸುತ್ತ ಇರುವವರು ಒಪ್ಪಿಕೊಳ್ಳಬೇಕು” ಎಂದು ಪ್ರಧಾನಿ ಹೇಳಿದರು. ಇತರರಿಗೆ ಉಪದೇಶ ಮಾಡುವುದು ಸ್ವೀಕಾರವನ್ನು ಗಳಿಸುವುದಿಲ್ಲ; ವ್ಯಕ್ತಿಯ ನಡವಳಿಕೆಯು ಅದನ್ನು ಗಳಿಸುತ್ತದೆ ಎಂದು ಅವರು ಹೇಳಿದರು. ಉದಾಹರಣೆ ನೀಡಿದ ಅವರು, ಯಾರಾದರೂ ಸ್ವಚ್ಛತೆ ಕುರಿತು ಭಾಷಣ ಮಾಡಿ, ಅದನ್ನು ಪಾಲಿಸದಿದ್ದರೆ ಆತ ನಾಯಕನಾಗಲು ಸಾಧ್ಯವಿಲ್ಲ ಎಂದರು. ನಾಯಕತ್ವಕ್ಕೆ ಸಾಂಘಿಕ ಕೆಲಸ ಮತ್ತು ತಾಳ್ಮೆ ಅಗತ್ಯ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಕೆಲಸಗಳನ್ನು ನಿಯೋಜಿಸುವಾಗ, ತಂಡದ ಸದಸ್ಯರು ಎದುರಿಸುವ ಸವಾಲುಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಮತ್ತು ಕಷ್ಟಗಳಲ್ಲಿ ಅವರಿಗೆ ಸಹಾಯ ಮಾಡುವುದರಿಂದ ನಾಯಕತ್ವದ ಬಗ್ಗೆ ಅವರ ವಿಶ್ವಾಸ ಮತ್ತು ನಂಬಿಕೆ ಹೆಚ್ಚಾಗುತ್ತದೆ ಎಂದು ಅವರು ಒತ್ತಿ ಹೇಳಿದರು. ಜಾತ್ರೆಯಲ್ಲಿ ಮಗುವೊಂದು ತನ್ನ ತಂದೆ-ತಾಯಿಯ ಕೈ ಹಿಡಿದಿರುವ ಬಾಲ್ಯದ ಕಥೆಯನ್ನು ಹಂಚಿಕೊಳ್ಳುವ ಮೂಲಕ ಪ್ರಧಾನಿ ಇದನ್ನು ವಿವರಿಸಿದರು. ಪೋಷಕರು ತನ್ನ ಕೈಯನ್ನು ಹಿಡಿದಿರುವುದು ಮಗುವಿಗೆ ಇಷ್ಟವಾಗುತ್ತದೆ, ಇದು ಭದ್ರತೆ ಮತ್ತು ನಂಬಿಕೆಯ ಭಾವನೆಯನ್ನು ಖಾತ್ರಿಪಡಿಸುತ್ತದೆ. ಈ ವಿಶ್ವಾಸವು ನಾಯಕತ್ವದಲ್ಲಿ ಪ್ರಮುಖ ಶಕ್ತಿಯಾಗಿದೆ ಎಂದು ಅವರು ಒತ್ತಿ ಹೇಳಿದರು.
ಪುಸ್ತಕಗಳಾಚೆಗೆ – 360º ಅಭಿವೃದ್ಧಿ
ಹವ್ಯಾಸಗಳು ಮತ್ತು ಅಧ್ಯಯನಗಳ ನಡುವೆ ಸಮತೋಲನವನ್ನು ಸಾಧಿಸುವ ವಿಷಯ ಕುರಿತು ಮಾತನಾಡಿದ ಪ್ರಧಾನಿ, ಶಿಕ್ಷಣವು ಯಶಸ್ಸಿನ ಏಕೈಕ ಮಾರ್ಗವಾಗಿದೆ ಎಂಬುದು ಸಾಮಾನ್ಯ ನಂಬಿಕೆಯಾಗಿದೆ, ಆದರೆ ವಿದ್ಯಾರ್ಥಿಗಳು ರೋಬೋಟ್ ಗಳಲ್ಲ ಎಂದು ಹೇಳಿದರು ಮತ್ತು ಸಮಗ್ರ ಅಭಿವೃದ್ಧಿಯ ಮಹತ್ವವನ್ನು ಒತ್ತಿ ಹೇಳಿದರು. ಶಿಕ್ಷಣ ಕೇವಲ ಮುಂದಿನ ತರಗತಿಗೆ ಹೋಗುವುದಕ್ಕಾಗಿ ಮಾತ್ರವಲ್ಲ, ಸಮಗ್ರ ವ್ಯಕ್ತಿತ್ವ ವಿಕಸನಕ್ಕಾಗಿ ಇದೆ ಎಂದು ಹೇಳಿದರು. ಹಿಂದಿನ ಶಿಕ್ಷಣದ ಬಗ್ಗೆ ಮಾತನಾಡಿದ ಅವರು, ತೋಟಗಾರಿಕೆಯಂತಹ ಆರಂಭಿಕ ಶಾಲಾ ಪಾಠಗಳು ಅಪ್ರಸ್ತುತವೆಂದು ತೋರಬಹುದು, ಆದರೆ ಅವು ಒಟ್ಟಾರೆ ಅಭಿವೃದ್ಧಿಗೆ ಹೇಗೆ ಕೊಡುಗೆ ನೀಡುತ್ತವೆ ಎಂಬುದನ್ನು ಎತ್ತಿ ತೋರಿಸಿದರು. ಮಕ್ಕಳನ್ನು ಕಟ್ಟುನಿಟ್ಟಿನ ಶೈಕ್ಷಣಿಕ ವಾತಾವರಣಕ್ಕೆ ಸೀಮಿತಗೊಳಿಸಬೇಡಿ ಎಂದು ಪೋಷಕರು ಮತ್ತು ಶಿಕ್ಷಕರಿಗೆ ಪ್ರಧಾನಿ ಒತ್ತಾಯಿಸಿದರು. ಏಕೆಂದರೆ ಇದು ಅವರ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಮಕ್ಕಳಿಗೆ ಮುಕ್ತ ವಾತಾವರಣ ಹಾಗೂ ಅವರು ಆನಂದಿಸುವ ಚಟುವಟಿಕೆಗಳ ಅಗತ್ಯವಿದ್ದು, ಇದರಿಂದ ಅವರ ಕಲಿಕೆಯೂ ಹೆಚ್ಚುತ್ತದೆ ಎಂದರು. ಜೀವನದಲ್ಲಿ ಪರೀಕ್ಷೆಯೇ ಸರ್ವಸ್ವವಲ್ಲ ಎಂದು ಒತ್ತಿ ಹೇಳಿದ ಅವರು, ಈ ಮನಸ್ಥಿತಿಯನ್ನು ಅಳವಡಿಸಿಕೊಂಡರೆ ಕುಟುಂಬಗಳು ಮತ್ತು ಶಿಕ್ಷಕರ ಮನವೊಲಿಸಲು ಸಹಾಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ನಾನು ಪುಸ್ತಕಗಳನ್ನು ಓದುವುದರ ವಿರುದ್ಧ ಇಲ್ಲ ಎಂದೂ ಪ್ರಧಾನಿ ಸ್ಪಷ್ಟಪಡಿಸಿದರು; ಬದಲಿಗೆ, ಸಾಧ್ಯವಾದಷ್ಟು ಜ್ಞಾನವನ್ನು ಸಂಪಾದಿಸುವ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು. ಪರೀಕ್ಷೆಗಳೇ ಸರ್ವಸ್ವವಲ್ಲ ಮತ್ತು ಜ್ಞಾನ ಮತ್ತು ಪರೀಕ್ಷೆಗಳು ಎರಡು ವಿಭಿನ್ನ ವಿಷಯಗಳು ಎಂದು ಅವರು ಹೇಳಿದರು.
ಸಕಾರಾತ್ಮಕತೆಗಾಗಿ ಹುಡುಕಿ
ಜನರು ತಮಗೆ ನೀಡಿದ ಸಲಹೆಯನ್ನು ಆಗಾಗ್ಗೆ ಪ್ರಶ್ನಿಸುತ್ತಾರೆ, ಅದನ್ನು ಏಕೆ ಹೇಳಿದರು ಮತ್ತು ಅಂತಹ ದೋಷ ನಮ್ಮಲ್ಲಿ ಇದೆಯೇ ಎಂದು ಆಶ್ಚರ್ಯ ಪಡುತ್ತಾರೆ ಎಂದು ಪ್ರಧಾನಿ ಹೇಳಿದರು. ಈ ಮನಸ್ಥಿತಿಯು ಇತರರಿಗೆ ಸಹಾಯ ಮಾಡುವ ವ್ಯಕ್ತಿಯ ಸಾಮರ್ಥ್ಯವನ್ನು ತಡೆಯುತ್ತದೆ. ಬದಲಾಗಿ, ಚೆನ್ನಾಗಿ ಹಾಡುವುದು ಅಥವಾ ಅಚ್ಚುಕಟ್ಟಾದ ಬಟ್ಟೆಗಳನ್ನು ಧರಿಸುವುದು ಮುಂತಾದ ಉತ್ತಮ ಗುಣಗಳನ್ನು ಗುರುತಿಸುವಂತೆ ಮತ್ತು ಈ ಸಕಾರಾತ್ಮಕ ಗುಣಗಳನ್ನು ಚರ್ಚಿಸುವಂತೆ ಅವರು ಸಲಹೆ ನೀಡಿದರು. ಈ ವಿಧಾನವು ನಿಜವಾದ ಆಸಕ್ತಿಯನ್ನು ತೋರಿಸುತ್ತದೆ ಮತ್ತು ಬಾಂಧವ್ಯವನ್ನು ನಿರ್ಮಿಸುತ್ತದೆ ಎಂದರು. ಇತರರನ್ನು ಒಟ್ಟಿಗೆ ಅಧ್ಯಯನ ಮಾಡಲು ಆಹ್ವಾನಿಸುವ ಮೂಲಕ ಬೆಂಬಲ ನೀಡುವಂತೆಯೂ ಅವರು ಸಲಹೆ ನೀಡಿದರು. ಪ್ರಧಾನಮಂತ್ರಿಯವರು ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳುವ ಮಹತ್ವವನ್ನು ಎತ್ತಿ ತೋರಿಸಿದರು. ಬರವಣಿಗೆಯ ಹವ್ಯಾಸವನ್ನು ಬೆಳೆಸಿಕೊಂಡವರು ತಮ್ಮ ಆಲೋಚನೆಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸಬಹುದು ಎಂದು ಹೇಳಿದರು.
ನಿಮ್ಮ ವಿಶೇಷತೆಯನ್ನು ಕಂಡುಕೊಳ್ಳಿ
ಅಹಮದಾಬಾದ್ ನಲ್ಲಿ ನಡೆದ ಘಟನೆಯೊಂದನ್ನು ಉಲ್ಲೇಖಿಸಿದ ಅವರು, ಗಮನದ ಕೊರತೆಯಿಂದಾಗಿ ಮಗುವನ್ನು ಶಾಲೆಯಿಂದ ಹೊರಹಾಕಲಾಯಿತು, ಆದಾಗ್ಯೂ, ಮಗು ಟಿಂಕರಿಂಗ್ ಲ್ಯಾಬ್ ನಲ್ಲಿ ಉತ್ತಮ ಸಾಧನೆ ಮಾಡಿತು ಮತ್ತು ರೊಬೊಟಿಕ್ಸ್ ಸ್ಪರ್ಧೆಯಲ್ಲಿ ಗೆದ್ದಿತು, ಇದು ಮಗುವಿನ ಅನನ್ಯ ಸಾಮರ್ಥ್ಯವನ್ನು ತೋರಿಸಿತು ಎಂದು ಹೇಳಿದರು. ಮಕ್ಕಳ ವಿಶಿಷ್ಟ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಗುರುತಿಸಿ ಪೋಷಿಸುವುದು ಶಿಕ್ಷಕರ ಪಾತ್ರವಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಶ್ರೀ ಮೋದಿಯವರು ಆತ್ಮಾವಲೋಕನ ಮತ್ತು ಸಂಬಂಧಗಳನ್ನು ಅರ್ಥಮಾಡಿಕೊಳ್ಳುವ ಪ್ರಯೋಗವೊಂದನ್ನು ಪ್ರಸ್ತಾಪಿಸಿದರು. 25-30 ಬಾಲ್ಯ ಸ್ನೇಹಿತರನ್ನು ನೆನಪಿಟ್ಟುಕೊಳ್ಳಲು ಮತ್ತು ಅವರ ಪೋಷಕರ ಹೆಸರು ಸೇರಿದಂತೆ ಅವರ ಪೂರ್ಣ ಹೆಸರನ್ನು ಬರೆಯಲು ಅವರು ಸಲಹೆ ನೀಡಿದರು. ಈ ಅಭ್ಯಾಸವು ಸಾಮಾನ್ಯವಾಗಿ ನಾವು ಆಪ್ತ ಸ್ನೇಹಿತರೆಂದು ಪರಿಗಣಿಸುವ ಜನರ ಬಗ್ಗೆ ನಮಗೆ ಎಷ್ಟು ಕಡಿಮೆ ತಿಳಿದಿದೆ ಎಂಬುದನ್ನು ಬಹಿರಂಗಪಡಿಸುತ್ತದೆ. ಸಕಾರಾತ್ಮಕ ಗುಣಗಳನ್ನು ಗುರುತಿಸುವ ಮತ್ತು ಇತರರಲ್ಲಿ ಸಕಾರಾತ್ಮಕತೆಯನ್ನು ಕಂಡುಕೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳುವಂತೆ ಪ್ರಧಾನಮಂತ್ರಿ ಪ್ರೋತ್ಸಾಹಿಸಿದರು. ಈ ಅಭ್ಯಾಸವು ವೈಯಕ್ತಿಕ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ನಿಮ್ಮ ಸಮಯವನ್ನು ನಿಯಂತ್ರಿಸಿ, ನಿಮ್ಮ ಜೀವನವನ್ನು ನಿಯಂತ್ರಿಸಿ
ಸಮಯ ನಿರ್ವಹಣೆಯ ಬಗ್ಗೆ ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀ ಮೋದಿ, ಎಲ್ಲರಿಗೂ ದಿನದಲ್ಲಿ 24 ಗಂಟೆಗಳಿರುತ್ತವೆ, ಕೆಲವರು ಬಹಳಷ್ಟು ಸಾಧಿಸುತ್ತಾರೆ, ಆದರೆ ಕೆಲವರು ಏನನ್ನೂ ಸಾಧಿಸಿಲ್ಲ ಎಂದು ಭಾವಿಸುತ್ತಾರೆ ಎಂದು ಹೇಳಿದರು. ಸಮಯ ನಿರ್ವಹಣೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ ಅವರು, ಅನೇಕರಿಗೆ ತಮ್ಮ ಸಮಯವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಸಬೇಕು ಎಂಬುದರ ಬಗ್ಗೆ ತಿಳುವಳಿಕೆ ಇರುವುದಿಲ್ಲ ಎಂದು ಹೇಳಿದರು, ಸಮಯದ ಪ್ರಜ್ಞೆಯನ್ನು ಹೊಂದಿರಬೇಕು, ನಿರ್ದಿಷ್ಟ ಕಾರ್ಯಗಳನ್ನು ಹೊಂದಿಸಬೇಕು ಮತ್ತು ಪ್ರತಿದಿನ ಪ್ರಗತಿಯನ್ನು ಪರಿಶೀಲಿಸಬೇಕು ಎಂದು ಪ್ರಧಾನಿ ಸಲಹೆ ನೀಡಿದರು. ಸವಾಲಿನ ವಿಷಯಗಳನ್ನು ತಪ್ಪಿಸುವ ಬದಲು ಅವುಗಳತ್ತ ಗಮನ ಹರಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಕಷ್ಟ ಎನಿಸುವ ವಿಷಯವನ್ನು ಮೊದಲು ಆಯ್ಕೆ ಮಾಡಿಕೊಂಡು ಧೈರ್ಯದಿಂದ ಎದುರಿಸುವುದು ಹೇಗೆ ಎಂಬುದಕ್ಕೆ ಅವರು ಉದಾಹರಣೆ ನೀಡಿದರು. ಈ ಸವಾಲುಗಳನ್ನು ಸಂಕಲ್ಪದಿಂದ ಸ್ವೀಕರಿಸುವ ಮೂಲಕ ಅಡೆತಡೆಗಳನ್ನು ಮೆಟ್ಟಿನಿಂತು ಯಶಸ್ಸು ಸಾಧಿಸಬಹುದು ಎಂದು ಹೇಳಿದರು. ಪರೀಕ್ಷೆಯ ಸಮಯದಲ್ಲಿ ವಿಭಿನ್ನ ಆಲೋಚನೆಗಳು, ಸಾಧ್ಯತೆಗಳು ಮತ್ತು ಪ್ರಶ್ನೆಗಳಿಂದ ಉಂಟಾಗುವ ಗೊಂದಲಗಳ ಸಮಸ್ಯೆಯನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ವಿದ್ಯಾರ್ಥಿಗಳು ಆಗಾಗ್ಗೆ ತಮ್ಮನ್ನು ತಾವು ಸರಿಯಾಗಿ ತಿಳಿದುಕೊಳ್ಳುವುದಿಲ್ಲ ಮತ್ತು ಸ್ನೇಹಿತರೊಂದಿಗೆ ಮಾತಿನಲ್ಲಿ ತೊಡಗುತ್ತಾರೆ, ಅಧ್ಯಯನ ಮಾಡದಿರಲು ನೆಪವನ್ನು ನೀಡುತ್ತಾರೆ ಎಂದು ಹೇಳಿದರು. ಸಾಮಾನ್ಯ ನೆಪಗಳು ತುಂಬಾ ದಣಿದಿರುವುದು ಅಥವಾ ಮನಸ್ಸಿಲ್ಲದಿರುವುದು ಎಂದು ಅವರು ಹೇಳಿದರು. ಫೋನ್ ಗಳು ಸೇರಿದಂತೆ ಇಂತಹ ಗೊಂದಲಗಳು ಗಮನ ಮತ್ತು ಶೈಕ್ಷಣಿಕ ಕಾರ್ಯಕ್ಷಮತೆಗೆ ಅಡ್ಡಿಯಾಗುತ್ತವೆ ಎಂದು ಪ್ರಧಾನಮಂತ್ರಿ ಎತ್ತಿ ತೋರಿಸಿದರು.
ವರ್ತಮಾನದಲ್ಲಿ ಜೀವಿಸಿ
ಪ್ರಸ್ತುತ ಕ್ಷಣವೇ ಅತ್ಯಮೂಲ್ಯವಾದದ್ದು ಎಂದು ಪ್ರಧಾನಿ ಒತ್ತಿ ಹೇಳಿದರು. ಒಮ್ಮೆ ಅದು ಹಾದುಹೋದರೆ, ಅದು ಕಳೆದುಹೋಗುತ್ತದೆ, ಆದರೆ ಪೂರ್ಣವಾಗಿ ಬದುಕಿದರೆ, ಅದು ಜೀವನದ ಭಾಗವಾಗುತ್ತದೆ ಎಂದರು. ಸೌಮ್ಯವಾದ ತಂಗಾಳಿಯನ್ನು ಗಮನಿಸುವಂತಹ ಕ್ಷಣವು ಜಾಗರೂಕರಾಗಿರುವುದರ ಮತ್ತು ಮೆಚ್ಚುಗೆಯ ಮಹತ್ವವಾಗಿದೆ ಎಂದು ಅವರು ಎತ್ತಿ ತೋರಿಸಿದರು.
ಹಂಚಿಕೆಯ ಶಕ್ತಿ
ಅಧ್ಯಯನವನ್ನು ನಿರ್ವಹಿಸುವಾಗ ಆತಂಕ ಮತ್ತು ಖಿನ್ನತೆಯೊಂದಿಗೆ ವ್ಯವಹರಿಸುವ ವಿಷಯದ ಕುರಿತು ಮಾತನಾಡಿದ ಶ್ರೀ ಮೋದಿ, ಖಿನ್ನತೆಯ ಸಮಸ್ಯೆ ಸಾಮಾನ್ಯವಾಗಿ ಕುಟುಂಬದಿಂದ ಬೇರ್ಪಟ್ಟ ಭಾವನೆ ಮತ್ತು ಸಾಮಾಜಿಕ ಸಂಪರ್ಕಗಳಿಂದ ಕ್ರಮೇಣ ಹಿಂದೆ ಸರಿಯುವುದರೊಂದಿಗೆ ಪ್ರಾರಂಭವಾಗುತ್ತದೆ ಎಂದು ಹೇಳಿದರು. ಆಂತರಿಕ ಸಂದಿಗ್ಧತೆಗಳು ಉಲ್ಬಣಗೊಳ್ಳದಂತೆ ಅವುಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಪ್ರಧಾನಮಂತ್ರಿಯವರು ಸಾಂಪ್ರದಾಯಿಕ ಕುಟುಂಬ ರಚನೆಯ ಬಗ್ಗೆ ಪ್ರಸ್ತಾಪಿಸಿದರು. ಅಲ್ಲಿ ಕುಟುಂಬದ ಸದಸ್ಯರೊಂದಿಗೆ ಮುಕ್ತ ಮಾತುಕತೆಯು ಒತ್ತಡ ಬಿಡುಗಡೆಯ ಕವಾಟದಂತೆ ಕಾರ್ಯನಿರ್ವಹಿಸುತ್ತದೆ, ತೀವ್ರ ಭಾವುಕತೆಗಳನ್ನು ತಡೆಯುತ್ತದೆ ಎಂದು ಹೇಳಿದರು. ತಮ್ಮ ಕೈಬರಹವನ್ನು ಸುಧಾರಿಸಲು ಶಿಕ್ಷಕರು ಹೇಗೆ ಶ್ರಮಿಸಿದರು ಎಂಬುದನ್ನು ಪ್ರಧಾನಿ ವಿವರಿಸಿದರು, ಅದು ತಮ್ಮನ್ನು ಆಳವಾಗಿ ತಟ್ಟಿತು ಮತ್ತು ಶಿಕ್ಷಕರ ನಿಜವಾದ ಕಾಳಜಿಯ ಪರಿಣಾಮವನ್ನು ಒತ್ತಿಹೇಳಿತು. ಈ ಕಾಳಜಿ ಮತ್ತು ಗಮನವು ವಿದ್ಯಾರ್ಥಿಯ ಯೋಗಕ್ಷೇಮ ಮತ್ತು ಶೈಕ್ಷಣಿಕ ಕಾರ್ಯಕ್ಷಮತೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.
ನಿಮ್ಮ ಆಸಕ್ತಿಗಳ ಹಿಂದೆ ಹೋಗಿ
ಕೆಲವು ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳಲು ಮಕ್ಕಳ ಮೇಲೆ ಪೋಷಕರ ಒತ್ತಡದ ಬಗ್ಗೆ ಶ್ರೀ ಮೋದಿ ಮಾತನಾಡಿದರು. ತಮ್ಮ ಮಕ್ಕಳನ್ನು ಇತರರಿಗೆ ಹೋಲಿಸುವುದರಿಂದ ಪೋಷಕರ ನಿರೀಕ್ಷೆಗಳು ಹೆಚ್ಚಾಗಿ ಉದ್ಭವಿಸುತ್ತವೆ, ಇದು ಅವರ ಅಹಂ ಮತ್ತು ಸಾಮಾಜಿಕ ಸ್ಥಾನಮಾನವನ್ನು ಘಾಸಿಗೊಳಿಸುತ್ತದೆ ಎಂದು ಅವರು ಹೇಳಿದರು. ಪೋಷಕರು ತಮ್ಮ ಮಕ್ಕಳನ್ನು ಎಲ್ಲೆಂದರಲ್ಲಿ ಮಾಡೆಲ್ ರೀತಿಯಲ್ಲಿ ತೋರಿಸದೆ ಅವರ ಸಾಮರ್ಥ್ಯಗಳನ್ನು ಪ್ರೀತಿಸಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು. ಶಾಲೆಯಿಂದ ಹೊರಹಾಕುವ ಹಂತದಲ್ಲಿದ್ದರೂ ರೋಬೋಟಿಕ್ಸ್ ನಲ್ಲಿ ಉತ್ತಮ ಸಾಧನೆ ಮಾಡಿದ ಮಗುವಿನ ಉದಾಹರಣೆಯಂತೆ ಪ್ರತಿ ಮಗುವೂ ವಿಶಿಷ್ಟವಾದ ಪ್ರತಿಭೆಯನ್ನು ಹೊಂದಿರುತ್ತದೆ ಎಂದು ಹೇಳಿದರು. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಉದಾಹರಣೆಯನ್ನೂ ಅವರು ನೀಡಿದರು. ಮಕ್ಕಳು ಶೈಕ್ಷಣಿಕವಾಗಿ ಒಲವು ತೋರದಿದ್ದರೂ ಅವರ ಸಾಮರ್ಥ್ಯಗಳನ್ನು ಗುರುತಿಸಿ ಪೋಷಣೆ ಮಾಡುವಂತೆ ಪೋಷಕರನ್ನು ಪ್ರಧಾನಿ ಪ್ರೋತ್ಸಾಹಿಸಿದರು. ಕೌಶಲಾಭಿವೃದ್ಧಿಯ ಮಹತ್ವವನ್ನು ಒತ್ತಿ ಹೇಳಿದ ಅವರು, ನಾನು ಪ್ರಧಾನಿಯಾಗದೇ ಇದ್ದಿದ್ದರೆ ಕೌಶಲ್ಯಾಭಿವೃದ್ಧಿ ಇಲಾಖೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೆ ಎಂದರು. ತಮ್ಮ ಮಕ್ಕಳ ಸಾಮರ್ಥ್ಯಗಳ ಮೇಲೆ ಕೇಂದ್ರೀಕರಿಸುವ ಮೂಲಕ, ಪೋಷಕರು ಒತ್ತಡವನ್ನು ಕಡಿಮೆ ಮಾಡಬಹುದು ಮತ್ತು ಅವರ ಬೆಳವಣಿಗೆಗೆ ಸಹಾಯ ಮಾಡಬಹುದು ಎಂದು ಹೇಳಿದರು.
ನಿಲ್ಲಿಸಿ, ಪ್ರತಿಬಿಂಬಿಸಿ, ಮರುಹೊಂದಿಸಿ
ವಿವಿಧ ಧ್ವನಿಗಳನ್ನು ಗುರುತಿಸುವುದರ ಮೇಲೆ ಕೇಂದ್ರೀಕರಿಸುವುದು ಹೇಗೆ ಏಕಾಗ್ರತೆಗೆ ಸಹಾಯ ಮಾಡುತ್ತದೆ ಎಂಬುದನ್ನು ಪ್ರಧಾನಮಂತ್ರಿ ವಿವರಿಸಿದರು. ಪ್ರಾಣಾಯಾಮದಂತಹ ಉಸಿರಾಟದ ವ್ಯಾಯಾಮವನ್ನು ಅಭ್ಯಾಸ ಮಾಡುವುದರಿಂದ ವಿಭಿನ್ನ ರೀತಿಯ ಶಕ್ತಿಯನ್ನು ಸೃಷ್ಟಿಸಬಹುದು, ಇದು ಆತಂಕವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಅವರು ವಿವರಿಸಿದರು. ಎರಡೂ ಮೂಗಿನ ಹೊಳ್ಳೆಗಳ ಮೂಲಕ ಉಸಿರಾಟವನ್ನು ಸಮತೋಲನಗೊಳಿಸುವ ತಂತ್ರವನ್ನು ಪ್ರಧಾನಿ ವಿವರಿಸಿದರು, ಅದರ ಮೂಲಕ ದೇಹವನ್ನು ಕೆಲವೇ ಸೆಕೆಂಡುಗಳಲ್ಲಿ ನಿಯಂತ್ರಣಕ್ಕೆ ತರಬಹುದು. ಧ್ಯಾನ ಮತ್ತು ಉಸಿರಾಟದ ನಿಯಂತ್ರಣದ ಬಗ್ಗೆ ಕಲಿಯುವುದು ಹೇಗೆ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಗಮನವನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ ಎಂಬುದನ್ನು ಅವರು ವಿವರಿಸಿದರು.
ನಿಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳುವುದು, ಗುರಿಗಳನ್ನು ಸಾಧಿಸುವುದು
ಧನಾತ್ಮಕವಾಗಿ ಇರುವ ಮತ್ತು ಸಣ್ಣಪುಟ್ಟ ಗೆಲುವುಗಳಲ್ಲಿ ಸಂತೋಷವನ್ನು ಕಂಡುಕೊಳ್ಳುವ ಬಗ್ಗೆ ಮಾತನಾಡಿದ ಶ್ರೀ ಮೋದಿ, ಕೆಲವೊಮ್ಮೆ ಜನರು ತಮ್ಮ ಸ್ವಂತ ಆಲೋಚನೆಗಳು ಅಥವಾ ಇತರರ ಪ್ರಭಾವದಿಂದ ನಕಾರಾತ್ಮಕರಾಗುತ್ತಾರೆ ಎಂದು ಹೇಳಿದರು. 10 ನೇ ತರಗತಿಯಲ್ಲಿ ಶೇ.95 ಗುರಿಯನ್ನು ಹೊಂದಿದ್ದ ಆದರೆ ಶೇ.93 ಅಂಕ ಗಳಿಸಿ ನಿರಾಶೆಗೊಂಡಿದ್ದ ವಿದ್ಯಾರ್ಥಿಯೊಂದಿಗೆ ಸಂವಹನ ನಡೆಸಿದ ಪ್ರಧಾನಿಯವರು, ಹೆಚ್ಚಿನ ಗುರಿಯನ್ನು ಇಟ್ಟುಕೊಂಡಿದ್ದಕ್ಕಾಗಿ ವಿದ್ಯಾರ್ಥಿಯನ್ನು ಅಭಿನಂದಿಸಿದರು. ಗುರಿಗಳು ಮಹತ್ವಾಕಾಂಕ್ಷಿಯಾಗಿರಬೇಕು ಮತ್ತು ವಾಸ್ತವಿಕವಾಗಿರಬೇಕು ಎಂದು ಅವರು ಒತ್ತಿ ಹೇಳಿದರು. ಸಾಧನೆಗಳನ್ನು ಸಕಾರಾತ್ಮಕ ದೃಷ್ಟಿಕೋನದಿಂದ ನೋಡಲು, ಅವರ ಸಾಮರ್ಥ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಗುರಿಗೆ ಹತ್ತಿರವಾಗಲು ಮಾಡಿದ ಪ್ರಯತ್ನಗಳನ್ನು ಪ್ರಶಂಸಿಸಲು ಶ್ರೀ ಮೋದಿ ಕರೆ ನೀಡಿದರು.
ಪ್ರತಿ ಮಗು ವಿಭಿನ್ನವಾಗಿದೆ
ಪರೀಕ್ಷೆಯ ಸಮಯದಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಷಯದ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಪ್ರಾಥಮಿಕ ಸಮಸ್ಯೆಯು ವಿದ್ಯಾರ್ಥಿಗಳಿಗೆ ಕಡಿಮೆ ಇರುತ್ತದೆ ಮತ್ತು ಅವರ ಕುಟುಂಬಗಳೊಂದಿಗೆ ಹೆಚ್ಚು ಇರುತ್ತದೆ ಎಂದು ಹೇಳಿದರು. ಇಂಜಿನಿಯರಿಂಗ್ ಅಥವಾ ವೈದ್ಯಕೀಯದಂತಹ ನಿರ್ದಿಷ್ಟ ವೃತ್ತಿಗಳನ್ನು ಮುಂದುವರಿಸಲು ಅನೇಕ ಪೋಷಕರು ತಮ್ಮ ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ, ಆದರೆ ಮಗುವಿನ ಆಸಕ್ತಿಯು ಕಲೆಗಳಂತಹ ಕ್ಷೇತ್ರಗಳಲ್ಲಿರುತ್ತದೆ ಎಂದು ಅವರು ಹೇಳಿದರು. ಈ ನಿರಂತರ ಒತ್ತಡವು ಮಗುವಿನ ಒತ್ತಡದ ಜೀವನಕ್ಕೆ ಕಾರಣವಾಗುತ್ತದೆ. ಪೋಷಕರು ತಮ್ಮ ಮಕ್ಕಳ ಸಾಮರ್ಥ್ಯ ಮತ್ತು ಆಸಕ್ತಿಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಗುರುತಿಸಬೇಕು, ಅವರ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಬೇಕು ಮತ್ತು ಬೆಂಬಲವನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು. ಉದಾಹರಣೆಗೆ, ಒಂದು ಮಗು ಕ್ರೀಡೆಯಲ್ಲಿ ಆಸಕ್ತಿಯನ್ನು ತೋರಿಸಿದರೆ, ಪೋಷಕರು ಕ್ರೀಡಾ ಕಾರ್ಯಕ್ರಮಗಳನ್ನು ವೀಕ್ಷಿಸಲು ಅವರನ್ನು ಕರೆದೊಯ್ಯುವ ಮೂಲಕ ಪ್ರೋತ್ಸಾಹಿಸಬೇಕು ಮತ್ತು ಪ್ರೇರೇಪಿಸಬೇಕು ಎಂದು ಹೇಳಿದರು. ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮಾತ್ರ ಗಮನ ಕೊಡುವ ಮತ್ತು ಇತರರನ್ನು ನಿರ್ಲಕ್ಷಿಸುವ ವಾತಾವರಣ ಸೃಷ್ಟಿಸುವುದನ್ನು ತಪ್ಪಿಸಬೇಕೆಂದು ಆಗ್ರಹಿಸಿದರು. ವಿದ್ಯಾರ್ಥಿಗಳನ್ನು ಹೋಲಿಕೆ ಮಾಡದೆ ಪ್ರತಿ ಮಗುವಿನ ವಿಶಿಷ್ಟ ಸಾಮರ್ಥ್ಯಗಳನ್ನು ಪ್ರೋತ್ಸಾಹಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. ವಿದ್ಯಾರ್ಥಿಗಳು ಸುಧಾರಣೆಗಾಗಿ ಶ್ರಮಿಸಬೇಕು ಮತ್ತು ಉತ್ತಮ ಸಾಧನೆ ಮಾಡಬೇಕು, ಆದರೆ ಅಧ್ಯಯನವೇ ಜೀವನದಲ್ಲಿ ಎಲ್ಲವೂ ಅಲ್ಲ ಎಂಬುದನ್ನು ತಿಳಿಯಬೇಕು ಎಂದು ಅವರು ನೆನಪಿಸಿದರು.
ಸ್ವಯಂ ಪ್ರೇರಣೆ
ಸ್ವಯಂ ಪ್ರೇರಣೆಯ ವಿಷಯದ ಕುರಿತು ಮಾತನಾಡಿದ ಪ್ರಧಾನಿಯವರು, ಎಂದಿಗೂ ಪ್ರತ್ಯೇಕವಾಗಿರಬೇಡಿ ಎಂದು ಸಲಹೆ ನೀಡಿದರು. ಆಲೋಚನೆಗಳನ್ನು ಹಂಚಿಕೊಳ್ಳುವ ಮತ್ತು ಕುಟುಂಬ ಅಥವಾ ಹಿರಿಯರಿಂದ ಸ್ಫೂರ್ತಿ ಪಡೆಯುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಆತ್ಮವಿಶ್ವಾಸವನ್ನು ಹೆಚ್ಚಿಸಲು ಮತ್ತು ಸಾಧನೆಯ ಭಾವವನ್ನು ಆನಂದಿಸಲು 10 ಕಿಲೋಮೀಟರ್ ಸೈಕ್ಲಿಂಗ್ ನಂತಹ ಸಣ್ಣ ಗುರಿಗಳೊಂದಿಗೆ ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಎಂದು ಸಲಹೆ ನೀಡಿದರು. ವೈಯಕ್ತಿಕ ಮಿತಿಗಳನ್ನು ತೊಡೆದುಹಾಕಲು ಮತ್ತು ವರ್ತಮಾನದಲ್ಲಿ ಬದುಕಲು ಈ ಸಣ್ಣ ಪ್ರಯೋಗಗಳು ಸಹಾಯ ಮಾಡುತ್ತವೆ ಮತ್ತು ಭೂತಕಾಲವನ್ನು ಅಲ್ಲಿಯೇ ಬಿಡುತ್ತವೆ ಎಂದು ಶ್ರೀ ಮೋದಿ ಅವರು ಒತ್ತಿ ಹೇಳಿದರು. 140 ಕೋಟಿ ಭಾರತೀಯರಿಂದ ನಾನು ಸ್ಫೂರ್ತಿ ಪಡೆಯುತ್ತೇನೆ ಎಂದು ಪ್ರಧಾನಿ ಹೇಳಿದರು. ಅವರು “ಪರೀಕ್ಷಾ ಪೇ ಚರ್ಚಾ” ಬರೆದಾಗ, ಅಜಯ್ ಅವರಂತಹ ವ್ಯಕ್ತಿಗಳು ತಮ್ಮ ಹಳ್ಳಿಗಳಲ್ಲಿ ಅದನ್ನು ತಮ್ಮ ಕಾವ್ಯವಾಗಿ ಪರಿವರ್ತಿಸುತ್ತಿದ್ದಾರೆ ಎಂದು ಅವರು ಹಂಚಿಕೊಂಡರು. ಇದರಿಂದ ಅವರು ಇಂತಹ ಕೆಲಸವನ್ನು ಮುಂದುವರಿಸಬೇಕು ಎಂಬ ಭಾವನೆಯನ್ನು ಮೂಡಿಸುತ್ತಾರೆ, ಏಕೆಂದರೆ ನಮ್ಮ ಸುತ್ತ ಅನೇಕ ಸ್ಫೂರ್ತಿಯ ಮೂಲಗಳಿವೆ ಎಂದರು. ಅಳವಡಿಸಿಕೊಳ್ಳಬೇಕಾದ ಕೆಲಸಗಳ ಬಗ್ಗೆ ಕೇಳಿದಾಗ, ಬೆಳಿಗ್ಗೆ ಬೇಗನೆ ಏಳುವಂತಹ ಸಲಹೆಯು ಅನುಷ್ಠಾನವಿಲ್ಲದೆ ಕೇವಲ ಯೋಚಿಸುವುದರಿಂದ ಸಾಕಾಗುವುದಿಲ್ಲ ಎಂದು ಮೋದಿ ಸಲಹೆ ನೀಡಿದರು. ಕಲಿತ ತತ್ವಗಳನ್ನು ಪ್ರಾಯೋಗಿಕವಾಗಿ ಅನ್ವಯಿಸುವ ಮತ್ತು ವೈಯಕ್ತಿಕ ಪ್ರಯೋಗದ ಮೂಲಕ ತನ್ನನ್ನು ತಾನು ಸುಧಾರಿಸಿಕೊಳ್ಳುವ ಮಹತ್ವವನ್ನು ಅವರು ಒತ್ತಿ ಹೇಳಿದರು. ತನ್ನನ್ನು ತಾನು ಪ್ರಯೋಗಾಲಯವನ್ನಾಗಿ ಮಾಡಿಕೊಳ್ಳುವ ಮೂಲಕ ಮತ್ತು ಈ ತತ್ವಗಳನ್ನು ಪರೀಕ್ಷಿಸುವ ಮೂಲಕ, ಯಾವುದೇ ವ್ಯಕ್ತಿಯು ಅವುಗಳನ್ನು ನಿಜವಾಗಿಯೂ ಅಳವಡಿಸಿಕೊಳ್ಳಬಹುದು ಮತ್ತು ಅವುಗಳಿಂದ ಪ್ರಯೋಜನ ಪಡೆಯಬಹುದು ಎಂದು ಪ್ರಧಾನಿ ಹೇಳಿದರು. ಹೆಚ್ಚಿನ ಜನರು ತಮ್ಮೊಂದಿಗೆ ತಾವು ಸ್ಪರ್ಧಿಸುವುದಿಲ್ಲ ಆದರೆ ಇತರರೊಂದಿಗೆ ಸ್ಪರ್ಧಿಸುತ್ತಾರೆ, ಆಗಾಗ್ಗೆ ಕಡಿಮೆ ಸಾಮರ್ಥ್ಯವಿರುವವರೊಂದಿಗೆ ತಮ್ಮನ್ನು ತಾವು ಹೋಲಿಸಿಕೊಳ್ಳುತ್ತಾರೆ, ಇದು ನಿರಾಶೆಗೆ ಕಾರಣವಾಗುತ್ತದೆ ಎಂದು ಶ್ರೀ ಮೋದಿ ಹೇಳಿದರು. ತನ್ನ ವಿರುದ್ಧವೇ ಸ್ಪರ್ಧಿಸುವುದು ಅಚಲವಾದ ಆತ್ಮವಿಶ್ವಾಸವನ್ನು ಬೆಳೆಸುತ್ತದೆ, ಆದರೆ ತನ್ನನ್ನು ಇತರರೊಂದಿಗೆ ಹೋಲಿಸುವುದು ನಿರಾಶೆಗೆ ಕಾರಣವಾಗುತ್ತದೆ ಎಂದು ಅವರು ಒತ್ತಿ ಹೇಳಿದರು.
ವೈಫಲ್ಯವನ್ನು ಇಂಧನ ಮಾಡಿಕೊಳ್ಳಿ
ವೈಫಲ್ಯದಿಂದ ಹೊರಬರುವ ವಿಷಯದ ಕುರಿತು ಮಾತನಾಡಿದ ಶ್ರೀ ಮೋದಿ, 10 ಅಥವಾ 12 ನೇ ತರಗತಿಯಲ್ಲಿ ಶೇ.30-40 ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾದರೂ ಜೀವನವು ಕೊನೆಗೊಳ್ಳುವುದಿಲ್ಲ ಎಂದು ಹೇಳಿದರು. ಜೀವನದಲ್ಲಿ ಯಶಸ್ಸು ಗಳಿಸಬೇಕೆ ಅಥವಾ ಅಧ್ಯಯನದಲ್ಲಿ ಮಾತ್ರವೇ ಯಶಸ್ಸು ಬೇಕೇ ಎಂಬುದನ್ನು ನಿರ್ಧರಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. ವೈಫಲ್ಯಗಳನ್ನು ನಿಮ್ಮ ಶಿಕ್ಷಕರನ್ನಾಗಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದ ಅವರು, ಆಟಗಾರರು ತಮ್ಮ ತಪ್ಪುಗಳನ್ನು ಪರಿಶೀಲಿಸಲು ಮತ್ತು ಸುಧಾರಿಸಲು ಶ್ರಮಿಸುವ ಕ್ರಿಕೆಟ್ ನ ಉದಾಹರಣೆಯನ್ನು ಉಲ್ಲೇಖಿಸಿದರು. ಕೇವಲ ಪರೀಕ್ಷೆಗಳ ದೃಷ್ಟಿಕೋನದಿಂದ ನೋಡದೆ ಜೀವನವನ್ನು ಸಮಗ್ರವಾಗಿ ನೋಡುವಂತೆ ಪ್ರಧಾನಿ ಒತ್ತಾಯಿಸಿದರು. ವಿಕಲಚೇತನ ವ್ಯಕ್ತಿಗಳು ಸಾಮಾನ್ಯವಾಗಿ ಅಸಾಧಾರಣ ಸಾಮರ್ಥ್ಯಗಳನ್ನು ಹೊಂದಿರುತ್ತಾರೆ ಮತ್ತು ಪ್ರತಿಯೊಬ್ಬರೂ ವಿಶಿಷ್ಟ ಸಾಮರ್ಥ್ಯಗಳನ್ನು ಹೊಂದಿರುತ್ತಾರೆ ಎಂದು ಅವರು ಹೇಳಿದರು. ಕೇವಲ ಶೈಕ್ಷಣಿಕ ಸಾಧನೆಗಳ ಮೇಲೆ ಕೇಂದ್ರೀಕರಿಸುವ ಬದಲು ಈ ಸಾಮರ್ಥ್ಯಗಳ ಮೇಲೆ ಕೆಲಸ ಮಾಡುವ ಮಹತ್ವವನ್ನು ಅವರು ಒತ್ತಿ ಹೇಳಿದರು. ದೀರ್ಘಾವಧಿಯಲ್ಲಿ, ವ್ಯಕ್ತಿಯ ಜೀವನ ಮತ್ತು ಅವನ ಸಾಮರ್ಥ್ಯಗಳು ಯಶಸ್ಸನ್ನು ರೂಪಿಸುತ್ತವೆಯೇ ಹೊರತು ಶೈಕ್ಷಣಿಕ ಅಂಕಗಳಷ್ಟೇ ಅಲ್ಲ ಎಂದು ಅವರು ಹೇಳಿದರು.
ತಂತ್ರಜ್ಞಾನ ಕರಗತ ಮಾಡಿಕೊಳ್ಳಿ
ತಂತ್ರಜ್ಞಾನವು ವ್ಯಾಪಕ ಮತ್ತು ಪ್ರಭಾವಶಾಲಿಯಾಗಿರುವ ಯುಗದಲ್ಲಿರುವ ನಾವೆಲ್ಲರೂ ಅದೃಷ್ಟವಂತರು ಎಂದು ಒತ್ತಿ ಹೇಳಿದ ಪ್ರಧಾನಿ, ತಂತ್ರಜ್ಞಾನದಿಂದ ಓಡಿಹೋಗುವ ಅಗತ್ಯವಿಲ್ಲ, ಬದಲಿಗೆ, ಜನರು ತಮ್ಮ ಸಮಯವನ್ನು ಅನುತ್ಪಾದಕ ಚಟುವಟಿಕೆಗಳಲ್ಲಿ ಕಳೆಯಬೇಕೆ ಅಥವಾ ಅವರ ಆಸಕ್ತಿಗಳನ್ನು ಆಳವಾಗಿ ಅಧ್ಯಯನ ಮಾಡಬೇಕೇ ಎಂದು ನಿರ್ಧರಿಸಬೇಕು ಎಂದು ಹೇಳಿದರು. ಹೀಗೆ ಮಾಡುವುದರಿಂದ ತಂತ್ರಜ್ಞಾನವು ವಿನಾಶಕಾರಿಯಾಗುವ ಬದಲು ಶಕ್ತಿಯಾಗಲಿದೆ ಎಂದು ಹೇಳಿದರು. ಸಂಶೋಧಕರು ಮತ್ತು ನವೋದ್ಯಮಿಗಳು ಸಮಾಜದ ಒಳಿತಿಗಾಗಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಾರೆ ಎಂದು ಶ್ರೀ ಮೋದಿ ಅವರು ಒತ್ತಿ ಹೇಳಿದರು. ಜನರು ತಂತ್ರಜ್ಞಾನವನ್ನು ಅರ್ಥಮಾಡಿಕೊಂಡು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಯಾವುದೇ ಕೆಲಸದಲ್ಲಿ ಅತ್ಯುತ್ತಮವಾದದ್ದನ್ನು ನೀಡುವ ಬಗ್ಗೆ ಕೇಳಿದಾಗ, ಶ್ರೀ ಮೋದಿಯವರು ನಿರಂತರ ಸುಧಾರಣೆಯ ಮಹತ್ವವನ್ನು ಒತ್ತಿ ಹೇಳಿದರು. ನಿನ್ನೆಗಿಂತ ಇಂದು ಉತ್ತಮವಾಗಿರುವುದನ್ನು ಮಾಡಲು ನಿಮ್ಮ ಕೈಲಾದಷ್ಟು ಶ್ರಮಿಸುವುದು ಬಹುಮುಖ್ಯವಾದ್ದು ಎಂದು ಅವರು ಹೇಳಿದರು.
ನಿಮ್ಮ ಪೋಷಕರಿಗೆ ಮನವರಿಕೆ ಮಾಡುವುದು ಹೇಗೆ?
ಕುಟುಂಬದ ಸಲಹೆ ಅಥವಾ ವೈಯಕ್ತಿಕ ಹಿತಾಸಕ್ತಿಗಳ ನಡುವೆ ಆಯ್ಕೆ ಮಾಡುವ ಸಂದಿಗ್ಧತೆಯನ್ನು ಪರಿಹರಿಸಿದ ಶ್ರೀ ಮೋದಿ ಅವರು ಕುಟುಂಬದ ಸಲಹೆಗಳನ್ನು ಸ್ವೀಕರಿಸುವುದು ಮತ್ತು ನಂತರ ಅವರ ಸಲಹೆಯನ್ನು ಹೇಗೆ ಮುಂದುವರಿಸಬೇಕು ಎಂದು ಕೇಳುವ ಮೂಲಕ ಮತ್ತು ಅವರ ಸಹಾಯವನ್ನು ಪಡೆಯುವ ಮೂಲಕ ಅವರ ಮನವೊಲಿಸುವುದು ಮುಖ್ಯ ಎಂದು ಹೇಳಿದರು. ನಿಜವಾದ ಆಸಕ್ತಿಯನ್ನು ತೋರಿಸುವ ಮೂಲಕ ಮತ್ತು ಪರ್ಯಾಯ ಆಯ್ಕೆಗಳನ್ನು ಗೌರವಯುತವಾಗಿ ಚರ್ಚಿಸುವ ಮೂಲಕ, ಕುಟುಂಬಗಳು ಒಬ್ಬರ ಆಕಾಂಕ್ಷೆಗಳನ್ನು ಕ್ರಮೇಣ ಅರ್ಥಮಾಡಿಕೊಳ್ಳಬಹುದು ಮತ್ತು ಬೆಂಬಲಿಸಬಹುದು ಎಂದು ಅವರು ಹೇಳಿದರು.
ಪರೀಕ್ಷೆಯ ಒತ್ತಡವನ್ನು ನಿಭಾಯಿಸುವುದು
ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದೆ ಇರುವ ಸಾಮಾನ್ಯ ಸಮಸ್ಯೆಯನ್ನು ಕುರಿತು ಚರ್ಚಿಸಿದ ಪ್ರಧಾನಿ, ಇದು ಒತ್ತಡ ಮತ್ತು ಆತಂಕದ ಪರಿಸ್ಥಿತಿಗೆ ಕಾರಣವಾಗುತ್ತದೆ, ಸಂಕ್ಷಿಪ್ತ ಉತ್ತರಗಳನ್ನು ಬರೆಯಲು ಮತ್ತು ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದನ್ನು ಕಲಿಯಲು ಹಿಂದಿನ ಪರೀಕ್ಷೆಯ ಪತ್ರಿಕೆಗಳಲ್ಲಿ ತೀವ್ರವಾಗಿ ಅಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು. ಹೆಚ್ಚು ಶ್ರಮದ ಅಗತ್ಯವಿರುವ ಪ್ರಶ್ನೆಗಳ ಮೇಲೆ ಕೇಂದ್ರೀಕರಿಸುವ ಮತ್ತು ಕಷ್ಟಕರವಾದ ಅಥವಾ ಪರಿಚಯವಿಲ್ಲದ ಪ್ರಶ್ನೆಗಳಿಗೆ ಹೆಚ್ಚು ಸಮಯ ವ್ಯಯಿಸದಿರುವ ಪ್ರಾಮುಖ್ಯತೆಯನ್ನು ಅವರು ಎತ್ತಿ ತೋರಿಸಿದರು. ನಿಯಮಿತ ಅಭ್ಯಾಸವು ಪರೀಕ್ಷೆಯ ಸಮಯದಲ್ಲಿ ಉತ್ತಮ ಸಮಯ ನಿರ್ವಹಣೆಗೆ ಸಹಾಯ ಮಾಡುತ್ತದೆ ಎಂದು ಅವರು ಒತ್ತಿ ಹೇಳಿದರು.
ಪ್ರಕೃತಿ ಬಗ್ಗೆ ಕಾಳಜಿ
ಹವಾಮಾನ ಬದಲಾವಣೆಯ ಕುರಿತು ಮಾತನಾಡಿದ ಪ್ರಧಾನಿ, ಯುವ ಪೀಳಿಗೆಗೆ ಅದರ ಬಗ್ಗೆ ಇರುವ ಕಾಳಜಿಯನ್ನು ಶ್ಲಾಘಿಸಿದರು. ಪ್ರಪಂಚದ ಹೆಚ್ಚಿನ ಅಭಿವೃದ್ಧಿಯು ಶೋಷಣೆಯ ಸಂಸ್ಕೃತಿಯನ್ನು ಹುಟ್ಟುಹಾಕಿದೆ, ಅಲ್ಲಿ ಜನರು ಪರಿಸರ ಸಂರಕ್ಷಣೆಗಿಂತ ವೈಯಕ್ತಿಕ ಲಾಭಕ್ಕೆ ಆದ್ಯತೆ ನೀಡುತ್ತಾರೆ ಎಂದು ಹೇಳಿದರು. ಪ್ರಕೃತಿಯನ್ನು ರಕ್ಷಿಸುವ ಮತ್ತು ಪೋಷಿಸುವ ಜೀವನಶೈಲಿಯನ್ನು ಉತ್ತೇಜಿಸುವ ಮಿಷನ್ ಲೈಫ್ (ಪರಿಸರಕ್ಕಾಗಿ ಜೀವನಶೈಲಿ) ಕುರಿತು ಶ್ರೀ ಮೋದಿ ಪ್ರಸ್ತಾಪಿಸಿದರು. ಅವರು ಭೂಮಿ ತಾಯಿಗೆ ಕ್ಷಮೆಯಾಚಿಸುವುದು ಮತ್ತು ಮರಗಳು ಮತ್ತು ನದಿಗಳನ್ನು ಪೂಜಿಸುವಂತಹ ಭಾರತದಲ್ಲಿನ ಸಾಂಸ್ಕೃತಿಕ ಆಚರಣೆಗಳ ಬಗ್ಗೆ ಹಂಚಿಕೊಂಡರು. ಇದು ಪ್ರಕೃತಿಯ ಗೌರವವನ್ನು ಪ್ರದರ್ಶಿಸುತ್ತದೆ ಎಂದು ಹೇಳಿದರು. ತಾಯಂದಿರ ಸ್ಮರಣಾರ್ಥ ಗಿಡಗಳನ್ನು ನೆಡಲು ಜನರನ್ನು ಉತ್ತೇಜಿಸುವ “ತಾಯಿಯ ಹೆಸರಿನಲ್ಲಿ ಒಂದು ಗಿಡ” ಅಭಿಯಾನವನ್ನು ಅವರು ಪ್ರಸ್ತಾಪಿಸಿದರು. ಈ ಉಪಕ್ರಮವು ಬಾಂಧವ್ಯ ಮತ್ತು ಮಾಲೀಕತ್ವದ ಪ್ರಜ್ಞೆಯನ್ನು ಉತ್ತೇಜಿಸುತ್ತದೆ, ಇದು ಪ್ರಕೃತಿಯ ರಕ್ಷಣೆಗೆ ಕಾರಣವಾಗುತ್ತದೆ ಎಂದು ಹೇಳಿದರು.
ನಿಮ್ಮ ಸ್ವಂತ ಹಸಿರು ಸ್ವರ್ಗವನ್ನು ಬೆಳೆಸಿಕೊಳ್ಳಿ
ಪ್ರಧಾನಿಯವರು ತಮ್ಮದೇ ಆದ ಗಿಡಗಳನ್ನು ನೆಡುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು ಮತ್ತು ಅವುಗಳಿಗೆ ನೀರುಣಿಸುವ ಕುರಿತು ಪ್ರಾಯೋಗಿಕ ಸಲಹೆಗಳನ್ನು ನೀಡಿದರು. ಮರದ ಪಕ್ಕದಲ್ಲಿ ನೀರು ತುಂಬಿದ ಮಣ್ಣಿನ ಮಡಕೆ ಇಟ್ಟು ತಿಂಗಳಿಗೊಮ್ಮೆ ಅದನ್ನು ತುಂಬಿಸುವಂತೆ ಸಲಹೆ ನೀಡಿದರು. ಈ ವಿಧಾನವು ಕನಿಷ್ಟ ನೀರಿನ ಬಳಕೆಯಿಂದ ಮರವು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಪ್ರಧಾನಮಂತ್ರಿಯವರು ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು ಭಾಗವಹಿಸಿದ್ದಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.
*****
Had a wonderful interaction with young students on different aspects of stress-free exams. Do watch Pariksha Pe Charcha. #PPC2025. https://t.co/WE6Y0GCmm7
— Narendra Modi (@narendramodi) February 10, 2025